Literature: ನೆರೆನಾಡ ನುಡಿಯೊಳಗಾಡಿ; ಪ್ರಾಣಿಯಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲೂ ಆಗುತ್ತಿರಲಿಲ್ಲ

Literature: ನೆರೆನಾಡ ನುಡಿಯೊಳಗಾಡಿ; ಪ್ರಾಣಿಯಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲೂ ಆಗುತ್ತಿರಲಿಲ್ಲ
ತಮಿಳು ಲೇಖಕ ಮ. ರಾಜೇಂದ್ರನ್, ಅನುವಾದಕಿ ಸೆಲ್ವಕುಮಾರಿ

Tamil Story of M Rajendran : “ಅವರನ್ನು ಏಕೆ ಸಾಯಿಸುತ್ತೀಯಾ? ಅವರು ನಿನ್ನ ಯಜಮಾನ ಅಲ್ಲವಾ? ಅಷ್ಟರಲ್ಲಿಯೇ ಯಜಮಾನನ ಬಗೆಗಿನ ವಿಶ್ವಾಸ ಕೊಲೆಯ ಹಂತಕ್ಕೆ ಬಂದುಬಿಟ್ಟಿತು, ನೋಡಿದೆಯಾ?”

ಶ್ರೀದೇವಿ ಕಳಸದ | Shridevi Kalasad

|

Apr 01, 2022 | 1:21 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : “ಇದು ನಿನಗೆ ಹೊಸದು. ಹಾಗೆ ಅನ್ನಿಸುತ್ತೆ. ಕಾಲ ಕಳೆದಂತೆ ಮನುಷ್ಯರು ನಿನಗೆ ಇದನ್ನು ಸಹಜವಾಗಿಸಿಬಿಡ್ತಾರೆ. ಸರಿ ಅಂತ ನಿನಗೇ ಅನ್ನಿಸುವ ಹಾಗೆ ಮಾಡಿಬಿಡುತ್ತಾರೆ. ನೀನು ಸಹಿಸಿಕೊಳ್ಳುವುದು ಮಾತ್ರವಲ್ಲ ಸರಿ ಎಂದು ವಾದಿಸುತ್ತೀಯಾ”. “ಇಲ್ಲ ದೇವರೆ, ಹೀಗೆ ಅವರು ನಾಯಿಯಾಗಿಯೂ, ನಾನು ಅವರಾಗಿಯೂ ಇರಲು ನಾನು ಒಪ್ಪಲಾರೆ!” “ಮತ್ತೆ ಏನು ಮಾಡುತ್ತೀಯಾ?” “ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ನನ್ನನ್ನು ಮಾನವನನ್ನಾಗಿ ಮಾಡಿದ್ದು ಒಳ್ಳೆಯದಾಯಿತು. ಪ್ರಾಣಿಯಾಗಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳಲೂ ಆಗುತ್ತಿರಲಿಲ್ಲ.” “ಓಹೋ…! ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯ ಎಂದು ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ? ತಿಳಿಯದೆ ಮಾತನಾಡಬೇಡ. ನಿನ್ನಿಂದ ಸಾಧ್ಯವಿಲ್ಲ”. “ಅದು ನನಗೆ ಗೊತ್ತಿಲ್ಲ. ನನ್ನ ಹಾಗೆ ಯಾರಿಗೂ ಆಗಿರಲಿಕ್ಕಿಲ್ಲ. ಒಂದು ವೇಳೆ ಆಗಿದ್ದರೆ ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದರು.”

ಕಥೆ : ದೇವರು ಮತ್ತು ಟೈಗರ್ ಸ್ವಾಮಿ | ತಮಿಳು ಮೂಲ ಎಂ. ರಾಜೇಂದ್ರನ್ | ಕನ್ನಡಕ್ಕೆ : ಸೆಲ್ವಕುಮಾರಿ

(ಭಾಗ 2)

“ಹಾಗಲ್ಲಪ್ಪ. ನಿನ್ನ ಹಾಗೆ ಮಾತ್ರವಲ್ಲ. ನಿನಗಿಂತ ಶೋಚನೀಯ ಸ್ಥಿತಿ ಇದ್ದಾಗಲೂ ಯಾರೂ ಜೀವ ಬಿಡಲು ತಯಾರಾಗಿಲ್ಲ ಎಂಬುದೇ ನಿಜ”.

