Khalil Gibran Birthday : ಅಭಿಜ್ಞಾನ ; ‘ನೀವೇಕೆ ಮದುವೆಯಾಗಿಲ್ಲ’ ಹೀಗೆಂದು ಕೇಳಿದ ಆಕೆಗೆ ಖಲೀಲ್ ಗಿಬ್ರಾನ್ ಉತ್ತರಿಸಿದ್ದೇನು?

Literature : ಮೊದಲು ‘ಅದೆಲ್ಲ ಆಗದು, ನೀನೇ ಕಾವ್ಯ ಬರೆಯಬೇಕು' ಎಂದ ಗಿಬ್ರಾನ್, ಅನಂತರ ಪದ್ಯದ ಸಾಲುಗಳನ್ನು ಹೇಳಲಾರಂಭಿಸಿದನಂತೆ. ಒಂದು ದಿನ ಅವನು, “ನೀನು ಎಲ್ಲವನ್ನೂ ಮರೆತುಬಿಡಬೇಕು. ಏಳು ಪದಗಳನ್ನು ಮಾತ್ರ ನೆನಪಿಟ್ಟುಕೊಳ್ಳಬಹುದು. ಯಾವ ಏಳು ಪದಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತೀಯ ಹೇಳು ನೋಡೋಣ” ಬಾರ್ಬರಾಗೆ ಕೇಳಿದನಂತೆ.

Khalil Gibran Birthday : ಅಭಿಜ್ಞಾನ ; ‘ನೀವೇಕೆ ಮದುವೆಯಾಗಿಲ್ಲ’ ಹೀಗೆಂದು ಕೇಳಿದ ಆಕೆಗೆ ಖಲೀಲ್ ಗಿಬ್ರಾನ್ ಉತ್ತರಿಸಿದ್ದೇನು?
ಖಲೀಲ್ ಗಿಬ್ರಾನ್
Follow us
ಶ್ರೀದೇವಿ ಕಳಸದ
|

Updated on:Jan 06, 2022 | 5:33 PM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿಯ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಜಿ. ಎನ್ ರಂಗನಾಥ ಅವರು ಅನುವಾದಿಸಿದ ಕಾಲಾತೀತ ವಿಖ್ಯಾತ ಖಲೀಲ್ ಗಿಬ್ರಾನ್ ಕೃತಿಯಿಂದ.

*

ಬಾರ್ಬರಾ ಯಂಗ್‌ಳ ಜೊತೆ ಗಿಬ್ರಾನ್ ಒಡನಾಟ ಶುರುವಾದದ್ದು ನಿಧನಕ್ಕೆ ಏಳು ವರ್ಷ ಮುಂಚೆ.

“ಗಿಬ್ರಾನ್ ಅಮರ, ಅವನ ಪ್ರಜ್ಞೆ ಯುಗಪ್ರಜ್ಞೆಯಾಗಿ ಪ್ರವಹಿಸಿದೆ. ಅವನ ಆತ್ಮ ಅಮರವಾದದ್ದು. ಅದಕ್ಕೆ ಹಸಿವಿಲ್ಲ. ಅದು ಶಾಶ್ವತವಾದದ್ದು, ಕಾಲಾತೀತವಾದದ್ದು. ಅದು ಗಿಬ್ರಾನ್.”

ಎಂದು ಗಿಬ್ರಾನ್‌ನ ಜೀವನ ಚರಿತ್ರೆ “ದಿ ಮ್ಯಾನ್ ಫ್ರಂ ಲೆಬನಾನ್” ದಲ್ಲಿ ಬಾರ್ಬರಾ ಹೀಗೆ ಬರೆದಿದ್ದಾಳೆ.

ಬಾರ್ಬರಾ 1923 ರಲ್ಲಿ ‘ದಿ ಪ್ರಾಫೆಟ್’ನ ವಾಚನ ಆಲಿಸಿದಳು. “ಕೂಡಲೇ ಮೆಚ್ಚಿಕೊಂಡು ಪತ್ರ ಬರೆದಳು. ತನ್ನ ಸ್ಟುಡಿಯೋಗೆ ಬಂದು ಚಿತ್ರಗಳನ್ನು ವೀಕ್ಷಿಸುವಂತೆ, ತನ್ನ ಕಾವ್ಯವಾಚನ ಕೇಳುವಂತೆ’ ಗಿಬ್ರಾನ್ ಮರು ಓಲೆ ಬರೆದ. “ನಾನು ಹೋದೆ. ಗಿಬ್ರಾನ್ ಹಳೆಯ ಗೆಳತಿಯಂತೆ ನನ್ನ ಸ್ವಾಗತಿಸಿದರು’ ಎಂದಿದ್ದಾಳೆ ಬಾರ್ಬರಾ.

