Theatre Stories : ಪಿತೃಪ್ರಧಾನದ ಕಪಿಮುಷ್ಟಿಯೊಳಗೂ ಇವರು ‘ಆತ್ಮಜ್ಯೋತಿ’ ಬೆಳಗಿಸಿಕೊಂಡೇ ಬದುಕಿಬಿಡುತ್ತಾರಲ್ಲಾ!

Women and Theatre : ‘ಆ ಕಾಲದಲ್ಲಿ ಬ್ರಾಹ್ಮಣ ಮಡಿ ಹೆಂಗಸರು, ಗಂಡ ಬಿಟ್ಟವರು, ಅನಾಥ ಹೆಂಗಸರು ಕಂಪನಿಯನ್ನು ಸೇರುವದಿತ್ತು. ಅಲ್ಲಿ ಅಡುಗೆ ಮತ್ತು ಪರದೆಯ ಹಿಂದಿನ ಕೆಲಸಗಳನ್ನು ಮಾಡಿಕೊಂಡಿರುತ್ತಿದ್ದರು. ಗಂಡಂದಿರಿಗೆ ಗ್ರೇಡ್‍ಗಳಿದ್ದಂತೆ ಅವರ ಹೆಂಡತಿ-ಮಕ್ಕಳಿಗೂ ಗ್ರೇಡ್‍ಗಳಿರುತ್ತಿದ್ದವು.‘ ರಜನಿ ಗರುಡ

Theatre Stories : ಪಿತೃಪ್ರಧಾನದ ಕಪಿಮುಷ್ಟಿಯೊಳಗೂ ಇವರು ‘ಆತ್ಮಜ್ಯೋತಿ’ ಬೆಳಗಿಸಿಕೊಂಡೇ ಬದುಕಿಬಿಡುತ್ತಾರಲ್ಲಾ!
ಉತ್ತರ ಕರ್ನಾಟಕದ ‘ಗ್ರಾಮರಂಗ’ ಇಂಗಳಗಿಯ ದೊಡ್ಡಾಟದ ಕಲಾವಿದರು
Follow us
ಶ್ರೀದೇವಿ ಕಳಸದ
|

Updated on:Aug 17, 2021 | 11:50 AM

‘ಟಿವಿ9 ಕನ್ನಡ ಡಿಜಿಟಲ್ ; ಜಗನ್ನಾಟಕ ಮಹಾತ್ಮೆ’ (Kannada Theatre) ಹೊರಗೆ ಧೋ ಎಂದು ಮಳೆ ಸುರಿಯುತ್ತಿದೆ. ಕೊರೊನಾದಿಂದ ನಾಟಕ ಪ್ರದರ್ಶನಗಳಿಲ್ಲದೆ ರಂಗಕಲಾವಿದರ ಬದುಕಿಗೆ ತಾತ್ಕಾಲಿಕವಾಗಿ ಪರದೆ ಇಳಿಬಿದ್ದಂತಾಗಿ ಮನಸ್ಸು ಮ್ಲಾನವಾಗಿದೆ. ಆದರೂ ಶ್ರಾವಣ ನಿಂತಿದೆಯಾ, ನಾಳೆ ಭಾದ್ರಪದವೂ ಬರುತ್ತದೆ. ಎಷ್ಟಂತ ಮನಸ್ಸನ್ನು ಕಟ್ಟಿಹಾಕಿಕೊಳ್ಳುವುದು? ಬನ್ನಿ ಹಾಗಿದ್ದರೆ. ಈ ‘ಜಗನ್ನಾಟಕ ಮಹಾತ್ಮೆ’ಗೆ ಮೊದಲೇ ಟಿಕೆಟ್ ಬುಕ್ ಮಾಡಬೇಕಾದ ಅವಸರವಿಲ್ಲ. ಆಟೋ, ಕಾರು, ಬಸ್ಸು ಹಿಡಿದು ಓಡುವ ಜಂಜಾಟವಿಲ್ಲ. ಎಲ್ಲಿದ್ದೀರೋ ಅಲ್ಲೇ ಇದ್ದು ಓದುತ್ತಾ ಹೋದಂತೆ ಸಮಕಾಲೀನ ದೃಷ್ಟಿಕೋನದ ಹಿನ್ನೆಲೆಯಲ್ಲಿ ನಮ್ಮ ರಂಗಕಲಾವಿದರು ಹಂಚಿಕೊಳ್ಳುವ ಅನುಭವ ಕಥನಗಳು ನಿಮ್ಮೆದುರು ಅರಳುತ್ತ ಹೋಗುತ್ತವೆ.

