New Year Resolution | ಎಲ್ಲ ಬದಲಾವಣೆಗಳನ್ನೂ ಒಳ್ಳೆಯದು ಎನ್ನಲು ಆದೀತೆ; ಪ್ರತಿಭಾ ನಂದಕುಮಾರ್

ಹೊಸ ವರ್ಷದಲ್ಲಿ ವೈಯಕ್ತಿಕ ಬದುಕು ಮತ್ತು ಸಮಾಜದಲ್ಲಿ ನಿರೀಕ್ಷಿಸುವ ಬದಲಾವಣೆಗಳ ಬಗ್ಗೆ ಲೇಖಕಿ, ಕವಯತ್ರಿ ಪ್ರತಿಭಾ ನಂದಕುಮಾರ್ ಈ ಬರಹದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

New Year Resolution | ಎಲ್ಲ ಬದಲಾವಣೆಗಳನ್ನೂ ಒಳ್ಳೆಯದು ಎನ್ನಲು ಆದೀತೆ; ಪ್ರತಿಭಾ ನಂದಕುಮಾರ್
ಪ್ರತಿಭಾ ನಂದಕುಮಾರ್
Ghanashyam D M | ಡಿ.ಎಂ.ಘನಶ್ಯಾಮ

|

Dec 31, 2020 | 5:19 PM

ಹೊಸ ವರ್ಷದಲ್ಲಿ ವೈಯಕ್ತಿಕ ಬದುಕು ಮತ್ತು ಸಮಾಜದಲ್ಲಿ ನಿರೀಕ್ಷಿಸುವ ಬದಲಾವಣೆಗಳ ಬಗ್ಗೆ ಲೇಖಕಿ, ಕವಯತ್ರಿ ಪ್ರತಿಭಾ ನಂದಕುಮಾರ್ ಈ ಬರಹದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಬದಲಾವಣೆ ಎನ್ನುವುದು ಎರಡು ರೀತಿಯಲ್ಲಿ ಆಗುತ್ತದೆ. ಸ್ವಯಂಪ್ರೇರಿತವಾಗಿ, ತನ್ನಿಂತಾನೇ ಮತ್ತು ಪ್ರಯತ್ನಪೂರ್ವಕವಾಗಿ. ಅದೂ ಸಹ ಅದರ ಅಗತ್ಯವಿದ್ದಾಗ ಮಾತ್ರ. ಬದಲಾವಣೆ ಅನಿವಾರ್ಯ ಅಲ್ಲ ಮತ್ತು ಹೌದು. ಒಂದು ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡುತ್ತಿದ್ದರೆ ಅದನ್ನು ಬದಲಾಯಿಸಬೇಕಾಗಿಲ್ಲ. ಅದರಲ್ಲಿ ತೊಡಕು ಉಂಟಾದರೆ ಮಾತ್ರ ಬದಲಾವಣೆ ಅಗತ್ಯವಾಗುತ್ತದೆ. ಅಥವಾ ಇರುವುದಕ್ಕಿಂತ ಇನ್ನಷ್ಟು ಚೆನ್ನಾದ, ಸಮರ್ಪಕವಾದ,ಉತ್ತಮಗೊಳಿಸಿದ ವ್ಯವಸ್ಥೆ ಸಿಕ್ಕರೆ ಅದನ್ನು ಪರಿಗಣಿಸಬಹುದು. ಇರುವುದನ್ನು ಕೆಡಿಸುವ ಬದಲಾವಣೆ ಮಾತ್ರ ಸಲ್ಲ.

ವೈಯಕ್ತಿಕವಾಗಿ ನನ್ನಲ್ಲಿ ಯಾವುದು ಕೆಲಸ ಮಾಡುತ್ತಿಲ್ಲ, ಯಾವುದು ತೊಡಕಾಗಿದೆ, ಇರುವುದಕ್ಕಿಂತ ಉತ್ತಮ ವ್ಯವಸ್ಥೆ ಯಾವುದು ಎಂದು ಪರಿಶೀಲಿಸಿದರೆ ಅಂತಹ ಪಾತ್ ಬ್ರೇಕಿಂಗ್ ಬದಲಾವಣೆಗಳ ಅಗತ್ಯವೇನೂ ಕಾಣಿಸುತ್ತಿಲ್ಲ. ಇರುವುದನ್ನೇ ಸ್ವಲ್ಪ ಸರಳೀಕರಿಸಿಕೊಂಡರೆ ಸಾಕು.

