New Book : ಅಚ್ಚಿಗೂ ಮೊದಲು : ಸಾಂಸ್ಕೃತಿಕ ಚರಿತ್ರೆಯ ಮರುರಚನಾ ನೆಲೆಗಳು ‘ಬೇರು ಬಿಳಲು’ ಈ ವಾರಾಂತ್ಯ ಬಿಡುಗಡೆ

Caste Dynamics : ‘ಶೂದ್ರವರ್ಗದಿಂದ ಬ್ರಾಹ್ಮಣ ವರ್ಗವು ಸೇವೆಯನ್ನು, ಕ್ಷತ್ರಿಯವರ್ಗವು ರಕ್ತವನ್ನು, ವೈಶ್ಯವರ್ಗವು ಬೆವರನ್ನು ಸದಾ ಬಯಸುತ್ತಿದ್ದವು. ಸೇವೆ-ರಕ್ತ-ಬೆವರುಗಳನ್ನು ನಿರ್ವಂಚನೆಯಿಂದ ಅರ್ಪಿಸುವುದೇ ಶೂದ್ರವರ್ಗದ ಪಾಲಿಗೆ ಧರ್ಮವಾಗಿತ್ತು. ಮೇಲಿನ ವರ್ಗಗಳತ್ತ ಚಲನೆಯು ಧರ್ಮದ್ರೋಹವೆಂದು ನಿರೂಪಿಸುತ್ತಿದ್ದುದನ್ನು ಕಾಣಬಹುದು.’ ಡಾ. ರತ್ನಾಕರ ಸಿ. ಕುನಗೋಡು

New Book : ಅಚ್ಚಿಗೂ ಮೊದಲು : ಸಾಂಸ್ಕೃತಿಕ ಚರಿತ್ರೆಯ ಮರುರಚನಾ ನೆಲೆಗಳು ‘ಬೇರು ಬಿಳಲು’ ಈ ವಾರಾಂತ್ಯ ಬಿಡುಗಡೆ
ಲೇಖಕ ಡಾ. ರತ್ನಾಕರ ಸಿ. ಕುನುಗೋಡು
Follow us
ಶ್ರೀದೇವಿ ಕಳಸದ
|

Updated on:Oct 28, 2021 | 3:03 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಬೇರು ಬಿಳಲು – ಸಾಂಸ್ಕೃತಿಕ ಚರಿತ್ರೆಯ ಮರುರಚನಾ ನೆಲೆಗಳು (ಪಿಎಚ್​.ಡಿ ಮಹಾಪ್ರಬಂಧ)  ಲೇಖಕರು : ಡಾ. ರತ್ನಾಕರ ಸಿ. ಕುನುಗೋಡು ಪುಟ : 304 ಬೆಲೆ : ರೂ. 300 ಮುಖಪುಟ ವಿನ್ಯಾಸ : ರವಿ ಅಜ್ಜೀಪುರ ಪ್ರಕಾಶನ : ವಂಶಿ ಪ್ರಕಾಶನ, ಬೆಂಗಳೂರು

ಈ ಕೃತಿಯನ್ನು ಇದೇ ಶನಿವಾರ (ಅ.30) ಶಿವಮೊಗ್ಗ ಜಿಲ್ಲೆಯ ದೊಂಬೆಕೊಪ್ಪದ ಸಾರ ಕೇಂದ್ರದಲ್ಲಿ ರಂಗಾಯಣದ ನಿಕಟಪೂರ್ವ ನಿರ್ದೇಶಕರಾದ ಡಾ. ಎಂ. ಗಣೇಶ ಅವರು ಬಿಡುಗಡೆ ಮಾಡಲಿದ್ದಾರೆ.

