Book Release : ಅಚ್ಚಿಗೂ ಮೊದಲು : ಭಾರತಿ ಹೆಗಡೆ ನಿರೂಪಿಸಿದ ಮೀನಾಕ್ಷಿ ಭಟ್ಟರ ಆತ್ಮಕಥನ ‘ಹರಿವ ನದಿ’ ಲೋಕಾರ್ಪಣೆಗೆ ಸಿದ್ಧ

Autobiography : ‘ಮುಳುಗಡೆ ಪ್ರದೇಶದಿಂದ ಬಂದ ಹೆಣ್ಣೊಬ್ಬಳ ಕಥೆಯಿದು. ಲಿಂಗನಮಕ್ಕಿ ಅಣೆಕಟ್ಟು ಕಟ್ಟಿದ ಪ್ರಯುಕ್ತ ಹುಟ್ಟೂರು ಕೊಳಚಗಾರನ್ನು ಬಿಟ್ಟು ಬ್ಯಾಡರಕೊಪ್ಪಕ್ಕೆ ಬಂದು ಅಲ್ಲಿಂದ ಊರೂರು ಅಲೆಯುತ್ತ ಬರಬೇಕಾಗಿ ಬಂದವಳ ಕಥೆಯಿದು. ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ ಅಲೆದಾಡಿದ ಹೆಣ್ಣೊಬ್ಬಳ ದುಗುಡ ದುಮ್ಮಾನಗಳನ್ನು ದಾಖಲಿಸುವುದು ಮುಖ್ಯ ಎಂದೆನಿಸಿತು.’ ಭಾರತಿ ಹೆಗಡೆ

Book Release : ಅಚ್ಚಿಗೂ ಮೊದಲು : ಭಾರತಿ ಹೆಗಡೆ ನಿರೂಪಿಸಿದ ಮೀನಾಕ್ಷಿ ಭಟ್ಟರ ಆತ್ಮಕಥನ ‘ಹರಿವ ನದಿ’ ಲೋಕಾರ್ಪಣೆಗೆ ಸಿದ್ಧ
ತಾಯಿ ಮೀನಾಕ್ಷಿ ಭಟ್ಟ ಅವರೊಂದಿಗೆ ಲೇಖಕಿ ಭಾರತಿ ಹೆಗಡೆ
Follow us
|

Updated on:Dec 15, 2021 | 4:07 PM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಹರಿವ ನದಿ (ಮೀನಾಕ್ಷಿ ಭಟ್ಟ ಆತ್ಮಕಥನ) ನಿರೂಪಣೆ : ಭಾರತಿ ಹೆಗಡೆ ಪುಟ : 236 ಬೆಲೆ : ರೂ. 200 ಪ್ರಕಾಶನ : ವಿಕಾಸ ಪ್ರಕಾಶನ, ಬೆಂಗಳೂರು

*

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಶೃಂಗೇರಿ ಮಠದಲ್ಲಿ ಇದೇ 17ರಂದು ಬೆಳಗ್ಗೆ 10 ಗಂಟೆಗೆ ಗಾಯಕಿ ಡಾ. ಎಚ್. ಆರ್. ಲೀಲಾವತಿ ಅವರು ಈ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಆಯ್ದ ಭಾಗ ನಿಮ್ಮ ಓದಿಗೆ.

