Literature: ನೆರೆನಾಡ ನುಡಿಯೊಳಗಾಡಿ; ನಮ್ಮ ಧರ್ಮವು ಪ್ರೀತಿ, ಸತ್ಯಗಳ ಆದರ್ಶ ಬುನಾದಿಯ ಮೇಲೆ ನಿಂತಿದೆ

Rukaiya Sakhawat Hossain : ‘ನಮ್ಮ ಆಪ್ತಬಂಧುಗಳ, ಸಂಬಂಧಿಕರ ವರ್ತುಲ ಬಹಳ ಚಿಕ್ಕದು ಸಾರಾ. ನಮ್ಮ ಮೊದಲ ದಾಯಾದಿಗಳೂ ಕೂಡ ನಮಗೆ ನಿಷಿದ್ಧವಲ್ಲ. ‘ನಮ್ಮದು ಬಹಳ ವಿಶಾಲವಾಗಿದೆ. ಒಬ್ಬ ಬಾದರಾಯಣ ಸಂಬಂಧಿಕನೂ ಕೂಡ ಭ್ರಾತೃವಿನ ಸ್ಥಾನದಲ್ಲಿರುತ್ತಾನೆ.’

Literature: ನೆರೆನಾಡ ನುಡಿಯೊಳಗಾಡಿ; ನಮ್ಮ ಧರ್ಮವು ಪ್ರೀತಿ, ಸತ್ಯಗಳ ಆದರ್ಶ ಬುನಾದಿಯ ಮೇಲೆ ನಿಂತಿದೆ
ಲೇಖಕಿ ರುಕಿಯಾ ಶೇಖಾವತ್ ಹುಸೇನ್ ಮತ್ತು ಡಾ. ಕೆ.ಎಸ್. ವೈಶಾಲಿ
Follow us
ಶ್ರೀದೇವಿ ಕಳಸದ
|

Updated on:May 06, 2022 | 11:39 AM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ‘ನಾವು ಹಿಂದಿರುಗಿದ ಮೇಲೆ ನನ್ನ ಸ್ನೇಹಿತೆಯರಿಗೆ ಮಹಿಳೆಯರೇ ದೇಶದ ಆಡಳಿತ ವ್ಯವಸ್ಥೆಯನ್ನು ನಿಭಾಯಿಸುವ ಪ್ರವಿೂಳಾ ರಾಜ್ಯವೊಂದಿದೆ. ಅಲ್ಲಿ ಮಹಿಳೆಯರೇ ಸಾಮಾಜಿಕ ವ್ಯವಹಾರಗಳನ್ನು ನಿಯಂತ್ರಿಸುತ್ತಾರೆ, ಅಲ್ಲಿನ ಪುರುಷರು ‘‘ಮರ್ದಾನ’’ ದಲ್ಲಿದ್ದುಕೊಂಡು, ಮಕ್ಕಳ ಲಾಲನೆ, ಪಾಲನೆ, ಅಡಿಗೆ ಮತ್ತಿನ್ನಿತರ ಗೃಹಕೃತ್ಯಗಳನ್ನು ನಿರ್ವಹಿಸುತ್ತಾರೆ. ಅಲ್ಲಿ ಅಡಿಗೆ ಮಾಡುವುದು ಎಷ್ಟು ಸುಲಭವೆಂದರೆ ಅಡಿಗೆ ಮಾಡುವ ಕ್ರಿಯೆಯೇ ಉಲ್ಲಾಸದಾಯಕವಾಗಿದೆ ಎಂದೆಲ್ಲಾ ಬಣ್ಣಿಸಿದರೆ ನನ್ನ ಸ್ನೇಹಿತೆಯರಿಗೆ ವಿಸ್ಮಯವಾಗುತ್ತದೆ. ಇದೆಲ್ಲಾ ಅವರಿಗೆ ಹಾಸ್ಯಾಸ್ಪದವೆನ್ನಿಸಲೂ ಬಹುದು.’ ‘ಹೌದು, ನೀನು ಅವರಿಗೆ ಇಲ್ಲಿ ನೋಡಿದ್ದನ್ನೆಲ್ಲಾ ವಿವರಿಸಿ ಹೇಳು’ ‘ನನಗೆ ದಯವಿಟ್ಟು ನೀವು ಭೂಮಿಯ ಸಾಗುವಳಿ ಮಾಡುವ ವಿಧಾನವನ್ನು ಹಾಗೂ ಹೇಗೆ ಕ್ಷೇತ್ರದ ಉಳುಮೆ ಮತ್ತಿನ್ನಿತರ ದೈಹಿಕವಾಗಿ ಪರಿಶ್ರಮದಾಯಕವಾದ ಕೆಲಸಗಳನ್ನು ಮಾಡುತ್ತೀರೆಂದು ತಿಳಿಸಿಕೊಡು.’ ‘ನಮ್ಮ ಭೂಮಿಯ ಒತ್ತುವರಿ, ಉಳುಮೆಯ ಕೆಲಸಗಳನ್ನು ನಾವು ವಿದ್ಯುಚ್ಛಕ್ತಿಯ ಮುಖಾಂತರ ಮಾಡುತ್ತೇವೆ. ಈ ವಿದ್ಯುಚ್ಛಕ್ತಿಯ ನೆರವನ್ನು ನಾವು ನಮ್ಮ ಇನ್ನಿತರ ಶ್ರಮದಾಯಕ ಕೆಲಸಗಳಿಗೂ ಬಳಸುತ್ತೇವೆ ಹಾಗೂ ನಮ್ಮ ವಾಯುಚಾಲಿತ ವಾಹನಗಳಿಗೂ ಬಳಸಿಕೊಳ್ಳುತ್ತೇವೆ. ನಮ್ಮಲ್ಲಿ ರೈಲ್ವೆ ಅಥವಾ ರಸ್ತೆಗಳಾಗಲೀ ಇಲ್ಲ.’

