Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿ; ಕಾಶ್ಮೀರದ 1,500 ಜನರು ವಶಕ್ಕೆ
ಜಮ್ಮು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬಳಿಯ ಜನಪ್ರಿಯ ಪ್ರವಾಸಿ ತಾಣದ ಮೇಲೆ ಮಂಗಳವಾರ ಮಧ್ಯಾಹ್ನ ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಕೊಂದಿದ್ದಾರೆ. ಅವರಲ್ಲಿ ಹೆಚ್ಚಿನವರು ಇತರ ರಾಜ್ಯಗಳಿಂದ ಬಂದವರಾಗಿದ್ದರು. 2019ರಲ್ಲಿ ನಡೆದ ಪುಲ್ವಾಮಾ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಉಗ್ರರಿಗೆ ಆಶ್ರಯ ನೀಡಿದವರನ್ನು ಹುಡುಕುವಲ್ಲಿ ತನಿಖಾ ಸಂಸ್ಥೆಗಳು ನಿರತವಾಗಿವೆ. ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

ಶ್ರೀನಗರ, ಏಪ್ರಿಲ್ 23: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terrorists Attack) ನಿನ್ನೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಸುಮಾರು 1,500 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಹಲ್ಗಾಮ್ ದಾಳಿಯ ನಂತರ ಕಾಶ್ಮೀರದಲ್ಲಿ ದೊಡ್ಡ ಕಾರ್ಯಾಚರಣೆ ನಡೆಸಲಾಗಿದ್ದು, ರಕ್ಷಣಾ ಸಂಸ್ಥೆಗಳು 1500 ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿವೆ. ಅವರ ವಿಚಾರಣೆ ನಡೆಯುತ್ತಿದೆ. ಉಗ್ರರಿಗೆ ಆಶ್ರಯ ನೀಡಿದವರನ್ನು ಹುಡುಕುವಲ್ಲಿ ತನಿಖಾ ಸಂಸ್ಥೆಗಳು ನಿರತವಾಗಿವೆ. ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಪಹಲ್ಗಾಮ್ ದಾಳಿಯ ನಂತರ, ಭದ್ರತಾ ಸಂಸ್ಥೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಮೂಲಗಳ ಪ್ರಕಾರ, ಕಾಶ್ಮೀರ ಕಣಿವೆಯಾದ್ಯಂತ 1500ಕ್ಕೂ ಹೆಚ್ಚು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಈ ಜನರನ್ನು ವಿವಿಧ ಜಿಲ್ಲೆಗಳು ಮತ್ತು ಸೂಕ್ಷ್ಮ ಪ್ರದೇಶಗಳಿಂದ ಬಂಧಿಸಲಾಗಿದೆ. ಇವರಲ್ಲಿ ಭೂಗತ ಕೆಲಸಗಾರರು (OGWs), ಮಾಜಿ ಉಗ್ರಗಾಮಿಗಳು ಮತ್ತು ಈಗಾಗಲೇ FIR ದಾಖಲಾಗಿರುವವರು ಅಥವಾ ಗುಪ್ತಚರ ವೀಕ್ಷಣಾ ಪಟ್ಟಿಯಲ್ಲಿರುವವರು ಸೇರಿದ್ದಾರೆ. ದಾಳಿಕೋರರಿಗೆ ಆಶ್ರಯ ನೀಡಿದವರನ್ನು ಹುಡುಕುವಲ್ಲಿ ತನಿಖಾ ಸಂಸ್ಥೆಗಳು ನಿರತವಾಗಿವೆ. ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ: ಮೃತ ಕನ್ನಡಿಗರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸರ್ಕಾರ
ಪಹಲ್ಗಾಮ್ಗೆ ಬಂದು ಪ್ರವಾಸಿಗರನ್ನು ಹತ್ಯೆ ಮಾಡಲು ಉಗ್ರರಿಗೆ ಯಾರು ಆಶ್ರಯ ನೀಡಿದರು, ಸಹಾಯ ಮಾಡಿದರು ಅಥವಾ ಶಸ್ತ್ರಾಸ್ತ್ರಗಳನ್ನು ಒದಗಿಸಿದರು ಎಂಬುದನ್ನು ಕಂಡುಹಿಡಿಯಲು ಈ ಎಲ್ಲ ಜನರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಗುಪ್ತಚರ ಸಂಸ್ಥೆಗಳ ಮಾಹಿತಿಗಳನ್ನು ಒಟ್ಟುಗೂಡಿಸಿ, ಪ್ರತಿಯೊಬ್ಬ ಶಂಕಿತನ ಸಂಪರ್ಕಗಳನ್ನು ತನಿಖೆ ಮಾಡಲಾಗುತ್ತಿದೆ.
ಈ ದಾಳಿಯ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗುತ್ತಿದ್ದು, ಧಾರ್ಮಿಕ, ರಾಜಕೀಯ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ವಿಶೇಷ ಕಣ್ಗಾವಲು ಇರಿಸಲಾಗಿದೆ. ಭಯೋತ್ಪಾದನೆಯ ವಿರುದ್ಧದ ಈ ಹೋರಾಟವು ಈಗ ನಿರ್ಣಾಯಕ ಹಂತವನ್ನು ತಲುಪಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Pahalgam Terror Attack: ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿ, 13 ಕನ್ನಡಿಗರ ಜೀವ ಉಳಿಸಿದ ಗುಡ್ಡ!
ಇನ್ನು, ಪಹಲ್ಗಾಮ್ ದಾಳಿಯ ಹೊಣೆಯನ್ನು ಟಿಆರ್‌ಎಫ್ ಸಂಘಟನೆ ಹೊತ್ತಿಕೊಂಡಿದೆ. ಟಿಆರ್‌ಎಫ್ ಭಯೋತ್ಪಾದಕರು ಪಾಕಿಸ್ತಾನದಿಂದ ತರಬೇತಿ ಮತ್ತು ಹಣಕಾಸು ಪಡೆಯುತ್ತಿದ್ದಾರೆ ಎಂದು ನಿರಂತರವಾಗಿ ಆರೋಪಿಸಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಟಿಆರ್‌ಎಫ್ ರಕ್ತಪಾತಕ್ಕೆ ಕಾರಣವಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಈ ಸಂಘಟನೆಯು ಅನೇಕ ದೊಡ್ಡ ಭಯೋತ್ಪಾದಕ ದಾಳಿಗಳನ್ನು ನಡೆಸಿತ್ತು. ಟಿಆರ್‌ಎಫ್ ಅನ್ನು ಲಷ್ಕರ್-ಎ-ತೊಯ್ಬಾದ ಭಾಗವೆಂದು ಪರಿಗಣಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