ನಮ್ಮ ಮೇಲಿನ ವಿಶ್ವಾಸವೇ ನಮ್ಮನ್ನು ಕಾಪಾಡುತ್ತದೆ: ಹೆಸರಾಂತ ಉದ್ಯಮಿ ರತನ್ ಟಾಟಾ ಹಿತವಚನ
ಭಾರತ ಆಟೊ ಮೊಬೈಲ್ ಕ್ಷೇತ್ರದಲ್ಲಿ ಸ್ವಂತ ಕಾಲ ಮೇಲೆ ನಿಲ್ಲಲು ಟಾಟಾ ಸಂಸ್ಥೆಯ ಕೊಡುಗೆ ಅಪಾರ. 2021ರಲ್ಲಿ ಜೀವನದ ಗುರಿ ಸಾಧನೆಗೆ 82ರ ಹರೆಯದ ರತನ್ ಟಾಟಾರ ಈ ಮಾತುಗಳು ನಮಗೆ ಪ್ರೇರಣೆ ನೀಡಬಲ್ಲದು.
‘ಭಾರತದಲ್ಲೇ ಕಾರುಗಳನ್ನು ಉತ್ಪಾದಿಸಬೇಕೆಂಬ ಇಚ್ಛೆಯಿತ್ತು. ಅದನ್ನು ನೆರವೇರಿಸಲೆಂದೇ ಇಂಡಿಕಾ ಕಾರನ್ನು ತಯಾರಿಸಿದೆವು. ಇಂಡಿಕಾ ಕಾರಿನ ಉತ್ಪಾದನೆಯ ಹಂತದಲ್ಲಿ ನನ್ನ ಆಪ್ತರೇ ನನ್ನನ್ನು ದೂರವಿಟ್ಟರು. ಆದರೆ ಭಾರತದ ಕಾರು ಮಾರುಕಟ್ಟೆಯ ಶೇ.20 ಪಾಲು ಇಂಡಿಕಾದ ಪಾಲಾಯಿತು. ಸರಿಯಾದ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ, ಕೈಗೊಂಡ ನಿರ್ಧಾರವನ್ನು ಸರಿಯೆಂದು ಸಾಬೀತುಪಡಿಸಬೇಕು. ಅದರಲ್ಲೇ ನನಗೆ ದೃಢ ನಂಬಿಕೆಯಿದೆ. ನಮ್ಮ ಮೇಲಿನ ನಂಬಿಕೆಯನ್ನು ಇದು ಹೆಚ್ಚಿಸುತ್ತದೆ’ ಎಂದು ತಮ್ಮ ಅನುಭವದ ಕಣಜದಿಂದ ದೇಶದ ಯುವ ಜನತೆಗೆ ಪಾಠ ಹೇಳುತ್ತಾರೆ ರತನ್ ಟಾಟಾ.
ಭಾರತ ಆಟೋ ಮೊಬೈಲ್ ಕ್ಷೇತ್ರದಲ್ಲಿ ಸ್ವಂತಿಕೆ ಕಂಡುಕೊಳ್ಳಲು ರತನ್ ಟಾಟಾರ ಕೊಡುಗೆ ಅಗಾಧ. ಒಂದು ಕಾಲದಲ್ಲಿ ದೇಶೀಯ ಕಂಪನಿಯೊಂದು ವಾಹನಗಳನ್ನು ಉತ್ಪಾದಿಸುವುದು ಭಾರತದ ಮಟ್ಟಿಗೆ ಕನಸೇ ಆಗಿತ್ತು. ಆ ಕನಸನ್ನು ನನಸು ಮಾಡಿದ್ದು ಟಾಟಾ ಸಂಸ್ಥೆ.
ಭಾರತದ ಉದ್ಯಮ ಕ್ಷೇತ್ರದ ದೈತ್ಯ, ಇಂದಿಗೂ ಉದ್ಯಮದಲ್ಲಿ ನೈತಿಕತೆಯನ್ನು ಪಾಲಿಸುವ 82ರ ಹಿರಿಯಜ್ಜನಿಗೆ ತಮ್ಮ ನಿರ್ಧಾರಗಳ ಮೇಲೆ ದೃಢ ವಿಶ್ವಾಸ. ದೇಶದ ಯುವ ತಲೆಮಾರಿಗೆ ಪ್ರೀತಿಯಿಂದ ಪಾಠ ಹೇಳುವ ಉದ್ಯಮ ಜಗತ್ತಿನ ಮೇರು ವ್ಯಕ್ತಿತ್ವದ ರತನ್ ಟಾಟಾ.
ನಾನು ದೇಶದಲ್ಲೇ ಕಾರುಗಳನ್ನು ಉತ್ಪಾದಿಸುವೆ ಎಂದು ನಿರ್ಧರಿಸಿದಾಗ ವಿದೇಶದಲ್ಲಿನ ನನ್ನ ಗೆಳೆಯರು ‘ಅದು ಸಾಧ್ಯವೇ ಇಲ್ಲ’ ಎಂದರು. ಇತರರ ಅಭಿಪ್ರಾಯಕ್ಕಿಂತ ನಮ್ಮ ಮೇಲಿನ ವಿಶ್ವಾಸವೇ ನಮ್ಮನ್ನು ಕಾಪಾಡುತ್ತದೆ. ಸಮಂಜಸ ಎಂದು ಇತರರು ಹೇಳಬಹುದಾದ ನಿರ್ಧಾರ ಕೈಗೊಳ್ಳುವುದಕ್ಕಿಂತ, ನಮ್ಮ ನಿರ್ಧಾರ ಸರಿ ಇರುವಂತೆ ಕೆಲಸ ಮಾಡಿ ಸಾಧಿಸಬೇಕು ಎಂದು ಅವರು ಯುವ ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ. 2021ರಲ್ಲಿ ದೇಶದ ಎಲ್ಲ ಯುವ ಉತ್ಸಾಹಿಗಳಿಗೆ ಅವರ ಮಾರ್ಗದರ್ಶನ ಪ್ರೇರಣಾದಾಯಕವಾಗಿದೆ.
Published On - 1:08 pm, Thu, 31 December 20