ಕಥೆ : ಸುಲ್ತಾನಾಳ ಕನಸು | ಮೂಲ : ರುಕಿಯಾ ಶೇಖಾವತ್ ಹುಸೇನ್ | ಕನ್ನಡಕ್ಕೆ : ಡಾ. ಕೆ. ಎಸ್. ವೈಶಾಲಿ | ಸೌಜನ್ಯ : ‘ದೇಶಕಾಲ’ ಸಾಹಿತ್ಯ ಪತ್ರಿಕೆ 

(ಭಾಗ 4) 

‘ಆದುದರಿಂದ ಇಲ್ಲಿ ರಸ್ತೆ ಅಥವಾ ರೈಲ್ವೆ ಅಪಘಾತಗಳು ಸಂಭವಿಸುವುದಿಲ್ಲ ಅಲ್ಲವೇ?’ ನೀವು ಯಾವಾಗಲಾದರೂ ಮಳೆ ನೀರಿನ ಅಭಾವದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದೀರಾ?’ ಎಂದು ನಾನು ಕೇಳಿದೆ.

‘ನಾವು ನೀರಿನ ಶೇಖರಣೆಗಾಗಿ ಬಲೂನಿನ ಆವಿಷ್ಕಾರ ಮಾಡಿದಾಗಿನಿಂದ ನಮಗೆ ಅದರ ಅಭಾವ ಕಾಡಿಯೇ ಇಲ್ಲ. ಆ ದೊಡ್ಡ ಬಲೂನಿಗೆ ಜೋಡಿಸಿರುವ ಕೊಳವೆಗಳನ್ನು ನೀನು ನೋಡಿರಬಹುದು. ಅವುಗಳ ಮೂಲಕ ನಾವು ನಮಗೆಷ್ಟು ಮಳೆ ನೀರಿನ ಅವಶ್ಯಕತೆ ಇದೆಯೋ ಅಷ್ಟನ್ನು ಸಂಗ್ರಹಿಸಬಹುದು. ನಾವು ಪ್ರಕೃತಿಯನ್ನು ತುಂಬಾ ಫಲವತ್ತಾಗಿ ಮಾಡಲು ಶ್ರಮಿಸುತ್ತಿದ್ದೇವೆ. ಪ್ರವಾಹ ಅಥವಾ ಚಂಡಮಾರುತಗಳಂಥ ವೈಪರೀತ್ಯಗಳನ್ನು ಎಂದೂ ಅನುಭವಿಸಿರದ ನಮಗೆ ನಿಜವಾಗಿಯೂ ಪ್ರಕೃತಿ ಮಾತೆ ಒಲಿದಿದ್ದಾಳೆ. ನಮಗೆ ಜಗಳವಾಡಲು ಸಮಯವೇ ಇಲ್ಲ ಏಕೆಂದರೆ ನಾವು ಎಂದೂ ಆಲಸಿಗಳಾಗಿ ಕುಳಿತಿರುವುದಿಲ್ಲ. ಉದಾತ್ತಳಾದ ನಮ್ಮ ರಾಣಿ ಸಸ್ಯಶಾಸ್ತ್ರ ಪ್ರಿಯೆ. ನಮ್ಮ ಇಡೀ ದೇಶವನ್ನು ಒಂದು ಅದ್ಭುತವಾದ ಉದ್ಯಾನವನವನ್ನಾಗಿ ಮಾರ್ಪಡಿಸಬೇಕೆಂಬುದೇ ಆಕೆಯ ಮಹತ್ವಾಕಾಂಕ್ಷೆಯಾಗಿದೆ.’

