Literature: ನೆರೆನಾಡ ನುಡಿಯೊಳಗಾಡಿ; ಮಾತನಾಡಲು ಹೋದರೆ ಅವನೀಗ ಫೈಲ್ ತೆಗೆದುಕೊಂಡು ಕುಳಿತುಬಿಡುತ್ತಾನೆ

Literature: ನೆರೆನಾಡ ನುಡಿಯೊಳಗಾಡಿ; ಮಾತನಾಡಲು ಹೋದರೆ ಅವನೀಗ ಫೈಲ್ ತೆಗೆದುಕೊಂಡು ಕುಳಿತುಬಿಡುತ್ತಾನೆ
ತಮಿಳು ಲೇಖಕ ಮ. ರಾಜೇಂದ್ರನ್, ಅನುವಾದಕಿ ಸೆಲ್ವಕುಮಾರಿ

Tamil Story of M Rajendran : “ಏ... ಟೈಗರ್... ಇದೇನು ಹೊಸ ಅಭ್ಯಾಸ?” ಗದರಿಕೊಂಡು ಬಂದು ಎಡಗೈಯಿಂದ ನಾಯಿಗೆ ಒಂದೇಟು ಹಾಕಿದಳು. ಅದು ಕದಲಲಿಲ್ಲ. ಅವಳನ್ನೇ ನೋಡುತ್ತಿತ್ತು. ಕಣ್ಣುಗಳಿಂದ ನೀರು ಇಳಿಯಿತು. ಮನಕರಗಿ ಎತ್ತಿ ಮಡಿಲಲ್ಲಿ ಇಟ್ಟುಕೊಂಡಳು.

ಶ್ರೀದೇವಿ ಕಳಸದ | Shridevi Kalasad

|

Apr 01, 2022 | 1:45 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಮನೆಯೊಳಗೆ ಬಂದ ಕಂದಸ್ವಾಮಿ ಹೆಂಡತಿ ಕೆಲಸದಲ್ಲಿ ಮುಳುಗಿಹೋದಳು. ವಾಷಿಂಗ್ ಮೆಷೀನ್ ಕೂಗಿತು. ಧೂಳು ಕಣ್ಣಿಗೆ ಬಿತ್ತು. ಮನೆಯ ಕೊಳಕು ಕಾಲಿಗೆ ಮೆತ್ತಿಕೊಂಡಿತು. ಸೋಫಾ, ಡೈನಿಂಗ್ ಟೇಬಲ್ ಧೂಳು ಕಣ್ಣಿಗೆ ಬಿದ್ದಿತು. ಪ್ರತಿಯೊಂದನ್ನು ಒರೆಸಿ ಮುಗಿಸಿದಾಗ ಮಧ್ಯಾಹ್ನವಾಗಿತ್ತು. ಹೊಟ್ಟೆ ಚುರುಗುಟ್ಟುತ್ತಿತ್ತು ಊಟಕ್ಕೆ ಕುಳಿತಳು. ತಟ್ಟೆಯಲ್ಲಿ ಅನ್ನ ಸಾರು ಹಾಕಿಕೊಂಡು ತಿನ್ನಲು ತೊಡಗಿದಳು. ಡೈನಿಂಗ್ ಟೇಬಲ್ ಕುರ್ಚಿ ಹತ್ತಿ ನಾಯಿಯೂ ಕುಳಿತುಕೊಂಡಿತು. ಅವಳು ನಾಯಿಯನ್ನು ನೋಡಿದಳು. ಮೇಜಿನ ಮೇಲೆ ಬೋರಲು ಹಾಕಿದ್ದ ಕಂದಸ್ವಾಮಿ ಊಟಮಾಡುವ ಬೆಳ್ಳಿ ತಟ್ಟೆಯನ್ನು ಅದು ನಾಲಿಗೆಯಿಂದ ನೆಕ್ಕಿತು. “ಓ ನೀನು ಇನ್ನೂ ಊಟ ಮಾಡಿಲ್ಲವಾ. ಅವರು ತಿನ್ನದೇ ಹೋದುದರಿಂದ ನಿನ್ನನ್ನೂ ಮರೆತುಬಿಟ್ಟೆ”. ಎದ್ದು ಹೋಗಿ ನಾಯಿ ತಟ್ಟೆಯಲ್ಲಿ ಊಟ ಹಾಕಿಕೊಂಡು ವಾಪಸ್ ಬಂದಳು. ನಾಯಿ ಕಾಣಿಸಲಿಲ್ಲ. ಮೇಜಿನ ಮೇಲಿದ್ದ ಅವಳ ತಟ್ಟೆಯಿಂದ ಊಟವನ್ನು ಮಾಡುತ್ತಿತ್ತು.