*

ಅಮ್ಮ ಉತ್ತು ಬಿತ್ತು ಮಾಡಲಿಲ್ಲ, ಹಣ ಆಸ್ತಿ ಮಾಡಲಿಲ್ಲ. ಆದರೆ ಅವಳು ಬದುಕಿದ್ದು ನಮಗಾಗಿ, ಸಣ್ಣ ಪ್ರಾಯದಲ್ಲೇ ಗಂಡನನ್ನು ಕಳೆದುಕೊಂಡು, ಆಸ್ತಿಪಾಸ್ತಿ ಏನೂ ಇಲ್ಲದವಳಾಗಿ ದಿಕ್ಕೆಟ್ಟ ಬದುಕಿನಲ್ಲಿ ಕಂಗೆಡದೆ ನಮ್ಮೊಂದಿಗೆ ಗಟ್ಟಿಯಾಗಿ ನಿಂತಳು. ಒಮ್ಮೆಯೂ ತನ್ನ ನೋವನ್ನು ನಮ್ಮೆದುರು ತೋರಿಸಿಕೊಳ್ಳದವಳು. ಇವತ್ತು ನಾವೆಲ್ಲ ಹೀಗಿದ್ದೇವೆ ಎಂದರೆ ಅದು ಅವಳು ಕೊಟ್ಟ ಶಕ್ತಿ. ಅಮ್ಮ ಶಾಲೆಗೆ ಹೋದವಳಲ್ಲ, ಆದರೂ ಅವಳು ಯಾವ ಸಾಹಿತಿಗೂ ಕಡಿಮೆ ಇಲ್ಲದಂತೆ ಸಾಹಿತ್ಯ ಕೃತಿಗಳನ್ನು ಓದುತ್ತಾಳೆ, ವಿಮರ್ಶೆ ಮಾಡುತ್ತಾಳೆ, ಎಲ್ಲವೂ ನಿಜ. ಆದರೆ ಇವಳ ಕುರಿತು ಕುರಿತು ಬರೆದರೆ ಮತ್ತೊಂದು ಗೋಳಿನ ಕಥೆಯನ್ನು ಓದುಗರ ಮುಂದೆ ತೆರೆದಿಟ್ಟಂತಾಗುತ್ತದೆ, ಇದಕ್ಕಿಂತ ಹೆಚ್ಚೇನು ಎನಿಸಿ ಎಂದು ಅಣ್ಣನನ್ನು (ರವೀಂದ್ರ ಭಟ್ಟ, ಕಾರ್ಯನಿರ್ವಾಹಕ ಸಂಪಾದಕರು, ಪ್ರಜಾವಾಣಿ) ಕೇಳಿದೆ. ಆಗ ಅಣ್ಣ ‘ವಿದ್ಯೆಯೇ ಇಲ್ಲದ, ಆಸ್ತಿ ಅಂತಸ್ತು ಏನೂ ಇಲ್ಲದ ಮಹಿಳೆಯೊಬ್ಬಳ ಬದುಕಿನಲ್ಲಿ ಬಂದಂತಹ ಸವಾಲುಗಳು, ಸುತ್ತಾಟಗಳು, ಚಿಕ್ಕ ವಯಸ್ಸಿಗೇ ಗಂಡನನ್ನು ಕಳೆದುಕೊಂಡ ವಿಧವೆಯೊಬ್ಬಳ ತಲ್ಲಣಗಳು, ಅವೆಲ್ಲವನ್ನೂ ದಿಟ್ಟವಾಗಿ ಎದುರಿಸಿದ ಬಗೆ, ಇವೆಲ್ಲ ಸಾಮಾನ್ಯವಾದದ್ದು ಎಂದು ನನಗನಿಸುವುದಿಲ್ಲ. ಇವಳ ಆತ್ಮಕಥೆ ನೊಂದ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಬಲ್ಲದು. ಹಾಗಾಗಿ ಬರಿ’ ಎಂದು ಒತ್ತಾಯಿಸಿದ. ಅದೂ ಹೌದೆನಿಸಿತು.

ಮುಖ್ಯವಾಗಿ ಮುಳುಗಡೆ ಪ್ರದೇಶದಿಂದ ಬಂದ ಹೆಣ್ಣೊಬ್ಬಳ ಕಥೆಯಿದು. ಲಿಂಗನಮಕ್ಕಿ ಅಣೆಕಟ್ಟು ಕಟ್ಟಿದ ಪ್ರಯುಕ್ತ ಹುಟ್ಟೂರು ಕೊಳಚಗಾರನ್ನು ಬಿಟ್ಟು ಬ್ಯಾಡರಕೊಪ್ಪಕ್ಕೆ ಬಂದು ಅಲ್ಲಿಂದ ಊರೂರು ಅಲೆಯುತ್ತ ಬರಬೇಕಾಗಿ ಬಂದವಳ ಕಥೆಯಿದು. ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ ಅಲೆದಾಡಿದ ಹೆಣ್ಣೊಬ್ಬಳ ದುಗುಡ ದುಮ್ಮಾನಗಳನ್ನು ದಾಖಲಿಸುವುದು ಮುಖ್ಯ ಎಂದೆನಿಸಿತು. ಹಾಗಾಗಿ ಬರೆಯಲೇಬೇಕೆಂದು ಒತ್ತಾಯಿಸಿ ಅಮ್ಮನನ್ನು ಕೂರಿಸಿದೆವು. ಅಮ್ಮ ತನ್ನ ಬದುಕಿನ ಪುಟಗಳನ್ನು ನನ್ನೆದುರು ತಿರುವುತ್ತಾ ಹೋದಳು- ಅವಳು ಹೇಳಿದಂತೆ ಅವಳ ಆತ್ಮಕಥೆಯನ್ನು ಬರೆಯುತ್ತಾ ಹೋದೆ. ಭಾರತಿ ಹೆಗಡೆ, ಲೇಖಕಿ, ಪತ್ರಕರ್ತೆ

