Jnanpith Award : ‘ಜೀವ ಕೊಡಲೇ? ಚಹ ಕುಡಿಯಲೇ?’ ದಾಮೋದರ ಮಾವಜೋ ಅವರ ಕಾದಂಬರಿಯ ಎಸಳು
Damodar Mauzo : ಶಾಲೆಯ ಅಭ್ಯಾಸದ ಬಗ್ಗೆ ನಾನು ಡ್ಯಾಡಿಯಲ್ಲಿ ಸಾಮಾನ್ಯ ಏನೂ ಕೇಳುತ್ತಿರಲಿಲ್ಲ. ಒಂದು ದಿನ ಸಾಧಾರಣ ಲೆಕ್ಕವೊಂದಿತ್ತು. ನಾನು ಅವರಲ್ಲಿ ಕೇಳಿದೆ, ‘ಡ್ಯಾಡಿ, ‘‘ಮಾಯ್ನಸ್ ಟು ಏ ಅಪೋನ್ ಬಿ’' ಇದನ್ನು ಹೇಗೆ ಬಿಡಿಸುವುದು?’ ಡ್ಯಾಡಿ ಪುಸ್ತಕವನ್ನ ಕೈಯಲ್ಲಿ ಹಿಡಿದು ನೋಡಿದರು. ಒಂದುಕ್ಷಣ ಯೋಚಿಸಿ ಮತ್ತೆ ಕೋಪಗೊಂಡರು.
*
ನನಗೆ ಶಾಲೆಗೆ ಹೋಗಲು ಇಷ್ಟವಾಗುತ್ತಿತ್ತು. ಅಲ್ಲಿ ನನಗೆ ಸ್ನೇಹಿತರಿದ್ದರೆಂದಲ್ಲ. ಆದರೆ ಮನೆಯ ಬಾಗಿಲು ಕಿಟಕಿಗಳೆಲ್ಲ ಮೂರ‍್ಹೊತ್ತು ಮುಚ್ಚಿಕೊಂಡಿರುವುದರಿಂದ ನನಗೆ ಉಸಿರುಗಟ್ಟಿದಂತಾಗುತ್ತಿತ್ತು. ಆವಾಗಾವಾಗ ಅಮ್ಮ ಮೈ ಸರಿಯಿಲ್ಲವೆಂದು ಮಲಗಿಕೊಂಡಿರುತ್ತಿದ್ದಳು. ಆಗ ಡ್ಯಾಡಿ ನನಗೆ ಅಪ್ಪಣೆ ಕೊಡುತ್ತಿದ್ದರು, ‘ಇವತ್ತು ಮನೆಯಲ್ಲಿದ್ದು ಅವಳಿಗೆ ಸಹಾಯ ಮಾಡು, ತಿಳೀತಾ?’. ನನಗೆ ಏನೂ ತಿಳಿಯುವುದಿಲ್ಲವೆಂದು ಡ್ಯಾಡಿಗೆ ಏಕೆ ಅನಿಸುತ್ತಿತ್ತು ಎಂದು ನನಗೆ ಗೊತ್ತಿಲ್ಲ. ಒಂದು ದಿನ ಶಾಲೆ ತಪ್ಪಿದರೇನಾಗದು ಎಂದು ಅವರಿಗೆ ಕಾಣುತ್ತಿತ್ತು. ಹಾಗೆಯೇ ತಾಯಿಗೆ ಸಹಾಯ ಮಾಡುವಷ್ಟು ದೊಡ್ಡವನಾಗಿದ್ದೇನೆಂದೂ ಕಾಣುತ್ತಿತ್ತು. ಇಂತಹ ಸಮಯದಲ್ಲಿ ಮನೆಯ ಕೆಲಸಮಾಡಲು ಯಾರನ್ನಾದರೂ ಯಾಕೆ ಇಡುವುದಿಲ್ಲ ಎಂದು ನನಗೆ ಯಾವತ್ತೂ ಅರ್ಥವಾಗಲೇ ಇಲ್ಲ. ಬಟ್ಟೆಗೆ ವಾಶಿಂಗ್ ಮಶಿನ್ ಇತ್ತು. ಆದರೆ ಪಾತ್ರೆ ತೊಳೆಯಲು, ಕಸಗುಡಿಸಲು ಕೆಲಸದ ಜನ ಬೇಕಿತ್ತು. ಅಮ್ಮ ಮತ್ತೆ ಬೇಕಾದಷ್ಟು ಪಾತ್ರೆಗಳನ್ನು ಮಾತ್ರ ತೊಳೆಯುತ್ತಿದ್ದಳು, ಮೇಲಿಂದ ಮೇಲೆ ಕಸ ಗುಡಿಸುತ್ತಿದ್ದಳು. ಮನೆಯಲ್ಲಿ ಕಸ ಕಂಡರೆ ಡ್ಯಾಡಿಗೆ ಕೋಪ ಬರುತ್ತಿತ್ತು. ಮೊದಲು ಅಮ್ಮನ ಮೇಲೆ. ಆಮೇಲೆ ನನಗೆ, ‘ಸ್ವಲ್ಪ ಪೊರಕೆ ಹೊಡೆಯಲು ಧಾಡಿಯೋ ನಿಂಗೆ?’
