ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಡಾ. ವಸುಂಧರಾ ಭೂಪತಿ
’ಬಾಲ್ಯದಲ್ಲಿ ಹುಡುಗರೊಂದಿಗೆ ಧೈರ್ಯದಿಂದ ಓಡಾಡಿ ಸಿಗರೇಟು ಸೇದಿದ ಡಾ. ಗಿರಿಜಮ್ಮನವರು ವೈಯಕ್ತಿಕ ಬದುಕಿ ಬದುಕಿನ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಲ್ಲಿ ಎಡವಿದರೆ?’ ಡಾ. ವಸುಂಧರಾ ಭೂಪತಿ.
ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ವೈದ್ಯೆ, ಲೇಖಕಿ ಡಾ. ವಸುಂಧರಾ ಭೂಪತಿ ಅವರ ಆಯ್ಕೆಗಳು ಇಲ್ಲಿವೆ.
ಕೃ: ಕಾಡುತಾವ ನೆನಪುಗಳು ಲೇ: ಡಾ.ಎಚ್. ಗಿರಿಜಮ್ಮ ಪ್ರ: ಗೀತಾಂಜಲಿ ಪಬ್ಲಿಕೇಶನ್ಸ್
ಇತ್ತೀಚಿಗೆ ಪ್ರಕಟವಾದ ಡಾ.ಎಚ್.ಗಿರಿಜಮ್ಮ ಅವರ ಆತ್ಮಚರಿತ್ರೆ ‘ಕಾಡುತಾವ ನೆನಪುಗಳು’ ಒಬ್ಬ ಸುಶಿಕ್ಷಿತ ಮಹಿಳೆಯ ತವಕ ತಲ್ಲಣ ತಳಮಳಗಳ ಪ್ರಾಂಜಲ ನಿರೂಪಣೆ. ಹುಟ್ಟಿದ ಮನೆ, ಬೆಳೆದ ಪರಿಸರ, ಎಲ್ಲೆಡೆಯೂ ಅನುಭವಿಸಿದ ನೋವು, ತಾರತಮ್ಯ, ದ್ರೋಹ ಈ ಎಲ್ಲ ಸೂಕ್ಷ್ಮ ಸಂವೇದನೆಯ ಲೇಖಕಿ ನುಂಗಿಕೊಂಡ ಬಗೆ, ಯಾರನ್ನೂ ದೂಷಿಸದೇ ಎಲ್ಲವನ್ನೂ ಸ್ವಯಂ ಚೌಕಟ್ಟಿನ ಬಲೆಗೆ ತರುವ ಇಲ್ಲಿನ ತಣ್ಣನೆಯ ಸ್ವಭಾವ ಅಚ್ಚರಿ ಹುಟ್ಟಿಸುತ್ತದೆ. ಮಹಿಳೆಯರ ಅನುಭವಗಳಂತೆ ಆತ್ಮಕಥನದಲ್ಲಿ ಎಂದೂ ಏಕರೂಪತೆ ಇರುವುದಿಲ್ಲ ಎನ್ನುವುದನ್ನು ಹೇಳುತ್ತದೆ.
