ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಡಾ. ಕೆ.ಎಸ್. ಪವಿತ್ರಾ

'ಲೈಂಗಿಕತೆ ಮತ್ತು ಕಲೆಗೂ, ನೈತಿಕತೆ - ಲೈಂಗಿಕತೆಗೂ ಇರುವ ಸೂಕ್ಷ್ಮ ಸಂಬಂಧಗಳು ಇಲ್ಲಿ ಕಾಣಿಸುತ್ತವೆ. ಕಥೆಗಳೊಳಗೆ ಕಥೆ ಹೆಣೆಯುವ ಭೈರಪ್ಪನವರ ತಂತ್ರ - ಮಾದರಿಯನ್ನು ‘ಅವಸಾನ' ಅನುಸರಿಸಿದರೆ, ಉಳಿದೆರಡು ನೇರವಾಗಿ ಕಥಾನಾಯಕಿಯ ಸುತ್ತ ಕಥೆ ಅರಳುವ ತಂತ್ರವನ್ನು ಬಳಸುತ್ತವೆ.' ಡಾ. ಕೆ. ಎಸ್. ಪವಿತ್ರಾ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಡಾ. ಕೆ.ಎಸ್. ಪವಿತ್ರಾ
ಮನೋವೈದ್ಯೆ, ಲೇಖಕಿ ಡಾ. ಕೆ. ಎಸ್. ಪವಿತ್ರಾ
TV9kannada Web Team

| Edited By: ganapathi bhat

Apr 06, 2022 | 11:07 PM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಮನೋವೈದ್ಯೆ, ಲೇಖಕಿ ಡಾ. ಕೆ. ಎಸ್. ಪವಿತ್ರಾ ಅವರ ಆಯ್ಕೆಗಳು ಇಲ್ಲಿವೆ.

ಕೃ: When daddy was a little boy ಲೇ: Alexander Raskin ಪ್ರ: Raduga Publishers

ಬಾಲ್ಯದಲ್ಲಿ ನಾನು ಓದಿದ್ದ ಪುಸ್ತಕವಿದು. ಅಂತರ್ಜಾಲದ ಕೃಪೆಯಿಂದ ಈಗಲೂ ಸಿಗುವಂಥದು. ಮಕ್ಕಳದ್ದು ಎಂದು ವಿಭಾಗಿಸಲ್ಪಡುವ ಈ ಪುಸ್ತಕವನ್ನು ನಾನು ಮತ್ತೆ ನನ್ನ 9 ವರ್ಷದ ಮಗನ ಕಾರಣದಿಂದ ಓದಬೇಕಾಯಿತು. ‘ಮಕ್ಕಳ ಪುಸ್ತಕ’ ಎಂಬ ಕಿಂಚಿತ್ ತಾತ್ಸಾರದಿಂದಲೇ ಓದಲಾರಂಬಿಸಿದೆ. ಆದರೆ ಓದುತ್ತಾ, ಓದುತ್ತಾ ಅದು ನನ್ನನ್ನು ಹಿಡಿದಿಟ್ಟ ರೀತಿ, ನನ್ನಲ್ಲಿ ಮಕ್ಕಳ ಬಗ್ಗೆ, ಅವರ ಸ್ವಭಾವ-ಮುಗ್ಧ-ನೇರ ನಡವಳಿಕೆಗಳ ಬಗ್ಗೆ ಚಿಂತನೆಗಳನ್ನು ಮೂಡಿಸಿದ ಬಗೆ, ಈ ವರ್ಷದಲ್ಲಿ ನಾನು ಓದಿದ ಅತ್ಯುತ್ತಮ ಪುಸ್ತಕವೆಂದು ಹೇಳುವಷ್ಟರ ಮಟ್ಟಿಗೆ ಹಿಡಿದಿಟ್ಟುಕೊಂಡಿತು.

ಅಲೆಕ್ಸಾಂಡರ್ ರಸ್ಕಿನ್ ಒಬ್ಬ ಪ್ರಸಿದ್ಧ ರಷಿಯನ್ ಲೇಖಕ, ಪುಸ್ತಕದ ಮುನ್ನುಡಿಯಲ್ಲಿ, ತನ್ನ ಮಗಳು ಸಾಷಾ ಕಾಯಿಲೆಯಿಂದ ಮಲಗಿದ್ದಾಗ ತಾನು ಅವಳ ಮನೋರಂಜನೆಗಾಗಿ ಹೇಳಿದ ತನ್ನ ಬಾಲ್ಯದ ಘಟನೆಗಳ ಫಲವೇ ಈ ಪುಸ್ತಕ ಎಂದು ಹೇಳುತ್ತಾನೆ. ಸಾಷಾಳಿಗೆ ತನ್ನ ಡ್ಯಾಡಿಯೂ ಒಮ್ಮೆ ಚಿಕ್ಕ ಹುಡುಗನಾಗಿದ್ದ, ಎಲ್ಲಾ ಚಿಕ್ಕ ಮಕ್ಕಳಂತೆ ತುಂಟತನವನ್ನೂ ಮಾಡುತ್ತಿದ್ದ ಎಂಬುದು ಗೊತ್ತಾದಾಗಅಚ್ಚರಿಯುಂಟಾಯಿತು ಎಂದು ರಸ್ಕಿನ್ ಹೇಳುತ್ತಾನೆ.  1966 ರಲ್ಲಿ ಮೊದಲು ಪ್ರಕಟಗೊಂಡ, 120 ಪುಟಗಳ ಈ ಪುಟ್ಟ ಪುಸ್ತಕ, ಚಿಕ್ಕ ಚಿಕ್ಕ ಅಧ್ಯಾಯಗಳಿಂದ ಕೂಡಿದೆ.  ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಪ್ರಾಮಾಣಿಕವಾಗಿ ನಡೆದದ್ದನ್ನು ಹೇಳುವ ವಸ್ತುನಿಷ್ಠತೆಯೊಂದಿಗೆ, ಸರಿ-ತಪ್ಪುಗಳ ನೈತಿಕತೆ, ಕಥೆ ಕಟ್ಟುವ ಜಾಣ್ಮೆ ಎಲ್ಲವೂ ಒಟ್ಟಿಗೇ ಸೇರುತ್ತವೆ. ಸರಳ ಇಂಗ್ಲೀಷ್‌ನಲ್ಲಿ, ರಷಿಯಾದ ಸಂಸ್ಕೃತಿಯ ನೋಟದೊಂದಿಗೆ ಮಕ್ಕಳಿಗಷ್ಟೇ ಅಲ್ಲ, ಹಿರಿಯರಿಗೂ ಆಪ್ತವಾಗಬಲ್ಲ ಪುಸ್ತಕ.