“ಅದು ನನಗೆ ಗೊತ್ತಿಲ್ಲ. ದೇವರೇ, ನಾನು ಜೀವಂತವಾಗಿ ಇರಬೇಕೂಂದ್ರೆ ನನ್ನನ್ನು ನಾಯಿಯಾಗಿಯೂ ಅವರನ್ನು ಮಾನವನನ್ನಾಗಿಯೂ ಮಾಡಿಬಿಡು. ಇಲ್ಲವಾದರೆ ಅವರನ್ನು ಕೊಂದುಬಿಟ್ಟು ನಾನೂ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.”

“ಅವರನ್ನು ಏಕೆ ಸಾಯಿಸುತ್ತೀಯಾ? ಅವರು ನಿನ್ನ ಯಜಮಾನ ಅಲ್ಲವಾ? ಅಷ್ಟರಲ್ಲಿಯೇ ಯಜಮಾನನ ಬಗೆಗಿನ ವಿಶ್ವಾಸ ಕೊಲೆಯ ಹಂತಕ್ಕೆ ಬಂದುಬಿಟ್ಟಿತು ನೋಡಿದೆಯಾ?”

“ಯಜಮಾನನ ಬಗೆಗಿನ ವಿಶ್ವಾಸದಿಂದಲೇ ಕೊಲ್ಲಬೇಕೆಂದುಕೊಂಡಿದ್ದೇನೆ.”

“ಏಕೆ?”

‘‘ನನ್ನ ಯಜಮಾನ ನಾಯಿಯಾಗಿ ಇರಕೂಡದು.’’

ದೇವರಿಗೆ ಗೊಂದಲವಾಯಿತು. ಅವ ಏನೋ ಯೋಚಿಸಿದರೆ ಇಲ್ಲಿ ಏನೇನೋ ನಡೆಯುತ್ತಿದೆ.

“ಸರಿ . ನಾನು ಕೊಟ್ಟ ವರವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ನೀನೂ ನಿನ್ನ ಯಜಮಾನನೂ ಜೀವ ಬಿಡಲು ಒಪ್ಪುತ್ತೇನೆ.’’

‘‘ಹಾಗೆಂದರೆ?’’

ಒಂದು ತಿದ್ದುಪಡಿ ಮಾಡುತ್ತೇನೆ. ಅದಕ್ಕಿಂತ ಹೆಚ್ಚಿಗೆ ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ. “ನೀನು ಮನುಷ್ಯನಾಗಿಯೂ ಅವರು ನಾಯಿಯಾಗಿಯೂ ಒಂದೇ ಒಂದು ದಿವಸ ಇದ್ದು ನೋಡಿ. ನಾಳೆ ಬೆಳಿಗ್ಗೆ ಇದೇ ವೇಳೆಯಲ್ಲಿ ಇದೇ ಜಾಗಕ್ಕೆ ನಾನು ಮತ್ತೆ ಬರುತ್ತೇನೆ ಆಗ, ಈ ವರ ನಿನಗೆ ಒಪ್ಪಿಗೆಯಾಗಲಿಲ್ಲವೆಂದರೆ, ಹಿಂದಿನಂತೆಯೇ ಬದಲಾಯಿಸಿಬಿಡುತ್ತೇನೆ ಒಪ್ಪಿಗೆ ತಾನೇ?”

“………….”

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಮರಾಠಿ ಕಥೆಗಾರ ಜಿಎ ಕುಲಕರ್ಣಿಯವರ ‘ಚಂದ್ರಾವಳ’ ಕಥೆ

“ಬೇರೆ ದಾರಿಯಿಲ್ಲ. ಇದಕ್ಕೆ ನೀನು ಒಪ್ಪಿಕೊಳ್ಳಲೇಬೇಕು.”

“ಸರಿ ದೇವರೇ. ನಾಳೆ ಬೆಳಿಗ್ಗೆ ಖಂಡಿತ ಬರಬೇಕು.”

“ಬರುತ್ತೇವೆ. ಆದರೆ ಒಂದು ನಿಬಂಧನೆ.”

“ಹೇಳು ದೇವರೆ!”

