ಬರೀ ಜಾತ್ರಿಗೆ ಬಂದ್ ಹೋಗಬ್ಯಾಡ್ರಿ ನಮ್ಗೊಂದ್ ಕನ್ಯೆ ನೋಡಿ, ಯುವಕರಿಂದ ವಿಚಿತ್ರ ಬ್ಯಾನರ್
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎನ್ನುತ್ತಾರೆ. ಒಂದು ಗಂಡಿಗೆ ಒಂದು ಹೆಣ್ಣು ಸೃಷ್ಟಿಯಾಗಿರುತ್ತಾರೆ. ಕಂಕಣ ಬಲ ಕೂಡಿ ಬಂದರೆ ಯಾರೂ ತಡೆಯರು ಎಂಬೆಲ್ಲ ಮಾತುಗಳು ಈಗ ಹಳೆಯ ನಾಣ್ಯಗಳಾಗಿವೆ. ಮದುವೆ ಕಾನ್ಸೆಪ್ಸ್ಗಳು ಬದಲಾಗಿವೆ. ಕಾರಣ ಗ್ರಾಮೀಣ ಭಾಗದ ಅದರಲ್ಲೂ ಕೃಷಿ ಚಟುವಟಿಕೆ ಮಾಡುವ ಯುವಕರು ಹೆಣ್ಣು ಸಿಕ್ಕರೆ ಸಾಕು, ಮದುವೆಯಾದರೆ ಸಾಕು ಎಂದು ಹಳಹಳಿಸುವಂತಾಗಿದೆ. ಹಳ್ಳಿ ಹೈಕಳಿಗೆ ಕೃಷಿ ಕೆಲಸ ಮಾಡುವವರಿಗೆ ಹೆಣ್ಣು ಸಿಗುತ್ತಿಲ್ಲ. ಇದೇ ಕಾರಣದಿಂದ ವಿಜಯಪುರ ಜಿಲ್ಲೆಯಲ್ಲಿ ಮದುವೆ ವಯಸ್ಸಿಗೆ ಬಂದ ಹುಡುಗರು ಮಾಡಿದ ಒಂದು ಕೆಲಸ ಎಲ್ಲರ ಗಮನ ಸೆಳೆದಿದೆ.

ವಿಜಯಪುರ, ಏಪ್ರಿಲ್ 23: ಜಾತ್ರೆಯೆಂದರೆ ಅಲ್ಲಿ ಸಡಗರ ಸಂಭ್ರಮ ಮನೆ ಮಾಡಿರುತ್ತದೆ. ಇಡೀ ಊರ ತುಂಬೆಲ್ಲಾ ಜನರು ಸೇರಿರುತ್ತಾರೆ. ತಮ್ಮೂರ ಜಾತ್ರೆಗೆ ಹೆಣ್ಣು ಮಕ್ಕಳು ಸಹ ತವರಿಗೆ ಆಗಮಿಸಿರುತ್ತಾರೆ. ಸಂಬಂಧಿಕರು ಬಂಧು-ಬಳಗ ಕೂಡ ಬಂದಿರುತ್ತಾರೆ. ವಿಜಯಪುರ (Vijayapura) ಜಿಲ್ಲೆಯ ಬಬಲೇಶ್ವರ (Bableshwar) ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಗ್ರಾಮ ದೇವರಾದ ಹನುಮಂತ ದೇವರ ಜಾತ್ರೆ ನಡೆಯುತ್ತಿದೆ. ಜಾತ್ರೆಯ ಪ್ರಯುಕ್ತ ಹಾಲೋಕುಳಿ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಜಾತ್ರೆಗೆ ಸಾವಿರಾರು ಜನರು ಸಾಕ್ಷಿಯಾಗಿದ್ಧಾರೆ.
ಇದನ್ನೇ ಬಂಡವಾಳ ಮಾಡಿಕೊಂಡ ಗ್ರಾಮದ ಅವಿವಾಹಿತ ಯುವಕರು ಒಂದು ಪ್ಲ್ಯಾನ್ ಮಾಡಿದ್ದಾರೆ. ಅವಿವಾಹಿತರು ಮದುವೆಯಾಗಲು ಕನ್ಯೆ ಸಿಗದಿದ್ದಕ್ಕೆ ಜಾತ್ರೆಗೆ ಬಂದವರ ಗಮನ ಸೆಳೆಯಲು ತಮಗೊಂದು ಕನ್ಯೆ ನೋಡಿ ಎಂದು ಬ್ಯಾನರ್ ಹಾಕಿದ್ದಾರೆ. 20 ಜನ ಯುವಕರು ಬ್ರ್ಯಾಂಡ್ ಬಾಯ್ಸ್ ಹೆಸರಿನಲ್ಲಿ ಬ್ಯಾನರ್ ಹಾಕಿದ್ದಾರೆ.
