AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Odinangala : ವರ್ಷಾಂತ್ಯ ವಿಶೇಷ ; ‘ಓದಿನಗಂಗಳ’ದಲ್ಲಿ ತಾರಿಣಿ ಶುಭದಾಯಿನಿ ಕಾಣಿಸಿದ ‘ಕೌಬಾಯ್ಸ್​ ಮತ್ತು ಕಾಮ ಪುರಾಣ’

Prathibha Nandakumar : ‘ದೇಶಭಕ್ತ ಸೂಳೆಮಕ್ಕಳ ಗದ್ಯಗೀತೆ ಅಂತ ಬರೆದ್ರಲ್ಲ ಸರ್, ಈಗ ಬರೀರಿ ನೋಡೋಣ ಟ್ರಾಲ್ ಯುಗದ ಜಗದ ಝನ್ಡಾ ಉಂಚಾ ರಹೇ ಹಮಾರಾ (ಇಲ್ಲಿದ್ದ ಕಾಡೇನಾಯ್ತು?)’ ಇದು ಪ್ರತಿಭಾ ಅವರು ಜಗ್ಗಿಸಿ ಕೇಳುವ ಪರಿ.. ಡಾ. ಆರ್. ತಾರಿಣಿ ಶುಭದಾಯಿನಿ

Odinangala : ವರ್ಷಾಂತ್ಯ ವಿಶೇಷ ; ‘ಓದಿನಗಂಗಳ’ದಲ್ಲಿ ತಾರಿಣಿ ಶುಭದಾಯಿನಿ ಕಾಣಿಸಿದ ‘ಕೌಬಾಯ್ಸ್​ ಮತ್ತು ಕಾಮ ಪುರಾಣ’
ವಿಮರ್ಶಕಿ ಡಾ. ಆರ್. ತಾರಿಣಿ ಶುಭದಾಯಿನಿ ಮತ್ತು ಕವಿ ಪ್ರತಿಭಾ ನಂದಕುಮಾರ
ಶ್ರೀದೇವಿ ಕಳಸದ
|

Updated on:Dec 31, 2021 | 9:32 AM

Share

Kannada Literature | ಓದಿನಂಗಳ 2021 : ಅಂತರಂಗದಿಂದ ಬಹಿರಂಗಕ್ಕೆ, ಬಹಿರಂಗದಿಂದ ಅಂತರಂಗಕ್ಕೆ ನಮ್ಮನ್ನು ನಾವು ನೇಯ್ದುಕೊಳ್ಳಲು ಇರುವ ಹಲವಾರು ಆತ್ಮಾವಲೋಕನದ ಮಾರ್ಗಗಳಲ್ಲಿ ಸಾಹಿತ್ಯವೂ ಒಂದು. ಒಮ್ಮೆ ಈ ‘ರುಚಿ’ಗೆ ಬಿದ್ದರೆ ಮುಗಿಯಿತು. ಪುಸ್ತಕಗಳೇ ನಮ್ಮನೆ ದೇವರು ಎಂದು ಜೀವಿಸುತ್ತಿರುವ ಅಸಂಖ್ಯಾತ ಮನಸ್ಸುಗಳೊಂದಿಗೆ ನಾವು ನಮಗರಿವಿಲ್ಲದೆಯೇ ಬೆಸೆದುಕೊಳ್ಳುತ್ತಾ ಹೋಗುತ್ತೇವೆ. ಎಂಥಾ ದೊಡ್ಡ ಜಾತ್ರೆಯಲ್ಲಿ, ಥರಾವರಿ ಆಟಿಕೆಗಳಲ್ಲಿ ಮಗು ಮನಸ್ಸು ನೆಡುವುದು ಒಂದೇ ಒಂದು ಆಟಿಕೆಯಲ್ಲಿ ಮಾತ್ರ. ಅದೇ ಆಟಿಕೆ ಯಾಕೆ, ಎಂಬ ಪ್ರಶ್ನೆಗೆ ಉತ್ತರವಿದೆಯೇ?; ಹೊಸ ವರ್ಷದ ಹೊಸ್ತಿಲೊಳಗೆ ನಿಂತು ಹಿಂದಿರುಗಿ ನೋಡಿದರೆ, ಈ ಎರಡು ವರ್ಷಗಳಲ್ಲಿ ಕನ್ನಡದಲ್ಲಿ ಸಾಹಿತ್ಯಕೃತಿಗಳ ಪ್ರಕಟಣೆ ವಿಪುಲ. ಅಂತೆಯೇ ಕನ್ನಡದ ಕೆಲ ವಿಮರ್ಶಕರಿಗೆ, ಈ ವರ್ಷ ನೀವು ಓದಿದ ಪುಸ್ತಕಗಳ ಪೈಕಿ ಯಾವುದೇ ಭಾಷೆಯ, ಯಾವುದೇ ಪ್ರಕಾರದ, ಯಾವುದೇ ವರ್ಷ ಪ್ರಕಟವಾದ ನಿಮಗಿಷ್ಟವಾದ ಒಂದು ಕೃತಿಯ ಬಗ್ಗೆ ನಿಮ್ಮ ಒಳನೋಟಗಳನ್ನು ಕಟ್ಟಿಕೊಡಬಹುದೆ? ಎಂದು ವಿನಂತಿಸಿಕೊಳ್ಳಲಾಯಿತು. ಅವರು ಬರೆದು ಕಳಿಸಿದ್ದು ನಿಮ್ಮ ಓದಿಗೆ. ಒಪ್ಪಿಸಿಕೊಳ್ಳಿ. 