ಶಾಲೆಯ ಅಭ್ಯಾಸದ ಬಗ್ಗೆ ನಾನು ಡ್ಯಾಡಿಯಲ್ಲಿ ಸಾಮಾನ್ಯ ಏನೂ ಕೇಳುತ್ತಿರಲಿಲ್ಲ. ಒಂದು ದಿನ ಸಾಧಾರಣ ಲೆಕ್ಕವೊಂದಿತ್ತು. ನಾನು ಅವರಲ್ಲಿ ಕೇಳಿದೆ, ‘ಡ್ಯಾಡಿ, ‘‘ಮಾಯ್ನಸ್ ಟು ಏ ಅಪೋನ್ ಬಿ’’ ಇದನ್ನು ಹೇಗೆ ಬಿಡಿಸುವುದು?’ ಡ್ಯಾಡಿ ಪುಸ್ತಕವನ್ನ ಕೈಯಲ್ಲಿ ಹಿಡಿದು ನೋಡಿದರು. ಒಂದುಕ್ಷಣ ಯೋಚಿಸಿ ಮತ್ತೆ ಕೋಪಗೊಂಡರು.
‘ಶಾಲೆಗೆ ಹೋಗಿ ಏನು ಕಲಿಯುತ್ತಿ, ನಿನ್ನ ಹೆಣ? ಇಷ್ಟೂ ಗೊತ್ತಿಲ್ಲ?’
‘ಡ್ಯಾಡಿ, ಮಾಯ್ನಸ್ ಟು ಏ…’
‘ನೋಡು, ಮಾಯ್ನಸ್ ಎಂದರೆ ಕಳೆಯುವುದು, ಟು ಎಂದರೆ ಎರಡು ಮತ್ತು… ಒಂದು ಕೆಲಸ ಮಾಡು. ನಾಳೆ ನಿನ್ನ ಟೀಚರಿಗೆ ಹೇಳು – ಡ್ಯಾಡಿ ಹೇಳ್ತಿದ್ರು, ಸರಿಯಾಗಿ ಕಲಿಸದಿದ್ದರೆ ದೂರು ಕೊಡುತ್ತೇನೆಂದು.’
ನಾನು ಗೊಂದಲಕ್ಕೆ ಬಿದ್ದೆ. ಇಷ್ಟು ಸುಲಭವಿತ್ತಾದರೆ ಡ್ಯಾಡಿ ಅದನ್ನ ಏಕೆ ಬಿಡಿಸಿ ಹೇಳಲಿಲ್ಲ? ಬಹುಶಃ ನಾನೇ ಸ್ವತಃ ಬಿಡಿಸಿ ಕಲಿಯಬೇಕೆಂದೇನೋ.
