The Plague : ಅಭಿಜ್ಞಾನ ; ಸರ್ಕಾರದ ಆಜ್ಞೆ ಘೋಷಣೆಯಾಗುವ ಕೆಲ ಗಂಟೆ ಮೊದಲೇ ಊರಬಾಗಿಲು ಬಂದಾಗಿದ್ದವು

Albert Camus : ಒಡನಾಟದಿಂದ ಮೂಡಿಬರುವ ಭಾವನೆಯನ್ನು ಅಥವಾ ಹುಚ್ಚುಹಂಬಲದಿಂದ ಬೆಳಗಿರುವ ತೀವ್ರಕಾಮನೆಯನ್ನು ತಂತಿ ಸಂದೇಶಗಳ ಮೂಲಕ ಹಂಚಿಕೊಳ್ಳುವುದು ಹೇಗೆ ತಾನೇ ಸಾಧ್ಯ? “ಪ್ರೀತಿಯೊಂದಿಗೆ....”, “ಎಂದೆಂದಿಗೂ, ನಿನ್ನವನು’’, ‘‘ಟೇಕ್ ಕೇರ್ ಆಫ್ ಯುವರ್ ಸೆಲ್ಫ್’’ ಮುಂತಾದ ಮಾಮೂಲಿ ಮಾತು ಬಹುಬೇಗ ಪೊಳ್ಳು ಎನ್ನಿಸಿದವು.

The Plague : ಅಭಿಜ್ಞಾನ ; ಸರ್ಕಾರದ ಆಜ್ಞೆ ಘೋಷಣೆಯಾಗುವ ಕೆಲ ಗಂಟೆ ಮೊದಲೇ ಊರಬಾಗಿಲು ಬಂದಾಗಿದ್ದವು
ಅಲ್ಬರ್ಟ್​ ಕಮೂ
Follow us
ಶ್ರೀದೇವಿ ಕಳಸದ
|

Updated on: Jan 05, 2022 | 10:23 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿಯ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಡಾ. ಎಚ್. ಎಸ್. ರಾಘವೇಂದರ ರಾವ್ ಅನುವಾದಿಸಿದ ಅಲ್ಬರ್ಟ್​ ಕಮೂ ಕಾದಂಬರಿ ದಿ ಪ್ಲೇಗ್​ ನಿಂದ.

*

ಸರ್ಕಾರದ ಆಜ್ಞೆ ಘೋಷಿತವಾಗುವುದಕ್ಕಿಂತ ಕೆಲವು ಗಂಟೆ ಮುಂಚಿತವಾಗಿಯೇ ಊರಬಾಗಿಲು ಬಂದಾಗಿದ್ದವು. ಯಾರೊಬ್ಬರಿಗೂ ರಿಯಾಯತಿ, ವಿನಾಯತಿಗಳನ್ನು ತೋರಿಸುತ್ತಿರಲಿಲ್ಲ. ತಮ್ಮ ಸ್ವಾತಂತ್ರ್ಯದ ಮೇಲೆ ಪ್ಲೇಗ್ ಮಾಡಿರುವ ಈ ಪಾಶವೀ ಆಕ್ರಮಣದ ಪರಿಣಾಮವಾಗಿ ನಮ್ಮ ಊರಿನ ಜನರು ತಮಗೆ ವೈಯಕ್ತಿಕವಾದ ಮೃದುವಾದ ಭಾವನೆಗಳು ಇಲ್ಲವೇ ಇಲ್ಲವೆನ್ನುವಂತೆ ನಡೆದುಕೊಳ್ಳಬೇಕಾಯಿತು. ಪುರಸಭೆಯ ಆಣತಿಯು ಜಾರಿಗೆ ಬಂದ ಸ್ವಲ್ಪ ಹೊತ್ತಿನಲ್ಲೇ ಆ ಕಚೇರಿಯ ಮುಂದೆ ಜನ ಕಿಕ್ಕಿರಿದು ಸೇರಿದರು. ಇನ್ನೆಷ್ಟೋ ಜನ ಅಲ್ಲಿಗೆ ಫೋನ್ ಮಾಡುತ್ತಿದ್ದರು. ಪ್ರತಿಯೊಬ್ಬರೂ ತಮ್ಮದೇ ಆದ ತುರ್ತು ಹೇಳಿಕೊಳ್ಳುತ್ತಿದ್ದರು, ಕಾರಣ ಕೊಡುತ್ತಿದ್ದರು. ಆದರೆ, ಯಾರ ಮನವಿಯನ್ನೂ ಮನ್ನಿಸುವುದು ಸಾಧ್ಯವಿರಲಿಲ್ಲ. ಅಂಥ ಬೇಡಿಕೆಯನ್ನು ತಿರಸ್ಕರಿಸಲು ಇದ್ದ ಕಾರಣವೂ ಬೇಡಿಕೆಯಷ್ಟೇ ತೀವ್ರವಾಗಿತ್ತು. ನಾವು ಯಾವುದೇ ಪರಿಹಾರವಿಲ್ಲದ ಬಿಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿರುವುದನ್ನು ತಿಳಿದುಕೊಳ್ಳಲು ಅನೇಕ ದಿನ ಬೇಕಾದವು. ಇಂತಹ ಅಪಾಯದ ಸನ್ನಿವೇಶದಲ್ಲಿ ‘ಅಪವಾದ’, ‘ಅನುಗ್ರಹ’, ‘ನೆರವು ನೀಡುವುದು’ ಮುಂತಾದ ಪದಗಳಿಗೆ ಯಾವುದೇ ಅರ್ಥವಿಲ್ಲವೆನ್ನುವುದೂ ನಮಗೆ ಗೊತ್ತಾಯಿತು.