‘ಕಾಡುತಾವ ನೆನಪುಗಳು’ ಬರವಣಿಗೆಯ ರೀತಿಯೇ ಆತ್ಮನಿವೇದನೆಯ ಆಪ್ತತೆಯಿಂದ ಕೂಡಿದೆ. ತನ್ನ ಮಾನಸಪುತ್ರಿಗೆ ಬರೆದ ಪತ್ರ ಮಾದರಿಯ ರೀತಿಯಲ್ಲಿ ಇಲ್ಲಿಯ ನೆನಪುಗಳು ಬಿಚ್ಚಿಕೊಳ್ಳತೊಡಗುತ್ತವೆ. ಗಿರಿಜಮ್ಮನವರಿಗೆ ಬಹಳ ಕಾಲದವರೆಗೆ ಕಾಡುವ ಒಂದು ಅರಿಮೆಯೆಂದರೆ ಅದು ತಮ್ಮ ಬಣ್ಣಕ್ಕೆ ಸಂಬಂಧಿಸಿದ್ದು. ‘ನೀನು ಕಪ್ಪು ಬಣ್ಣದವಳು’ ಎಂಬ ಕೀಳರಿಮೆ ಅವರನ್ನು ಬಹಳಷ್ಟು ವಿಚಾರಗಳಲ್ಲಿ ಸಂಕೋಚ, ಹಿಂಜರಿಕೆಗಳಿಗೆ ಒಳಗುಮಾಡುತ್ತದೆ. ವೈದ್ಯೆಯಾಗಿ, ಮನಃಶಾಸ್ತ್ರವನ್ನು ಓದಿದವಳಾಗಿ ಬೇರೆಯವರಿಗೆ ಮಾರ್ಗದರ್ಶನ ನೀಡಬಲ್ಲ ವಿವೇಕಶಾಲಿಯಾಗಿ ತಮ್ಮ ವೃತ್ತಿಜೀವನದಲ್ಲಿ ಗೆಲುವು ಸಾಧಿಸಿದ, ಬಾಲ್ಯದಲ್ಲಿ ಹುಡುಗರೊಂದಿಗೆ ಧೈರ್ಯದಿಂದ ಓಡಾಡಿ ಸಿಗರೇಟು ಸೇದಿದ ಗಿರಿಜಮ್ಮನವರು ವೈಯಕ್ತಿಕ ಬದುಕಿನ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಲ್ಲಿ ಎಡವಿದವರಂತೆ ಭಾಸವಾಗುತ್ತದೆ. ಇದನ್ನು ಗಿರಿಜಮ್ಮನವರು ಪ್ರಾಂಜಲ ಭಾವದಲ್ಲಿ ನಿರೀಕ್ಷಿಸಿದಂತೆ ಆತ್ಮಕಥನ ನಿರೂಪಿಸಿದ್ದಾರೆ. ಅವರ ವೃತ್ತಿಜೀವನದ ಆರಂಭದಲ್ಲಿಯೇ ವೈದ್ಯಾಧಿಕಾರಿಗಳು, ರಾಜಕಾರಣಿಗಳು ಕೊಡುವ ಕಿರುಕುಳಗಳ ಬಗ್ಗೆ,ಅದನ್ನು ಎದುರಿಸಿದ ಕುರಿತು ವಸ್ತುನಿಷ್ಠವಾಗಿ ಬರೆದಿದ್ದಾರೆ. ಇದು ಭಾವನಾತ್ಮಕ ರೀತಿಯಲ್ಲಿ ನಿರೂಪಣೆಗೊಂಡಿರುವ ಒಂದು ಅಮೂಲ್ಯ ಆತ್ಮಕಥನ.
