Islam : ಅಭಿಜ್ಞಾನ ; ‘ಬುರ್ಕಾ ಹಾಕಿ ಪುಸ್ತಕದ ಅಂಗಡಿಯ ಮುಂದೆ ನಿಂತ ನನ್ನನ್ನೆಲ್ಲರೂ ವಿಚಿತ್ರವಾಗಿ ನೋಡುತ್ತಿದ್ದರು’

Islam : ಅಭಿಜ್ಞಾನ ; ‘ಬುರ್ಕಾ ಹಾಕಿ ಪುಸ್ತಕದ ಅಂಗಡಿಯ ಮುಂದೆ ನಿಂತ ನನ್ನನ್ನೆಲ್ಲರೂ ವಿಚಿತ್ರವಾಗಿ ನೋಡುತ್ತಿದ್ದರು’
ಲೇಖಕಿ ಸಾರಾ ಅಬೂಬಕ್ಕರ್

Woman : ಇಸ್ಲಾಂ ಧರ್ಮದ ಎಲ್ಲ ನಿಯಮಗಳೂ ಸ್ತ್ರೀ ಪುರುಷರೆಲ್ಲರಿಗೂ ಏಕಪ್ರಕಾರವಾಗಿ ಅನ್ವಯಿಸುವಾಗ ಗಂಡಸರು ಮಾತ್ರ ಸಿನಿಮಾ ನೋಡುವುದು ಸರಿಯೇ ? ನನಗಿಲ್ಲದ ಸೌಲಭ್ಯವನ್ನು ನೀವೂ ಬಳಸಿಕೊಳ್ಳಬಾರದು ಎಂದು ನನ್ನ ಗಂಡನೊಡನೆ ವಾದ ಮಾಡುತ್ತಿದ್ದೆ. ಆದರೆ ಅವರು ನನ್ನೊಡನೆ ಸುಳ್ಳು ಹೇಳಿಯಾದರೂ ಸಿನಿಮಾಕ್ಕೆ ಹೋಗುತ್ತಿದ್ದರು.’ ಸಾರಾ ಅಬೂಬಕ್ಕರ್

ಶ್ರೀದೇವಿ ಕಳಸದ | Shridevi Kalasad

|

Dec 28, 2021 | 11:10 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com
*
ಡಾ. ವಿಜಯಾ ದಬ್ಬೆ ಸಂಪಾದಿಸಿದ ‘ಲೇಖ-ಲೋಕ’ ದಲ್ಲಿ ಲೇಖಕಿ ಸಾರಾ ಅಬೂಬಕ್ಕರ್ ಬರೆದ ಆತ್ಮಕಥನದ ಆಯ್ದ ಭಾಗ.
*