ಒಬ್ಬರಿಗೊಬ್ಬರು ಕಾಗದಗಳನ್ನು ಬರೆದುಕೊಳ್ಳುವ ಅಲ್ಪ ಸಮಾಧಾನವನ್ನೂ ನಿರಾಕರಿಸಲಾಯಿತು. ಮೊದಲನೆಯದಾಗಿ ನಮ್ಮ ಊರಿಗೆ ದೇಶದ ಇತರ ಭಾಗಗಳೊಂದಿಗೆ ಇದ್ದ ಮಾಮೂಲೀ ಸಂವಹನ ಸಾಧನಗಳೆಲ್ಲವೂ ನಿಂತುಹೋದವು. ಆಮೇಲೆ ಹೊರಡಿಸಲಾದ ಇನ್ನೊಂದು ಸುಗ್ರೀವಾಜ್ಞೆಯು ಕಾಗದ ಕೂಡ ಈ ರೋಗವನ್ನು ಊರಿಂದ ಹೊರಗೆ ಒಯ್ಯಬಹುದೆನ್ನುವ ಭಯದಿಂದ ಪತ್ರವ್ಯವಹಾರವನ್ನು ನಿಷೇಧಿಸಿತು. ಮೊದಮೊದಲ ದಿನಗಳಲ್ಲಿ ಪ್ರಭಾವಶಾಲಿಗಳಾದ ಯಾರೋ ಕೆಲವರು ಊರಬಾಗಿಲ ಬಳಿ ಹೋಗಿ, ಅಲ್ಲಿನ ಕಾವಲುಗಾರರಿಗೆ ಅದೂ ಇದೂ ಆಸೆ ತೋರಿಸಿ, ತಮಗೆ ಬೇಕಾದವರಿಗೆ ಸಂದೇಶ ಕಳಿಸುವುದರಲ್ಲಿ ಯಶಸ್ವಿಯಾದರು. ಆಗ ಕಾವಲುಗಾರರೂ ಒಂದಿಷ್ಟು ಕರುಣೆ, ಅನುಕಂಪ ತೋರಿಸುವುದು ಸಹಜವೆಂದೇ ತಿಳಿದಿದ್ದರು. ಆದರೆ, ಕೆಲವು ದಿನಗಳ ನಂತರ ಅದೇ ಕಾವಲುಗಾರರಿಗೆ ಸನ್ನಿವೇಶದ ತೀವ್ರತೆ, ಗಾಂಭೀರ್ಯ ಗೊತ್ತಾದವು. ತಾವು ತಪ್ಪು ಮಾಡಿದರೆ ಅದರ ಪರಿಣಾಮ ಅಪಾಯಕಾರಿಯಾಗಬಹುದೆನ್ನುವುದೂ ಗೊತ್ತಾಯಿತು. ಆದ್ದರಿಂದ ಅವರು ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ಸಾರಾಸಗಟಾಗಿ ನಿರಾಕರಿಸಿದರು. ಎರಡು ಊರುಗಳ ನಡುವೆ ಟೆಲಿಫೋನ್ ಮಾಡುವ ಸೌಲಭ್ಯ ಇನ್ನೂ ಉಳಿದಿತ್ತು. ಆದರೆ, ಅದಕ್ಕೆ ಎಲ್ಲ ಜನರೂ ಮುಗಿಬಿದ್ದರು. ಟೆಲಿಫೋನ್ ಬೂತುಗಳ ಮುಂದೆ ಕಿಕ್ಕಿರಿದ ಜನಸಂದಣಿ. ಎಲ್ಲ ಲೈನುಗಳೂ ಯಾವಾಗಲೂ ಬಿಸಿ. ಆದ್ದರಿಂದ ಕೆಲದಿನ ದೂರವಾಣಿ ಸೇವೆಯನ್ನು ನಿಲ್ಲಿಸಿದರು.

