ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಕಥೆಗಾರ ಅಮರೇಶ ನುಗಡೋಣಿ
‘ಇದೊಂದು ಮಹತ್ವದ ಅಧ್ಯಯನ ಕೃತಿ. ಕನ್ನಡ ವಿಮರ್ಶಾ ಸಾಹಿತ್ಯವನ್ನು ಬಲಪಡಿಸಿದವರಲ್ಲಿ ಎಚ್.ಎಸ್.ಆರ್ ಪ್ರಮುಖರು. ' ನೀರಿಗೆ ಮೂಡಿದ ಆಕಾರ' ಅವರ ಐದು ದಶಕಗಳ ಅಧ್ಯಯನದ ಫಲವಾಗಿ ಅಭಿವ್ಯಕ್ತಿಗೊಂಡಿದೆ. ಕನ್ನಡದ ಮುಖ್ಯ ಕಥೆಗಾರರಾದ ಮಾಸ್ತಿ, ಅನಂತಮೂರ್ತಿ, ಲಂಕೇಶ್, ತೇಜಸ್ವಿ, ವೈದೇಹಿ ಅವರ ಕಥಾಸಾಹಿತ್ಯದ ಕುರಿತು ಅಧ್ಯಯನ ಮಾಡಿದ್ದಾರೆ. ಹಾಗೆಯೇ, ಶಿವರಾಮ ಕಾರಂತ, ಕುವೆಂಪು, ಯಶವಂತ ಚಿತ್ತಾಲ, ಎಸ್. ಎಲ್. ಭೈರಪ್ಪ, ದೇವನೂರು ಮಹಾದೇವರವರ ಕಾದಂಬರಿ ಸಾಹಿತ್ಯವನ್ನು ಕುರಿತು ಅಧ್ಯಯನ ಮಾಡಿರುವುದು ಈ ಕೃತಿಯಲ್ಲಿದೆ.’ ಎನ್ನುತ್ತಾರೆ ಕಥೆಗಾರ ಅಮರೇಶ ನುಗಡೋಣಿ.
ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಕಥೆಗಾರ, ಕಾದಂಬರಿಕಾರ ಅಮರೇಶ ನುಗಡೋಣಿ ಅವರ ಆಯ್ಕೆಗಳು ಇಲ್ಲಿವೆ.
ಕೃ: ಶರಣ ಕ್ರಾಂತಿ ಲೇ: ಬಸವರಾಜ ಸಾದರ ಪ್ರ: ಲಡಾಯಿ ಪ್ರಕಾಶನ
ಶರಣ ಕ್ರಾಂತಿ ಪುಸ್ತಕವನ್ನು ಡಾ. ಬಸವರಾಜ ಸಾದರ ಅವರು ಸಂಪಾದಿಸಿದ್ದಾರೆ. ಈ ಹಿಂದೆ ಅವರು ಶರಣ ಸಾಹಿತ್ಯ ಪರಿಷತ್ತು (ಬೆಂಗಳೂರು) ಅಧ್ಯಕ್ಷರಾಗಿದ್ದರು. ಅಲ್ಲಿಂದ ಪ್ರಕಟವಾಗುತ್ತಿದ್ದ ‘ಮಹಾಮನೆ’ ಎಂಬ ತಿಂಗಳ ಪತ್ರಿಕೆಗೆ ಡಾ. ಬಸವರಾಜ ಸಾದರ ಅವರು ಸಂಪಾದಕರಾಗಿದ್ದರು. ಆಗ ಅದಕ್ಕೊಂದು ಸಾಹಿತ್ಯದ ಮೌಲ್ಯವನ್ನು ತಂದಿದ್ದರು. ಆ ಅವಧಿಯಲ್ಲಿ ಸಂಪಾದಕರಾಗಿ ನಾಡಿನ ವಿದ್ವಾಂಸರಿಂದ ಶರಣ-ವಚನ ಸಾಹಿತ್ಯ ಮತ್ತು ಚಳುವಳಿಯನ್ನು ಕುರಿತು ಪ್ರಶ್ನೆಗಳನ್ನು ಕೇಳುತ್ತ ಉತ್ತರ ಪಡೆದಿದ್ದಾರೆ.
