ಹರಸಾಹಸ ಪಟ್ಟು ಪಹಲ್ಗಾಮ್ಗೆ ತೆರಳಿ ಕನ್ನಡಿಗರ ನೆರವಿಗೆ ನಿಂತ ಸಂತೋಷ ಲಾಡ್, ಸಿಎಂ ಮೆಚ್ಚುಗೆ
ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿ, ಅನೇಕರ ಜೀವವನ್ನು ಬಲಿ ಪಡೆದಿದ್ದಾರೆ. ಆದರೆ, ಇಂತಹದೊಂದು ಘಟನೆಯಲ್ಲಿ ಕನ್ನಡಿಗರು ಕೂಡ ಸಾವು-ನೋವಿಗೆ ತುತ್ತಾಗಿದ್ದಾರೆ. ಕನ್ನಡಿಗರ ನೆರವಿಗಾಗಿ ಸಿಎಂ ಸಿದ್ದರಾಮಯ್ಯ ಕೂಡಲೇ ಸಚಿವ ಸಂತೋಷ್ ಲಾಡ್ ರಿಗೆ ಪಹಲ್ಗಾಮ್ ಕಳುಹಿಸಿದ್ದಾರೆ. ಸಚಿವ ಸಂತೋಷ ಲಾಡ್ ಹುಬ್ಬಳ್ಳಿಯಿಂದ ಪಹಲ್ಗಾಮ್ ತೆರಳಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ಹುಬ್ಬಳ್ಳಿ, ಏಪ್ರಿಲ್ 23: ಜಮ್ಮು-ಕಾಶ್ಮೀರದ (Jammu-Kashmir) ಪಹಲ್ಗಾಮ್ನಲ್ಲಿ ಬುಧವಾರ ಸಂಜೆ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ (Pahalgam Terror Attack) ನಡೆಸಿದ್ದಾರೆ. ಉಗ್ರರ ಗುಂಡಿಗೆ ಇಬ್ಬರು ಕನ್ನಡಿಗರು ಸೇರಿದಂತೆ 27 ಮಂದಿ ಪ್ರವಾಸಿಗರು ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಅಧಿಕಾರಿಗಳು ಮತ್ತು ಕಾರ್ಮಿಕ ಸಚಿವ ಸಂತೋಷ ಲಾಡ್ (Santosh Lad) ಅವರನ್ನು ಪಹಲ್ಗಾಮ್ಗೆ ಕಳುಹಿಸಿದ್ದಾರೆ. ಆದರೆ, ಹುಬ್ಬಳ್ಳಿಯಿಂದ ಶ್ರೀನಗರಕ್ಕೆ ತೆರಳಲು ಸಚಿವ ಸಂತೋಷ ಲಾಡ್ ಸಾಕಷ್ಟು ಪರದಾಡಿದರು.
ಕಳೆದ ರಾತ್ರಿ 9:30 ರ ಸುಮಾರಿಗೆ ಸಚಿವ ಸಂತೋಷ ಲಾಡ್ ಅವರಿಗೆ ಕರೆ ಮಾಡಿದ್ದ ಸಿಎಂ, ಕೂಡಲೇ ಪಹಲ್ಗಾಮ್ಗೆ ತೆರಳಿ ಕನ್ನಡಿಗರಿಗೆ ಬೇಕಾದ ನೆರವನ್ನು ಕಲ್ಪಿಸುವಂತೆ ಹೇಳಿದ್ದರು. ಧಾರವಾಡ ಪ್ರವಾಸದಲ್ಲಿದ್ದ ಸಂತೋಷ್ ಲಾಡ್, ಎಲ್ಲ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ, 10 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ಅಲ್ಲಿ ವಾಸ್ತವ ಬೇರೆಯಾಗಿತ್ತು.
ಶ್ರೀನಗರಕ್ಕೆ ಹೋಗಲು ಬೇಕಾದ ವಿಶೇಷ ವಿಮಾನಕ್ಕಾಗಿ ಸಚಿವ ಸಂತೋಷ ಲಾಡ್ ಸಾಕಷ್ಟು ಪರದಾಟ ನಡೆಸಿದರು. ದೇಶದ ಅನೇಕ ಕಡೆ ಕರೆ ಮಾಡಿದ ಸಂತೋಷ ಲಾಡ್ ಅವರಿಗೆ ವಿಶೇಷ ವಿಮಾನ ಕಳುಹಿಸಲು ಅನೇಕ ಕಂಪನಿಗಳು ಹಿಂದೇಟು ಹಾಕಿದವು. ಇನ್ನು. ಹಲವಡೆ ವಿಶೇಷ ವಿಮಾನಗಳು ಸಿದ್ದವಿದ್ದರೂ, ಪೈಲಟ್ಗಳು ಇರಲಿಲ್ಲ. ಹೀಗಾಗಿ, ಸರಿಸುಮಾರು ಎರಡುವರೆ ಗಂಟೆಗಳ ಕಾಲ ವಿಶೇಷ ವಿಮಾನ ಅರೆಂಜ್ ಮಾಡಲು ಸಂತೋಷ ಲಾಡ್ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪರದಾಡಿದರು.
ನಂತರ ಮಧ್ಯರಾತ್ರಿ 12:30ಕ್ಕೆ ಮುಂಬೈ ಮೂಲದ ಕಂಪನಿಯೊಂದರ ವಿಶೇಷ ವಿಮಾನ ಬುಕ್ ಮಾಡಿದ ರು. ಮುಂಬೈನಿಂದ ಹೊರಟ ವಿಶೇಷ ವಿಮಾನ, ತಡರಾತ್ರಿ 2:30ರ ಸುಮಾರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂತು. ನಸುಕಿನ ಜಾವ 3 ಗಂಟೆ ಸುಮಾರಿಗೆ ಹುಬ್ಬಳ್ಳಿಯಿಂದ ಶ್ರೀನಗಕ್ಕೆ ಸಂತೋಷ್ ಲಾಡ್ ಪ್ರಯಾಣ ಬೆಳಸಿದರು.
