Poetry : ಅವಿತಕವಿತೆ : ನಾವೂ ದೇವರ ಹೂರೂಪ ಎಂಬುದ ಮರೆತು, ಮುಳ್ಳನ್ನೂ ಮುಚ್ಚಿಟ್ಟುಕೊಳ್ಳುತ್ತೇವೆ

Poem : ‘ಅಂದಿನ ಗರತಿಯರು ದಿನ ನಿತ್ಯದ ಹೊಟ್ಟೆ ತುಂಬುವ ರಾಗೀ ಬೀಸುವ ಕಲ್ಲ ಮುಂದೆ ಬೀಸಲು ಕುಳಿತಾಗ ಬದುಕೆಂಬುದು ಕಾಳಾಗಿ ನುರಿಯುತ್ತ, ಆ ಸದ್ದಿನೊಂದಿಗೆ ನೋವುನಲಿವುಗಳು ಪದಗಳಾಗಿ, ರಾಗವಾಗಿ ಕಣ್ಣೀರು ಸುರಿಸಿ ಒರೆಸಿಕೊಳ್ಳುವಾಗ ಮಡಿಲಲ್ಲಿ ಮುಗುಳು ನಗುತ್ತ ಕನವರಿಕೆಯಲ್ಲಿರುತ್ತಿದ್ದ ಮಗು ಎಚ್ಚೆತ್ತು ಕಣ್ಣೀರು ತುಂಬಿದ ತಾಯ ಮುಖವನ್ನು ನೋಡುತ್ತದೆ. ಇದು ಕಾವ್ಯದ ಮುನ್ನುಡಿಯಂತೇ ನನಗೆ ತೋರುತ್ತದೆ.’ ಎಚ್. ಆರ್, ಸುಜಾತಾ

Poetry : ಅವಿತಕವಿತೆ : ನಾವೂ ದೇವರ ಹೂರೂಪ ಎಂಬುದ ಮರೆತು, ಮುಳ್ಳನ್ನೂ ಮುಚ್ಚಿಟ್ಟುಕೊಳ್ಳುತ್ತೇವೆ
Follow us
|

Updated on:Dec 19, 2021 | 9:06 AM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕವಿ, ಲೇಖಕಿ ಎಚ್. ಆರ್. ಸುಜಾತಾ ಹಳ್ಳಿ ಜೀವನ ಚಿತ್ರಣ ‘ಮಣಿಬಾಲೆ’ ಯನ್ನು ಅತ್ತ ಅಚ್ಚಿಗೆ ಕಳಿಸಿ, ಇತ್ತ ಕಾಯುತ್ತ ಕುಳಿತಿರುವಾಗ ಹುಟ್ಟಿದ ಕವಿತೆಗಳು ಇಲ್ಲಿವೆ. 

*

ಕವಿತೆ ಕನ್ನಡಿಯಾಗಿರುವಂತೆ ದೀಪವೂ ಆಗಿರುವುದು ಉತ್ತಮ ಕವಿತೆಯ ಲಕ್ಷಣ. ಕನ್ನಡ ಮಹಿಳಾ ಕವಿತೆ ಗಂಡು ನಿರೂಪಣಾ ಮಾದರಿ ಹಾಗೂ ನೋಟ ಕ್ರಮಗಳಿಂದ ಬಿಡುಗಡೆಗೊಳ್ಳುವ ಎಚ್ಚರದ ಸ್ಥಿತಿಯತ್ತ ಹೊರಳುತ್ತಿದೆ. ಈ ಪೈಕಿ ಸುಜಾತಾ ಅವರ ಕವಿತೆಗಳಿಗೆ ಅಂಥ ಗುಣವಿದೆ. ಅವರ ನಿರೂಪಣೆಗಳಲ್ಲಿ ಲೋಕಸಂಧಾನದ ನಿಲುವುಗಳಲ್ಲಿ ಹೆಣ್ಣಿನ ಲೋಕದೃಷ್ಟಿಯ ನೋಟಕ್ರಮವು ನಿಚ್ಚಳವಾದ ರೂಪವನ್ನು ಪಡೆಯುತ್ತಿರುವ ಉಕ್ತಿ ವಿನ್ಯಾಸಗಳು ಕಾಣುತ್ತವೆ. ಬದುಕು ಅವಸರದಲ್ಲಿ ಧಾವಿಸುತ್ತಿರುವ ಈ ಯುಗದಲ್ಲಿ ಸಾವಧಾನವಾಗಿ ಚಿಂತಿಸುವ, ಚಿತ್ತ ಹುತ್ತಗಟ್ಟಿ ಧ್ಯಾನಿಸುವ, ಮೈತ್ರಿ ಸಂಹಿತೆಯನ್ನುಹುಡುಕುತ್ತಿರುವ ಅವರ ಕವಿತೆಗಳು ಕನ್ನಡ ಕವಿತೆಯ ಅನುಭವ ಲೋಕವನ್ನು ಹಿಗ್ಗಿಸುವಷ್ಟು ಶಕ್ತ ವಕ್ರೋಕ್ತಿಗಳಾಗಿವೆ. ಡಾ. ಕೆ. ವೈ. ನಾರಾಯಣಸ್ವಾಮಿ, ಲೇಖಕ

