ವರ್ಷಾಂತ್ಯ ವಿಶೇಷ 2020: ’ಓದಿನಂಗಳ‘ದಲ್ಲಿ ಪತ್ರಕರ್ತ ಡಿ. ಉಮಾಪತಿ

‘ಅಚಿಬೆ ಸೃಷ್ಟಿಸಿರುವ ನಾಂಗಾ ಸಾರ್ವಕಾಲಿಕ ಮತ್ತು ಸಾರ್ವತ್ರಿಕ. ಆತನಿಗೆ ದೇಶ ಕಾಲಗಳ ಗೆರೆಗಳಿಲ್ಲ. ಎಲ್ಲಿ ಬೇಕಾದರೂ ತಲೆಯೆತ್ತಬಲ್ಲ. ಅಚಿಬೆ ಅವರ ನಾಂಗಾನಂತಹ ಜನನಾಯಕರು ಜನದನಿಯೂ ತಾವೇ ಎಂದು ಭ್ರಮಿಸುವ ಅಪಾಯಕಾರಿಗಳು. ದುರಂತವೆಂದರೆ ತಮ್ಮ ದನಿಯನ್ನು ತಮ್ಮ ನೆಚ್ಚಿನ ಜನನಾಯಕ ಅಪಹರಿಸಿದ್ದಾನೆ ಎಂಬ ಅರಿವೂ ಜನತೆಗೆ ಇರುವುದಿಲ್ಲ.‘ ಪತ್ರಕರ್ತ ಡಿ. ಉಮಾಪತಿ.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ‘ದಲ್ಲಿ ಪತ್ರಕರ್ತ ಡಿ. ಉಮಾಪತಿ
ಪತ್ರಕರ್ತ, ಲೇಖಕ ಡಿ. ಉಮಾಪತಿ.
Follow us
ಶ್ರೀದೇವಿ ಕಳಸದ
|

Updated on:Dec 31, 2020 | 5:46 PM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಪತ್ರಕರ್ತ, ಅನುವಾದಕ ಡಿ. ಉಮಾಪತಿ ಅವರ ಆಯ್ಕೆಗಳು ಇಲ್ಲಿವೆ.

ಕೃ: A Man of the People (Political fiction) ಲೇ: Chinua Achebe ಪ್ರ: Heinemann

ಚಿನುವಾ ಅಚಿಬೆ 20ನೆಯ ಶತಮಾನದ ಆಫ್ರಿಕನ್ ಸಾಹಿತ್ಯದ ಪಿತಾಮಹ. ‘ಎ ಮ್ಯಾನ್ ಆಫ್ ದಿ ಪೀಪಲ್’ ಅವರ ವಿಶಿಷ್ಟ ಕಾದಂಬರಿಗಳಲ್ಲೊಂದು . ಅದರ ಎರಡು ಮುಖ್ಯಪಾತ್ರಗಳಲ್ಲಿ ಒಬ್ಬನು ನಾಂಗಾ. ಜನನಾಯಕ, ಸಂಸ್ಕೃತಿ ಸಚಿವ. ಜನತೆಗೆ ಆತನಲ್ಲಿ ಅಪರಿಮಿತ ವಿಶ್ವಾಸ. ಆತ ಕೂಡ ಜನಸಾಮಾನ್ಯರಿಗೆ ತಾನು ಹತ್ತಿರವೆಂದೂ, ಐರೋಪ್ಯ ಶೈಲಿಯಲ್ಲಿ ಬದುಕುವ ಮತ್ತು ಆಲೋಚಿಸುವ ಬುದ್ಧಿಜೀವಿಗಳಿಂದ ತಾನು ಬಹುದೂರ ಎಂದು ಬಗೆಯುತ್ತಾನೆ.

