ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಲೇಖಕಿ ನೂತನ ದೋಶೆಟ್ಟಿ

’ಕಥೆ, ಕಾವ್ಯದಲ್ಲಿ ಮುಳುಗೇಳುತ್ತ, ಆ ಪ್ರಕಾರವೇ ಸಾಹಿತ್ಯ ಎಂದು ಗುಂಪುಗಾರಿಕೆ ನಡೆಸುತ್ತ, ಪುಸ್ತಕ ಬಿಡುಗಡೆಗೆ ಮೊದಲು ಅಬ್ಬರದ ಪ್ರಚಾರ, ಬಿಡುಗಡೆಯ ನಂತರ ಪ್ರಶಸ್ತಿ, ಟಾಪ್ ಟೆನ್ ಗಳಿಗಾಗಿ ಲಾಬಿ ನಡೆಸುವ ಪುಸ್ತಕಗಳೆದುರು ಇಂಥ ಪುಸ್ತಕಗಳು ಸದ್ದೇ ಮಾಡುವುದಿಲ್ಲ. ಇತಿಹಾಸವೆಂದರೆ ಮೂಗು ಮುರಿಯುವವರೆಲ್ಲರೂ ಹಾಗೂ ಕುತೂಹಲಕ್ಕಾದರೂ ಎಲ್ಲರೂ ಓದಬೇಕಾದ ಪುಸ್ತಕ ಇದು.‘ ನೂತನ ದೋಶೆಟ್ಟಿ.

ವರ್ಷಾಂತ್ಯ ವಿಶೇಷ 2020: 'ಓದಿನಂಗಳ‘ದಲ್ಲಿ ಲೇಖಕಿ ನೂತನ ದೋಶೆಟ್ಟಿ
ಲೇಖಕಿ ನೂತನ ದೋಶೆಟ್ಟಿ
Follow us
TV9 Web
| Updated By: ganapathi bhat

Updated on:Apr 06, 2022 | 11:07 PM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಲೇಖಕಿ ನೂತನ ದೋಶೆಟ್ಟಿ ಅವರ ಆಯ್ಕೆಗಳು ಇಲ್ಲಿವೆ.

ಕೃ: ಡಿಎನ್​ಎ ನುಡಿದ ಸತ್ಯ ಲೇ: ಲಕ್ಷ್ಮೀಪತಿ ಕೋಲಾರ, ಸುರೇಶ ಭಟ್ ಬಾಕ್ರಬೈಲು ಪ್ರ: ಓದು ಪ್ರಕಾಶನ

ಈ ಶೀರ್ಷಿಕೆಯ ಕೃತಿಯನ್ನು ಲಕ್ಷ್ಮೀಪತಿ ಕೋಲಾರ ಹಾಗೂ ಸುರೇಶ್ ಭಟ್ ಬಾಕ್ರಬೈಲು ಅವರು ಜೊತೆಯಾಗಿ ಹೊರತಂದಿದ್ದಾರೆ. ಸಾಗರ ತಾಲೂಕು ಕುಗ್ವೆಯ ಓದು ಪ್ರಕಾಶನ 2018ರಲ್ಲಿ ಇದರ ದ್ವಿತೀಯ ಆವೃತ್ತಿಯನ್ನು ತಂದಿದೆ. ಮೊದಲ ಮುದ್ರಣದ ಎಲ್ಲ ಪ್ರತಿಗಳೂ ಎರಡೇ ದಿನಗಳಲ್ಲಿ ಖಾಲಿಯಾಗಿದ್ದು ಈ ಕೃತಿಯ ಮಹತ್ವವನ್ನು ಹೇಳುತ್ತದೆ. 78 ಪುಟಗಳ ಈ ಕೃತಿಯಲ್ಲಿ ಇರುವ ಎರಡು ಲೇಖನಗಳಲ್ಲಿ ಅತ್ಯಂತ ಕುತೂಹಲಕಾರಿಯಾದ ಸಂಶೋಧನೆಗಳ ಮಾಹಿತಿ ಇದೆ.