ಉತ್ತರ ಕರ್ನಾಟಕದಲ್ಲಿ ಕಂಪನಿ ನಾಟಕ ನಗರ – ಪಟ್ಟಣ ಪ್ರದೇಶದಲ್ಲಿ ಕಂಪನಿ ನಾಟಕ ಪ್ರಸಿದ್ಧವಾದರೆ, ಗ್ರಾಮೀಣ ಭಾಗದಲ್ಲಿ ದೊಡ್ಡಾಟ ಮತ್ತು ಸಣ್ಣಾಟಗಳು ಬಹಳ ಜನಪ್ರಿಯವಾಗಿವೆ. ಆ ಕಲಾವಿದ/ದೆಯರನ್ನು ಭೇಟಿ ಮಾಡುವ ಅವಕಾಶ ನನಗೆ ಬಂತು. ಆ ಸಮಯದಲ್ಲಿ ಹೈದರಾಬಾದ್ ಕರ್ನಾಟಕ ಮತ್ತು ಉತ್ತರಕರ್ನಾಟಕದ ಹಳ್ಳಿಗಳಲ್ಲೆಲ್ಲ ಓಡಾಡಿದೆ. ಎರಡು ಮೂರು ಜಿಲ್ಲೆಗಳಲ್ಲಿ ಮಾತ್ರ ಓಡಾಡಲು ಸಾಧ್ಯವಾಗಲಿಲ್ಲ. ದೇವದಾಸಿಯರು, ಪಾತರದವರು, ಕೆಳಜಾತಿಯವರು, ತವಾಯಿಫ್ ಹಾಡುಗಾರ್ತಿಯರು ಮೊದಲು ರಂಗಭೂಮಿಗೆ ಅವರೇ ಬಂದರು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ರಜನಿ ಗರುಡ, ರಂಗನಿರ್ದೇಶಕಿ

ಭಾಗ – 4

ಗರುಡರ ಮನೆಯ ಬಹುಪಾಲು ಸದಸ್ಯರು ಮುಂದೆ ರಂಗಭೂಮಿಯಲ್ಲಿ ಉಳಿಯಲಿಲ್ಲ. ದೊಡ್ಡವರಾದ ದತ್ತಾತ್ರೇಯ ಅವರು ಸಂಗೀತದ ಕಡೆ ಒಲವು ಬೆಳೆಸಿಕೊಂಡು ಕಂಪನಿಯಲ್ಲಿದ್ದಾಗಲೆ ತಬಲ ಕಲಿಯಲು ಪ್ರಾರಂಭಿಸಿದ್ದರು. ಮುಂದೆ ಬೆಂಗಳೂರಿನಲ್ಲೇ ನೆಲೆನಿಂತು ತರಗತಿಗಳನ್ನು ನಡೆಸುತ್ತ ಬದುಕುವ ದಾರಿಕಂಡುಕೊಂಡರು. ನನ್ನ ಮಾವ ಮಾತ್ರ ಕೊನೆಯವರೆಗೂ ರಂಗಭೂಮಿಯಲ್ಲಿಯೇ ಉಳಿದರು. ಬೇರೆ ಕಂಪನಿಗಳಿಗೆ ಹೋದರು, ಸ್ವತಃ ಕಂಪನಿ ಮಾಡಿ ಎರಡು ಬಾರಿ ಕೈ ಸುಟ್ಟುಕೊಂಡರು. ಬದಲಾದ ಕಂಪನಿಗಳ ಜಾಯಮಾನಕ್ಕೆ ಅವರಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಲಿಲ್ಲ.

