Kuvempu : ‘ಟಿ. ಎಸ್. ಎಲಿಯಟ್​ರ ಕಾವ್ಯದ ಬಗ್ಗೆ ಅಣ್ಣ ಯಾವತ್ತೂ ಶ್ರೇಷ್ಠ ಎನ್ನುವ ಅಭಿಪ್ರಾಯ ಇಟ್ಟುಕೊಂಡಿರಲಿಲ್ಲ’

K.P. Poornachandra Tejaswi : ‘ಆಡಿಟರಿ ಇಮ್ಯಾಜಿನೇಶನ್’ ಎಂದರೆ ಶ್ರವಣ ಪ್ರತಿಭೆ ಎಂದು ಕರೆಯಬಹುದು. ಅಣ್ಣನ ಅಭಿಪ್ರಾಯದ ಪ್ರಕಾರ ‘ಪ್ರತಿಯೊಂದು ಭಾಷೆಯೂ ಒಂದು ಆರ್ಕೆಸ್ಟ್ರಾ ಇದ್ದಹಾಗೆ. ಅವಕ್ಕೆ ಅದರದೇ ಆದ ಸಂಗೀತ ಇರುತ್ತದೆ. ಸಂಗೀತ ಎಂದ ಕೂಡಲೇ ನಾವು ರಾಗ ತಾಳಗಳ ಸರಿಗಮಪದನಿಸ ಸಂಗೀತವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತೇವೆ. ಅದು ಖಂಡಿತಾ ಅಲ್ಲ.‘

Kuvempu : ‘ಟಿ. ಎಸ್. ಎಲಿಯಟ್​ರ ಕಾವ್ಯದ ಬಗ್ಗೆ ಅಣ್ಣ ಯಾವತ್ತೂ ಶ್ರೇಷ್ಠ ಎನ್ನುವ ಅಭಿಪ್ರಾಯ ಇಟ್ಟುಕೊಂಡಿರಲಿಲ್ಲ’
ರಾಷ್ಟ್ರಕವಿ ಕುವೆಂಪು
Follow us
ಶ್ರೀದೇವಿ ಕಳಸದ
|

Updated on:Dec 08, 2021 | 9:50 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com 

*

ಲೇಖಕ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಬರೆದ ‘ಅಣ್ಣನ ನೆನಪು’ ಕೃತಿಯಿಂದ.

*

ನನಗೆ ಮೊದಲಿನಿಂದಲೂ ಲೆಕ್ಕ ಎಂದರೆ ಆಗುವುದೇ ಇಲ್ಲ. ಅಂಕಗಣಿತದಲ್ಲಿ ಏನು ಮಾಡಿದರೂ ಪಾಸ್ ಮಾಡಲು ಸಾಧ್ಯವಾಗದೆ ಎಸ್​.ಎಸ್​.ಎಲ್​.ಸಿಯಲ್ಲಿ ಎರಡುಸಾರಿ ಢುಮ್ಕಿ ಹೊಡೆದೆ. ಅಣ್ಣ ನನ್ನ ಗೋಳು ನೋಡಲಾರದೆ ತಾವೇ ತಮ್ಮ ಕೈಲಾದಷ್ಟು ಅಲ್ಜೀಬ್ರ್ ಮತ್ತು ಮ್ಯಾಥಮಾಟಿಕ್ಸ್ ಹೇಳಿಕೊಟ್ಟರು. ಆದರೂ ಇವುಗಳಲ್ಲಿ ಮೂವತ್ತೈದು ನಂಬರು ತಗೊಂಡು ಎಸ್ಸೆಸ್ಸೆಲ್ಸಿ ಕಂಟಕ ದಾಟಬೇಕಾದರೆ ನನಗೆ ಮೂರು ವರ್ಷ ಹಿಡಿಯಿತು. ಆಮೇಲೆ ಎಲ್ಲರೂ ನನಗೆ ಸಿ.ಬಿ.ಜಡ್ ತಗೋ. ಅದರಲ್ಲಿ ಲೆಕ್ಕವ ತೊಂದರೆಯೇ ಇಲ್ಲ ಎಂದು ಹುರಿದುಂಬಿಸಿದರು. ಆದರೆ ನಿಧಾನವಾಗಿ ಕೆಮಿಸ್ಟ್ರಿಯಲ್ಲಿ ಎಂತೆಂಥದೋ ಥಿಯರಮ್​ಗಳು ಲೆಕ್ಕಗಳು ಶುರುವಾದವು. ನನ್ನ ತಲೆ ಕೆಲಸ ಮಾಡುವುದನ್ನು ನಿಲ್ಲಿಸಿತು. ಮತ್ತೆ ಜೂನಿಯರ್ ಇಂಟರಿನಲ್ಲೇ ಢುಮ್ಕಿ!