ಆಮೇಲೆ ಕೂಡ ಇದನ್ನು ಹುಟ್ಟು, ಸಾವು, ಮದುವೆ ಮುಂತಾದ ತುರ್ತಾದ ವಿಷಯಕ್ಕೆ ಸೀಮಿತಗೊಳಿಸಿದರು. ಕೊನೆಯಲ್ಲಿ ನಮಗೆ ಉಳಿದ ಟೆಲಿಗ್ರಾಂ ಮಾತ್ರ. ಹೃದಯ ಹೃದಯವನ್ನು, ಒಡಲು ಒಡಲುಗಳನ್ನು ನಿಕಟವಾಗಿ ಬೆಸೆದಿರುವ ಸಂಬಂಧದ ತುಡಿತ ಹಂಚಿಕೊಳ್ಳಲು. ಹತ್ತು ಪದಗಳ ಹರಹಿನಲ್ಲಿ ಮೊದಲಾಗಿ ಮುಗಿದುಹೋಗುವ ತಂತಿ ಸಂದೇಶಗಳು ಎಷ್ಟು ಮಾತ್ರಕ್ಕೂ ಸರಿ ಹೋಗಲಿಲ್ಲ. ವಾಸ್ತವವಾಗಿ ತಂತಿ ಸಂದೇಶದಲ್ಲಿ ಚಿರಪರಿಚಿತವಾಗಿರು ಕ್ಲೀಷೆಗಳನ್ನು ಮಾತ್ರ ಬಳಸುವುದು ಸಾಧ್ಯ. ಒಡನಾಟದಿಂದ ಮೂಡಿಬರುವ ಭಾವನೆಯನ್ನು ಅಥವಾ ಹುಚ್ಚುಹಂಬಲದಿಂದ ಬೆಳಗಿರುವ ತೀವ್ರಕಾಮನೆಯನ್ನು ಅವುಗಳ ಮೂಲಕ ಹಂಚಿಕೊಳ್ಳುವುದು ಹೇಗೆ ತಾನೇ ಸಾಧ್ಯ? “ಪ್ರೀತಿಯೊಂದಿಗೆ….”, “ಎಂದೆಂದಿಗೂ ನಿನ್ನವನು’’ ‘‘ಟೇಕ್ ಕೇರ್ ಆಫ್ ಯುವರ್ ಸೆಲ್ಫ್’ ಮುಂತಾದ ಮಾಮೂಲಿ ಮಾತು ಬಹು ಬೇಗ ಪೊಳ್ಳು ಎನ್ನಿಸಿದವು.

