Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com * ಲೇಖಕಿ ಡಾ. ವಿಜಯಾ ಅವರ ‘ಕುದಿ ಎಸರು’ ಆತ್ಮಕಥಾನಕದಿಂದ.
ರಾಮು ಚಿಕ್ಕಪ್ಪ ಮೊದಲಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿದ್ದವರು. ಇವತ್ತಿನ ಅಥವಾ ಆಗಿ ಹೋದ ಹಲವು ಹಿರಿಯ ನಾಯಕರಿಗೆ ತುಂಬ ಹತ್ತಿರದವರಾಗಿದ್ದರು. ನಮ್ಮ ಮನೆಯ ಎಲ್ಲರೂ ಆರ್.ಎಸ್.ಎಸ್ಗೆ ಹತ್ತಿರದವರೇ. ಅಪ್ಪು ಕೂಡ ಏನೇ ತಂಟೆಕೋರನಾಗಿದ್ದರೂ ಸಂಜೆ ಹೊತ್ತಿಗೆ ಶಾಖೆಗೆ ಹೋಗಿಬಿಡುತ್ತಿದ್ದ. ರಾಮು ಚಿಕ್ಕಪ್ಪ ಆರ್.ಎಸ್.ಎಸ್ನಲ್ಲಿ ಪ್ರಚಾರಕ್ ಆಗಿದ್ದರು. ಅಂಥವರು ಸಾಮಾನ್ಯವಾಗಿ ಮದುವೆ ಆಗೋಲ್ಲ. ಇವರೂ ಹಾಗೇ ಇದ್ದರು. ಅನಂತರ ಮನಸ್ಸು ಬದಲಾಯಿಸಲಾಯಿತು ಅಥವಾ ಅವರ ಮನ ಒಲಿಸಲಾಯಿತು. ಬಹಳ ಹಿಂದೆ ಗುರೂಜಿ ಗೋಲವಾಲ್ಕರ್ ದಾವಣಗೆರೆಗೆ ಬಂದಾಗ ನಮ್ಮ ಮನೆಯದೇ ಆತಿಥ್ಯ. ಮನೆತನಕ ಬಂದು ನನ್ನ ತಾತನನ್ನು ಮಾತನಾಡಿಸಿದ್ದರು. ಗುರೂಜಿಯ ಸೇವೆಗಾಗಿ ಮನೆಯ ಬೆಳ್ಳಿ ಪಾತ್ರೆಗಳೆಲ್ಲ ಸಂದೂಕ ಬಿಟ್ಟು ಹೊರಬಂದಿದ್ದವು. ಒಂದು ಬೆಳ್ಳಿ ತಟ್ಟೆ ಕಳೆದು ಹೋಗಿ ರಾದ್ಧಾಂತವೇ ಆಗಿತ್ತು. ನನಗಾದರೂ ಮನೇಲಿ ಏನು ಕೆಲಸ? ಚಿಕ್ಕಪ್ಪನ ಜೊತೆ ಸಂಜೆಯ ಶಾಖೆಗೆ ಹೋಗುತ್ತಿದ್ದೆ. ಧ್ವಜವಂದನೆ ಮಾಡಲು ಹೋಗಿ ಬೈಸಿಕೊಂಡಿದ್ದೆ. ಆ ದಿನಗಳಲ್ಲಿ ಆರ್.ಎಸ್.ಎಸ್ನಲ್ಲಿ ಹೆಂಗಸರೆಂದರೆ ಗಾವುದ ದೂರ ಹೋಗುತ್ತಿದ್ದರು. ನನ್ನಂಥ ಎಳೆಬಾಲೆಯೂ ಅವರಿಗೆ ‘ಹೆಂಗಸು’ ಅಂತ ಕಂಡಿತೇನೋ! ಎಷ್ಟೋ ಬಾರಿ ಏನೇನೋ ಮೀಟಿಂಗ್ಗಳ ಕಾರಣದಿಂದಲೇ ಚಿಕ್ಕಪ್ಪ ಮನೆಗೆ ಹೊರಡೋದು ತಡ ಆಗುತ್ತಿತ್ತು. ನಾನು ಆರ್.ಎಸ್.ಎಸ್ ಕಚೇರಿಯಲ್ಲೇ ಒಂದು ಮೂಲೆ ಹಿಡಿದು ಮಲಗಿಬಿಡುತ್ತಿದ್ದೆ.
‘ವಂದೇ ಮಾತರಂ’ ಹಾಡ್ತಿದ್ದೆವು. ದೇಶಭಕ್ತಿಗಳದೇ ಒಂದ ಪ್ರಿಂಟಾದ ಪುಸ್ತಕವೂ ಇತ್ತು. ‘ಹಮ್ ಹಿಂದೂ ಹಿಂದೀ ಭಾಷೀ ಹಿಂದೂಸ್ಥಾನ್ ಹಮಾರಾ ಹೈ’ ಅಂತ ಹಾಡ್ತಿದ್ದೆವು. ಇವತ್ತು ಅವರ ತತ್ವ ಒಪ್ಪಲಿ ಬಿಡಲಿ ಅಲ್ಲಿಯ ಶಿಸ್ತು-ಗೀತ ಗಾಯನ ನನಗೆ ಇಷ್ಟವಾಗುತ್ತಿತ್ತು.