ಕಥೆ : ದೇವರು ಮತ್ತು ಟೈಗರ್ ಸ್ವಾಮಿ | ತಮಿಳು ಮೂಲ ಎಂ. ರಾಜೇಂದ್ರನ್ | ಕನ್ನಡಕ್ಕೆ : ಸೆಲ್ವಕುಮಾರಿ

(ಭಾಗ 3)

“ಏ… ಟೈಗರ್… ಇದೇನು ಹೊಸ ಅಭ್ಯಾಸ?” ಗದರಿಕೊಂಡು ಬಂದು ಎಡಗೈಯಿಂದ ನಾಯಿಗೆ ಒಂದೇಟು ಹಾಕಿದಳು. ಅದು ಕದಲಲಿಲ್ಲ. ಅವಳನ್ನೇ ನೋಡುತ್ತಿತ್ತು. ಕಣ್ಣುಗಳಿಂದ ನೀರು ಇಳಿಯಿತು. ಅವಳಿಗೆ ಮನ ಕರಗಿತು. ಎತ್ತಿ ಮಡಿಲಲ್ಲಿ ಇಟ್ಟುಕೊಂಡಳು. ನಾಯಿ ಅವಳ ಮುಖವನ್ನು ಮುದ್ದಿಸಿತು. ಬಾಲವನ್ನು ವೇಗವಾಗಿ ಅಲ್ಲಾಡಿಸಿತು.

“ಏನಾಯಿತು ನಿನಗೆ? ಯಾವಾಗಲೂ ನೀನು ಅವರನ್ನು ತಾನೆ ಮುದ್ದಿಸುತ್ತಿದ್ದೆ. ಈಗ ನನ್ನ ಹತ್ತಿರ ಬಾಲವನ್ನಾಡಿಸುತ್ತಿರುವೆ?”

ಹೇಳುತ್ತಲೇ ಹಣೆಗೆ ಮುತ್ತಿಟ್ಟಳು. ನಾಯಿಗೆ ಸಂತೋಷ ತಡೆಯಲಾಗಲಿಲ್ಲ. ಅವಳ ಮಡಿಲಿಂದ ಇಳಿದು ಮಲಗುವ ಕೋಣೆ, ಅಡುಗೆ ಕೋಣೆಯಲ್ಲೆಲ್ಲಾ ಓಡಾಡಿ ಬಂತು. ಅವಳ ಮೇಲೆ ಕಾಲನ್ನು ಇಟ್ಟು ಆಟವಾಡಿತು. ಬಾಗಿಲನ್ನು ಹಾಕಿ ಟಿ.ವಿ. ನೋಡಲು ಕುಳಿತಳು. ನಾಯಿಯೂ ಜೊತೆಯಲ್ಲೇ ಹೋಗಿ ಅವಳ ಮಡಿಲಲ್ಲಿ ಜಾಗ ಪಡೆಯಿತು. ನಾಯಿಗೆ ಸ್ನಾನ ಮಾಡಿಸಿ ತುಂಬಾ ದಿವಸವಾಯಿತೆಂಬುದು ಅವಳಿಗೆ ನೆನಪಿಗೆ ಬಂತು. ನಾಯಿಗೆ ಸ್ನಾನ ಮಾಡಿಸುವುದು ಸುಲಭವಾದ ಕೆಲಸ ಅಲ್ಲ.