ಕೊನೆಯ ಮಗ ಪ್ರಕಾಶನನ್ನು ನೀನಾಸಂ ರಂಗಶಾಲೆಗೆ ಕಳಿಸಿದರು. ಸದಾಶಿವರಾಯರ ಹೆಣ್ಣುಮಕ್ಕಳಾದ ವತ್ಸಲಾ ಮತ್ತು ಅನುಸೂಯಾ, ಗರುಡರ ನಾಟಕಗಳನ್ನು ಗದುಗಿನ ವಿದ್ಯಾದಾನ ಸಮಿತಿ ಶಾಲೆಯಲ್ಲಿ ಮಾಡುತ್ತಿದ್ದರು. ಅಲ್ಲಿ ಶಿಕ್ಷಕರಾಗಿದ್ದ ಪ್ರೊ. ಕೀರ್ತಿನಾಥ ಕುರ್ತಕೋಟಿಯವರು ಇವರಿಗಾಗಿ ಗೀತನಾಟಕಗಳನ್ನು ಬರೆದುಕೊಡುತ್ತಿದ್ದರು. ಕಥಕ್ ನೃತ್ಯ ಮಾಡುತ್ತಿದ್ದ ನನ್ನ ಮಾವ ಶ್ರೀಪಾದರಾಯರು ಅವುಗಳಿಗೆ ನೃತ್ಯ ಸಂಯೋಜನೆ ಮಾಡಿ ಕಲಿಸುತ್ತಿದ್ದರಂತೆ. ಹಿರಿಯ ಸಂಗೀತ ವಿದ್ವಾಂಸರಾದ ಡಾ. ಕಮಲ ರಾಜೀವ ಪುರಂದರೆಯವರು ಸಂಗೀತ ಸಂಯೋಜನೆ ಮಾಡಿ ಹಾಡುತ್ತಿದ್ದರಂತೆ. ಅವರದ್ದೇ ಒಂದು ಮಹಿಳಾ ತಂಡ ಕೂಡ ಇತ್ತು. ಮೊಮ್ಮಕ್ಕಳಾದ ವೇದಾ, ಗೀತಾ, ಲಲಿತಾ, ವಸುಧಾ, ಅಣ್ಣಯ್ಯ, ಪೂರ್ಣಿಮಾ, ಛಾಯಾ, ವತ್ಸಲಾ ಅವರ ಮಗಳು ಬನಶಂಕರಿದೇವಿ ಇವರೆಲ್ಲರೂ ಸಿಕ್ಕ ಅವಕಾಶದಲ್ಲಿ ನಾಟಕ ಮಾಡುತ್ತಿದ್ದರು.

karnataka theatre garud

ಸಾಹಿತಿ ಕೀರ್ತಿನಾಥ ಕುರ್ತಕೋಟಿ, ನಾಟಕಕಾರರಾದ ಶ್ರೀಪಾದರಾವ ಗರುಡ ಮತ್ತು ದತ್ತಾತ್ರೇಯ ಗರುಡ

ದತ್ತಾತ್ರೇಯ ಗರುಡರ ಎಲ್ಲ ಮಕ್ಕಳೂ ಶಾಸ್ತ್ರೀಯವಾಗಿ ಸಂಗೀತ ಕಲಿತರು, ಈಗಲೂ ಕಾರ್ಯಕ್ರಮಗಳನ್ನು ಕೊಡುತ್ತಿದ್ದಾರೆ. ಅವರ ಮಗ ಗುರುಚರಣ ತಬಲಾವಾದಕನಾದ. ದೊಡ್ಡವ್ವ (ಶಕುಂತಲಾಬಾಯಿ ಗರುಡ) ಹೆಣ್ಣುಮಕ್ಕಳಿಗೆ ಒತ್ತಾಯದಿಂದ  ಹಾಡು ಕಲಿಸುತ್ತಿದ್ದಳಂತೆ. ಹಾಡಲು ಹೋಗದಿದ್ದರೆ ಆಕೆಯ ಉಗ್ರ ಕೋಪ ಎದುರಿಸಬೇಕಾಗುತ್ತಿತ್ತಂತೆ. ಹಾಡುವುದು ನನ್ನ ಮಗಳವರೆಗೂ ಈಗ ಮುಂದುವರೆದಿದೆ. ನಮ್ಮ ರಂಗಶಿಕ್ಷಣದ ನಂತರ ನಾನು ಮತ್ತು ಪ್ರಕಾಶ ಗದುಗಿನಲ್ಲಿ ಕೆಲವು ನಾಟಕಗಳನ್ನು ಮಾಡಿದೆವು. ಮುಂದೆ ಧಾರವಾಡದಲ್ಲಿ ಮನೆ ಮಾಡಿ ಇಲ್ಲಿಯೇ ನಮ್ಮ ರಂಗಚಟುವಟಿಕೆಗಳನ್ನು ಮಾಡುತ್ತಿದ್ದೇವೆ. ಗರುಡರ ಮಕ್ಕಳಿಗೆ ಈ ಇತಿಹಾಸದಿಂದ ಹೊರಬರಲು ಕೊನೆಯವರೆಗೂ ಸಾಧ್ಯವಾಗಲಿಲ್ಲ. ಕಂಪನಿಯ ಏಳುಬೀಳುಗಳನ್ನು ಸ್ವತಃ ಕಂಡಿದ್ದರೂ ತಾವೆಲ್ಲ ಅವರ ನಾಟಕದ ಪಾತ್ರಧಾರಿಗಳಂತೆಯೇ ಕೊನೆಯವರೆಗೂ ಬದುಕಿದರು. ವಾಸ್ತವದಲ್ಲಿ ಬದುಕು ಕಟ್ಟಿದವರು ಆ ನಾಲ್ವರು ಸೊಸೆಯರು. ತಾವು ಅನಕ್ಷರಸ್ಥರಾದರೂ ಮಕ್ಕಳಿಗೆ ಶಿಕ್ಷಣವನ್ನು ಕಷ್ಟಪಟ್ಟು ಕೊಡಿಸಿದರು. ಸುತ್ತಲ ಸಮಾಜದೊಂದಿಗೆ ಸಂಪರ್ಕ ಕೊಂಡಿಯಾದರು.