*

ಮನೆ ಮಾರು

ಮುತ್ತಮ್ಮ ಜಿಡ್ಡುಗಟ್ಟಿದ ತಲೆಗೂದಲನ್ನ ವಾರಕ್ಕೊಮ್ಮೆ ತೊಳೆಯುತ್ತಿದ್ದಳಂತೆ ದನಕರ, ಜನಮಾನವನ್ನೊಪ್ಪಿಸಿ ಬಿತ್ತಿ ಬೆಳೆಗೆ ಊರುಗೋಲಾದವಳು ಮೈಕೈ ತೊಳೆಯಲೂ ಸೀಗೆ ಮೆಳೆಯ ನುಸುಳಿ ಮೈಪರಚಿಕೊಳ್ಳುತ್ತಿದ್ದಳು

ಕರಿಹಿಡಿದ ಗಾಜು ಗೋಡೆಯ ನೀರ್​ಬೆರಳಲ್ಲಿ ತಿಕ್ಕಿ ಹಣೆಗೆ ಸಾದನ್ನಿಡುತ್ತಿದ್ದ ಚತುರೆಗೆ ಮಾತಿಗೊಂದು ಒಡಪು, ಮಡಿಲ ತುಂಬ ಬೆರಕೆಸೊಪ್ಪು, ಅಣಬೆ ಕುಕ್ಕಲ ಮಾಡಿಕ್ಕುವ ಬೇರ ಹರಿವನ್ನರಿತು ವರುಷ ಧಾರೆಗೆ ಗುಡುಗಿನಾರ್ಭಟಕೆ ಮೈದೋರುತ್ತಿದ್ದಳು

ಮನೆ ತುಂಬಾ ಮಕ್ಕಳು, ತಿಪ್ಪೆ ಕಸವ ದೊಡ್ಡದು ಮಾಡುವ ಕನಸಲ್ಲೇ ಹೊಲ ಕೆರೆವ ಕಳೆಗುಡ್ಲು ದನಕರುವ ಹಿಡಿದವಳು ಉಗುರಗಣ್ಣಲಿ ಹೊಕ್ಕು ಚೀಗುಡುವ ಮುಳ್ಳುಮೊನೆಗೆ ಸೊಂಟಕ್ಕೆ ಸಿಗಿಸಿದ ಚಂಚಿ ತೆಗೆದು ಸುಣ್ಣಕಾಯಸರದ ಚಿಮುಟವನ್ನಿತ್ತವಳು, ಮೊಮ್ಮಗಳು ಮೆದುಗೈಯ್ಯಲ್ಲಿಡಿದು ಬಗೆವಾಗ, ಮುತ್ತಮ್ಮನ ಒರಟು ಅಂಗೈಯ ಗೆರೆತುಂಬಾ ಉಕ್ಕೆಹೊಡೆದಂತೆ ಗೀಚು ಗೀಚು

ಮಣ್ಣು ಮುಟ್ಟದ ಬೆರಳು, ನೆಲ ಕಾಣದ ಮನೆ ಎತ್ತ ನೋಡಿದರು ಪಟ್ಟಣದ ನಯವಾದ ಗಾಜು ಕಿಟಕಿಯಲಿ ಢಿಕ್ಕಿ ಹೊಡೆದು ನೆಲಕೆ ಬೀಳುವ ಮಳೆಹುಳ ಕಣ್ಣಿಗೆ ಕಂಡಾಗ…