‘ಇದೊಂದು ಶ್ರೇಷ್ಠವಾದ ಕಲ್ಪನೆಯಾಗಿದೆ. ನಿಮ್ಮ ಮುಖ್ಯವಾದ ಆಹಾರವೇನು?’

‘ಹಣ್ಣುಗಳು’

‘ನೀವು ನಿಮ್ಮ ಪರಿಸರವನ್ನು ಸೆಕೆಯ ವಾತಾವರಣವಿದ್ದಾಗ ಹೇಗೆ ತಂಪಾಗಿಡುತ್ತೀರಿ? ನಮ್ಮಲ್ಲಿಯೋ, ನಾವು ಬೇಸಿಗೆಗಾಲದಲ್ಲಿ ಹುಯ್ಯುವ ಮಳೆಯನ್ನು ಸ್ವರ್ಗದ ವರದಾನವೆಂದೇ ಭಾವಿಸುತ್ತೇವೆ.’

‘ಬಿಸಿಲಿನ ಝಳ ಸಹಿಸಲಸಾಧ್ಯವಾದಾಗ ನಾವು ನೆಲವನ್ನು ಕೃತಕವಾದ ಕಾರಂಜಿಗಳಿಂದ ತೆಗೆದ ನೀರಿನಿಂದ ಸಿಂಪಡಿಸುತ್ತೇವೆ ಮತ್ತು ಚಳಿಗಾಲದಲ್ಲಿ ನಮ್ಮ ಕೊಠಡಿಗಳನ್ನು ಸೌರಶಕ್ತಿಯ ಬಳಕೆಯ ಮೂಲಕ ಬೆಚ್ಚಗಿರಿಸುತ್ತೇವೆ!’

ಬಳಿಕ ಆಕೆ ನನಗೆ ತನ್ನ ಸ್ನಾನ ಗೃಹವನ್ನು ತೋರಿಸಿದಳು. ಅದರ ಮೇಲ್ಛಾವಣಿ ಡಬ್ಬಿಯ ಮುಚ್ಚಳದ ಆಕಾರದಲ್ಲಿ ತೆಗೆದು ಹಾಕಿ ಮಾಡಲು ಬರುವಂತಿದ್ದಿತು. ಅದನ್ನು ತೆಗೆದು ಆಕೆ ಯಾವ ಸಮಯದಲ್ಲಾದರೂ ನಲ್ಲಿಯನ್ನು ತಿರುಗಿಸಿ ಕೊಳವೆಗಳ ಮೂಲಕ ಚಿಮ್ಮುವ ನೀರಿನ ಬಗ್ಗೆಗಳ ಸ್ನಾನವನ್ನು ಆಹ್ಲಾದಿಸಬಹುದಾಗಿತ್ತು. ‘ನೀವು ಬಹಳ ಅದೃಷ್ಟವಂತರು’ ಎಂದು ನಾನು ಉದ್ಗರಿಸಿದೆ. ‘ನಿಮಗೆ ಯಾವುದರ ಅಭಾವವೂ ಇಲ್ಲ. ನಿಮ್ಮ ಧರ್ಮವೇನೆಂದು ನಾನು ಕೇಳಬಹುದೇ?’