*

ಹುಲಿಮನೆ ಸೀತಾರಾಮ ಶಾಸ್ತ್ರೀ ಎಂಬ ಗುರು

ನನ್ನ ಚಿಕ್ಕಪ್ಪ ಖ್ಯಾತ ನಟ ಹುಲಿಮನೆ ಸೀತಾರಾಮ ಶಾಸ್ತ್ರೀಯವರನ್ನು ನಾನು ಮಾತ್ರವಲ್ಲ, ನನ್ನ ಅಣ್ಣ, ನನ್ನ ತಂಗಿ ಎಲ್ಲರೂ ನೆನಪಿಟ್ಟುಕೊಳ್ಳಲೇಬೇಕಾದ ವ್ಯಕ್ತಿ. ಇವತ್ತೇನಾದರೂ ನಾವು ಓದಿ, ಬರೆದು ಮಾಡುತ್ತೇವೆಂದರೆ ಅದಕ್ಕೆ ಕಾರಣನೇ ನನ್ನ ಈ ಕಕ್ಕ ಸೀತಾರಾಮ ಶಾಸ್ತ್ರೀ. ಖ್ಯಾತ ನಾಟಕಕಾರ, ರಾಷ್ಟ್ರ ಪ್ರಶಸ್ತಿಪುರಸ್ಕೃತ. ಮೈಸೂರು ಹುಲಿ ಎಂದೇ ಪ್ರಸಿದ್ಧಿ ಪಡೆದವನು.

ಎಲ್ಲರೂ ಸೀತಾರಾಮ ಶಾಸ್ತ್ರಿಗಳ ನಾಟಕವೆಂದರೆ ಅದ್ಭುತ… ಅದ್ಭುತ… ಎಂದೆಲ್ಲ ಹೇಳುವಾಗ ನಮಗೆ ಹೆಮ್ಮೆ ಎನಿಸಿದರೂ ಅವನ ನಾಟಕಗಳನ್ನು ನಾವು ಕೊಳಚಗಾರಿನಲ್ಲಿರುವವರೆಗೂ ನೋಡಲಾಗಿರಲಿಲ್ಲ. ನಾವು ಅಂದರೆ ನಾನು ಮತ್ತು ನನ್ನ ತಂಗಿ, ಜೈರಾಮಣ್ಣಯ್ಯ ಮಾತ್ರ. ಮಿಕ್ಕವರೆಲ್ಲ ನೋಡಿದ್ದರು. ಅಪ್ಪನಂತೂ ತಮ್ಮನ ಅಭಿಮಾನಿ. ಸ್ವತಃ ‘ಜೈ ಕರ್ನಾಟಕ ನಾಟಕ ಸಂಘ’ ಎಂಬ ನಾಟಕ ಕಂಪನಿಯನ್ನು ಕಟ್ಟಿದ ಕಕ್ಕ ಊರೂರು ತಿರುಗಾಡುತ್ತಿದ್ದ. ಸಾಗರ, ಸಿದ್ದಾಪುರಗಳಿಗೆಲ್ಲ ಬಂದಾಗ ನಮ್ಮನೆಯಲ್ಲೇ ಇರುತ್ತಿದ್ದ. ತಿಂಗಳು- ಎರಡು ತಿಂಗಳು ಇಲ್ಲೇ ಠಿಕಾಣಿ ಅವನದ್ದು. ಇನ್ನು ಮಳೆಗಾಲದ ಸಮಯದಲ್ಲಿ ಬಿಡುವು ಮಾಡಿಕೊಂಡು ಕೊಳಚಗಾರಿಗೆ ಬರುತ್ತಿದ್ದ. ನಾವೆಲ್ಲ ಆಗ ಚಿಕ್ಕವರು. ನಮಗೆ ಕಕ್ಕ ತನ್ನ ಕ್ಯಾಂಪು ಮುಗಿಸಿ ಬರುತ್ತಾನೆಂದರೆ ಇಷ್ಟವಾಗುತ್ತಿದ್ದುದು ಅವನ ನಾಟಕಗಳಿಗಾಗಿ ಆಗಿರಲಿಲ್ಲ, ಅಥವಾ ಅವನೊಬ್ಬ ಸಂಗೀತ ಪ್ರಿಯ ಎಂಬ ಕಾರಣಕ್ಕಾಗಿಯೂ ಆಗಿರಲಿಲ್ಲ. ಬದಲಾಗಿ ಅವನು ನಮಗೆ ಬುಟ್ಟಿಗಟ್ಟಲೆ ಹಣ್ಣು ತಂದುಕೊಡುತ್ತಿದ್ದ ಮತ್ತು ಶರಾವತಿ ಹೊಳೆಯ ತೀರಕ್ಕೆ ನಮ್ಮನ್ನೆಲ್ಲ ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದ ಎಂಬ ಕಾರಣಕ್ಕಾಗಿ.