ಸೆರಗ ಚುಂಗಲ್ಲೇ ಒಲೆ ಮೇಲಿಂದ ಕುದಿವೆಸರ ತಪ್ಪಲೆಯಿಳಿಸುವ ಮುತ್ತಮ್ಮ ಎದೆಯೇರುತ್ತಾಳೆ ಸುಡುನೆತ್ತಿಯ ಮೇಲೆ ಸೆರಗನ್ನೆಸೆದು ಕುಣಕುಣನೆ ನುಂಬಿಡಿದು ಕಳೆಯ ಹುಟ್ಟಡಗಿಸುವ ಕುಡುಗೋಲ ಕಣಿಕಣಿ ಸದ್ದ ಕಿವಿಯಲ್ಲಾಡಿಸುತ್ತಾಳೆ

ಇಂಥ ಮೋಜಿನರಮನೆಯಲ್ಲೂ ಮುತ್ತಮ್ಮನ ಮಡಿಲಲ್ಲಿ ಮಲಗಿದ ಕನಸು ಕೂದಲ ನೇವರಿಸುತ್ತವೆ ಅವಳು ಕಳೆಯೆಂದು ತೆಗೆದು ಹೊಲದ ಬದುವಿನ ಮೇಲೆ ಒಣಗಲು ಗುಡ್ಡೆ ಹಾಕುತ್ತಿದ್ದ ಹಸಿರು ಗರಿಕೆ ಬಾಯಿ ಹಾಕುವ ದನ ಕಾಣದೆ ಬಾಲ್ಕನಿಯಿಂದ ಕಣ್ಣಿಗಿಳಿಯುತ್ತದೆ

ಪಚ್ಚೆಯುಕ್ಕಿಸುವ ಲಾನು ಪೈಪಿನಲ್ಲಿ ನೀರುಕ್ಕಿಸುತಾ ನಿಂತ ಅಪಾರ್ಟ್ಮೆಂಟಿನ ಗಾರ್ಡನರು ಆಂಟಿಕ್ ಪೀಸಾಗಿ ನಿಂತುಹೋದ ಭತ್ತ ರಾಗಿ ಅರೆವ ರೋಣಗಲ್ಲು, ಉರುಳುವ ಗಾಡಿಚಕ್ರ

ಹಿಮ್ಮುಖದಿ ತಿರುಗುತ್ತ ಕರೆದೊಯ್ಯುತ್ತವೆ ಮುತ್ತಮ್ಮನ ಮುಗಿಯದೂರಿನ ದಿನಚರಿಗೆ ಹಿಂದಲ ಅರಿಯ ಒರಳಲ್ಲವಳು ಒನಕೆ ಹಿಡಿವ ಸದ್ದು ಸೂ..ಸು.. ಅವಳ ದಬ್ಬುಸಿರು

ಮುಂದಿನ ಚಾವಡಿಯ ಬಾಗಿಲಲ್ಲಿ ಸೂಟ್ಕೇಸಿನ ಚಕ್ರ ಎಳೆಯುತ್ತ ಹೊರಟು ನಿಂತ ಮೊಮ್ಮಗಳು ನಾ ಕಾರನ್ನೇರಿದರೂ ಕೈಬೀಸುತ್ತಲೇ ಇರುತ್ತಿದ್ದೆ ಕರಿನೆತ್ತಿ ಮರದವರೆಗೂ ಹೆಜ್ಜೆ ಹಾಕುತ್ತಲೇ ಬರುತ್ತಿದ್ದ ಮುತ್ತಮ್ಮನಿಗೆ

