Gandhiji : ಅಭಿಜ್ಞಾನ ; ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ‘ಗಾಂಧಿ ಕಥನ’ದ ಆಯ್ದ ಭಾಗ

Gandhiji : ಅಭಿಜ್ಞಾನ ; ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ‘ಗಾಂಧಿ ಕಥನ’ದ ಆಯ್ದ ಭಾಗ
ಗಾಂಧೀಜಿ

Gandhi Kathana : ನಾನೂ ಒಬ್ಬ ಅರಾಜಕನೇ. ಆದರೆ ಬೇರೆ ರೀತಿಯ ಅರಾಜಕ. ಅರಾಜಕರು ಪರಮ ದೇಶಭಕ್ತರು. ದೇಶಕ್ಕಾಗಿ ತಮ್ಮ ಪ್ರಾಣ ತೆರಲೂ ಸಿದ್ಧವಾದ ಧೈರ್ಯವಂತರು. ತ್ಯಾಗಶೀಲರು. ಆದರೆ ಅವರಲ್ಲಿ ಹಲವರು ಹಾದಿ ತಪ್ಪಿ ಹಿಂಸೆಗೆ ಇಳಿದಿದ್ದಾರೆ.

ಶ್ರೀದೇವಿ ಕಳಸದ | Shridevi Kalasad

|

Dec 31, 2021 | 2:13 PM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ನಿನ್ನೆಯಷ್ಟೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾದ ಡಿ.ಎಸ್. ನಾಗಭೂಷಣ ಅವರ ‘ಗಾಂಧೀ ಕಥನ’ದಿಂದ.

*

ಇನ್ನು ಅಲ್ಲಿ ಕೂರಲಾಗದ ಮಹಾರಾಜರುಗಳ ಮತ್ತು ಅಧಿಕಾರಿಗಳ ಸಮೂಹದ ಬಹುಪಾಲು ಗಣ್ಯರು ವೇದಿಕೆಯಿಂದ ಇಳಿಯಲಾರಂಭಿಸಿದರು. ಗಾಂಧಿ ತಮ್ಮ ಮಾತುಗಳನ್ನು ಮುಂದುವರಿಸಿದ್ದರು. ‘ಇಂತಹ ಉಸಿರುಗಟ್ಟಿಸುವ ವಾತಾವರಣ ಈ ದೇಶದಲ್ಲಿ ಒಂದು ಅರಾಜಕ ಗುಂಪನ್ನು ಸೃಷ್ಟಿಸಿದ್ದರೆ ಆಶ್ಚರ್ಯವಿಲ್ಲ. ನಾನೂ ಒಬ್ಬ ಅರಾಜಕನೇ. ಆದರೆ ಬೇರೆ ರೀತಿಯ ಅರಾಜಕ. ಅರಾಜಕರು ಪರಮ ದೇಶಭಕ್ತರು. ದೇಶಕ್ಕಾಗಿ ತಮ್ಮ ಪ್ರಾಣ ತೆರಲೂ ಸಿದ್ಧವಾದ ಧೈರ್ಯವಂತರು. ತ್ಯಾಗಶೀಲರು. ಆದರೆ ಅವರಲ್ಲಿ ಹಲವರು ಹಾದಿ ತಪ್ಪಿ ಹಿಂಸೆಗೆ ಇಳಿದಿದ್ದಾರೆ. ದೇಶಭಕ್ತರ ಸಾವು ಘನತೆಯಿಂದ ಕೂಡಿರಬೇಕು. ಚೂರಿ ಅಥವಾ ಬಾಂಬ್, ಆ ಘನತೆ ನೀಡಲಾರವು. ಘನತೆ ಇಲ್ಲದ ತ್ಯಾಗದಿಂದ ಘನತೆಯುಳ್ಳ ದೇಶ ಕಟ್ಟಲಾಗದು. ನಮ್ಮ ಧರ್ಮಗ್ರಂಥಗಳೂ ಈ ಮಾರ್ಗವನ್ನು ಒಪ್ಪುವುದಿಲ್ಲ. ಒಪ್ಪುವುದು ಎನ್ನುವವರೂ ಇರಬಹುದು. ಅದು ತಪ್ಪು ನಿರೂಪಣೆ. ಹಿಂದೂ ಧರ್ಮ ಅಹಿಂಸೆಯ ಧರ್ಮ ಎಂಬುದು ನನ್ನ ಪರಮ ನಂಬಿಕೆ’ ಗಾಂಧಿ ಮಾತು ಮುಂದುವರೆಸುವ ಮುನ್ನವೇ ವಿರುದ್ಧ ದಿಕ್ಕುಗಳಿಂದ ‘ಗಾಂಧಿ, ಕೂತುಕೊಳ್ಳಿ ಸಾಕು! ಎಂಬ ಮತ್ತು ‘ನೀವು ಮುಂದುವರೆಸಿ’ ಎಂಬ ಕೂಗುಗಳ ಕೇಳಿಬಂದವು. ಗಾಂಧಿ ಅನಿಬೆಸೆಂಟರ ಕಡೆ ನೋಡಿದಾಗ ಅವರು, ‘ಸಾಕು ನಿಲ್ಲಿಸಿ.. ಕೂತುಕೊಳ್ಳಿ!’ ಎಂದು ಬೇಸರದಿಂದಲೇ ಹೇಳಿದರು. ಗಾಂಧಿ ಅಧ್ಯಕ್ಷರ ಆದೇಶಕ್ಕಾಗಿ ಕಾಯುತ್ತಿದ್ದೇನೆ ಎಂದಾಗ, ಅಧ್ಯಕ್ಷತೆ ವಹಿಸಿದ್ದ ದರ್ಭಾಂಗದ ಮಹಾರಾಜ ನಿಮ್ಮ ಉದ್ದೇಶ ಏನು ಹೇಳಿ ಮುಗಿಸಿ’ ಎಂದ. ಗಾಂಧಿ, ‘ನಾನು ಈ ಮಾತುಗಳ ಮೂಲಕ ದೇಶ ಮತ್ತು ಸಾಮ್ರಾಜ್ಯದ ಸೇವೆ ಮಾಡುತ್ತಿದ್ದೇನೆ ಎಂದುಕೊಂಡಿದ್ದೇನೆ’ ಮುಂತಾಗಿ ವಿವರಿಸುತ್ತಿದ್ದಾಗಲೇ ಸಭೆ ವಂದನಾರ್ಪಣೆಯ ಔಪಚಾರಿಕತೆಯೂ ಲ್ಲದೆ ಬರಖಾಸ್ತಾಯಿತು.