‘ನಮ್ಮ ಧರ್ಮವು ಪ್ರೀತಿ ಹಾಗೂ ಸತ್ಯಗಳ ಆದರ್ಶ ಬುನಾದಿಯ ಮೇಲೆ ನಿಂತಿದೆ. ಪರಸ್ಪರರನ್ನು ಪ್ರೀತಿಸುವುದು ಮತ್ತು ಸತ್ಯಸಂಧರಾಗಿರುವುದು ನಮ್ಮ ಪರಮೋಚ್ಚ ಧಾರ್ಮಿಕ ಕರ್ತವ್ಯವಾಗಿದೆ. ಯಾವ ವ್ಯಕ್ತಿಯಾದರೂ ಅಸತ್ಯವನ್ನು ನುಡಿದರೆ, ಅವರು ಮಹಿಳೆಯೇ ಆಗಿರಲಿ ಅಥವಾ ಪುರುಷನಿರಲಿ.’

‘ಅವರಿಗೆ ಮರಣದಂಡನೆಯ ಶಿಕ್ಷೆ ವಿಧಿಸಲಾಗುವುದೇ?’

‘ಇಲ್ಲ ಮರಣದಂಡನೆಯಲ್ಲ. ನಾವು ದೇವರ ಸೃಷ್ಟಿಯಾದ ಯಾವ ಜೀವಿಯನ್ನೂ ಕೊಲ್ಲುವುದಿಲ್ಲ. ಮನುಷ್ಯನನ್ನಂತೂ ಅಲ್ಲವೇ ಅಲ್ಲ. ಸುಳ್ಳುಗಾರರನ್ನು ಶಾಶ್ವತವಾಗಿ ಈ ನಾಡಿನಿಂದ ಗಡೀಪಾರು ಮಾಡಲಾಗುತ್ತದೆ. ಮತ್ತು ಆ ವ್ಯಕ್ತಿ ಇಲ್ಲಿಗೆ ಎಂದೂ ಪ್ರವೇಶಿಸುವಂತಿಲ್ಲ.’

‘ಅಪರಾಧಿಯನ್ನು ಎಂದೂ ಕ್ಷಮಿಸುವುದಿಲ್ಲವೇ?’

‘ಕ್ಷಮಿಸುತ್ತೇವೆ. ಆದರೆ ಆ ವ್ಯಕ್ತಿಯು ನಿಜವಾಗಿ ಪಶ್ಚಾತ್ತಾಪ ಪಟ್ಟರೆ ಮಾತ್ರ.’

‘ನಿಮ್ಮ ಸಂಬಂಧಿಕರ ಹೊರತಾಗಿ ನೀವು ಇನ್ನಾರೂ ಪರಪುರುಷರನ್ನು ಬೇಟಿಯಾಗುವುದು ನಿಷಿದ್ಧವೇ?’

‘ಹಾಗೇನಿಲ್ಲ, ಆದರೆ ನಾವು ನಮ್ಮ ಆಪ್ತ ಸಂಬಂಧಿಕರಾದ ಪುರುಷರೊಡನೆ ಮಾತ್ರ ಒಡನಾಡುತ್ತೇವೆ.’

‘ನಮ್ಮ ಆಪ್ತಬಂಧುಗಳ, ಸಂಬಂಧಿಕರ ವರ್ತುಲ ಬಹಳ ಚಿಕ್ಕದು ಸಾರಾ. ನಮ್ಮ ಮೊದಲ ದಾಯಾದಿಗಳೂ ಕೂಡ ನಮಗೆ ನಿಷಿದ್ಧವಲ್ಲ.’

‘ನಮ್ಮದು ಬಹಳ ವಿಶಾಲವಾಗಿದೆ. ಒಬ್ಬ ಬಾದರಾಯಣ ಸಂಬಂಧಿಕನೂ ಕೂಡ ಭ್ರಾತೃವಿನ ಸ್ಥಾನದಲ್ಲಿರುತ್ತಾನೆ.’