ಕೃ: ಅವಸಾನ ಲೇ: ಸಹನಾ ವಿಜಯಕುಮಾರ್‌ ಪ್ರ: ಸಾಹಿತ್ಯ ಭಂಡಾರ

ಈ ವರ್ಷ ನಾನು ಓದಿದ ಹೊಸ ಓದು ಹಲವಿದ್ದರೂ, ಒಂದು ಸಮಸ್ಯೆಯ ಬಗ್ಗೆ ಮಹಿಳಾ ಮನೋವೈದ್ಯಕೀಯ ದೃಷ್ಟಿಯಿಂದ ನನ್ನನ್ನು ಗಾಢ ಚಿಂತನೆಗೆ ಹಚ್ಚಿದ ಪುಸ್ತಕ ಸಹನಾ ವಿಜಯಕುಮಾರ ಅವರ ‘ಅವಸಾನ’. ವೇಶ್ಯಾಜೀವನ, ವೃದ್ಧ-ಕಾಯಿಲೆಯಿಂದ ನರಳುವ ತಂದೆ-ತಾಯಿ-ಮಕ್ಕಳ ನಡುವಿನ ಸಂಬಂಧ, ಹಲವು ರೀತಿಯಲ್ಲಿ ಸಂಕೀರ್ಣ ಎನಿಸಬಹುದಾದ ಜೀವನ ಪ್ರಶ್ನೆಗಳು ಓದುಗನನ್ನ ಆತ/ಆಕೆಯ ಆ ಹೊತ್ತಿನ ಮಾನಸಿಕ ನೆಲೆಗಟ್ಟು, ಜೀವನಾನುಭವಗಳಿಂದ ಕಾಡುತ್ತವೆ.

‘ಅವಸಾನ’ದ ಓದಿನಿಂದ ವೇಶ್ಯಾವೃತ್ತಿಗೆ ಸಂಬಂಧಿಸಿದ ಇನ್ನೆರಡು ಕಾದಂಬರಿಗಳ ಮರು ಓದಿಗೆ ಮನಸ್ಸು ಪ್ರೇರಿತವಾದದ್ದೂ ಗಮನಾರ್ಹ. ಒಂದು ಡಾ. ಶಿವರಾಮ ಕಾರಂತರ ‘ಮೈಮನಗಳ ಸುಳಿಯಲ್ಲಿ’, ಮತ್ತೊಂದು ಇಂಗ್ಲೀಷ್‌ನ ಅರ್ಥರ್ ಗೋಲ್ಡನ್ ಬರೆದಿರುವ ‘Memoims of Geisha’. ‘ಅವಸಾನ’ ಮತ್ತು ಈ ಎರಡೂ ಕಾದಂಬರಿಗಳ ಮಹಿಳೆಯರು ಸಮಾಜದ ಮಾನವೀಯ ಅಮಾನವೀಯ ಮುಖಗಳ ಪರಿಚಯ ಮಾಡಿಸುತ್ತಾರೆ. ಲೈಂಗಿಕತೆ ಮತ್ತು ಕಲೆಗೂ, ನೈತಿಕತೆ – ಲೈಂಗಿಕತೆಗೂ ಇರುವ ಸೂಕ್ಷ್ಮ ಸಂಬಂಧಗಳು ಇಲ್ಲಿ ಕಾಣಿಸುತ್ತವೆ. ಕಥೆಗಳೊಳಗೆ ಕಥೆ ಹೆಣೆಯುವ ಭೈರಪ್ಪನವರ ತಂತ್ರ – ಮಾದರಿಯನ್ನು ‘ಅವಸಾನ’ ಅನುಸರಿಸಿದರೆ, ಉಳಿದೆರಡು ನೇರವಾಗಿ ಕಥಾನಾಯಕಿಯ ಸುತ್ತ ಕಥೆ ಅರಳುವ ತಂತ್ರವನ್ನು ಬಳಸುತ್ತವೆ. ಈ ಮೂರೂ ಕಥೆಗಳನ್ನು ಜೊತೆಜೊತೆಯಲ್ಲಿ ಅಥವಾ ಒಂದಾದ ಮೇಲೆ ಒಂದರಂತೆ ಓದುವ ಅನುಭವ ವಿಶಿಷ್ಟವೆನಿಸುತ್ತದೆ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಲೇಖಕಿ ನೂತನ ದೋಶೆಟ್ಟಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada