AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ಸೆಲ್ವಕುಮಾರಿ ಅನುವಾದಿಸಿದ ತಮಿಳು ಕಥೆ ‘ದೇವರು ಮತ್ತು ಟೈಗರ್ ಸ್ವಾಮಿ’

Tamil Shot Story by M Rajendran : ‘‘ಇನ್ನೆಷ್ಟು ದಿವಸ ನೀನು ನಾಯಿಯಾಗಿಯೇ ಇರುತ್ತೀಯಾ? ನೀನೂ ಮನುಷ್ಯನಾಗಬೇಕು. ಕಂದಸ್ವಾಮಿ ಹೆಸರು ಬೇಡಾ ಅಂದ್ರೆ ಟೈಗರ್ ಸ್ವಾಮಿ ಆಗಿರು. ಆದರೆ ಉಳಿದವರಿಗೆ ನೀನೇ ಕಂದಸ್ವಾಮಿ”.

Literature: ನೆರೆನಾಡ ನುಡಿಯೊಳಗಾಡಿ; ಸೆಲ್ವಕುಮಾರಿ ಅನುವಾದಿಸಿದ ತಮಿಳು ಕಥೆ ‘ದೇವರು ಮತ್ತು ಟೈಗರ್ ಸ್ವಾಮಿ’
ತಮಿಳು ಲೇಖಕ ಮ. ರಾಜೇಂದ್ರನ್, ಅನುವಾದಕಿ ಸೆಲ್ವಕುಮಾರಿ
ಶ್ರೀದೇವಿ ಕಳಸದ
|

Updated on:Apr 01, 2022 | 1:10 PM

Share

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಸಮಕಾಲೀನ ತಮಿಳು ಸಾಹಿತ್ಯದ ಪ್ರಮುಖ ಸಣ್ಣ ಕಥೆಗಾರರಾದ ಜಯಕಾಂತನ್, ಅಶೋಕಮಿತ್ರನ್ ಹಾಗೂ ಪುದುಮೈಪಿತ್ತನ್ ಇವರ ಸಾಲಿನಲ್ಲಿ ಬರುವ ಮತ್ತೊಬ್ಬ ಪ್ರಮುಖ ಕಥೆಗಾರರೆಂದರೆ ಮ. ರಾಜೇಂದ್ರನ್. ಇವರು ತಂಜಾವೂರು ತಮಿಳು ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. 2010ರಲ್ಲಿ ಕೊಯಮತ್ತೂರಿನಲ್ಲಿ ನಡೆದ ವಿಶ್ವ ಶಾಸ್ತ್ರೀಯ ತಮಿಳು ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿದ್ದ ಇವರಿಗೆ, ಮೆಕೆಂಜಿಯವರ ಹಸ್ತಪ್ರತಿಗಳ ಸಂಗ್ರಹ ಕುರಿತು ಸಲ್ಲಿಸಿರುವ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ಸದ್ಯ ‘ಕಣೈಯಾಳಿ ತಮಿಳು ಪತ್ರಿಕೆಯ ಸಂಪಾದಕರಾಗಿರುತ್ತಾರೆ. ಇವರ ಕಥೆ ‘ದೇವರು ಮತ್ತು ಟೈಗರ್ ಸ್ವಾಮಿ’ ಸರಳ ಭಾಷೆ, ನಿರೂಪಣಾ ವಿಧಾನ ಮತ್ತು ತಂತ್ರದಿಂದ ಗಮನ ಸೆಳೆಯುತ್ತದೆ. ನಾಯಿ ಮತ್ತು ದೇವರ ನಡುವೆ ನಡೆಯುವ ಸಂಭಾಷಣೆಯ ಮೂಲಕ ಆಧುನಿಕ ಮನುಷ್ಯನ ಪಾಡು ಏನಾಗಿದೆ ಎನ್ನುವುದು ಓದುತ್ತಾ ಹೋದಂತೆ ಗ್ರಹಿಕೆಗೆ ಸಿಗುತ್ತದೆ.

ಕಥೆ : ದೇವರು ಮತ್ತು ಟೈಗರ್ ಸ್ವಾಮಿ | ತಮಿಳು ಮೂಲ ಎಂ. ರಾಜೇಂದ್ರನ್ | ಕನ್ನಡಕ್ಕೆ : ಸೆಲ್ವಕುಮಾರಿ

(ಭಾಗ 1)