*

ಸಾಂಸ್ಕೃತಿಕ ಚರಿತ್ರೆಯ ಮರುರಚನೆಯ ಸ್ವರೂಪವೇ ಬಹುರೂಪಿಯಾದುದು. ಆಯಾ ಕಾಲಘಟ್ಟದ ತಾತ್ವಿಕ ನಿಲುವುಗಳಿಗೆ, ವ್ಯಕ್ತಿ ಮತ್ತು ಸಮುದಾಯಗಳ ನಿಲುವು, ಧೋರಣೆಗಳಿಗೆ ನಾಟಕಕಾರನ ತಾತ್ವಿಕ ನಿಲುವುಗಳಿಗೆ ಅನುಗುಣವಾಗಿ ಸಾಂಸ್ಕೃತಿಕ ಚರಿತ್ರೆಯನ್ನು ಮುರಿದು ಕಟ್ಟುತ್ತಾ ಬಂದಿರುವುದನ್ನು ಸೂಕ್ಷ್ಮ ವಿಶ್ಲೇಷಣೆಗೆ ಒಳಪಡಿಸಿರುವರು. ಈ ಅಧ್ಯಯನ ಹಿಂದಿನ ಅಧ್ಯಯನಗಳಿಗಿಂತ ಭಿನ್ನವಾದ ಹೊಳಹುಗಳನ್ನು ನೀಡುತ್ತದೆ. ಹೊಸ ಅಧ್ಯಯನಕಾರರಿಗೆ ಮಾರ್ಗಸೂಚಿಯೂ ಆಗಿದೆ. ಗಂಭೀರವಾದ ವಿಷಯ ಮಂಡನೆಗೆ ಪ್ರಬುದ್ಧವಾದ, ಔಚಿತ್ಯಪೂರ್ಣವಾದ ಭಾಷಾಬಳಕೆ ಮಹಾಪ್ರಬಂಧಕ್ಕೆ ಮೆರುಗು ನೀಡಿವೆ. ಪ್ರಬಂಧಕಾರರ ಭಾಷಾಪ್ರೌಢಿಮೆ, ನಿರೂಪಣಾ ವಿಧಾನ ಮೆಚ್ಚಲರ್ಹವಾದುದು. ಕನ್ನಡಕ್ಕೆ ಈ ಮೂಲಕ ಉತ್ತಮವಾದ ಮಹಾಪ್ರಬಂಧವನ್ನು ನೀಡಿರುವರು. ಡಾ. ರಾಮಚಂದ್ರಪ್ಪ . ಬಿ, ಲೇಖಕರು

ಪುರಾಣ, ಚರಿತ್ರೆ ಮತ್ತು ಜಾನಪದಗಳು ಆಧುನಿಕ ಕನ್ನಡ ನಾಟಕಗಳ ವಿಷಯಗಳಾಗಿ ಹೆಚ್ಚು ಒತ್ತಾಸೆಯನ್ನು ಪಡೆದಿರುವುದು ಮೇಲ್ನೋಟಕ್ಕೇ ಕಾಣಿಸುವ ಸಂಗತಿಯಾಗಿದೆ. ಆದರೆ ಈ ಅಧ್ಯಯನವು ಈ ಅಂಶಗಳನ್ನು ಸಾಂಸ್ಕೃತಿಕ ಚರಿತ್ರೆಯನ್ನಾಗಿ ಗುರುತಿಸುವುದು ವಿಶೇಷವಾಗಿದೆ. ರಾಜ, ಮತ, ಗಂಡು, ಅಭಿವೃದ್ಧಿ ಮೊದಲಾದ ಯಾಜಮಾನ್ಯ ನೆಲೆಗಳು ಹೇಗೆ ನಮ್ಮೆಲ್ಲಾ ಚಿಂತನೆಗಳನ್ನು ಆಕ್ರಮಿಸಿಕೊಂಡಿರುತ್ತವೆ ಎಂಬುದನ್ನು ತೆರೆದು ತೋರುವಲ್ಲಿ ಈ ಅಧ್ಯಯನವು ಯಶಸ್ವಿಯಾಗಿದೆ. ಡಾ. ಸಬಿತಾ ಬನ್ನಾಡಿ, ಲೇಖಕಿ