ವಸುದೈವ ಕುಟುಂಬಕಂ ಎಂಬ ಮಾತು ಬಂದದ್ದಾದರೂ ಹೇಗೆ ಎಂಬ ನನ್ನ ಕುತೂಹಲಕ್ಕೆ ಈ ಪುಸ್ತಕದಲ್ಲಿ ಉತ್ತರದ ಹೊಳಹು ಕಂಡಿತು. ಕೃತಿಯ ಮೊದಲ ಲೇಖನ ‘ರಾಖಿಗರಿ ಪಳೆಯುಳಿಕೆಯ ಡಿಎನ್ಎ ನುಡಿದ ಸತ್ಯವೇನು?’ ಆಧುನಿಕ ವಿಶ್ವದ ಮೊದಲ ನಾಗರಿಕತೆ ಎಂಬ ಖ್ಯಾತಿಯನ್ನು ಹೊಂದಿರುವ ಹರಪ್ಪ-ಮೊಹೆಂಜೋದಾರೋ ಸಂಸ್ಕೃತಿ ಭಾರತದ ಪ್ರಾಚೀನ ನಾಗರಿಕತೆಯೊಂದಿಗೆ ಸಂಬಂಧ ಹೊಂದಿದೆ ಎಂಬ ಅಂಶ ತಿಳಿದಿದ್ದರೂ ಇಲ್ಲಿಯ ಮೂಲ ನಿವಾಸಿಗಳ ಕುರಿತು ಎದ್ದ ಅನೇಕ ಪ್ರಶ್ನೆಗಳಿಗೆ ಇದುವರೆಗೆ ಉತ್ತರ ಸಿಕ್ಕಿರಲಿಲ್ಲ.

ಇತ್ತೀಚೆಗೆ ರಾಖಿಗರಿಯಲ್ಲಿ ಸಿಕ್ಕಿರುವ 4500 ವರ್ಷಗಳ ಹಿಂದಿನದೆಂದು ನಂಬಲಾಗಿರುವ ಅಸ್ತಿಪಂಜರ ಈ ಜನ ಯಾರು ಎಂಬುದಕ್ಕೆ ನಿಖರ ಉತ್ತರವನ್ನು ನೀಡಬಲ್ಲುದಾಗಿದೆ. ಇದಕ್ಕೆ ಕಾರಣ ಈ ಸಂಶೋಧನೆಗೆ ವಂಶವಾಹಿಗಳ ಕುರಿತಾದ ಜ್ಞಾನವನ್ನು ಬಳಸಲಾಗಿದೆ. ಈ ಸಂಶೋಧನೆಗಳಲ್ಲಿ ಸಿಂಧೂ ನಾಗರಿಕತೆಯ ಜನ ವಿಕಾಸಗೊಂಡಿರುವುದು ಇರಾನಿನ ಬೇಸಾಯಗಾರರು ಮತ್ತು ಪ್ರಾಚೀನ ಆದಿಯ ದಕ್ಷಿಣ ಭಾರತೀಯ ಕೂಡುವಿಕೆಯಿಂದ, ಆದಿಯ ಉತ್ತರ ಭಾರತೀಯ ಜನವರ್ಗದ ವಿಕಾಸ, ಆದಿಯ ಉತ್ತರ ಭಾರತೀಯ ಹಾಗೂ ಆದಿಯ ದಕ್ಷಿಣ ಭಾರತೀಯರ ಸಮ್ಮಿಶ್ರಣದ ಫಲವಾಗಿ ಬಹುತೇಕ ಜನವರ್ಗಗಳ ವಿಕಸನವಾಗಿರುವುದರ ಕುರಿತಾದ ಅತ್ಯಂತ ರೋಚಕ ವಿಷಯಗಳನ್ನು ಹೇಳುತ್ತ ಇದುವರೆಗೆ ಪ್ರಚಲಿತದಲ್ಲಿದ್ದ ಆರ್ಯ ಸಂಸ್ಕೃತಿಯ ಮೂಲ ಭಾರತ ಎಂಬ ವಾದವನ್ನು ಅಲ್ಲಗಳೆಯುತ್ತದೆ. ರಾಖಿಗರಿಯಲ್ಲಿ ನಡೆದಿರುವ ಸಂಶೋಧನೆ ಹರಪ್ಪ/ಸಿಂಧೂ ನಾಗರಿಕತೆಯ ಜನರು ಮತ್ತು ಇಂದು ಪಶ್ಚಿಮ ಘಟ್ಟಗಳ ದಕ್ಷಿಣ ತಮಿಳು ನಾಡಿನ ನೀಲಗಿರಿ ಅರಣ್ಯ ಬೆಟ್ಟದಲ್ಲಿ ನೆಲೆಸಿರುವ ಆದಿವಾಸಿ ಇರುಳರು ಮೂಲತಃ ಒಂದೇ ವಂಶದವರು ಎಂದು ಹೇಳುತ್ತದೆ. ಆಧುನಿಕ ಭಾರತೀಯ ಒಂದು ಮಿಶ್ರ ತಳಿಯಾಗಿದ್ದು ಅದರಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇರುವುದು ಹರಪ್ಪ ನಾಗರಿಕತೆಯ ಜನರು ಅಂದರೆ ಆದಿಯ ದಕ್ಷಿಣ ಭಾರತೀಯರ ವಂಶವಾಹಿಗಳು.