ನಮ್ಮಲ್ಲಿ ಕೆಲವರು ಕಾಗದ ಬರೆಯುವುದೇ ಸರಿಯೆಂದು ಹಟ ಹಿಡಿದು ಪತ್ರವ್ಯವಹಾರದ ಮೂಲಕ ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಹಲವು ಯೋಜನೆಗಳನ್ನು ಹಾಕಿದೆವು. ಅಂಥ ಕನಸು ಕೂಡ ಭ್ರಮೆಯೆಂದು ಬಹು ಬೇಗ ಒತ್ತಾಯಿತು. ತಾವು ಬಳಸಿದ ಉಪಾಯ ಯಶಸ್ವಿಯಾದರೂ ಬರೆದ ಪತ್ರಗಳು ಸಂಬಂಧಿಸಿದ ವ್ಯಕ್ತಿಗೆ ತಲುಪಿದವೋ ಇಲ್ಲವೋ ಗೊತ್ತಾಗಲಿಲ್ಲ. ಯಾಕೆಂದರೆ ಯಾರಿಂದಲೂ ಉತ್ತರ ಬರಲಿಲ್ಲ. ಬರುವ ಸಾಧ್ಯತೆಯೂ ಇರಲಿಲ್ಲ. ಆದ್ದರಿಂದ ವಾರಗಳು ಉರುಳಿದಂತೆ ನಾವು ಅದೇಅದೇ ಪತ್ರಗಳನ್ನು ಮತ್ತೆ ಮತ್ತೆ ನಕಲು ಮಾಡುತ್ತಿದ್ದೆವು. ಅದೇ ಅಹವಾಲುಗಳನ್ನು ಅಹವಾಲುಗಳನ್ನು ಹಂಬಲ ಹಾರೈಕೆಗಳನ್ನು ತೋಡಿಕೊಳ್ಳುತ್ತಿದ್ದೆವು.  ಒಂದು ಕಾಲದಲ್ಲಿ ಹೃದಯದ ನೆತ್ತಿ ಅದ್ದಿ ತೆಗೆದಿದ್ದ ಮಾತು ಈಗ ಶೂನ್ಯವಾಗಿ ಟೊಳ್ಳಾಗಿ ಕಾಣಿಸುತ್ತಿದ್ದವು. ಆದರೂ ಅವುಗಳನ್ನೇ ಯಾಂತ್ರಿಕವಾಗಿ ನಕಲಲು ಮಾಡುತ್ತಿದ್ದೆವು. ಆ ನಿರ್ಜೀವ ಪದಗಳಿಂದ ನಾವು ಹಾಯುತ್ತಿರುವ ಬೆಂಕಿಕೊಂಡದ ಪರಿಚಯವನ್ನು ಅವರಿಗೆ ಮಾಡಿಕೊಡಲು ಪ್ರಯತ್ನಿಸಿದೆವು. ಕೊನೆಗೆ ಖಅಲಿಗೋಡೆಯ ಜೊತೆ ನಡೆಸುವ ಈ ಸಂವಾದ ನಮಗೂ ಬೇಸರ ತರಿಸಿತು. ನಿರ್ವೀರ್ಯವಾದ ಈ ಸ್ವಗತ ಸಂಭಾಷಣೆಗಿಂತ ಮಾಮೂಲಾದ ಟೆಲಿಗ್ರಾಂ ಎಷ್ಟೋ ವಾಸಿ ಎನ್ನಿಸಿತು.