ಆ ಕಾಲದಲ್ಲಿ ಬ್ರಾಹ್ಮಣ ಮಡಿ ಹೆಂಗಸರು, ಗಂಡ ಬಿಟ್ಟವರು, ಅನಾಥ ಹೆಂಗಸರು ಕಂಪನಿಯನ್ನು ಸೇರುವದಿತ್ತು. ಅಲ್ಲಿ ಅಡುಗೆ ಮತ್ತು ಪರದೆಯ ಹಿಂದಿನ ಕೆಲಸಗಳನ್ನು ಮಾಡಿಕೊಂಡಿರುತ್ತಿದ್ದರು. ಗಂಡಂದಿರಿಗೆ ಗ್ರೇಡ್‍ಗಳಿದ್ದಂತೆ ಅವರ ಹೆಂಡತಿ-ಮಕ್ಕಳಿಗೂ ಗ್ರೇಡ್‍ಗಳಿರುತ್ತಿದ್ದವು. ಕಂಪನಿಯ ಮಾಲೀಕರ ಹೆಂಡತಿಗೆ ಉನ್ನತ ಸ್ಥಾನವಾದರೆ, ರಾಜಾಪಾರ್ಟಿಯವನ ಹೆಂಡತಿ, ಪೇಟಿ ಮಾಸ್ತರನ ಹೆಂಡತಿ, ಮುಖ್ಯ ಪಾತ್ರದವರ ಹೆಂಡತಿ ಇತ್ಯಾದಿ. ಕೆಳ ದರ್ಜೆಯ ನಟರ ಹೆಂಡತಿಯರೆಲ್ಲ ತಮ್ಮ ಮಾಲಿಕರ ಮನೆಯ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವ ಕೆಲಸವನ್ನು ಮಾಡುತ್ತಿದ್ದರು. ಇವರೂ ಬದುಕಿದ್ದರು ಎನ್ನುವುದಕ್ಕೆ ಯಾವ ಮಾಹಿತಿಯೂ ಇಲ್ಲ. ನಾಟಕದಲ್ಲಿಯ ದ್ವಾರಪಾಲಕರು ಅಥವಾ ರಾಜನ ಹಿಂದೆ ಭರ್ಚಿ ಹಿಡಿದು ನಿಲ್ಲುವ ಅಂಗರಕ್ಷಕ ಪಾತ್ರಗಳನ್ನು ನಾವು ಹೇಗೆ ಸ್ಮರಿಸುವುದಿಲ್ಲವೊ ಹಾಗೆಯೆ ಇವರೂ ನಗಣ್ಯರಾಗಿಬಿಡುತ್ತಾರೆ. ಬಹಳ ಮುಪ್ಪಾಗಿದ್ದ ಹಮ್ಮಗಿ ನೀಲಕಂಠಪ್ಪನವರ ಹೆಂಡತಿ, ಪಾತ್ರೆ ತೊಳೆಯುತ್ತಿದ್ದ ಗೋದವ್ವಾ, ಅಡುಗೆ ಮಾಡುತ್ತಿದ್ದ ಶೇಕವ್ವಾ, ಪರದೆ ಕಟ್ಟುತ್ತಿದ್ದ ಹನುಮಂತಪ್ಪಾ, ನಟರಾಗಿದ್ದ ದುರ್ಗಾದಾಸರು, ಪೇಟಿ ಮಾಸ್ತರಾಗಿದ್ದ ವಿಠ್ಠಲ ರಾವ್, ಖ್ಯಾತ ಹಾಸ್ಯನಟರಾಗಿದ್ದ ಶಾಂತಕುಮಾರ ಹೀಗೆ ಕೆಲವರನ್ನು ಮಾತ್ರ ನಾನು ನೋಡಿದ್ದೇನೆ. ಮುಂದೆ ಕೆಲವೇ ದಿನದಲ್ಲಿ ಇವರೆಲ್ಲ ತೀರಿಕೊಂಡರು.

