Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

B. Jeyamohan’s Tamil Story : ದೇವಾಲಯದ ಬೀದಿಗೆ ತಪ್ಪಿ ಬಂದವರನ್ನು ತೆಂಗಿನಮರಕ್ಕೆ ಕಟ್ಟಿ, ಜೀವಂತ ಸಾರೆ ಹಾವಿನ ಚರ್ಮದಿಂದ ಇನ್ನಷ್ಟು ಬಿಗಿಗೊಳಿಸಿ ಬಿಸಿಲಲ್ಲಿ ನಿಲ್ಲಿಸುತ್ತಿದ್ದರು. ಹಾವಿನ ಚರ್ಮ ಒಣಗಿ ಆಕುಂಚನಗೊಳ್ಳುವಾಗ ಅದು ಮಾಂಸಖಂಡಗಳನ್ನು ಕತ್ತರಿಸಿ ಇನ್ನಷ್ಟು ಒಳಪ್ರವೇಶಿಸುತ್ತಿತ್ತು. ಇದು ತುಂಬ ಸರಳ ಶಿಕ್ಷೆ.

Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
ತಮಿಳು ಲೇಖಕ ಬಿ. ಜಯಮೋಹನ್, ಅನುವಾದಕರಾದ ಪಾವಣ್ಣನ್ ಮತ್ತು ಚಿಂತಾಮಣಿ ಕೊಡ್ಲೆಕೆರೆ
Follow us
ಶ್ರೀದೇವಿ ಕಳಸದ
|

Updated on:Apr 15, 2022 | 12:56 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಬಿ. ಜಯಮೋಹನ್ (B. Jeyamohan) ತಮಿಳು ಮತ್ತು ಮಲಯಾಳಂನ ಖ್ಯಾತ ಲೇಖಕರು, ವಿಮರ್ಶಕರು. ಕಥೆ ಕಾದಂಬರಿಗಳಲ್ಲಿ ಮನುಷ್ಯನ ಮನಸ್ಸಿನಾಳದ ಸೂಕ್ಷ್ಮ ನೋಟಗಳನ್ನು ಅಸಾಧಾರಣವಾಗಿ ಕಟ್ಟಿಕೊಡುವ ಇವರ ಪ್ರತಿಭೆ ಅತ್ಯಂತ ಸತ್ವಶಾಲಿಯಾಗಿ ಕೂಡಿದೆ. ಅನೇಕ ಕಾದಂಬರಿ, ಸಣ್ಣ ಕತೆಗಳು, ಅಂಕಣಗಳು, ನಾಟಕಗಳನ್ನು ರಚಿಸಿದ ಇವರ ಮೊದಲ ಕಾದಂಬರಿ ರಬ್ಬರ್. ತನ್ಮೀಚಿ, ಯಾನೈ ಡಾಕ್ಟರ್, ದೈವಂಗಳ್ ಪೈಗಳ್, ದೇವರ್ಗಳ್, ಕನ್ಯಾಕುಮಾರಿ  ಗುಗೈ ಮುಂತಾದ ಕೃತಿಗಳು ಪ್ರಕಟವಾಗಿವೆ. ಬೇರೆ ಬೇರೆ ಭಾಷೆಗೂ ಅನುವಾದಗೊಂಡಿವೆ. ಸಿನಿಮಾ ರಂಗದಲ್ಲೂ ಆಸಕ್ತಿಯುಳ್ಳವರಾದ ಇವರು, ಅನೇಕ ಮಲಯಾಳಂ, ತಮಿಳು ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದಾರೆ. ಇವರ ‘ವಿಷ್ಣುಪುರಮ್ ‘ ಬಹಳ ವಿಮರ್ಶಗೆ ಒಳಗಾದ ಕಾದಂಬರಿ. ವಿಷ್ಣುಪುರಮ್ ಎಂಬ ಹೆಸರಿನಲ್ಲಿಯೇ ಒಂದು ವಾಚಕ ಗುಂಪನ್ನು ರಚಿಸಿ ತಮಿಳು ಮತ್ತು ಮಲಯಾಳಂನಲ್ಲಿ ಅನೇಕ ಬರಹಗಾರರನ್ನು ಸೃಷ್ಟಿಸಿದ ಕೀರ್ತಿ ಇವರದು. ಈಗಾಗಲೇ ಇವರಿಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ.