ಕೆಲವು ದಿನಗಳ ನಂತರ, ನಮ್ಮಲ್ಲಿ ಯಾರೊಬ್ಬರೂ ಊರಿಂದ ಹೊರಗೆ ಹೋಗುವ ಸಾಧ್ಯತೆ ಲವಲೇಶವೂ ಇಲ್ಲವೆನ್ನುವುದು ಖಚಿತವಾದ ಮೇಲೆ, ಈ ಪಿಡುಗು ಪ್ರಾರಂಭವಾಗುವುದಕ್ಕೆ ಮೊದಲೇ ಬೇರೆ ಬೇರೆ ಕಡೆ ಹೋಗಿದ್ದ ನಮ್ಮವರನ್ನು ಮರಳಿ ಕರೆಸಿಕೊಳ್ಳುವುದರ ಬಗ್ಗೆ ಯೋಚಿಸತೊಡಗಿದೆವು. ಕೆಲವು ದಿನ ಈ ಬಗ್ಗೆ ಸಮಾಲೋಚನೆ ನಡೆಸಿದ ನಂತರ ಸಂಬಂಧಪಟ್ಟ ಅಧಿಕಾರಿಗಳು, ಹೊರಗೆ ಹೋಗಿರುವವರು ಮರಳಿ ಬರಲು ಅನುಮತಿ ನೀಡಿದರು. ಆದರೆ, ಹಾಗೆ ಹಿಂದಿರುಗಿ ಬಂದವರು ಯಾವುದೇ ಸಂದರ್ಭದಲ್ಲಿ ಮತ್ತೆ ಹೊರಗೆ ಹೋಗುವಂತಿಲ್ಲವೆಂಬ ಕರಾರು ಹಾಕಿದರು. ಅವರಿಗೆ ಊರೊಳಗೆ ಬರುವ ಸ್ವಾತಂತ್ರ್ಯವಿತ್ತೇ ಹೊರತು ಊರಿಂದ ಹೋಗುವ ಹಕ್ಕು ಇರಲಿಲ್ಲ. ಆಗ ಎಲ್ಲೋ ಕೆಲವೇ ಕೆಲವು ಕುಟುಂಬಗಳು ಪ್ರೀತಿಪಾತ್ರರೊಂದಿಗೆ ಮರಳಿ ಸೇರುವ ಸಂಭ್ರಮದಲ್ಲಿ ಮುನ್ನೆಚ್ಚರಿಕೆಯನ್ನು ಗಾಳಿಗೆ ತೂರಿದರು. ಒಟ್ಟು ಸನ್ನಿವೇಶವನ್ನು ಆಶಾವಾದದಿಂದ ನೋಡಿ, ಈ ಅವಕಾಶ ಉಪಯೋಗಿಸಿಕೊಂಡು ಹಿಂದಿರುಗಿ ಬರುವಂತೆ ತಮ್ಮ ಬಂಧು ಮಿತ್ರರನ್ನು ಕೇಳಿಕೊಂಡರು. ಆದರೆ, ಪ್ಲೇಗಿನ ಸೆರೆಯಾಳುಗಳಾದ ಈ ಜನ ಬಹಳ ಬೇಗ ತಮ್ಮ ತಪ್ಪು ತಿಳಿದುಕೊಂಡರು. ತಮ್ಮ ಪ್ರೀತಿಪಾತ್ರರಾದ ನೆಂಟರಿಷ್ಟರನ್ನು ಎಂತಹ ಅಪಾಯಕ್ಕೆ ಒಡ್ಡುತ್ತಿದ್ದೇವೆ ಎನ್ನುವುದು ಅವರಿಗೆ ಮನದಟ್ಟಾಯಿತು. ಅನಂತರ ಅವರು ಹೊಸ ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಗಲಿಕೆಯನ್ನು ಸಹಿಸಿಕೊಂಡರು.

