Poetry : ಅಚ್ಚಿಗೂ ಮೊದಲು : ಅಭಿಷೇಕ ಬಳೆಯವರ ‘ಸಂತೆಯೊಳಗೆ ಸಿಕ್ಕ ಬುದ್ಧ’ ಗಝಲ್ ಸಂಕಲನ ಇದೀಗ ಲಭ್ಯ
Gazal : ‘ಅನೇಕ ಧ್ವನಿಪೂರ್ಣ ಗಝಲ್ಗಳನ್ನು ಕಟ್ಟಿಕೊಟ್ಟಿರುವ ಕವಿ ಅಭಿಷೇಕ ಬಳೆಯವರು ಜಾತಿ ಮತ್ತು ಮತಧರ್ಮಗಳ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಸ್ಪಷ್ಟವಾಗಿ ವಿರೋಧಿಸಿ ಸಹಿಷ್ಣುತೆಯ ಸಾಮರಸ್ಯಕ್ಕಾಗಿ ಹಂಬಲಿಸುವುದು ಸಮಕಾಲೀನ ಸಂದರ್ಭದ ಉಚಿತ ಅಭಿವ್ಯಕ್ತಿಯೂ, ಅಭಿಮತವೂ ಆಗಿದೆ.’ ಬರಗೂರು ರಾಮಚಂದ್ರಪ್ಪ
Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
* ಕೃತಿ : ಸಂತೆಯೊಳಗೆ ಸಿಕ್ಕ ಬುದ್ಧ (ಗಝಲ್ ಸಂಕಲನ) ಲೇಖಕರು : ಅಭಿಷೇಕ ಬಳೆ ಮಸರಕಲ್ ಬೆಲೆ : ರೂ. 80 ಪುಟ : 80 ಪ್ರಕಾಶನ : ಬಳೆ ಪ್ರಕಾಶನ, ಮಸರಕಲ್
*
ಇವರು ಕೆಲವು ಗಝಲ್ಗಳಲ್ಲಿ ಶ್ರಮ ಸಂಸ್ಕೃತಿಯ ವೇದನೆಯ ಸಂವೇದನೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ. “ವೇದನೆಯ ಬದುಕು ನಮ್ಮದು ಜೀವನೋತ್ಸಾಹ ಕುಗ್ಗುದು” ಎಂಬ ಆತ್ಮವಿಶ್ವಾಸದಿಂದ, “ಕತ್ತಲ ರಾತ್ರಿಯಲ್ಲಿ ಬಣ್ಣದ ಕನಸುಗಳಿಂದ” ಬದುಕಿನ ಪರಿಯನ್ನು ನಿವೇದಿಸುವುದು ಮನ ಮುಟ್ಟುತ್ತದೆ. ಯಾರನ್ನೂ ಬಿಡದ ಸಾವನ್ನು”ಮಸಣದ ಊರಿಂದ ಕರೆಯದೆ ಬರುವ ಅತಿಥಿ”ಯೆನ್ನುತ್ತ “ಬದುಕ ಬುತ್ತಿಯನ್ನು ಗಂಟು ಮೂಟೆಯಾಗಿ ಕಟ್ಟಿದೆ ಸಾವು” ಎಂಬಲ್ಲಿ ಅನಿವಾರ್ಯ ಒಪ್ಪುವ ವಿಷಾದವೂ ಅತಿಥಿಯೆಂದು ಭಾವಿಸುವ ಮನಸ್ಥಿತಿಯೂ ಏಕಕಾಲಕ್ಕೆ ಧ್ವನಿತವಾಗಿದೆ. ಹೀಗೆ ಅನೇಕ ಧ್ವನಿಪೂರ್ಣ ಗಝಲ್ಗಳನ್ನು