ಅವ ಬರುತ್ತಾನೆಂದರೆ ಖುಷಿಯ ಜೊತೆಗೆ ಭಯವೂ ಇತ್ತು. ಅವನು ಆಟವೇನೋ ಆಡಿಸುತ್ತಿದ್ದ. ಅದರ ಜೊತೆಗೆ ವಿದ್ಯಾಭ್ಯಾಸವನ್ನೂ ಮಾಡಿಸುತ್ತಿದ್ದ. ನಾವ್ಯಾರೂ ಶಾಲೆಗೆ ಹೋದವರಲ್ಲ. ನನ್ನ ಅಕ್ಕ ಸರಸ್ವತಿ ಮತ್ತು ಗಪ್ಪತಣ್ಣಯ್ಯ ಇಬ್ಬರೂ ಕೊಳಚಗಾರಿನಲ್ಲಿ ಒಂದಷ್ಟು ದಿವಸ ಶಾಲೆಗೆ ಹೋಗಿದ್ದರಂತೆ. ಹಾಗಾಗಿ ಅಕ್ಕಯ್ಯನಿಗೆ ಓದಲು ಬರೆಯಲು ಬರುತ್ತಿತ್ತು. ಇನ್ನು ನನ್ನ ಗಪ್ಪತಣ್ಣಯ್ಯ ಆ ಕಾಲಕ್ಕೇ ಪಿಯುಸಿವರೆಗೆ ಓದಿದ್ದು ನಿಜಕ್ಕೂ ಸಾಹಸ ಮತ್ತು ವಿಶೇಷ ಸಂಗತಿಗಳಲ್ಲೊಂದಾಗಿತ್ತು. ಕೊಳಚಗಾರಿನಂಥ ಕುಗ್ರಾಮದಲ್ಲಿದ್ದು, ವಿದ್ಯಾಭ್ಯಾಸದ ಯಾವ ಗಂಧಗಾಳಿಯೂ ಇಲ್ಲದ ಪರಿಸರದಲ್ಲಿ ಬೆಳೆದೂ ಅವನೊಬ್ಬ ಶಿವಮೊಗ್ಗದಲ್ಲಿ ಹಾಸ್ಟೆಲ್‌ನಲ್ಲಿದ್ದು ಪಿಯುಸಿವರೆಗೆ ಓದಿದ್ದು ಆಗಿನ ಕಾಲದ ಅಚ್ಚರಿಗಳಲ್ಲೊಂದು. ಇದಕ್ಕೆ ಅಪ್ಪ ಹೇಗೆ ಒಪ್ಪಿಗೆ ನೀಡಿದ ಎಂಬುದೇ ಆಶ್ಚರ್ಯ. ಆದರೆ ನಮಗೆಲ್ಲ ಪುಸ್ತಕ, ಪಾಟಿ ಇಟ್ಟು ಕೈ ಹಿಡಿಸಿ ಬರೆಸಿ ಓದಿಸಿದವ ನನ್ನ ಕಕ್ಕ. ಅವನು ಬಂದನೆಂದರೆ ಮನೆಯಲ್ಲಿ ಇದ್ದಕ್ಕಿದ್ದಂತೆ ಒಂದು ಶಿಸ್ತು ಬಂದುಬಿಡುತ್ತಿತ್ತು.