ದೇವರಿಗೆ ವಿಪರೀತ ಆಸೆ. ತುಪ್ಪದ ದೀಪ ತಪಸ್ಸಿನಲ್ಲಿ ನಿಂತಿತ್ತು. ಊದುಬತ್ತಿಯ ಹೊಗೆಯು ವರ್ತುಲಾಕಾರದಲ್ಲಿ  ಮೇಲೇರತೊಡಗಿತ್ತು. ಕಂದಸ್ವಾಮಿ ಮೈಮರೆತು ದೇವರಿಗೆ ನಮಸ್ಕರಿಸುತ್ತಿದ್ದಾಗ ಜೊತೆಯಲ್ಲಿದ್ದ ಅವರ ನಾಯಿ ಟೈಗರ್ ನೋಡಿಕೊಂಡು ನಿಂತಿತ್ತು. ದೇವರಿಗೆ ನಮಸ್ಕರಿಸಿದ ನಂತರ ಅವರಿಗೆ ಕಾಫಿ, ಟೈಗರ್‌ಗೆ ಬಿಸ್ಕೆಟ್ ಸಿಗುತ್ತಿತ್ತು. ಬಿಸ್ಕೆಟ್ಟಿನ ನೆನಪಿನಲ್ಲಿ ನಾಯಿ ಅಲ್ಲಾಡದೆ ಮೌನವಾಗಿ ನಿಂತಿತ್ತು. ಹಲವು ವರ್ಷಗಳಿಂದ ಇದು ರೂಢಿಯಲ್ಲಿತ್ತು ಆದರೆ ಯುಗಯುಗಗಳಿಂದ ಮನುಷ್ಯರಿಗೆ ವರವನ್ನು ಕೊಡುತ್ತಾ ಬಂದ ದೇವರಿಗೆ ವಿಪರೀತ ಆಸೆ ಇತ್ತು. ಫೋಟೋದಿಂದ ಹೊರಬಂದು ಟೈಗರ್‌ನ್ನು ನೋಡಿ ನಕ್ಕರು.

ದೇವರನ್ನು ಟೈಗರ್ ಫೋಟೋದಲ್ಲಿ ನೋಡಿದ್ದರೂ, ದೇವರು ಎದುರಿಗೇ ಪ್ರತ್ಯಕ್ಷವಾದಾಗ, ವಾಸನಾಗ್ರಹಿಕೆಯಲ್ಲಿ ಆದ ವ್ಯತ್ಯಾಸ ನೋಡಿ ಗರ‍್ರೆಂದಿತು. ಕಂದಸ್ವಾಮಿ ಕಣ್ಣುಗಳನ್ನು ತೆರೆದು ನಾಯಿಯನ್ನು ಕೋಪದಿಂದ ನೋಡಿದ. ದೇವರು ಫೋಟೋದೊಳಗೆ ಮಾಯ. ನಾಯಿ ಬಾಲ ಅಲ್ಲಾಡಿಸಿ ನಿಂತಿತು. ಕಂದಸ್ವಾಮಿ ಮತ್ತೆ ಕಣ್ಣನ್ನು ಮುಚ್ಚಿದ.

ಮತ್ತೀಗ ದೇವರು ಪ್ರತ್ಯಕ್ಷ. ನಾಯಿ ದಿಟ್ಟಿಸಿ ನೋಡಿತು. ಮತ್ತೆ ನಾಯಿ ಗರ‍್ರೆಂದಾಗ, ಕಂದಸ್ವಾಮಿ ಕಣ್ಣು ತೆರೆಯುವಷ್ಟರಲ್ಲಿ ದೇವರು ವರ ಕೊಟ್ಟುಬಿಟ್ಟ. ನಾಯಿ ಕಂದಸ್ವಾಮಿಯಾಗಿಯೂ, ಕಂದಸ್ವಾಮಿ ನಾಯಿಯಾಗಿಯೂ ಬದಲಾಗಿಬಿಟ್ಟ. ನಾಯಿ ಇದ್ದ ಜಾಗದಲ್ಲಿ ಅವರು, ನಮಸ್ಕರಿಸಿದ ಸ್ಥಿತಿಯಲ್ಲಿ ಟೈಗರ್, ಮುಂದೆ ದೇವರು.

“ಕಂದಸ್ವಾಮಿ!”

ದೇವರ ಆಜ್ಞೆಯ ಧ್ವನಿ ಕಿವಿಗೆ ಬಿದ್ದ ತಕ್ಷಣ, ಕಂದಸ್ವಾಮಿಯಾದ ಟೈಗರ್ ನಾಯಿಯಾಗಿದ್ದ ಕಂದಸ್ವಾಮಿಯನ್ನು ತಿರುಗಿ ನೋಡಿತು.

“ನಿನ್ನನ್ನೇ”

ದೇವರು ತೋರುಬೆರಳು ತೋರಿಸಿದಾಗ ನಾಯಿಗೆ ಸಂದೇಹವಾಯಿತು.

“ಸ್ವಾಮಿ ನಾನು ಟೈಗರ್”

“ಇಲ್ಲ ಸ್ವಲ್ಪ ಹೊತ್ತಿನ ಮುಂಚೆವರೆಗೂ ನೀನು ಟೈಗರ್ ಈಗ ಕಂದಸ್ವಾಮಿ.”

