ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಕಥೆಗಾರ ಶಿ.ಜು.ಪಾಶ
‘ರಜಿಯಾರ ಕವಿತೆಗಳು ಬೂದಿ ಮುಚ್ಚಿದ ಕೆಂಡದಂತೆ ಇರುತ್ತವೆ, ಕತ್ತಲೆಯಲ್ಲಿ ಪ್ರಜ್ಞೆ ಮರಳಿ ಕಣ್ಣು ಬಿಟ್ಟಂತಿರುತ್ತವೆ, ಆಗಷ್ಟೇ ಹಣತೆಗೆ ಹತ್ತಿದ ಬೆಳಕಿನಂತಿರುತ್ತವೆ. ಇವರ ಕವಿತೆಗಳನ್ನು ಒಂದೊಂದಾಗಿಯೇ ಓದಬೇಕು. ಯಾಕೆಂದರೆ, ಒಂದು ಕವಿತೆ ಬಹಳಷ್ಟು ಕವಿತೆಗಳ ಆಂತರ್ಯದ ಮಾತುಗಳನ್ನು ಆಡುತ್ತದೆ.‘ ಶಿ. ಜು. ಪಾಶ.
ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಕಥೆಗಾರ ಶಿ. ಜು. ಪಾಶ ಅವರ ಆಯ್ಕೆಗಳು ಇಲ್ಲಿವೆ.
ಕೃ: ಕೋಶಿ’ಸ್ ಲೇ: ಕೆ.ನಲ್ಲತಂಬಿ ಪ್ರ: ಬಹುರೂಪಿ ಪ್ರಕಾಶನ
ತಲೆಕೆಳಗೆ ಮಾಡಿ ಕಾಲು ಮೇಲೆ ಮಾಡಿ ಎಷ್ಟೇ ಕೋಶಿಶ್ ಮಾಡಿದರೂ ಇಂಥ ಕವಿತೆಗಳನ್ನು ಕೆಲವೊಮ್ಮೆ ಬರೆಯಲು ಸಾಧ್ಯವಾಗುವುದೇ ಇಲ್ಲ. ಅಂಥಲ್ಲಿ ಕೆ.ನಲ್ಲತಂಬಿ ಕಾಫಿ ಟೇಬಲ್‌ನಲ್ಲಿ ದಕ್ಕಿದ ಸತ್ಯಗಳನ್ನು ವಿನ್ಸೆಂಟ್ ಮೂಲಕ ಕವಿತೆಗಳನ್ನಾಗಿ ರೂಪಿಸಿ ನಮ್ಮ ಮುಂದಿಟ್ಟಿದ್ದಾರೆ; ಅದುವೇ ಕೋಶಿ’ಸ್ ಕವಿತೆಗಳು. ಉದ್ದನೇ ದೇಹದ ತೆಳು ಮೈ-ಕೈ ಹೊತ್ತಿರುವ ಈ ಸಂಕಲನ ಹೊಸದೇ ರೀತಿಯಲ್ಲಿ ಕಾವ್ಯಪ್ರಿಯರ ಗಮನವನ್ನು ಸೆಳೆಯುತ್ತಿದೆ.
ಕಾವ್ಯದ ಸಿದ್ಧ ಮಾದರಿಗಳನ್ನೆಲ್ಲ ಆಚೆಗೆ ತೂರಿ, ಸಾಂಪ್ರದಾಯಿಕ ಭಾವನೆಗಳನ್ನೆಲ್ಲ ಮೂಸೂ ನೋಡದೇ ಹೊಸದೇ ಆದ ಹಾದಿ ಸೃಷ್ಟಿಸಿಕೊಂಡು ಕೆ. ನಲ್ಲತಂಬಿ ಇಲ್ಲಿ ಹೊರಟುಬಿಟ್ಟಿದ್ದಾರೆ. ಕಾಫಿ ಕಪ್ಪಿನೊಳಗೆ ಈಗ ಜಗತ್ತೇ ಇದೆ. ಬೇರೆ ಬೇರೆ ಜಗತ್ತುಗಳನ್ನು ಈ ಕಾಫಿ ಕಪ್ಪಿನಲ್ಲಿ ಕಂಡಿದ್ದ ನಮಗೆ, ಅದೇ ಕಪ್ಪಿನಲ್ಲಿ ಕಾವ್ಯ ಜಗತ್ತು ಕೂಡ ಇದೆ ಎಂಬುದನ್ನು ನಲ್ಲತಂಬಿ ಈ ಮೂಲಕ ತೋರಿಸಿಕೊಟ್ಟಿದ್ದಾರೆ. ಇಡೀ ಸಂಕಲನಕ್ಕೆ ಒಂದು ಚೌಕಟ್ಟಿದೆ. ಆ ಚೌಕಟ್ಟನ್ನು ದಾಟುವುದೇ ಇಲ್ಲಿನ ಕವಿತೆಗಳ ಮುಖ್ಯ ಉದ್ದೇಶ. ಇಲ್ಲಿ ವಿನ್ಸೆಂಟ್ ಒಮ್ಮೊಮ್ಮೆ ಪ್ರವಾದಿಯಂತೆ ಮಾತನಾಡುತ್ತಾನೆ. ಸಂತನಂತೆ ಪರಿಹಾರ ಹೇಳುತ್ತಾನೆ. ಸ್ನೇಹಿತನಂತೆ ಜೊತೆಗೆ ಹೆಜ್ಜೆ ಹಾಕುತ್ತಾನೆ. ಪ್ರೇಯಸಿಯಂತೆ ಹೃದಯ ಹೊಕ್ಕುತ್ತಾನೆ. ಪ್ರತಿಯೊಂದಕ್ಕೂ ಕಾಫಿಯ ಹಬೆಯಾಗುತ್ತಾನೆ.