ಬದಲಾವಣೆ ದೈಹಿಕ ಮತ್ತು ಮಾನಸಿಕ ಎಂದು ಎರಡು ವಿಧ. ದೈಹಿಕ ಬದಲಾವಣೆ ನಿಸರ್ಗಕ್ಕೆ ಒಪ್ಪಿಸಿಬಿಟ್ಟಿರುವುದರಿಂದ ಬೇಡ ಎಂದರೂ ಅದು ಬದಲಾಗಿಯೇ ಆಗುತ್ತಿದೆ. ದೇಹ ಸಡಿಲಾಗಿದೆ. ಕೂದಲು ನರೆತಿದೆ. ಕನ್ನಡಕ ಬಂದಿದೆ. ಚಟುವಟಿಕೆಗಳು ಸ್ವಲ್ಪ ನಿಧಾನವಾಗಲು ತೊಡಗಿದೆ. ಹಿಂದಿನಂತೆ ಹಾರಿಕೊಂಡು ಮೆಟ್ಟಿಲು ಹತ್ತಲಾಗುತ್ತಿಲ್ಲ ಒಂದೊಂದೇ ಹತ್ತಬೇಕು. ಹಿಂದಿನಂತೆ ಸತತವಾಗಿ ದಿನವಿಡೀ ಕೆಲಸ ಮಾಡಲು ಸ್ವಲ್ಪ ಕಷ್ಟ. ನಡುವೆ ವಿಶ್ರಾಂತಿ ಬಯಸುತ್ತದೆ ದೇಹ. ಅದನ್ನು ಸಮಾಳಿಸಬೇಕು ಅಷ್ಟೇ. ವ್ಯಾಯಾಮ ಆಹಾರ ನಿದ್ದೆ ಔಷಧಿ ವಯಸ್ಸಿಗೆ ತಕ್ಕಂತೆ. ಇದನ್ನು ಮಹತ್ವದ ಬದಲಾವಣೆ ಎನ್ನಬಹುದೇ? ಅಥವಾ ಸಹಜ ಎನ್ನಬಹುದೇ?

ಇನ್ನು ಮನಸ್ಸಿನ ಮತ್ತು ಬೌದ್ಧಿಕ ಬದಲಾವಣೆಗಳು ತಾವಾಗಿಯೇ ಆಗುವಂತಹವು. ಹಿಂದಿನ ಹುಡುಕಾಟಿಕೆಯ ಬೇಜವಾಬ್ದಾರಿ ಸ್ವಲ್ಪ ಬದಿಗಿಟ್ಟು ಗಂಭೀರ ಚಿಂತನೆಗೆ ತೊಡಗಿಕೊಳ್ಳುವುದು. ಹಿಂದೆ ಒಂದು ಸಣ್ಣ ವಿಷಯವನ್ನು ಚರ್ಚಿಸಿ ವಾದ ಹೂಡಿ ಎದುರಾಳಿಯನ್ನು ಮಣಿಸದೇ ನಿಲ್ಲುವುದಿಲ್ಲ ಎನ್ನುವ ಛಲದ ಸ್ಥಾನದಲ್ಲಿ ‘ಪಾಪ, ಅವರ ನಿಲುವು ಅವರಿಗೆ ಬಿಡಿ’ ಎನ್ನುವ ಉದಾರತೆ. ಭಿನ್ನಮತವನ್ನು ಒಪ್ಪಿಕೊಳ್ಳೋಣ ಅನ್ನುವ ಉದಾರತೆ. ನನ್ನ ತಟ್ಟೆಯ ಸುದ್ದಿಗೆ ನೀನು ಬರಬೇಡ, ನಿನ್ನ ತಟ್ಟೆಯ ಸುದ್ದಿಗೆ ನಾನು ಬರುವುದಿಲ್ಲ ಅನ್ನುವ ಉದಾರತೆ. ನಿನ್ನ ಆಯ್ಕೆ ನಿನಗೆ ನನ್ನ ಆಯ್ಕೆ ನನಗೆ ಇಬ್ಬರೂ ಒಟ್ಟಿಗೇ ಬಾಳೋಣ ಅನ್ನುವ ಉದಾರತೆ. ಹೇಳಬೇಕಾದ್ದನ್ನು ಹೇಳುವ ಸರಾಗ, ಮಾಡಬೇಕಾದ್ದನ್ನು ಮಾಡುವ ಸಲೀಸು, ಬರೆಯಬೇಕಾದ್ದನ್ನು ಬರೆಯುವ ಸ್ವಾತಂತ್ರ್ಯ… ಯಾವುದೂ ತೃಣಮಾತ್ರ ಬದಲಾಗಿಲ್ಲ. ಆಗುವುದೂ ಇಲ್ಲ. ವೈಯಕ್ತಿಕ ನೆಲೆಯಲ್ಲಿ ಎಂದೂ ಜಾತಿ ಮತ ಧರ್ಮ ಲಿಂಗ ಭೇದ ಮಾಡದೇ ಬೆಳೆದಿರುವ ಬದುಕಿರುವ ನನಗೆ ನನ್ನ ಚಿಂತನೆಗಳಲ್ಲಿ ಬದಲಾವಣೆಯ ಅಗತ್ಯ ಇದೆ ಎಂದು ಅನ್ನಿಸಿಲ್ಲ.