“ಇಲ್ಲ ಇಲ್ಲ ಕಂದಸ್ವಾಮಿ ನನ್ನ ಯಜಮಾನ. ನಾನು ಕಂದಸ್ವಾಮಿ ಆಗಲು ಸಾಧ್ಯವಿಲ್ಲ.”

“ಆಗಿದ್ದೀಯಲ್ಲ. ಎಷ್ಟೋ ದಿವಸದಿಂದ ನೀನು ಪೂಜೆಯ ಕೋಣೆಯಲ್ಲಿ ನನ್ನ ಮುಂದೆ ನಿಂತಿದ್ದೀಯಾ. ಇನ್ನೆಷ್ಟು ದಿವಸ ನೀನೂ ನಾಯಿಯಾಗಿಯೇ ಇರುತ್ತೀಯಾ? ನೀನೂ ಮನುಷ್ಯನಾಗಬೇಕು. ಕಂದಸ್ವಾಮಿ ಹೆಸರು ಬೇಡಾ ಅಂದ್ರೆ ಟೈಗರ್ ಸ್ವಾಮಿ ಆಗಿರು. ಆದರೆ ಉಳಿದವರಿಗೆ ನೀನೇ ಕಂದಸ್ವಾಮಿ”.

ಇದನ್ನೂ ಓದಿ : Literature; ನೆರೆನಾಡ ನುಡಿಯೊಳಗಾಡಿ; ತಮಿಳು ಲೇಖಕಿ ಅ. ವೆನ್ನಿಲಾ ಬರೆದ ಕಥೆ ‘ಇಂದ್ರನೀಲ’

“ಇಲ್ಲ ದೇವರೆ! ಇದು ದ್ರೋಹ. ನನ್ನ ಯಜಮಾನನಿಗೆ ದ್ರೋಹ ಬಗೆಯಲು ನನ್ನಿಂದ ಸಾಧ್ಯವಿಲ್ಲ”.

“ನೀನೆಲ್ಲಿ ದ್ರೋಹ ಮಾಡಿದೆ. ನಾನು ತಾನೇ ವರ ಕೊಟ್ಟದ್ದು.”

“ಇಲ್ಲ ದೇವರೆ! ಇದು ನ್ಯಾಯ ಅಲ್ಲ”.

“ಓ ದೇವರ ಕೆಲಸಕ್ಕೇ ತೀರ್ಪಾ?”

“ಯಾಕೆ ದೇವರೆ ತಪ್ಪು ಯಾರು ಮಾಡಿದರೂ ತಪ್ಪೇ ತಾನೆ?”

“ಯಾರು ಹೇಳಿದ್ದು? ತಪ್ಪು ಸರಿ ಎಂಬುದೆಲ್ಲ ನಾವು ಮಾಡುವ ಕೆಲಸಕ್ಕೆ ಸಂಬಂಧಿಸಿದ್ದಲ್ಲ.”

“ಹಾಗೆಂದರೆ?”

“ಮಾಡುವವರಿಗೆ ಸಂಬಂಧಿಸಿದ್ದು ಎಂಬುದೇ ಮಾನವ ಧರ್ಮ”

“ಇವನ್ನು ಒಪ್ಪಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ”

“ಒಪ್ಪಲು, ತಿರಸ್ಕರಿಸಲು ಯಾರಿಗೂ ಹಕ್ಕು ಇಲ್ಲ”

“ಹಾಗೆಂದರೆ?”

“ಕೇಳಿಸಿಕೊಂಡು ಹೋಗಬೇಕು ಅಷ್ಟೆ”

“ಸರಿ ತಪ್ಪು ಅಂತ ಹೇಳಬಾರದು. ಒಪ್ಪಲು ತಿರಸ್ಕರಿಸಲು. ನನಗೆ ಯಾವ ಹಕ್ಕೂ ಇಲ್ಲ ಆದರೆ ಒಂದೇ ಒಂದು. ಇಷ್ಟು ದಿವಸ ಇವರ ಋಣದಲ್ಲಿ ಬೆಳೆದಿದ್ದೇನೆ. ಎಷ್ಟು ಪ್ರೀತಿಯಿಂದ ಬೆಳೆಸಿದ್ದಾರೆ. ಅವರ ಬೆಂಗಾವಲಿಗೆ ಇರುತ್ತೇನೆಂದು ನಂಬಿಕೊಂಡಿದ್ದರು! ಅದನ್ನು ಸುಳ್ಳಾಗಿಸಿ ಅವರು ನಾಯಿಯಾಗಿಯೂ, ನಾನು ಅವರಾಗಿಯೂ…  ದೇವರೇ! ನನ್ನಿಂದ ಇದನ್ನು ಸಹಿಸಲು ಸಾಧ್ಯವಿಲ್ಲ!”

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

ಈ ಕಥೆಯ ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Published On - 12:30 pm, Fri, 1 April 22