IPL 2025: ಬೆಂಗಳೂರಿನಲ್ಲಿ ಆರ್‌ಸಿಬಿ ಪ್ಲೇಯಿಂಗ್ 11 ಬದಲಾಗುತ್ತಾ? ಗುಜರಾತ್ ತಂಡ ಹೇಗಿರಲಿದೆ?
RCB vs GT IPL 2025: ಐಪಿಎಲ್ 2025ರ 14ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ. ಎರಡೂ ತಂಡಗಳು ಉತ್ತಮ ಫಾರ್ಮ್‌ನಲ್ಲಿದ್ದು, ತಮ್ಮ ಗೆಲುವಿನ ಸಂಯೋಜನೆಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಆರ್‌ಸಿಬಿಯ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳು ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದು, ಗುಜರಾತ್ ತಂಡವು ಕೂಡ ಉತ್ತಮ ಪ್ರದರ್ಶನ ನೀಡುತ್ತಿದೆ

18ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2025) ಆಡಿರುವ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಇದೀಗ ತನ್ನ ತವರು ನೆಲದಲ್ಲಿ ಮೊದಲ ಪಂದ್ಯವನ್ನು ಆಡಲು ಸಜ್ಜಾಗಿದೆ. ಐಪಿಎಲ್ 2025 ರ 14 ನೇ ಪಂದ್ಯದಲ್ಲಿ ಆರ್‌ಸಿಬಿ, ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದ್ದು, ಗೆಲುವಿನ ಲಯದಲ್ಲಿರುವ ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಲಾಗಿದೆ. ಟೂರ್ನಿಯಲ್ಲಿ ಉಭಯ ತಂಡಗಳ ಪ್ರದರ್ಶನವನ್ನು ನೋಡುವುದಾದರೆ.. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನು ಸೋಲಿಸಿದ್ದ ಆರ್‌ಸಿಬಿ, ಆ ಬಳಿಕ ಸಿಎಸ್ಕೆ ತಂಡವನ್ನು ಸೋಲಿಸಿತ್ತು. ಇದೀಗ ಗುಜರಾತ್ ತನ್ನ ಮೊದಲ ಪಂದ್ಯದಲ್ಲಿ ಸೋಲು ಕಂಡರೆ, ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಇನ್ನು ಉಭಯ ತಂಡಗಳ ಈ ಕಾಳಗದಲ್ಲಿ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದನ್ನು ನೋಡುವುದಾದರೆ.,
ತವರಿನಲ್ಲಿ ಬದಲಾಗುತ್ತಾ ಆರ್‌ಸಿಬಿ ಪ್ಲೇಯಿಂಗ್ 11
ವಾಸ್ತವವಾಗಿ ಯಾವುದೇ ತಂಡವಾಗಿರಲಿ ಅದರ ಗೆಲುವಿನ ಸಂಯೋಜನೆಯನ್ನು ಬದಲಿಸಲು ಬಯಸುವುದಿಲ್ಲ. ಅದರಂತೆ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ ತಂಡದಲ್ಲೂ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ. ಇಡೀ ತಂಡ ಸಾಂಘಿಕ ಪ್ರದರ್ಶನ ನೀಡುತ್ತಿರುವ ಕಾರಣ ಒಬ್ಬ ಆಟಗಾರನನ್ನು ಪ್ಲೇಯಿಂಗ್ 11 ನಿಂದ ಹೊರಗಿಡುವುದು ಅಸಾಧ್ಯ. ಬ್ಯಾಟಿಂಗ್ ವಿಭಾಗದಲ್ಲಿ ಲಿಯಮಾ ಲಿವಿಂಗ್‌ಸ್ಟೋನ್ ಇದುವರೆಗೆ ತಮ್ಮ ಲಯವನ್ನು ಕಂಡುಕೊಂಡಿಲ್ಲ ಎಂಬುದನ್ನು ಬಿಟ್ಟರೆ ಉಳಿದವರಿಂದ ಅಮೋಘ ಪ್ರದರ್ಶನ ಕಂಡುಬಂದಿದೆ. ಇತ್ತ ಬೌಲಿಂಗ್‌ನಲ್ಲೂ ಕೂಡ ಎಲ್ಲರೂ ಅದ್ಭುತ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಚಿನ್ನಸ್ವಾಮಿಯಲ್ಲೂ ಯಾವುದೇ ಬದಲಾವಣೆಗಳಿಲ್ಲದೆ ಆರ್ಸಿವಿ ಕಣಕ್ಕಿಳಿಯುವುದನ್ನು ಕಾಣಬಹುದು.
ಗುಜರಾತ್ ತಂಡ ಹೇಗಿರಲಿದೆ?
ಗುಜರಾತ್ ಟೈಟಾನ್ಸ್ ತಂಡ ಕೂಡ ತನ್ನ ಗೆಲುವಿನ ಸಂಯೋಜನೆಯನ್ನು ಬದಲಿಸಲು ಬಯಸುವುದಿಲ್ಲ. ಕಳೆದ ಪಂದ್ಯದಲ್ಲಿ ಸಾಯಿ ಸುದರ್ಶನ್ ಮತ್ತು ನಾಯಕ ಶುಭ್ಮನ್ ಗಿಲ್ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಸುದರ್ಶನ್ 41 ಎಸೆತಗಳಲ್ಲಿ 63 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಮೂರನೇ ಸ್ಥಾನದಲ್ಲಿ ಜೋಸ್ ಬಟ್ಲರ್ ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಆದಾಗ್ಯೂ, ಕೆಳ ಕ್ರಮಾಂಕದಲ್ಲಿ, ತಂಡವು ರುದರ್ಫೋರ್ಡ್, ಶಾರುಖ್ ಖಾನ್ ಮತ್ತು ರಾಹುಲ್ ತೆವಾಟಿಯಾ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತದೆ. ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್ ಮುಂಬೈ ವಿರುದ್ಧ ಉತ್ತಮ ಲಯದಲ್ಲಿ ಕಾಣಿಸಿಕೊಂಡರೆ, ಪ್ರಸಿದ್ಧ್ ಕೃಷ್ಣ ವಿನಾಶಕಾರಿ ಪ್ರದರ್ಶನ ನೀಡಿದ್ದರು.
IPL 2025: ‘ಪಾಪ ಬಡ ತಂಡ’; ಆರ್ಸಿಬಿಯನ್ನು ಗೇಲಿ ಮಾಡಿದ ವೀರೇಂದ್ರ ಸೆಹ್ವಾಗ್
ಸಂಭಾವ್ಯ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
ಗುಜರಾತ್ ಟೈಟನ್ಸ್ ಸಂಭಾವ್ಯ ಪ್ಲೇಯಿಂಗ್ 11: ಶುಭ್ಮನ್ ಗಿಲ್, ಸಾಯಿ ಸುದರ್ಶನ್, ಜೋಸ್ ಬಟ್ಲರ್, ಶೆರ್ಫೇನ್ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