ವಲಸೆಯ ಬಗ್ಗೆ ನಡೆದ ಈ ಸಂಶೊಧನೆ ಹೇಳುವುದು ಹೀಗಿದೆ. ಆಧುನಿಕ ಲಕ್ಷಣಗಳಿರುವ ಮಾನವರು ಸುಮಾರು 70,0000 ವರ್ಷಗಳ ಹಿಂದೆ ಆಫ್ರಿಕಾದಿಂದ ವಲಸೆ ಹೊರಟು ವಿಶ್ವದ ಬೇರೆ ಬೇರೆ ಭಾಗಗಳಿಗೆ ಚದುರಿ ಹೋದರು. ಅದರಲ್ಲಿ ಒಂದು ಗುಂಪು ಸುಮಾರು ೫೦೦೦೦ ವರ್ಷಗಳ ಹಿಂದೆ ಭಾರತಕ್ಕೆ ಬಂದಿಳಿದಿದೆ. ಮತ್ತೊಂದು ದೊಡ್ಡ್ಡ ವಲಸೆ ೧೦೦೦೦ ವರ್ಷಗಳ ಹಿಂದೆ ಪಶ್ಚಿಮ ಏಷ್ಯಾದಿಂದ ಕೆಲವು ಗುಂಪು ಯುರೋಪ್ ಕಡೆಗೂ ಕೆಲವು ಇರಾನ್ ಮೂಲಕ ಭಾರತ ಹಾಗೂ ಇತರ ಭಾಗಗಳಲ್ಲೂ ನೆಲೆಸಿದವು. ವಸುಧೈವ ಕುಟುಂಬಕಂ ಮಾತಿಗೆ ಇಲ್ಲೇ ನನಗೆ ಹೊಳಹು ಕಂಡಿದ್ದು. ಈ ಲೇಖನದಲ್ಲಿ ಕೆಲವು ನಿಂದನೆಗಳಿವೆ. ಇತಿಹಾಸದಲ್ಲಿ ತಮ್ಮ ತಮ್ಮ ಮೇಲ್ಮೆಯನ್ನು ಸಾಧಿಸಿಕೊಳ್ಳಲು ಅನೇಕ ಪ್ರಯತ್ನಗಳು ನಡೆದೇ ಇವೆ. ಆದ್ದರಿಂದ ಇಲ್ಲಿರುವ ನಿಂದನೆಗಳನ್ನು ಬಿಟ್ಟು ಓದುಗರು ಮಾನವನ ಇತಿಹಾಸದ ಮೇಲೆ ಹೊಸ ನೋಟ ಬೀರುವ ಸಂಶೋಧನೆಗಳ ಮೇಲೆ ಕೇಂದ್ರೀಕರಿಸುವುದು ಒಳಿತು.