ಆರ್.ಎಸ್.ಎಸ್. ಗಾಢವಾದ ಪ್ರಭಾವ ನಮ್ಮೆಲ್ಲರ ಮೇಲೆ ಆಗಿತ್ತು. ಅದರ ಯಾವ ತತ್ವದ ಬಗೆಗೂ ತಿಳಿಯದು. ಅದೊಂದು ಫ್ಯಾನ್ಸಿ, ಅಷ್ಟೇ.
ಮುಂದೆ ನಾನು ನನ್ನ ಮಕ್ಕಳನ್ನೂ ಒತ್ತಾಯ ಮಾಡಿ ಶಾಖೆಗೆ ಕಳಿಸುತ್ತಿದ್ದೆ. ಅವರಿಗೆ ಇಷ್ವವಿಲ್ಲದೆ ಅತ್ತರೆ, ಹೊಡೆದು ತಳ್ಳುತ್ತಿದ್ದೆ. ಶಾಖೆಯಿಂದ ಯಾರಾದರೂ ಬಂದು ಕರೆದೊಯ್ಯುತ್ತಿದ್ದರು. ಹುಡುಗರಿಗೆ ಇದೆಲ್ಲ ಎಷ್ಟು ಹಿಂಸೆಯಾಗುತ್ತಿತ್ತೋ, ಪಾಪ. ಅದೇ ಮಕ್ಕಳನ್ನು ಸಭ್ಯರಾಗಿ ಬೆಳೆಸುವ ದಾರಿ ಎಂದುಕೊಂಡಿದ್ದೆ. ಅದಕ್ಕೆ ಹಾಗೆ ಮಾಡಿದೆ. ಆಗಾಗ ಬೆಂಗಳೂರಿನ ಕೇಶವಕೃಪಾಗೆ ಹೋಗಿ ಬರುತ್ತಿದ್ದೆ. ಯಾದವರಾವ್ ಜೋಶಿ ಮೊದಲಾದವರು ಬಂದಾಗ ಮಾತಾಡುತ್ತಿದ್ದೆ. ಅವರೆಲ್ಲ ರಾಮು ಚಿಕ್ಕಪ್ಪನ ಗೆಳೆಯರು. ಆನಂತರವೂ ಬೆಂಗಳೂರಿನ ಹಲವು ಆರ್. ಎಸ್.ಎಸ್. ನಾಯಕರ ಪರಿಚಯ ಆಗಿತ್ತು. ಆರ್.ಎಸ್.ಎಸ್. ರಾಜಕೀಯವಾಗಿ ತೊಡಗಿಸಿಕೊಳ್ಳುವ ಹಂತದಲ್ಲಿ ಜನಸಂಘ ಪ್ರಾರಂಭವಾಯಿತಷ್ಟೇ- ಆ ಸಂದರ್ಭದಲ್ಲಿ ಮಹಿಳೆಯರನ್ನು ಒಳಗೊಳ್ಳುವ ಯೋಜನೆ ಸಿದ್ಧವಾಯಿತು. ಹನುಮಂತನಗರದ ಒಂದು ಮನೆಯಲ್ಲಿ (ಗೋಡಬೋಲೆ ಅಂತಲೋ ಏನೋ ಹೆಸರು) ಮಹಿಳೆಯರನ್ನೆಲ್ಲ ಸೇರಿಸಿದರು. ಪದೇಪದೆ ಭೇಟಿಯಾಗುತ್ತಿದ್ದೆವು. ಮಾತುಕತೆಗಳಾಗುತ್ತಿದ್ದವು. ಒಮ್ಮೆ ಆರ್.ಎಸ್.ಎಸ್ ಶಾಖೆಗೆ ಮಕ್ಕಳನ್ನು ಕಳಿಸಿದ್ದೆ. ನೋಡಿ ಬರಲು ಹೋದೆವು. ಏಕೋ ಅಲ್ಲಿಯ ವಾತಾವರಣ ಹಿಡಿಸಲಿಲ್ಲ. ಸಂಕಟವಾಯಿತು. ಚಿಕ್ಕ ಮಗ ಸುರೇಶನಂತೂ ಬೆದರಿನಿಂತಿದ್ದ. ಮಗು ಹೀಗೇಕಾಗಿದೆ ಅಂತ ಆತಂಕವಾಯಿತು.