ಕಥೆ: ವಿಷಸರ್ಪ (ನಚ್ಚರವಂ) |  ತಮಿಳು ಮೂಲ: ಬಿ. ಜಯಮೋಹನ್ | ಕನ್ನಡಕ್ಕೆ: ಪಾವಣ್ಣನ್ ಮತ್ತು ಚಿಂತಾಮಣಿ ಕೊಡ್ಲೆಕೆರೆ | ಸೌಜನ್ಯ : ದೇಶಕಾಲ, ಸಾಹಿತ್ಯ ಪತ್ರಿಕೆ.

(ಭಾಗ 1)

ಬಹುಪಾಲು ಚರಿತ್ರಕಾರರ ಜೊತೆ ಚರಿತ್ರೆಯ ಸೂಕ್ಷ್ಮ ಸಮಸ್ಯೆಗಳ ಕುರಿತು ಚರ್ಚಿಸಲು ಆಗುವುದಿಲ್ಲ. ಅವರು ಖಚಿತ ಮಾಹಿತಿಗಳ ಮೂಲಕ ಅಚ್ಚುಕಟ್ಟಾಗಿ ಸೃಷ್ಟಿಸುವ ಆಕೃತಿಯಂತೆ ಚರಿತ್ರೆಯನ್ನು ಕಲ್ಪಿಸಿಕೊಳ್ಳುತ್ತಾರೆ. ಮನೆ ಜಗುಲಿಯ ಮೇಲೆ ಕುಳಿತು ಮಾತಾಡುವಂತೆ ಚರಿತ್ರೆಯ ಕುರಿತೂ ಚರ್ಚಿಸುತ್ತಾರೆ. ಒಬ್ಬ ಚರಿತ್ರಕಾರನಾಗಿ ನನಗೆ ಇವೆಲ್ಲ ಒಪ್ಪಿಗೆಯಾಗುವುದಿಲ್ಲ. ನಾನು ಚರಿತ್ರೆಯನ್ನು ರಂಗಭೂಮಿಯ ಹಿನ್ನೆಲೆಯ ಪರದೆಗಳಂತೆ ಕಲ್ಪಿಸಿಕೊಳ್ಳುತ್ತೇನೆ. ದೃಶ್ಯಕ್ಕೆ ತಕ್ಕಂತೆ ಕ್ಷಣಗಳಲ್ಲೆ ಪರದೆ ಬದಲಿಸುತ್ತೇನೆ. ಮನೆಗಳು, ಗುಡ್ಡದ ತಪ್ಪಲು, ಸಮುದ್ರ ತೀರ, ಅರಮನೆಯ ಸಭೆ. ಈ ಕುರಿತು ನಾನು ಯಾವ ಚರಿತ್ರಕಾರರ ಜೊತೆ ಮಾತನಾಡಿದರೂ ಅವರ ಕಣ್ಣು ಕೆಂಪಾಗುತ್ತವೆ. ಇವನೇನೂ ಶಾಶ್ವತ ಸತ್ಯಗಳನ್ನು ಸ್ಥಾಪಿಸುವ ವಿದ್ವಾಂಸನಲ್ಲ, ಕಥೆಗಳನ್ನು ಹೆಣೆಯುವ ಕಲ್ಪನೆಗಳ ವ್ಯಕ್ತಿ ಎಂದು ನಾನು ಮಾತಾಡಿದಾಗ ಅವರು ತಿಳಿಯುತ್ತಾರೆ. ನಾನು ಅವರಲ್ಲೊಬ್ಬರಿಗೆ ನೀವು ಸತ್ಯಗಳನ್ನು ಹೆಣೆಯುವ ಕಲ್ಪನೆಗಳ ವ್ಯಕ್ತಿ ಎಂದಿದ್ದೆ. ಅವರು ತಮ್ಮ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುವಷ್ಟು ಆವೇಶಗೊಂಡು ಕೂಗಾಡಿದರು.