ಸ್ನಾನ ಮಾಡಿಸುತ್ತಾರೆ ಎಂದು ಗೊತ್ತಾದ ತಕ್ಷಣ ಹೋಗಿ ಬಚ್ಚಿಟ್ಟುಕೊಳ್ಳುತ್ತದೆ. ಹಟ ಮಾಡುತ್ತದೆ. ಎಳೆದುಕೊಂಡು ಹೋಗಿ ಸ್ನಾನ ಮಾಡಿಸಬೇಕಾಗುತ್ತದೆ. ಸ್ನಾನ ಮಾಡಿಸಲು ನಿರ್ಧರಿಸಿ, ಬಚ್ಚಲುಮನೆ ಕಡೆ ಹೊರಟಳು. ಅವಳು ಕರೆಯದೆಯೇ ನಾಯಿ ಮುಂದೆ ಓಡಿತು. ಅವಳಿಗೆ ಆಶ್ಚರ್ಯವಾಯಿತು. ಸೋಪು ಹಾಕಿ ಉಜ್ಜಿ ಸ್ನಾನ ಮಾಡಿಸಿ, ಒರೆಸಿ ಪೌಡರ್ ಹಾಕಿದಳು. ನಾಯಿ ಸಂತೋಷದಿಂದ ಇತ್ತು. ಈ ಸಂತೋಷವನ್ನು ಹೇಳಲು ಗಂಡನಿಗೆ ಫೋನ್ ಮಾಡಿದಳು.

ಭಾಗ 1 : Literature: ನೆರೆನಾಡ ನುಡಿಯೊಳಗಾಡಿ; ಸೆಲ್ವಕುಮಾರಿ ಅನುವಾದಿಸಿದ ತಮಿಳು ಕಥೆ ‘ದೇವರು ಮತ್ತು ಟೈಗರ್ ಸ್ವಾಮಿ’

“ಇಲ್ಲವಲ್ಲಾ… ಅಯ್ಯ… ಮೇಲೆ ಕರೆದರು ಅಂತ ಹೋದವರು ಇನ್ನೂ ಬಂದಿಲ್ಲ, ಬಂದರೆ ಹೇಳುತ್ತೇನೆ” ಫೋನ್ ಇಟ್ಟು ತಿರುಗಿದಳು. ನಾಯಿ ದುರುಗುಟ್ಟಿಕೊಂಡು ನೋಡುತ್ತಿತ್ತು.

“ನಿನ್ನ ಒಡೆಯನ ಹತ್ತಿರವೆ ಮಾತನಾಡಿದ್ದು. ಅವರು ಇಲ್ಲವಂತೆ. ಬೆಳಿಗ್ಗೆಯೂ ಊಟ ಮಾಡದೆ ಹೋದ ಮನುಷ್ಯ ಏನು ಕೆಲಸವೋ ಏನೋ”

ನಾಯಿಯನ್ನು ನೋಡಿ ಹೇಳುತ್ತಿದ್ದಳು. ನಾಯಿಯೂ ಗಮನವಿಟ್ಟು ಕೇಳಿಸಿಕೊಳ್ಳುತ್ತಿತ್ತು. ಸೋಫಾದಲ್ಲಿ ಮಲಗಿದಂತೆಯೇ ಟಿ.ವಿ. ನೋಡುತ್ತಿದ್ದವಳು ಹಾಗೇ ನಿದ್ರೆ ಮಾಡಿಬಿಟ್ಟಳು. ಎಚ್ಚರವಾದಾಗ ಕತ್ತಲೆಯಾಗಿತ್ತು. ಬೇಗ ಬೇಗ ಎದ್ದು ರಾತ್ರಿ ಅಡುಗೆಗೆ ತಯಾರಿ ನಡೆಸತೊಡಗಿದಳು. ಟೈಗರ್ ಸ್ವಾಮಿ ಕಾಲಿಂಗ್ ಬೆಲ್ ಒತ್ತಿದನು.

ಕಂದಸ್ವಾಮಿಯ ಹೆಂಡತಿ ಬಾಗಿಲು ತೆರೆದಳು. ಬಾಲವಲ್ಲಾಡಿಸದೆ ಜೊತೆಯಲ್ಲಿಯೇ ನಾಯಿಯೂ ಬಂದು ನಿಂತಿತು. ಕಂದಸ್ವಾಮಿಗೆ ಮನಸ್ಸು ತಡೆಯಲಾಗಲಿಲ್ಲ. ಯಜಮಾನನನ್ನು ಎತ್ತಿಕೊಳ್ಳಲು ಹೋದನು. ನಾಯಿಯೂ ಅವನಿಂದ ತಪ್ಪಿಸಿಕೊಂಡು ಅವಳಿಗೆ ಅಂಟಿಕೊಂಡು ನಿಂತಿತ್ತು. ಆಕೆ ನಾಯಿಯನ್ನು ಎತ್ತಿಕೊಂಡಳು.