ಮದುವೆಯಾದ ಬಳಿಕ ಮನೆಯ ಈ ಬಂಧನದಿಂದ ಬಿಡುಗಡೆ ದೊರೆಯಬಹುದೆಂದುಕೊಂಡಿದ್ದೆ. ಗಂಡ ವಿದ್ಯಾವಂತನಾದರೆ ಆತನಿಗೆ ಧರ್ಮಾಂಧತೆ ಇರಲಾರದು; ಘೋಷಾ ಹಾಕಬೇಕೆಂದು ಪೀಡಿಸಲಾರನೆಂದುಕೊಂಡಿದ್ದೆ. ಹೀಗಾಗಿಯೇ ವಿದ್ಯಾವಂತ ಗಂಡನನ್ನು ಬಯಸಿದ್ದೆ. ಆದರೆ ನಾನು ಬಯಸಿದ್ದೊಂದೂ ಆಗಲೇ ಇಲ್ಲ. ಮದುವೆಯ ಮರುದಿನ ಪ್ರಥಮಬಾರಿ ಗಂಡನ ಮನೆಗೆ ಹೋಗಬೇಕಾದರೆ ಬುರುಕಾ ತೊಡಿಸಿಯೇ ನನ್ನನ್ನು ಕರೆದೊಯ್ದರು! ನಮ್ಮೂರಿನಲ್ಲಿ ಆಗ ಬುರ್ಕಾದ ಹಾವಳಿ ಅಷ್ಟೊಂದಿರಲಿಲ್ಲ. ಆದರೆ ಮಂಗಳೂರಿನಲ್ಲಿ ಆಗ ಹತ್ತು ವರ್ಷ ಪ್ರಾಯ ದಾಟಿದ ಹೆಣ್ಣು ಮಕ್ಕಳು ಬುರ್ಕಾ ಹಾಕುವುದು ಕಡ್ಡಾಯವಾಗಿತ್ತು. ನನ್ನ ಅತ್ತೆಯಮನೆ ಸುಮಾರು ನಾಲ್ವತ್ತಕ್ಕಿಂತ ಮೇಲ್ಪಟ್ಟು ಜನರಿದ್ದ ಅವಿಭಕ್ತ ಕುಟುಂಬದ ಮನೆಯಾಗಿತ್ತು. ಮನೆಯ ಹೆಂಗಸರು, ಹೆಣ್ಣುಮಕ್ಕಳೆಲ್ಲರೂ ನಿರಕ್ಷರಿಗಳಾಗಿದ್ದರು. ಅವರ ದೃಷ್ಟಿಯಲ್ಲಿ ಓದುವುದೆಂದರೆ ಖುರ್‌ಆನ್ ಓದುವುದು ಮಾತ್ರ. ಹೆಣ್ಣುಮಕ್ಕಳು ಬೇರೇನನ್ನಾದರೂ ಓದುವುದು ಪಾಪವೆಂದೇ ಪರಿಗಣಿಸಲ್ಪಡುತ್ತಿತ್ತು. ಆದರೆ ಅವರಿಗೆ ಧಾರ್ಮಿಕ ವಿದ್ಯಾಭ್ಯಾಸ ಚೆನ್ನಾಗಿತ್ತು. ಹುಡುಗಿ ತಾಯಿಯ ಮನೆಯಲ್ಲಿ ಯಾವ್ಯಾವ ಸೌಕರ್ಯಗಳನ್ನು ಹೊಂದಿದ್ದಳೋ ಅದನ್ನು ಗಂಡನ ಮನೆಯಲ್ಲೂ ಒದಗಿಸಿಕೊಡಬೇಕೆಂಬ ಧಾರ್ಮಿಕ ಬೋಧನೆ ಇದ್ದುದರಿಂದ ನಾನು ಗಂಡನ ಮನೆಯಲ್ಲಿ ಸುಖವಾಗಿಯೇ ಇದ್ದೆನೆನ್ನಬಹುದು.

ಆದರೆ ನನ್ನ ಓದಿನ ದಾಹಕ್ಕೆ ಅಲ್ಲಿ ಪರಿಹಾರ ದೊರೆಯುತ್ತಿರಲಿಲ್ಲ. ಆಗ ಅಲ್ಲಿಗೆ ನವಭಾರತ ಎಂಬ ಪತ್ರಿಕೆ ಬರುತ್ತಿತ್ತು. ಇದು ಗಂಡಸರ ಓದಿಗಾಗಿ ಮಾತ್ರ, ಮನೆಯ ಒಳಭಾಗಕ್ಕೆ ಅದನ್ನು ತರುತ್ತಿರಲಿಲ್ಲ. ಹೆಂಗಸರು ಮನೆಯ ಒಳಭಾಗದಿಂದ ಚಾವಡಿಗೆ, ಅಂದರೆ ಗಂಡಸರ ಭಾಗಕ್ಕೆ ಕಾಲಿಡುವ ಪದ್ಧತಿಯಿಲ್ಲ. ಹೀಗಾಗಿ ಮನೆಯ ಗಂಡಸರೆಲ್ಲರೂ ಹೊರಹೋದ ಬಳಿಕ ಅಲ್ಲಿ ಬೇರೆ ಗಂಡಸರಿಲ್ಲವೆಂದು ಖಾತ್ರಿ ಮಾಡಿಕೊಂಡು ಈ ಪತ್ರಿಕೆಯನ್ನು ಹುಡುಕುತ್ತಿದ್ದೆ. ಕೆಲವೊಮ್ಮೆ ಪುಟ್ಟಮಕ್ಕಳು ಹರಿದುಹಾಕಿದ ಪತ್ರಿಕೆಯ ಚೂರುಗಳಷ್ಟೆ ನನ್ನ ಕೈಗೆ ದೊರೆಯುತ್ತಿದ್ದವು.