ಎರಡನೆಯ ಲೇಖನ ಲಕ್ಷ್ಮೀಪತಿಯವರದು. ಇದರ ಶೀರ್ಷಿಕೆ ‘ಸಂಸ್ಕೃತಿ ಇತಿಹಾಸದ ಮಹಾಮರೆವು (ರಾಖಿಗರಿ ಡಿ ಎನ್ ಎ ಫಲಿತಾಂಶದ ಜಾಡಿನಲ್ಲಿ)’ ಅವರು ಕಳೆದ 20-25 ವರ್ಷಗಳಿಂದ ಹತ್ತಾರು ಪುಸ್ತಕಗಳನ್ನು, ನೂರಾರು ಲೇಖನಗಳನ್ನು ಓದಿ ಸಂಗ್ರಹಿಸಿದ ಮಾಹಿತಿಯ ಫಲ ಇದು. 8 ವರ್ಷಗಳ ಹಿಂದೆ ನಾನು ಧೊಲವಿರಾಕ್ಕೆ ಹೋದಾಗ ಅಲ್ಲಿಯ ಗೈಡುಗಳು ಹೇಳಿದ್ದು ಒಬ್ಬ ಪ್ರಸಿದ್ಧ ಇತಿಹಾಸಜ್ಞರೊಬ್ಬರು ಕಳೆದ 20 ರ್ಷಗಳಿಂದ ಇಲ್ಲಿ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದು ಅದನ್ನು ಸರ್ಕಾರಕ್ಕೆ ಸಲ್ಲಿಸುತ್ತಿಲ್ಲ ಎಂದು. ಆಗ ನನಗೆ ಸಂಶಯವಾಗಿತ್ತು. ರಾಖಿಗರಿಯ ಸಂಶೋಧನೆಗಳ ಕುರಿತು ತಿಳಿದ ಮೇಲೆ ಆ ಸಂಶಯಕ್ಕೆ ಪುಷ್ಟಿ ಸಿಕ್ಕಿತು.

