Ayyappa : ಅಭಿಜ್ಞಾನ ; ಯು. ಆರ್. ಅನಂತಮೂರ್ತಿಯವರ ‘ರಾಮು ಮತ್ತು ಅಯ್ಯಪ್ಪ ವ್ರತ’

Ayyappa : ಅಭಿಜ್ಞಾನ ; ಯು. ಆರ್. ಅನಂತಮೂರ್ತಿಯವರ ‘ರಾಮು ಮತ್ತು ಅಯ್ಯಪ್ಪ ವ್ರತ’
ಡಾ. ಯು. ಆರ್. ಅನಂತಮೂರ್ತಿ

Shabarimala : ‘ನಾಯಿ ಬಾಲ ಯಾವತ್ತೂ ಡೊಂಕೇ. ಆದರೆ ಈ ನಲವತ್ತು ದಿನಗಳಾದರೂ ನನ್ನ ಯಜಮಾನ ಕುಡಿಯುವುದನ್ನು ನಿಲ್ಲಿಸಿದ್ದಾನಲ್ಲ. ಅಷ್ಟೇ ನನಗೆ ಸಾಕು. ಪ್ರತೀ ವರ್ಷ ನಲವತ್ತು ದಿನ ಸ್ವಾಮಿಗೆ ನಡೆದುಕೊಳ್ಳಲಿ ಅಂತ ದೇವರಲ್ಲಿ ಕೇಳುತ್ತೇನೆ.’

ಶ್ರೀದೇವಿ ಕಳಸದ | Shridevi Kalasad

|

Nov 30, 2021 | 4:18 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗುತ್ತಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com 

ಖ್ಯಾತ ಸಾಹಿತಿ ಡಾ. ಯು. ಆರ್. ಅನಂತಮೂರ್ತಿ ಅವರ ಆತ್ಮಕಥನ ‘ಸುರಗಿ’ಯಿಂದ ‘ರಾಮು ಮತ್ತು ಅಯ್ಯಪ್ಪ ವ್ರತ’   

*

ಮೈಸೂರಿನಲ್ಲಿ ಪ್ರಾಧ್ಯಾಪಕನಾಗಿದ್ದ ನಾನು ರಾಮ ಎನ್ನುವ ದಲಿತ ನೌಕರನೊಬ್ಬನ ಜೊತೆ ಆಗೀಗ ತುಂಬ ಮಾತನಾಡುತ್ತಿದ್ದೆ. ವಿಶ್ವವಿದ್ಯಾಲಯದಲ್ಲಿ ನಮ್ಮ ಕೋಣೆಗಳನ್ನು ಸ್ವಚ್ಛ ಮಾಡುವುದು ಈತನ ಕೆಲಸ. ರಾಮನ ಹೆಂಡತಿಗೂ ಅದೇ ಕೆಲಸ. ಆದರೆ ಇಡೀ ಸಂಸಾರದ ನಿರ್ವಹಣೆ ಹೆಂಡತಿಯದ್ದು. ಯಾಕೆಂದರೆ ರಾಮ ಸಂಬಳ ಬಂದಿದ್ದೇ ಹೆಂಡತಿಗೆ ಕೊಂಚ ಹಣವನ್ನು ಕೊಟ್ಟು ಉಳಿದಿದ್ದನ್ನು ತನ್ನ ಗೆಳೆಯರ ಜತೆಗಿನ ಕುಡಿತದಲ್ಲಿ ಕಳೆದುಬಿಡುತ್ತಿದ್ದ. ಈ ರಾಮನಿಗೆ ರಾಜಕೀಯ ಪ್ರಜ್ಞೆಯೂ ಇತ್ತು. ಜನತಾ ಪಕ್ಷದ ಬೆಂಬಲಿಗನಾಗಿದ್ದ ನಾನು ಒಮ್ಮೆ ಅವನಿಗೆ ಹೇಳಿದೆ, ‘ನೋಡು ರಾಮ ನಿಮ್ಮ ಜನರೇ ಆದ ಬಾಬೂ ಜಗಜೀವನ್ ರಾಂ ಅವರು ಜನತಾದ ಈಗಿನ ಮುಖಂಡರು. ಅವರ ಪಕ್ಷಕ್ಕೆ ನೀನು ಓಟು ಕೊಡುತ್ತೀ ತಾನೆ?’ ರಾಮ ಮುಗುಳ್ನಗುತ್ತಾ ಒಂದು ಕೈಯಲ್ಲಿ ಪೊರಕೆ ಹಿಡಿದು ನಿಂತವನು ಹೇಳಿದ, ‘ನನ್ನ ಓಟು ಅಮ್ಮನಿಗೇ. ಅಮ್ಮ (ಇಂದಿರಾ) ಮಾತ್ರ ನಮಗೇನಾದರೂ ಮಾಡಿಯಾರು. ಅವರು ಹೇಳಿದ್ದನ್ನು ನೀವೆಲ್ಲಾ ಎಲ್ಲಿ ಕೇಳುತ್ತೀರಿ?’