ಕಟ್ಟಿಕೊಟ್ಟಿರುವ ಕವಿ ಅಭಿಷೇಕ ಬಳೆಯವರು ಜಾತಿ ಮತ್ತು ಮತಧರ್ಮಗಳ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಸ್ಪಷ್ಟವಾಗಿ ವಿರೋಧಿಸಿ ಸಹಿಷ್ಣುತೆಯ ಸಾಮರಸ್ಯಕ್ಕಾಗಿ ಹಂಬಲಿಸುವುದು ಸಮಕಾಲೀನ ಸಂದರ್ಭದ ಉಚಿತ ಅಭಿವ್ಯಕ್ತಿಯೂ, ಅಭಿಮತವೂ ಆಗಿದೆ. ಬದುಕೆಂಬ ಸಂತೆಯಲ್ಲಿ ಬುದ್ಧ ಗುರುವನ್ನು ಕಂಡುಕೊಂಡ ಒಳಹರಿವು ಕೆಲವು ಗಝಲ್ಗಳ ಜೀವಶಕ್ತಿಯಾಗಿದೆ. ಬರಗೂರು ರಾಮಚಂದ್ರಪ್ಪ, ಲೇಖಕ
*
ಗಝಲ್
ಎದೆಯ ಬೀದಿಯಲ್ಲಿನ ಒಲವ ಅಂಗಡಿಗೆ ಬರಲೇ ಇಲ್ಲ ಮನದ ತೋಟದಿ ಬೆಳೆದ ಗುಲಾಬಿ ಅರಳಲೇ ಇಲ್ಲ
ಕೂಡಿಟ್ಟ ಒಂದೊಂದು ಕನಸುಗಳು ನನಸಾಗಲೇ ಇಲ್ಲ ಹುಣ್ಣಿಮೆ ಚಂದಿರ ಚೆಲ್ಲುವ ಬೆಳಕು ಹಿತವೆನಿಸಲೇ ಇಲ್ಲ
ಒಮ್ಮೆಯಾದರೂ ಎದೆಯ ಬಾಗಿಲ ತಟ್ಟಲೇ ಇಲ್ಲ ಕನಸಿನಲ್ಲಿಯೂ ನನ್ನ ಪ್ರೀತಿಯ ಕನವರಿಸಲೇ ಇಲ್ಲ
ನೀನು ಇಲ್ಲದ ಖಾಲಿ ಬದುಕನ್ನು ಊಹಿಸಿರಲೇ ಇಲ್ಲ ನೀ ಕನಸಿಗೆ ಬಾರದ ರಾತ್ರಿಯ ಕ್ಷಮಿಸಲೇ ಇಲ್ಲ
“ಅಭಿ”ಯ ಬದುಕಿಗೆ ಬಣ್ಣ ತುಂಬಲೇ ಇಲ್ಲ ಮೊಹಬತ್ತಿನ ಗಜಲಿಗೆ ಕಾವ್ಯನಾಮ ಆಗಲೇ ಇಲ್ಲ
* ಅದು 2014-15ರ ಇಸವಿ, ನಾನು ಪದವಿ ಅಂತಿಮ ವರ್ಷದಲ್ಲಿ ಓದುತ್ತಿದ್ದೆ, ರಾಯಚೂರಿನ ವಿದ್ಯಾನಗರದ ಬಾಡಿಗೆ ಮನೆಯಲ್ಲಿ ಇದ್ದದ್ದು. ನಾನು ಇದ್ದ ರೂಮಿನ ಮೇಲೆ ಆರಿಫ್ ರಾಜಾ ಅವರು ಬಾಡಿಗೆ ಇದ್ದರು. ಆಗಾಗ್ಗೆ ಅವರೊಂದಿಗೆ ಸಾಹಿತ್ಯ ಮತ್ತು ಸಾಹಿತ್ಯೇತರ ಕುರಿತು ಮಾತಾಡಿದ್ದು ಇದೆ. ಗಝಲ್ ಸಂಕಲನಗಳನ್ನು ಓದಲು ಕೊಡುತ್ತಿದ್ದರು. ಅದು ಸಾಲದೆಂಬಂತೆ ಗ್ರಂಥಾಲಯಕ್ಕೆ ಹೊಕ್ಕೆ. ಅಲ್ಲಿ ಜಂಬಣ್ಣ ಅಮರಚಿಂತರ ‘ಬಾಧೆಯ ವೃಕ್ಷದಲ್ಲಿ ಬೋಧಿಯ ಪರಿಮಳ’ ಗಝಲ್ ಸಂಕಲನ ಸಿಕ್ಕಿತು. ಅದರಲ್ಲಿ ಕನ್ನಡ ಗಝಲ್ ಸಾಹಿತ್ಯದ ಪಿತಾಮಹ ಶಾಂತರಸ ಹೆಂಬೆರಾಳರು ಗಝಲ್ ಬಗ್ಗೆ ಸವಿಸ್ತಾರವಾಗಿ ಬರೆದಿದ್ದರು. ‘ಕಲ್ಯಾಣ ಕರ್ನಾಟಕ’ದಲ್ಲಿ ಚಿದಾನಂದ ಸಾಲಿ ಅವರ ‘ಗಝಲ್ : ಹುಟ್ಟು, ವಿಕಾಸ ಮತ್ತು ಸ್ವರೂಪ’ ಲೇಖನ ಮತ್ತಷ್ಟು ಮಾಹಿತಿ ನೀಡಿತು. ನಂತರ ಬರೆಯಲಾರಂಭಿಸಿದೆ. ಇದು ನನ್ನ ಎರಡನೇ ಗಝಲ್ ಸಂಕಲನ. ಅಭಿಷೇಕ ಬಳೆ ಮರಸಕಲ್, ಕವಿ
*
ಗಝಲ್
ಬಯಲ ಬಜಾರಿನಲ್ಲಿ ಬುದ್ಧನ ಕಕ್ಕುಲಾತಿಯ ಹಾಡುವ ಮಣ್ಣಿನ ಕೂಸುಗಳು ನಾವು ಜೀವ ಕಾರುಣ್ಯದ ಪ್ರೀತಿಯ ಚೆಲ್ಲುವ ಶರೀಫನ ಮನೆಯಂಗಳದ ಹೂಗಳು ನಾವು
ಬದುಕ ಜೋಳಿಗೆಯಲ್ಲಿನ ಎದೆಗೂಡಿನ ಹಾಡಿಗೆ ತಲೆದೂಗುವವರು ನಾವೇ ಕತ್ತಲು ತುಂಬಿದ ಬದುಕಿನಲ್ಲಿ ಬೆಳದಿಂಗಳು ಚೆಲ್ಲುವ ದೀಪಗಳು ನಾವು
ಬೀದಿಯ ತುಂಬೆಲ್ಲ ನೋವುಂಡ ಜೀವಗಳ ದುಃಖದ ಕಣ್ಣೀರು ಹರಿದಿದೆ ಸೋತ ಬದುಕಿಗೆ ಭೀಮಬಲ ತುಂಬುವ ಮಾನವತೆಯ ಕೈಗಳು ನಾವು
ಜಾತಿ ಧರ್ಮದ ಬೇಲಿಗೆ ಸಿಲುಕಿ ನಲುಗುತಿದೆ ಗಾಯಗೊಂಡ ಮನುಷ್ಯತ್ವ ದಯವೇ ಧರ್ಮದ ಮೂಲವೆಂದ ಅಣ್ಣನ ಕ್ರಾಂತಿಯ ವಚನಗಳು ನಾವು
ಚೋಮನ ದುಡಿಯ ಸದ್ದಿನಲ್ಲಿ ಮಾರ್ದನಿಸಿದ್ದೊಂದೆ ಮನುಷ್ಯರೊಂದೆ ಮನುಷ್ಯ ಪ್ರೀತಿಯ ಕಟ್ಟುವ ಸೌಹಾರ್ದತೆಯ ಸೇತುವೆಗಳು ನಾವು
*
ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : 9740346147
New Book : ಅಚ್ಚಿಗೂ ಮೊದಲು ; ಎಸ್ತರ್ ಅನಂತಮೂರ್ತಿಯವರ ‘ನೆನಪು ಅನಂತ’ ಸದ್ಯದಲ್ಲೇ ನಿಮ್ಮ ಓದಿಗೆ