Konkani : ಅಚ್ಚಿಗೂ ಮೊದಲು ; ಮಹಾಬಳೇಶ್ವರ ಸೈಲ್ ಅವರ ‘ಅದೃಷ್ಟ’ ಕಾದಂಬರಿ ಇಂದಿನಿಂದ ಲಭ್ಯ
Kannada Novel : ‘ಈ ಕಾದಂಬರಿಯಲ್ಲಿ ಅರಣ್ಯಪ್ರದೇಶದ ಪ್ಲ್ಯಾಂಟೇಶನ್ ಗಾರ್ಡ್ ಮತ್ತು ಮತಿಭ್ರಾಂತ ಹೆಣ್ಣುಮಗಳೊಬ್ಬಳ ನಡುವಿನ ಪ್ರೀತಿ ಸಂಬಂಧದ ವಿವರಗಳಿವೆ. ವಿಶಿಷ್ಟ ಕಥಾವಸ್ತುವನ್ನು ಹೊಂದಿರುವ ಈ ಕಾದಂಬರಿಯನ್ನು ಆಧರಿಸಿದ ಪಲತಡಚೊ ಮನೀಸ್ (ಆ ಕಡೆಯ ಮನುಷ್ಯ) ಕೊಂಕಣಿ ಚಲನಚಿತ್ರಕ್ಕೆ ಕೆನಡಾ ದೇಶದ ಟೊರೆಂಟೊ ಚಿತ್ರೋತ್ಸವ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ.’ ಗೀತಾ ಶೆಣೈ
Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
*
ಕೃತಿ : ಅದೃಷ್ಟ (ಕಾದಂಬರಿ) ಕೊಂಕಣಿ ಮೂಲ : ಮಹಾಬಲೇಶ್ವರ ಸೈಲ್ ಕನ್ನಡಕ್ಕೆ : ಗೀತಾ ಶೆಣೈ ಪುಟ : 80 ಬೆಲೆ : ರೂ. 90 ಮುಖಪುಟ ವಿನ್ಯಾಸ : ಕಮಲಂ ಅರಸು ಪ್ರಕಾಶನ : ನವಕರ್ನಾಟಕ ಪ್ರಕಾಶನ, ಬೆಂಗಳೂರು
*
ಅರಣ್ಯವಿಭಾಗದಲ್ಲಿ ಉದ್ಯೋಗ ನಿರ್ವಹಿಸಿದ ಅನುಭವದ ಆಧಾರದಲ್ಲಿ ಅವರು ರಚಿಸಿದ ಎರಡು ಕಿರುಕಾದಂಬರಿಗಳು ‘ಅರಣ್ಯಕಾಂಡ’ ಮತ್ತು ‘ಅದೃಷ್ಟ’. ಅರಣ್ಯಕಾಂಡ ನಂದಿ ಎತ್ತನ್ನು ಮನೆಮನೆಗೆ ತಿರುಗಾಡಿಸಿ ಹೊಟ್ಟೆಹೊರೆಯುವ ಸಾಂಪ್ರದಾಯಿಕ ಅಲೆಮಾರಿ ಜನಾಂಗದ ಕತೆಯನ್ನು ಹೊಂದಿದ್ದರೆ, ಪ್ರಸ್ತುತ ‘ಅದೃಷ್ಟ’ ಕಾದಂಬರಿಯಲ್ಲಿ ಅರಣ್ಯಪ್ರದೇಶದ ಪ್ಲ್ಯಾಂಟೇಶನ್ ಗಾರ್ಡ್ ಮತ್ತು ಮತಿಭ್ರಾಂತ ಹೆಣ್ಣುಮಗಳೊಬ್ಬಳ ನಡುವಿನ ಪ್ರೀತಿ ಸಂಬಂಧದ ವಿವರಗಳಿವೆ. ವಿಶಿಷ್ಟ ಕಥಾವಸ್ತುವನ್ನು ಹೊಂದಿರುವ ಈ ಕಾದಂಬರಿಯನ್ನು ಆಧರಿಸಿದ ಪಲತಡಚೊ ಮನೀಸ್ (ಆ ಕಡೆಯ ಮನುಷ್ಯ) ಕೊಂಕಣಿ ಚಲನಚಿತ್ರಕ್ಕೆ ಕೆನಡಾ ದೇಶದ ಟೊರೆಂಟೊ ಚಿತ್ರೋತ್ಸವ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಗೀತಾ ಶೆಣೈ, ಲೇಖಕಿ