ಇಂದು ಭಾರತವೊಂದೇ ಅಲ್ಲ. ಇಡೀ ಜಗತ್ತೇ ಕಕೇಷಿಯನ್ ಜನಾಂಗವಾದಿಗಳ ವಸಾಹತಾಗಿ ಮಾರ್ಪಟ್ಟಿದೆ ಎಂಬ ಅಚ್ಚರಿ ಹುಟ್ಟಿಸುವ ಮಾಹಿತಿಯೊಂದಿಗೆ ಲೇಖನ ಪ್ರಾರಂಭವಾಗುತ್ತದೆ. ಆಫ್ರಿಕನ್ ಮೂಲದ ಸಿದ್ಧಾಂತವನ್ನು ಒಪ್ಪಿಕೊಳ್ಳದ ಯುರೋಪ್ ತನ್ನದೇ ಚರಿತ್ರೆಯನ್ನು ನಿರ್ಮಿಸಿಕೊಂಡರೆ ಹಿಟ್ಲರ್ ತಾನು ಆರ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದಿದ್ದಾನೆ. ಬಹುತೇಕ ಅನುವಂಶಿಕ ವಿಜ್ಞಾನಿಗಳು  ತಾಯಿಯಿಂದ ಮಕ್ಕಳಿಗೆ ಹರಿದು ಬರುವ ಎಕ್ಸ್ ವರ್ಣತಂತುವಿನ ಮೂಲಕ ವಿಶ್ಲೇಷಣೆಗಳನ್ನು ನಡೆಸಿ ಮಾನವನ ಪೂರ್ವಿಕ ಪಿತೃಗಳನ್ನು ಪತ್ತೆ ಹಚ್ಚಲು ಯತ್ನಿಸಿ ವಿಫಲರಾಗಿದ್ದರು. ಆದರೆ ಲಂಡನ್ ಮೂಲದ ವಂಶವಾಹಿ ವಿಜ್ಞಾನಿ ಡಾ. ಸ್ಪೆನ್ಸರ್ ವೇಲ್ಸ್ ತಂದೆಯಿಂದ ಗಂಡುಮಕ್ಕಳಿಗೆ ಮಾತ್ರವೇ ಹರಿದು ಬರುವ ವೈ ವರ್ಣತಂತುವಿನ ಡಿಎನ್ಎ ವಿಶ್ಲೇಷಣೆ ನಡೆಸಿದರು. 22 ಭಿನ್ನ ಭೌಗೋಳಿಕ ಪ್ರದೇಶಗಳ 1062 ಪುರುಷರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿ 8 ದೇಶಗಳ ವಿಜ್ಞಾನಿಗಳ ತಂಡದೊಂದಿಗೆ ನಡೆಸಿದ ಅಧ್ಯಯನದ ನಂತರ ಅವರು ನೀಡಿದ ವಿವರ ಅತ್ಯಂತ ಕುತೂಹಲಕಾರಿಯಾದದ್ದು. ನಮೀಬಿಯಾದ ಸ್ಯಾನ್ ಬುಷ್ ಬುಡಕಟ್ಟಿನ ವೈ ವರ್ಣತಂತುವಿನಲ್ಲಿ ದೊರೆತ ಗುರುತು 60,000 ವರ್ಷಗಳಿಗೂ ಹಿಂದಿನದ್ದು. ಇದೇ ಗುರುತು ಭಾರತದ ಸೌರಾಷ್ಟ್ರ, ಮಧುರೈ, ಮಲೇಷಿಯಾ, ನ್ಯೂಗಿನಿ ಹಾಗೂ ಆಸ್ಟ್ರೇಲಿಯಾ ಮೂಲದ ನಿವಾಸಿಗಳಲ್ಲೂ ಗುರುತಿಸಲ್ಪಟ್ಟಿದೆ. ಇದರಿಂದ ಆಧುನಿಕ ಮಾನವನ ಪೂರ್ವಿಕರ ಮೊದಲ ವಲಸೆಯ ಮಾರ್ಗ ಆಫ್ರಿಕಾದಿಂದ ಭಾರತದ ಕರಾವಳಿ ಮಾರ್ಗವನ್ನೊಳಗೊಂಡಂತೆ ಇಂಡೋನೇಷಿಯಾ, ಮಲೇಷಿಯಾ, ಆಸ್ಟ್ರೇಲಿಯಾದವರೆಗೂ ಗುರುತಿಸಲಾಯಿತು.