Abhijnana excerpt of Albert Camus The Plague Translated by HS Raghavendra Rao

ಅನುವಾದಕ, ವಿಮರ್ಶಕ ಡಾ. ಎಚ್. ಎಸ್. ರಾಘವೇಂದ್ರ ರಾವ್

ಪ್ಲೇಗ್ ಅತ್ಯಂತ ಪ್ರಬಲವಾಗಿದ್ದ ಕಾಲದಲ್ಲಿ, ಸಾವುನೋವುಗಳಿಗೆ ಹೆದರದೆ ಸಾಂಗತ್ಯವನ್ನು ಬಯಸಿದ ಒಂದೇ ಒಂದು ಪ್ರಕರಣ ನಮ್ಮ ಗಮನಕ್ಕೆ ಬಂತು. ನೀವೆಲ್ಲರೂ ನಿರೀಕ್ಷಿಸುವಂತೆ, ಇದು ಒಬ್ಬರಿನ್ನೊಬ್ಬರ ಒಡನಾಟಕ್ಕಾಗಿ ಹಾತೊರೆಯುವ, ಯಾವ ನೋವೇ ಬರಲಿ ಸಂಗಸುಖಕ್ಕಾಗಿ ಹಂಬಲಿಸುವ ತರುಣ-ತರುಣಿಯರ ಕಥೆಯಲ್ಲ. ಅನೇಕ ವರ್ಷ ವೈವಾಹಿಕ ಜೀವನ ನಡೆಸಿದ್ದ ಡಾ. ಕೆಸ್ಟೆಲ್ ಮತ್ತು ಅವರ ಮಡದಿ ಹೀಗೆ ಒಂದಾದರು. ಈ ಪಿಡುಗು ಕಾಣಿಸಿಕೊಳ್ಳುವುದಕ್ಕೆ ಕೆಲವು ದಿನ ಮುಂಚೆ ಶ್ರೀಮತಿ ಕೆಸ್ಟೆಲ್ ಹತ್ತಿರದ ಯಾವುದೋ ಊರಿಗೆ ಹೋಗಿದ್ದರು. ಹಾಗೆ ನೋಡಿದರೆ, ಅವರದು ಸುಖಸಂತೋಷದಲ್ಲಿ ಓಲಾಡುತ್ತಿರುವ ಆದರ್ಶ ವಿವಾಹವೇನೂ ಆಗಿರಲಿಲ್ಲ. ಈ ನಿರೂಪಕನಿಗೆ ಚೆನ್ನಾಗಿ ತಿಳಿದಿರುವಂತೆ, ಕೆಸ್ಸೆಲ್ ದಂಪತಿಗೆ ಗಂಡಹೆಂಡಿರಾಗಿ ತಾವು ಸಂತೋಷವಾಗಿದ್ದೇವೆ ಎನ್ನುವ ಸ್ಪಷ್ಟವಾದ ತಿಳಿವಳಿಕೆಯೂ ಇಲ್ಲಿಯ ತನಕ ಇರಲಿಲ್ಲ. ಆದರೆ ಬಹಳ ಅನಿರೀಕ್ಷಿತವಾದ, ಸುದೀರ್ಘವಾದ ಅಗಲಿಕೆಯ ಅವಧಿಯಲ್ಲಿ ತಾವಿಬ್ಬರು ಪರಸ್ಪರ ದೂರವಾಗಿ ಬದುಕುವುದು ಸಾಧ್ಯವೇ ಇಲ್ಲವೆಂಬ ವಿಷಯ ಅವರಿಗೆ ಮನದಟ್ಟಾಗಿತ್ತು. ಈ ಹೊಸ ಅರಿವಿನ ಬೆಳಕಿನಲ್ಲಿ, ಪ್ಲೇಗ್ ಕೊಡಬಹುದಾದ ಕಷ್ಟವು ಕ್ಷುಲ್ಲಕವಾಗಿ ಕಾಣಿಸಿತ್ತು. ಅವರಿಬ್ಬರದು ಒಂದು ಅಪವಾದ, ಬಹಳಷ್ಟು ಜನರಿಗೆ ತಮ್ಮ ಅಗಲಿಕೆ, ಪಿಡುಗು ಮುಕ್ತಾಯವಾಗುವವರೆಗೆ ಇದ್ದೇ ಇರುವುದೆಂದು ಚೆನ್ನಾಗಿ ಗೊತ್ತಾಗಿತ್ತು.