ಗ್ರಾಮೀಣ ಭಾಗ ಹಾಗೂ ಕೃಷಿ ಕೆಲಸ ಮಾಡುತ್ತಿರುವ ಕಾರಣ ಇವರಿಗೆ ಕನ್ಯೆ ಕೊಡುತ್ತಿಲ್ಲ. ಹೀಗಾಗಿ 20 ಜನ ಯುವಕರ ತಂಡ ತಮ್ಮೆಲ್ಲರ ಫೋಟೋಗಳನ್ನು ಬ್ಯಾನರ್ನಲ್ಲಿ ಹಾಕಿ ಕೆಳಗಡೆ ಜಾತ್ರೆಗೆ ಬಂದ ಭಕ್ತಾದಿಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ “ಬ್ಯಾನರ್ ನೋಡಿ ಹಾಗೇ ಹೋಗಬೇಡಿ. ಎಲ್ಲರಿಗೂ ಹುಡುಗಿ ನೋಡಿ” ಎಂದು ಬರೆಸಿದ್ದಾರೆ. ಬ್ಯಾಚುಲರ್ ಬಾಯ್ಸ್ ಹಾಕಿರುವ ಬ್ಯಾನರ್ ಇದೀಗ ಜಾತ್ರೆಗೆ ಬಂದವರ ಗಮನ ಸೆಳೆಯುತ್ತಿದೆ.
ಮದುವೆ ವಯಸ್ಸಿಗೆ ಬಂದ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ನಮಗೆ ಯಾರಾದರೂ ಹೆಣ್ಣು ನೋಡಿ ಎಂದು ಇವರು ಬ್ಯಾನರ್ ಹಾಕುವ ಮೂಲಕ ಅಲಳು ತೋಡಿಕೊಂಡಿದ್ದಾರೆ. ಇದು ಫನ್ನಿ ಎನಿಸಿದರೂ ಗ್ರಾಮಿಣ ಭಾಗದ ಯುವಕರಿಗೆ ಕೃಷಿ ಕೆಲಸ ಮಾಡುವ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಗಂಭೀರ ಸಮಸ್ಯೆಗೆ ಇದೊಂದು ಉದಾಹರಣೆಯಾಗಿದೆ. ಹೆಣ್ಣು ಕೇಳಲು ಹೋದರೆ ಸರ್ಕಾರಿ ನೌಕರಿ ಇದೆಯಾ, ಬಿಸಿನೆಸ್ ಮಾಡುತ್ತಾರಾ? ಐಟಿ-ಬಿಟಿಯಲ್ಲಿ ಕೆಲಸ ಮಾಡುತ್ತಿದ್ದಾರಾ? ಎಂದು ಕೇಳಲಾಗುತ್ತಿದೆ. ಆದರೆ. ಗ್ರಾಮೀಣ ಭಾಗದವರು ಕೃಷಿ ಉದ್ಯೋಗ ಮಾಡುತ್ತಿದ್ದೇವೆಂದರೆ ಹೆಣ್ಣು ತೋರಿಸದಂತಾಗಿದೆ.
ಹೀಗಾಗಿ ಜಾತ್ರೆಗೆ ಬಂದ ಎಲ್ಲಾರೂ ಹಾಗೇ ಹೋಗಬೇಡಿ. ಎಲ್ಲರಿಗೂ ಹೆಣ್ಣು ಕೊಡಿ. ನಾವು ರೈತರ ಮಕ್ಕಳು ಇದ್ದೇವೆ. ಬರೀ ನೌಕರಿ ಕೇಳುತ್ತಾರೆ. ಎಲ್ಲರಿಗೂ ನೌಕರಿ ಕೇಳಿದರೆ ನಮ್ಮ ರೈತರ ಮಕ್ಕಳಿಗೆ ಹೆಣ್ಣು ಕೊಡುವರು ಯಾರು? ನಮಗೆ ಹೆಣ್ಣು ಕೊಡಿ ಗ್ರಾಮದ ಯುವಕ ಸಚಿನ್ ಪೂಜಾರಿ ಹೇಳಿದ್ದಾರೆ.
ಇದನ್ನೂ ಓದಿ: ವಿಜಯಪುರ ಜಿಲ್ಲೆಯ ಶೇಗುಣಸಿಯ ರೋಮಾಂಚಕ ಹಾಲೋಕುಳಿ ಜಾತ್ರೆಯ ಫೋಟೋಸ್ ನೋಡಿ
ಸದ್ಯ ಶೇಗುಣಸಿ ಗ್ರಾಮದ ಯುವಕರು ತಮ್ಮೂರು ಹನುಮಂತ ದೇವರ ಜಾತ್ರೆಯಲ್ಲಿ ಹಾಕಿದ ಬ್ಯಾನರ್ ಎಲ್ಲರ ಗಮನ ಸೆಳೆದಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬ್ಯಾನರ್ ನೋಡಿಯಾದರೂ ಇವರಿಗೆ ಕನ್ಯೆ ಕೊಡುವಂತಾಗಲಿ. ಗ್ರಾಮೀಣ ಭಾಗದ ಹಾಗೂ ಕೃಷಿ ಕೆಲಸ ಮಾಡುವ ಯುವಕರಿಗೆ ಬೇಗನೆ ಕಂಕಣ ಭಾಗ್ಯ ಕೂಡಿ ಬರಲಿ ಎಂಬುವುದು ಎಲ್ಲರ ಆಶಯವಾಗಿದೆ.