ಉತ್ತರ ಕರ್ನಾಟಕದಲ್ಲಿ ಕಂಪನಿ ನಾಟಕ ನಗರ – ಪಟ್ಟಣ ಪ್ರದೇಶದಲ್ಲಿ ಕಂಪನಿ ನಾಟಕ ಪ್ರಸಿದ್ಧವಾದರೆ, ಗ್ರಾಮೀಣ ಭಾಗದಲ್ಲಿ ದೊಡ್ಡಾಟ ಮತ್ತು ಸಣ್ಣಾಟಗಳು ಬಹಳ ಜನಪ್ರಿಯವಾಗಿವೆ. ಅದರ ಕಲಾವಿದ/ದೆಯರನ್ನು ಭೇಟಿ ಮಾಡುವ ಅವಕಾಶ ನನಗೆ ಬಂತು. ಆ ಸಮಯದಲ್ಲಿ ಹೈದರಾಬಾದ್ ಕರ್ನಾಟಕ ಮತ್ತು ಉತ್ತರಕರ್ನಾಟಕದ ಹಳ್ಳಿಗಳಲ್ಲೆಲ್ಲ ಓಡಾಡಿದೆ. ಎರಡು ಮೂರು ಜಿಲ್ಲೆಗಳಲ್ಲಿ ಮಾತ್ರ ಓಡಾಡಲು ಸಾಧ್ಯವಾಗಲಿಲ್ಲ. ದೇವದಾಸಿಯರು, ಪಾತರದವರು, ಕೆಳಜಾತಿಯವರು, ತವಾಯಿಫ್ ಹಾಡುಗಾರ್ತಿಯರು ಮೊದಲು ರಂಗಭೂಮಿಗೆ ಅವರೇ ಬಂದರು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. 1908-9 ರ ಹೊತ್ತಿಗೆ ಎಲ್ಲೂಬಾಯಿ ಗುಳೇದಗುಡ್ಡ ಬಂದರು, ನಂತರ ಅವರ ಮಗಳು ಗಂಗೂಬಾಯಿ ಕೂಡ ಕಂಪನಿ ನಾಟಕಕ್ಕೆ ಬಂದರು. ಇವರಿಬ್ಬರೂ ಉತ್ತಮ ಗಾಯಕಿಯರು. ಆದರೆ ಕ್ರಿ.ಶ.1890ರ ಹೊತ್ತಿಗೆ ಪಾರಿಜಾತದ ದಂತ ಕಥೆಯಾದ ಕೌಜಲಗಿ ನಿಂಗಮ್ಮ ಕಂಪನಿಯನ್ನು ಕಟ್ಟಿ, ಸಂಬಳ ಕೊಟ್ಟು ಕಲಾವಿದರನ್ನು ನೇಮಿಸಿಕೊಂಡಿದ್ದರು. ಅದ್ಭುತ ಹಾಡುಗಾರ್ತಿಯಾಗಿದ್ದ ನಿಂಗಮ್ಮನ ಹೆಸರಿನಿಂದಲೇ ಇದು ನಡೆಯುತ್ತಿತ್ತು. ಹಳ್ಳಿಹಳ್ಳಿ ಸುತ್ತಿ ಪ್ರದರ್ಶನ ನೀಡುತ್ತಿದ್ದಳು. ಸಿನೇಮಾದಲ್ಲಿ ಸ್ತ್ರೀ ಪಾತ್ರವನ್ನು ಸ್ತ್ರೀಯರೇ ಅಭಿನಯಿಸುವುದನ್ನು ನೋಡಿಯೇ ಮುಂದೆ ನಾಟಕಕ್ಕೆ ದೊಡ್ಡ ಪ್ರಮಾಣದಲ್ಲಿ ನಟಿಯರು ಬರತೊಡಗಿದರು.