“ಏನೂಂದ್ರೆ… ನಮ್ಮ ಟೈಗರ್ ಎಷ್ಟು ಚೆನ್ನಾಗಿ ಇವತ್ತು ಸ್ನಾನ ಮಾಡಿತು ಗೊತ್ತಾ? ಹೇಳಿದರೆ ನೀವು ನಂಬೊಲ್ಲ” ನಾಯಿ ಟೈಗರ್ ಸ್ವಾಮಿಯನ್ನು ದುರುಗುಟ್ಟಿಕೊಂಡು ನೋಡಿತ್ತು. “ಅದು ಮಾತ್ರ ಅಲ್ಲಾರಿ. ಡೈನಿಂಗ್ ಟೇಬಲ್ ಮೇಲೆ ನಿಮ್ಮ ಕುರ್ಚಿಯಲ್ಲಿ ಕುಳಿತು ಊಟ ಮಾಡುತ್ತೀನಿ ಎಂಬ ಹಟ ಬೇರೆ”.

“ಅದೂ ನಿಮ್ಮ ತಟ್ಟೆಯಲ್ಲಿಯೇ ಊಟ ಮಾಡಬೇಕಂತೆ?” ಕಂದಸ್ವಾಮಿಯ ಹೆಂಡತಿ ಹೇಳಿಕೊಂಡೇ ಊಟವನ್ನು ತರಲು ಒಳಗೆ ಹೋದಳು. ಟೈಗರ್‌ಸ್ವಾಮಿ ನಾಯಿಯನ್ನು ಹಿಡಿದು ಎಳೆದು ಮಡಿಲಲ್ಲಿ ಕುಳ್ಳಿರಿಸಿಕೊಳ್ಳಲು ಪ್ರಯತ್ನಿಸಿದಾಗ, ಕೈಗಳನ್ನು ಕಚ್ಚುವ ಹಾಗೆ ಮಾಡಿ ಒಳಗೆ ಓಡಿತು.

ಟೈಗರ್ ಸ್ವಾಮಿ ಬಟ್ಟೆಯನ್ನು ಕಳಚಿದನು. ಅವಳು ಊಟ ಬಡಿಸಲು ತಟ್ಟೆ ತೆಗೆದು ಇಟ್ಟಳು. ನಾಯಿ ಓಡಿಹೋಗಿ ಕುರ್ಚಿ ಹತ್ತಿ ಕುಳಿತು ಅವನನ್ನು ನೋಡಿತು. ಅವನಿಗೆ ಸಂಕೋಚವಾಯಿತು.

“ನನ್ನದು ಊಟ ಆಯಿತು. ಸ್ವಲ್ಪ ಕೆಲಸ ಇದೆ ಮಲಗಲು ತಡವಾಗುತ್ತದೆ”.

ಮುಖ ಒಂದು ಥರ ಇತ್ತು, ಫೈಲ್ ತೆಗೆದುಕೊಂಡನು. ಹೀಗೆ ತನ್ನ ಗಂಡ ಒಂದು ಕ್ಷಣ ಇರುವ ಹಾಗೆ ಇನ್ನೊಂದು ಕ್ಷಣ ಇರುವುದಿಲ್ಲ ಎಂಬುದು, ಮಾತಿನ ಮೂಟೆ ಕಟ್ಟಿಕೊಂಡಿರುತ್ತಿದ್ದ ಅವ ಈಗ ಮಾತನಾಡಲು ಹೋಗುತ್ತಿರುವಂತೆ ಫೈಲ್ ತೆಗೆದುಕೊಂಡು ಕುಳಿತುಬಿಡುತ್ತಾನೆ ಎಂಬುದೂ ಆಕೆಗೆ ಬಹುದಿನಗಳ ಕೊರಗು. ಇವತ್ತೂ ಅದೇ ನಡೆದಾಗ ಮರುಮಾತು ಹೇಳದೆ ಮಲಗಲು ಹೋದಳು. ಜೊತೆಯಲ್ಲಿಯೇ ನಾಯಿಯೂ ಹೋಯಿತು.

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಭಾಗ 2 : Literature: ನೆರೆನಾಡ ನುಡಿಯೊಳಗಾಡಿ; ಪ್ರಾಣಿಯಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲೂ ಆಗುತ್ತಿರಲಿಲ್ಲ

ಈ ಕಥೆಯ ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Follow us on

Related Stories

Most Read Stories

Click on your DTH Provider to Add TV9 Kannada