*
ಒಂದು ದಿನ ಬೆಳಗಿನ ಹೊತ್ತು ಅವನು ಅವಳ ಆ ಮಲಿನ ಬಟ್ಟೆಗಂಟನ್ನು ಹೊರಗೆ ಎಸೆದು ಅದರ ಮೇಲೆ ಚಿಮಿಣಿ ಎಣ್ಣೆ ಸುರಿದು ಸುಟ್ಟು ಹಾಕಿದ. ಹುಚ್ಚಿ ಉದ್ರೇಕದಿಂದ ನಡುಗಿದಳು. ಅವಳು ಕಾವಲುಮನೆಯ ಮುಂದೆ ಸುಮ್ಮನೆ ಅಡ್ಡಾಡಿದಳು. ಆಮೇಲೆ ಆ ಜಾಲಿ ಮರದ ಕೆಳಗೆ ಕುಳಿತು ಚಿಕ್ಕಮಕ್ಕಳ ಹಾಗೆ ಅಳಲಾರಂಭಿಸಿದಳು. ಸ್ವಲ್ಪ ಹೊತ್ತಿನಲ್ಲಿ ಅವಳು ಸುಧಾರಿಸಿಕೊಳ್ಳಬಹುದೆಂದು ವಿನಾಯಕನ ಅನಿಸಿಕೆ. ಅವಳು ಬಹಳ ಹೊತ್ತು ಮರದ ಕೆಳಗೆ ಕುಳಿತಳು. ಆಮೇಲೆ ಎದ್ದು ಗಿಡಮರಗಳ ಗುಂಪಿನಲ್ಲಿ ಮಾಯವಾದಳು.
ವಿನಾಯಕ ಅವಳ ದಾರಿ ಕಾಯುತ್ತಾ ಜಗಲಿಯಲ್ಲಿ ಕುಳಿತ. ಆದರೆ ಸಂಜೆ ಕಳೆದರೂ ಅವಳು ಹಿಂತಿರುಗಿ ಬರಲಿಲ್ಲ. ಅವನು ಗಿಡಮರಗಳ ಗುಂಪಿನ ಆಚೆ ಇದ್ದ ಶೆರೂಗಾರರ ವಸತಿಯ ಕಡೆಗೆ ಹೋದ. ಅಲ್ಲಿ ಒಂದು ಮನೆಯ ಮುಂದೆ ಮೂಲೆಯಲ್ಲಿ ಅವಳು ಕುಳಿತಿದ್ದಳು. ಒಂದೇ ಸವನೆ ತಲೆ ಕೆರೆಯುತ್ತಿದ್ದಳು. ಇಬ್ಬರು ಮೂವರು ಮಕ್ಕಳು ಅವಳನ್ನು ಸಿಟ್ಟಿಗೇಳಿಸುತ್ತಾ ಅವಳ ಹತ್ತಿರ ನಿಂತಿದ್ದರು. ಆಶ್ಚರ್ಯವೆಂದರೆ ಅವರು ಅವಳನ್ನು ಆ ಕಾವಲುಮನೆಯ ಹುಚ್ಚಿ ಎಂದು ಕರೆಯುತ್ತಿದ್ದರು!
ಆದರೆ ವಿನಾಯಕ ಅವಳನ್ನು ನೋಡದ ಹಾಗೆ ವರ್ತಿಸಿದ. ಆಚೆ ಕಡೆ ಒಂದು ಮರಕ್ಕೆ ಒರಗಿಸಿ ಒದ್ದೆ ಕಟ್ಟಿಗೆಯ ರಾಶಿ ಹಾಕಲಾಗಿತ್ತು. ಅವನು ಆ ಕಡೆಗೆ ಹೋದ. ‘‘ಕಾಡಿನಿಂದ ಈ ಹಸಿ ಕಟ್ಟಿಗೆಯನ್ನು ಕತ್ತರಿಸಿ ತಂದವರು ಯಾರು?’’ ಎಂದು ಜಬ್ಬರಿಸಿ ಕೇಳಿದ.
ಅಲ್ಲಿ ಮೆಟ್ಟಿಲ ಮೇಲೆ ಕುಳಿತಿದ್ದವನು ಎದ್ದು ಬಂದು ಹೇಳಿದ, ‘‘ನಾಳೆ ಅಂಗಳಕ್ಕೆ ಆವರಣ ಮಾಡುವುದಿದೆ. ಅದಕ್ಕಾಗಿ ತಂದದ್ದು ಗಾರ್ಡ್ ಮಾಮ. ಈ ಬಡವನ ಅನುಪಥ್ಯಕ್ಕೆ ನಿಮ್ಮ ಕೃಪೆ ಇರಲಿ.”