ನನ್ನ ತವರಿನಲ್ಲಿ ಎಲ್ಲರಿಗೂ ಸಾಹಿತ್ಯದಲ್ಲಿ ಆಸಕ್ತಿ ಇತ್ತು. ಅರಬಿ ಅಕ್ಷರದಲ್ಲಿ ಮಲಯಾಳ ಭಾಷೆಯಲ್ಲಿ ಬರುತ್ತಿದ್ದ ಕತೆ ಪುಸ್ತಕ ಮತ್ತು ಜಾನಪದ ಹಾಡು ಮಾಪಿಳ ಪಾಟ್ಟುಗಳ ಪುಸ್ತಕಗಳನ್ನು ನನ್ನ ತಾಯಿ ತುಂಬ ಓದುತ್ತಿದ್ದರು. ಅವರಿಗೂ ಕೂಡ ಧರ್ಮಾಂಧತೆ ಇರಲಿಲ್ಲ. ಊರಿನ ಹಿಂದೂ ಮತ್ತು ಮುಸ್ಲಿಂ ಮಹಿಳೆಯರೆಲ್ಲರಿಗೂ ನನ್ನ ತಾಯಿ ಹಿರಿಯಕ್ಕನಂತಿದ್ದರು.

ಇಂತಹ ವಾತಾವರಣದಿಂದ ಬಂದ ನನಗೆ ಮಂಗಳೂರಿನ ಗಂಡನ ಮನೆಯ ಈ ವಾತಾವರಣಕ್ಕೆ ಹೊಂದಿಕೊಳ್ಳುವುದು ತುಂಬಾ ಕಷ್ಟವಾಯಿತು. ಬಂಧನದಿಂದ ಬಿಡುಗಡೆ ಪಡೆಯಬಹುದೆಂದುಕೊಂಡಿದ್ದರೆ ಮತ್ತಷ್ಟು ಬಂಧನಕ್ಕೆ ತಳ್ಳಲ್ಪಟ್ಟೆ, ಹೆಂಗಸರು ಸಿನಿಮಾಕ್ಕೆ ಹೋಗುವ ಮಾತನ್ನೇ ಎತ್ತುವಂತಿರಲಿಲ್ಲ. ಸಂಬಂಧಿಕರ ಮನೆಗಾಗಲಿ, ಮದುವೆಗಾಗಲಿ ಹಿರಿಯರು ಮಾತ್ರ ಹೋಗುವ ಪದ್ಧತಿ. ವಿದ್ಯಾವಂತರಿಗೆಲ್ಲರಿಗೂ ಓದುವ ಹುಚ್ಚಿರುತ್ತದೆ ಎಂದುಕೊಂಡಿದ್ದೆ. ಆದರೆ ವಿದ್ಯಾವಂತರು ಕೇವಲ ಪುಸ್ತಕದ ಬದನೆಕಾಯಿ ಮಾತ್ರ ಬಲ್ಲವರಾಗಿರ ಬಹುದು ಎಂಬುದು ಗೊತ್ತಾದದ್ದು ಅಲ್ಲಿಗೆ ಬಂದ ಮೇಲೆ. ಆದರೆ ನನ್ನ ಗಂಡ ಮತ್ತು ಮನೆಯ ಇತರ ಗಂಡಸರು, ಗಂಡುಮಕ್ಕಳು ಧಾರಾಳಾಗಿ ಸಿನಿಮಾ ನೋಡುತ್ತಿದ್ದರು. ಇಸ್ಲಾಂ ಧರ್ಮದ ಎಲ್ಲ ನಿಯಮಗಳೂ ಸ್ತ್ರೀ ಪುರುಷರೆಲ್ಲರಿಗೂ ಏಕಪ್ರಕಾರವಾಗಿ ಅನ್ವಯಿಸುವಾಗ ಗಂಡಸರು ಮಾತ್ರ ಸಿನಿಮಾ ನೋಡುವುದು ಸರಿಯೇ ? ನನಗಿಲ್ಲದ ಸೌಲಭ್ಯವನ್ನು ನೀವೂ ಬಳಸಿಕೊಳ್ಳಬಾರದು ಎಂದು ನನ್ನ ಗಂಡನೊಡನೆ ವಾದ ಮಾಡುತ್ತಿದ್ದೆ. ಆದರೆ ಅವರು ನನ್ನೊಡನೆ ಸುಳ್ಳು ಹೇಳಿಯಾದರೂ ಸಿನಿಮಾಕ್ಕೆ ಹೋಗುತ್ತಿದ್ದರು.