*

ಕೃತಿ : ಕೌಬಾಯ್ಸ್ ಮತ್ತು ಕಾಮ ಪುರಾಣ (ಕವಿತೆಗಳು) ಕವಿ : ಪ್ರತಿಭಾ ನಂದಕುಮಾರ್ ಪುಟ : 104 ಬೆಲೆ : ರೂ. 120 ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು

*

ಚಿತ್ರದುರ್ಗದಲ್ಲಿ ವಾಸಿಸುತ್ತಿರುವ ವಿಮರ್ಶಕಿ ಡಾ. ಆರ್. ತಾರಿಣಿ ಶುಭದಾಯಿನಿ ಕವಿ ಪ್ರತಿಭಾ ನಂದಕುಮಾರ ಅವರ ಕೌಬಾಯ್ಸ್​ ಮತ್ತು ಕಾಮ ಪುರಾಣ ಕವಿತೆಗಳ ಬಗ್ಗೆ.

*

2020ರಲ್ಲಿ ಈ ಸಂಕಲನ ಪ್ರಕಟವಾಗಿದೆ. ಕವಿತೆಗಳನ್ನು ಬರೆಯುತ್ತಲೇ ಇರುವ ಕವಿಯಾಗಿರುವ ಪ್ರತಿಭಾ ನಂದಕುಮಾರ್ ಕವಿತೆ ಬರೆಯುವ ತೀವ್ರವ್ಯಾಮೋಹವನ್ನು ಮಾತ್ರ ಎಂದಿಗೂ ಕಳೆದುಕೊಂಡಿಲ್ಲ. ಕಾವ್ಯದ ಬಗೆಗೆ ಅವರ ನಂಬಿಕೆ ಎಂದೂ ಕಳೆದು ಹೋಗಿಲ್ಲವೆನ್ನುವುದಕ್ಕೆ ಸಾಕ್ಷಿಯಾಗಿ ಅವರ ಹೊಸ ಹೊಸ ಕವಿತಾ ಸಂಕಲನಗಳು ಬರುತ್ತಲೇ ಇವೆ. ಒಂದೊಮ್ಮೆ ‘ನಾವು ಹುಡುಗಿಯರೇ ಹೀಗೆ’ ಎಂದು ಬರೆದು ಹೊಸಗಾಲದ ಹುಡುಗಿಯ ಆಶೋತ್ತರಗಳನ್ನೂ ತಳಮಳಗಳನ್ನೂ ಒತ್ತಟ್ಟಿಗೆ ‘ಡಬ್ಬಿಯಲ್ಲಿ ತುಂಬಿಟ್ಟ ಹಿಟ್ಟಿನ’ ಹಾಗೆ ಉಮ್ಮಳವನ್ನು ಹೊಂದಿದಂತಿರುವ ಅಭಿವ್ಯಕ್ತಿಯನ್ನು ಹೇಳಿದವರು ಪ್ರತಿಭಾ. ಅವರ ‘ಉಷಾ’ಗೆ ಇವತ್ತು ವಯಸ್ಸಾಗಿದೆ. ಆದರೇನು? ಇವತ್ತಿಗೂ ನಾವು ಹುಡುಗಿಯರೇ ಹೀಗೆ ಎಂದು ಹೇಳಿಕೊಳ್ಳಬೇಕೇಕೆ? ‘ಮುದುಕಿಯರಿಗಿದು ಕಾಲವಲ್ಲ’ ಎನ್ನುವ ತಿಳಿವಳಿಕೆಯೊಂದಿಗೆ ಎಂದಿಗೂ ತೀರದಂತಿರುವ ವ್ಯಾಮೋಹವನ್ನು ಮಾತ್ರ ತಗ್ಗಿಸದೆ ಅದು ತನಗಿದೆ ಎಂದು ಹೇಳಿಕೊಳ್ಳುವ ಮೂಲಕ ಮುದುಕಿಯರ ಪ್ಯಾಶನ್ ಕೂಡ ಜೀವನದ ಇರುವಿಕೆಯ ಮೋಹವನ್ನು ಹೆಚ್ಚಿಸುತ್ತದೆ ಎನ್ನುವ ಸಂದೇಶವನ್ನು ತಮ್ಮ ಕಾವ್ಯದ ಮೂಲಕ ಪ್ರತಿಭಾ ನೀಡಿದರು. ಹಾಗೆ ನೋಡಿದರೆ ಕಾವ್ಯದ ಮೋಹ ಎನ್ನುವುದು ಬದುಕಿನ ಬಗೆಗಿರುವ ವ್ಯಾಮೋಹವೇ ಸೈ ಎನ್ನುವುದು ಅವರ ಧೋರಣೆ. ಪ್ರತಿಭಾ ಕಾವ್ಯದ ಜೀವಂತಿಕೆ ಇರುವುದು ಜೀವನಪ್ರೀತಿಯ ಅದರ ತಾರಕದಲ್ಲಿಯೇ.