ಆರಂಭದ ದಿನಗಳಲ್ಲಿ ಸಿನೇಮಾಕ್ಕೆ ಹೋದವರು ಕೂಡ ದೇವದಾಸಿಯರು, ಪಾತರದವರು, ತವಾಯಿಫ್  ಹಾಡುಗಾರ್ತಿಯರು, ಕೆಳಜಾತಿಯ ಹೆಣ್ಣುಮಕ್ಕಳೇ. ಮೇಲ್ವರ್ಗದವರಿಗೆ ಹಾಡು, ನೃತ್ಯಗಳ ಮೂಲಕ ಮನರಂಜಿಸಬೇಕಾದ ಅವಕಾಶವನ್ನು ಉತ್ತಮ ಕಲಾವಿದೆಯರಾಗುವ ಮೂಲಕ ತಮ್ಮ ಬದುಕಿನ ಎತ್ತರವನ್ನು ಏರಿಸಿಕೊಂಡರು. ಗರುಡರ ಕಂಪನಿ ಇದ್ದ ಕಾಲದಲ್ಲಿಯೂ ಸ್ತ್ರೀ ಪಾತ್ರಕ್ಕೆ ಸ್ತ್ರೀಯರೇ ಬೇಕು ಎನ್ನುವ ಚರ್ಚೆ ನಡೆದಿತ್ತು. ಆದರೆ ಸ್ತ್ರೀಯರನ್ನು ಅವರು ತಮ್ಮ ಕಂಪನಿಗೆ ಸೇರಿಸಲಿಲ್ಲ. ಉಳಿದ ನಟರನ್ನು ಸಂಭಾಳಿಸುವುದರಲ್ಲಿಯೇ ಅವರು ದಣಿದಿದ್ದರು. ಆದರೆ ಶಕ್ತಿವಿಲಾಸ ನಾಟಕದಲ್ಲಿ ಶಕ್ತಿ ಪಾತ್ರಮಾಡಲು ಒಬ್ಬಳು ಹೆಣ್ಣುಮಗಳನ್ನು ಕರೆದಿದ್ದರು ಎಂಬ ದಾಖಲೆ ಇದೆ.

kannada theatre garud

ತಮಿಳುನಾಡಿನ ದೇವದಾಸಿಯರು. ಸೌಜನ್ಯ : ಅಂತರ್ಜಾಲ

ನಾನು ಭೇಟಿಯಾದ 15 – 20 ಕಲಾವಿದೆಯರಲ್ಲಿ 12-13 ಜನ ತಮ್ಮದೇ ಕಂಪನಿ ನಡೆಸುತ್ತಿದ್ದರು. ಅವಕಾಶ ಸಿಕ್ಕಾಗ ಬೇರೆಯವರ ಕಂಪನಿಗೂ ಹೋಗುತ್ತಿದ್ದರು. ಇವರಲ್ಲಿ ಕೆಲವರ ಕಂಪನಿಯಲ್ಲಿ ಎಲ್ಲರೂ ಸ್ತ್ರೀಯರೇ ಇದ್ದಾರೆ. ಸಂಸಾರೊಂದಿಗರಾದ ಈ ಹೆಣ್ಣುಮಕ್ಕಳ ಗಂಡುಮಕ್ಕಳು ಮತ್ತು ಅವರ ಗಂಡಸರು ನನಗೆ ಮೊದಲೇ ‘ಇಂಥವ್ರು ಅಂತ ಹೆಸ್ರು ಎಲ್ಲೂ ಹೇಳೋ ಹಂಗಿಲ್ಲಾ’ ಎಂದು ಹೇಳಿದ್ದರಿಂದ ಅವರೆಲ್ಲರ ಹೆಸರನ್ನು ನಾನು ಹೇಳಲಾರೆ. ಇದರಿಂದಾಗಿ ಹಲವು ಕಲಾವಿದೆಯರ ಕುರಿತು ದಾಖಲೆ ಇಲ್ಲ. ಒಪ್ಪಿದವರ ಕುರಿತು ಮಾತ್ರ ದಾಖಲೆ ಮಾಡಿದ್ದೇನೆ.