ಲಾಡ್ಗೂ ತಟ್ಟಿದ ವಿಮಾನ ಟಿಕೆಟ್ ದರ ಏರಿಕೆ ಬಿಸಿ
ಸಚಿವ ಸಂತೋಷ್ ಲಾಡ್ ಅವರಿಗೂ ಕೂಡಾ ವಿಮಾನ ದರ ಏರಿಕೆ ಬಿಸಿ ತಾಗಿತು. ಹೌದು, ಘಟನೆ ನಡೆಯುತ್ತಿದ್ದಂತೆ, ಶ್ರೀನಗರಕ್ಕೆ ಹೋಗುವ ಮತ್ತು ಬರುವ ವಿಮಾನಗಳ ಟಿಕೆಟ್ ದರವನ್ನು ವಿಮಾನಯಾನ ಕಂಪನಿಗಳು ದಿಢೀರನೆ ಹೆಚ್ಚಳ ಮಾಡಿದ್ದವು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ರೀತಿ ವಿಶೇಷ ವಿಮಾನದ ಬಾಡಿಗೆ ಬೆಲೆ ಕೂಡ ಸುಮಾರು ಹತ್ತು ಪಟ್ಟು ಹೆಚ್ಚಿಸಿದ್ದವು.
ಹುಬ್ಬಳ್ಳಿಯಿಂದ ಶ್ರೀನಗರಕ್ಕೆ ವಿಶೇಷ ವಿಮಾನದ ಮೂಲಕ ಹೋಗಲು ಹೆಚ್ಚಂದರೆ 5-6 ಲಕ್ಷ ರೂ. ತಗಲುತ್ತದೆ. ಆದರೆ, ಸಂತೋಷ್ ಲಾಡ್ ಅವರು ಸರಿಸಮಾರು 56 ಲಕ್ಷ ರೂಪಾಯಿ ನೀಡಿ ವಿಶೇಷ ವಿಮಾನದ ಮೂಲಕ ಶ್ರೀನಗರಕ್ಕೆ ತೆರೆಳಿದ್ದಾರೆ.
ಸ್ಥಳಕ್ಕೆ ಬೇಗನೆ ಹೋಗಿ, ಕನ್ನಡಿಗರಿಗೆ ಸಹಾಯ ಮಾಡಲೇಬೇಕಾಗಿದ್ದರಿಂದ ಸಂತೋಷ್ ಲಾಡ್ 56 ಲಕ್ಷ ರೂ. ನೀಡಿ ಶ್ರೀನಗರಕ್ಕೆ ಹೋಗಿದ್ದಾರೆ. ಮುಂಜಾನೆ ಐದು ಮೂವತ್ತಕ್ಕೆ ಶ್ರೀನಗರ ತಲುಪಿದ್ದ ಸಂತೋಷ್ ಲಾಡ್, ನಂತರ ಅಲ್ಲಿಂದ ಪಹಲ್ಗಾಮ್ಗೆ ಹೋಗಿ ಮೃತರ ಶವಗಳು ಕರ್ನಾಟಕಕ್ಕೆ ಕಳುಹಿಸಲು, ತೊಂದರೆಗೆ ಸಿಲುಕಿದವರನ್ನು ಸುರಕ್ಷಿತವಾಗಿ ಕಳುಹಿಸುವ ಕೆಲಸ ಆರಂಭಿಸಿದ್ದಾರೆ.
ಟ್ವಿಟರ್ ಪೋಸ್ಟ್
ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯಲ್ಲಿ ಸಂತ್ರಸ್ತರಾದ ಕನ್ನಡಿಗರ ಶವಗಳನ್ನು ನಾಡಿಗೆ ತಲುಪಿಸುವ, ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ಕೊಡಿಸುವ ಹಾಗೂ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವು ನೀಡುವ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಮ್ಮ ಸರ್ಕಾರ ನಿರ್ವಹಿಸುತ್ತಿದೆ. ಸಚಿವರಾದ @SantoshSLadINC ಅವರು ಈ ಕಾರ್ಯಾಚರಣೆಯನ್ನು… pic.twitter.com/Yv2thzyN1w
— Siddaramaiah (@siddaramaiah) April 23, 2025
ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿ: ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕದಿಂದ ಸಹಾಯವಾಣಿ ಆರಂಭ, ಇಲ್ಲಿದೆ ವಿವರ
ಸಂತೋಷ ಲಾಡ್ ಕಾರ್ಯಕ್ಕೆ ಸಿಎಂ ಶ್ಲಾಘನೆ
“ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯಲ್ಲಿ ಸಂತ್ರಸ್ತರಾದ ಕನ್ನಡಿಗರ ಶವಗಳನ್ನು ನಾಡಿಗೆ ತಲುಪಿಸುವ, ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ಕೊಡಿಸುವ ಹಾಗೂ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವು ನೀಡುವ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಮ್ಮ ಸರ್ಕಾರ ನಿರ್ವಹಿಸುತ್ತಿದೆ. ಸಚಿವರಾದ ಸಂತೋಷ ಲಾಡ್ ಅವರು ಈ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದು, ನೊಂದವರನ್ನು ಸಂತೈಸಿ, ಧೈರ್ಯತುಂಬಿ ಅವರ ಕುಟುಂಬ ಸದಸ್ಯರಲ್ಲಿ ಒಬ್ಬರಾಗಿ ಜೊತೆ ನಿಂತಿದ್ದಾರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.