ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಲೇಖಕಿ ಸುಮಾ ಸುಧಾಕಿರಣ
‘ತನ್ನ ವಂಶವಾಹಿ ಮುಂದುವರೆಯಬೇಕೆಂಬ ಆಸೆ ಪ್ರತಿಯೊಂದು ಜೀವಿಯಲ್ಲೂ ಇರುತ್ತದೆ. ಇದನ್ನು ಸಾಧಿಸಲು ಸಸ್ಯಗಳಲ್ಲಿ ಬೆಳವಣಿಗೆ ಹೊಂದಿದ ಭ್ರಾತೃದ್ವೇಷ, ವೆಜೈನಲ್ ಸೀಲಿಂಗ್ನಂತಹ ಗುಣಗಳ ಬಗ್ಗೆ ಗಣೇಶಯ್ಯ ಮತ್ತವರ ಗೆಳೆಯರು ನಡೆಸಿದ ಪ್ರಯೋಗಗಳು, ಅರಳಿ ಮತ್ತು ಕೊಣಜಗಳ ಸಹಜೀವನ, ಇರುವೆ, ಟೈಗರ್ ಬೀಟಲ್ಗಳ ಬಗ್ಗೆ ಅಧ್ಯಯನ, ಮೊದಲಾದವುಗಳ ವಿವರಣೆಯು ವಿಜ್ಞಾನ ಗೊತ್ತಿಲ್ಲದವರನ್ನೂ ಸೆಳೆಯುವಂತಿದೆ.’ ಸುಮಾ ಸುಧಾಕಿರಣ.
ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ.
ಕೃ: ಸಸ್ಯಸಗ್ಗ ಲೇ: ಕೆ.ಎನ್. ಗಣೇಶಯ್ಯ ಪ್ರ: ಅಂಕಿತ ಪುಸ್ತಕ
ಸಸ್ಯವಿಜ್ಞಾನಿ ಗಣೇಶಯ್ಯನವರು ಬರೆದ ಸಸ್ಯಸಗ್ಗ ವಿಜ್ಞಾನಲೋಕದ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ಸ್ವಾರಸ್ಯಕರವಾಗಿ ತಿಳಿಸುವ ಕಾದಂಬರಿ. ಆಹಾರವಾಗಿ, ಗಾಳಿಯಾಗಿ ನಾವು ಬದುಕಲು ಅತೀಮುಖ್ಯ ಕಾರಣವಾಗಿರುವ ಸಸ್ಯಲೋಕದ ಬಗ್ಗೆ ನಮಗೆ ತಿಳಿದಿರುವ ಮಾಹಿತಿಗಳು ಅತ್ಯಲ್ಪವೆಂದೇ ಹೇಳಬೇಕು. ನಮ್ಮ ಸಹಜೀವಿಗಳಾಗಿ ಜೊತೆಜೊತೆಗೇ ಬದುಕುತ್ತಿದ್ದರೂ ಅವುಗಳನ್ನು ಗಮನಿಸುವ ಗೋಜಿಗೇ ಹೋಗುವುದಿಲ್ಲ. ಈ ಪುಸ್ತಕವನ್ನು ಓದಿದಾಗ ಅಂತಹ ಸಸ್ಯಗಳ ಲೋಕದಲ್ಲಿ ನಡೆವ ಚಿತ್ರವಿಚಿತ್ರ ಸಂಗತಿಗಳು ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತವೆ.
ತನ್ನ ವಂಶವಾಹಿ ಮುಂದುವರೆಯಬೇಕೆಂಬ ಆಸೆ ಪ್ರತಿಯೊಂದು ಜೀವಿಯಲ್ಲೂ ಇರುತ್ತದೆ. ಇದನ್ನು ಸಾಧಿಸಲು ಸಸ್ಯಗಳಲ್ಲಿ ಬೆಳವಣಿಗೆ ಹೊಂದಿದ ಭ್ರಾತೃದ್ವೇಷ, ವೆಜೈನಲ್ ಸೀಲಿಂಗ್ನಂತಹ ಗುಣಗಳ ಬಗ್ಗೆ ಗಣೇಶಯ್ಯ ಮತ್ತವರ ಗೆಳೆಯರು ನಡೆಸಿದ ಪ್ರಯೋಗಗಳು, ಅರಳಿ ಮತ್ತು ಕೊಣಜಗಳ ಸಹಜೀವನ, ಇರುವೆ, ಟೈಗರ್ ಬೀಟಲ್ಗಳ ಬಗ್ಗೆ ಅಧ್ಯಯನ, ಮೊದಲಾದವುಗಳ ವಿವರಣೆಯು ವಿಜ್ಞಾನ ಗೊತ್ತಿಲ್ಲದವರನ್ನೂ ಸೆಳೆಯುವಂತಿದೆ. ಗಣೇಶಯ್ಯನವರ ಆಕರ್ಷಕ ಶೈಲಿ ಕ್ಲಿಷ್ಟ ಮಾಹಿತಿಗಳನ್ನೂ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಕರಿಸುತ್ತದೆ.