*

ಕುಲ ಮತ್ತು ವಿದ್ಯೆಯ ಹಕ್ಕು ಯಾಜಮಾನ್ಯ ಸಂಸ್ಕೃತಿಯು ಹೆಣೆದ ಸ್ವಹಿತಾಸಕ್ತಿಯ ಜಟಿಲಜಾಲ ಬಹು ಸಂಕೀರ್ಣವಾದುದು. ತನ್ನ ಶ್ರೇಷ್ಠತೆಯ ಅಸ್ತಿತ್ವವನ್ನು ಸದಾ ಜತನವಾಗಿಡಲು ವೈದಿಕಶಾಹಿ ನಿರ್ಮಿಸಿದ ವ್ಯವಸ್ಥಿತ ಹುನ್ನಾರವು, ಬಹುಸಂಖ್ಯಾತ ಸಮುದಾಯವು ಚಲನೆಯಿಲ್ಲದ ಶಾಶ್ವತ ಜಡತ್ವದಲ್ಲಿ ಬದುಕುವಂತಾಯಿತು. ಪುರೋಹಿತಶಾಹಿಯ ಮೇಲುಗೈ ಎಂದೆಂದಿಗೂ ಅಲುಗಾಡದಂತೆ ಹಾಕಿದ ಭದ್ರ ತಳಪಾಯವೇ ವರ್ಣವ್ಯವಸ್ಥೆ. ವರ್ಣವ್ಯವಸ್ಥೆಯು ಪೂರ್ವಯೋಜಿತ ದೀರ್ಘ ಪರಿಣಾಮಕಾರಿ ಕುಟಿಲ ಪರಿಕಲ್ಪನೆಯಾಗಿದೆ. ಹುಟ್ಟಿನಿಂದ ಕುಲವು ನಿರ್ಧಾರವಾಗುತ್ತದೆ, ಕುಲಾಧಾರಿತವಾಗಿ ವೃತ್ತಿಯನ್ನು ಹಂಚಲಾಗುತ್ತದೆ, ವೃತ್ತಿಯ ಕಾರಣದಿಂದಾಗಿ ವ್ಯಕ್ತಿಯ ಆರ್ಥಿಕ, ಸಾಮಾಜಿಕ ಸ್ಥಾನಮಾನಗಳು ನಿರ್ಣಯಿಸಲ್ಪಡುತ್ತದೆ, ಆರ್ಥಿಕ-ಸಾಮಾಜಿಕ ಸ್ಥಿತಿ ರಾಜಕೀಯ ಅಧಿಕಾರದ ಮೇಲೆ ಪ್ರಭಾವ ಬೀರುತ್ತದೆ, ವ್ಯಕ್ತಿ ಹೊಂದುವ ರಾಜಕೀಯ ಅಧಿಕಾರವು ಅವನ ಸಾಂಸ್ಕೃತಿಕ ಅಸ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ, ವ್ಯಕ್ತಿ ಪ್ರತಿನಿಧಿಸುವ ಸಮುದಾಯದ ಸಾಂಸ್ಕೃತಿಕ ಅಸ್ತಿತ್ವವು ಚರಿತ್ರೆಯ ದಾಖಲಾತಿಯಲ್ಲಿ ಸ್ಥಾನ ಪಡೆಯುತ್ತದೆ. ಈ ವರ್ಣವ್ಯವಸ್ಥೆಯು ವೃತ್ತಿಪಲ್ಲಟದಿಂದ ಅಲುಗಾಡುವ ಅಪಾಯವಿರುವುದರಿಂದ ಪುರೋಹಿತಶಾಹಿಯು ವೃತ್ತಿ ಪಲ್ಲಟವಾಗದಂತೆ, ಕುಲಕ್ಕೂ ವೃತ್ತಿಗೂ ನಂಟನ್ನು ಹಚ್ಚಿ, ನಿರ್ಬಂಧ ವಿಧಿಸುತ್ತದೆ.