ತಾನು ಕೇವಲ ಜನನಾಯಕ ಮಾತ್ರವೇ ಅಲ್ಲ, ಅವರ ಏಕಮೇವ ರಾಜಕೀಯ ದನಿ ಕೂಡ ಎಂದು ನಂಬಿರುತ್ತಾನೆ. ಜನತೆ ಏನನ್ನು ಮತ್ತು ಎಷ್ಟನ್ನು ತಿಳಿದುಕೊಳ್ಳಬೇಕು ಎಂದು ಆತ ಭಾವಿಸುತ್ತಾನೆಯೋ ಅದನ್ನು ಮತ್ತು ಅಷ್ಟನ್ನು ಮಾತ್ರವೇ ಅವರಿಗೆ ತಿಳಿಸುತ್ತಾನೆ. ತನ್ನ ದನಿಯೇ ಎಲ್ಲರನ್ನೂ ಪ್ರತಿನಿಧಿಸುವ ದನಿ ಎಂದು ನಂಬುವಂತೆ ಜನರ ಮನ ಒಲಿಸುತ್ತಾನೆ. ತಾನು ಹೇಳಿದ್ದಕ್ಕೆಲ್ಲ ಅವರ ಒಪ್ಪಿಗೆ ಪಡೆಯುವುದು ಅವನ ಉದ್ದೇಶ. ಐರೋಪ್ಯ ಶೈಲಿಯ ಬದುಕು ಮತ್ತು ಆಲೋಚನೆಗಳಿಂದ ಆಫ್ರಿಕಾದ ಸಂಸ್ಕೃತಿಯ ಸಂರಕ್ಷಕ ತಾನು ಎಂದು ಬಿಂಬಿಸಿಕೊಳ್ಳುತ್ತಾನೆ. ತನಗೆ ಮತ ನೀಡುವಂತೆ ಜನರನ್ನು ಒಪ್ಪಿಸುವುದಕ್ಕೆ ಬೇಕಾದ ವಿಧಾನಗಳನ್ನೆಲ್ಲ ಅನುಸರಿಸುತ್ತಾನೆ. ಆದರೆ ಆತ ಹೇಳುವುದು ಒಂದಾದರೆ, ಮಾಡುವುದು ಮತ್ತೊಂದು. ನಾಂಗಾ ಮತ್ತು ಅತನ ಬಂಟರು ತಮಗೆ ಬೇಕಾದಂತೆ ನಿಯಂತ್ರಿಸುವ ಬೊಂಬೆಗಳಾಗಿಬಿಡುತ್ತಾರೆ ಜನತೆ.

ಪ್ರಚಂಡ ಅಧಿಕಾರ ಹಿಡಿದು ಸತ್ಯವನ್ನು ಮರೆಮಾಚುವುದರಿಂದಾಗಿ ನಾಂಗಾನ ಕೇಡಿನ, ಭ್ರಷ್ಟತೆ-ಲಾಲಸೆ- ಪಿಪಾಸುವಿನ ನಿಜಮುಖ ಬೇರೆ ಯಾರಿಗೂ ಕಾಣುವುದಿಲ್ಲ. ಅವನ ಒಂದು ಕಾಲದ ಅನುಯಾಯಿ ಆದ ಕಾದಂಬರಿಯ ಮತ್ತೊಂದು ಪ್ರಧಾನ ಪಾತ್ರ ಓಡಿಲಿ. ಆತನಿಗೆ ನಾಂಗಾನ ನಿಜಮುಖ ತಿಳಿದಿರುತ್ತದೆ. ಜನತೆಯನ್ನು ನಾಂಗಾ ಎಷ್ಟು ಗಾಢವಾಗಿ ನಂಬಿಸುತ್ತಾನೆಂದರೆ ಅವರು ಅವನನ್ನು ಪ್ರಶ್ನಿಸುವುದೇ ಇಲ್ಲ. ಜನ ಕೇವಲ ವಾಸ್ತವಾಂಶಗಳನ್ನು ತಿಳಿದರೆ ಸಾಕು, ದೇಶ ಎಷ್ಟೋ ಸುಧಾರಿಸುತ್ತದೆ ಎಂಬುದು ಓಡಿಲಿಯ ಕಳಕಳಿ. ವಸಾಹತುಶಾಹಿಯ ಹಿಡಿತದಿಂದ ಬಿಡಿಸಿಕೊಳ್ಳುವ ಕಪ್ಪು ಜನರ ಆಫ್ರಿಕಾ ಇಂದಿಗೂ ಸರ್ವಾಧಿಕಾರಿಗಳ ಹಿಡಿತಗಳಲ್ಲಿ ಮತ್ತು ಅಂತರ ಬುಡಕಟ್ಟು ಕಲಹಗಳಲ್ಲಿ ನರಳಿದೆ.