ನಮ್ಮಲ್ಲಿ ಪ್ರತಿಯೊಬ್ಬರ ಪ್ರತಿಯೊಬ್ಬರ ಬದುಕನ್ನೂ ಗಾಢವಾಗಿ ಆವರಿಸಿದ್ದ, ಇವು ಚೆನ್ನಾಗಿ ಗೊತ್ತಿದೆ ಎಂದು ನಾವೆಲ್ಲರೂ ತಿಳಿದಿದ್ದ ಭಾವನೆಗಳು ಕೂಡ ಈಗ ಬೇರೆ ಬಗೆಯಲ್ಲಿ ಕಾಣತೊಡಗಿದವು. (ಈಗಾಗಲೇ ಹೇಳಿರುವಂತೆ ಓರಾನಿನ ಜನರ ತೀವ್ರಭಾವಗಳು ಕೂಡ ಬಹಳ ಸರಳ ಮತ್ತು ನೇರ.) ತಮ್ಮ ಸಂಗಾತಿಗಳಲ್ಲಿ ಅತ್ಯಂತ ಆಳವಾದ ನಂಬಿಕೆ-ವಿಶ್ವಾಸಗಳನ್ನು ಇಟ್ಟಿದ್ದ ಗಂಡಂದಿರು ಹಾಗೂ ಪ್ರಿಯಕರರು ಹೊಟ್ಟೆಕಿಚ್ಚಿನಿಂದ ಉರಿಯತೊಡಗಿದರು. ಅದರಿಂದ ಅವರಿಗೆ ಆಶ್ಚರ್ಯವಾಯಿತು. ಪ್ರೇಮದ ವಿಷಯದಲ್ಲಿ ತಾವು ಚಂಚಲಚಿತ್ತರೆಂದು ತಿಳಿದುಕೊಂಡಿದ್ದವರು ದಾಂಪತ್ಯನಿಷ್ಠೆಯ ಮಾದರಿಯಾದರು. ತಾಯಂದಿರ ಕಡೆ ತಿರುಗಿಯೂ ನೋಡದೆ, ಅವರ ಸಂಗಡ ಹಲವು ಕಾಲ ಕಳೆದಿದ್ದ ಗಂಡುಮಕ್ಕಳು, ತಾಯಮೊಗದಲ್ಲಿ ಎಂದಿನಿಂದಲೂ ಇದ್ದ, ಈಗ ತಮ್ಮ ಆತ್ಮಸಾಕ್ಷಿಯನ್ನು ಕಾಡುತ್ತಿರುವ ದುಃಖದ ಸುಕ್ಕುಗೆರೆಗಳನ್ನು ಕಣ್ಣೆದುರಿಗೆ ತಂದುಕೊಂಡು ಪಶ್ಚಾತ್ತಾಪ ಮತ್ತು ಆತಂಕಗಳಿಂದ ಕೊರಗಿದರು. ಈ ಅಗಲಿಕೆ ಸಂಪೂರ್ಣವಾಗಿತ್ತು, ಅನಿರೀಕ್ಷಿತವಾಗಿತ್ತು. ಭವಿಷ್ಯದಲ್ಲಿ ಏನು ಕಾದಿದೆ ಎನ್ನುವುದರ ಬಗೆಗಿನ ಸಂಪೂರ್ಣ ಅಜ್ಞಾನ ನಮ್ಮನ್ನು ಬೆದರಿಸಿತು. ನಾವು ಒಲಿದವರ, ನಮ್ಮನ್ನು ಒಲಿದವರ, ಇಷ್ಟೊಂದು ಹತ್ತಿರ ಆದರೆ ಎಷ್ಟೊಂದು ದೂರವಾದ ಇರುವಿಕೆಯ ನೀರವ ವಿಷಾದವು ನಮ್ಮನ್ನು ಎಡೆಬಿಡದೆ ಕಾಡಿತು. ಇದರಿಂದ ಬಿಡುಗಡೆ ಪಡೆಯುವ ಯಾವ ಹಾದಿಯೂ ಕಾಣಲಿಲ್ಲ. ವಾಸ್ತವವಾಗಿ ನಾವು ಇಬ್ಬಗೆಯಲ್ಲಿ ನರಳಿದೆವು. ಮೊದಲನೆಯದು ನಮ್ಮದೇ ಸ್ವಂತ ಯಾತನೆ. ಅದರ ಜೊತೆಗೆ, ಮಗನಿರಲಿ, ಪತ್ನಿಯಿರಲಿ, ಪ್ರೇಯಸಿಯಿರಲಿ ನಮ್ಮೆದುರಿಗೆ ಇಲ್ಲದ ಪ್ರೀತಿಪಾತ್ರರ ಸಂಕಟವನ್ನು ಊಹಿಸಿಕೊಂಡು ನಾವು ಪಡುತ್ತಿದ್ದ ಯಾತನೆ.

ಸೌಜನ್ಯ : ಚಿಂತನ ಚಿತ್ತಾರ, ಮೈಸೂರು. 9945668062

ಇದನ್ನೂ ಓದಿ : Literature : ಅಭಿಜ್ಞಾನ ; ಮಗಳಿಗೆ ‘ಲೈಲಾ’ ಎಂದಿಟ್ಟರು, ಮಗನಿಗೆ ‘ಷಹಜಹಾನ್’ ಅಂತಿಡಬೇಕು ಅನ್ನೋ ಆಸೆ ರಾಯರಿಗೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