ನಾಟಕ ಕಂಪನಿ ಕಟ್ಟಿ, ಸ್ವತಃ ಹಾಸ್ಯ ನಟಿಯಾಗಿ ಅಭಿನಯಿಸಿದ್ದ ಗದುಗಿನ ಶಾಪುರ ಪೇಟೆಯಲ್ಲಿದ್ದ ಫ್ಲೋರಿನಾ ಬಾಯಿ, ರಾಮದುರ್ಗದ ಸಾಲಳ್ಳಿಯ ಸಣ್ಣಾಟದ ಕಂಪನಿಯ ಒಡತಿ ಲಕ್ಷ್ಮೀಬಾಯಿ, ಅರಭಾವಿಯ ಕೆಂಪಮ್ಮ, ಹೊಸಪೇಟೆ ತಾಲೂಕಿನ ಮರಿಯಮ್ಮನಳ್ಳಿಯ ಬಳಿ ಇರುವ ಗೊಲ್ಲರಳ್ಳಿಯ ಕಲಾವಿದೆ ಪತ್ತೆವ್ವಾ , ಲೋಕಾಪುರ ಬಳಿಯಿರುವ ದಾದನಟ್ಟಿಯ ಕಾಶೀಬಾಯಿ, ಬೆಳಗಾವಿಯ ಸಕ್ರೆವ್ವಾ ಇವರೆಲ್ಲ ನಿರಂತರ ನಾಟಕ, ದೊಡ್ಡಾಟ, ಸಣ್ಣಾಟ ಮಾಡುವ ಬಿಡುವಿಲ್ಲದ ಕಲಾವಿದೆಯರು. ಇವರಲ್ಲಿ ಫ್ಲೊರಿನಾಬಾಯಿ ಈಗ ತೀರಿಕೊಂಡಿದ್ದಾರೆ.  ಏನೇನೂ ಕಿವಿ ಕೇಳದ 83 ವರ್ಷದ ಅವರ ಗಂಡ ಅವರನ್ನು ಕೊನೆಗಾಲದಲ್ಲಿ ನೋಡಿಕೊಳ್ಳುತ್ತಿದ್ದರು.

ನಾನು ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋದಾಗ, ಅತ್ಯಂತ ಗಟ್ಟಿಗಿತ್ತಿಯಾಗಿದ್ದ ಫ್ಲೋರಿನಾಬಾಯಿ ಹಾಸಿಗೆ ಹಿಡಿದಿದ್ದರು. ಆಗಿನ್ನೂ ಅಕಾಡೆಮಿ ಪ್ರಶಸ್ತಿ ಬಂದಿತ್ತು. ಆಗ ಶಾಸಕಿಯಾಗಿದ್ದ ಉಮಾಶ್ರೀಯವರೇ ಮನೆಗೆ ಬಂದು ಪ್ರಶಸ್ತಿ ಕೊಟ್ಟಿದ್ದರು. ಆನಂತರವಷ್ಟೇ ಪ್ರಶಸ್ತಿ ಹಣದಿಂದ ಅವರ ಕೊರಳಲ್ಲಿ ಲಕಲಕ ಹೊಳೆಯುವ ಬಂಗಾರದ ಮಂಗಳಸೂತ್ರ ಹೊಳೆಯತೊಡಗಿತು.

ಸಾಲಳ್ಳಿಯ ಲಕ್ಷ್ಮೀಬಾಯಿಯವರನ್ನು ಭೇಟಿಯಾದಾಗ, “ನಮ್ಗೂ ಗಂಡಸ್ರು – ಮಕ್ಳೂ ಬೇಕಲ್ಲವ್ವಾ…ಒಬ್ನ ಹೆಸ್ರಾಗ ತಾಳಿ ಕಟ್ಕೋತೀವಿ… ಅವ್ರ ಮನೆತನಾನೂ ನಾವೇ ನಡಸ್ತೀವಲ್ಲಾ…” ಮಗ ಮಿಲಿಟ್ರಿಯಲ್ಲಿದ್ದ, ರಜೆಗೆಂದು ಬಂದಾತ ತಿರುಗಿ ಹೊರಟಿದ್ದ.

‘ಎಲ್ಲರ ಹಂಗ ಮಕ್ಕಳನ್ನ ಜ್ವಾಪಾನ ಮಾಡಾಕ ಆಗಲಿಲ್ರಿ ನನಗ. ಅವೆರಡು ಹುಟ್ಟಿದಾಗ ಅವುಕ್ಕ ಚಂದಗೆ ಹಾಲ ಕುಡಸ್ಲಿಲ್ರಿ. ನಮ್ಮವ್ವನ ಜ್ವಾಪಾನ ಮಾಡ್ಯಾಳ. ಹಡ್ದ ಅಪ್ಪಾ ಸಾಯಾಕ ಹತ್ತಾನ, ನಾ ತಬ್ಲಾ – ಪೇಟಿ ತಗೊಂಡು ಆಟಕ್ಕ ಬಸ್ ಹತ್ತೇನಿ…’ ಇಂಪಾಗಿ ಪಾರಿಜಾತದ ಹಾಡನ್ನು ಹಾಡುವ ಕಾಶೀಬಾಯಿ ಲೋಕಪುರ ದೇಶಪಾಂಡೆಯವರಲ್ಲಿ ಕಲಿತಾಕೆ. ಅತ್ಯಂತ ಬೇಡಿಕೆಯ ಕಲಾವಿದೆ.