“ನೀನು ಅವರಾಗಿರುವುದು ಅವರು ನೀನಾಗಿರುವುದು ನಿನಗೆ ಕಂದಸ್ವಾಮಿಗೆ ಮಾತ್ರ ಗೊತ್ತು. ಕಂದಸ್ವಾಮಿಗೆ ಗೊತ್ತಿದ್ದರೂ ಯಾರಿಗೂ ಹೇಳಲು ಸಾಧ್ಯವಿಲ್ಲ. ನೀನು ಇದನ್ನು ಯಾರಿಗೂ ಹೇಳಬಾರದು.”

“ಸರಿ ದೇವರೇ”

“ನೀನು ಮನುಷ್ಯನಾಗಿಯೇ ಇರಬೇಕೆಂದು ಬಯಸಿದರೆ ನಾಯಿಯಾಗಿರುವ ಕಂದಸ್ವಾಮಿಯನ್ನು ಕೊಂದುಬಿಡಬಾರದು”

“ಹೇಗೆ ದೇವರೆ? ಯಜಮಾನನಿಗೆ ದ್ರೋಹ ಮಾಡುತ್ತೀನಾ?”

ದೇವರು ಮುಗುಳ್ನಗೆಯೊಂದಿಗೆ ಫೋಟೊದೊಳಗೆ ಮಾಯ. ಊದುಬತ್ತಿ ಉರಿದು ಬೂದಿಯಾಗಿ ಕಡ್ಡಿಗಳು ಮುರಿದಿದ್ದವು. ತುಪ್ಪದದೀಪ ಅಲುಗಾಡುತ್ತಿತ್ತು. ಹಾಲಿನಲ್ಲಿ ಫೋನು ಕರೆಯಿತು. ಪೂಜೆಯ ಕೋಣೆ ಬಿಟ್ಟು ಟೈಗರ್ ಸ್ವಾಮಿ ಹೊರಗೆ ಬಂದನು. ಅವನಿಗಿಂತ ಮುಂಚೆ ಕಂದಸ್ವಾಮಿನಾಯಿ ಯಾವುದೊ ನೆನಪಿನಲ್ಲಿ ಟೆಲಿಫೋನ್ ಕಡೆ ಹೋಗಿ ನಿಂತಿತು. ಟೈಗರ್‌ಸ್ವಾಮಿ ಫೋನನ್ನು ಎತ್ತಿಕೊಂಡನು. ಕಾಫಿ ಬಿಸ್ಕೆಟ್ಟಿನೊಡನೆ ಬಂದ ಕಂದಸ್ವಾಮಿಯ ಹೆಂಡತಿ, ಕಂದಸ್ವಾಮಿ ಫೋನಿನಲ್ಲಿ ಮಾತನಾಡುತ್ತ ಇದ್ದುದನ್ನು ನೋಡಿ, ಟೀಪಾಯಿ ಮೇಲಿಟ್ಟು ಅಡುಗೆಕೋಣೆಗೆ ಹೋದಳು.

“ಸರಿ ರೀ ಹಾಗೇ ಆಗಲಿ. ತಕ್ಷಣ ಬಂದುಬಿಡುತ್ತೇನೆ.”

ರಿಸೀವರನ್ನು ಕೆಳಗಿಟ್ಟು ಟೈಗರ್‌ಸ್ವಾಮಿ ತಿರುಗಿದಾಗ ಕಂದಸ್ವಾಮಿ ಕಾಫಿ ಲೋಟಕ್ಕೆ ನಾಲಗೆ ಹಾಕಿ ಬಿಸಿ ತಾಳಲಾರದೆ ಮುಖ ಕಿವುಚಿತು. ಟೈಗರ್ ಸ್ವಾಮಿ ಬಿಸ್ಕೆಟ್ ತೆಗೆದುಕೊಂಡು ಕಚ್ಚಿದನು. ಇಟ್ಟು ಬಂದ ಕಾಫಿಯ ಬಗ್ಗೆ ನೆನಪಿಸಲು ಕಂದಸ್ವಾಮಿ ಹೆಂಡತಿ ಅಡುಗೆ ಕೋಣೆಯಿಂದ ಹೊರಬಂದಳು.

“ಏನ್ರೀ ಇದು ನಾಯಿಗೆ ಇಟ್ಟ ಬಿಸ್ಕೆಟ್ಟನ್ನು ನೀವು ತೆಗೆದುಕೊಂಡಿದ್ದೀರಾ? ನಿಮಗೆ ಬೇಕಾದರೆ ಬೇರೆ ಬಿಸ್ಕೆಟ್ ತರುತ್ತೇನೆ.”