‘ತುಂಬಾ ಉತ್ತಮವಾದ ವ್ಯವಸ್ಥೆ. ಈ ನಾಡಿನಲ್ಲಿ ಪಾವಿತ್ರ್ಯತೆಯೇ ಮೂರ್ತಿವೆತ್ತಂತಿದೆ. ಈ ಮೌಲ್ಯವೇ ನಾಡನ್ನಾಳುತ್ತದೆ. ಮೇಧಾವಿಯಾದ ಹಾಗೂ ದೂರದೃಷ್ಟಿಯುಳ್ಳ, ಈ ಎಲ್ಲಾ ನಿಯಮಾವಳಿಗಳನ್ನೂ ಜಾರಿಗೆ ತಂದ ನಿಮ್ಮ ಸುದ್ಗುಣಿ ರಾಣಿಯನ್ನು ನೋಡುವ ಆಸೆಯಾಗುತ್ತಿದೆ.’

‘ಹಾಗೆಯೇ ಆಗಲಿ’ ಎಂದಳು ಸಹೋದರಿ ಸಾರಾ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಅನಂತರ ಸಾರಾ ಎರಡು ಆಸನಗಳನ್ನು ಒಂದು ಚಚ್ಚೌಕವಾಗಿರುವ ಹಲಗೆಯ ಮೇಲೆ ಅಳವಡಿಸಿದಳು. ಆ ಹಲಗೆಗೆ ಆಕೆ ಎರಡು ನುಣ್ಣಗೆ ಮಿರುಗುತ್ತಿದ್ದ ಚೆಂಡುಗಳ್ನು ಜೋಡಿಸಿದಳು. ನಾನು ಚೆಂಡುಗಳನ್ನೇಕೆ ಇಟ್ಟಿದ್ದಾಳೆಂದು  ಕೇಳಿದಾಗ, ಅವಳು ಅವು ಜಲಜನಕದ ಚೆಂಡುಗಳೆಂದೂ ಮತ್ತು ಅವುಗಳನ್ನು ಗುರುತ್ವಾಕರ್ಷಣ ಶಕ್ತಿಯ ಪರಿಧಿಯನ್ನು ವಿೂರಿ ಹಾರಲು ಉಪಯೋಗಿಸುವುದಾಗಿ ಹೇಳಿದಳು. ಆ ಚೆಂಡುಗಳು ಬೇರೆಬೇರೆ ಗಾತ್ರ ಪ್ರಮಾಣದವುಗಳಾಗಿದ್ದು ಅವನ್ನು ಎಷ್ಟು ಭಾರ, ಎತ್ತರಕ್ಕೆ ಹೋಗಲು ಬೇಕಾದರೂ ಉಪಯೋಗಿಸಬಹುದಾಗಿತ್ತು. ಈ ವಾಯು ಚಾಲಿತ ವಾಹನಕ್ಕೆ ಆಕೆ ಎರಡು ರೆಕ್ಕೆಗಳನ್ನು ಜೋಡಿಸಿದಳು. ಅವು ವಿದ್ಯುಚ್ಛಕ್ತಿಯನ್ನು ಬಳಸಿಕೊಂಡು ಕೆಲಸ ಮಾಡುತ್ತಿದ್ದವು. ನಾವು ಹಾಯಾಗಿ ಆಸೀನರಾದೊಡನೆ ಆಕೆ ಒಂದು ಗುಂಡಿಯನ್ನೊತ್ತಿದಳು. ಕೂಡಲೇ ರೆಕ್ಕೆಗಳಿಂದ ಬ್ಲೇಡುಗಳು ತಿರುಗಲಾರಂಭಿಸಿದವು. ಅವು ಕ್ಷಣ ಕ್ಷಣಕ್ಕೂ ವೇಗವಾಗಿ ಚಲಿಸತೊಡಗಿದವು. ಮೊದಲಿಗೆ ನಾವು ಸುಮಾರು ಆರು ಅಥವಾ ಏಳು ಅಡಿ ಎತ್ತರಕ್ಕೆ ಏರಿದೆವು. ಆಮೇಲೆ ವಾಹನ ಹಾರತೊಡಗಿತು. ನಾವು ಚಲಿಸುತ್ತಿದ್ದೇವೆಂದು ನನಗೆ ತಿಳಿಯುವುದರ ಮೊದಲೇ ನಾವು ಹಾರುತ್ತಾ ರಾಣಿಯ ಉದ್ಯಾನವನವನ್ನು ತಲುಪಿದೆವು.