ಕೃ: ಪರದೆ ಸರಿದಂತೆ ಲೇ: ಡಿ.ಬಿ.ರಜಿಯಾ ಪ್ರ: ಕೌದಿ ಪ್ರಕಾಶನ
ರಜಿಯಾ ಕವಿತೆ ಮಡಚಿಟ್ಟ ಕೌದಿ. ಅದರಲ್ಲಿ ಒಬ್ಬರದೇ ಸಾಮ್ರಾಜ್ಯ ದೌರ್ಜನ್ಯವಿಲ್ಲ. ಪರಂಪರೆಯಲ್ಲಿ ಬಾಳಿದ ದೊಡ್ಡಮ್ಮ, ಚಿಕ್ಕಮ್ಮ, ಅಮ್ಮ, ಅಕ್ಕ, ಅತ್ತೆ ಎಲ್ಲರ ದುಮ್ಮಾನ ಸುಮ್ಮಾನಗಳ ಮಹಾಕಾವ್ಯವಿದೆ. ಅವು ಅಮೂರ್ತ ರೂಪದ ಮನವರಿಕೆಗಳು. ಜೊತೆಗೆ ಮಹಾಮೌನದ ಕಾವ್ಯವೂ ಇದೆ. ಮನೆಯಂಗಳದ ಮಹಾಪ್ರಸ್ಥಾನದ ದಾರಿ ರಜಿಯಾರವರದು ಎಂದು ಕವಯತ್ರಿ ಪ್ರೊ. ಸ. ಉಷಾ ಹೇಳುತ್ತಾರೆ. ಆ ಮಾತು ಅಕ್ಷರಶಃ ಸರಿ ಎಂಬುದನ್ನು ಡಿ. ಬಿ. ರಜಿಯಾರವರ ಕವನ ಸಂಕಲನ ‘ಪರದೆ ಸರಿದಂತೆ’ ಓದಿದರೆ ಅರ್ಥವಾಗುತ್ತದೆ.
ಈಗಾಗಲೇ ಬಹಳಷ್ಟು ಚರ್ಚಿತ ಮುಸ್ಲಿಂ ಲೇಖಕರಲ್ಲಿ ರಜಿಯಾರವರು ಕೂಡ ಒಬ್ಬರು. ಅವರು ಪರದೆಯ ಒಳಗಿನ ಪ್ರಪಂಚವನ್ನು ಕಂಡವರು. ಆ ಪ್ರಪಂಚದ ನೆಲೆಗಟ್ಟಿನ ಮೇಲೆಯೇ ನಿಂತು ಪರದೆ ಸರಿಸಿ ನೋಡಿದವರು. ಪರದೆ ಸರಿದಂತೆಲ್ಲ ಅಕ್ಷರಗಳನ್ನು ತಮ್ಮದೇ ಆದ ಭಾವನೆಗಳ ಜೊತೆ ಒಟ್ಟುಗೂಡಿಸಿ ಕವಿತೆ ಆಗಿಸಿದವರು. ಇವರ ಕವಿತೆಗಳು ಬೂದಿ ಮುಚ್ಚಿದ ಕೆಂಡದಂತೆ ಇರುತ್ತವೆ, ಕತ್ತಲೆಯಲ್ಲಿ ಪ್ರಜ್ಞೆ ಮರಳಿ ಕಣ್ಣು ಬಿಟ್ಟಂತಿರುತ್ತವೆ, ಆಗಷ್ಟೇ ಹಣತೆಗೆ ಹತ್ತಿದ ಬೆಳಕಿನಂತಿರುತ್ತವೆ. ಇವರ ಕವಿತೆಗಳನ್ನು ಒಂದೊಂದಾಗಿಯೇ ಓದಬೇಕು. ಯಾಕೆಂದರೆ, ಒಂದು ಕವಿತೆ ಬಹಳಷ್ಟು ಕವಿತೆಗಳ ಆಂತರ್ಯದ ಮಾತುಗಳನ್ನು ಆಡುತ್ತದೆ!
ಮುನ್ನುಡಿಯಲ್ಲಿ ಖ್ಯಾತ ಕವಿ ಎಸ್. ಜಿ. ಸಿದ್ದರಾಮಯ್ಯ ಸ್ಪಷ್ಟವಾಗಿಯೇ ಹೇಳಿಬಿಟ್ಟಿದ್ದಾರೆ; ರಜಿಯಾ ಅರಗದ ಸಿದ್ಧಾಂತಗಳಿಗೆ ಬದ್ಧವಾಗಿ ಕಾವ್ಯ ಕಟ್ಟುವುದಿಲ್ಲ. ಅವರ ಅನುಭವ ಮಾತಾಡುತ್ತದೆ ಎಂದು. ದೂರದಲ್ಲಿ ನಿಂತು ಕವಯಿತ್ರಿ ಪದ್ಯ ಬರೆದಿಲ್ಲ. ಇಲ್ಲಿನ ಎಲ್ಲ ಕವಿತೆಗಳು ತಮ್ಮದೇ ಆದ ಅನುಭವದ ಬಾವಿಯಿಂದ ಜೀವಜಲ ಹೀರಿಕೊಂಡಿವೆ. ಕನ್ನಡಿಯಿಂದ ಆರಂಭವಾಗುವ ಇವರ ಪದ್ಯಗಳ ವಿಶೇಷತೆ ಕೊನೆ ಕೊನೆಗೆ ಹನಿಗವಿತೆಗಳ ಮೊರೆ ಹೋಗಿ ಅಮಲೇರಿಸುತ್ತಲೇ ರೂಪಕಗಳಾಗಿಬಿಡುತ್ತವೆ. ಕಳೆದ ಮೂರು ದಶಕಗಳಿಂದ ಕವಿತೆಗಳನ್ನು ತಮ್ಮ ಹೃದಯದಿಂದ ಹೆತ್ತುತ್ತಿರುವ ಡಿ.ಬಿ.ರಜಿಯಾ ದಟ್ಟ ಛಾಯೆಯನ್ನು ಮೂಡಿಸಬಲ್ಲ ನಿಜದ ಕವಿ.
ನಾನ್ಯಾವತ್ತೂ ಕವಿತೆ ಕಟ್ಟಲಿಲ್ಲ. ಅದು ನನ್ನೊಳಗೆ ಹುಟ್ಟುವಂಥದ್ದು. ನಾಲ್ಕು ಸಾಲು ಬರೆದು ಮತ್ತೆ ಮತ್ತೆ ತಿದ್ದಿ ಬರೆದಿಲ್ಲ. ಯಾರಿಗೂ ತೋರಿಸಿಲ್ಲ. ಯಾವುದೇ ಸಿದ್ಧಾಂತ ತತ್ವಗಳಿಗೆ ಈಡಾಗದೇನೇ ನನ್ನ ಶ್ರದ್ಧೆಯ ಅಭ್ಯಾಸ ಅಧ್ಯಯನಗಳಿಗೆ ಪೂರಕವಾಗಿ ಲೇಖನಿ ನಿರಂತರ ಸಾಗುತ್ತಾ ಬಂದಿದೆ. ನನ್ನ ಕವಿತೆ ಮಾತಾಡುತ್ತಲಿವೆ. ಮೌನವಾಗೆ ಪ್ರಶ್ನಿಸಿ, ಚಿಂತಿಸಿ, ಎಚ್ಚರಿಸುತ್ತಾ ತನ್ನ ಅಸ್ತಿತ್ವದ ಹುಡುಕಾಟಕ್ಕೆ ಮಾನವೀಯ ನೈಜತೆಗೆ ದನಿಯಾಗುತ್ತಲಿವೆ’ ಎಂದು ತಮ್ಮ ಮತ್ತು ಕೃತಿಯ ಕುರಿತು ಮಾತನಾಡಿರುವ ಕವಯಿತ್ರಿ ಡಿ. ಬಿ .ರಜಿಯಾರವರ ಒಟ್ಟಾರೆ ಕವಿತೆಗಳನ್ನು ನಾವು ಕೂಡ ಓದುವಾಗ ಪರದೆ ಸರಿದಂತಹ ಅನುಭವವನ್ನು ಪಡೆಯಬಹುದು.
Published On - 12:40 pm, Thu, 31 December 20