ನನಗೆ ರೇಜಿಗೆ ಹತ್ತಿಹೋಯ್ತು. ವಿದ್ಯಾಭ್ಯಾಸದ ಮೇಲೇ ಬೇಸರ ಬಂದು ನಾನು ಡಿಗ್ರಿ ಪಡೆಯಬಹುದೆಂಬ ಆತ್ಮವಿಶ್ವಾಸವೇ ಹೋಯ್ತು. ನಾನು ಶಿವಮೊಗ್ಗಾಕ್ಕೆ ಹೋಗಿ ಅಲ್ಲಿ ಆರ್ಟ್ಸ್​ ತಗೊಂಡು ಓದುತ್ತೇನೆಂದು ಅಣ್ಣನಿಗೆ ಹೇಳಿ ಮೈಸೂರಿಗೆ ವಿದಾಯ ಹೇಳಿದೆ. ಶಿವಮೊಗ್ಗ ಆಗ ಸಾಹಿತ್ಯ ಚಟುವಟಿಕೆಗಳ ಬೀಡಾಗಿತ್ತು. ಅಲ್ಲಿ ಕಡಿದಾಳು ಶಾಮಣ್ಣ, ಕೋಣಂದೂರು ಲಿಂಗಪ್ಪ ಮುಂತಾದ ತತ್ವಜ್ಞಾನಿಗಳ ಮತ್ತು ರಾಜಕೀಯ ನೇತಾರರ ಸಹವಾಸದಲ್ಲಿ ನನ್ನ ಆತ್ಮವಿಶ್ವಾಸದಿಂದ ಮತ್ತೆ ಚೇತರಿಸಿಕೊಂಡಿದ್ದು ಬೇರೆಯದೇ ಕತೆ. ಅವರೆಲ್ಲಾ ಪರೀಕ್ಷೆಯೊಂದರಲ್ಲೇ ಅಲ್ಲದೆ ಜೀವನದ ಅನೇಕ ಕ್ಷೇತ್ರಗಳಲ್ಲಿ ‘ಫೇಲ್’ ಆಗಿ ಸೋತು ಸುಣ್ಣವಾಗಿದ್ದರೂ ತಿಲಮಾತ್ರವೂ ಎದೆಗುಂದದೆ ಅದನ್ನೆಲ್ಲಾ ಜೀವನದ ಸಹಜ ಸ್ಥಿತಿಯಾಗಿ ಪರಿಗಣಿಸಿದ್ದ ಸ್ಥಿತಪ್ರಜ್ಞರಾಗಿದ್ದುದು ನನಗಿದ್ದ ಕೀಳರಿಮೆಯನ್ನು ಶಾಶ್ವತವಾಗೇ ನನ್ನ ವ್ಯಕ್ತಿತ್ವದಿಂದ ತೊಡೆದುಹಾಕಿತು. ಅಣ್ಣನ ನೆನಪಿಗೆ ನೇರವಾಗಿ ಸಂಬಂಧಿಸಿಲ್ಲದ ಕಾರಣ ಅದನ್ನೆಲ್ಲ ಹೇಳಬೇಕೆಂಬ ನನ್ನ ಉತ್ಸಾಹಕ್ಕೆ ನಾನು ಲಗಾಮು ಹಾಕಬೇಕಾಗಿದೆ. ಅಂತೂ ಶಿವಮೊಗ್ಗದಿಂದ ಹಿಂದಿರುಗಿದಾಗ ಸಾಹಿತ್ಯದ ಬಗ್ಗೆ ನನಗಿದ್ದ ಧೋರಣೆಯನ್ನು ಅಸಾಧಾರಣ ಬದಲಾವಣೆಗಳಾಗಿದ್ದುವು.

