ಭಾರತದ ಆಟೊಮೊಬೈಲ್ ಮಾರುಕಟ್ಟೆ ಗಾತ್ರ ಅಲ್ಪಸಮಯದಲ್ಲಿ ದ್ವಿಗುಣಗೊಳ್ಳುವ ನಿರೀಕ್ಷೆ
Automobile industry of India: ಭಾರತದ ವಾಹನ ಉದ್ಯಮ ಗಣನೀಯರವಾಗಿ ಬೆಳವಣಿಗೆ ಹೊಂದುತ್ತಿದ್ದು, 2030ರೊಳಗೆ ಇದರ ಗಾತ್ರ 600 ಬಿಲಿಯನ್ ಡಾಲರ್ ಆಗಲಿದೆ. ಬಿಸಿಜಿ ವರದಿಯೊಂದರ ಪ್ರಕಾರ, ಇವಿ ಸೇರಿದಂತೆ ಹಲವು ಸೆಕ್ಟರ್ನಲ್ಲಿ ಭಾರತದ ಮೊಬಿಲಿಟಿ ಕ್ಷೇತ್ರ ಬಲ ಪಡೆಯುತ್ತಿದೆ. ಸ್ಥಳೀಯವಾಗಿ ವಾಹನಗಳ ತಯಾರಿಕೆ ನಡೆಯುತ್ತಿರುವುದು ಮಾತ್ರವಲ್ಲ, ರಫ್ತು ಪ್ರಮಾಣವೂ ಸಖತ್ತಾಗಿ ಏರಿಕೆ ಆಗುತ್ತಿದೆ.
ನವದೆಹಲಿ, ಜನವರಿ 19: ಇನ್ನು ನಾಲ್ಕೈದು ವರ್ಷದ ಅಂತರದಲ್ಲಿ ಭಾರತದ ಮೊಬಿಲಿಟಿ ಉದ್ಯಮದ ಗಾತ್ರ ಎರಡು ಪಟ್ಟು ಹೆಚ್ಚಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಗೂಗಲ್ ಅಂಡ್ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ಪ್ರಕಟಿಸಿದ ಥಿಂಕ್ ಮೊಬಿಲಿಟಿ ಎನ್ನುವ ವರದಿ ಪ್ರಕಾರ ಭಾರತದ ಮೊಬಿಲಿಟಿ ಉದ್ಯಮದ ಮಾರುಕಟ್ಟೆ 2030ರೊಳಗೆ 600 ಬಿಲಿಯನ್ ಡಾಲರ್ ಗಾತ್ರಕ್ಕೆ ಬೆಳೆಯಲಿದೆ ಎಂದು ನಿರೀಕ್ಷಿಸಿದೆ. ಜಾಗತಿಕವಾಗಿ ಇರುವ ಟ್ರೆಂಡ್ಗಿಂತ ಭಾರತದಲ್ಲಿ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ಸಾಂಪ್ರದಾಯಿಕ ವಾಹನ ಮಾರುಕಟ್ಟೆಯಿಂದಲೂ ಆದಾಯ ಬರುತ್ತದೆ. ಉದಯೋನ್ಮುಖ ಮಾರುಕಟ್ಟೆಗಳಿಂದಲೂ ಪುಷ್ಟಿ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಭಾರತವು ಈಗಾಗಲೇ ವಿಶ್ವದ ಮೂರನೇ ಅತಿದೊಡ್ಡ ಆಟೊಮೊಬೈಲ್ ಉದ್ಯಮ ಹೊಂದಿದೆ. ಮುಂದಿನ ಕೆಲ ವರ್ಷಗಳಲ್ಲಿ ಭಾರತ ಸಾಕಷ್ಟು ಪರಿವರ್ತನೆಯ ಕಾಲಘಟ್ಟಕ್ಕೆ ಹೋಗಲಿದೆ. ಎಲೆಕ್ಟ್ರಿಕ್ ವಾಹನ, ಡಿಜಿಟಲ್ ಮತ್ತು ಎಐ ಕ್ಷೇತ್ರದಲ್ಲಿ ಆಗುತ್ತಿರುವ ಆವಿಷ್ಕಾರಗಳು ಭಾರತದ ಮೊಬಿಲಿಟಿ ಉದ್ಯಮಕ್ಕೆ ಸಖತ್ ಬಲ ಒದಗಿಸಲಿವೆ. ಭಾರತೀಯ ವಾಹನ ಕಂಪನಿಗಳು ಭಾರತೀಯ ಗ್ರಾಹಕರ ವಿಶೇಷ ಅಗತ್ಯಗಳಿಗೆ ತಕ್ಕಂತೆ ಉತ್ಪನ್ನಗಳನ್ನು ನೀಡುವುದು ಅಗತ್ಯ ಇದೆ ಎಂದು ಬಿಸಿಜಿ ಸಂಸ್ಥೆಯ ಎಂಡಿಯಾಗಿರುವ ನಟರಾಜನ್ ಶಂಕರ್ ಹೇಳುತ್ತಾರೆ.