ಡಾ. ವಿಜಯಾ ಅವರ ಮಗ, ನಿರ್ದೇಶಕ ಬಿ. ಸುರೇಶ ಮತ್ತು ‘ಕುದಿ ಎಸರು’
ಕ್ಯಾಂಪ್ ಮುಗಿದು ಮಕ್ಕಳು ಮನೆಗೆ ಬಂದ ಮೇಲೆ ಏನೇನು ನಡೆಯುತ್ತದೆಂದು ಕೇಳಿ ತಿಳಿದೆ. ಅವರು ಹೇಳುವ ಕತೆಗಳು ದೇಶಭಕ್ತಿಯವು ಅನ್ನಿಸಿದರೂ ದ್ವೇಷದ ಬೀಜ ಬಿತ್ತುವಂಥವು ಅನ್ನಿಸಿತ್ತು ಮತ್ತೆ ಕ್ಯಾಂಪ್ನಲ್ಲಿ ಮಕ್ಕಳೊಂದಿಗೆ ಕೆಲವರು ಕೆಟ್ಟದಾಗಿ ನಡೆದುಕೊಂಡಿದ್ದರು. ಮದುವೆಯಿಲ್ಲದ ಗಂಡಸರು, ಚಟವೋ… ಇವನ್ನೆಲ್ಲ ನೋಡಿ ಜೊತೆಯ ಮಕ್ಕಳ ನೋವು-ಸಂಕಟ ಕಂಡು ನನ್ನ ಮಕ್ಕಳು ಹೆದರಿದ್ದವು. ಸುರೇಶನಂತೂ ಕ್ಯಾಂಪ್ ಎಂದಕೂಡಲೇ ಮುಷ್ಟಿ ಬಿಗಿಹಿಡಿದು, ಕಣ್ಣು ಕೆಂಪು ಮಾಡಿಕೊಂಡು ಬುಸುಗುಡುತ್ತಿದ್ದ. ಅವನು ಅಲ್ಲಿ ಕೇಳಿ ತಿಳೀದನೆಂದು ಹೇಳಿದ ಕತೆಗಳೂ ಕೆಟ್ಟದಾಗಿದ್ದವು. ಮಾನವ ಪ್ರೇಮಕ್ಕೆ, ಬದುಕಿಗೆ ವಿರುದ್ಧವಾದ ನೀತಿಗಳು, ಮತಾಂಧತೆಯನ್ನು ಪ್ರಚೋದಿಸುವಂಥವು. ಇದೆಲ್ಲ ಸರಿ ಅನ್ನಿಸಲಿಲ್ಲ. ಮಕ್ಕಳನ್ನು ಕಳಿಸೋಲ್ಲ ಅಂದೆ. ಬಹಳ ಕಾಲ ಯಾರ್ಯಾರೋ ಬಂದು ಕಳಿಸಿ ಅಂತ ಕೇಳಿದರು. ಖಾಕಿ ಚಡ್ಡಿ, ಬಿಳಿ ಶರಟು ಗರಿಗರಿಯಾಗಿ ಗಂಜಿ ಹಾಕಿ ಇಸ್ತ್ರಿ ಮಾಡಬೇಕು. ಕರಿಬೂಟುಗಳು ನಿತ್ಯ ಪಾಲಿಷ್ ಆಗಿರಬೇಕು. ಓದುವ ಶಾಲೆಗಳಲ್ಲೂ ಇಲ್ಲದ ನಿಯಮಾವಳಿಗಳು. ಅದೇದೊಡ್ಡ ಕೆಲಸ ಆಗಿಬಿಡುತ್ತಿತ್ತು. ಕ್ಕಳು ಚಡ್ಡಿ ಹಾಕಿ, ಶೂ ಧರಿಸಿ, ದಂಡ ಹಿಡಿದು ಹೊರಟರೆ ಏನೋ ಸಾಧಿಸಿದಷ್ಟು ತೃಪ್ತಿಪಡೋವೇ! ಆರ್.ಎಸ್.ಎಸ್ ಒಮ್ಮೆ ಹೊಕ್ಕರೆ ಬಿಡಿಸಿಕೊಳ್ಳೋದು ಸುಲಭದ ಸಂಗತಿಯಾಗಿರಲಿಲ್ಲ. ಪ್ರೀತಿ ತೋರಿಸ್ತಾರೆ. ಪ್ರೀತಿಯಿಂದಲೇ ಒತ್ತಡ ತರ್ತಾರೆ. ಮನೆಯವರಂತೆ ಹೊಂದಿಕೊಂಡು ಬಿಟ್ಟಿರ್ತಾರೆ. ಅಂತೂ ನಾವು ಹೊರಬಂದೆವು!
* (ಸೌಜನ್ಯ : ನಾಕುತಂತಿ ಪ್ರಕಾಶನ. 08026713782)
ಇದನ್ನೂ ಓದಿ : Ernest Hemingway : ‘ಬರೆಯುವುದು ಏಕಾಂಗಿತನದ ಜೀವನ, ಬರೆಯುವುದನ್ನು ಯಾವ ಸಂಘ ಸಂಸ್ಥೆಗಳೂ ಕಲಿಸಲಾರವು’