ಅಪ್ಪು ಅಭಿಮಾನಿ ಕಥೆ ಇರುವ ‘ಪುನೀತ್ ನಿವಾಸ’ ಸಿನಿಮಾಗೆ ಅಶ್ವಿನಿ ಹಾರೈಕೆ
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರು ಅನೇಕರಿಗೆ ಸ್ಫೂರ್ತಿ. ಅವರ ಆದರ್ಶಗಳನ್ನೇ ಇಟ್ಟುಕೊಂಡು ಹೊಸ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರದ ಹೆಸರು ‘ಪುನೀತ್ ನಿವಾಸ’. ಈ ಸಿನಿಮಾಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ವಿಶ್ ಮಾಡಿದ್ದಾರೆ. ಪಾತ್ರವರ್ಗ, ತಂತ್ರಜ್ಞರು ಹಾಗೂ ಶೂಟಿಂಗ್ ಪ್ಲ್ಯಾನ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.
ನಟ ಪುನೀತ್ ರಾಜ್ಕುಮಾರ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಅವರ ನೆನಪು ಶಾಶ್ವತ. ಕನ್ನಡ ಚಿತ್ರರಂಗ ಎಂದೂ ಮರೆಯದ ಹೆಸರು ಅವರದ್ದು. ಪುನೀತ್ ರಾಜ್ಕುಮಾರ್ ಅವರ ಆದರ್ಶಗಳನ್ನು ನೆನಪಿಸುವ ಒಂದಷ್ಟು ಸಿನಿಮಾಗಳು ಬರುತ್ತಿವೆ. ಈಗ ಹೊಸದೊಂದು ಟೀಮ್ ಕೂಡ ಅದೇ ಹಾದಿಯಲ್ಲಿದೆ. ಹೊಸ ಸಿನಿಮಾಗೆ ‘ಪುನೀತ್ ನಿವಾಸ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರತಂಡಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಅವರು ಶುಭ ಹಾರೈಸಿದ್ದಾರೆ. ಮೋಹನ್ ಎಸ್. ಅವರು ‘ಪಂಚಮಿ ಸಿನಿ ಕ್ರಿಯೇಶನ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
ಹಿರಿಯ ನಿರ್ದೇಶಕರ ಜೊತೆ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ನಾಗೇಂದ್ರ ಪ್ರಸಾದ್ ಅವರು ‘ಪುನೀತ್ ನಿವಾಸ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡ ಅವರೇ ಬರೆದಿದ್ದಾರೆ. ತ್ಯಾಗರಾಜ ನಗರದ ಗಂಗಮ್ಮ ದೇವಸ್ಥಾನದಲ್ಲಿ ಇತ್ತೀಚೆಗೆ ಈ ಸಿನಿಮಾಗೆ ಮುಹೂರ್ತ ಸಮಾರಂಭ ನೆರವೇರಿತು. ಗಂಗಮ್ಮ ತಾಯಿಯ ಮೇಲೆ ಮೊದಲ ದೃಶ್ಯ ಚಿತ್ರೀಕರಿಸಲಾಯಿತು.
ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಫ್ಯಾನ್ ಆಗಿರುವ ಮಲ್ಲು ಎಂಬ ಹುಡುಗನ ಕಥೆ ಈ ಸಿನಿಮಾದಲ್ಲಿ ಇರಲಿದೆ. ತಾನು ಒಂದು ಸಿನಿಮಾ ಮಾಡಬೇಕು ಎಂದು ಕೂಡಿಟ್ಟುಕೊಂಡಿದ್ದ ದುಡ್ಡಿನಿಂದ ಬಡ ಹುಡುಗಿಗೆ ಮನೆ ಕಟ್ಟಿಸಿಕೊಟ್ಟು, ಅದಕ್ಕೆ ‘ಪುನೀತ್ ನಿವಾಸ’ ಎಂದು ಹೆಸರಿಡುವ ಮೂಲಕ ಅಪ್ಪು ಅವರ ಆದರ್ಶಗಳನ್ನು ಪಾಲಿಸುತ್ತಾನೆ ಎನ್ನುವುದೇ ಈ ಸಿನಿಮಾದ ಕಥಾ ಸಾರಾಂಶ ಎಂದು ಚಿತ್ರತಂಡ ಹೇಳಿದೆ.
ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಅಭಿಜಿತ್ ನಟಿಸುತ್ತಿದ್ದಾರೆ. ‘ನಾನು ಪುನೀತ್ ಅವರ ಜತೆ ನಟನೆ ಮಾಡಬೇಕಿತ್ತು. ಅವಕಾಶ ಕೂಡ ಸಿಕ್ಕಿತ್ತು. ಆದರೆ ಸಾಧ್ಯವಾಗಲಿಲ್ಲ. ಮೋಹನ್ ಅವರು ಈ ಶೀರ್ಷಿಕೆ ಹೇಳಿದಾಗ ರೋಮಾಂಚನ ಆಯಿತು. ಮರು ಮಾತನಾಡದೇ ಒಪ್ಪಿಕೊಂಡೆ’ ಎಂದು ಅವರು ಹೇಳಿದ್ದಾರೆ. ಬೆಂಗಳೂರು ಸುತ್ತಮುತ್ತವೇ ಚಿತ್ರೀಕರಣ ಮಾಡುವ ಪ್ಲ್ಯಾನ್ ಇದೆ. ಕೃಪಾಕರ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿಬರುತ್ತಿವೆ ಎಂದು ನಿರ್ದೇಶಕ ನಾಗೇಂದ್ರ ಪ್ರಸಾದ್ ಮಾಹಿತಿ ನೀಡಿದರು.
ಇದನ್ನೂ ಓದಿ: ಕೋಲ್ಕತ್ತಾದಲ್ಲೂ ಪುನೀತ್ನ ಮುತ್ತಿಕೊಂಡಿದ್ದ ಫ್ಯಾನ್ಸ್; ಇಲ್ಲಿದೆ ಅಪರೂಪದ ಸಂಗತಿ
ಮಾಸ್ಟರ್ ವಿಠ್ಠಲ್, ಅಭಿಜಿತ್, ಡಿಂಗ್ರಿ ನಾಗರಾಜ್, ಎಂ.ಎಸ್. ಉಮೇಶ್, ಟೆನ್ನಿಸ್ ಕೃಷ್ಣ, ರೇಖಾ ದಾಸ್, ಲಕ್ಷ್ಮಿ ಭಟ್, ಗಣೇಶ್ ರಾವ್ ಕೇಸರಕರ್, ನಾಗೇಂದ್ರ ಪ್ರಸಾದ್, ಶಂಕರ ಭಟ್, ಶ್ರೀದರ್ಶನ್ ಮುಂತಾದವರು ನಟಿಸುತ್ತಿದ್ದಾರೆ. ಬಾಲು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಜೆಮ್ ಶಿವು ಅವರ ಸಂಭಾಷಣೆ, ಮುತ್ತುರಾಜ್ ಅವರ ಸಂಕಲನ ಈ ಸಿನಿಮಾಗೆ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.