*

ಜಗದ ಹೆಬ್ಬಾಗಿಲು

ಕಡಲಿಹುದು ಆಳದಲ್ಲಿ ಉಕ್ಕುವುದು ದಡದ ಕರೆಗೆ ಮುತ್ತುರತ್ನ ಹವಳ ಅಂತರಾಳದಲ್ಲಿ

ರೆಪ್ಪೆ ಮಿಡಿವ ಕಣ್ಣೇ ಜಗದ ಹೆಬ್ಬಾಗಿಲು ಕದವ ತಟ್ಟಲು ಭೂಮಿಯೊಡಲು ತುಂಬುವುದು ಭರಪೂರ

ಏನುಂಟು ಏನಿಲ್ಲ ಒಳಮನೆಯಲ್ಲಿ ಹೊರಗು ದಾಟಿಬಂದು ಒಳಗೆ ಕೂಡುವುದು ಕಳೆಯುವುದು ಮಾಟದಲ್ಲಿ

ದಿಟ್ಟಿಯಲ್ಲಿ ಸಿಗಲು ಅಕ್ಕರೆ ಬಿಂದು ದುಂಬಿಯಾಗಿ ಹಾರುವುದು ಗಿಡದಿಂದ ಗಿಡಕೆ ಬಾಗಿಲಿಂದಾಚೆ

ಉಕ್ಕುವ ಹೂ ಪೊದರಲ್ಲಿ ಹಸಿರ ತನುವ ಮೇಯುವ ಮನವು ಸೊಗವುಕ್ಕಿ ಕರೆವುದು ನೊರೆಹಾಲು

ನಕ್ಕರೆ ಬಿದಿಗೆ ಚಂದ್ರ, ಅತ್ತರೆ ಪೂರ್ಣಚಂದ್ರ ಬುರಬುರನೂದಿ ಉಸುರುಬುಂಡೆಯಾದ ಚಂದಿರ ತೇಲುವನು ಮೋಡದೊಡನೆ

ಬೆಟ್ಟವುಂಟು ಎದೆಯೊಳಗೆ ಕಡಲುಂಟು ಹಸಿರು ಉಸಿರು ಬಣ್ಣ ಬಸಿರು ಎಲ್ಲ ಸೂರ್ಯನಿಗೆ ಢೀಯಿಟ್ಟರೆ ಮೋಡದ ದುಗುಡ ಕದ ತೆರೆದು ಬರುವುದು ಮಳೆಯ ಮುದಗಳಿಗೆ

*

AvithaKavithe Kannada Poetry Column by Poet HR Sujatha skvd

ಸುಜಾತಾ ಕೈಬರಹದೊಂದಿಗೆ

ಲಾಲಿ ಪದಗಳು ಕಟ್ಟಿದ ತೊಟ್ಟಿಲ ತೂಗುತ್ತಾ, ಬಾಲ್ಯದಲ್ಲಿ ಪದ್ಯಗಳು ರಾಗವಾಗಿ ಬಾಯಿಪಾಠವಾಗುತ್ತಾ, ಹರಯದಲ್ಲಿ ಕವನಕಾವ್ಯಗಳಾಗಿ ನಮ್ಮೊಳಗನ್ನು ಬೆಳೆಸಿ, ಲಾವಣಿಯಲ್ಲಿ ವೀರಗಾಥೆಗಳನ್ನು ಅರುಹಿ, ಶಾಯರಿಯಲ್ಲಿ ಬದುಕನ್ನು ಪರಿತಪಿಸಿ, ಚುಟುಕು, ಗಝಲ್​ನಲ್ಲಿ ಪ್ರೇಮ ವಿರಹವನ್ನು ಎದೆಗಿಳಿಸಿ, ತತ್ವ ಪದಗಳಲ್ಲಿ ಬದುಕು ಸಾವಿನ ತೊಟ್ಟಿನಲ್ಲಿ ಅಂಟಿಕೊಂಡು, ಅನಿಶ್ಚಿತ ಬದುಕಿನ ಗೌಪ್ಯತೆಯ ದರ್ಶನವನ್ನು ದಾಖಲಿಸುತ್ತ ಬದುಕಿರುವ ಕಾವ್ಯದ್ದು ಭರವಸೆಯ ಪಯಣ.

ಅಂದಿನ ಗರತಿಯರು ದಿನ ನಿತ್ಯದ ಹೊಟ್ಟೆ ತುಂಬುವ ರಾಗೀ ಬೀಸುವ ಕಲ್ಲ ಮುಂದೆ ಬೀಸಲು ಕುಳಿತಾಗ ಬದುಕೆಂಬುದು ಕಾಳಾಗಿ ನುರಿಯುತ್ತ, ಆ ಸದ್ದಿನೊಂದಿಗೆ ನೋವುನಲಿವುಗಳು ಪದಗಳಾಗಿ, ರಾಗವಾಗಿ ಕಣ್ಣೀರು ಸುರಿಸಿ ಒರೆಸಿಕೊಳ್ಳುವಾಗ ಮಡಿಲಲ್ಲಿ ಮುಗುಳು ನಗುತ್ತ ಕನವರಿಕೆಯಲ್ಲಿರುತ್ತಿದ್ದ ಮಗು ಎಚ್ಚೆತ್ತು ಕಣ್ಣೀರು ತುಂಬಿದ ತಾಯ ಮುಖವನ್ನು ನೋಡುತ್ತದೆ. ಇದು ಕಾವ್ಯದ ಮುನ್ನುಡಿಯಂತೇ ನನಗೆ ತೋರುತ್ತದೆ. ಇಂಥ ಮಾನಸಿಕ ಸ್ಥಿತಿ ಹಾಗೂ ಸಂಬಂಧದ ಸೂಕ್ಷ್ಮತೆಗಳು ಯಾವ ಕಾಲಕಾಲಕ್ಕೂ ಬದಲಾವಣೆಯಾಗದು. ಮುಂದೆ ಇಂಥ ಸಂಕೀರ್ಣತೆ ಬಂಡಾಯವಾಗುವ ಅಥವಾ ಸಮರ್ಥವಾಗಿ ಪ್ರಶ್ನಿಸುವ ಪರಿವರ್ತನೆಯಾಗುವುದೇ ಮಹಾಕಾವ್ಯ.