ಪ್ರತಿಭಾ ಕಾವ್ಯ ಪ್ರಖರವಾಗಿದ್ದು ಸ್ತ್ರೀವಾದದ ಉತ್ತುಂಗದ ಕಾಲದಲ್ಲಿ. ಅದಾಗ ಅವರು ಸ್ತ್ರೀವಾದದ ಚಳವಳಿ ಭಾಷೆಯಲ್ಲಿ ಬರೆಯದೇ ಹೋದರೂ ಅವರ ಗತ್ತಿನಲ್ಲಿ ಸ್ತ್ರೀ ಎಂದರೆ ಏನೆಂಬುದರ ವಿವರಣೆಯನ್ನು ಜಗತ್ತಿಗೆ ಕೊಡುತ್ತಲೇ ಬಂದರು. ‘ಆಹಾ ಪುರುಷಾಕಾರಂ’ ಎನ್ನುವ ಪುರುಷಸೂಕ್ತದ ಸಾಲನ್ನೇ ಹಿಡಿದು ಛೇಡಿಸಿದರು. ಹೆಣ್ಣಿಗೆ ಇರದ ಭಾಷೆಯ ಬಗ್ಗೆ, ಕುಟುಂಬದಲ್ಲಿ ಕಳೆದು ಹೋದ ಕವಯತ್ರಿಯ ಕವನ ಸಂಸಾರ ಕೋಟಲೆಯಲ್ಲಿ ಆರಿಹೋದುದರ ಬಗ್ಗೆ ಬರೆದರು. ಗಂಡು ಮಾಡಿಟ್ಟ ಸಂಹಿತೆಗಳನ್ನು ಹೆಣ್ಣಿನ ಚೇತನ ಸದಾ ಉಗ್ರವಾಗಿ ಉಲ್ಲಂಘಿಸುತ್ತಿರುವಂತೆ ತೋರುತ್ತದೆ. ಹೆಣ್ಣಿನ ಅದಮ್ಯ ಚೇತನ ಅವಳನ್ನು ಶೋಷಿತಳನ್ನಾಗಿ ಮಾಡಿದರೂ ಅವಳ ಚೈತನ್ಯವು ಮತ್ತೆ ಮತ್ತೆ ಮರುಕಳಿಸಿ ಅವಳನ್ನು ಗಂಡು ಆಂತರ್ಯದಲ್ಲಿ ಹೆದರುವಂತೆ ಮಾಡುತ್ತದೆ. ಈ ಸಂಕೀರ್ಣತೆಯನ್ನು ಹಿಡಿಯುವ ನಿಟ್ಟಿನಲ್ಲಿ ಪ್ರತಿಭಾ ಕಾವ್ಯ ತನ್ನೆಲ್ಲ ಸತ್ವದೊಂದಿಗೆ ಕ್ರಿಯಾಶೀಲವಾಗುತ್ತದೆ. ಆದುದರಿಂದ ಹೆಣ್ಣು ಅವರ ಕಾವ್ಯದಲ್ಲಿ ಈಗ ‘ದೇವಿ’ ಅವಳನ್ನು ಪಬ್ಬಿನಲ್ಲಿ ಬಾರಿನಲ್ಲಿ ಹಿಡಿಯಲಾರಿರಿ ಎಂತಲೇ ಹೇಳುವ ಅವರು ಅವಳ ವಿಶಾಲವಾದ ಜಗತ್ತನ್ನು ವರ್ಣಿಸುತ್ತದೆ. ಅವಳ ಕರ್ತೃತ್ವ ಶಕ್ತಿಯನ್ನು ಹೇಳುತ್ತದೆ ಎನ್ನುವುದು ಮುಖ್ಯವಾದ ಪಲ್ಲಟ. ಅವರ ಕಾವ್ಯದ ಈಡಿಯಮ್ಮಿನಲ್ಲಿಯೂ ಕಾಣುವ ಬದಲಾವಣೆ.

ಪ್ರತಿಭಾ ಅವರ ಕಾವ್ಯದ ಸತ್ವಗಳು ಅವರು ನಿತ್ಯ ದಾಟ ಬಯಸುವ ‘ಅನುದಿನದ ಅಂತರಗಂಗೆ’ಯ ನಿತ್ಯದ ಪ್ರಕ್ರಿಯೆಗಳಲ್ಲಿ, ಗಂಡುಹೆಣ್ಣಿನ ವಿದ್ಯಮಾನಗಳಲ್ಲಿ ಕಂಡರೆ ಇನ್ನೊಂದು ಕಡೆಯಿಂದ ಅವರ ಕಾವ್ಯ ಪ್ರಜ್ವಲಿಸುವುದು ಕಾಮದ ಸತ್ವದಿಂದ. ಕಾಮದ ಬಗ್ಗೆ ಬರೆಯುವುದು ಸ್ತ್ರೀವಾದದ ‘ಪೊಲಿಟಿಕಲ್ ಕರೆಕ್ಟ್​ನೆಸ್​’  ಒತ್ತಡದಿಂದಲ್ಲ. ಕಾಮ ಎನ್ನುವುದು ಸಾಮಾಜಿಕ ವಿಧಿ, ನಿಷೇಧವಾದಾಗ ಅದನ್ನು ಹೆಣ್ಣು ಚೈತನ್ಯ ಮೀರುವ ಪರಿ ಇರುವಂತೆಯೇ ಸಹಜವಾದ ಕಾಮ ಭಾವನೆಯು ದೇಹ ಮತ್ತು ಮನಸ್ಸುಗಳನ್ನು ಶೋಧಿಸಿಕೊಳ್ಳುವುದಕ್ಕೆ ಇರುವ ಸಾಧನೆ. ಹೀಗಾಗಿ ಪ್ರತಿಭಾ ಕಾವ್ಯ ಬಿಡುಬೀಸಾಗಿ ಹೆಣ್ಣಿನ ಒಳಗಿನ ಅಭಿವ್ಯಕ್ತಿಯನ್ನು ಮಾಡಿದಂತೆ ತೋರುತ್ತದೆ.

