VIDEO: ಒಂದೇ ಓವರ್ನಲ್ಲಿ 6 ಸಿಕ್ಸ್: ಅಂತಾರಾಷ್ಟ್ರೀಯ ಕ್ರಿಕೆಟ್ನ ಮೊದಲ ವಿಶ್ವ ದಾಖಲೆ
On This Day: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿದ ಮೊದಲ ಬ್ಯಾಟರ್ ಯುವರಾಜ್ ಸಿಂಗ್ ಅಲ್ಲ. ಯುವಿಗಿಂತ ಮೊದಲೇ ಸೌತ್ ಆಫ್ರಿಕಾ ತಂಡದ ದಾಂಡಿಗ ಹರ್ಷಲ್ ಗಿಬ್ಸ್ ಏಕದಿನ ವಿಶ್ವಕಪ್ನಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸ್ ಬಾರಿಸಿದ್ದರು. ಈ ಐತಿಹಾಸಿಕ ಸಾಧನೆಗೆ ಇಂದು 18 ವರ್ಷಗಳು ತುಂಬಿವೆ. ಈ ಸಿಕ್ಸರ್ಗಳ ವಿಡಿಯೋ ಇಲ್ಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 5 ಬ್ಯಾಟರ್ಗಳು ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿದ್ದಾರೆ. ಇವರಲ್ಲಿ ಮೊದಲಿಗರು ಸೌತ್ ಆಫ್ರಿಕಾದ ಹರ್ಷಲ್ ಗಿಬ್ಸ್. 2007ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಗಿಬ್ಸ್ ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದಾದ ಬಳಿಕವಷ್ಟೇ ಟಿ20 ಕ್ರಿಕೆಟ್ನಲ್ಲಿ ಯುವರಾಜ್ ಸಿಂಗ್ ಈ ಸಾಧನೆ ಮಾಡಿದ್ದರು.
ವೆಸ್ಟ್ ಇಂಡೀಸ್ನಲ್ಲಿ ನಡೆದ 2007ರ ಏಕದಿನ ವಿಶ್ವಕಪ್ನ 7ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಗಿಬ್ಸ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು.
ಈ ವೇಳೆ 30ನೇ ಓವರ್ ಎಸೆದ ಡಾನ್ ವ್ಯಾನ್ ಬಂಗೆ ಅವರ ಎಲ್ಲಾ ಎಸೆತಗಳಿಗೂ ಹರ್ಷಲ್ ಗಿಬ್ಸ್ ಸಿಕ್ಸ್ಗಳ ಉತ್ತರ ನೀಡಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನ ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯನ್ನು ಗಿಬ್ಸ್ ತಮ್ಮದಾಗಿಸಿಕೊಂಡರು. ಈ ದಾಖಲೆಗೆ ಇದೀಗ 18 ವರ್ಷ. ಅಂದರೆ ಮಾರ್ಚ್ 16, 2007ರಲ್ಲಿ ಹರ್ಷಲ್ ಗಿಬ್ಸ್ ಈ ಐತಿಹಾಸಿಕ ಸಾಧನೆ ಮಾಡಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿದ ಬ್ಯಾಟರ್ಗಳು:
- ಹರ್ಷಲ್ ಗಿಬ್ಸ್ (ಸೌತ್ ಆಫ್ರಿಕಾ vs ನೆದರ್ಲೆಂಡ್ಸ್)- 2007ರ ಏಕದಿನ ವಿಶ್ವಕಪ್ ಪಂದ್ಯ
- ಯುವರಾಜ್ ಸಿಂಗ್ (ಭಾರತ vs ಇಂಗ್ಲೆಂಡ್)- 2007ರ ಟಿ20 ವಿಶ್ವಕಪ್ ಪಂದ್ಯ
- ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್ vs ಶ್ರೀಲಂಕಾ)- 2021, ಟಿ20 ಪಂದ್ಯ
- ಜಸ್ಕರನ್ ಮಲ್ಹೋತ್ರಾ (ಯುಎಸ್ಎ vs ಪಪುವಾ ನ್ಯೂಗಿನಿಯಾ)- 2021, ಏಕದಿನ ಪಂದ್ಯ
- ದೀಪೇಂದ್ರ ಸಿಂಗ್ ಐರಿ (ನೇಪಾಳ vs ಕತಾರ್)- 2024, ಟಿ20 ಪಂದ್ಯ