ಇನ್ನು ನನ್ನ ವಿಚಾರಕ್ಕೆ ಬಂದರೆ ನಾನು ಪದ್ಯ ಬರೆಯಲು ಸುತ್ತ ಮುತ್ತಲ ಕೇಳುವ ಹಕ್ಕಿ ಕರೆಗಳು, ಅದಕ್ಕೆ ಹೊಂದಿಕೊಂಡ ನನ್ನೂರ ನೆನಪುಗಳು, ಅಂದಿನಿಂದ ಇಂದಿನವರೆಗೂ ಎದುರಾಗುವ ನೋವುಗಳು, ಅದನ್ನು ದಾಟುವಾಗಿನ ಸಂಕಟಗಳು, ಇದ್ದಕ್ಕಿದ್ದಂತೆ ಇರುಳಿನಾಗಸದಲ್ಲಿ ಚಿಕ್ಕಿಯಂತೆ ಹೊಳೆದು ಒಂದು ಪದವಾಗಿ, ಹದವಾಗಿ, ವಾಕ್ಯವಾಗಿ, ಬೆಳಗಿನ ಜಾವದ ನಿದ್ದೆಯಲ್ಲಿ ಸುಳಿದಾಡುವ ತಿಳಿವಾಗಿ ಬಿಡುಗಡೆಯಾದಾಗ, ಎಚ್ಚರಾದ ಮೇಲೆ ದಿನನಿತ್ಯದ ಕಾರ್ಯದಲ್ಲಿ ಆ ತಿಳಿವು ಸಂಪೂರ್ಣ ಕಣ್ಮರೆಯಾಗಿಬಿಡುತಿತ್ತು.

ಆ ನಂತರದಲ್ಲಿ ಹೊಳೆದ ವಿಚಾರವನ್ನು ಬರೆದಿಟ್ಟು ನೋಡಲು ತೊಡಗಿದಾಗ ಅದಕ್ಕೊಂದು ಅಸ್ಪಷ್ಟರೂಪ ಕಾಣತೊಡಗಿ ಇನ್ನೂ ತಿದ್ದಿ ತೀಡಿದಾಗ ಅವು ಕವನದ ರೂಪದಲ್ಲಿ ಬಂದು ಕುಂತವು. ಮನಸ್ಸು ಮಥಿಸಿ ಮಥಿಸಿ ಅರೆಪ್ರಜ್ಞೆ ಜಾಗೃತ ರೂಪವಾಗಿದ್ದು ಹೀಗೆ.

*

ಮರುಳು

ಇಲ್ಯಾವ ಕಡಲು ಬಿಟ್ಟು ಹೋಯಿತು ಮರಳ ಮಯ್ಯನು ಮರುಭೂಮಿಯಲ್ಲಿ ಇನಿತಾದರೂ ಕರುಣೆ ಬಾರದೆ ನೀರೆ

ಬಾಯಾರಿ ಬಾಯ್ಬಾಯ್ ಬಿಡುವ ಮರಳ ಹಾಸಲ್ಲಿ ತೀರದ ಬೇಗೆ ಮರೀಚಿಕೆಯಾಗಿ ಅಲೆದು ಬೆಳದಿಂಗಳಿರುಳ ಹೊದ್ದು ಮೈ ಮರೆತರೂ ಮರೆಯಾಗದಲ್ಲ ಹೊಯ್ಗೆಗೆ ಕಡಲ ಕನಸು!