ಈ ಪ್ರಯಾಣದ ಅವಧಿ 3000 ವರ್ಷಗಳು ಎಂದೂ ಅವರು ಅಂದಾಜಿಸುತ್ತಾರೆ. ಎರಡನೆಯ ವಲಸೆ 45,000 ವರ್ಷಗಳ ಹಿಂದೆ ಆಫ್ರಿಕಾದಿಂದ ಹೊರಟ ತಂಡ ಮಧ್ಯಪ್ರಾಚ್ಯ, ಮಧ್ಯೇಷ್ಯಾ, ಚೀನಾ, ಯುರೋಪ್ ಹಾಗೂ ದಕ್ಷಿಣ ಏಷ್ಯಾಗಳಲ್ಲಿ ಸಂತತಿ ಹಬ್ಬಿಸಿತು. ಹೀಗೆ ಮೆಡಿಟರೇನಿಯನ್ ಭಾಗದಿಂದ ಭಾರತದ ವಾಯುವ್ಯವನ್ನು ತಲುಪಿದವರೇ ಭಾರತದ ಇಂದಿನ ದ್ರಾವಿಡ ಭಾಷಿಕರು. ಹಾಗೆ ಯುರೇಷಿಯಾದಲ್ಲಿ ನೆಲೆಸಿದವರೇ ಕಕೇಷಿಯನ್ನರು! ವೇಲ್ಸ್ ಅವರ ಪ್ರಕಾರ ಇವತ್ತು ಭೂಮಿಯ ಮೇಲಿರುವ ಸಂತತಿಯಲ್ಲಿ 200 ಜನರಲ್ಲಿ ಒಬ್ಬ ನಿಸ್ಸಂಶಯವಾಗಿ ಚೆಂಗೀಸ್ ಖಾನನ ವಂಶದವನು. ಇಂಥ ಅನೇಕ ಕುತೂಹಲಭರಿತ ವಿಷಯಗಳು ಈ ಲೇಖನದಲ್ಲಿವೆ. ಲಕ್ಷ್ಮೀಪತಿಯವರು ವೇದಕಾಲವನ್ನೂ ತರ್ಕಿಸಿದ್ದಾರೆ. ಯುರೇಷಿಯಾದ ಯುದ್ಧೋನ್ಮಾದಿಗಳು ಭಾರತಕ್ಕೆ ಬಂದು ಇಲ್ಲಿನ ಉಪ್ಪನ್ನೇ ಉಂಡು ಛೇ, ಈ ನೆಲದ ಇತಿಹಾಸ ಏಕೆ ವಕ್ರಗತಿ ಹಿಡಿಯಿತೋ ಎಂದು ಬೇಸರಿಸಿದ್ದಾರೆ.

ಇಲ್ಲಿರುವ ವಿಷಯ ಚರ್ಚಾರ್ಹವೇ. ಆದರೂ ಧರ್ಮ ಅಸಹಿಷ್ಣುತೆಯಿಂದ ತತ್ತರಿಸಿ ಹೋಗಿರುವ ಇಂದಿನ ಜಗತ್ತು ನಿಜಕ್ಕೂ ವಸುದೈವ ಕುಟುಂಬಕಂ ಹೌದೇ ಎಂಬ ಜಿಜ್ಞಾಸೆಗೆ ಇದು ಹಚ್ಚುವುದು. ಕಥೆ, ಕಾವ್ಯದಲ್ಲಿ ಮುಳುಗೇಳುತ್ತ, ಆ ಪ್ರಕಾರವೇ ಸಾಹಿತ್ಯ ಎಂದು ಗುಂಪುಗಾರಿಕೆ ನಡೆಸುತ್ತ, ಪುಸ್ತಕ ಬಿಡುಗಡೆಗೆ ಮೊದಲು ಅಬ್ಬರದ ಪ್ರಚಾರ, ಬಿಡುಗಡೆಯ ನಂತರ ಪ್ರಶಸ್ತಿ, ಟಾಪ್ ಟೆನ್ ಗಳಿಗಾಗಿ ಲಾಬಿ ನಡೆಸುವ ಪುಸ್ತಕಗಳೆದುರು ಇಂಥ ಪುಸ್ತಕಗಳು ಸದ್ದೇ ಮಾಡುವುದಿಲ್ಲ. ಇತಿಹಾಸವೆಂದರೆ ಮೂಗು ಮುರಿಯುವವರೆಲ್ಲರೂ ಹಾಗೂ ಕುತೂಹಲಕ್ಕಾದರೂ ಎಲ್ಲರೂ ಓದಬೇಕಾದ ಪುಸ್ತಕ ಇದು.