ವಿನಾಯಕ ಸುಮ್ಮನೆ ‘ಹೂ’ ಎಂದು ಹೇಳಿ ಅಲ್ಲಿಂದ ಹೊರಟು ಕಾವಲುಮನೆಗೆ ಬಂದ. ಮನೆಯಲ್ಲಿದ್ದ ಚಿಂದಿ ಬಟ್ಟೆಗಳನ್ನೆಲ್ಲಾ ಒಟ್ಟು ಮಾಡಿ ಅದನ್ನು ಒಂದು ಹಳೆಯ ವಸ್ತ್ರದಲ್ಲಿ ಕಟ್ಟಿದ. ಆಮೇಲೆ ಆ ಗಂಟನ್ನು ತೆಗೆದುಕೊಂಡು ಹೋಗಿ ಯಾರೂ ಇಲ್ಲದಿರುವುದನ್ನು ಗಮನಿಸಿ ಹುಚ್ಚಿ ಕುಳಿತಲ್ಲಿ ಅದನ್ನು ಎಸೆದ. ಅದು ನೇರವಾಗಿ ಅವಳ ಬೆನ್ನ ಮೇಲೆಯೇ ಬಿತ್ತು.
ಅವನು ಹಿಂತಿರುಗಿ ಬಂದು ಅವಳ ದಾರಿ ಕಾಯುತ್ತಾ ಕುಳಿತ. ಕತ್ತಲೆ ಕವಿದ ಬಳಿಕ ಅವಳು ಬಂದಳು. ಮೊದಲು ಪೇದೆಗಳ ಮರೆಯಿಂದ ಭೂತದರ್ಶನವಾದ ಹಾಗೆ ಅವನಿಗೆ ಕಾಣಿಸಿದಳು. ಆಮೇಲೆ ನಿಧಾನವಾಗಿ ಹೆಜ್ಜೆ ಇಡುತ್ತಾ ಬಂದು ಜಗಲಿಯ ಅದೇ ಜಾಗದಲ್ಲಿ ಕುಳಿತಳು. ವಿನಾಯಕ ಮೌನವಾಗಿ ಒಳಗೆ ಹೋಗಿ ಅನ್ನ ಮತ್ತು ಸಾರು ತಂದು ಅವಳ ತಟ್ಟೆಯಲ್ಲಿ ಸುರಿದ. ಆಮೇಲೆ ನೀರು ತಂದುಕೊಟ್ಟ. ಅವನಿಗೆ ವಿಪರೀತ ಸಿಟ್ಟು ಬಂದಿತ್ತು. ‘‘ಬಂಗಾರ ತುಂಬಿಸಿ ತಂದ ಗಂಟು ಕಣೆ ನಿನ್ನದು. ಅದನ್ನು ನಾನು ತಿಂದು ಹಾಕಿದೆ, ಮಹಾ ಸ್ವಾಭಿಮಾನಿ ಹೆಂಗಸಮ್ಮಾ ನೀನು! ಹೋಗಿ ಅವನ ಅಂಗಳದಲ್ಲಿ ಕುಳಿತುಬಿಟ್ಟೆ, ಭಿಕ್ಷುಕಿಯ ಹಾಗೆ. ನಾಳೆ ಇಲ್ಲಿಂದ ಹೊರಟು ಹೋಗು. ಹತ್ತಿರ ಬೇಡ, ದೂರ ಹೋಗಿಬಿಡು. ಇಲ್ಲದಿದ್ದರೆ ನಾನೇ ನಿನ್ನನ್ನು ಹೊರಗೆ ತಳ್ಳಿ ಬಿಡುತ್ತೇನೆ.”