kannada theatre garud

ಉತ್ತರ ಕರ್ನಾಟಕದ ಶ್ರೀ ಕೃಷ್ಣ ಪಾರಿಜಾತದಾಟ

ನಾನು field work ಮಾಡಲು ಏನು ಪ್ರಶ್ನೆಗಳನ್ನು, ಸವಾಲುಗಳನ್ನು ಸಿದ್ಧಮಾಡಿಕೊಂಡು ಹೋಗಿದ್ದೆನೊ ಅವೆಲ್ಲ ನನಗೇ ಇರುವ ಭ್ರಮೆಗಳು ಎಂದೆನಿಸಿಬಿಟ್ಟಿತು. ತಮ್ಮದೇ ಪರಿಸರದಲ್ಲಿ, ತಮ್ಮದೇ ಕಲಾಪ್ರಪಂಚದಲ್ಲಿ, ತಮ್ಮ ಸಂಸಾರದಲ್ಲಿ ಮುಳುಗಿರುವ ಈ ಹೆಣ್ಣುಮಕ್ಕಳು ಪಿತೃಪ್ರಧಾನ ವ್ಯವಸ್ಥೆ ಹೇರಿರುವ ಹೆಣ್ಣಿನ ಪಾವಿತ್ರ್ಯದ ಕುರಿತು ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಅದಕ್ಕಾಗಿ ಕೀಳರಿಮೆಯೂ ಇಲ್ಲ. ಅವಮಾನದ ಸಂದರ್ಭಗಳನ್ನು ತಮಗಿರುವ ಕಲೆಯ ಮೂಲಕ ಗೆದ್ದುಬಿಟ್ಟಿದ್ದಾರೆ. ಶೋಷಣೆ, ಅಸಮಾನತೆ, ಅಭದ್ರತೆ ಎಲ್ಲ ಇದ್ದಾಗಲೂ ‘ಆತ್ಮಜ್ಯೋತಿ’ ಬೆಳಗಿಸಿಕೊಂಡೇ ಬದುಕುತ್ತಾರಲ್ಲಾ! ಕೊನೆಯಲ್ಲಿ ಅರಿವು ಅನ್ನೋದು ಯಾರಿಗೆ ಬೇಕು ಎಂದು ನಾನು ವಿಚಾರ ಮಾಡುವಂತಾಯ್ತು.

ಹೊಟ್ಟೆ ತುಂಬ ಊಟಮಾಡಿಸಿ, ಬಾಯಿ ತುಂಬ ಮನಬಿಚ್ಚಿ ಮಾತಾಡಿ, ಇಂಪಾದ ಸಂಗೀತ ಕೇಳಿಸಿ  “ಧಾರ್ವಾಡದಾಗೊಂದ ಆಟಾ ಮಾಡ್ಸವ್ವಾ…” ಎಂದು ಬೀಳ್ಕೊಟ್ಟ ಅವರ ದನಿ ನನ್ನ ಹಿಂದೆಯೇ ನಡೆದು ಬಂದಿದೆ.

(ಈತನಕ ರಜನಿಯವರು ಬರೆದರು. ಆಗಾಗ ಈ ಸರಣಿಗಾಗಿ ವಿವಿಧ ರಂಗಭೂಮಿಯ ಕಲಾವಿದರು, ನಿರ್ದೇಶಕರುಗಳು ತಮ್ಮ ಅನುಭವಗಳನ್ನು, ಆಲೋಚನೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.)

ಇದನ್ನೂ ಓದಿ : Theatre Stories : ‘ನಿಮ್ಮವ್ವಾ, ಒಂದು ಮುಷ್ಟಿ ಉದಾರತೆಯನ್ನು ತನ್ನ ಸೊಸೆಯರಿಗೂ ತೋರಿಸಬೇಕಿತ್ತು’

Published On - 8:46 pm, Sun, 15 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