ಪ್ರತಿಭಾ ಕಾವ್ಯಕ್ಕೆ ಒಳಗಿನ ಶೋಧದಂತೆಯೇ ಹೊರಗಿನ ರಾಜಕೀಯವು ತನ್ನೊಳಗನ್ನು ಅಲುಗಿಸುವ ಸಂಗತಿಗಳಾಗಿ ಬರುತ್ತದೆ. ಅದು ಸ್ತ್ರೀವಾದೀ ನೆಲೆಯಿಂದ ನೋಡಿದರೂ ಮಾನವತೆಯ ನೆಲೆಯಿಂದಲೂ ನೋಡಿದರೂ ಒಂದೇ ಎನ್ನಿಸುವಂತಹ ಫ್ಯಾಸಿಸ್ಟ್ ಹಾಗು ಹಿಂಸಾತ್ಮಕ ಸಂಗತಿಗಳನ್ನು ಒಳಗೊಳ್ಳುತ್ತದೆ. ‘ಮಧ್ಯರಾತ್ರಿಯಲ್ಲಿ ಕೇಳಿದ ಹೆಣ್ಣೊಬ್ಬಳ ಅಳು’ ಹೇಗೆ ಹಿಂಸಾತ್ಮಕವೋ ಹಾಗೇ ತ್ರಿಶೂಲ ಹಿಡಿದು ಸಾಯಿಸ ಹೊರಡುವ ಸಮುದಾಯಗಳ ಹಿಂಸೆಯೂ ಒಂದರ್ಥದಲ್ಲಿ ಹಿಂಸೆಯ ಕಥನಗಳೇ ಆಗಿರುತ್ತವೆ.