ಒಂಟೆ, ಡುಬ್ಬದಲ್ಲಿ ಹೊತ್ತು ಸಾಗುತ್ತವೆ ನೀರಚೀಲವನ್ನು ಅಂಚಿನಂಚಿಗೆ ಮುಗಿದ ಮರಳ ಕಡಲ ಎಲ್ಲೊ ಆ ತುದಿಯಲ್ಲಿ ಸೂರ್ಯನೂ ನಿಂತು ಮುಳುಗುವುದೆಲ್ಲಿ ಎಂದು ಪರಿತಪಿಸುವಲ್ಲಿ ಬತ್ತಿದ ಕಣ್ಣೀರ ತೊರೆ!

ಪುಟ್ಟ ಬಯಲು ತೆರೆದ ಕುರುಚಲು ಮೋಟು ಮರಗಳ ಮೇಯುವ ಮೇಕೆ ಕುದುರೆ ಹಿಂಡಿನೊಂದಿಗೆ ಓಡುವ ಒಂಟೆ ಸಾಲು ಹಿಂದೆಯೇ ದಂಡ ಹಿಡಿದು ಕೂಗಿಕರೆವ ಕಾವಲುಗಾರ

ಕೊಡ ಹೊತ್ತ ನೀರೆಯರು ಮೆರವಣಿಗೆಯಲೆಂಬಂತೆ ಪರಿತಪಿಸಿ ಸಾಗುವರು, ಗಾಳಿಗೆ ಪಟಗುಡುವ ಸೆರಗ ಬಿಟ್ಟು,

ದೂರದಲ್ಲಿ ಊರಚಾವಣಿಗಳ ಅಂಗಳದಲ್ಲಿ ಚಿಮಣಿಯೂದುವ ಗಂಡಸರ ಬಣ್ಣದ ಪೇಟದ ವತ್ತಿಗೆ ಹೊರಸಿನ ಮೇಲೊರಗಿದ ಬೆಕ್ಕು ನಾಯಿಗಳು, ದೀಪಗಳು ಹೊತ್ತಿ ಬೆಳಕ ಚೆಲ್ಲುತ್ತವೆ ಕಿಟಕಿಯಾಚೆಗೆ ಗೊಂಬೆ ಮನೆಗಳತ್ತ ಸಾಗುವರು ಎಲ್ಲರೂ

ದೂರದೂರಕೂ ಮರಳುಗಾಡಲ್ಲಿ ಅಲೆಯುತ್ತವೆ ರಾತ್ರಿಯಲಿ ಗಾಳಿಗಲಗುವ ನೀರ ಅಲೆಗಳಂತೆ ಅವರ ಮೇಳದ ರಾಗಗಳು; ಯಾವ ಪರಿ ಆಳಕ್ಕಿಳಿಯುತ್ತವೆಂದರೆ ಕಡಲಿನ ಆಳದರಿವು ಕಿವಿಗಳಿಗಿಳಿದು ಇಳಿದು ಅಂತರಾಳದ ಆಳದಿಂದ ಉಕ್ಕೇರುವ ಕಣ್ಣೀರ ಹನಿಗಳು ಕಡಲ ಹನಿಗಳಂತೆ ಥೇಟ್! ಉಪ್ಪಿನ ರುಚಿ ಹೊತ್ತು ತಂದಿರುತ್ತವೆ

ರಾಗಗಳೇ! ಕಡಲಲೆಗಳೇ! ಮರಳೇ! ನೀರೇ! ಕಣ್ಣೀರೇ ಭೂಮಿಯಲ್ಲಿ ಎಲ್ಲವೂ ಅಲೆ ಅಲೆವ ಹರಿವೇ! ತೋಳ ಚಾಚಿ ಕರೆವ ಮರೆತ ಮರಳೇ ! ಮರುಳೇ!

*

AvithaKavithe Kannada Poetry Column by Poet HR Sujatha skvd

ಅಚ್ಚಿನಲ್ಲಿರುವ ಮಣಿಬಾಲೆ ಮತ್ತು ಪ್ರಥಮ ಕವನ ಸಂಕಲನ.

ದೇವರು ಕೊಟ್ಟ ಹೂ

ಸತ್ತ ಭೂತವನ್ನದು ಭೂಮಿತಾಯ ಕನಸನೆತ್ತಿ ಹೂವರಳುತ್ತವೆ ನಿತ್ಯ ಮರೆಯದಂತೆ ಅವು ಸೋಂಕಿಲ್ಲದ ಸಿರಿನಡೆಯ ಹೂವು.