Abhijnana excerpt of Kannada Wrtier Sara Abubakar autobiography Lekha Loka edited by Dr Vijaya Dabbe

ಕೃತಿಯ ಸಂಪಾದಕಿ ವಿಜಯಾ ದಬ್ಬೆ

ನನಗಾಗಿ ಅವರು ಗ್ರಂಥಾಲಯದ ಸದಸ್ಯರಾದರು. ಅಲ್ಲಿಂದ ಕೈಗೆ ದೊರೆತ ಪುಸ್ತಕ ತರುತ್ತಿದ್ದರು. ಅನಕೃ, ತರಾಸು, ಶಿವರಾಮ ಕಾರಂತ ಮುಂತಾದವರ ಕೃತಿಗಳ ಹೆಸರಿನ ಪಟ್ಟ ಮಾಡಿ ಅವರ ಕೈಯಲ್ಲಿಡುತ್ತಿದ್ದೆ. ಅವರು ಇನ್ಯಾವುದಾದರೂ ಪುಸ್ತಕ ತರುತ್ತಿದ್ದರು. ‘ಇದು ಕೃಷ್ಣರಾಯರ ಪುಸ್ತಕವಲ್ಲ ರಾಮರಾಯರದ್ದು’ ಎಂದರೆ ಕೃಷ್ಣ ಆದರೇನು, ರಾಮ ಆದರೇನು? ಎಲ್ಲ ಒಂದೇ ಅಲ್ಲವಾ? ಏನಾದರೂ ಓದಿದರೆ ಸೈ! ಎನ್ನುತ್ತಿದ್ದರು. ಇನ್ನೊಂದನ್ನು ಇದನ್ನು ಈ ಮೊದಲೇ ತಂದಿದ್ದಿರಲ್ಲಾ? ಎಂದರೆ ಒಮ್ಮೆ ಓದಿದ್ದನ್ನು ಇನ್ನೊಮ್ಮೆ ಓದಬಾರದಿ೦ದೆಯೇ? ಇನ್ನೂ ಒಂದೆರಡು ಬಾರಿ ಓದು! ಎನ್ನುತ್ತಿದ್ದರು.