ಒಂದು ಕಾಲನ್ನು ಚಾಚಿ ಮಲಗುವುದು ಹುಚ್ಚಿಯ ಅಭ್ಯಾಸ. ಹಾಗೆ ಚಾಚಿದ ಅವಳ ಆ ಕಾಲು ಪೂರ್ತಿ ನಗ್ನವಾಗಿಯೇ ಇರುತ್ತದೆ. ರಾತ್ರಿಯ ಚಳಿಗೆ ಹೊದಿಸಿದ ಕಂಬಳಿಯನ್ನು ಎಳೆದು ತೆಗೆಯುವಾಗ, ಮಧ್ಯಾಹ್ನ ಕಾಡಿನಿಂದ ಹಿಂತಿರುಗಿ ಬಂದಾಗ ಅವನು ಚಾಚಿಕೊಂಡಿರುವ ಅವಳ ಆ ನಗ್ನಕಾಲನ್ನು ನೋಡುತ್ತಿದ್ದ. ಕೆಲವೊಮ್ಮೆ ಹತ್ತಿರದಿಂದ ಕೆಲವೊಮ್ಮೆ ಬಾಗಿಲ ಬಳಿ ನಿಂತುಕೊಂಡು. ಕಾಲಿನ ಮಂಡಿ ಬಿಳಿ, ಅದರ ಕೆಳಗೆ ಪಾದದವರೆಗೆ ಕಪ್ಪು ಕಪ್ಪು. ಬಿರುಕು ಬಿಟ್ಟ ಚರ್ಮದ ಪಾದ. ಅವಳನ್ನು ಹೆಚ್ಚು ಹೊತ್ತು ನೋಡುವುದು ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಅವನು ಮೆಲ್ಲಗೆ ಅಲ್ಲಿಂದ ಮುಂದೆ ಸರಿಯುತ್ತಿದ್ದ. ಅವಳ ಆ ಬಿಳಿ ಮಂಡಿಯನ್ನು ಮುಷ್ಟಿಯಿಂದ ಅದುಮಬೇಕು. ಅವಳು ಮುದುರಿಕೊಳ್ಳಬೇಕು. ಬೇಡ, ಬೇಡ. ಈ ಕೊಳಕು ಹುಚ್ಚಿ ಯಾರೋ, ಎಲ್ಲಿಯವಳೋ ಎಂದುಕೊಳ್ಳುತ್ತಾ ಮರುಕ್ಷಣವೇ ಅವನು ತುದಿಬೆರಳಿನಿಂದ ಅವಳ ಸೀರೆಯನ್ನು ಎಳೆದು ಆ ಕಾಲಿನ ಮೇಲೆ ಹೊದಿಸುತ್ತಿದ್ದ.
* ಮರುದಿನ ಸಂಜೆ ಚಿರಪಿ ಸೋಮಣ್ಣ ಮತ್ತು ವೆಂಕಟೇಶ ಕಾವಲುಮನೆಯ ಮುಂದೆ ಕಾಲುದಾರಿಯಲ್ಲಿ ಹೋಗುತ್ತಿದ್ದರು. ಇಬ್ಬರೂ ಕಟ್ಟುಮಸ್ತಾದ ಆಳುಗಳು. ಹೆಗಲಿನ ಮೇಲೆ ಗರಗಸ ಹೊತ್ತುಕೊಂಡು ಎಲ್ಲಿಯೋ ಮರ ಕೊಯ್ಯುವ ಕೆಲಸಕ್ಕೆ ಹೊರಟಿದ್ದರು. ಎಲ್ಲಿಗೆ ಏನು ಎಂದು ಗಾರ್ಡ್ ವಿಚಾರಿಸಿದರೆ ಅವರ ಉತ್ತರ ಯಾವಾಗಲೂ ಸಿದ್ಧವಾಗಿರುತ್ತದೆ, ವಿನಾಯಕನನ್ನು ನೋಡಿ ಅವರು ಕಾವಲುಮನೆಯ ಹತ್ತಿರ ಬಂದರು.
‘ಗಾರ್ಡ್ಮಾಮ, ನೀವು ಹೇಗಿದ್ದೀರಿ?’’
‘‘ಎಲ್ಲಿಗೆ ಹೋಗಿದ್ದು ನೀವು?’’
‘‘ಆ ಶೇರೂಗಾರರ ಕೃಷ್ಣಪ್ಪ ಹಟ್ಟಿ ಕಟ್ಟಿಸುತ್ತಿದ್ದಾನೆ. ಅಡ್ಡಕಂಬಿ ಕಟ್ಟಲು ನಮ್ಮನ್ನು ಕರೆಯಿಸಿದ್ದ.”
‘‘ಅಡ್ಡಕಂಬಿ ಕಟ್ಟಲು ಇಷ್ಟು ದೊಡ್ಡ ಗರಗಸ ಮತ್ತು ಈ ಹಗ್ಗ ಬೇಕಾಗುವುದೇ? ನಿಮ್ಮಿಂದಾಗಿಯೇ ಈ ಕಾಡು ಹಾಳಾಗಿರುವುದು.’’