ಬದುಕ ಕಾಳುಗಟ್ಟಿಸುವ ಕಾಯಿ ಹಣ್ಣು ಮಾಗಿ ಪಟ್ಟಣೊಡೆದು ಬದುಕ ಚೆಲ್ಲಿ ಹಕ್ಕಿ ಕರೆವುದೇ ಸೊಗಸು.

ಹೂವನ್ನು ತರಿದು ದೇವರ ಮುಡಿಯೇರಿಸುತ್ತೇವೆ ಹೂವು ದೇವರ ರೂಪ ಎನ್ನುವುದ ಮರೆಯುತ್ತೇವೆ ನಮ್ಮ ಸಿಂಗರಿಸಿಕೊಳ್ಳುತ್ತೇವೆ

ನಾವೂ ದೇವರ ಹೂರೂಪ ಎಂಬುದ ಮರೆತು ಮುಳ್ಳನ್ನೂ ಮುಚ್ಚಿಟ್ಟುಕೊಳ್ಳುತ್ತೇವೆ ಹೂವು ಹರಿಯದಂತಿರಲು ದೇವರು ಮುಳ್ಳನ್ನು ಕರುಣಿಸಿದ್ದಾನೆನ್ನುವುದ ಮರೆಯುತ್ತೇವೆ.

ಅಂತೇ ಹೂಬಿಸಿಲು, ಹೂಮಳೆ, ಚಳಿ ಕಂಪಿಸುವಾಗ ಬೆಚ್ಚಗುರುರಿಯುವ ಕಾವು ಮೈ ಹೆಣೆದು ಒಂದಕ್ಕೊಂದು ಮುತ್ತಿಡುವ ಠಾವು ಏನುಂಟು ಏನಿಲ್ಲ! ದೇವನ ವರದೊಳಗೆ.

ಆದರೆ, ನಾವೇ ದೇವರಾಗಲು ಹೊರಟಾಗ ಬಿರುಗಾಳಿ, ಕಾಡ್ಗಿಚ್ಚು, ಪ್ರವಾಹ ಸಾವುನೋವನ್ನವನು ಬಿಚ್ಚಿ ತೋರುತ್ತಾನೆ.

ದೇವರು, ಬುದ್ಧಿವಂತನಾದರೂ ಕರುಣಾಮಯಿ ಹುಟ್ಟಿನೊಡನೆ ಸಾವಿನ ಹೆಜ್ಜೆಯನ್ನೂ ಕರುಣಿಸಿದ್ದಾನೆ.

ಹಕ್ಕಿಗೆ, ರೆಕ್ಕೆ ಕೊಟ್ಟರೂ ಭೂಮಿ ಮೇಲೆ.

AvithaKavithe Kannada Poetry Column by Poet HR Sujatha skvd

ಸುಜಾತಾ ಪ್ರಕಟಿತ ಕೃತಿಗಳು

*

ಪರಿಚಯ : ಹಾಸನ ಜಿಲ್ಲೆ, ಆಲೂರು ತಾಲ್ಲೂಕು, ಮರಸು ಹೊಸಳ್ಳಿ ಇವರ ಹುಟ್ಟೂರು. ಕಾಲೇಜುದಿನಗಳಲ್ಲಿಯೇ ಇವರ ಸಣ್ಣ ಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಇಪ್ಪತ್ತು ವರ್ಷಗಳ ದೀರ್ಘವಿರಾಮದ ನಂತರ ಮತ್ತೆ ಸಾಹಿತ್ಯಕ್ಕೆ ಮುಖ ಮಾಡಿದರು. ‘ನಮ್ಮೂರು ನಮ್ಮೋರು’, ‘ತವರು ಬಣ್ಣ’, ‘ಪ್ರವಾಸ ದರ್ಶನ ‘ ಅಂಕಣ ಬರಹಗಳು ಪ್ರಕಟ. ಗ್ರಾಮೀಣ ಬದುಕಿನ ಅನುಭವ ಲೇಖನಗಳ ಸಂಗ್ರಹ ‘ನೀಲಿ ಮೂಗಿನ ನತ್ತು’ ಪುಸ್ತಕ 2017 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಅಮ್ಮ ಸಾಹಿತ್ಯ ಪ್ರಶಸ್ತಿ, ಅಕ್ಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಕೃತಿಯ ಆಯ್ದ ಭಾಗಗಳು ಮಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾಲಯಗಳ ಪದವಿ ತರಗತಿಯ ಪಠ್ಯವಾಗಿ ಪ್ರಕಟವಾಗಿವೆ. ಈ ವರ್ಷ ಬೆಂಗಳೂರು, ಮೈಸೂರು ವಿಶ್ವವಿದ್ಯಾಲಯವೂ ಪಠ್ಯವಾಗಿ ತೆಗೆದುಕೊಂಡಿವೆ. ‘ಕಾಡುಜೇಡ ಮತ್ತು ಬಾತುಕೋಳಿ’ ಪ್ರಥಮ ಕವನ ಸಂಕಲನ. ಈ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು ‘ ಬಹುಮಾನ ಲಭ್ಯವಾಗಿದೆ. ಇದೀಗ ‘ಜೇನು ಮಲೆಯ ಹೆಣ್ಣು’ ಸಂಕಲನ ಪ್ರಕಟವಾಗಿದೆ.