ಧರ್ಮ, ದೇಶ, ಅಧಿಕಾರ, ನಂಬಿಕೆಗಳು ಹಾಗೂ ಜನಾಂಗೀಯ ಶ್ರೇಷ್ಠತೆಯ ಭಾವನೆಯನ್ನು ಆಧರಿಸಿ ಒಂದು ಗುಂಪು ಮತ್ತೊಂದರ ಮೇಲೆ ಅಧಿಕಾರ ಸಾಧಿಸಿ ತನ್ನನ್ನು ವಿಸ್ತರಿಸಿಕೊಳ್ಳುವುದು ವಸಾಹತುಶಾಹಿ. ಮೈಬಣ್ಣವನ್ನು ಆಧರಿಸಿ ತನಗೆ ಇತರರಿಗಿಂತ ಹೆಚ್ಚು ಅಧಿಕಾರ ಮತ್ತು ಹೆಚ್ಚು ಹಕ್ಕುಗಳಿವೆ, ತನ್ನ ನಂಬಿಕೆಗಳೇ ಶ್ರೇಷ್ಠ ಎಂದು ಬಗೆದು ಅವುಗಳನ್ನು ವಿಸ್ತರಿಸಲು ಮತ್ತೊಬ್ಬ ವ್ಯಕ್ತಿ ಅಥವಾ ಗುಂಪಿನ ಮೇಲೆ ದೈಹಿಕ ಅಥವಾ ಮಾತಿನ ಬಲಪ್ರಯೋಗ ಮಾಡುವುದು ವರ್ಣಭೇದ ನೀತಿ. ವಸಾಹತುಶಾಹಿ ಮತ್ತು ವರ್ಣಭೇದ ನೀತಿ ಒಂದಕ್ಕೊಂದು ಬಲು ಹತ್ತಿರ. ಇವೆರಡೂ ಸಂಗಮಿಸಿದ ದುಸ್ಥಿತಿ ಭಾರತದ್ದು.

ಅಚಿಬೆ ಸೃಷ್ಟಿಸಿರುವ ನಾಂಗಾ ಸಾರ್ವಕಾಲಿಕ ಮತ್ತು ಸಾರ್ವತ್ರಿಕ. ಆತನಿಗೆ ದೇಶ ಕಾಲಗಳ ಗೆರೆಗಳಿಲ್ಲ. ಎಲ್ಲಿ ಬೇಕಾದರೂ ತಲೆಯೆತ್ತಬಲ್ಲ. ಅಚಿಬೆ ಅವರ ನಾಂಗಾನಂತಹ ಜನನಾಯಕರು ಜನದನಿಯೂ ತಾವೇ ಎಂದು ಭ್ರಮಿಸುವ ಅಪಾಯಕಾರಿಗಳು. ದುರಂತವೆಂದರೆ ತಮ್ಮ ದನಿಯನ್ನು ತಮ್ಮ ನೆಚ್ಚಿನ ಜನನಾಯಕ ಅಪಹರಿಸಿದ್ದಾನೆ ಎಂಬ ಅರಿವೂ ಜನತೆಗೆ ಇರುವುದಿಲ್ಲ.