ಟಿ. ಎಸ್. ಎಲಿಯಟ್​ರ ಕಾವ್ಯದ ಬಗ್ಗೆ ಅಣ್ಣ ಯಾವತ್ತೂ ಶ್ರೇಷ್ಠ ಎನ್ನುವ ಅಭಿಪ್ರಾಯ ಇಟ್ಟುಕೊಂಡಿರಲಿಲ್ಲ. ಅದನ್ನು ಕಾವ್ಯವೇ ಅಲ್ಲವೆಂದು ತಿರಸ್ಕರಿಸದಿದ್ದರೂ ಅದು ಮಹತ್ತಾದುದೆಂದಾಗಲೀ, ಅದೊಂದು ಕಾವ್ಯ ಸಂಪ್ರದಾಯವನ್ನೇ ಹುಟ್ಟಿಹಾಕುವಷ್ಟು ಪ್ರಮುಖವಾದುದೆಂದಾಗಲೀ ಅಣ್ಣ ಪರಿಗಣಿಸಿರಲಿಲ್ಲ. ಆದರೆ ಎಲಿಯಟ್ ನಮ್ಮ ಕಾಲದ ಶ್ರೇಷ್ಠ ವಿಮರ್ಶಕನೆಂದೂ, ಅತಿ ಪ್ರಮುಖ ಚಿಂತಕನೆಂದೂ ಮುಕ್ತ ಮನಸ್ಸಿನಿಂದ ಹೊಗಳುತ್ತಿದ್ದರು.

ಆಗ ನವ್ಯಕಾವ್ಯದ ಕಾಲ. ಎಲ್ಲರೂ ಟಿ. ಎಸ್. ಎಲಿಯಟ್ಟರ ಕಾವ್ಯವನ್ನು ಮನಸಾರೆ ಹೊಗಳುತ್ತಿದ್ದರು. ನಾನು ಕನ್ನಡ ಆನರ್ಸಿಗೆ ಸೇರಿಕೊಂಡಿದ್ದೆ. ಅಣ್ಣನ ಈ ಧೋರಣೆ ನನಗೆ ವಿಚಿತ್ರವಾಗಿ ಕಾಣುತ್ತಿತ್ತು. ಆಗ ಇಂಗ್ಲಿಷ್ ರೀಡರಾಗಿದ್ದ ಶ್ರೀ ಅಣ್ಣೇಗೌಡರು ಅಣ್ಣನಿಗೆ ಎಲಿಯಟ್ಟನ ‘ಸೆಲೆಕ್ಟೆಡ್ ಪ್ರೋಸ್’ ಪುಸ್ತಕವೊಂದನ್ನು ಕಳಿಸಿದ್ದರು. ಅಣ್ಣ ಅದನ್ನು ಓದುತ್ತಾ ದರ ಮೇಲೆ ವ್ಯಾಪಕವಾಗಿ ಟಿಪ್ಪಣಿ ಮಾಡುತ್ತಾ ಕುಳಿತಿದ್ದರು. ನಾನು ಅಲ್ಲೇ ಕುಳಿತಿದ್ದರಿಂದ ಆಗಾಗ ನನಗೆ ಅವನ ಅಭಿಪ್ರಾಯಗಳನ್ನು ವಿವರಿಸುತ್ತಿದ್ದರು. ಆ ಪುಸ್ತಕ ಮೊನ್ನೆ ನನಗೆ ಸಿಕ್ಕಿತು. ಅಣ್ಣ ಅವತ್ತು ಅದರ ಮೇಲೆ ಕನ್ನಡ ಸಾಹಿತ್ಯದ ಉದಾಹರಣೆಗಳೊಂದಿಗೆ ಮಾಡಿಕೊಂಡಿದ್ದ ಟಿಪ್ಪಣಿಗಳು ಎಷ್ಟು ಅದ್ಭುತವಾದವು ಎಂದು ಓದಿದ ನನಗೆ ಅಚ್ಚರಿಯಾಯ್ತು. ಅವತ್ತು ಅಣ್ಣ ನನಗೆ ಎಲಿಯಟ್ಟನ ಆಡಿಟರಿ ಇಮ್ಯಾಜಿನೇಷನ್ ಎಂದರೇನೇಂದು ವಿವರಿಸಿದರು.