*
ಒಂದು ದಿನ ಇಂಗ್ಲಿಷ್ ಟೀಚರ್ ನಮಗೆ ನಿಬಂಧ ಬರೆಯಲು ಹೇಳಿದರು. ‘ಮಾಯ್ ಹೋಮ್’. ನಾನು ಬರೆದು ಕೊಟ್ಟೆ. ಮನೆ ಹೇಗೆ ಕಾಣುತ್ತದೆ, ಮನೆಯ ಸುತ್ತ ಜಾಗವಿದೆ, ಆದರೂ ಅಲ್ಲಿ ಏನೂ ನೆಟ್ಟಿರಲಿಲ್ಲ. ಅಮ್ಮನಿಗೆ ಬೆಕ್ಕುಗಳು ಇಷ್ಟವಾಗುತ್ತವೆ ಮತ್ತು ಅಪ್ಪನಿಗೆ ನಾಯಿ… ಮಾವಿನಮರ ಹೇಗಿತ್ತು, ಆದರೆ ಮಕ್ಕಳು ಕಲ್ಲು ಎಸೆಯುತ್ತಾರೆಂದು ಅದನ್ನ ಕಡಿಯಲಾಯಿತು, ಈಗ ಗಿಡಮರಗಳಿಲ್ಲವೆಂದು ಹಕ್ಕಿಗಳು ಹತ್ತಿರ ಬರುವುದಿಲ್ಲ. ದಾರಿಯ ಮೇಲಿನ ಕಳ್ಳರು ಒಳಗೆ ಬರಬಹುದೆಂದು ಮುಂದಿನ ಬಾಗಿಲು ಮುಚ್ಚಿದೆ ಮತ್ತು ಜಂತುಗಳು ಬರಬಹುದೆಂದು ಹಿಂದಿನ ಬಾಗಿಲು. ಕ್ರಿಮಿಕೀಟಗಳು ಬರುತ್ತವೆಂದು ಕಿಟಕಿಗಳು ಮುಚ್ಚಿವೆ… ಅಮ್ಮನಿಗೆ ಆದಾಗ ಮಾತ್ರ ಮನೆಯಲ್ಲಿ ಕಸಗುಡಿಸುತ್ತಾರೆ… ಮನೆಯಲ್ಲಿ ಯಾರೂ ಬರದ ಕಾರಣ ನನ್ನ ಅಭ್ಯಾಸ ಚೆನ್ನಾಗಿ ನಡೆಯುತ್ತದೆ… ಇತ್ಯಾದಿ.
ಮಾರನೇ ದಿನ ಎಲ್ಲ ಪ್ರಬಂಧಗಳನ್ನು ಪರಿಶೀಲಿಸಿ ನಮ್ಮ ಪುಸ್ತಕಗಳನ್ನು ಹಿಂದೆ ಕೊಟ್ಟರು. ನನ್ನದು ಕೊಡಲಿಲ್ಲ. ನನಗೆ ಪುಕುಪುಕು. ಮಾರ್ಟಿನ್ ಸರ್ ಯಾವಾಗ ಸಿಟ್ಟುಗೊಳ್ಳುತ್ತಾರೆ, ಹೇಳಲಾಗದು. ಪೀರಿಯಡ್ ಮುಗಿದಂತೆ ನನ್ನನ್ನು ಕರೆದು ಪುಸ್ತಕ ಕೊಟ್ಟು ಹೇಳಿದರು, ‘ನನಗೆ ಮಾತನಾಡುವುದಿದೆ. ನಮ್ಮ ಮನೆಗೆ ಸಂಜೆ ಬರುತ್ತೀಯಾ? ನಾನು ಇಲ್ಲಿ ಪಕ್ಕದಲ್ಲೇ ಇದ್ದೇನೆ.’ ಅವರ ಮನೆಗೆ ಹೇಗೆ ಬರುವುದೆಂದು ಸೂಚಿಸಿದರು.
ಹೋದೆ. ಆಘಾತವೇ ಆಗಿತ್ತು ನನಗೆ. ಸರ್‌ರವರ ಹೆಂಡತಿ ಹೊರಗೆ ತೋಟದಲ್ಲಿ ಗಿಡಗಳಿಗೆ ನೀರುಣಿಸುತ್ತಿದ್ದರು ಮತ್ತು ಮಾರ್ಟಿನ್ ಸರ್ ವರಾಂಡದಲ್ಲಿ ಕಸ ಗುಡಿಸುತ್ತಿದ್ದರು. ಗಂಡಸರು ಯಾವತ್ತಾದರೂ ಕಸ ಗುಡಿಸುತ್ತಾರೇನು? ಮತ್ತು ಸರ್?
ನನ್ನನ್ನು ನೋಡಿ ‘ಬಾ’ ಎಂದರು. ಆದರೆ ಕಸ ಗುಡಿಸುವುದನ್ನು ನಿಲ್ಲಿಸಲಿಲ್ಲ.
‘ಚಹ ತಗೊಳ್ಳುತ್ತೀಯೇನು?’
ನಾನು ಇಲ್ಲವೆಂದೆ, ‘ನಾನು ಚಹ ಕುಡಿಯುವುದಿಲ್ಲ, ಸರ್.’