ಶರಣ ವಚನ ಚಳುವಳಿ ಕಲ್ಯಾಣದಲ್ಲಿ ಸಂಭವಿಸಿತಷ್ಟೆ. ಸುಮಾರು 900 ವರ್ಷಗಳಾದವು ಈ ವಿದ್ಯಮಾನ ಘಟಿಸಿ. ರಾಜಪ್ರಭುತ್ವ, ವೈದಿಕ, ಜೈನ ಧರ್ಮ ಪ್ರಭುತ್ವಗಳ ಭದ್ರವಾಗಿ ನೆಲೆಯೂರಿದ್ದ ಕಾಲವದು. ವರ್ಣ ಪದ್ಧತಿ ಬಲವಾಗಿದ್ದ ಸಂದರ್ಭವದು. ನೂರಕ್ಕೆ ತೊಂಬತ್ತು ಜನ ಚಾತುರ್ವರ್ಣ ಪದ್ಧತಿಯಿಂದ ಬೇಸತ್ತಿದ್ದರು. ಬೇಸತ್ತವರೇ ದುಡಿವ ಜನ. ರೈತರು, ಕಸುಬುದಾರರು, ಕೂಲಿ ಕೆಲಸದ ಜನಕ್ಕೆ ವೈದಿಕ-ಪ್ರಭುತ್ವದಿಂದ ಬಿಡುಗಡೆ ಪಡೆಯಲು ಒಳ ಕುದಿತ ಉಕ್ಕುವ ಸಂದರ್ಭದಲ್ಲಿ ಬಸವಣ್ಣನ ಮತ್ತು ಕೂಡಿಕೊಂಡ ಶರಣರ ತತ್ವಗಳು ಹೊಸ ಜೀವನ ಪದ್ಧತಿಯನ್ನು ರೂಪಿಸಿಕೊಂಡರು. ಸಮಾಜದ ಅಂಚಿನಲ್ಲಿದ್ದ ಮನುಷ್ಯನೂ ಮುಖ್ಯವಾಹಿನಿಗೆ ಬಂದು ನಿಲ್ಲಲು ಅವಕಾಶಗಳು ಒದಗಿದವು. ಅಷ್ಟು ವಿದ್ಯೆ ಇಲ್ಲದಿದ್ದರೂ ತಮ್ಮ ದೇಹ ಕಾಯಕದ ತತ್ವದಿಂದ ಪಡೆದ ಅನುಭವವನ್ನೇ ಅನುಭಾವದ ನೆಲೆಗೆ ತಂದು ವಚನಗಳ ಮೂಲಕ ಮಾತಾಡಿದ. ಜಾತಿನಾಶ, ವೃತ್ತಿ ಸಮಾನತೆ, ವ್ಯಕ್ತಿ ಗೌರವ, ಸ್ವತಂತ್ರ ಬಾಳ್ವೆಯನ್ನು ಕಟ್ಟಿಕೊಂಡು ನಿಂತದ್ದು ಈ ಶರಣ-ವಚನ ಚಳುವಳಿಯಿಂದ. ಮಹಿಳೆ ಸ್ವಾವಲಂಭಿಯಾಗಿ ಬೆಳೆದಳು. ಕುಟುಂಬಕ್ಕೆ ಹೊಸ ನೆಲೆ ನೀಡಿದಳು.