ಅವರ ಸಂಗಾತಿ ವೀಣಾ ನಡೆಸಿದ ಪ್ರಯೋಗಗಳ ಬಗ್ಗೆ ವಿವರಣೆ, ಒಬ್ಬರಿಗೊಬ್ಬರು ಪೂರಕವಾಗಿ ಮಾಡುತ್ತಿದ್ದ ಅಧ್ಯಯನ, ಪ್ರಯೋಗಗಳು ಆದರ್ಶ ದಾಂಪತ್ಯದ ಬಗ್ಗೆ ಬಹಳಷ್ಟು ಹೇಳುತ್ತವೆ. ಇದೆಲ್ಲದರ ಜೊತೆಗೆ ಸೆಳೆವ ಅಂಶ ಪುಟಪುಟಗಳಲ್ಲಿ ತುಂಬಿರುವ ಸಕಾರಾತ್ಮಕ ಭಾವನೆ. ವೈಜ್ಞಾನಿಕ ಲೋಕದಲ್ಲಿಯೂ ಇರುವ ಕಾಲೆಳೆಯುವಿಕೆ, ತೊಡರುಗಾಲು ಹಾಕುವ ಮನೋಭಾವ ಎಲ್ಲದರ ಜೊತೆಗೇ ಏಗುತ್ತಾ ಪ್ರಕೃತಿಯ ಅಗಾಧತೆಯನ್ನು ಅನ್ವೇಷಿಸುವ ಅವರ ಮತ್ತು ಅವರ ಸಹಪಾಠಿಗಳ ಖುಷಿ ಓದುವಾಗ ನಮ್ಮಲ್ಲೂ ತುಂಬುತ್ತದೆ.
ಕೃ: ಅಸುರಗುರು ಶುಕ್ರಾಚಾರ್ಯ ಲೇ: ಶ್ರೀಧರ ಡಿ. ಎಸ್. ಪ್ರ: ಸಾಹಿತ್ಯ ಭಂಡಾರ
ಯಕ್ಷಗಾನ, ನಾಟಕಗಳಲ್ಲಿ ಶುಕ್ರಾಚಾರ್ಯನೆಂದರೆ ರಾಕ್ಷಸರ ಕುಲಗುರು, ಅವರ ದುಷ್ಕ್ರತ್ಯಗಳಿಗೆ ಬೆಂಬಲವಾಗಿ ನಿಲ್ಲುವವ, ಕೆಟ್ಟ ಸಿಟ್ಟಿನ ಛಲಗಾರ ಎಂದೇ ಪ್ರಸಿದ್ಧಿ. ಹೀಗಾಗಿ ಆ ಪಾತ್ರ ಎಂದೂ ಆಕರ್ಷಕ ಅನ್ನಿಸುತ್ತಿರಲಿಲ್ಲ. ಆ ವ್ಯಕ್ತಿತ್ವ ಗೌರವ ಹುಟ್ಟಿಸುತ್ತಿರಲಿಲ್ಲ. ಆದರೆ ಡಿ. ಎಸ್. ಶ್ರೀಧರ ಅವರು ಬರೆದ ಅಸುರಗುರು ಶುಕ್ರಾಚಾರ್ಯ ಓದಿದ ನಂತರ ಈ ಅಭಿಪ್ರಾಯ ಬದಲಾಯಿತು. ಪ್ರಚಲಿತದಲ್ಲಿರುವ ಪೌರಾಣಿಕ ಕಥೆಗಳಿಗೆ ಯಾವುದೇ ಅಪಚಾರವಾಗದಂತೆ ಶುಕ್ರಾಚಾರ್ಯರ ವ್ಯಕ್ತಿತ್ವಕ್ಕೆ ಒಂದು ಘನತೆಯನ್ನು ಕೊಡುವಲ್ಲಿ ಶ್ರೀಧರರು ಯಶಸ್ವಿಯಾಗುತ್ತಾರೆ. ಅರ್ಹತೆಯಲ್ಲಿ ಅತ್ಯುನ್ನತ ಮಟ್ಟದಲ್ಲಿದ್ದರೂ ಸಂಸ್ಕಾರಹೀನರಾದ ಅಸುರರಿಗೆ ಗುರುವಾಗಬೇಕಾದಂತಹ ಸವಾಲನ್ನು ಸ್ವೀಕರಿಸಿ, ಅವರನ್ನು ಉದ್ಧರಿಸಲು ಪ್ರಯತ್ನಿಸುವ ಶುಕ್ರಾಚಾರ್ಯ ಇಷ್ಟವಾಗುತ್ತಾರೆ.