ಕೃ: ಮುಟ್ಟು ಏನಿದರ ಒಳಗುಟ್ಟು ಲೇ: ಜ್ಯೋತಿ ಇಟ್ನಾಳ್ ಪ್ರ: ಅಂಗಳ ಪ್ರಕಾಶನ
ಮುಟ್ಟು ಎನ್ನುವ ಶಬ್ದವೇ ವಿಚಿತ್ರ. ಮುಟ್ಟಬಾರದ್ದು ಎಂಬ ಅರ್ಥ ಕೊಡುವಂಥದ್ದು. ಮುಟ್ಟಾದರೆ ಒಂದು ರೀತಿಯ ಕಷ್ಟ. ಇನ್ನೊಂದು ಬಗೆಯ ಸಂಕಟ. ಒಟ್ಟಿನಲ್ಲಿ ‘ಮುಟ್ಟು’ ತಂದೊಡ್ಡುವ ಸಂಕಷ್ಟ ನೂರೆಂಟು. ಮುಟ್ಟಿನ ಸಂಕಟದಲ್ಲಿ ಹೆಣ್ಣುಮಕ್ಕಳನ್ನು ನಿರ್ಬಂಧಿಸುವ. ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ಮುಟ್ಟು ಸಹಜ,ಸ್ವಾಭಾವಿಕ ಕ್ರಿಯೆಯಾದರೂ ಅದೊಂದು ಸಂಸ್ಕೃತಿ, ಅದೊಂದು ಆಚರಣೆ, ಅದೊಂದು ಪುರುಷ ಪ್ರಧಾನ ಮೌಲ್ಯ. ಮಹಿಳೆಯನ್ನು ಪುರುಷನೊಡನೆ ಬೆಸೆಯುವ, ಭಾವನಾತ್ಮಕ ಸಂಬಂಧ ಎಂಬುದರ ಬಗ್ಗೆ ‘ಮುಟ್ಟು- ಏನಿದರ ಓಳಗುಟ್ಟು’ ಕೃತಿಯಲ್ಲಿ ಅರಿತುಕೊಳ್ಳಬಹುದು. ಮುಟ್ಟಿನ ಕುರಿತಾಗಿ ಡಾ.ಪುರುಷೋತ್ತಮ ಬಿಳಿಮಲೆ, ಶ್ರೀನಿವಾಸ ಕಾರ್ಕಳ, ಲಕ್ಷ್ಮಣ ಕೊಡಸೆ, ಶ್ರೀಪಾದ ಭಟ್, ಹುಲಿಕಂಟೆ ಮೂರ್ತಿ, ನವೀನ್ ಸೂರಿಂಜೆ ಮುಂತಾದ ಪುರುಷರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ವಿನಯಾ ಒಕ್ಕುಂದ, ಬಾನು ಮುಷ್ತಾಕ್, ಸುನಂದಾ ಕಡಮೆ, ಕೆ.ಷರೀಫಾ, ಸವಿತಾ ಬನ್ನಾಡಿ ಮುಂತಾದ ಅನೇಕ ಲೇಖಕಿಯರು ತಮ್ಮ ಮೊದಲ ಮುಟ್ಟಿನ ಅನುಭವ ತಂದಂತಹ ನೋವು, ಆತಂಕ, ಹಿಂಸೆ, ಭಯ ಎಲ್ಲವನ್ನೂ ಮುಕ್ತವಾಗಿ ತೆರೆದಿಟ್ಟಿದ್ದಾರೆ.
ಎಂ.ಎಸ್.ಆಶಾದೇವಿಯವರು ‘ಬೆಪ್ಪು ಪುರುಷರೇ, ನಿಮ್ ಕೀಳರಿಮೆಯನ್ನು ಗೆಲ್ಲಲು ಮುಟ್ಟನ್ನು, ಯಾವ ಮುಟ್ಟಿಲ್ಲದೇ ನೀವೇ ಇಲ್ಲವೋ ಅದನ್ನು ಹೇಗೆ ಕೃತಕವಾಗಿ ಬಹಿಷ್ಕರಿಸುವುದು ಶುದ್ಧ ಅನಾಗರಿಕತನ ಎಂದು ಹೇಳಬೇಕು. ಇದನ್ನು ಹೇಳಿಕೊಡುವ ಎಂದರೆ ಮಗಳಿಲ್ಲದ ನತದೃಷ್ಟೆ ನಾನು. ಮಗನಿಗಂತೂ ಖಂಡಿತ ಹೇಳಿದ್ದೇನೆ’ ಎನ್ನುತ್ತಾರೆ. ಪ್ರತಿ ಪುರುಷನೂ ಓದಲೇಬೇಕಾದ ಈ ಕೃತಿಯನ್ನು ಹೋರಾಟಗಾರ್ತಿ ಜ್ಯೋತಿ ಇಟ್ನಾಳ್ ಸಂಪಾದನೆ ಮಾಡಿದ್ದಾರೆ.
ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಕಥೆಗಾರ್ತಿ ಜಯಶ್ರೀ ಕಾಸರವಳ್ಳಿ
Published On - 10:34 am, Thu, 31 December 20