ಕೃ: My Father Balaiah (Autobiography) ಲೇ: Y.B. Satyanarayana ಪ್ರ: HarperCollins 

ಈ ಆತ್ಮಕಥನವು ಕತ್ತಲಲೋಕದ ಜೀವಿಗಳಿಗೊಂದು ಬೆಳಕಿನ ಕಿರಣವಿದ್ದಂತೆ. ಅತ್ಯಂತ ಸೊಗಸಿನ ಪಾದರಕ್ಷೆಯ ಜೋಡಿಯನ್ನು ಹೊಲಿದುಕೊಡುವ  ತೆಲಂಗಾಣದ ನರಸಯ್ಯ ಎಂಬ 21 ವರ್ಷದ  ಮಾದಿಗ ತರುಣನಿಗೆ ಹೈದರಾಬಾದಿನ ನಿಜಾಮ 50 ಎಕರೆ ಜಮೀನು ಉಡುಗೊರೆ ನೀಡುತ್ತಾನೆ. ನರಸಯ್ಯನ ಜಮೀನುದಾರ ಧಣಿ ಈ ಉಡುಗೊರೆಯನ್ನು ಮೋಸದಿಂದ ಕಿತ್ತುಕೊಳ್ಳುತ್ತಾನೆ. ನರಸಯ್ಯನಿಗೆ ದಕ್ಕಿದ್ದು ಎರಡೇ ಎಕರೆ. ಅಸ್ಪೃಶ್ಯನೊಬ್ಬ ಐವತ್ತು ಎಕರೆ ಜಮೀನಿನ ಒಡೆಯನಾಗುವುದನ್ನು ಹಿಂದೂ ಜಮೀನುದಾರಿ ಮನಸುಗಳು ನಿತ್ತರಿಸುವುದಿಲ್ಲ.  ಮನಸು ಭಗ್ನಗೊಂಡ ನರಸಯ್ಯ ಕರೀಮನಗರ ಜಿಲ್ಲೆಯ ತನ್ನ ತಾತ ಮುತ್ತಾತಂದಿರ ಗ್ರಾಮ ವಂಗಪಲ್ಲಿಗೆ ಗುಳೆ ಹೋಗುತ್ತಾನೆ. ಈ ವಲಸೆಯು ಅತಿ ಮಹತ್ವದ ತಿರುವಾಗುತ್ತದೆ.

ನರಸಯ್ಯನ ಕುಟುಂಬವನ್ನೂ, ಮತ್ತು ಅದರ ಮುಂದಿನ ತಲೆಮಾರುಗಳನ್ನೂ ಜಾತಿವ್ಯವಸ್ಥೆಯ ಕ್ರೌರ್ಯ-ದಮನಗಳಿಂದ ಬಿಡುಗಡೆ ನೀಡುತ್ತದೆ. ಆತನ ಮಗ ಬಾಲಯ್ಯನನ್ನು ಜೀತದ ಗುಲಾಮಗಿರಿಯಿಂದ ಕಾಪಾಡುತ್ತದೆ. ಅಸ್ಪೃಶ್ಯತೆಯ ಅಮಾನವೀಯತೆ ಮತ್ತು ಅದರ ನೊಗಕ್ಕೆ ಹೆಗಲು ಹಚ್ಚಬೇಕಿರುವ ದಲಿತರ ಅಸಹಾಯಕತೆಯನ್ನು ಓದುಗಲೋಕಕ್ಕೆ ಅನಾವರಣಗೊಳಿಸುವ ವಿರಳ ಹೊತ್ತಿಗೆ My Father Balaiah. ಬಾಲಯ್ಯನವರ ಮಗ, ನರಸಯ್ಯನವರ ಮೊಮ್ಮಗ ವೈ.ಬಿ.ಸತ್ಯನಾರಾಯಣ ಬರೆದಿರುವ ಆತ್ಮಕತೆಯಿದು.  ಅಸ್ಪೃಶ್ಯ ಕುಟುಂಬದ ಮೂರು ತಲೆಮಾರುಗಳು ಜಿದ್ದಿಗೆ ಬಿದ್ದು ಮನುಸ್ಮೃತಿಯ ಅಂಧಕಾರ ಕೂಪದಿಂದ ತಪ್ಪಿಸಿಕೊಳ್ಳಲು ನಡೆಸುವ  ಸಂಘರ್ಷದ ಮನಸುಗಳ ಘಾಸಿಗೊಳಿಸಿ ತಲ್ಲಣಿಸುವ ಚಿತ್ರಣ.