ಅಣ್ಣ ನನಗೆ ಸಾಹಿತ್ಯ ಸೃಷ್ಟಿಗೆ ಅತಿ ಮುಖ್ಯವಾದ ವಿಚಾರವನ್ನು ಅವತ್ತು ವಿವರಿಸಿದರೆಂದು ನಾನು ನಂಬಿದ್ದೇನೆ. ಮೊನ್ನೆ ಕನ್ನಡ ಕಾವ್ಯಕಮ್ಮಟ ಒಂದರ ವರದಿ ನೋಡಸಿಕ್ಕಿತ್ತು. ವಿಷಾದದ ಅಂಶವೆಂದರೆ ಅಣ್ಣ ಅವತ್ತು ನನಗೆ ವಿವರಿಸಿದ ಆಡಿಟರಿ ಇಮ್ಯಾಜಿನೇಷನ್ ವಿಚಾರ ಯಾರೂ ಪರೋಕ್ಷವಾಗಿ ಸಹ ಆ ಕಮ್ಮಟದಲ್ಲಿ ಪ್ರಸ್ತಾಪಿಸಿರಲಿಲ್ಲ. ಆ ವಿಷಯ ತಿಳಿದವರ ಸಾಹಿತ್ಯ ಸೃಷ್ಟಿ ವ್ಯರ್ಥವೆಂದೇ ನನಗನ್ನಿಸುತ್ತದೆ.

Abhijnana Anecdote from Annana Nenapu by Kannada eminent writer and son of Kuvempu KP Poornachandra Thejaswi

ಅಣ್ಣನ ನೆನಪಿನೊಂದಿಗೆ ತೇಜಸ್ವಿ

ಅಣ್ಣನ ಅವತ್ತಿನ ಸಂಭಾಷಣೆಯ ಸಾರಾಂಶವನ್ನಷ್ಟೇ ಇಲ್ಲಿ ನಾನು ಹೇಳಬಯಸುತ್ತೇನೆ. ‘ಆಡಿಟರಿ ಇಮ್ಯಾಜಿನೇಶನ್’ ಎಂದರೆ ಶ್ರವಣ ಪ್ರತಿಭೆ ಎಂದು ಕರೆಯಬಹುದು. ಅಣ್ಣನ ಅಭಿಪ್ರಾಯದ ಪ್ರಕಾರ ‘ಪ್ರತಿಯೊಂದು ಭಾಷೆಯೂ ಒಂದು ಆರ್ಕೆಸ್ಟ್ರಾ ಇದ್ದಹಾಗೆ. ಅವಕ್ಕೆ ಅದರದೇ ಆದ ಸಂಗೀತ ಇರುತ್ತದೆ. ಸಂಗೀತ ಎಂದ ಕೂಡಲೇ ನಾವು ರಾಗ ತಾಳಗಳ ಸರಿಗಮಪದನಿಸ ಸಂಗೀತವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತೇವೆ. ಅದು ಖಂಡಿತಾ ಅಲ್ಲ. ಭಾಷೆ ಮೂಲತಃ ಸ್ವರ ವ್ಯಂಜನ ಒತ್ತಕ್ಷರ ದೀರ್ಘಗಳ ವಿಚಿತ್ರ ಉಚ್ಚರಣೆಯ ಶಬ್ದಗಳು. ಒಂದೊಂದು ಭಾಷೆಯಲ್ಲೂ ಇವು ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟವಾಗಿ ಸಂಯೋಜನೆಗೊಂಡಿರುತ್ತವೆ. ಆ ಭಾಷೆ, ಆ ಭಾಷೆಯನ್ನಾಡುವ ಜನರ ವ್ಯಕ್ತಿತ್ವ, ಅವರ ಮಾತಿನ ಧಾಟಿ, ಇವೆಲ್ಲದರ ಸಮ್ಮಿಳನ ಆ ಭಾಷೆ ಸಂಗೀತ. ಅಥವಾ ಛಂದಸ್ಸಂಗೀತ. ಭಾಷೆಯಲ್ಲಿ ಮೇಲು ನೋಟಕ್ಕೆ ಯಾವನು ಯಾವ ಶಬ್ದವನ್ನು ಹೇಗೆ ಬೇಕಾದರೂ ಉಚ್ಚರಿಸಬಹುದಾದ ಸ್ವಾತಂತ್ರ್ಯವಿರುವಂತೆ ಕಾಣುತ್ತದೆ. ಆದರೆ ಭಾಷೆಯಲ್ಲಿನ ಪ್ರತಿಯೊಂದು ಶಬ್ದವೂ ಒಂದು ಅರ್ಥಪೂರ್ಣ ವಾಕ್ಯದಲ್ಲಿ ತನ್ನ ಅಕ್ಕಪಕ್ಕದ ಶಬ್ದಗಳ ಸರಣಿಯಲ್ಲಿ ಸಂಯೋಜನೆಗೊಂಡ ನಾದ, ವ್ಯಾಕರಣದ, ಅರ್ಥದ ತರ್ಕಗಳಿಂದ ನಾವು ವಾಕ್ಯಗಳನ್ನು ಸೃಷ್ಟಿಸುತ್ತೇವಾದರೂ ಇವೆಲ್ಲವನ್ನೂ ಅಪ್ರಜ್ಞಾಪೂರ್ವಕವಾಗಿ ಒಂದು ಭಾಷೆಯ ಛಂದಸ್ಸಂಗೀತ ನಿರ್ದೇಶಿಸುತ್ತದೆ. ಇದು ಆಯಾ ಭಾಷೆಯ ಕಾವ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ಗದ್ಯ ಪದ್ಯಗಳೆರಡರಲ್ಲೂ ಇದು ಬೇರೆ ಬೇರೆ ತೀವ್ರತೆಯೊಂದಿಗೆ ಕಾರ್ಯಪ್ರವೃತ್ತವಾಗಿರುತ್ತದೆ.