ನಾನೊಂದು ಖಚಿತ ಉದಾಹರಣೆಯೊಂದಿಗೆ ಆರಂಭಿಸುತ್ತೇನೆ. ತಿರ್ಪರಪ್ಪು ಮಹಾದೇವರ ದೇವಸ್ಥಾನ ಈಗ ಹೇಗಿದೆ? ಶೈವ ಧರ್ಮದ ಮುಖ್ಯ ಕೇಂದ್ರಗಳಲ್ಲಿ ಅದೊಂದು. ಕೋಟೆಯಂತೆ ಕಾಣುವ ಸುತ್ತು ಗೋಡೆಗಳ ಒಳಗೆ ಎತ್ತರವಾದ ಮಂಟಪಗಳು, ವಿಸ್ತಾರವಾದ ಪ್ರಾಕಾರ. ತಾಮ್ರದ ಗೋಪುರದ ಗರ್ಭಗುಡಿಯೊಳಗೆ ತೂಗುದೀಪಗಳ ಮತ್ತು ನೆಲಕ್ಕಿಟ್ಟ ಕಂಚಿನ ದೀಪಗಳ ಕಾಂತಿಯಲ್ಲಿ ಹೊಳೆಯುತ್ತಿರುವ ಚಿನ್ನದ ಕವಚ ತೊಟ್ಟು ಕೂತ ಲಿಂಗ. ಐವತ್ತು ವರ್ಷಗಳ ಹಿಂದೆ ಅವಣೀಶಯರು ದೇವಾಲಯದೊಳಗೆ ಮಾತ್ರವಲ್ಲ, ದೇವಾಲಯವಿರುವ ಬೀದಿಯಲ್ಲಿ ಓಡಾಡಲೂ ತಡೆ ಇತ್ತು. ತಪ್ಪಿ ಒಳಗೆ ಬಂದವರನ್ನು ತೆಂಗಿನ ಮರಕ್ಕೆ ಕಟ್ಟಿ, ಜೀವಂತ ಸಾರೆ ಹಾವಿನ ಚರ್ಮದಿಂದ ಇನ್ನಷ್ಟು ಬಿಗಿಗೊಳಿಸಿ ಬಿಸಿಲಲ್ಲಿ ನಿಲ್ಲಿಸುತ್ತಿದ್ದರು. ಹಾವಿನ ಚರ್ಮ ಒಣಗಿ ಆಕುಂಚನಗೊಳ್ಳುವಾಗ ಅದು ಮಾಂಸಖಂಡಗಳನ್ನು ಕತ್ತರಿಸಿ ಇನ್ನಷ್ಟು ಒಳಪ್ರವೇಶಿಸುವುದು. ಇದು ತುಂಬ ಸರಳ ಶಿಕ್ಷೆ. ಇದಕ್ಕಿಂತ ಹೆಚ್ಚಿನ ದಂಡನೆಗಳನ್ನು ಆ ಕಾಲದ ತಾಂತ್ರಿಕ ವಿಧಿಗಳನ್ನೊಳಗೊಂಡ ‘ತಂತ್ರ ಪ್ರಬೋಧಿನಿ’ಯಲ್ಲಿ ಕಾಣಬಹುದು. ಅಧಿಕ ಆದಾಯವಿದ್ದ ಈ ದೇವಸ್ಥಾನದಲ್ಲಿ ಆ ಕಾಲದಲ್ಲಿ ಇಡೀ ವರ್ಷ ಬ್ರಾಹ್ಮಣರಿಗೆ ಉಚಿತ ಭೋಜನ ನೀಡುತ್ತಿದ್ದ ಮೂರು ಅಡಿಗೆ ಮನೆಗಳು ಬಿಡುವಿಲ್ಲದೆ ಕಾರ್ಯನಿರತವಾಗಿರುತ್ತಿದ್ದವು. ನಾಲ್ಕೂ ಕಡೆಗಳಿಂದ ಎತ್ತಿನಗಾಡಿಗಳು ನದಿಯಂತೆ ಬಂದು ಅಲ್ಲಿ ನೆರೆಯುತ್ತಿದ್ದವು. ಬ್ರಾಹ್ಮಣರ ಪ್ರಾಬಲ್ಯ ಅಧಿಕವಾಗಿದ್ದ ಸ್ಥಳವದು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