ಭಾರತೀಯ ರೇಲ್ವೆಯ ಅತ್ಯಂತ ಕೆಳಸ್ತರದ ‘ಬಾಕ್ಸ್ ಮ್ಯಾನ್’ ಚಾಕರಿಗೆ ಸೇರುವ ಬಾಲಯ್ಯ ತಮ್ಮ ಕುಟುಂಬದ ಬದುಕನ್ನು ಮುರಿದು ಕಟ್ಟುತ್ತಾರೆ. ಅಸ್ಪೃಶ್ಯತೆ ಘನವಾಗಿ ಹೆಪ್ಪುಗಟ್ಟಿದ್ದ ಬ್ರಿಟಿಷ್ ಭಾರತದಲ್ಲಿ ರೇಲ್ವೆಯ ತಳಸ್ತರದ ಚಾಕರಿಗಳು ಕೂಡ ಕಾಲಾನುಕ್ರಮದಲ್ಲಿ ಸಾವಿರಾರು ದಲಿತ ಕುಟುಂಬಗಳ ವಿಮೋಚನೆಗೆ ದಾರಿ ಮಾಡುವುದನ್ನು ಈ ಕೃತಿಯಲ್ಲಿ  ಸಾಂದರ್ಭಿಕ ಚಿತ್ರಣವಾಗಿ ಮೂಡಿ ಬಂದಿದೆ. ಬ್ರಿಟಿಷ್ ಆಡಳಿತದ ಜಾತಿರಹಿತ ರೇಲ್ವೆ ಕಾಲೊನಿಗಳಲ್ಲಿ ಅಸ್ಪೃಶ್ಯ ಉದ್ಯೋಗಿಗಳು ಸಾಮಾಜಿಕ ಕಟ್ಟಳೆಗಳನ್ನು ಮುಕ್ತವಾಗಿ ಮುರಿಯುತ್ತಾರೆ ಮತ್ತು ಸವರ್ಣೀಯರು ಉಡುವಂತಹ ಬಟ್ಟೆಗಳನ್ನು ತೊಡಲಾರಂಭಿಸುತ್ತಾರೆ.

ಹೆಣ್ಣುಮಕ್ಕಳು ಮೊಣಕಾಲ ಕೆಳಭಾಗವನ್ನು ಮುಚ್ಚುವಂತೆ ಸೀರೆ ಉಡುತ್ತಾರೆ. ಚಿನ್ನಾಭರಣಗಳನ್ನು ತೊಡುತ್ತಾರೆ. ಅವರ ಮಕ್ಕಳು ರೇಲ್ವೆ ಶಾಲೆಗಳಿಗೆ ಸೇರುತ್ತಾರೆ. ಮೇಲ್ಜಾತಿಗಳ  ರೇಲು ಚಾಲಕರು ಮತ್ತು ರೇಲು ಗಾರ್ಡ್ ಗಳು ತಮ್ಮ ಪೆಟ್ಟಿಗೆಗಳನ್ನು ಅಸ್ಪೃಶ್ಯ ‘ಬಾಕ್ಸ್ ಮ್ಯಾನ್’ ಹೊರುವುದ ಸಹಿಸುತ್ತಿರಲಿಲ್ಲ. ಶೂದ್ರರಾದರೂ ಪರವಾಗಿಲ್ಲ ಎನ್ನುತ್ತಿದ್ದರು. ಆದರೆ ಅಸ್ಪೃಶ್ಯ ‘ಬಾಕ್ಸ್ ಮ್ಯಾನ್’ ಆ್ಯಂಗ್ಲೋ ಇಂಡಿಯನ್ ಸಿಬ್ಬಂದಿಗಳ ಮನೆಗಳೊಳಗೆ ಸಲೀಸಾಗಿ ಓಡಾಡಬಹುದಿತ್ತು. ಮತ್ತು ಅವರಿಗೆ ಅದೊಂದು ಹೊಸ ಅನುಭವವಾಗಿತ್ತು. ಕ್ರೈಸ್ತಮತವು ಈ ಅಸ್ಪೃಶ್ಯರನ್ನು ಆಲಿಂಗಿಸಿಕೊಂಡಿತು. ಅಕ್ಷರಲೋಕದ ಹಾದಿಗಳನ್ನೂ, ಉತ್ತಮ ಅವಕಾಶಗಳನ್ನೂ ತೆರೆಯಿತು. ನರಸಯ್ಯನ ಮಕ್ಕಳು ಮೊಮ್ಮಕ್ಕಳು ಪ್ರೊಫೆಸರುಗಳಾಗುತ್ತಾರೆ, ಶಾಲಾ ಕಾಲೇಜುಗಳ ಪ್ರಾಂಶುಪಾಲರಾಗುತ್ತಾರೆ.  ವಿದೇಶಗಳಲ್ಲಿ ಶಿಕ್ಷಣ ಪಡೆಯುವ ಹಂತಕ್ಕೆ ಬೆಳೆಯುತ್ತಾರೆ. ಹಳ್ಳಿಗಾಡಿನ ಅಸ್ಪೃಶ್ಯರು ಕನಸಿನಲ್ಲೂ ಸಾಧಿಸಲಾಗದ್ದನ್ನು ನಿಜ ಜೀವನದಲ್ಲಿ ನನಸಾಗಿಸಿಕೊಳ್ಳುತ್ತಾರೆ.