ಇದೆಲ್ಲವನ್ನು ಆಧುನಿಕ ವಿದ್ವಾಂಸರು ವಚನ-ಚಳುವಳಿಯಿಂದ ಮತ್ತು ಆನಂತರದ ಸಾಹಿತ್ಯದ ಪಲ್ಲಟಗಳಿಂದ ಅಧ್ಯಯನ ಮಾಡಿದವರು. ಒಂಬತ್ತುನೂರು ವರ್ಷಗಳ ಅಂತರದಲ್ಲಿ ಹೊಸ ಸಿದ್ಧಾಂತಗಳು, ಚಳುವಳಿಗಳು ಬೆಳೆದರೂ ಆ ಹನ್ನೆರಡನೆ ಶತಮಾನದಲ್ಲಿ ಶರಣರಿಂದ ಸಂಭವಿಸಿದ ಈ ಚಳುವಳಿಯ ಪ್ರಯತ್ನಗಳು ಸಾಧನೆಗಳು ಮತ್ತೆ ಮತ್ತೆ ಕಾಡುತ್ತಲೇ ಇವೆ. ಈ ಕಾಡುವ ಚಿಂತನೆಗಳು, ತಾವು ಅರ್ಥಮಾಡಿಕೊಂಡ ಬಗೆಗಳನ್ನು ವ್ಯಕ್ತವಾಡಿದ್ದಾರೆ. ಮಾತು-ಕತೆಯ ರೂಪದಲ್ಲಿರುವುದರಿಂದ ಓದಿಗೆ ಹೊಸತನ ನೀಡುತ್ತದೆ. 15 ಜನ ವಿದ್ವಾಂಸರನ್ನು ಸಂಪಾದಕರು ಈ ಚಳವಳಿ ಕುರಿತು ಮಾತಾಡಿಸಿದ ಬಗೆ ಕುತೂಹಲದಿಂದ ಕೂಡಿದೆ. ಈ ಕುತೂಹಲಕ್ಕೆ ಕಾರಣ ಡಾ. ಬಸವರಾಜ ಸಾದರ ಅವರು ವಿದ್ವಾಂಸರ ಮನೋಧರ್ಮ ಅರಿತು ಪ್ರಶ್ನೆಗಳನ್ನು ರೂಪಿಸಿರುವುದರಲ್ಲಿ ಅವರ ವಿದ್ವತ್ ಕಾಣಿಸುತ್ತದೆ. ಉತ್ತರಿಸಲೂ ವಿದ್ವಾಂಸರು ಪ್ರಯತ್ನಿಸಿದ್ದರಲ್ಲಿಯೂ ಒಳನೋಟಗಳಿವೆ.
ಕೃ: ನೀರಿಗೆ ಮೂಡಿದ ಆಕಾರ ಡಾ. ಎಚ್.ಎಸ್.ರಾಘವೇಂದ್ರರಾವ್ ಪ್ರಕಾಶನ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಇದೊಂದು ಮಹತ್ವದ ಅಧ್ಯಯನ ಕೃತಿ. ಕನ್ನಡ ವಿಮರ್ಶಾ ಸಾಹಿತ್ಯವನ್ನು ಬಲಪಡಿಸಿದವರಲ್ಲಿ ಎಚ್.ಎಸ್.ಆರ್ ಪ್ರಮುಖರು. ‘ ನೀರಿಗೆ ಮೂಡಿದ ಆಕಾರ’ ಅವರ ಐದು ದಶಕಗಳ ಅಧ್ಯಯನದ ಫಲವಾಗಿ ಅಭಿವ್ಯಕ್ತಿಗೊಂಡಿದೆ. ಕನ್ನಡದ ಮುಖ್ಯ ಕಥೆಗಾರರಾದ ಮಾಸ್ತಿ, ಅನಂತಮೂರ್ತಿ, ಲಂಕೇಶ್, ತೇಜಸ್ವಿ, ವೈದೇಹಿ ಅವರ ಕಥಾಸಾಹಿತ್ಯದ ಕುರಿತು ಅಧ್ಯಯನ ಮಾಡಿದ್ದಾರೆ. ಹಾಗೆಯೇ, ಶಿವರಾಮ ಕಾರಂತ, ಕುವೆಂಪು, ಯಶವಂತ ಚಿತ್ತಾಲ, ಎಸ್. ಎಲ್. ಭೈರಪ್ಪ, ದೇವನೂರು ಮಹಾದೇವರವರ ಕಾದಂಬರಿ ಸಾಹಿತ್ಯವನ್ನು ಕುರಿತು ಅಧ್ಯಯನ ಮಾಡಿರುವುದು ಈ ಕೃತಿಯಲ್ಲಿದೆ.