ನನ್ನ ಸ್ನೇಹಿತೆ ಯಂತ್ರದ ಚಲನೆಯನ್ನು ಹಿಮ್ಮೊಗನಾಗಿ ತಿರುಗಿಸುವುದರ ಮೂಲಕ ಆ ವಾಯುವಾಲಿತ ವಾಹನವನ್ನು ಕೆಳಗಿಳಿಸಿದಳು. ವಾಹನವು ಭೂಸ್ಪರ್ಶ ಮಾಡುತ್ತಲೇ ಯಂತ್ರದ ಚಲನೆ ನಿಂತುಹೋಯಿತು. ನಾವು ಕೆಳಗಿಳಿದೆವು.

ನಾನು ಆ ವಾಯುಚಾಲಿತ ವಾಹನದಿಂದಲೇ ಕೆಳಗೆ ಉದ್ಯಾನವನದಲ್ಲಿ ರಾಣಿ ಅವಳ ಪುಟ್ಟ ಮಗಳು ಮತ್ತು ಸಖಿಯರೊಡನೆ ವಿಹರಿಸುತ್ತಿದುದನ್ನು ನೋಡಿದೆ.

‘ಓಹೋ ನೀನಿಲ್ಲಿ!’ ಎಂದು ಸಹೋದರಿ ಸಾರಾಳನ್ನು ಸಂಭೋಧಿಸಿದ ರಾಣಿ ಆಶ್ಚರ್ಯ ವ್ಯಕ್ತಪಡಿಸಿದಳು. ಸಾರಾ ನನ್ನನ್ನು ರಾಣಿಗೆ ಪರಿಚಯ ಮಾಡಿಕೊಟ್ಟಾಗ ಆಕೆ ಯಾವ ಗತ್ತು ಪ್ರತಿಷ್ಠೆಗಳನ್ನೂ ತೋರದೆ ನನ್ನನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದಳು.