ಬಾರ್ಬರಾ ಗಿಬ್ರಾನ್‌ನಿಗಿಂತ ಸಪೂರಳಾದ ಸುಂದರ ಮೈಕಟ್ಟಿನ ಹೆಣ್ಣಾಗಿದ್ದಳು. ಇಂಗ್ಲೆಂಡಿನವಳಾದ ಅವಳು ವೃತ್ತಿಯಿಂದ ಶಿಕ್ಷಕಿಯಾಗಿದ್ದಳು. ಪುಸ್ತಕದ ಮಳಿಗೆಯೊಂದನ್ನು ನಡೆಸುತ್ತಿದ್ದ ಆಕೆ ಜೀವಮಾನವಿಡೀ ಗಿಬ್ರಾನ್ ಸಾಹಿತ್ಯ ಕುರಿತು ಉಪನ್ಯಾಸ ನೀಡುತ್ತಿದ್ದಳು. ಗಿಬ್ರಾನ್ ಮರಣದ ಅನಂತರ ಅವನ ಅಪೂರ್ಣ ಗ್ರಂಥದ ಅಧ್ಯಾಯಗಳನ್ನು ಜೋಡಿಸಿ ಅದರ ಪ್ರಕಟಣೆಗೆ ವ್ಯವಸ್ಥೆ ಮಾಡಿದಳು. ಅದೇ “ಗಾರ್ಡೆನ್ ಆಫ್ ದಿ ಪ್ರಾಫೆಟ್”, ಗಿಬ್ರಾನ್‌ನ ಕೊನೆಯ ಪುಸ್ತಕ.

ಖಲೀಲ್ ಗಿಬ್ರಾನ್ ನಿಧನಹೊಂದಿದ ಕ್ಷಣದಲ್ಲಿ ಅವನ ಹಾಸಿಗೆ ಬದಿ ಇದ್ದವಳು ಬಾರ್ಬರಾ ಒಬ್ಬಳೇ. ನಿಧನಾನಂತರ ಸ್ಟುಡಿಯೋದಲ್ಲಿದ್ದ ಗಿಬ್ರಾನ್‌ನ ಅಮೂಲ್ಯ ಚಿತ್ರಗಳನ್ನು ಜೋಪಾನಮಾಡಿ ಅವನ ಹುಟ್ಟೂರು ಬ್ಯಾಷರಿಗೆ ಕಳುಹಿಸಿಕೊಟ್ಟಳು. ಗಿಬ್ರಾನ್ ಈ ಸ್ಟುಡಿಯೋದಲ್ಲಿ ಸುಮಾರು ಹದಿನೆಂಟು ವರ್ಷಗಳ ಕಾಲ ಪೈಂಟ್ ಮಾಡಿದ್ದ, ಬರೆದಿದ್ದ. ಗಿಬ್ರಾನ್ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡುತ್ತಿದ್ದ ಕಡೆಗಳಲ್ಲಿ ಬಾರ್ಬರ ಅವನ ಸುಮಾರು 60 ಚಿತ್ರಗಳನ್ನು ಪ್ರದರ್ಶಿಸುತ್ತಿದ್ದಳು.

ಏಳು ವರ್ಷಗಳ ಒಡನಾಟದಲ್ಲಿ ಬಾರ್ಬರಾ ಯಂಗ್ ಗಿಬ್ರಾನ್‌ಗೆ ಎಷ್ಟು ಆಪ್ತಳಾಗಿದ್ದಳು, ಅವರಿಬ್ಬರ ನಡುವಣ ಸಂಬಂಧ ಹೇಗಿತ್ತೆನ್ನುವುದಕ್ಕೆ ಬಾರ್ಬರಳ ಬರಹಗಳೇ ಕನ್ನಡಿ ಹಿಡಿದಿವೆ. ಒಂದು ಭಾನುವಾರ ಗಿಬ್ರಾನ್ ಆಮಂತ್ರಣದ ಮೇಲೆ ಬಾರ್ಬರಾ ಅವನ ಸ್ಟುಡಿಯೋಗೆ ಹೋಗುತ್ತಾಳೆ. ಬಾರ್ಬರಾ ನ್ಯೂಯಾರ್ಕಿನಲ್ಲಿ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಳು. ಆಕೆ ಎಂದಿಗೂ ಗಿಬ್ರಾನ್‌ನೊಟ್ಟಿಗೆ ಇರಲಿಲ್ಲ.