ಬಿಡಿಬಿಡಿಯಾಗಿ ವಿಮರ್ಶೆಯನ್ನು ಮಾಡಲು ತೊಡಗದೆ ಕಥನ ಮೀಮಾಂಸೆಯನ್ನು ಇಲ್ಲಿ ಕಟ್ಟಲು ಪ್ರಯತ್ನಿಸಲಾಗಿದೆ. ಸಾಹಿತ್ಯ ಪರಂಪರೆಯಲ್ಲಿ ಮೀಮಾಂಸೆ ಕುರಿತು ಉದ್ದಕ್ಕೂ ಅನೇಕ ಮೀಮಾಂಸೆಕಾರರು, ವಿಮರ್ಶಕರು, ಅಧ್ಯಯನಕಾರರು ಬಹಳಷ್ಟು ಕೆಲಸ ಮಾಡಿದ್ದಾರೆ. ಆದರೆ ಕಾವ್ಯ ಕುರಿತ ಮೀಮಾಂಸೆಯ ಬಗ್ಗೆ ಹೆಚ್ಚು ಕೆಲಸವಾಗಿದೆ. ಆಧುನಿಕ ಪ್ರಕಾರಗಳನ್ನು ಅದರಲ್ಲೂ ಕತೆ, ಕಾದಂಬರಿ ಕುರಿತ ಅಧ್ಯಯನಗಳು ನಡೆದಿಲ್ಲ. ಕನ್ನಡ ಸಾಹಿತ್ಯ ಮೀಮಾಂಸೆಯನ್ನು ರೂಪಿಸಲು ಒಂದು ದಶಕದಿಂದ ಪ್ರಯತ್ನಗಳು ನಡೆದಿವೆ. ಪದ್ಯಪ್ರಕಾರವನ್ನು ಕುರಿತ ಅಧ್ಯಯನಗಳು ಕನ್ನಡದಲ್ಲಿ ನಡೆದಿರುವುದು ಕಮ್ಮಿ. ಅದರಲ್ಲೂ ಕತೆ ಕಾದಂಬರಿ, ಸಾಹಿತ್ಯ ಪ್ರಕಾರಗಳನ್ನು ಅನುಲಕ್ಷಿಸಿ ಕಥನ ಮೀಮಾಂಸೆಯನ್ನು ರೂಪಿಸಲು ಪ್ರಯತ್ನಗಳು ನಡೆದದ್ದು ಕಮ್ಮಿ. ಈ ಕೊರತೆಯನ್ನು ‘ನೀರಿಗೆ ಮೂಡಿದ ಆಕಾರ’ ಕೃತಿಯು ಸಮರ್ಥವಾಗಿ ತುಂಬಿಕೊಟ್ಟಿದೆ.