ಪ್ರತಿಭಾ ಅವರ ಹೊಸ ಸಂಕಲನ-‘ಕೌಬಾಯ್ಸ್ ಮತ್ತು ಕಾಮ ಪುರಾಣ’ದಲ್ಲಿ ತಮ್ಮ ಕಾವ್ಯಯಾನದ ಇನ್ನೊಂದು ಮಜಲನ್ನು ತಲುಪಿದ್ದಾರೆ. ಇಲ್ಲಿ ಅವರಿಗೆ ನೇರವಾಗಿ ಜಗತ್ತಿನ ರಾಜಕೀಯಕ್ಕೆ ಮುಖಾಮುಖಿಯಾಗಬೇಕಾದ ಧೋರಣೆಯನ್ನು ಅದು ತೋರುತ್ತದೆ. ಈ ಸಂಕಲನದ ಕವಿತೆಗಳು ರಾಜಕೀಯದ ಹಿಂಸೆ, ಜೀವವಿರೋಧಿ ಧೋರಣೆಗಳನ್ನೇ ಪ್ರಧಾನವಾಗಿ ಕೇಂದ್ರೀಕರಿಸುತ್ತಿವೆ. ಸ್ವಾತಂತ್ರ್ಯವನ್ನು ಹತ್ತಿಕ್ಕುವ ಧೋರಣೆ, ಪ್ರಜಾಪ್ರಭುತ್ವದ ಬಹುತ್ವವನ್ನು ಮುಚ್ಚಿಹಾಕುವ ಯತ್ನಗಳೇ ಮುಂತಾದ ಋಣಾತ್ಮಕ ರಾಜಕೀಯವನ್ನು ಕಾವ್ಯ ಖಂಡಿಸಬೇಕು ಎನ್ನುವ ನಿಲುವನ್ನು ತಳೆಯುತ್ತವೆ. ಈ ಸಂಕಲನದಲ್ಲಿ ಪ್ರಸ್ತುತ ರಾಜಕಾರಣದಲ್ಲಿ ಮುನ್ನೆಲೆಗೆ ಬಂದು ನಿಂತಿರುವ ಗೋವು ಪುಣ್ಯಕೋಟಿಯ ಅಮಾಯಕತನವನ್ನು ನುಂಗಿಕೊಂಡು ರಕ್ತಬಾಕವಾಗಿ ಬೆಳೆಯುವ ಪ್ರಾಣಿಯಾಗಿ ಬದಲಾಗಿಬಿಟ್ಟಿದೆ. ಹಾಲು ಕೊಡಬಲ್ಲ ಹಸು, ಸೆಗಣಿ ಹಾಕಿ ಮನುಷ್ಯನಿಗೆ ಆಧಾರವಾಗಬಲ್ಲ ಹಸು, ಕೆಲವರಿಗಾದರೂ ಆಹಾರವಾಗಬಲ್ಲ ಹಸು ಸಂರಕ್ಷಿತ ಪ್ರಾಣಿಯಾಗಿ ನಿತ್ಯ ಜೀವನದ ಸಹಜತೆಗೆ ಹೊರತಾಗಿ ಬೆಳೆಯುವುದನ್ನು ಅವರಿಲ್ಲಿ ಗುರುತಿಸುತ್ತಾರೆ. ಅಲ್ಲದೆ ಹಾಲು ಕೊಡುವ ಹಸು, ತಿನ್ನುವ ಮಾಂಸ, ಹಾಕಿಕೊಳ್ಳುವ ಉಡುಪು ಮುಂತಾದ ಸಣ್ಣ ಸಣ್ಣ ಸಂಗತಿಗಳೂ ರಾಜಕೀಕರಣಗೊಂಡು ಹಿಂಸೆಗೆ, ಛೇದಕ್ಕೆ ಕಾರಣವಾಗುತ್ತಿರುವುದನ್ನು ಪ್ರತಿಭಾ ಗುರುತಿಸುತ್ತಾರೆ. ಕ್ರೌರ್ಯವು ಆಯುಧಗಳಲ್ಲಿ ಮಾತ್ರವೇ ಅಲ್ಲದೆ ಮನಸ್ಥಿತಿಯಲ್ಲಿಯೂ ಹೊಕ್ಕಿರುವುದನ್ನು ಅವರ ಇಲ್ಲಿನ ಬಹುತೇಕ ಕವಿತೆಗಳು ಗುರುತಿಸುತ್ತವೆ.

ದೇಶಭಕ್ತ ಸೂಳೆಮಕ್ಕಳ ಗದ್ಯಗೀತೆ ಅಂತ ಬರೆದ್ರಲ್ಲ ಸರ್ ಈಗ ಬರೀರಿ ನೋಡೋಣ ಟ್ರಾಲ್ ಯುಗದ ಜಗದ ಝನ್ಡಾ ಉಂಚಾ ರಹೇ ಹಮಾರಾ (ಇಲ್ಲಿದ್ದ ಕಾಡೇನಾಯ್ತು?)

ಇದು ಪ್ರತಿಭಾ ಅವರು ಜಗ್ಗಿಸಿ ಕೇಳುವ ಪರಿ.

