ಕಂಪನಿಗಳಿಗೆ ಲಾಭ ಹೆಚ್ಚಿದರೂ ಉದ್ಯೋಗಸೃಷ್ಟಿ ಆಗಿಲ್ಲ, ವೇತನ ಹೆಚ್ಚಿಲ್ಲ: ಆರ್ಥಿಕ ಸಮೀಕ್ಷೆ ಆತಂಕ
Economic survey 2024-25: ಭಾರತದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಒಳ್ಳೆಯ ಲಾಭ ಮಾಡಿವೆ. ಆದರೆ, ಈ ಲಾಭದ ಫಲ ಉದ್ಯೋಗಸೃಷ್ಟಿ, ವೇತನದಲ್ಲಿ ಕಾಣುತ್ತಿಲ್ಲ. ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ ನೇತೃತ್ವದಲ್ಲಿ ನಡೆಸಲಾದ ಆರ್ಥಿಕ ಸಮೀಕ್ಷೆಯ ವರದಿಯಲ್ಲಿ ಈ ವಿಚಾರವನ್ನು ಗಂಭೀರವಾಗಿ ತೋರಿಸಲಾಗಿದೆ. ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸರಿಯಾಗಿ ವೇತನ ಹೆಚ್ಚಿಸಬೇಕು, ಮತ್ತಷ್ಟು ಉದ್ಯೋಗ ಸೃಷ್ಟಿಸಬೇಕು ಎಂದು ಸಲಹೆ ನೀಡಿದೆ.

ನವದೆಹಲಿ, ಜನವರಿ 31: ಒಂದು ಕಂಪನಿಗೆ ಉತ್ತಮ ಲಾಭ ಬರತೊಡಗಿದರೆ ಅದರ ಬಿಸಿನೆಸ್ ಬೆಳೆಯಬೇಕು, ಉದ್ಯೋಗಸೃಷ್ಟಿ ಹೆಚ್ಚಬೇಕು. ಆದರೆ, ಭಾರತದಲ್ಲಿ ಈ ಸಹಜ ಕ್ರಿಯೆ ಆಗುತ್ತಿಲ್ಲ. ಈ ಅಂಶವನ್ನು 2024-25ರ ಆರ್ಥಿಕ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಈ ವರದಿ ಪ್ರಕಾರ, ಭಾರತದಲ್ಲಿ ಕಾರ್ಪೊರೇಟ್ ಲಾಭ ಹೆಚ್ಚಾಗುತ್ತಿರುವಂತೆಯೇ, ಸಂಬಳ ಮತ್ತು ಉದ್ಯೋಗ ಹೆಚ್ಚಳ ಮಂದಗೊಳ್ಳುತ್ತಿರುವ ಟ್ರೆಂಡ್ ಇದೆ. ಇದು ಬಹಳ ಕಳವಳಕಾರಿ ಸಂಗತಿ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ ನೇತೃತ್ವದಲ್ಲಿ ತಯಾರಾಗಿರುವ ಆರ್ಥಿಕ ಸಮೀಕ್ಷೆಯ ವರದಿಯನ್ನು ಇಂದು ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಕಾರ್ಪೊರೇಟ್ ಸಂಸ್ಥೆಗಳ ಲಾಭ ಹೆಚ್ಚಳವು 15 ವರ್ಷದ ಗರಿಷ್ಠ ಮಟ್ಟಕ್ಕೆ ಹೋಗಿದೆ. ಹಣಕಾಸು, ಇಂಧನ, ವಾಹನ ಉದ್ಯಮಗಳಲ್ಲಿ ಹೆಚ್ಚಿನ ಲಾಭ ಆಗಿದೆ. ನಿಫ್ಟಿ 500 ಕಂಪನಿಗಳಲ್ಲಿ 2002-03ರಲ್ಲಿ ಜಿಡಿಪಿ ಮತ್ತು ಲಾಭದ ಅನುಪಾತ ಶೇ. 2.1ರಷ್ಟಿತ್ತು. 2023-24ರಲ್ಲಿ ಇದು ಶೇ. 4.8ಕ್ಕೆ ಏರಿದೆ. ಅಂದರೆ, ಈ 500 ಕಂಪನಿಗಳಿಗೆ ಬಂದಿರುವ ಆದಾಯವು ಜಿಡಿಪಿಯ ಶೇ. 4.8ರಷ್ಟಿದೆ. ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಚಿಕ್ಕವಕ್ಕಿಂತ ಲಾಭ ಗಳಿಕೆಯಲ್ಲಿ ಬಹಳ ಮುಂದಿವೆ ಎಂದು ಈ ವರದಿಯು ಕಂಡು ಹಿಡಿದಿದೆ.