Acchigoo Modhalu Hariva Nadi autobiography of Meenakshi Bhat Narrated by writer Journalist Bharati Hegde Published by Vikas Publications

ರಂಗಕಲಾವಿದ ಹುಲಿಮನೆ ಸೀತಾರಾಮ ಶಾಸ್ತ್ರಿ

ಬೆಳಿಗ್ಗೆ ಬೇಗ ಏಳಬೇಕು, ಶ್ಲೋಕ ಹೇಳಬೇಕು, ಸಂಜೆಯ ಹೊತ್ತು ಶ್ಲೋಕಗಳನ್ನೂ ಕಡ್ಡಾಯವಾಗಿ ಹೇಳಲೇಬೇಕು. ಒಬ್ಬೊಬ್ಬರಿಗೂ ಅ.ಆ. ಬರೆಸಿ ತಿದ್ದಿಸುತ್ತಿದ್ದ. ಕನ್ನಡವೊಂದೇ ಅಲ್ಲ, ಹಿಂದಿಯನ್ನೂ ಬರೆಸುತ್ತಿದ್ದ. ಹೀಗೆ ದಿನಾ ಓದಿ ಬರೆದು ಮಾಡಲೇ ಬೇಕಿತ್ತು. ಸಂಜೆಯಾಗುತ್ತಿದ್ದ ಹಾಗೇ ಹೊಳೆದಂಡೆಗೆ ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದ. ಅವನು ಕಲಿಸಿದ ಅಕ್ಷರ ಜ್ಞಾನವನ್ನು ಅವನ ಬಳಿ ಪ್ರಕಟಿಸುವ ಅವಕಾಶವೊಂದು ನನಗೆ ಸಿಕ್ಕಿತು. ಅದು ನನಗೆ ಟೈಫಾಯ್ಡ್ ಜ್ವರ ಬಂದಾಗ. ಜ್ವರ ಬಂದು ಹುಷಾರಾದ ಮೇಲೆನನ್ನ ತಲೆ ಕೂದಲೆಲ್ಲ ಉದುರಿ ಹೋಗಿತ್ತು, ಬೋಳುಬೋಳು ಅನಿಸುತ್ತಿತ್ತು. ‘ಅದ್ಯಾವ ನಮ್ನಿ ಕೂದಲು ಉದುರಿಹೋತೇ ನಿಂಗೆ’ ಎಂದು ಅಮ್ಮ ಅತ್ತಿಗೆ ಹೇಳುವಾಗ ಏನೋ ಕಸಿವಿಸಿ. ಆಗ ನನ್ನ ಗಪ್ಪತಣ್ಣಯ್ಯ, ಕಕ್ಕನಿಗೆ ತಲೆಗೆ ಹಾಕಲು ತೈಲ ತಂದುಕೊಡು ಎಂದು ಪತ್ರ ಬರಿ ಎಂದದ್ದಲ್ಲದೆ ಸ್ವತಃ ಅವನೇ ಕೂತು ನನ್ನಿಂದ ಪತ್ರ ಬರೆಯಿಸಿದ. ಆವಾಗ ಕಕ್ಕ ಬೊಂಬಾಯಿನೋ, ಬೆಂಗಳೂರೋ ಎಲ್ಲೋ ಇದ್ದ. ಗಪ್ಪತಣ್ಣಯ್ಯ ಏನು ಹೇಳಿಕೊಟ್ಟನೋ ನಾನು ಏನು ಬರೆದೆನೋ ನೆನಪಿಲ್ಲ. ‘ಕಕ್ಕಾ, ನನ್ನ ತಲೆಗೂದಲೆಲ್ಲಾ ಉದುರಿ ತಾಮ್ರ ಚೊಂಬಾಗಿ ಹೋಯ್ದು, ನನಗೆ ತಲೆಗೆ ಹಾಕುವ ತೈಲ ತಂದುಕೊಡು’ ಎಂದು ಬರೆದಿದ್ದು ಮಾತ್ರ ನೆನಪಿದೆ. ಅವನು ಬರುವಾಗ ನನಗೆ ತೈಲ ತಂದುಕೊಟ್ಟನೋ ಇಲ್ಲವೋ ಒಂದೂ ನೆನಪಿಲ್ಲ.