ಭಾನುವಾರ ಬಾರ್ಬರಾ ಹೋದಾಗ ಗಿಬ್ರಾನ್ ಏನೋ ಬರೆಯುತ್ತಿದ್ದ. ಬರವಣಿಗೆ ಮಧ್ಯೆ ಎದ್ದು ಶತಪಥ ಹಾಕುವುದು ಮತ್ತೆ ಬರೆಯುವುದು ಗಿಬ್ರಾನ್‌ಗೆ ರೂಢಿಯಾಗಿತ್ತು. ಶತಪಥ ಬರವಣಿಗೆಯಲ್ಲಿ ನಿರತರಾಗಿದ್ದ ಗಿಬ್ರಾನ್ ಬಾರ್ಬರಾಳತ್ತ ಕಣ್ಣೆತ್ತಿಯೂ ನೋಡಲಿಲ್ಲ.

“ಕೊನೆಗೆ ನನಗೊಂದು ಯೋಚನೆ ಬಂತು. ನಾನು ಅವರ ಮೇಜಿನ ಮುಂದೆ ಕುಳಿತು ಪೆನ್ಸಿಲ್ ಕೈಗೆತ್ತಿಕೊಂಡೆ. ಅವರು ನನ್ನತ್ತ ತಿರುಗಿ ನೋಡಿದರು. ನೀವು ಕವನ ಹೇಳಿ ನಾನು ಬರೀತೀನಿ.’’

ಈ ಮಾತುಗಳನ್ನು ಬಾರ್ಬರಾ ದಾಖಲಿಸಿದ್ದಾಳೆ. ಮೊದಲು ‘ಅದೆಲ್ಲ ಆಗದು, ನೀನೇ ಕಾವ್ಯ ಬರೆಯಬೇಕು’ ಎಂದ ಗಿಬ್ರಾನ್ ಅನಂತರ ಪದ್ಯದ ಸಾಲುಗಳನ್ನು ಹೇಳಲಾರಂಭಿಸಿದನಂತೆ. ಒಂದು ದಿನ ಗಿಬ್ರಾನ್ ಹೇಳಿದನಂತೆ: “ನೀನು ಎಲ್ಲವನ್ನೂ ಮರೆತುಬಿಡಬೇಕು. ಏಳು ಪದಗಳನ್ನು ಮಾತ್ರ ನೆನಪಿಟ್ಟುಕೊಳ್ಳಬಹುದು. ಯಾವ ಏಳು ಪದಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತೀಯ ಹೇಳು ನೋಡೋಣ”

ಬಾರ್ಬರಾ ಹೇಳಿದ್ದು: “ದೇವರು, ಬದುಕು, ಪ್ರೀತಿ, ಸೌಂದರ್ಯ, ಭೂಮಿ. ಇನ್ನೆರಡು ಪದಗಳನ್ನು ನೀವೇ ಹೇಳಿ.” ಆಗ ಗಿಬ್ರಾನ್ ಹೇಳಿದ ಇನ್ನೆರಡು ಪದಗಳು: ನೀನು-ನಾನು. ಇನ್ನೊಮ್ಮೆ ‘ಸ್ಯಾಂಡ್ ಅಂಡ್ ಫೋಮ್’ ಬರೆಯುತ್ತಿದ್ದಾಗ ಬಾರ್ಬರಾ ಹೋದಳಂತೆ, ಅವರ ಪಕ್ಕ ಕುಳಿತಳಂತೆ. ಆಗ ಹಿಂದೆ ಎಷ್ಟೋ ಸಲ ತಾನು ಅವರ ಪಕ್ಕ ಹೀಗೆ ಕುಳಿತು ಬರವಣಿಗೆಯ ಒಂದು ಭಾಗವಾಗಿದ್ದಂತೆ ಭಾಸವಾಯಿತಂತೆ. ಇದನ್ನು ಕೇಳಿದ ಗಿಬ್ರಾನ್ “ಸಾವಿರಾರು ವರ್ಷಗಳಿಂದ ನಾವು ಇದನ್ನೇ ಮಾಡುತ್ತಿದ್ದೇವೆ. ಇನ್ನೂ ಸಾವಿರ ವರ್ಷ ಇದನ್ನೇ ಮಾಡಲಿದ್ದೇವೆ” ಎಂದನಂತೆ.