ಕೃ: ತೇಜೋ- ತುಂಗಭದ್ರ ಲೇ: ವಸುಧೇಂದ್ರ ಪ್ರ: ಛಂದ ಪುಸ್ತಕ

ತೇಜೋ- ತುಂಗಭದ್ರ ವಸುಧೇಂದ್ರ ಅವರ ಬೃಹತ್ ಕಾದಂಬರಿ. ಪುಸ್ತಕವನ್ನು ಕೈಗೆತ್ತಿಕೊಳ್ಳುವ ಮೊದಲು ಕರ್ತೃವಿನ ಹೆಸರಿನ ಮೋಡಿ ಹಾಗೂ ಕೃತಿಯ ಹೆಸರಿನ ಮೋಡಿಗಳು ಪೈಪೋಟಿಗಿಳಿಯುತ್ತವೆ. ಅದರಂತೆ ಇದರಲ್ಲಿರುವ ಎರಡು ನದಿಗಳಾದ ತೇಜೋ ಹಾಗೂ ತುಂಗಭದ್ರಾ ನದಿಯ ಹಿನ್ನೆಲೆಯಲ್ಲಿ ನಡೆಯುವ ಅಪರೂಪದ ವಿದ್ಯಮಾನಗಳು ಪುಟದಿಂದ ಪುಟಕ್ಕೆ ಕುತೂಹಲವನ್ನು ದಾಟಿಸುತ್ತ ಹೋಗುತ್ತವೆ.

ಈ ಕೃತಿಯ ಹಿಂದಿನ ಅಗಾಧ ಓದು, ಸಂಶೋಧನೆ ಬೆರಗು ಹುಟ್ಟಿಸುತ್ತದೆ. ಆ ಓದನ್ನು ಇಂಥ ಕೃತಿಯಾಗಿ ಕಟ್ಟುವುದು ಅಸಾಧಾರಣವಾದ ಮಾತೇ. ಉದ್ದಕ್ಕೂ ಬರುವ ನವರಸಭರಿತ ಸನ್ನಿವೇಶಗಳು, ಖಂಡಾಂತರಗಳ ನಡುವೆ ನಡೆಯುವ ವಿಭಿನ್ನ ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ವೈಯುಕ್ತಿಕ ಘಟನೆಗಳು ಬೇರೆಯಾಗಿ ಕಂಡರೂ ಒಂದನ್ನೇ ಹೇಳುವ ಕಥನ ಶೈಲಿ ಅನುಪಮವಾದ್ದು. ಅದೆಷ್ಟು ಸಹನೆಯಿಂದ ವಿವರಿಸುವ ಚಿಕ್ಕ ಚಿಕ್ಕ ಘಟನೆಗಳು ಉದ್ದಕ್ಕೂ ಸೂರೆಯಾಗಿ ಹೋಗಿವೆ. ಎಷ್ಟೊಂದು ಸೂಕ್ಷ್ಮ ದೃಷ್ಟಿ ಈ ಲೇಖಕನದ್ದು ಎಂದು ಆಗಾಗ ಓದುಗ ಅವಾಕ್ಕಾಗಿ ದೀರ್ಘ ಉಸಿರು ತೆಗೆದುಕೊಳ್ಳದೇ ಮುಂದೆ ಹೋಗುವುದೇ ಕಷ್ಟ ಎಂಬಂಥ ಕ್ಲಿಷ್ಟಕರ ಸನ್ನಿವೇಶಗಳಿಗೆ ಮುಖಾಮುಖಿಯಾಗಿಸುವುದು ಕರ್ತೃವಿನ ಪಾಂಡಿತ್ಯಕ್ಕೆ, ಪ್ರೌಢಿಮೆಗೆ ಸಾಕ್ಷಿಯಾಗಿವೆ.