Abhijnana excerpt from Gandhi Kathana by Kendra Sahitya Academy Awardee Kannada Writer DS Nagabhushana

ಗಾಂಧಿ ಕಥನ

ಈ ಭಾಷಣವನ್ನು ಅರೆಬರೆ ಕೇಳಿಸಿಕೊಂಡ ಕೆಲ ಅಧಿಕಾರಿಗಳು ಗಾಂಧಿ ಉಗ್ರಗಾಮಿ ಗುಂಪಿಗೆ ಕುಮ್ಮಕ್ಕು ಕೊಟ್ಟಿದ್ಧಾರೆ ಎಂಬ ದೂರನ್ನು ವೈಸ್​ರಾಯ್​ಗೆ ಸಲ್ಲಿಸಿದರಾದರೂ, ವಾರಣಾಸಿಯ ಪೊಲೀಸ್ ಕಮೀಷ್​ನರ್ ತನ್ನ ವರದಿಯಲ್ಲಿ, ಗಾಂಧಿ ಅಂದು ಕೆಲ ವಿಷಯಗಳಲ್ಲಿ ತಮ್ಮ ಮಿತಿಮೀರಿ ಮಾತಾಡಿದರಾದರೂ, ಅವರ ಒಟ್ಟು ಮಾತುಗಳಲ್ಲಿ ಸಾಮ್ರಾಜ್ಯಕ್ಕೆ ದ್ರೋಹ ಬಗೆಯುವ ಅಂಶವೇನೂ ಇರಲಿಲ್ಲ ಎಂದು ಹೇಳಿದರೆ, ಲೆ. ಗವರ್ನರ್, ಇದನ್ನು ಇಲ್ಲಿಗೆ ಮುಕ್ತಾಯ ಮಾಡುವುದೇ ಒಳ್ಳೆಯದು ಎಂದು ಸೂಚಿಸಿದ್ದರು. ಆದರೆ ಗಾಂಧಿ ತಮ್ಮ ಆತ್ಮಚರಿತ್ರೆ, ‘ಸತ್ಯದೊಂದಿಗೆ ನನ್ನ ಪ್ರಯೋಗ’ದಲ್ಲಿ ಈ ಭಾಷಣದ ಪ್ರಸ್ತಾಪ ಮಾಡದಿರುವುದು ಕುತೂಹಲಕಾರಿಯಾದ ಸಂಗತಿ ಎಂದು ತಮ್ಮ ‘ಗಾಂಧಿ’ ಪುಸ್ತಕದಲ್ಲಿ ಹೇಳುತ್ತಾರೆ. ಎರಿಕ್ ಎರಿಕ್ಸನ್ ಎಂಬ ಚಿಂತಕ. ಮುಂದೆ ಅವರು ಅಭಿಪ್ರಾಯಪಟ್ಟಂತೆ, ಈ ಭಾಷಣವನ್ನು ಭಾವಾವೇಶಕ್ಕೆ ತುತ್ತಾಗಿ ಮಾಡಿ ಅರಾಜಕ ಗುಂಪಿಗೆ ಕುಮ್ಮಕ್ಕು ನೀಡಿದೆನೇನೋ ಎಂಬ ಸಂದೇಹ ಗಾಂಧಿಯವರಿಗೆ ಉಂಟಾಗಿರಬೇಕು.

ಸೌಜನ್ಯ : ಮುನಿಸ್ವಾಮಿ ಅಂಡ್ ಸನ್ಸ್, ಬಸವನಗುಡಿ 

ಇದನ್ನೂ ಓದಿ : Marathi : ಅಭಿಜ್ಞಾನ ; ‘ಸಮರಸವಾಗುವುದು ನನ್ನ ಉದ್ದೇಶವಾಗಿತ್ತೇ ವಿನಾ ಪ್ರತ್ಯೇಕತೆಯನ್ನು ರಕ್ಷಿಸುವುದಾಗಿರಲಿಲ್ಲ ’

Follow us on

Most Read Stories

Click on your DTH Provider to Add TV9 Kannada