ನಂತರ ಅವರು ನೀರಿನ ಗ್ಲಾಸ್ ತಂದು ಕೊಟ್ಟರು. ಚಹ ಕೊಡಿ ಅಂದರೆ ಅವರೇ ಮಾಡಿ ತಂದಾರೇನು? ನನ್ನ ಜೊತೆಗೆ ಕೂತು ಅವರು ನನ್ನ ಬಗ್ಗೆ ಕೇಳಿದರು. ಅಭ್ಯಾಸ ಹೇಗೆ ನಡೆಯುತ್ತದೆ? ಡ್ಯಾಡಿ ಏನು ಮಾಡುತ್ತಾರೆ? ಅಮ್ಮನ ಬಗ್ಗೆ ಕೇಳಿದರು. ‘ಯಾವುದೇ ಆಟಗಳನ್ನು ಯಾಕೆ ಆಡುತ್ತಿಲ್ಲ?’ ಈ ಪ್ರಶ್ನೆಗೆ ಉತ್ತರ ನೀಡುವಾಗ ನಾನು ಗೊಂದಲಕ್ಕೆ ಬಿದ್ದೆ. ಆಡುವುದಿಲ್ಲ ಖಂಡಿತ. ಜೊತೆಯವರೆಲ್ಲ ಆಡುತ್ತಾರೆ. ನಾನು ಯಾಕಾಗಿಯಾದರೂ ಆಡುವುದಿಲ್ಲ? ರವಿ ಪೀಟುವಿನ ಜೊತೆ ತಪ್ಪಿದ ನಂತರ ಆಡಿದ್ದೇ ಇಲ್ಲ.
‘ಪುಸ್ತಕ ಯಾವುದು ಓದುತ್ತಿ?’
ಪುಸ್ತಕ ಓದುವುದು ನನಗಿಷ್ಟವಿತ್ತು. ಮಧ್ಯೆ ಮಧ್ಯೆ ಟೀಚರ್‌ಗಳು ಗ್ರಂಥಾಲಯದಿಂದ ಪುಸ್ತಕ ತಂದು ಕೊಡುತ್ತಿದ್ದರು. ಮನೋಹರ್ ರಾಯ್ ಅವರ ಕವನಗಳು, ಗೋದುಬಾಯಿ ಕಥೆಗಳು ಹೀಗೆ ಕೆಲವೇ ಓದಿದ್ದೆ.
‘ಇಂಗ್ಲಿಷ್ ಪುಸ್ತಕ ಓದಿದ್ದೀಯಾ?’
ನಾನು ಇಲ್ಲವೆಂದೆ. ನಂತರ ಅವರು ಒಳಗೆ ಹೋಗಿ ಎರಡು ಪುಸ್ತಕಗಳನ್ನು ತಂದು ನನ್ನ ಕೈಯಲ್ಲಿಟ್ಟರು. ಒಂದು ‘ಒಲಿವರ್ ಟ್ವಿಸ್ಟ್’, ಮತ್ತೊಂದು ‘ಟೋಮ್ ಸೋಯರ್’. ‘ಓದಿ ವಾಪಾಸ್ ಕೊಡು. ಮತ್ತು ನಿಂಗೆ ಇಷ್ಟವಾಯಿತೋ, ಇಲ್ಲವೋ ಅಂತ ಹೇಳ್ಬೇಕು. ಮತ್ತು ಇಷ್ಟವಾಯಿತಾದರೆ ಏನು ಇಷ್ಟವಾಯಿತೆಂದು ಸಹ ಹೇಳು.’ ಅಷ್ಟರಲ್ಲಿ ಮಾರ್ಟಿನ್ ಸರ್‌ರ ಮಗಳು ಕೈಯಲ್ಲಿ ಬಾಸ್ಕೆಟ್ ಬೊಲ್ ಹಿಡಿದು ಒಳಗೆ ಬಂದಳು. ಹಣೆಯ ಮೇಲೆ ಹೇರ್ಬ್ಯಾಂಡ್, ಬಿಳಿ ಸ್ಕರ್ಟ್ ಮತ್ತು ಬಿಳಿಯ ಟೊಪ್ – ಮಣ್ಣಿನಲ್ಲಿ ಇಷ್ಟು ಕೊಳೆಯಾಗಿತ್ತು, ಬಟ್ಟೆ ನೋಡಿ ಮಾರ್ಟಿನ್ ಸರ್ ಈಗ ಆಕೆಗೆ ಹೊಡೆಯುತ್ತಾರೆಂದು ನನಗನ್ನಿಸಿತು. ಆದರೆ ಆಶ್ಚರ್ಯ! ‘ಬಾ ಮಗಳೆ. ಆಟ ಚೆನ್ನಾಗಾಯಿತೇನು ಇಂದು? ಒಳಗೆ ಹೋಗಿ ಸ್ನಾನ ಮಾಡಿ ಬಾ. ಅಮ್ಮ ನಿನಗೆ ಸೂಪ್ ಮಾಡಿಟ್ಟಿದ್ದಾರೆ. ನಿನ್ನ ಸ್ನಾನವಾಗುವಷ್ಟರಲ್ಲಿ ನಾನು ಬಂದು ಸೂಪ್ ಬಿಸಿ ಮಾಡಿ ಕೊಡುತ್ತೇನೆ.’