ವೃತ್ತಿಯನ್ನು ಪಲ್ಲಟಗೊಳಿಸುವ ಶಕ್ತಿ ಇರುವುದು; ವ್ಯಕ್ತಿ ಗಳಿಸಿಕೊಳ್ಳುವ ವಿದ್ಯೆಯಲ್ಲಿ, ವೃತ್ತಿಗೆ ಬೇಕಾದ ಪರಿಣಿತಿ ಪಡೆಯುವುದರಲ್ಲಿ. ಹಾಗಾಗಿ ಪುರೋಹಿತಶಾಹಿ ವೈದಿಕ ಸಂಸ್ಕೃತಿಯು ಇತರೆ ಸಮುದಾಯಗಳಿಗೆ ‘ವಿದ್ಯೆ’ಯ ಹಕ್ಕನ್ನೇ ನಿರಾಕರಿಸಿತು. ಈ ನಿರಾಕರಣೆಯನ್ನೇ ಒಪ್ಪಿತ ಮೌಲ್ಯವಾಗಿಸಲು ಧರ್ಮಸೂತ್ರ, ಕರ್ಮಸಿದ್ಧಾಂತ, ಜನ್ಮಾಂತರ, ಮುಕ್ತಿ, ಸೃಷ್ಟಿಪುರುಷನ ಕಲ್ಪನೆ, ಮೊದಲಾದ ಕಪೋಲಕಲ್ಪಿತ ಸಿದ್ಧಾಂತಗಳನ್ನು ಮಂಡಿಸಿತು. ಹಾಗಾಗಿ ಪ್ರತಿಭೆಗೂ-ವಿದ್ಯೆಗೂ, ಪರಿಣಿತಿಗೂ-ವೃತ್ತಿಗೂ ಇರುವ ನೈಸರ್ಗಿಕ ಸಹ ಸಂಬಂಧವು ತಪ್ಪಿಹೋಯಿತು. ಆಸಕ್ತಿಗನುಗುಣವಾದ ಜ್ಞಾನಾರ್ಜನೆಯ ಅವಕಾಶವನ್ನು ಮುಚ್ಚಲಾಯಿತು. ಒಂದು ವರ್ಗಕ್ಕೆ ಮೀಸಲಾದ ವಿದ್ಯೆಗಳನ್ನು ಅನ್ಯವರ್ಗದವರು ಗಳಿಸಲು–ಕಲಿಯಲು ಪ್ರಯತ್ನಿಸಿದಾಗೆಲ್ಲ ಘರ್ಷಣೆ ಏರ್ಪಡುತಿತ್ತು. ಚರಿತ್ರೆಯಲ್ಲಿ ಇದಕ್ಕಾಗಿ ಆಗಾಗ ಬ್ರಾಹ್ಮಣರಿಗೂ-ಕ್ಷತ್ರಿಯರಿಗೂ ವೈಮನಸ್ಸು ಬೆಳೆದು ಸಂಘರ್ಷವೇರ್ಪಡುತ್ತಿದ್ದುದನ್ನು ನೋಡಬಹುದು. ಉದಾ: ಕೌಶಿಕರಾಜನು ವಿಶ್ವಾಮಿತ್ರನಾಗಿದ್ದು, ಕ್ಷತ್ರಿಯನೊಬ್ಬ ಮಹಾಬ್ರಾಹ್ಮಣನಾದ ಪಥದಲ್ಲಿ ಎದುರಾದ ಸವಾಲುಗಳು, ವಸಿಷ್ಠ-ವಿಶ್ವಾಮಿತ್ರರ ಮೇಲಾಟಗಳು –ಈ ಬಗೆಯ ಪುರಾಣಕಥನಗಳು ಕುಲಾಧಾರಿತ ವೃತ್ತಿ ಮತ್ತು ವಿದ್ಯೆಯ ಹಕ್ಕಿಗೆ ಸಂಬಂಧಿಸಿದವುಗಳಾಗಿವೆ. ಬಲಾಢ್ಯವರ್ಗವಾದ ಕ್ಷತ್ರಿಯರಿಗೆ ಬ್ರಾಹ್ಮಣರ ವಿರೋಧವನ್ನು ನಿಭಾಯಿಸಿ ಬದುಕುವ ಶಕ್ತಿಯಿತ್ತು. ಆದರೆ ಅಧಿಕಾರವಂಚಿತ ಅಂಚಿನ ಸಮುದಾಯಗಳಿಗೆ ಈ ಸಾಹಸ ಅಷ್ಟು ಸುಲಭದ್ದಾಗಿರಲಿಲ್ಲ. ಎಲ್ಲಿ ಶೂದ್ರ-ದಲಿತ ಸಮುದಾಯವು ತಮ್ಮ ಪ್ರಭುತ್ವಕ್ಕೆ ಧಕ್ಕೆ ತರುತ್ತಾರೋ ಎಂಬ ಭಯ ಸದಾ ಕ್ಷತ್ರಿಯರಿಗೂ ಕಾಡುತ್ತಿದ್ದ ಕಾರಣ; ಬ್ರಾಹ್ಮಣವರ್ಗದ ಸೂಚನೆಯಂತೆ, ತಮ್ಮ ತೋಳ್‌ಬಲವನ್ನು ಬಳಸಿ, ಇವರನ್ನು ದಮನಿಸಲಾಗುತಿತ್ತು.