ಆದರೆ ಅವನು ಬಂದಾಗ ಮಾತ್ರ ‘ನನ್ನ ಮಗಳು ನನಗೆ ಪತ್ರ ಬರೆದಿದ್ದಾಳೆ’ ಅಂತ ಎಲ್ಲರಿಗೂ ಆ ಪತ್ರ ತೋರಿಸಿದ್ದಲ್ಲದೆ ಎಲ್ಲರ ಬಳಿ, ತಲೆ ಕೂದಲು ಉದುರಿ ತಾಮ್ರ ಚೊಂಬಾಗ್ಹೋಗಿದೆ ಎಂದು ಬರೆದಿದ್ದಾಳೆ, ಎಲ್ಲಿ ಬಾ, ನಿನ್ನ ಚೊಂಬುತಲೆ ತೋರಿಸು ಎಂದೆಲ್ಲ ಹೇಳಿ ನಗುತ್ತಿದ್ದ. ಅಷ್ಟೇ ಅಲ್ಲ ಅವನ ಜೀವಿತದವರೆಗೂ ಇದನ್ನು ನೆನಪು ಮಾಡಿಕೊಳ್ಳುತ್ತಿದ್ದ. ನಮ್ಮ ಮನೆಯಿಂದ ಅನತಿ ದೂರದಲ್ಲಿ ಹರಿಯುತ್ತಿರುವ ಬಾರಂಗೀ ಹೊಳೆಗೆ ನಮ್ಮನ್ನೆಲ್ಲ ಸಾಯಂಕಾಲ ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದ. (ಬಾರಂಗಿ ಹೊಳೆಯೆಂದರೆ ಶರಾವತಿ ನದಿಗೇ ಬಾರಂಗಿ ಹೊಳೆ ಎಂದು ಕರೆಯುತ್ತಾರೆ.) ಹೊಳೆಯಲ್ಲಿ ನೀರಾಟ ಮರಳಾಟ ಆಡಿ ಸಂಜೆ ಮನೆಗೆ ಬರುತ್ತಿದ್ದೆವು. ನಮಗೆಲ್ಲಾ ಅವನೇ ಕೈಕಾಲು ತೊಳೆಸಿ ಅವನೇ ಬಾಯಿಪಾಠ, ಸ್ತೋತ್ರ ಹೇಳಿಕೊಡುತ್ತಿದ್ದ. ಬೆಳಿಗ್ಗೆ ನಮಗೆಲ್ಲಾ ಸ್ನಾನ ಮಾಡಿಸಿ ತಲೆಬಾಚಿ ನಾಲ್ಕು ನಾಲ್ಕು ಜಡೆ ಹಾಕುತ್ತಿದ್ದ. ನಮ್ಮ ನಾಟಕ ಕಂಪನಿಯಲ್ಲಿ ನಾಲ್ಕು, ಆರು ಜಡೆ ಹಾಕಿಕೊಳ್ತಾರೆ ಗೊತ್ತಾ, ಬಾ ಇಲ್ಲಿ ಎಂದು ನನಗೆ, ತಂಗಿಗೆ ತಲೆಬಾಚಿ ಜಡೆ ಹಾಕುತ್ತಿದ್ದ. ಅವನು ನಾಟಕ ಕಂಪನಿಯನ್ನು ಕಟ್ಟಿದ್ದೇ ಒಂದು ರೋಚಕ ಕತೆ.