ಸಮಾಜದಲ್ಲಿ ಇಂತಹ ಬದಲಾವಣೆ ಆಗಬೇಕು ಎಂದು ನಿರೀಕ್ಷಿಸುತ್ತೇನೆ

ಸಮಾಜ ಮತ್ತು ಸರ್ಕಾರದಲ್ಲಿ ಆಗಿರುವ ದಾಪುಗಾಲಿನ ಬದಲಾವಣೆಗಳು ಕಂಗೆಡಿಸಿವೆ. ನಿಜ, ಬದಲಾವಣೆಗಳು ಒಳ್ಳೆಯದಕ್ಕೆ ಆಗಬೇಕಾಗಿಲ್ಲ, ಕೆಟ್ಟದಾಗಿಯೂ ಆಗಿವೆ. ಅಧಿಕಾರದಲ್ಲಿರುವವರು ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿರುವುದು, ಅದನ್ನು ಮಾಧ್ಯಮಗಳು ವೇದವಾಕ್ಯದಂತೆ ವರದಿ ಮಾಡುವುದು, ಅದನ್ನು ಸಾರ್ವಜನಿಕರು ಕಣ್ಣುಮುಚ್ಚಿ ಕುಡಿಯುವುದು ನಡೆಯುತ್ತಿರುವಾಗ, ಸ್ವಂತಬುದ್ಧಿಯ ಬಳಕೆ ಇಲ್ಲದಿರುವಾಗ, ಹಿಂದಿನಂತೆ ದೇವರ, ನೈತಿಕತೆಯ ಸಮಾಜದ ಜನರ ತಿರಸ್ಕಾರದ ಭಯ ಹೇಗೋ ಹಾಕುತ್ತಿದ್ದ ಕಡಿವಾಣ ಈಗ ಕಿತ್ತುಹೋಗಿರುವುದರಿಂದ ಸರ್ವತಂತ್ರ ಸ್ವತಂತ್ರರಾಗಿ ಸ್ವೇಚ್ಛಾಚಾರರಾಗಿ ಲಂಗುಲಗಾಮಿಲ್ಲದೇ ಬಾಯಿ ನುಡಿಯುತ್ತಿರುವಾಗ ಅದನ್ನು ಬಗ್ಗು ಬಡಿಯುವುದು ಸುಲಭವಾಗುತ್ತಿಲ್ಲ.