Acchigoo Modhalu Beru bililu Ratnakara Kunagodu

ಸೌಜನ್ಯ : ಅಂತರ್ಜಾಲ

ಅಧಿಕಾರ ಕೇಂದ್ರದ ಎರಡು ಧ್ರುವಗಳಾದ ರಾಜಕಾರಣ ಮತ್ತು ಧರ್ಮಗಳ ಗುತ್ತಿಗೆ ಪಡೆದುಕೊಂಡಿದ್ದ ರಾಜಪ್ರಭುತ್ವ ಮತ್ತು ಮತಧರ್ಮ ಪ್ರಭುತ್ವದ ಪ್ರತಿನಿಧಿಗಳಾದ, ಕ್ಷತ್ರಿಯ ಮತ್ತು ಪುರೋಹಿತ ವರ್ಗಗಳು, ಇತರೆಯವರ ವಿದ್ಯೆಯ ಹಕ್ಕನ್ನು ವಂಚಿಸುತ್ತಲೇ ಬಂದವು. ಆ ಮೂಲಕ ತಮ್ಮ ಸ್ಥಾನಗಳನ್ನು ಕುಲಾಧಾರಿತವಾಗಿ ಕಾಪಾಡಿಕೊಂಡರು. ಕುಲವನ್ನು ಮೀರಿ ವಿದ್ಯೆ ಸಂಪಾದಿಸುವ ತಳಸಮುದಾಯಗಳ ಪ್ರಯತ್ನ ಮತ್ತು ದಮನ ಚರಿತ್ರೆಯುದ್ದಕ್ಕೂ ನಡೆದ ಸಾಕ್ಷಿಗಳಾಗಿ ‘ಶಂಬೂಕನ ವಧೆ’ ಪ್ರಸಂಗ ಉತ್ತರ ರಾಮಾಯಣದಲ್ಲೂ ‘ಏಕಲವ್ಯನ ಹೆಬ್ಬೆರಳಿನ ಬಲಿ’ ಪ್ರಸಂಗವು ಮಹಾಭಾರತದಲ್ಲೂ ದಾಖಲಾಗಿವೆ. ಹೀಗೆ ದಾಖಲಿಸಿದ ಉದ್ದೇಶ, ತಳಸಮುದಾಯಗಳ ಹೋರಾಟದ ಕುರುಹು ಆಗಿ ಅಲ್ಲ; ಬದಲಾಗಿ ಈ ಪ್ರಯತ್ನಗಳು ಅಪರಾಧ, ಶಿಕ್ಷಾರ್ಹವೆಂದು ಪ್ರತಿಪಾದಿಸುವುದಾಗಿದೆ. ಆ ಮೂಲಕ ಶೂದ್ರ ವರ್ಗದ ಮುಂದಿನ ಪೀಳಿಗೆ ಈ ಶಂಬೂಕ ಮತ್ತು ಏಕಲವ್ಯರಂತೆ ಮಹತ್ವಾಕಾಂಕ್ಷೆಗೆ ಮನಸ್ಸು ಮಾಡದಂತೆ ಬೆದರಿಕೆಯ ಬೇಲಿ ಹಾಕಲಾಗಿದೆ.

ಬ್ರಾಹ್ಮಣ ಮತ್ತು ಕ್ಷತ್ರಿಯರ ಮೇಲಾಟದ ಸಂಘರ್ಷವು ಚರಿತ್ರೆಯ ಒಂದು ಕಾಲಘಟ್ಟದಲ್ಲಿ ಸಂಧಾನಗೊಂಡು, ಆನಂತರ ಎರಡೂ ವರ್ಗಗಳು ತಮ್ಮ ತಮ್ಮ ಅಧಿಕಾರ ಮತ್ತು ಶ್ರೇಷ್ಠತೆಗಾಗಿ ಪರಸ್ಪರ ಸಹಕಾರ ನೀತಿ ಅನುಸರಿಸಿದವು. ಒಬ್ಬರ ಹಿತಾಸಕ್ತಿಗೆ ಮತ್ತೊಬ್ಬರು ಪೂರಕವಾಗಿ ಪ್ರತಿಕ್ರಿಯಿಸುವಂತೆ ಹೊಂದಾಣಿಕೆ ಏರ್ಪಟ್ಟಿತು. ಶಂಬೂಕ ಮತ್ತು ಏಕಲವ್ಯರ ಪ್ರಸಂಗವನ್ನು ಗಮನಿಸಿದಾಗ; ಬ್ರಾಹ್ಮಣ ವರ್ಗಕ್ಕೆ ಮೀಸಲಾಗಿದ್ದ ತಪದ ಸಿದ್ಧಿಯನ್ನು ಪಡೆಯಲು ಪ್ರಯತ್ನಿಸಿದ ಶಂಬೂಕನನ್ನು ಬ್ರಾಹ್ಮಣರ ಆಶಯದಂತೆ ಕ್ಷತ್ರಿಯನಾದ ರಾಮ ಸಂಹರಿಸುತ್ತಾನೆ. ಕ್ಷತ್ರಿಯ ವರ್ಗಕ್ಕೆ ಮೀಸಲಾದ ಯುದ್ಧಕಲೆ–ಬಿಲ್ವಿದ್ಯೆಯನ್ನು ಸಂಪಾದಿಸಿದ ಏಕಲವ್ಯನನ್ನು ಕುರುಕುಲದ ಕೋರಿಕೆಯಂತೆ ಬ್ರಾಹ್ಮಣನಾದ ‘ದ್ರೋಣ’ ಹೆಬ್ಬೆರಳ ಬಲಿ ಪಡೆಯುತ್ತಾನೆ. ಅತ್ಯಂತ ರಹಸ್ಯವಾಗಿ ವಿದ್ಯೆ ಸಂಪಾದಿಸಿ, ಚಾಕಚಕ್ಯತೆಯಿಂದ ಅಧಿಕಾರ ಕೇಂದ್ರವನ್ನು ತಲುಪಿದ ‘ಕರ್ಣ’ನ ಸಾಹಸವನ್ನು ಅರಗಿಸಿಕೊಳ್ಳಲಾಗದ ಈ ಅಧಿಕಾರ ವರ್ಗಗಳು, ಒಟ್ಟಿಗೇ ಮುಗಿಬಿದ್ದು ಅಂತೂ ಮುಗಿಸಿಬಿಡುತ್ತವೆ. ವರ್ಣವ್ಯವಸ್ಥೆಯನ್ನು ಪಲ್ಲಟಗೊಳಿಸಿ, ಕುಲಕ್ಕೂ-ಪ್ರತಿಭೆಗೂ ಸಂಬಂಧವಿಲ್ಲವೆಂದು ಸಾಧಿಸಿ ತೋರಿಸಿದ ‘ಕರ್ಣನ’ ಅಸ್ತಿತ್ವವನ್ನು ಸಹಿಸಿಕೊಳ್ಳಲಾಗದೆ; ದೇವೇಂದ್ರ, ಕೃಷ್ಣ, ಪರಶುರಾಮ, ಕುಂತಿ, ದ್ರೋಣ, ಭೀಷ್ಮಾದಿಗಳು ಅದೆಷ್ಟು ಅಸಹನೆಯಲ್ಲಿ ಕುದ್ದು, ಕುಟಿಲತೆಯಿಂದ ಶಕ್ತಿಗುಂದಿಸಲು ಪ್ರಯತ್ನಿಸಿದರೆಂದು; ಮಹಾಭಾರತದ ಮರು ಓದಿನಿಂದ ಅರ್ಥವಾಗುತ್ತದೆ. ಶೂದ್ರವರ್ಗದಿಂದ ಬ್ರಾಹ್ಮಣವರ್ಗವು ಸೇವೆಯನ್ನು, ಕ್ಷತ್ರಿಯವರ್ಗವು ರಕ್ತವನ್ನು, ವೈಶ್ಯವರ್ಗವು ಬೆವರನ್ನು ಸದಾ ಬಯಸುತ್ತಿದ್ದವು. ಸೇವೆ-ರಕ್ತ-ಬೆವರುಗಳನ್ನು ನಿರ್ವಂಚನೆಯಿಂದ ಅರ್ಪಿಸುವುದೇ ಶೂದ್ರವರ್ಗದ ಪಾಲಿಗೆ ಧರ್ಮವಾಗಿತ್ತು. ಮೇಲಿನ ವರ್ಗಗಳತ್ತ ಚಲನೆಯು ಧರ್ಮದ್ರೋಹವೆಂದು ನಿರೂಪಿಸುತ್ತಿದ್ದುದನ್ನು ಕಾಣಬಹುದು.

