ಯತ್ನಾಳ್​ ಒಬ್ಬ ಗೋಮುಖ ವ್ಯಾಘ್ರ, ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ: ರೇಣುಕಾಚಾರ್ಯ ವಾಗ್ದಾಳಿ

ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಯತ್ನಾಳ್ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ. ಯತ್ನಾಳ್ ಅವರ ನಡವಳಿಕೆಯನ್ನು ಗೋಮುಖ ವ್ಯಾಘ್ರ ಎಂದು ವಾಗ್ದಾಳಿ ಮಾಡಿದ್ದಾರೆ.

ಯತ್ನಾಳ್​ ಒಬ್ಬ ಗೋಮುಖ ವ್ಯಾಘ್ರ, ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ: ರೇಣುಕಾಚಾರ್ಯ ವಾಗ್ದಾಳಿ
ಯತ್ನಾಳ್​ ಒಬ್ಬ ಗೋಮುಖ ವ್ಯಾಘ್ರ, ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ: ರೇಣುಕಾಚಾರ್ಯ ವಾಗ್ದಾಳಿ
Follow us
Sunil MH
| Updated By: ಗಂಗಾಧರ​ ಬ. ಸಾಬೋಜಿ

Updated on: Jan 19, 2025 | 7:58 PM

ಬೆಂಗಳೂರು, ಜನವರಿ 19: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಒಬ್ಬ ಗೋಮುಖ ವ್ಯಾಘ್ರ. ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಯತ್ನಾಳ್​ರನ್ನ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿತ್ತು. ಬಳಿಕ ಜೆಡಿಎಸ್​ಗೆ ಹೋಗಿದ್ದರು. ಯಡಿಯೂರಪ್ಪನವರ ಕಾಲು ಹಿಡಿದು ಮತ್ತೆ ಬಿಜೆಪಿಗೆ ಸೇರಿಕೊಂಡಿದ್ದರು. ಈಗ ಅವರ ಬಗ್ಗೆ ಮಾತಾಡಲು ಯಾವ ನೈತಿಕತೆಯಿದೆ ಎಂದು ಕಿಡಿಕಾರಿದ್ದಾರೆ.

ರಾಷ್ಟ್ರೀಯ ನಾಯಕರ ಆಶೀರ್ವಾದ, ರಾಜ್ಯ ನಾಯಕರ ಸಹಕಾರದಿಂದ ಸೈಕಲ್, ಬಸ್​ನಲ್ಲಿ ಓಡಾಡಿ ಬಿಎಸ್​ಯಡಿಯೂರಪ್ಪ ಪಕ್ಷ ಸಂಘಟನೆ ಮಾಡಿದ್ದಾರೆ. ಯಡಿಯೂರಪ್ಪ ರಾಜಕಾರಣಕ್ಕೆ ಬಂದಾಗ ನೀನು ಕಣ್ಣು ಬಿಟ್ಟಿದ್ದೇನಪ್ಪ? ಬಿಎಸ್​ವೈರಂತೆ ವಿಜಯೇಂದ್ರ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿಲ್ವಾ? ಉಪ ಚುನಾವಣೆಯಲ್ಲಿ ವಿಜಯೇಂದ್ರ ಸಾಮರ್ಥ್ಯ ತೋರಿಸಿಲ್ವಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅತಿರೇಕ್ಕೇರಿದ ಬಿಜೆಪಿ ಬಣಬಡಿದಾಟ: ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ವಿಜಯೇಂದ್ರ

ಇನ್ನೂ 30 ವರ್ಷದ ಬಗ್ಗೆ ಯೋಚನೆ ಮಾಡಿ ಹೈಕಮಾಂಡ್ ವಿಜಯೇಂದ್ರಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 17 ಕ್ಷೇತ್ರಗಳಲ್ಲಿ ಗೆದ್ದೆವು. ಮುಡಾ ಹಗರಣ ಬೆಳಕಿಗೆ ತಂದಿದ್ದು ವಿಜಯೇಂದ್ರ. ನೀವು ಏನ್ ಬೇಕಾದರೂ ಮಾಡಿ ವಿಜಯೇಂದ್ರ ವರ್ಚಸ್ಸು ಕುಗ್ಗುವುದಿಲ್ಲ. ಬಿಎಸ್ ಯಡಿಯೂರಪ್ಪ ಅನೇಕ ಬಾರಿ ಜೈಲಿಗೆ ಹೋಗಿದರೂ ಹೋರಾಟ ಮಾಡಿದ್ದರು. ಅವರ ಹೋರಾಟದ ಫಲವಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಎಂದು ಹೇಳಿದ್ದಾರೆ.

ಇನ್ನು ಯತ್ನಾಳ್ ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಹೋದಲ್ಲಿ ಬಂದಲ್ಲಿ ಮಾತಾಡುತ್ತಿದ್ದಾರೆ. ಕೆಲವರು ಮಗು ಚಿವುಟಿ ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದಾರೆ. ಇಲ್ಲೇ ಇರುವ ಕೆಲವರು ಯತ್ನಾಳ್​ರನ್ನು ಎತ್ತಿಕಟ್ಟುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಬಿಜೆಪಿಗೆ ಬರದಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದರೆ ? ಯತ್ನಾಳ್

ಶಾಸಕ ಬಸನಗೌಡ ಯತ್ನಾಳ್​​ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಶನಿವಾರ ಸಭೆ ಕರೆಯುತ್ತೇವೆ, ಹೈಕಮಾಂಡ್​ ಭೇಟಿಯಾಗುತ್ತೇವೆ. ಮಾತಾಡುವುದನ್ನ ಕಲಿಯಿರಿ, ತಂದೆ-ತಾಯಿ ಇಲ್ವಾ ನಿಮಗೆ ಅನಗತ್ಯವಾಗಿ ಟೀಕೆ‌ಯನ್ನ ಮಾಡುತ್ತಿದ್ದಾರೆ, ಇದನ್ನ ಸಹಿಸಲ್ಲ. ಉತ್ತರ ಕರ್ನಾಟಕದ ಹುಲಿ‌ ಎಂದು ಅಭಿವೃದ್ಧಿ ಮಾಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಯತ್ನಾಳ್​ ನಿಮ್ಮ ಹಿಂದೆ ಯಾರಿದ್ದಾರೆ

ಶಾಸಕ ಯತ್ನಾಳ್ ಮೂರು ಮುಖವಾಡ ಹಾಕಿಕೊಂಡಿದ್ದಾರೆ. ಅವರ ಸ್ವಾರ್ಥಕ್ಕಾಗಿ ಅವರ ಮೂರು ಮುಖವಾಡ ಕಳಚಿದೆ. ಪಕ್ಷದ ಹೈಕಮಾಂಡ್​ ನಾಯಕರು ನಿಮ್ಮನ್ನ ಒಪ್ಪಿಕೊಳ್ತಾರಾ? ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ, ಸಂತೋಷ್ ಅವರು ವಿಜಯೇಂದ್ರ‌ರನ್ನ ಅಧ್ಯಕ್ಷರಾಗಿ ಮಾಡಿದ್ದಾರೆ. ಏಕವಚನದಲ್ಲಿ ವಿಜಯೇಂದ್ರ‌ ಬಚ್ಚಾ ಎಂದು ಹೇಳುತ್ತೀರಲ್ಲಾ ಯತ್ನಾಳ್​ ನಿಮ್ಮ ಹಿಂದೆ ಯಾರಿದ್ದಾರೆ, ಅವರ ಹೆಸರು ಹೇಳಿ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.