ಅಲ್ಲಿ ಆಗಿರುವ ಮಹತ್ತರ ಕೆಟ್ಟ ಬದಲಾವಣೆ ಮತ್ತೆ ತಿರುಗಿ ಒಳ್ಳೆಯದಾಗಲು ಪವಾಡ ಮಾತ್ರವೇ ಬೇಕಾಗಿದೆ. ಹಾಳುಗೆಟ್ಟ ಕಲುಷಿತ ಬುದ್ಧಿ ಮನಸ್ಸುಗಳು ಮತ್ತೆ ಒಳ್ಳೆಯ ಚಿಂತನೆ ನಡವಳಿಕೆಯ ಕಡೆಗೆ ಬದಲಾಗಬೇಕೆಂದು ಬರಿ ನಿರೀಕ್ಷೆ ಮಾತ್ರ ಮಾಡಲು ಸಾಧ್ಯ. ಸಧ್ಯದ ಸ್ಥಿತಿಯಲ್ಲಿ ಸುಲಭವಲ್ಲ. ಯಾರು ಏನೇ ಬುದ್ದಿವಾದ ಹೇಳಿದರೂ ಸಡ್ಡು ಹೊಡೆಯುವುದೇ ಪ್ರಸ್ತುತದ ಶೈಲಿ, ರೂಢಿ, ಠೀವಿ ಆಗಿರುವಾಗ ಬದಲಾವಣೆ ಬಯಸುವುದು ಕಷ್ಟಸಾಧ್ಯ. ಅಲ್ಲದೆ, ಸಾಮಾಜಿಕ ಬದಲಾವಣೆ ಆಗಲು ನಿಷ್ಪಕ್ಷಪಾತ ದೃಷ್ಟಿಯ ಅಗತ್ಯ ಇದೆ. ಜಾತಿ ಮತ ಧರ್ಮ ರಾಜಕೀಯಗಳ ಕಟ್ಟುಪಾಡಿನಲ್ಲಿ ಬಂಧಿತರಾಗಿರುವಾಗ ಸಮಾನತೆ, ಸ್ವಾತಂತ್ರ್ಯ, ಸುಕ್ಷೇಮ ಸುಸ್ಥಿರ ಬದುಕು ತನ್ನಿ, ಹಸಿವು ನೀಗಿಸಿ, ಜಾತ್ಯತೀತತೆ ಪಾಲಿಸಿ, ರೈತರನ್ನು ಗೌರವಿಸಿ, ಮಹಿಳೆಯರ ದಮನ ನಿಲ್ಲಿಸಿ, ಮಕ್ಕಳನ್ನು ವಿದ್ಯೆ ಕೊಟ್ಟು ಬೆಳೆಸಿ ಉತ್ತಮ ನಾಗರೀಕರನ್ನಾಗಿಸಿ ಎಂದು ಮೂಲ ಮಂತ್ರವನ್ನು ಬೋಧಿಸಿದರೆ ಈ ಕಿವುಡ ಮುಖ ಅಂಧ ಸಮಾಜ ಕೇಳುತ್ತದೆಯೇ? ಅಷ್ಟೆಲ್ಲ ಬೇಡ ಭ್ರಷ್ಟಾಚಾರ ನಿಲ್ಲಿಸಿ ಅಂದರೆ ಅದನ್ನಾದರೂ – ಅದೊಂದನ್ನಾದರೂ – ಕೇಳುತ್ತಾರೆಯೇ?

ನಾನು ಏನು ಮಾಡಬಲ್ಲೆ?

ಸಮಾಜ ಬದಲಾಗಬೇಕಾದರೆ ವ್ಯಕ್ತಿಗತ ನೆಲೆಯಲ್ಲಿ ನೈತಿಕತೆ ಪಾಲಿಸಬೇಕು. ನಾನಾಗಿ ಕಲ್ಲು ಹೊಡೆಯಲಿಲ್ಲ ಪಕ್ಕದವರು ಹೊಡೆದದ್ದರಿಂದ ಹೊಡೆದೆ, ಮೊದಲು ಅವನನ್ನು ಬೈಯಿರಿ ನಂತರ ನನ್ನ ಸುದ್ದಿಗೆ ಬನ್ನಿ ಅನ್ನುವುದು ಜಾಣ ವಾದ. ಪಕ್ಕದವನು ಕಲ್ಲು ಹೊಡೆದರೂ ನಾನು ಹೊಡೆಯುವುದಿಲ್ಲ, ಅವನಿಗೂ ಹೊಡೆಯಬೇಡ ಎಂದು ಹೇಳುತ್ತೇನೆ ಅವನು ಕೇಳದಿದ್ದರೆ ನಾನೇನೂ ಮಾಡಲು ಅಸಾಧ್ಯ ಎನ್ನುವುದು ಒಂದು ನೆಲೆಯಿಂದ ಉತ್ತಮ, ಇನ್ನೊಂದು ನೆಲೆಯಿಂದ ಪಲಾಯನವಾದ. ನಾನು ವೈಯಕ್ತಿಕ ನೆಲೆಯಲ್ಲಿ ಸಮಾನತೆ, ಜಾತ್ಯತೀತತೆ ಪಾಲಿಸುತ್ತೇನೆ ಎಂದು ಪ್ರತಿಯೊಬ್ಬರೂ ಅಂದುಕೊಂಡರೆ ಅದೇ ದೊಡ್ಡದು. ನನ್ನ ಬಗ್ಗೆ ನಾನೇ ಏಕಾಂತದಲ್ಲಿ ಸರ್ಟಿಫಿಕೇಟ್ ಕೊಟ್ಟುಕೊಳ್ಳಬೇಕಾದಾಗ ಸುಳ್ಳು ಹೇಳುವ ಅಗತ್ಯ ಬರದಿದ್ದರೆ ಸಾಕು. ಅದೇ ನಾನು ಮಾಡುವ ದೊಡ್ಡ ಪ್ರಯತ್ನ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada