ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಹಣವಿಲ್ಲದೇ ಬಡವಾಯ್ತೇ ಬಾಗಲಕೋಟೆ ಅಭಿವೃದ್ಧಿ ಪ್ರಾಧಿಕಾರ?
ಬಾಗಲಕೋಟೆಯ ನವನಗರದ ವಿದ್ಯುತ್ ಚಿತಾಗಾರದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನೋಟಿಸ್ ನೀಡಿದೆ. ಬಿಲ್ ಪಾವತಿಸಲು ಜೂನ್ 15 ಕೊನೆಯ ದಿನಾಂಕವಾಗಿತ್ತು. ಈ ಬಾಕಿ ಮೊತ್ತವನ್ನು ಶೀಘ್ರದಲ್ಲಿ ಪಾವತಿಸುವುದಾಗಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
ಬಾಗಲಕೋಟೆ, ಜೂನ್ 20: ಬಾಗಲಕೋಟೆಯ (Bagalkot) ನವನಗರದಲ್ಲಿರುವ ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಪಾವತಿಸದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ (BTDA) ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (HESCOM) ನೋಟಿಸ್ ನೀಡಿದೆ. ಬಿಟಿಡಿಎ1.97 ಲಕ್ಷ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಬಿಲ್ ಪಾವತಿಗೆ ಜೂನ್ 15ರಂದು ಕೊನೇ ದಿನವಾಗಿತ್ತು. ಆದರೂ ಕೂಡ ಬಿಟಿಡಿಎ ಚಿತಾಗಾರದ ಬಿಲ್ ಪಾವತಿಸಿಲ್ಲ. ಹೀಗಾಗಿ, ಹೆಸ್ಕಾಂ ಬಿಲ್ ಪಾವತಿಸುವಂತೆ ಬಿಟಿಡಿಎಗೆ ನೋಟಿಸ್ ನೀಡಿದೆ.
ಈ ಸಂಬಂಧ ಬಿಟಿಡಿಎ, ಎಇಇ ಸೋಮಶೇಖರ್ ನೋಟಗಾರ ಮಾತನಾಡಿ, ವಿದ್ಯುತ್ ಬಿಲ್ ಬಾಕಿ ಇದ್ದಿದ್ದು ನಿಜ. ಸದ್ಯ ಎಲ್ಲ ಕಟ್ಟಿದ್ದೇವೆ. ಎರಡು ತಿಂಗಳ ಬಿಲ್ ಬಾಕಿ ಇದೆ. ಶವ ದಹನಕ್ಕೆ ಯಾವುದೇ ತೊಂದರೆಯಿಲ್ಲ. ಬಾಕಿ ಇರುವ ವಿದ್ಯುತ್ ಬಿಲ್ ಕೂಡ ಶೀಘ್ರದಲ್ಲಿ ಕಟ್ಟಲಾಗುತ್ತದೆ ಎಂದು ಹೇಳಿದರು.
ವಿದ್ಯುತ್ ಚಿತಾಗಾರವನ್ನು 4 ಕೋಟಿ ರೂ. ವೆಚ್ಚದಲ್ಲಿ 2021 ರಲ್ಲಿ ನಿರ್ಮಾಣ ಮಾಡಲಾಗಿದೆ. 2022ರ ಏಪ್ರಿಲ್ ನಿಂದ ಇದುವರೆಗೆ 11 ಶವಗಳನ್ನು ದಹನ ಮಾಡಲಾಗಿದೆ. ನಿರ್ಮಾಣವಾದಾಗಿನಿಂದ ಇದುವರೆಗೆ 35-40 ಶವಗಳನ್ನು ದಹನ ಮಾಡಲಾಗಿದೆ.