ಸೋಮಣ್ಣ ನಕ್ಕ. ‘‘ನಿಮ್ಮ ಒಳ್ಳೆಯತನದಿಂದಲೇ ನಮ್ಮ ಹೊಟ್ಟೆ ತುಂಬಬೇಕಾಗಿದೆ.’’ ಅವನು ಚಡ್ಡಿಯ ಕಿಸೆಯಿಂದ ಹತ್ತರ ಎರಡು ಮೂರು ನೋಟುಗಳನ್ನು ಹೊರಗೆ ತೆಗೆದ. ಅದರಲ್ಲಿ ಒಂದು ನೋಟನ್ನು ವಿನಾಯಕನ ಕೈಯಲ್ಲಿಟ್ಟ. ವಿನಾಯಕ ಅದನ್ನು ಸೊಂಟಕ್ಕೆ ಸಿಕ್ಕಿಸಿದ.
ಅಲ್ಲಿ ವೆಂಕಟೇಶ ನಿಂತು ಹುಚ್ಚಿಯನ್ನೇ ನೋಡುತ್ತಿದ್ದವನು ಹೊರಡುವ ಮೊದಲು ಹೇಳಿದ, ‘‘ಎಂತಹ ಹುಚ್ಚಿ ಇವಳು. ಇವಳ ಹುಚ್ಚು ಕಳೆಯಬೇಕು.”
ವಿನಾಯಕನಿಗೆ ಅವನ ಮೇಲೆ ಸಿಟ್ಟು ಬಂತು. ಕಪ್ಪುಶಿಲೆಯ ಹಾಗಿರುವ ಈ ವೆಂಕಟೇಶ ಕುಡಿದ ಅಮಲಿನಲ್ಲಿ ತಾಯಿಯನ್ನು ಕೊಂದವನು. ಊರಿನಲ್ಲಿ ಅವನಿಗೆ ಹೆಣ್ಣು ಕೊಡಲು ಯಾರೂ ಸಿದ್ಧರಿಲ್ಲ. ಇವನ ಕೈಯಲ್ಲಿ ಗರಗಸ ಅಥವಾ ಮರದ ಬಂದೂಕು ತಪ್ಪಿದ್ದಲ್ಲ.
ಅಲ್ಲಿಂದ ಹೊರಡುವಾಗ ಸೋಮಣ್ಣ ಹಿಂದೆ ತಿರುಗಿ ನೋಡುತ್ತಾ ಹೇಳಿದ, ‘‘ನಮಗೇನು, ಯಾರಾದರೂ ಬಂದು ಮರ ಕೊಯ್ಯುವಂತೆ ಹೇಳಿದರೆ, ಕೊಯ್ದು ಕೊಡುವುದು. ಅದು ಕಳ್ಳಮಾಲೋ, ಕೊಂಡಮಾಲೋ ನಮಗೆ ಹೇಗೆ ಗೊತ್ತಾಗಬೇಕು? ಹಿಂದೆ ಯಾರೋ ಒಬ್ಬ ಫಾರೆಸ್ಟರ್ ಬಂದಿದ್ದ. ಅವನು ನನ್ನ ಮನೆ ಜಪ್ತಿ ಮಾಡಿ ದೊಡ್ಡ ಗರಗಸವನ್ನು ತೆಗೆದುಕೊಂಡು ಹೋಗಿದ್ದ.’’
ವಿನಾಯಕ ಮನಸ್ಸಿನಲ್ಲಿಯೇ ಅಂದುಕೊಂಡ. ‘‘ಈ ಅನಾಗರಿಕನನ್ನು ನೀನು ಹತ್ತಿರ ಸೇರಿಸಿಕೊಂಡದ್ದು ಯಾಕೆ? ಇಂತಹ ಕೆಲಸಕ್ಕೆ ನಿನಗೆ ಇವನೇ ಬೇಕು.’
ಈ ಕಾದಂಬರಿಯ ಖರೀದಿಗೆ ಸಂಪರ್ಕಿಸಿ : ನವಕರ್ನಾಟಕ ಪ್ರಕಾಶನ
*
ಮಹಾಬಳೇಶ್ವರ ಸೈಲ್ : ಮೂಲತಃ ಕಾರವಾರ ಸಮೀಪದ ಮಾಜಾಳಿಯವರಾದ ಮಹಾಬಳೇಶ್ವರ್ ಸೈಲ್ ಪ್ರಸಿದ್ಧ ಕೊಂಕಣಿ ಕಥಾಸಾಹಿತಿ. ಅಲಕ್ಷಿತ ಸಮುದಾಯಗಳ ಅನಿಶ್ಚಿತ ಬದುಕಿನ ಕುರಿತು ವಿಶೇಷ ಕಾಳಜಿಯನ್ನು ಹೊಂದಿರುವ ಈ ಲೇಖಕರು, ಕರ್ನಾಟಕ-ಗೋವಾ ಗಡಿ ಪ್ರದೇಶದಲ್ಲಿ ನೆಲೆನಿಂತಿರುವ ಕುಂಬಾರರ ಅಸ್ಥಿರ ಬದುಕನ್ನು ಕುರಿತಾಗಿ ರಚಿಸಿರುವ ‘ಹಾವಠಣ’ ಕಾದಂಬರಿಗೆ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ್’ ದೊರೆತಿದೆ. ಇವರ ಮೊದಲ ಕಾದಂಬರಿ ‘ಕಾಳಿಗಂಗಾ’ದಲ್ಲಿ ಬಡ ಕೃಷಿಕ ಸಮುದಾಯದ ಬವಣೆಯ ಚಿತ್ರಣವಿದೆ. ಅವರು ತಮ್ಮ ‘ಅರಣ್ಯಕಾಂಡ್’ ಕಾದಂಬರಿಯಲ್ಲಿ ಜೀತದಾಳುಗಳ ಮೇಲೆ ನಡೆಯುವ ಶೋಷಣೆಯ ವಿವರಗಳನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ನೀಡಿದ್ದಾರೆ. ಈ ಹಿರಿಯ ಲೇಖಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ವಿಮಲಾ ವಿ ಪೈ ವಿಶ್ವಕೊಂಕಣಿ ಪ್ರಶಸ್ತಿಯೊಂದಿಗೆ ಅನೇಕ ಪ್ರಶಸ್ತಿ, ಗೌರವಗಳು ಸಂದಿವೆ.
ಡಾ. ಗೀತಾ ಶೆಣೈ : ಅನುವಾದ ಕಾರ್ಯದ ಮೂಲಕ ಕನ್ನಡ ಮತ್ತು ಕೊಂಕಣಿ ಭಾಷೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸ್ತುತಿರುವ ಈ ಲೇಖಕಿ ವಚನ ಸಾಹಿತ್ಯ ಮತ್ತು ಕನಕದಾಸ ಸಮಗ್ರ ಸಾಹಿತ್ಯದ ಬಹುಭಾಷಾ ಅನುವಾದ ಯೋಜನೆಗಳಲ್ಲಿ ಕೊಂಕಣಿ ಸಂಪುಟದ ಸಂಪಾದಕಿಯಾಗಿ, ಅನುವಾದಕಿಯಾಗಿ ಪಾಲುಗೊಂಡಿದ್ದಾರೆ. ಅವರು ಅನುವಾದಿಸಿ ನವಕರ್ನಾಟಕ ಪ್ರಕಟಿಸಿರುವ ‘ನಿವೇದನೆ’ ಕೃತಿಗೆ ನೀಳಾದೇವಿ ದತ್ತಿ ಬಹುಮಾನ, ‘ಕಮಲಾದೇವಿ ಚಟ್ಟೋಪಾಧ್ಯಾಯ’ ಕೃತಿಗೆ ಕುವೆಂಪು ಭಾಷಾಭಾರತಿ ಅನುವಾದ ಪುಸ್ತಕ ಬಹುಮಾನ ಮತ್ತು ‘ಕಾಳಿಗಂಗಾ’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನುವಾದ ಪುಸ್ತಕ ಬಹುಮಾನ ದೊರೆತಿದೆ. ಪ್ರಸ್ತುತ ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಲಹಾ ಮಂಡಳಿಯ ಸದಸ್ಯರಾಗಿ, ಗೋವಾ ವಿಶ್ವವಿದ್ಯಾಲಯದ ಕೊಂಕಣಿ ವಿಭಾಗದ ಅಧ್ಯಯನ ಮಂಡಳಿಯ ಗೌರವ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ : New Novel : ಅಚ್ಚಿಗೂ ಮೊದಲು ; ಶರಣಕುಮಾರ ಲಿಂಬಾಳೆಯವರ ‘ರೊಚ್ಚು’ ಕಾದಂಬರಿಯ ಆಯ್ದ ಭಾಗ
Published On - 4:50 pm, Tue, 28 December 21