ಈ ರಾಮ ಇದ್ದಕ್ಕಿದ್ದಂತೇ ಅಯ್ಯಪ್ಪ ವ್ರತಿಯಾದ. ಕಪ್ಪು ಉಡುಪಿನಲ್ಲಿ ಕ್ಷೌರ ಮಾಡಿಕೊಳ್ಳದ ಮುಖದಲ್ಲಿ ಕುಡಿಯುವುದನ್ನು ನಿಲ್ಲಿಸಿದ. ಆರೋಗ್ಯದಲ್ಲಿ ನಮಗೆ ಎದುರಾಗತೊಡಗಿದ. ಅವನ ಹೆಂಡತಿಗಂತೂ ಇದರಿಂದ ಅಪಾರವಾದ ಸಂತೋಷವಾಗಿತ್ತು. ಅವಳು ನನಗೆ ಹೇಳಿದ್ದಳು, ‘ನಾಯಿ ಬಾಲ ಯಾವತ್ತೂ ಡೊಂಕೇ. ಆದರೆ ಈ ನಲವತ್ತು ದಿನಗಳಾದರೂ ನನ್ನ ಯಜಮಾನ ಕುಡಿಯುವುದನ್ನು ನಿಲ್ಲಿಸಿದ್ದಾನಲ್ಲ. ಅಷ್ಟೇ ನನಗೆ ಸಾಕು. ಪ್ರತೀ ವರ್ಷ ನಲವತ್ತು ದಿನ ಸ್ವಾಮಿಗೆ ನಡೆದುಕೊಳ್ಳಲಿ ಅಂತ ದೇವರಲ್ಲಿ ಕೇಳುತ್ತೇನೆ.’

ನನಗಾದ ಸಂತೋಷ ಮತ್ತು ಆಶ್ಚರ್ಯವನ್ನು ನಾನಿಲ್ಲಿ ಹೇಳಲೇಬೇಕು. ರಾಮು ತಾನೊಬ್ಬ ಅಸ್ಪೃಶ್ಯನೆಂಬುದನ್ನು ಸಂಪೂರ್ಣ ಮರೆತು ಅಯ್ಯಪ್ಪ ದರ್ಶನ ಮಾಡಿ ಬಂದವನು ನನಗೆ ಪ್ರಸಾದವನ್ನು ತಂದುಕೊಟ್ಟಿದ್ದ.

(ಸೌಜನ್ಯ : ಅಕ್ಷರ ಪ್ರಕಾಶನ, ಹೆಗ್ಗೋಡು)

ಈ ಕೃತಿಯನ್ನು ನಿರೂಪಿಸಿದ ಕವಿ ಜ. ನಾ. ತೇಜಶ್ರೀ ಅವರ ಇತ್ತೀಚಿನ ಕವನ ಸಂಕಲನ : New Book : ಅಚ್ಚಿಗೂ ಮೊದಲು ; ‘ಸೃಷ್ಟಿಯು ಸೃಷ್ಟಿಯನ್ನೇ ಮುಟ್ಟುವ ಆ ಗಳಿಗೆ ಏನಾಗಿತ್ತು’  

Follow us on

Most Read Stories

Click on your DTH Provider to Add TV9 Kannada