ರಾಣಿಯ ಪರಿಚಯವಾದುದರಿಂದ ನಾನು ತುಂಬಾ ಉಲ್ಲಸಿತಳಾದೆ. ನಮ್ಮ ಸಂಭಾಷಣೆಯ ನಡುವೆ ರಾಣಿ ತನ್ನ ದೇಶದ ಪ್ರಜೆಗಳು ಬೇರೆ ದೇಶದವರೊಡನೆ, ವ್ಯಾಪಾರ ನಡೆಸಲು, ವಾಣಿಜ್ಯ ಸಂಪರ್ಕಹೊಂದಲು ತನಗೆ ಯಾವ ತಕರಾರೂ ಇಲ್ಲವಾದರೂ, ಜನಾನಗಳಲ್ಲಿ ಬಂಧಿಗಳಾಗಿರುವ ಸ್ತ್ರೀಯರಿರುವ ದೇಶದವರೊಡನೆ ತಮಗೆ ವ್ಯಾಪಾರ ಮಾಡಲು ಅಸಾಧ್ಯ ಎಂದಳು. ಏಕೆಂದರೆ ಅಲ್ಲಿಯ ಪುರುಷರು ನೈತಿಕವಾಗಿ ಅಧಃಪತನಗೊಂಡಿದ್ದು, ಅವರೊಡನೆ ವ್ಯವಹರಿಸುವುದು ತಮಗೆ ಅಪ್ರಿಯವಾದ ಸಂಗತಿ ಎಂದು ಆಕೆ ಸ್ಪಷ್ಟೀಕರಣ ನೀಡಿದಳು. ಬೇರೆಯವರ ಭೂಮಿಯ ಮೇಲೆ ದುರಾಕ್ರಮಣ ಮಾಡುವುದು ತಮಗೆ ಸಲ್ಲದ ವಿಚಾರವಾಗಿದ್ದು, ಕೋಹಿನೂರ್ ವಜ್ರಕ್ಕಿಂತ ಸಾವಿರ ಪಟ್ಟು ದೇದೀಪ್ಯಮಾನವಾದ ವಜ್ರವಿದ್ದರೂ ತಾವು ಅದಕ್ಕೆ ದುರಾಸೆಪಟ್ಟು ಯುದ್ಧ ಮಾಡಲು ಹೋಗುವುದಿಲ್ಲವೆಂದೂ, ಹಾಗೂ ಯಾವುದೇ ರಾಜನ ಬಳಿ ರತ್ನಖಚಿತವಾದ ಮಯೂರ ಸಿಂಹಾಸನವಿದ್ದರೂ, ತಾವು ಅದಕ್ಕೆ ಅಸೂಯೆ ಪಡುವುದಿಲ್ಲವೆಂದೂ ರಾಣಿ ಖಡಾಖಂಡಿತವಾಗಿ ಹೇಳಿದಳು. ಅಪಾರವಾದ ಜ್ಞಾನ ಸಾಗರದ ಆಳವನ್ನು ಶೋಧಿಸಲು ನಾವು ಕಾತುರಗೊಂಡಿದ್ದೇವೆ ಮತ್ತು ಅದರ ಗರ್ಭದಲ್ಲಿರುವ ಅಮೂಲ್ಯವಾದ ಮುತ್ತು ರತ್ನಗಳನ್ನು ಹೆಕ್ಕಿ ತೆಗೆಯುವುದರ ಮೂಲಕ ಪ್ರಕೃತಿಯು ತಮಗೆ ನೀಡಿರುವ ಕೊಡುಗೆಗಳನ್ನು ತಮ್ಮ ಶಕ್ಯಾನುಸಾರ ಬಳಸಿಕೊಳ್ಳುವುದೇ ತಮ್ಮ ಉದ್ದೇಶವೆಂದಳು ರಾಣಿ.

ರಾಣಿಯನ್ನು ಬೀಳ್ಕೊಂಡ ಬಳಿಕ ನಾನು ಅಲ್ಲಿನ ಪ್ರಸಿದ್ಧ ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಿದೆ. ಬಳಿಕ ಅಲ್ಲಿನ ಕೆಲವು ಕಾರ್ಖಾನೆಗಳು, ಪ್ರಯೋಗಾಲಯಗಳು ಮತ್ತು ವೀಕ್ಷಣಾಲಯಗಳನ್ನೂ ಕೂಡ ನನಗೆ ತೋರಿಸಲಾಯಿತು.

ಮೇಲಿನ ಎಲ್ಲಾ ಮುಖ್ಯವಾದ ತಾಣಗಳಿಗೆ ಭೇಟಿಕೊಟ್ಟ ಮೇಲೆ ನಾವು ಪುನಃ ಸಾರಾಳ ವಾಯುಚಾಲಿತ ವಾಹನವನ್ನೇರಿದೆವು. ಅದು ಚಲಿಸುತ್ತಿದ್ದಂತೆ, ನಾನು ಹೇಗೋ ಜಾರಿ ಕೆಳಗೆ ಬಿದ್ದೆ. ಕೂಡಲೇ ನನಗೆ ಸ್ಪಪ್ನದಿಂದ ಎಚ್ಚರವಾಯಿತು. ಕಣ್ತೆರೆದು ನೋಡಿದಾಗ ನಾನು ಇನ್ನೂ ನನ್ನ ಶಯ್ಯಾಗೃಹದಲ್ಲಿಯೇ, ಆರಾಮ ಕುರ್ಚಿಯಲ್ಲೇ ಸುಖಾಸೀನಳಾಗಿದ್ದುದು ಕಂಡುಬಂದಿತು!

(ಮುಗಿಯಿತು)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಕಥೆಯ ಎಲ್ಲಾ ಭಾಗಗಳು ಮತ್ತು ಇತರೇ ಅನುವಾದಿತ ಕಥೆಗಳನ್ನು ಇಲ್ಲಿ ಓದಿ :  https://tv9kannada.com/tag/nerenaada-nudiyolagaadi

Published On - 11:18 am, Fri, 6 May 22

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್