ಇಷ್ಟು ದೊಡ್ಡ ಹರಹಿನ, ಕಥಾ ನಿರೂಪಣೆಯನ್ನು ಈ ಹಿಂದೆ ಕಂಡಿದ್ದು ತರಾಸು ಅವರ ಐತಿಹಾಸಿಕ ಕಾದಂಬರಿಗಳು, ಮಾಸ್ತಿಯವರ, ಶಿವರಾಮ ಕಾರಂತರ, ಕುವೆಂಪು ಅವರ ಹಾಗೂ ಭೈರಪ್ಪನವರ ಕಾದಂಬರಿಗಳನ್ನು ಓದುವಾಗ. ಈ ಎಲ್ಲ ಕಾದಂಬರಿಗಳ ಬಿಗಿ, ಭಾಷಾ ಸೌಂದರ್ಯ, ನಿರೂಪಣೆಯ ಸೊಗಸು, ಲಾಲಿತ್ಯ, ಭಾವಗಳ ಸಮ್ಮೋಹಕತೆ ಒಂದು ಅಲೌಕಿಕ, ಅವರ್ಣನೀಯ ಓದಿನ ಸುಖವನ್ನು ಕೊಡುತ್ತವೆ. ಒಂದು ‘ಮ್ಯಾಜಿಕ್’ ಅನ್ನು ಸೃಷ್ಟಿಸುತ್ತವೆ. ನೇಮಿಚಂದ್ರರ ‘ಯಾದ್ ವಶೇಮ್’ ಕೂಡ ದೊಡ್ಡ ಮ್ಯಾಜಿಕ್ ಮಾಡುತ್ತದೆ. ತೇಜೋ- ತುಂಗಭದ್ರ ಪೂರ್ತಿ ಓದುವವರೆಗೂ ವಿರಮಿಸಬೇಡ ಎಂದು ಒತ್ತಾಯಿಸುತ್ತ ಓದಿಸಿಕೊಂಡರೂ ಅದರಲ್ಲಿ ಈ ಮ್ಯಾಜಿಕ್ ಯಾಕೋ ನನಗೆ ದಕ್ಕಲಿಲ್ಲ.

ಇದಕ್ಕೆ ಈ ಮೇಲೆ ಹೇಳಿದ ಎಲ್ಲ ಕಾದಂಬರಿಗಳ ಓದಿನ ಕಾಲಕ್ಕೂ ಈ ಕಾದಂಬರಿಯನ್ನು ಓದುತ್ತಿರುವ ಈ ಕಾಲಕ್ಕೂ ನನ್ನಲ್ಲಿ ಆಗಿರುವ ಬದಲಾವಣೆಯೂ ಒಂದು ಕಾರಣವಿರಬಹುದೇ ಎಂದು ನನ್ನನ್ನ ನಾನೇ ಪ್ರಶ್ನಿಸಿಕೊಂಡಿದ್ದಿದೆ. ಆ ಹೊರತಾಗಿಯೂ ಕಥೆಗಾರ ತನ್ನೊಂದಿಗೆ ನಮ್ಮನ್ನು ಕರೆದುಕೊಂಡು ಪ್ರತಿ ಹೆಜ್ಜೆಯನ್ನು ಹಾಕುತ್ತಾನೆ. ಎಲ್ಲವನ್ನೂ ನಮ್ಮ ಕಣ್ಣುಗಳಿಂದಲೇ ನೋಡಿಸುತ್ತಾನೆ. ಓದುತ್ತ ಓದುತ್ತ ಯಾವ ಉದ್ವೇಗವೂ ಇಲ್ಲದೇ ಎರಡು ನದಿಗಳು ತಣ್ಣಗೆ ಹರಿಯುವಂತೆ ತನ್ನ ತಣ್ಣಗಿನ ನಿರೂಪಣೆಯನ್ನು ಉದ್ದಕ್ಕೂ ಹರಿಸಿದ್ದಾನೆ. ಒಂದು ಒಳ್ಳೆಯ ಓದು ಈ ಕಾದಂಬರಿಯ ಮೂಲಕ ಎಲ್ಲ ಓದುಗರಿಗೂ ಸಿಗುತ್ತದೆ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಕಥೆಗಾರ ಶಿ.ಜು.ಪಾಶ

Published On - 1:15 pm, Thu, 31 December 20

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