ಇವರು ನಿರ್ಮಿಸಿರುವ ಕೃಷಿತಜ್ಞ  ನಾರಾಯಣರೆಡ್ಡಿಯವರ ಡಾಕ್ಯುಮೆಂಟರಿಗೆ ರಾಷ್ಟ್ರಪ್ರಶಸ್ತಿ ಲಭಿಸಿದ್ದು, ಬೆಸ್ಟ್ ಎಜುಕೇಷನಲ್​ ಡಾಕ್ಯುಮೆಂಟರಿಗೆ ಪಾತ್ರವಾಗಿದೆ. ಇದು ರಷ್ಯಾ ಹಾಗೂ ಇನ್ನಿತರೆ ದೇಶಗಳಲ್ಲೂ ಪ್ರದರ್ಶನ ಕಂಡಿದೆ. ಅಲ್ಲದೆ, ಪಂಡಿತ್ ರಾಜೀವ ತಾರಾನಾಥರ ಡಾಕ್ಯುಮೆಂಟರಿಯನ್ನೂ ಇವರು ನಿರ್ಮಿಸಿದ್ದಾರೆ. ಹತ್ತು ವರುಷಗಳಿಂದ ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್​ನ ಅಧ್ಯಕ್ಷರಾಗಿದ್ದಾರೆ. ಹತ್ತು ವರ್ಷ ಶಾಲಾ ಕಾಲೇಜಿನಲ್ಲಿ ಕೆಲಸ ಮಾಡಿದ ಅನುಭವ ಹಾಗೂ ಪತ್ರಿಕೆ ನಡೆಸಿದ ಅನುಭವವೂ ಇದೆ.

ಇದನ್ನೂ ಓದಿ : Poetry : ಅವಿತಕವಿತೆ ; ಕೆಂಪುಮಣ್ಣಿನ ಬಯಲು ತೆರೆದಿತ್ತು ಬೀಸುವ ಗಾಳಿ ಬೀಸುತ್ತಲೇ ಇತ್ತು

Published On - 9:04 am, Sun, 19 December 21

ವಾರ ಭವಿಷ್ಯ: ಅಕ್ಟೋಬರ್ 14 ರಿಂದ 20 ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ಅಕ್ಟೋಬರ್ 14 ರಿಂದ 20 ರವರೆಗೆ ವಾರ ಭವಿಷ್ಯ ಹೀಗಿದೆ
ಈ ರಾಶಿಯವರ ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು
ಈ ರಾಶಿಯವರ ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು
ಸಂಜು 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ
ಸಂಜು 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ
ಅದ್ದೂರಿ, ಸಡಗರದ ದಸರಾ ಉತ್ಸವ, ಸಿದ್ದರಾಮಯ್ಯ ಸರ್ಕಾರಕ್ಕೆ ಫುಲ್ ಮಾರ್ಕ್ಸ್
ಅದ್ದೂರಿ, ಸಡಗರದ ದಸರಾ ಉತ್ಸವ, ಸಿದ್ದರಾಮಯ್ಯ ಸರ್ಕಾರಕ್ಕೆ ಫುಲ್ ಮಾರ್ಕ್ಸ್
ಜಂಬೂ ಸವಾರಿಗೆ ಮಳೆ ಕಾಟವಿಲ್ಲ, ದಸರಾ ಉತ್ಸವದಲ್ಲಿ ಭಾಗಿಯಾದವರು ನಿರಾಳ
ಜಂಬೂ ಸವಾರಿಗೆ ಮಳೆ ಕಾಟವಿಲ್ಲ, ದಸರಾ ಉತ್ಸವದಲ್ಲಿ ಭಾಗಿಯಾದವರು ನಿರಾಳ
ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