ಹುಲಿಮನೆಯೆಂಬ ಕುಗ್ರಾಮದಲ್ಲಿ ಹುಟ್ಟಿ ಯಾವುದೋ ಕಾರಣಕ್ಕೆ ತಪ್ಪು ಮಾಡಿ ಅಪ್ಪ ಹೊಡೆಯುತ್ತಾನೆಂದು ಹೆದರಿ ಮನೆಬಿಟ್ಟು ಓಡಿ ಹೋಗಿ, ಬೆಂಗಳೂರಲ್ಲಿ ಸೇರಿಕೊಂಡು, ಖ್ಯಾತ ರಂಗಭೂಮಿ ಕಲಾವಿದರಾದ ಗರುಡ ಸದಾಶಿವರಾಯರ ಗರಡಿಯಲ್ಲಿ ಬೆಳೆದು, ನಂತರ ಇವನೇ ‘ಜಯ ಕರ್ನಾಟಕ ನಾಟಕ ಸಂಘ’ ಎಂಬ ನಾಟಕ ಕಂಪನಿಯನ್ನು ಪ್ರಾರಂಭಿಸಿ ದೇಶಾದ್ಯಂತ ಸಂಚರಿಸುವ ಹಾಗಾಗಿದ್ದು ಬಹುದೊಡ್ಡ ಸಾಧನೆ. ರಾಜ್ಯ, ರಾಷ್ಟ್ರ  ಪ್ರಶಸ್ತಿಗಳನ್ನು ಪಡೆದಿದ್ದು ನಮ್ಮೆಲ್ಲರ ಹೆಮ್ಮೆಯ ಸಂಗತಿ. ನಾಟಕ ಕಂಪನಿಯೊಂದರಲ್ಲಿ ಎಮ್ಮೆ ಕಟ್ಟಿ ಕಂಪನಿಯ ಕಲಾವಿದರಿಗೆ, ಕೆಲಸಗಾರರಿಗೆಲ್ಲ ಹಾಲು ಕೊಡುತ್ತಿದ್ದ. ಹೀಗೆ ನಾಟಕ ಕಂಪನಿಯೊಂದರಲ್ಲಿ ಎಮ್ಮೆ ಕಟ್ಟಿ ಕೆಲಸಗಾರರಿಗೆ ಸಮೃದ್ಧವಾಗಿ ಹಾಲು, ಮೊಸರು ಕೊಡುತ್ತಿದ್ದ ಏಕೈಕ ಕಂಪನಿ ಎಂದು ಜನ ಹೇಳುತ್ತಿದ್ದರು. ಅವನ ನಾಟಕ ಕಂಪನಿ ಸಾಗರಕ್ಕೆ ಬಂದಿದೆ ಎಂದಾದರೆ ನಮ್ಮನೆಯಲ್ಲಿ ಅಪ್ಪ-ಅಮ್ಮ, ಮನೆಯವರೆಲ್ಲರೂ ಎತ್ತಿನ ಗಾಡಿ ಕಟ್ಟಿಸಿಕೊಂಡು ಹೋಗಿ ನೋಡಿಬರುತ್ತಿದ್ದರು. ಆಗೆಲ್ಲ ಓಡಾಟಕ್ಕೆ ಇದ್ದ ವಾಹನವೆಂದರೆ ಎತ್ತಿನ ಗಾಡಿ. ಎಲ್ಲರೂ ಒಟ್ಟಿಗೇ ಹೋಗಲು ಸಾಧ್ಯವಾಗುವುದು ಎತ್ತಿನ ಗಾಡಿಯಲ್ಲೇ. ಮನೆಗೆ ಬಂದ ಮೇಲೆ ಇವತ್ತು ಸೀತಾರಾಮನ ಬನಬೀರ ಬಾಳ ಅದ್ಭುತವಾಗಿತ್ತು, ಇಡೀ ನಾಟಕಕ್ಕೆ ಅವೊಬ್ನೇಯ ಎಂದು ಅಪ್ಪ ಅಭಿಮಾನದಿಂದ ಹೇಳಿದ ಮಾತುಗಳೆಲ್ಲ ಇಂದಿಗೂ ನೆನಪಿದೆ.

(ಪುಸ್ತಕದ ಖರೀದಿಗೆ : 9900095204)

ಇದನ್ನೂ ಓದಿ : Book Release : ಅಚ್ಚಿಗೂ ಮೊದಲು ; ‘ಕವಿಜೋಡಿಯ ಆತ್ಮಗೀತ’ ಇಂದು ಸಂಜೆ ನಿಮಗೊಪ್ಪಿಸಲಿದ್ದಾರೆ ನಟರಾಜ್ ಹುಳಿಯಾರ್

Published On - 3:56 pm, Wed, 15 December 21

ತಾಜಾ ಸುದ್ದಿ
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್