ಪ್ರಪಂಚವನ್ನು ಹಿಡಿತದಲ್ಲಿಟ್ಟುಕೊಳ್ಳುವ ಹಂಬಲದಿಂದ ನಡೆವ ಸುರಾಸುರ ಲೋಕದ ಕಿತ್ತಾಟ,ರಾಜಕೀಯ, ದೇವಗುರು ಅಸುರಗುರುಗಳ ನಡುವಿನ ಮೇಲಾಟ ಎಲ್ಲವೂ ಚೆನ್ನಾಗಿ ಚಿತ್ರಿತವಾಗಿದೆ. ಶಿಷ್ಯರಲ್ಲಿ ದುಷ್ಟತನ ಕಂಡಾಗ ಕಠಿಣ ಮನದಿಂದ ಶಿಕ್ಷಿಸುವ ಆಚಾರ್ಯ ತನ್ನ ವೈರಿ ದೇವಗುರುವಿನ ಮಗನೇ ವಿದ್ಯೆಯನ್ನರಸಿ ಬಂದಾಗ ತನ್ನ ವಿದ್ಯೆಯನ್ನು ಧಾರೆಯೆರೆಯುವುದು, ಪ್ರೀತಿಪಾತ್ರ ಮಗಳು ಅವನ ವಿರುದ್ಧ ಆರೋಪಿಸಿದರೂ ನಿಷ್ಪಕ್ಷಪಾತದಿಂದ ಅವನ ತಪ್ಪಿಲ್ಲವೆಂದು ನಿರ್ಧರಿಸುವುದು ಶುಕ್ರಾಚಾರ್ಯನ ಒಳ್ಳೆಯತನಕ್ಕೆ ಸಾಕ್ಷಿಯಾಗುತ್ತದೆ. ಹೊರಲೋಕಕ್ಕೆ ಗೌರವಮಿಶ್ರಿತ ಭಯ ಹುಟ್ಟಿಸುವ ಶುಕ್ರಾಚಾರ್ಯ ತಾಯಿ ಇಲ್ಲದ ಮಗಳನ್ನು ಸಲಹುವಲ್ಲಿ, ಅವಳಿಗೆ ಬೇಕಾದ್ದನ್ನು ಒದಗಿಸುವಲ್ಲಿ ಅತ್ಯಂತ ಮೃದುಮನಸ್ಸಿನ ಅಪ್ಪನಾಗುತ್ತಾನೆ.
ಅಲ್ಲಲ್ಲಿ ಶುಕ್ರಾಚಾರ್ಯರ ಬಗ್ಗೆ ಸಿಗುವ ತುಣುಕುಚಿತ್ರಗಳನ್ನು ಸರಿಯಾದ ಹಂದರವನ್ನೊದಗಿಸಿ ಜೋಡಿಸಿ ರಚಿಸಿದ ಕತೆ. ಜನರ ನಂಬಿಕೆಗೆ ಯಾವುದೇ ಅಪಚಾರವಾಗದಂತಹ ಪಾತ್ರಚಿತ್ರಣ, ವಿದ್ವತ್ಪೂರ್ಣವಾಗಿದ್ದರೂ ಸುಲಲಿತವಾಗಿ ಓದಿಸಿಕೊಳ್ಳುವ ಭಾಷೆ, ಅಸುರಗುರು ಶುಕ್ರಾಚಾರ್ಯ ಕಾದಂಬರಿಯನ್ನು ನಾನು ಇಷ್ಟಪಡಲು ಕಾರಣಗಳು.
Published On - 3:29 pm, Thu, 31 December 20