ಯಾರಿಗೆ ಭಾಷೆಯ ಈ ಆಯಾಮಗಳು ಗೊತ್ತಿರುತ್ತದೆಯೋ, ಯಾರು ಭಾಷೆಯ ಈ ಛಂದಸ್ಸಂಗೀತಕ್ಕೆ ಸ್ಪಂದಿಸಬಲ್ಲರೋ ಅವರು ಮಾತ್ರ ಉತ್ತಮ ಸಾಹಿತ್ಯ ರಚಿಸಬಲ್ಲರು. ಕೆಲವರು ಈ ಬಗ್ಗೆ ಪ್ರಜ್ಞಾಪೂರ್ವಕವಾಗಿರಬಹುದು. ಕೆಲವರು ಅಪ್ರಜ್ಞಾಪೂರ್ವಕವಾಗಿರಬಹುದು. ಆದ್ದರಿಂದಲೇ ಕಾವ್ಯದಲ್ಲಿ ಅಚ್ಚಗನ್ನಡ ಶಬ್ದಗಳನ್ನು ಉಪಯೋಗಿಸಬೇಕು ಎನ್ನುವುದಾಗಲೀ ಅಥವಾ ಒಬ್ಬನ ಕಾವ್ಯ ಸಂಸ್ಕೃತಭೂಯಿಷ್ಠವಾಗಿದೆ ಎಂದು ತೆಗಳುವುದಾಗಲೀ ಅರ್ಥವಿಲ್ಲದ್ದು. ಒಂದು ಭಾಷೆಯ ಛಂದಸ್ಸಂಗೀತವನ್ನು ಬಲ್ಲವನು ಯಾವ ಪದವನ್ನೂ ಹೇಗೆ ಬೇಕಾದರೂ ಬಳಸಿ ಕಾವ್ಯ ಬರೆಯಬಹುದು. ವ್ಯಾಕರಣ ನಿಬಂಧನೆಗಳಿಗೆ ಮಹಾಕವಿ ಪ್ರಯೋಗಗಳು ಒಳಪಡುವುದಿಲ್ಲ ಎಂದು ಕೇಶಿರಾಜ ಹೇಳಿದ್ದು ಈ ಅರ್ಥದಲ್ಲೇ ಇರಬಹುದು. ಸಹೃದಯ ನೋಡಬೇಕಾದುದು ಅದು ರಸಾನುಭವದ ‘ಅತಿ ಕ್ಷಿಪ್ರ ಅರ್ಥವಾಗುವುದಕ್ಕೆ ಮೊದಲೇ ರಸಾನುಭವಗಮ್ಯವಾಗುತ್ತದೆ’ ಎಂದು ಹೇಳಿರುವುದು ಈ ದೃಷ್ಟಿಯಿಂದ ಸತ್ಯ.’

ಸೌಜನ್ಯ : ಪುಸ್ತಕ ಪ್ರಕಾಶನ, ಮೈಸೂರು. 0821-2545774

ಇದನ್ನೂ ಓದಿ : Autobiography : ‘ಅಲ್ಲಿಯ ವಾತಾವರಣ ಸಂಕಟಕ್ಕೀಡು ಮಾಡಿತು, ಮಕ್ಕಳನ್ನು ಶಾಖೆಗೆ ಕಳಿಸೋಲ್ಲ ಅಂದುಬಿಟ್ಟೆ’

Published On - 9:41 am, Wed, 8 December 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