ಆದರೆ ಚರಿತ್ರೆಯಲ್ಲಿ ಹಿಂದಕ್ಕೆ ನೋಡಿದರೆ ನಾವು ಕಾಣುವುದೇನು? ಶಿಲಾಲೇಖನಗಳು ಮತ್ತು ತಾಮ್ರಪತ್ರಗಳಿಂದ ತಿಳಿಯುವ ಕಥೆ ಬೇರೆ. ಈ ಮಲಯಾಳ ಬ್ರಾಹ್ಮಣರನ್ನು ಚೋಳರಾಜರು ಕಾಗೆ ಗುಂಪನ್ನು ಓಡಿಸುವಂತೆ ಅಟ್ಟಿದರು. ನೂರಾರು ತಂತ್ರ ಪುಸ್ತಕಗಳನ್ನು ಬೆಂಕಿಯಲ್ಲಿ ಸುಟ್ಟು ತಂತ್ರಿಗಳನ್ನು ಕಳುಮರದ ಮೇಲೆ ಹತ್ತಿಸಿದರು. ಅಡಿಗೆ ಮನೆಯ ಊಟ ನಿಲ್ಲಿಸಿ ಹೊಟ್ಟೆ ಬಾಕರನ್ನು ದೇಶಾಂತರಗೊಳಿಸಿದರು. ಅವುಗಳನ್ನು ತಮ್ಮ ವೀರ ಪ್ರತಾಪಗಳೆಂಬಂತೆ ಚೋಳರು ಶಿಲೆಗಳ ಮೇಲೆ ಕೆತ್ತಿಸಿವರು. ಎಲ್ಲವನ್ನೂ ಕವಿಮಣಿ, ಕೆ.ಕೆ.ಪಿಳ್ಳೈ, ಎ.ಕೆ. ಪೆರುಮಾಳ್ ತುಂಬ ವಿವರವಾಗಿ ಬರೆದಿದ್ದಾರೆ.

ನಾನು ಹೇಳುವುದೇನೆಂದರೆ ಇದಕ್ಕೂ ಮುಂದೆ ಯಾಕೆ ಹೋಗಬಾರದು? ಚರಿತ್ರಕಾರರಿಗೆ ಶಿಲಾಲೇಖನಗಳು, ತಾಮ್ರಪತ್ರಗಳು, ತಾಳೆಯೋಲೆಗಳು ಆಧಾರಗಳು. ಅಯ್ಯಾ, ಇವೆಲ್ಲವೂ ಸ್ಥೂಲ ಸಂಗತಿಗಳು. ಸೂಕ್ಷ್ಮಾತಿಸೂಕ್ಷ್ಮವಾದ ಭಾಷೆಯಲ್ಲಿ ಬರೆಯಲಾದ ಆಧಾರಗಳನ್ನು ಯಾಕೆ ನೀವು ಲೆಕ್ಕಿಸುವುದಿಲ್ಲ? ಅವರು ಏನೂ ಮಾತನಾಡುವುದಿಲ್ಲ. ತಿರ್ಪರಪ್ಪು ಮಹಾದೇವರನ್ನು ಇಂದಿಗೂ ಶಿವನ ಉಗ್ರ ಮೂರ್ತಿ ಎಂದೇ ಕರೆಯುತ್ತಾರೆ. ದೇವಾಲಯದ ಪೋತಿಗಳು ಈ ಕುರಿತು ಹಲವಾರು ಕಥೆಗಳನ್ನು ಹೇಳುವುದುಂಟು. ತ್ರಿಪುರ ಸಂಹಾರವನ್ನು ಮುಗಿಸಿ ಉಗ್ರನಾಗಿಯೇ ತಿರ್ಪರಪ್ಪು ಜಲಪಾತಕ್ಕೆ ಬಂದ ಶಿವನು ತನ್ನ ಹುಲಿಚರ್ಮವನ್ನು ತೆಗೆದಿಟ್ಟ. ಅಲ್ಲಿ ಮೂಡಿದ ಲಿಂಗವಿದು. ಜಲಪಾತದಲ್ಲಿ ಸ್ನಾನ ಮಾಡಿ ಶರೀರ ಮತ್ತು ಹೃದಯ ತಣ್ಣಗಾದ ಮೇಲೆ ಶಿವ ಕೈಲಾಸಕ್ಕೆ ಹೋದ. ಆದರೆ ಹಳೆಯ ತಂತ್ರ ಗ್ರಂಥಗಳಲ್ಲೆಲ್ಲ ಈ ಶಿವಲಿಂಗವನ್ನು ‘ಕಿರಾತ ಮೂರ್ತಿ’ ಎಂದು ಗುರುತಿಸುತ್ತಾರೆ. ದಕ್ಷಿಣ ತಿರುವಿದಾಂಗೂರಿನ ಒಂದೇ ಕಿರಾತ ಮೂರ್ತಿ ಇದು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಸೆಲ್ವಕುಮಾರಿ ಅನುವಾದಿಸಿದ ತಮಿಳು ಕಥೆ ‘ದೇವರು ಮತ್ತು ಟೈಗರ್ ಸ್ವಾಮಿ’