ಆಧುನಿಕೋತ್ತರ ಸಮಾಜವು ಹೊಸ ಬಗೆಯ ಹಿಟ್ಲರ್ ವರಸೆಗಳನ್ನು ರೂಢಿಸಿಕೊಂಡು ಅವುಗಳನ್ನು ಸಹಜ ಜೀವನ ವ್ಯಾಪಾರಗಳಂತೆ ಒಗ್ಗಿಸುತ್ತಿರುವುದು ಹಿಂಸೆಗೆ ಕಾರಣವಾಗಿರುವುದನ್ನೂ ಅವರ ಕವಿತೆಗಳಿಲ್ಲಿ ಗುರುತಿಸುತ್ತವೆ. ಇಲ್ಲಿರುವ ಕೆಲವು ಕವಿತೆಗಳಲ್ಲಿ ಹಿಟ್ಲರ್ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಾನೆ ಎನ್ನುವುದನ್ನು ಗಮನಿಸಬೇಕು. (ಡಿಟೆಂಷನ್‌ ಕ್ಯಾಪಿನಲ್ಲಿ ಹಿಟ್ಲರನ ಮರಣ, ಹಿಟ್ಲರನ ರಾತ್ರಿಗಳು, ಚಕ್ರವ್ಯೂಹ ಮುಂತಾದ ಕವಿತೆಗಳನ್ನು ಗಮನಿಸಬಹುದು). ಈ ಬಗೆಯ ಫ್ಯಾಸಿಸಂ ನ್ಯಾಯಗಳನ್ನೇ ಬುಡಮೇಲು ಮಾಡಿ ತನಗೆ ಬೇಕಾದಂತೆ ನ್ಯಾಯಗಳನ್ನು ಬರೆಯಿಸುತ್ತದೆ. ಇಂತಹ ಪ್ರವೃತ್ತಿಯನ್ನು ಕವಿತೆ ಖಂಡಿಸಬೇಕೆನ್ನುವ ನಿಲುವು ಪ್ರತಿಭಾ ಅವರ ನಿಲುವು ಇಲ್ಲಿ ಖಚಿತವಾಗಿದೆ. ಆದುದರಿಂದ ಈ ಪ್ರಪಂಚದಲ್ಲಿ ಪ್ರಚಲಿತವಾಗಿರುವ ಕೌಬಾಯ್ಸ್​ಗಳ ಮಾನಭಂಗದ ಲಜ್ಜೆಗೆಟ್ಟ ಸಮರ್ಥನೆಯನ್ನು ಪ್ರತಿಭಾ ಖಂಡಿಸುತ್ತಾರೆ. ಆಧುನಿಕೋತ್ತರ ಸಮಾಜಗಳಲ್ಲಿ ಕಾಮವು ತನ್ನೆಲ್ಲ ಸತ್ವಗಳನ್ನು ಕಳೆದುಕೊಂಡು ಕೀಳಾದ ಪ್ರವೃತ್ತಿಯಾಗಿದೆ. ‘ಡಿಲಿಟ್‌ ಆಗುತ್ತದೆ ಶ್ರೀಗಳ ಆಶ್ರಮದ/ಹಿಂದಿನ ಕಾಂಡೋಮ್​ಗಳ  ರಾಶಿರಾಶಿ’ (ಕೌಬಾಯ್ಸ್ ಮತ್ತುಕಾಮಪುರಾಣ) ಹಾಗು ‘ಕಾಮಕ್ಕೂ ಇಲ್ಲಿ ಗುಪ್ತ ಕ್ಯಾಮೆರಾದ ವ್ಯಥೆ’ (ಎದ್ದೇಳು ಮಂಜುನಾಥ) ಎಂಬ ಸಾಲುಗಳುಇದನ್ನು ಪುಷ್ಟೀಕರಿಸುತ್ತವೆ. ಈ ಕವಿತಾಸಂಗ್ರಹದಲ್ಲಿನ ಕವಿತೆಗಳು ಸಮಕಾಲೀನ ಪುರಾಣವನ್ನು ಉದ್ದೇಶಿಸಿದಂತವು. ಹೊಸಗಾಲದ ಸಂಕಟಗಳನ್ನೂ ಸಂದಿಗ್ಧಗಳನ್ನೂ ತನ್ನ ಎಂದಿನ ಶೈಲಿಯ ಭಾಷೆಯಲ್ಲಿ ಇಲ್ಲಿನ ಕವಿತೆಗಳು ಹೇಳುತ್ತವೆ.