ಲಾಭ ಹೆಚ್ಚಿದರೂ ಸಂಬಳ ಹೆಚ್ಚಳ ಇಲ್ಲ….
ದುರಂತದ ಸಂಗತಿ ಎಂದರೆ, 2023-24ರಲ್ಲಿ ಕಾರ್ಪೊರೇಟ್ ಸೆಕ್ಟರ್ನಲ್ಲಿ ಲಾಭ ಶೇ. 22.3ರಷ್ಟು ಹೆಚ್ಚಿದೆ. ಅದೇ ಹೊತ್ತಲ್ಲಿ ಉದ್ಯೋಗಸೃಷ್ಟಿ ಕೇವಲ 1.5ರಷ್ಟಾಗಿದೆ. ಉದ್ಯೋಗಿಗಳಿಗೆ ಕಂಪನಿಗಳು ಮಾಡುವ ವೆಚ್ಚದಲ್ಲಿ ಹೆಚ್ಚಿನ ಮಟ್ಟದ ಏರಿಕೆ ಆಗಿಲ್ಲ. ಶೇ. 17ರಷ್ಟಿದ್ದ ವೆಚ್ಚವನ್ನು ಶೇ. 13ಕ್ಕೆ ಇಳಿಸಲಾಗಿದೆ. ಲಾಭ ಹೆಚ್ಚಾದರೂ ಕಂಪನಿಗಳು ಮತ್ತಷ್ಟು ವೆಚ್ಚ ಕಡಿತಕ್ಕೆ ಮುಂದಾಗಿವೆ ಎಂಬ ಆತಂಕಕಾರಿ ಸಂಗತಿಯನ್ನು ಈ ವರದಿಯಲ್ಲಿ ಹೈಲೈಟ್ ಮಾಡಲಾಗಿದೆ.
ಅತಿಹೆಚ್ಚು ಉದ್ಯೋಗಗಳು ಕಾರ್ಪೊರೇಟ್ ಸೆಕ್ಟರ್ನಲ್ಲಿವೆ. ಈ ಸಂಸ್ಥೆಗಳು ಗಳಿಸಿದ ಲಾಭದ ಫಲವು ಸರಿಯಾಗಿ ಕಾರ್ಮಿಕರಿಗೆ ವರ್ಗಾವಣೆ ಆಗಿಲ್ಲದಿರುವುದು ಗೊತ್ತಾಗುತ್ತಿದೆ. ಜನರ ಕೈಯಲ್ಲಿ ಹೆಚ್ಚು ಹಣ ಸೇರದಿದ್ದರೆ ಆರ್ಥಿಕ ಬೆಳವಣಿಗೆಗೆ ಕಷ್ಟವಾಗುತ್ತದೆ. ಹೀಗಾಗಿ, ಆರ್ಥಿಕ ಸಮೀಕ್ಷೆಯು ಈ ಅಂಶದ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ನ್ಯಾಯಯುತವಾಗಿ ಆದಾಯ ಹಂಚಿಕೆ ಮಾಡಲು, ಉದ್ಯೋಗಸೃಷ್ಟಿ ಹೆಚ್ಚಲು ಮತ್ತು ವೇತನ ಹೆಚ್ಚಿಸಲು ಅನುವಾಗುವ ರೀತಿಯಲ್ಲಿ ನೀತಿ ರೂಪಿಸಬೇಕು ಎಂದು ಆರ್ಥಿಕ ಸಮೀಕ್ಷೆಯು ಸಲಹೆ ನೀಡಿದೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