ಕಿರಾತ ಎಂದರೆ ಬರ್ಬರ ಮನುಷ್ಯ, ವನವಾಸಿ. ಪಾಶುಪತಾಸ್ತ್ರವನ್ನು ಅರಸಿಕೊಂಡ ಹೋದ ಅರ್ಜುನನನ್ನು ಕಿರಾತನ ವೇಷದಲ್ಲಿ ಬಂದ ಶಿವನು ಅಡ್ಡಗಟ್ಟಿ, ಯುದ್ಧ ಮಾಡಿ ಬಳಿಕ ಪಾಶುಪತಾಸ್ತ್ರ ನೀಡುವ ‘ಕಿರಾತ ವೃತ್ತ’ ಎನ್ನುವ ಕಥಕ್ಕಳಿ ಆಟವನ್ನು ಇಲ್ಲಿ ಪ್ರತಿವರ್ಷವೂ ಆಡಲೇಬೇಕು ಎನ್ನುವ ಕಟ್ಟಳೆ ಇದೆ. ಆಟಕ್ಕಾಗಿ ಮೈ ತುಂಬ ಕರಿ ಬಣ್ಣ ಬಳಿದುಕೊಂಡು ಬಿಳಿಯ ಕೋರೆ ಹಲ್ಲು, ಕೆಂಪು ಕಣ್ಣುಗಳು, ಹದ್ದಿನ ರೆಕ್ಕೆಯ ಮಣಿಮುಡಿ ತೊಟ್ಟು ಅಲಲಾ ಎಂದು ಕೂಗುತ್ತ ಓಡಿ ಬರುವ ಕಿರಾತ ವೇಷಧಾರಿಯನ್ನು ರಂಗಭೂಮಿಯಲ್ಲೇ ನಂಬೂದಿರಿ ಬ್ರಾಹ್ಮಣ ವೇಷಧಾರಿ ಕಾಲುಮುಟ್ಟಿ ನಮಸ್ಕಾರ ಮಾಡಿ ಪೂಜಿಸುತ್ತಾನೆ. ಅಂದು ಊರಿಗೆ ಊರೇ ನೆರೆದಿರುತ್ತವೆ. ಕಿರಾತ ಮೂರ್ತಿ ರಂಗಭೂಮಿಗೆ ಬಂದ ಕೂಡಲೇ ಎದ್ದು ನಿಂತು ‘ಹರ ಹರ ಮಹಾದೇವ, ಶಂಭೋ ಮಹಾದೇವ’ ಎಂದು ಕೂಗಿ ನಮಿಸುತ್ತಾರೆ. ರಂಗಭೂಮಿಯಲ್ಲಿ ಅಭಯ, ವರದ ಕರಮುದ್ರೆಗಳೊಂದಿಗೆ ನಿಂತ ಕಿರಾತನ ಕಪ್ಪು ರೂಪವನ್ನು ಮತ್ತು ಜೋಡಿಸಿಟ್ಟ ಚಿಪ್ಪುಗಳಂತಿದ್ದ ಹಲ್ಲುಗಳನ್ನು ಕಂಡಕೂಡಲೇ ನನ್ನ ಕಣ್ಣ ಮುಂದೆ ಪರದೆಯೊಂದು ಕಳಚಿ ಬಿದ್ದಂತೆನಿಸಿತು. ಮೇಲೆ ಹೇಳಿದೆನಲ್ಲ, ಆ ಚರಿತ್ರೆಯ ದರ್ಶನ ನನಗೆ ಲಭಿಸಿದ್ದು ಈ ರೀತಿಯಲ್ಲಿ.