ನಾನೆದ್ದೆ. ಹೊರಡುವಾಗ ಅವರು ಕೇಳಿದರು, ‘ಡ್ಯಾಡಿ, ಅಮ್ಮನಿಗೆ ಪುಸ್ತಕ ಓದುವ ಅಭ್ಯಾಸವಿದೆಯೊ?’ ನಾನು ಇಲ್ಲವೆಂದೆ. ನಾನು ಪ್ರಬಂಧದಲ್ಲಿ ಬರೆದಿದ್ದನ್ನು ಅವರು ಓದಿರಬಹುದು – ಅಮ್ಮ ಟೀವಿ ನೋಡುತ್ತಾರೆ. ಡ್ಯಾಡಿ ಕಚೇರಿಯ ಕಡತಗಳನ್ನು ತೆರೆದು ಕೂರುತ್ತಾರೆ. ಬಾಗಿಲು ಕಿಟಕಿಗಳು ಭದ್ರವಾಗಿ ಮುಚ್ಚಿರುತ್ತವೆ. ಬಾಗಿಲು ತೆರೆದೊಡನೆ ಬರುವ ತಂಗಾಳಿ ನನಗಿಷ್ಟ. ಅಷ್ಟೇ ನನಗೆ ಮುಚ್ಚಿದ ಕಿಟಕಿಗಳಿಂದಲೂ ಅಪರೂಪ… ಆ ದಿನ ನಾನು ಮೊದಲ ಬಾರಿಗೆ ಒಂದು ಬೇರೆಯೇ ಡ್ಯಾಡಿಯನ್ನು ನೋಡಿದ್ದೆ – ಸ್ಟೆಲ್ಲಾಳ ಡ್ಯಾಡಿ.
(ಈ ಕಾದಂಬರಿಯ ಖರೀದಿಗೆ ಸಂಪರ್ಕಿಸಿ : ಬಹುವಚನ 8073321430)
*
ಪರಿಚಯ : ಕಿಶೂ ಬಾರ್ಕೂರು (ಕಿಶೋರ್ ಕುಮಾರ್ ಪೀಟರ್ ಗೊನ್ನಾಲ್ವಿಸ್) ಕೊಂಕಣಿಯ ಕವಿ, ಲೇಖಕ. ಕೊಂಕಣಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕವಿತೆ, ಸಣ್ಣ ಕಥೆ ಹಾಗೂ ವೈಜ್ಞಾನಿಕ ವಿಷಯಗಳ ಮೇಲೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಸಂಗೀತ, ನಾಟಕ ಹಾಗೂ ಸಿನೆಮಾ ಇವರ ಅಭಿರುಚಿಯ ಕ್ಷೇತ್ರಗಳು. ಇವರು ಗಾಯಕರೂ ಹೌದು. ಪ್ರಕಟಿತ ಕೃತಿಗಳು : ಧಾಕ್ಷ್ಯಾ ದೆವಾಚಿಂ ಭುರ್ಗಿಂ’, ‘ರುಪ್ಲಿಂ’. ರುಪ್ಲಿಂ ಕೃತಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. ಕವಿತಾ ಟ್ರಸ್ಟಿನ ಮಾಜಿ ಕಾರ್ಯದರ್ಶಿಯಾಗಿರುವ ಇವರು ಪ್ರಸ್ತುತ ದಾಯ್ಜಿ ವರ್ಲ್ಡ್ ಮಾಧ್ಯಮ ಸಂಸ್ಥೆಯ ನಿರ್ದೇಶಕ ಹಾಗೂ ಉಡುಪಿ ಘಟಕದ ಮುಖ್ಯಸ್ಥ.
ಇದನ್ನೂ ಓದಿ : Jnanpith Awards: ಕೊಂಕಣಿ ಸಾಹಿತಿ ದಾಮೋದರ್ ಮೌಜೊ, ಅಸ್ಸಾಮಿ ಕವಿ ನೀಲ್ಮಣಿ ಫೂಕನ್ಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆ
ಇದನ್ನೂ ಓದಿ : New Publication : ಭಾರತದ ಬಹುಭಾಷಾ ಸಾಹಿತ್ಯಕನ್ನಡಿ ‘ಬಹುವಚನ’; ಕನ್ನಡಕ್ಕೊಂದು ಹೊಸ ಪ್ರಕಾಶನ
Published On - 12:21 pm, Wed, 8 December 21