Abhijnana excerpt from Khalil Gibran by GN Rangaratha Rao Published by Vasantha Prakashana

ಲೇಖಕ ಜಿ. ಎನ್. ರಂಗರಾಥ ರಾವ್

ಇನ್ನೊಮ್ಮೆ ‘ಜೀಸಸ್ ದಿ ಸನ್ ಆಫ್ ಮ್ಯಾನ್’ ಬರೆಯುತ್ತಿದ್ದಾಗ ಹೋದ ಬಾರ್ಬರಾಗೆ ಅವನ ಕಥೆಯಲ್ಲಿ ಯೇಸುವಿನೊಂದಿಗೆ ತಾನಿರುವಂತೆ ಭಾಸವಾಯಿತಂತೆ. ಅದನ್ನು ಕೇಳಿದ ಗಿಬ್ರಾನ್ “ಹೌದು, ನೀನು ಹೇಳುತ್ತಿರುವುದು ನಿಜ. ಇದು ನಡೆದಾಗ ನೀನೂ ಅಲ್ಲಿದ್ದೆ, ನಾನೂ ಅಲ್ಲಿದ್ದೆ” ಎಂದನಂತೆ.

ಒಮ್ಮೆ ಅವನನ್ನು ಭೇಟಿಯಾಗಲು ಬಂದಿದ್ದ ಮಹಿಳೆಯೊಬ್ಬಳು ‘ನೀವೇಕೆ ಮದುವೆಯಾಗಿಲ್ಲ?’ ಎಂದು ಗಿಬ್ರಾನನ್ನು ಕೇಳಿದಳಂತೆ.

“ನಾನು ಕವಿ, ಚಿತ್ರಕಾರ. ಬರೆಯುವಾಗ ನಾನು ಹೆಂಡತಿಯನ್ನು ಮರೆತುಬಿಡಬೇಕಾಗುತ್ತೆ. ತಿಂಗಳುಗಟ್ಟಲೆ ಪ್ರೀತಿಸುವ ಹೆಂಡತಿ ಇಂಥ ಗಂಡನೊಂದಿಗೆ ಬಾಳ್ವೆ ಮಾಡಲು ಇಚ್ಚಿಸುತ್ತಾಳೇನು?”

ಇನ್ನೊಬ್ಬಳು ಮಹಿಳೆ ಕೇಳಿದಳಂತೆ: “ನೀವು ಎಂದಾದರೂ ಪ್ರೀತಿಸಿದ್ದುಂಟೆ ?” ಬಾರ್ಬರಾ ಯಂಗ್ ಗಿಬ್ರಾನ್ ಬಗ್ಗೆ ಈ ಕೆಲವು ಮಾತುಗಳನ್ನು ಬರೆದಿದ್ದಾಳೆ.

“ನಿಮಗೆ ಗೊತ್ತಿಲ್ಲದ ಸಂಗತಿಯೊಂದನ್ನು ಹೇಳುತ್ತೇನೆ ಕೇಳಿ. ಕವಿಗಳು, ಚಿತ್ರಕಾರರು, ಶಿಲ್ಪಿಗಳು, ಸಂಗೀತಗಾರರು ಇವರೆಲ್ಲ ಈ ಜಗತ್ತಿನಲ್ಲೇ ಅತಿಕಾಮಿಗಳು, ಅತಿ ಲೈಂಗಿಕಾಸಕ್ತರು. ಮೊದಲಿನಿಂದಲೂ ಇವರು ಹೀಗೆಯೇ. ಅವರಿಗೆ ಕಾಮಕ್ರೀಡೆ ಅತ್ಯಂತ ಆಪ್ಯಾಯಮಾನವಾದದ್ದು. ಅದೊಂದು ಆನಂದಾತಿಶಯವಾದ, ಘನವಾದ ದೈವದತ್ತ ವರ. ಕಾಮಕ್ರೀಡೆ ಅತ್ಯಮೋಘವಾದದ್ದು. ಆದರೆ ಅದೊಂದು ದೇವರು ಕೊಟ್ಟಿರುವ ವರ, ಅದು ಸಂಕೋಚ, ಲಜ್ಜೆ ಅದು ಸುಂದರ.”

ಸೌಜನ್ಯ : ವಸಂತ ಪ್ರಕಾಶನ, ಬೆಂಗಳೂರು. 7892106719 

ಇದನ್ನೂ ಓದಿ : The Plague : ಅಭಿಜ್ಞಾನ ; ಸರ್ಕಾರದ ಆಜ್ಞೆ ಘೋಷಣೆಯಾಗುವ ಕೆಲ ಗಂಟೆ ಮೊದಲೇ ಊರಬಾಗಿಲು ಬಂದಾಗಿದ್ದವು

Published On - 1:05 pm, Thu, 6 January 22