ಪಹಲ್ಗಾಮ್ ಉಗ್ರರ ದಾಳಿ: ಮೃತ ಕನ್ನಡಿಗರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸರ್ಕಾರ
ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದು, ಕನ್ನಡಿಗರು ಸೇರಿದಂತೆ 27 ಮಂದಿ ಮೃತಪಟ್ಟಿದ್ದಾರೆ. ಈ ಉಗ್ರರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ಮತ್ತು ಬೆಂಗಳೂರಿನ ಭರತ್ ಭೂಷಣ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.

ಬೆಂಗಳೂರು, ಏಪಿಲ್ 23: ಜಮ್ಮು-ಕಾಶ್ಮೀರದ (Jammu-Kashmir) ಪಹಲ್ಗಾಮ್ನಲ್ಲಿ ಬುಧವಾರ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ (Pahalgam Terror Attack) ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಶಿವಮೊಗ್ಗದ ಉದ್ಯಮಿ ಮಂಜುನಾಥ್ ಮತ್ತು ಬೆಂಗಳೂರಿನ ಭರತ್ ಭೂಷಣ್ಅವರನ್ನು ಉಗ್ರರು ಹತ್ಯೆಗೈದಿದ್ದರು.
ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರಿಗೆ ಮಂಜುನಾಥ್ ಮೃತದೇಹ
ಜಮ್ಮು ಮತ್ತು ಕಾಶ್ಮೀರದ ಆನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ಬಲಿಯಾಗಿದ್ದಾರೆ. ಮಂಜುನಾಥ್ ಮೃತದೇಹ ಜಮ್ಮು ಕಾಶ್ಮೀರದಿಂದ ಬುಧವಾರ ಸಂಜೆ 6 ಗಂಟೆಗೆ ರವಾನಿಸಲಾಗಿದೆ. ಮಧ್ಯರಾತ್ರಿ 1 ಗಂಟೆಗೆ ಮಂಜುನಾಥ್ ಮೃತದೇಹ ಬೆಂಗಳೂರು ತಲುಪಲಿದೆ. ನಂತರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರಸ್ತೆ ಮಾರ್ಗವಾಗಿ ಮೃತದೇಹವನ್ನು ಕೊಂಡೊಯ್ಯಲು ಯೋಚಿಸಲಾಗಿದೆ.
ಮಂಜುನಾಥ್ ಪತ್ನಿ ಪಲ್ಲವಿಗೆ ಲಾಡ್ ಸಾಂತ್ವನ
ಈಗಾಗಲೇ ಜಮ್ಮು ಕಾಶ್ಮೀರಕ್ಕೆ ತೆರಳಿರುವ ಸಚಿವ ಸಂತೋಷ್ ಲಾಡ್, ಕನ್ನಡಿಗರನ್ನು ಭೇಟಿಯಾಗಿದ್ದಾರೆ. ಮೃತ ಮಂಜುನಾಥ್ ಪತ್ನಿ ಪಲ್ಲವಿಯವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಇನ್ನು, ಘಟನಾ ಸ್ಥಳದಲ್ಲಿ ಸಿಲುಕಿರುವ ಕನ್ನಡಿಗರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.
ಇತ್ತ ಶಿವಮೊಗ್ಗದಲ್ಲಿ ಮೃತ ಮಂಜುನಾಥ್ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಮಂಜುನಾಥ್ ಮನೆಗೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇಡೀ ಕುಟುಂಬ ಆಘಾತಕ್ಕೊಳಗಾಗಿದೆೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕೂಡಾ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿ: ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕದಿಂದ ಸಹಾಯವಾಣಿ ಆರಂಭ, ಇಲ್ಲಿದೆ ವಿವರ
ಮಧ್ಯಾಹ್ನ 3ಗಂಟೆಗೆ ಭರತ್ ಭೂಷಣ್ ಮೃತದೇಹ ರವಾನೆ
ಶಿವಮೊಗ್ಗ ಮಂಜುನಾಥ್ ಅಷ್ಟೇ ಅಲ್ಲ, ಉಗ್ರರ ದಾಳಿಯಲ್ಲಿ ಬೆಂಗಳೂರಿನ ಭರತ್ ಭೂಷಣ್ ಕೂಡ ಬಲಿಯಾಗಿದ್ದಾರೆ. ಭರತ್ ಭೂಷಣ್ ಮೃತದೇಹ ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಬರಲಿದೆ.
ತಾಯಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ನಂತರ ಪ್ರವಾಸಕ್ಕೆ ಹೋಗಿದ್ದ ಭರತ್
ಮೃತ ಭರತ್ ತಾಯಿಗೆ ಹೃದಯ ಸಂಬಂಧಿ ಸಮಸ್ಯೆ ಇದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದ ತಾಯಿ ಕೊಂಚ ಚೇತರಿಸಿಕೊಂಡ ಬಳಿಕ ಭರತ್ ಪ್ರವಾಸಕ್ಕೆ ತೆರಳಿದ್ದರು. ಆದರೆ ಈಗ ಭರತ್ ಇಲ್ಲ ಅನ್ನೋ ಸುದ್ದಿಯನ್ನು ತಾಯಿಗೆ ತಿಳಿಸಲಾಗದ ಸ್ಥಿತಿ ಸಂಬಂಧಿಕರದ್ದು.
ಇನ್ನು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನೆಲೆಸಿದ್ದ ಆಂಧ್ರದ ನೆಲ್ಲೂರು ಮೂಲದ ಮಧುಸೂಧನ್ ಎಂಬುವರು ಕೂಡ ಮೃತಪಟ್ಟಿದ್ದಾರೆ. ಪತ್ನಿ ಜೊತೆ ಪ್ರವಾಸಕ್ಕೆ ಹೋಗಿದ್ದ ಟೆಕ್ಕಿ ಮಧುಸೂದನ್ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.