ಎಚ್.ಎಸ್.ಆರ್ ಅವರು ಸಾಹಿತ್ಯ ಕೃತಿಗಳನ್ನು ನಿರ್ದಿಷ್ಟ ಸೈದ್ಧಾಂತಿಕ ನೆಲೆಯಿಂದಲೇ ವಿಮರ್ಶಿಸಲು ಪ್ರಯತ್ನಿಸುವುದಿಲ್ಲ. ಹಾಗಂತ ಯಾವುದೇ ಸೈದ್ಧಾಂತಿಕ ನೆಲೆಯಿಲ್ಲದೇ ಅವರು ವಿಮರ್ಶೆ ಮಾಡುತ್ತಾರೆ ಎಂದರ್ಥವಲ್ಲ. ಸೈದ್ಧಾಂತಿಕತೆಗಳ ಬೆನ್ನೆಲುಬಿನಿಂದಲೇ ವಿಮರ್ಶೆ ಮಾಡುತ್ತ ಬಂದಿದ್ದಾರೆ. ಕೇವಲ ರೂಪನಿಷ್ಠ ಅಧ್ಯಯನಕ್ಕೆ ತೊಡಗುವುದಿಲ್ಲ. ಲೇಖಕ ನಿಷ್ಠವಾಗಿಯೂ ಅಧ್ಯಯನ ಮಾಡುವುದಿಲ್ಲ. ಇವೆರಡರ ಅಂತರ್ ಸಂದರ್ಭದಲ್ಲಿ ಕೃತಿ ವಿಮರ್ಶೆಗೆ ನಿಲ್ಲುತ್ತಾರೆ. ಒಂದು ಕೃತಿಯನ್ನು ಕೃತಿ, ಸಂದರ್ಭ ಲೇಖಕನ ಆಶಕ್ತಿ, ಸಮಾಜ ಇವೆಲ್ಲವುಗಳ ಅಂತರ್ ಸಂಬಂಧದಲ್ಲಿ ಅಧ್ಯಯನ ಮಾಡುವುದೇ ಎಚ್.ಎಸ್.ಆರ್ ಅವರ ವಿಶೇಷತೆ ಎನ್ನುವುದು ಈ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತದೆ.
ಈ ಕೃತಿಯಲ್ಲಿ ಕಥನ ಮೀಮಾಂಸೆಯನ್ನು ಮುಖ್ಯ ಕಥೆಗಾರರ, ಕಾದಂಬರಿಕಾರರ ಸಾಹಿತ್ಯವನ್ನು ಕೇಂದ್ರದಲ್ಲಿರಿಸಿಕೊಂಡು ರೂಪಿಸಲು ಪ್ರಯತ್ನಿಸಿದ್ದುದು ಮಹತ್ವವಾಗಿ ತೋರುತ್ತದೆ. ಕೃತಿಗಳು ಕೃತಿಕಾರನ ಕಣ್ಮುಂದಿನ ಸಮಾಜ, ಅದು ಕತೆ, ಕಾದಂಬರಿಯಲ್ಲಿ ರೂಪ ಪಡೆದ ಬಗೆಯನ್ನು ಮತ್ತು ಕೃತಿಕಾರನ ನಿಲುವುಗಳನ್ನು ಒಟ್ಟಿಗೆ ಒಂದು ಚೌಕಟ್ಟಿಗೆ ತಂದು ನೋಡುವುದರಿಂದ ಮೀಮಾಂಸೆ ಕಟ್ಟಲು ಅವರಿಗೆ ಸಾಧ್ಯವಾಗಿದೆ. ಕಥನ ಮೀಮಾಂಸೆಯಲ್ಲಿ ಆಸಕ್ತಿಯಿರುವ ಓದುಗರಿಗೂ, ಅಧ್ಯಯನಕಾರರಿಗೂ ‘ನೀರಿಗೆ ಮೂಡಿದ ಆಕಾರ’ ನೆರವಾಗುತ್ತದೆ.
ಸಮಾಜವನ್ನು, ಅಲ್ಲಿನ ವಿದ್ಯಮಾನಗಳನ್ನು ಕತೆ, ಕಾದಂಬರಿಯಲ್ಲಿ ಕಲ್ಪನೆ- ವಾಸ್ತವದ ಗ್ರಹಿಕೆಯಿಂದ ಕಥನಕಾರ ಕತೆ ಕಟ್ಟುವುದೆಂದರೆ… ನೀರಿಗೆ ಮೂಡಿದ ಆಕಾರವೇ ಸರಿ.
Published On - 6:14 pm, Thu, 31 December 20