ಆ ನಂತರವೇ ನಾನು ತಂತ್ರ ಗ್ರಂಥಗಳನ್ನು ವಿಸ್ತಾರವಾಗಿ ಓದಿ ತಿರ್ಪರಪ್ಪು ದೇವಾಲಯವ ಕುರಿತು ಸಂಶೋಧನೆ ಆರಂಭಿಸಿದೆ. ಮೊಟ್ಟ ಮೊದಲಿಗೆ ಗೊತ್ತಾದ ವಿಷಯ, ಎಲ್ಲ ತಂತ್ರ ಗ್ರಂಥಗಳು ಬೇರಾವುದೋ ಮೂಲಗ್ರಂಥದ ಅನುವಾದ ಅಥವಾ ವಿವರಣೆ ಅಥವಾ ಅನುಬಂಧಗಳು. ಆ ಮೂಲಗ್ರಂಥ ಎಂದೋ ನಷ್ಟವಾಗಿದೆ. ಎಂಟು ವರ್ಷಗಳ ಕಾಲ ಅದನ್ನು ಹುಡುಕಿಕೊಂಡು ಅಲೆದಾಡಿದೆ. ತಿರ್ಪರಪ್ಪು ದೇವಾಲಯಕ್ಕೆ ಏಳು ನಂಬೂದಿರಿ ಕುಟುಂಬಗಳವರೇ ತಾಂತ್ರಿಕರು. ಅವರಲ್ಲಿ ಯಾರೂ ಈಗ ದೇವಸ್ಥಾನದ ಕಾರ್ಯಭಾರದಲ್ಲಿಲ್ಲ. ಓದು ಮುಗಿಸಿ ಬೇರೆ ಕೆಲಸಗಳನ್ನು ಹುಡುಕಿಕೊಂಡು ಹೋಗಿ ಬೇರೆಯೇ ಆದರು. ಮೂರು ಕುಟುಂಬಗಳು ಸಂಪೂರ್ಣವಾಗಿ ವಿದೇಶಗಳಿಗೆ ಸ್ಥಳಾಂತರಗೊಂಡವು. ಇನ್ನೆರಡು ಕುಟುಂಬಗಳವರಿಗೆ ತಮಗೆ ತಿರ್ಪರಪ್ಪು ದೇವಸ್ಥಾನದಲ್ಲಿ ಹಕ್ಕಿದೆ ಎಂಬುದೂ ತಿಳಿಯದು.

ಭಾಗ 2 : Literature: ನೆರೆನಾಡ ನುಡಿಯೊಳಗಾಡಿ; ಇದು ಬ್ರಾಹ್ಮಣರು ಹೇಳುವ ಕಥೆಯಲ್ಲವೇ? ನಿಮ್ಮ ಜಾತಿಯಲ್ಲಿ ಇರುವ ಕಥೆ ಏನು?’

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಅಂಕಣದ ಎಲ್ಲಾ ಅನುವಾದಿತ ಕಥೆಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Published On - 12:07 pm, Fri, 15 April 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