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2025
ನವದೆಹಲಿಯಲ್ಲಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2025 ಕಾರ್ಯಕ್ರಮ ನಡೆಯುತ್ತಿದ್ದು, ಈ ಕ್ಷೇತ್ರದ ಇಡೀ ಮೌಲ್ಯ ಸರಪಳಿಯಲ್ಲಿರುವ ಎಲ್ಲಾ ಉದ್ಯಮಗಳನ್ನು ಒಗ್ಗೂಡಿಸುವ ಕೆಲಸ ಮಾಡಿದೆ. ಕೇಂದ್ರ ಸರ್ಕಾರ ನೀಡುತ್ತಿರುವ ಉತ್ತೇಜನದಿಂದ ಭಾರತದಲ್ಲಿ ಸ್ಥಳೀಯವಾಗಿ ವಾಹನಗಳನ್ನು ತಯಾರಿಸುತ್ತಿರುವುದು ಮಾತ್ರವಲ್ಲದೇ, ವಾಹನಗಳ ರಫ್ತು ಕೂಡ ಗಣನೀಯವಾಗಿ ಹೆಚ್ಚುತ್ತಿರುವುದನ್ನು ಈ ಉದ್ಯಮದ ನಾಯಕರು ಗುರುತಿಸಿ ಮೆಚ್ಚುಗೆ ಪಟ್ಟಿದ್ದಾರೆ.
ಇದನ್ನೂ ಓದಿ: ಕೊನೆಗೂ ಬಹಿರಂಗವಾಯಿತು ಹ್ಯುಂಡೈ ಕ್ರೆಟಾ EV ಬೆಲೆ: ಯಾವಾಗ ಖರೀದಿಸಬಹುದು?, ಎಷ್ಟು ಕಿಮೀ ಓಡುತ್ತೆ?
ಕಳೆದ ನಾಲ್ಕು ವರ್ಷದಲ್ಲಿ ಭಾರತದ ಆಟೊಮೊಬೈಲ್ ಕ್ಷೇತ್ರಕ್ಕೆ 36 ಬಿಲಿಯನ್ ಡಾಲರ್ಗಿಂತ ಹೆಚ್ಚಿನ ಮೊತ್ತದ ವಿದೇಶೀ ನೇರ ಹೂಡಿಕೆ (ಎಫ್ಡಿಐ) ಹರಿದುಬಂದಿದೆ. ಮುಂಬರುವ ವರ್ಷಗಳಲ್ಲಿ ಈ ಹೂಡಿಕೆ ಪ್ರಮಾಣ ಹಲವು ಪಟ್ಟು ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ. ಗಮನಾರ್ಹ ಸಂಗತಿ ಎಂದರೆ, ಭಾರತದ ಉತ್ಪಾದನಾ ಜಿಡಿಪಿಯಲ್ಲಿ ಅರ್ಧದಷ್ಟು ಪಾಲು ಆಟೊಮೊಬೈಲ್ ಉದ್ಯಮದ್ದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