ಗುಲ್ಬರ್ಗದ ಡಾ.ಟಿ.ಡಿ.ರಾಜಣ್ಣ ಅವರು ಈ ಕೃತಿಯನ್ನು 2014ರಷ್ಟು ಹಿಂದೆಯೇ ಕನ್ನಡಕ್ಕೆ ಅನುವಾದಿಸಿದ್ದಾರೆಂದೂ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಬಿಡುಗಡೆ ಮಾಡಿದ್ದರೆಂದೂ ಇತ್ತೀಚೆಗಷ್ಟೇ ತಿಳಿಯಿತು. ಮೂಡ್ನಾಕೂಡು ಚಿನ್ನಸ್ವಾಮಿ ಅವರ ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’  ಸುಜಾತಾ ಗಿಡ್ಲ ಅವರ Ants Among Elephants, ಬಾಬೂರಾವ್ ಬಾಗುಲ್ ಅವರ When I Hid My Caste,  ಬಾಮಾ ಅವರ Karukku ಇತ್ತೀಚಿನ ವರ್ಷಗಳಲ್ಲಿ ಹೊರಬಿದ್ದಿರುವ ಮಹತ್ವದ ದಲಿತ ಆತ್ಮಕಥನಗಳೆಂದು ಇಲ್ಲಿ ಪ್ರಸ್ತಾಪಿಸಬೇಕು. ಜಾತಿ ವ್ಯವಸ್ಥೆಯ ತಳಾತಳದಲ್ಲಿ ಅರೆಯಲ್ಪಡುತ್ತಿರುವ ಕತ್ತಲಲೋಕದ ಭೀಭತ್ಸ ಕಥನಗಳನ್ನು ಹೇಳುತ್ತವೆ.

ಅಸ್ಪೃಶ್ಯತೆಯ ಸರಪಳಿಗಳಿಂದ ಬಿಡುಗಡೆ ಬಯಸುವ ದಲಿತ ಜೀವಗಳಿಗೆ ಪ್ರತಿಕೂಲಗಳನ್ನು ಸೆಣೆಸಿ ಗೆಲ್ಲುವ ದಾರಿಗಳನ್ನು ಕಾಣಿಸುವ My Father Balaiah ಆಶೆ ಭರವಸೆಗಳ ಕಿರಣವಾದೀತು, ಮುಕ್ತ ಮಾದರಿ ಎನಿಸೀತು.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಪತ್ರಕರ್ತ ನಾಗೇಶ ಹೆಗಡೆ

Published On - 5:45 pm, Thu, 31 December 20

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್