*

ಪರಿಚಯ : ಡಾ. ರತ್ನಾಕರ ಸಿ. ಕುನುಗೋಡು ಅವರು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಎರೆಕೊಪ್ಪದವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸದ್ಯ ಶಿವಮೊಗ್ಗದ ರಿಪ್ಪನ್ ಪೇಟೆಯ ಸ.ಪ್ರ.ದ. ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಸಾಹಿತ್ಯ, ರಂಗಭೂಮಿ, ಸಂಘಟನೆ, ಸಾಮಾಜಿಕ ಪರಿವರ್ತನೆಗಳತ್ತ ಆಸಕ್ತರಾಗಿರುವ ಇವರು ತಮ್ಮ ಅಭಿವ್ಯಕ್ತಿಗೆ ಸಂಶೋಧನೆ, ಕವಿತೆ ರಚನೆಯನ್ನು ಪ್ರಧಾನವಾಗಿಸಿಕೊಂಡಿದ್ದಾರೆ.

(ಈ ಪುಸ್ತಕದ ಖರೀದಿಗಾಗಿ ಸಂಪರ್ಕಿಸಿ : 9449951746)

ಇದನ್ನೂ ಓದಿ : New Novel : ಅಚ್ಚಿಗೂ ಮೊದಲು : ಕಥೆಗಾರ ಪದ್ಮನಾಭ ಭಟ್ ಶೇವ್ಕಾರ ಅವರ ಕಾದಂಬರಿ ‘ದೇವ್ರು’ ಇದೇ ಭಾನುವಾರ ಬಿಡುಗಡೆ

Published On - 11:42 am, Thu, 28 October 21