ಪ್ರತಿಭಾ ಅವರ ಕಾವ್ಯ ವಾಚಾಳಿಯಾಗಿರುವಂಥದ್ದು. ಅದು ಸದಾ ಮಾತಾಡುತ್ತಲೇ ಇರುತ್ತದೆ. ಹಾಗೆ ಮಾಡುತ್ತಲೇ ಓದುಗರಿಗೆ ‘ಸ್ಪೇಸ್’ ಕೊಡುವುದು ಅವರ ಶೈಲಿ. ‘ನರಕದಲ್ಲಿ’ ಎನ್ನುವ ಕವಿತೆಯಲ್ಲಿ ಹೇಳುವಂತೆ ಅವರು ಬರೆಯುವುದು ಮಾತಿನ ಭಾವಗೀತವಲ್ಲ. ಆದರೆ ಮಾತು ಚಿಲ್ಲನೆ ಸಿಡಿಯುತ್ತದೆ; ಯಾರಿಗೆ ಮುಟ್ಟಬೇಕೊ ಅವರಿಗೆ ಮುಟ್ಟುವಂತೆ, ಸ್ವಗತದಂತೆ ಬರುತ್ತದೆ. ಅವರ ಧಾಟಿ ನೋಡಿ; ‘ನಿಮ್ಮ ನಿಮ್ಮತನುವ ಸಂತೈಸಿಕೊಂಡು ನಿಮ್ಮ ನಿಮ್ಮ ಮನವ ನಿಯಂತ್ರಿಸಿಕೊಂಡು’, ‘ಕೇಶಪಾಶ ಪ್ರಪಂಚದ ಮಾತಲ್ಲಇದು’ ‘ನಡುವೆ ಸುಳಿವಾತ್ಮಕ್ಕೆ ಲಿಂಗವಿಲ್ಲ’, ‘ಪರಿಣತಮತಿಗಳ್’, ‘ಕಂಬದ ಮೇಲಿನ ಗೊಂಬಿಯೇ’, ‘ಎಲ್ಲಚಿತ್ತಾರವನ್ನು ಮಸಿ ನುಂಗಿದಆರೋಪ ಹೊತ್ತು/ನಗೀನವಿಲು ಕುಣಿಯುತ್ತಿತ್ತುಆಡುತ್ತಿತ್ತು’ ಹೀಗೆ. ಪ್ರತಿಭಾ ಹೀಗೆ ಮಾತಲ್ಲೇ ಮಥಿಸಿ ಮಥಿಸಿ ಎದುರಿಗಿದ್ದವರ ಮಾತುಗಳನ್ನೂ ಕಾವ್ಯ ಮಾಡುತ್ತಾ ಹೋಗುತ್ತಾರೆ. ಈ ಸಂಕಲನದ ಮೊದಲ ಪದ್ಯದಲ್ಲಿ ಬರಹಗಾರರೊಬ್ಬರು ‘ಕಳ್ ಲೌಡಿ’ ಎಂದು ಬೈದಿದನ್ನೂ ಕಲಾಸಿಪಾಳ್ಯದ ಸೂಳೆಯೊಬ್ಬಳು ‘ಕಳ್ಮುಂಡೆ ದುಡ್ಡಿನ್‌ ಅಹಂಕಾರ ನಿನಗೆ’ ಅಂತ ಬೈದಿದನ್ನೂ ಪ್ರತಿಭಾ ಒತ್ತಟ್ಟಿಗಿಟ್ಟು ತೋರಿಸುವ ರೀತಿ ಅವರ ಕುಶಲತೆಯನ್ನು ತೋರುತ್ತದೆ.

ಪ್ರತಿಭಾ ಆತ್ಮಕಥನದ ಆಯ್ದ ಭಾಗ : Autobiography : ಅಭಿಜ್ಞಾನ ; ‘ಅವತ್ತು ಎರಡು ಗಂಟೆಯಾದರೂ ಬಾಗಿಲು ತೆರೆಯಲಿಲ್ಲ ಅವನು’

ಇದನ್ನೂ ಓದಿ : Odinangala : ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದಲ್ಲಿ ಸೋಲಿಗರ ಚಿತ್ರಗಳನ್ನು ಹರವಿಟ್ಟಿದ್ದಾರೆ ಎಸ್ಆರ್ ವಿಜಯಶಂಕರ

ಇದನ್ನೂ ಓದಿ : ವರ್ಷಾಂತ್ಯ ವಿಶೇಷ 2020;ಓದಿನಂಗಳ’ದಲ್ಲಿ ಕಥೆಗಾರ ಅಮರೇಶ ನುಗಡೋಣಿ

Published On - 9:19 am, Fri, 31 December 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!