ಊರಿಗೆ ಹೋಗುವಾಗ ಮತ್ತು ಹಿಂತಿರುಗುವಾಗ ರೈಲ್ವೇ ಸ್ಟೇಶನ್ನಿನ ಪುಸ್ತಕದಂಗಡಿಗಳಿಂದ ನನಗೆ ಬೇಕಾದ ಕೆಲವು ಪುಸ್ತಕಗಳನ್ನು ನಾನೇ ಕೊಂಡುಕೊಳ್ಳುತ್ತಿದ್ದೆ. ಅಲ್ಲಿ ಬುರ್ಕಾ ಹಾಕಿದ ಹೆಣ್ಣುಮಗಳೊಬ್ಬಳು ಪುಸ್ತಕದ ಅಂಗಡಿಯ ಮುಂದೆ ನಿಂತಿದ್ದರೆ ಎಲ್ಲರಿಗೂ ವಿಚಿತ್ರವಾಗಿ ಕಾಣುತ್ತಿತ್ತು. ಹೀಗಾಗಿ ಅಲ್ಲೂ ನಾನು ಹೆಚ್ಚುಹೊತ್ತು ನಿಲ್ಲಲು ಸಾಧ್ಯವಿರಲಿಲ್ಲ. ಅಂತೂ ಆ ದಿನ ಗಳಲ್ಲಿ ನನ್ನ ಬದುಕು ಖೈದಿಯ ಬದುಕಿನಂತಾಗಿತ್ತು. ಎಂದಷ್ಟೇ ಹೇಳಬಲ್ಲೆ. ನನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದಂತಹ ಆ ದಿನಗಳಲ್ಲಿ ಬಹಳ ಬೇಸರ ಬಂದಾಗ ನನ್ನ ಗಂಡನೊಡನೆ ಹೇಳುತ್ತಿದ್ದೆ. ನನಗೆಂದಾದರೂ ಅವಕಾಶ ದೊರೆತರೆ ನಾನು ಅನುಭವಿಸಿದ್ದೆಲ್ಲವನ್ನೂ ಬರಹದ ಮೂಲಕ ಬೆಳಕಿಗೊಡ್ಡುವ ಪ್ರಯತ್ನ ಮಾಡುವೆ!

ಮುಂದೆ ಮಕ್ಕಳು ಹುಟ್ಟಿದರು. ಕುಟುಂಬ ಯೋಜನೆಯ ಮಾತುಗಳನ್ನು ಆ ಮನೆಯಲ್ಲಿ ಎತ್ತುವಂತಿರಲಿಲ್ಲ. ಇಲ್ಲಿಂದ ಹೇಗೆ ಬಿಡುಗಡೆ ಪಡೆಯಬೇಕೆಂದೂ ತೋಚುತ್ತಿರಲಿಲ್ಲ. ಕೊನೆಗೊಮ್ಮೆ ಅಲ್ಲಿಂದ ಬಿಡುಗಡೆ ದೊರೆಯಿತು. ಗಂಡ ಸರಕಾರಿ ಹುದ್ದೆಯಲ್ಲಿದ್ದುದರಿಂದ 1963ರಲ್ಲಿ ಅವರಿಗೆ ಬೆಂಗಳೂರಿಗೆ ವರ್ಗ ಆಗಿ ಅಲ್ಲಿಗೆ ಬಂದೆವು. ಅಲ್ಲಿ ನಿರಾತಂಕವಾಗಿ ಕತೆ ಪುಸ್ತಕಗಳ ಓದು ಮುಂದುವರಿಯಿತು. ಒಂದೇ ವರ್ಷದಲ್ಲಿ ಪುನಃ ಮಂಗಳೂರಿಗೆ ಟ್ರಾನ್ಸಫರ್ ಆಯಿತು. ಈ ಬಾರಿ ಮಂಗಳೂರಿನ ಬಂದರು ಯೋಜನೆಯಲ್ಲಿ ಸರಕಾರೀ ಮನೆಯೂ ದೊರೆತು ಅಲ್ಲೇ ವಾಸ್ತವ್ಯ ಹೂಡಿದೆವು.

ಸೌಜನ್ಯ : ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು. 

ಇದನ್ನೂ ಓದಿ : Confession : ಅಭಿಜ್ಞಾನ ; ಪ್ರಗತಿ ಮತ್ತು ಪರಿಪೂರ್ಣತೆಗಳಿಗೆ ಅನಂತತೆಯಲ್ಲಿ ಯಾವ ಅರ್ಥವೂ ಇಲ್ಲ ದಿಕ್ಕೂ ಇಲ್ಲ

Follow us on

Most Read Stories

Click on your DTH Provider to Add TV9 Kannada