ಬೇರೆ ಎರಡು ಬಿಸ್ಕೆಟ್‌ನ್ನು ಕಂದಸ್ವಾಮಿ ಹೆಂಡತಿ ಚಾಚಿದಳು. ಟೈಗರ್ ದೇವರು ಬೆರಳು ಸೋಕಿಸದೆ ತೆಗೆದುಕೊಂಡನು. ರುಚಿ ಬೇರೆಯಾಗಿತ್ತು. ಅವನಿಗೆ ನಗುಬಂತು. ಏನೋ ಒಂದು ಸವರಿದ ಹಾಗೆ ಟೈಗರ್ ಸ್ವಾಮಿ ಹಿಂತಿರುಗಿ ನೋಡಿದನು. ಯಜಮಾನ ನೋಡುವಾಗೆಲ್ಲ ಬಾಲ ಅಲ್ಲಾಡಿಸಿದ ಅಭ್ಯಾಸ . ಬಾಲ ಇಲ್ಲ. ಇರಬೇಕಾದ ಜಾಗವನ್ನು ಮುಟ್ಟಿ ನೋಡಿಕೊಂಡನು. ಮನುಷ್ಯನಾದುದರಿಂದ ಮುಟ್ಟಿ ನೋಡಿಕೊಳ್ಳಲು

ಸಾಧ್ಯವಾಗದ ಸಂತೋಷ ಮುಖದಲ್ಲಿ ಕಾಣಿಸಿತು. ಹೀಗೆ ಅಂದುಕೊಳ್ಳುವುದೇ ಯಜಮಾನನಿಗೆ ದ್ರೋಹ ಬಗೆಯಲು ಅವಕಾಶಮಾಡಿಕೊಟ್ಟು ಬಿಡುತ್ತದೋ ಎಂದು ಅಂಜಿದನು. ಕಂದಸ್ವಾಮಿಯ ಹೆಂಡತಿ ಬೆಳಗಿನ ತಿಂಡಿಯ ತಯಾರಿಯಲ್ಲಿದ್ದರು. ಟೈಗರ್ ಸ್ವಾಮಿ ತಿಂಡಿಯನ್ನು ತಪ್ಪಿಸಲು ತೀರ್ಮಾನಿಸಿದನು. ಅವಸರವಾಗಿ ಹೊರಟನು.

“ಏನ್ರೀ ತಿಂಡಿ ತಿನ್ನದೆ ಹೋಗುತ್ತಿದ್ದೀರಾ?”

“ಅವಸರದ ಕೆಲಸ. ತಕ್ಷಣ ಬರಲು ಹೇಳಿದ್ದಾರೆ ನಾನು ಹೋಗುತ್ತೇನೆ.”

ಕಂದಸ್ವಾಮಿಯ ಹೆಂಡತಿಗೆ ಇದೇನು ಹೊಸದಲ್ಲ. ತುಂಬಾ ಸಲ ಕೆಲಸ ಕೆಲಸ ಅಂತ ತಿನ್ನುತ್ತಿರುವಾಗಲೇ, ತಿನ್ನದೆಯೇ ಅವಸರವಾಗಿ ಹೋಗಿದ್ದುಂಟು.

“ಮಧ್ಯಾಹ್ನ ಊಟಕ್ಕಾದರೂ ಡ್ರೈವರ್​ನನ್ನು ಕಳುಹಿಸಿ ಊಟ ಕಳುಹಿಸುತ್ತೇನೆ.”

ಹಸಿವಾದಾಗ ಊಟ ಎಂಬುದು ಮರೆಯಾಗಿ ಸಮಯವಿದ್ದಾಗ ಊಟ ಎಂದಾಗಿರುವುದರ ಬಗ್ಗೆ ಯೋಚಿಸಿದನು. “ಬೇಡ ನಾನು ಎಲ್ಲಿರುತ್ತೇನೆಂದು ಗೊತ್ತಿಲ್ಲ. ದಾರಿಯಲ್ಲಿ ಎಲ್ಲಾದರೂ ಮಾಡಿಕೊಳ್ಳುತ್ತೇನೆ”.

ಡ್ರೈವರ್ ಬಂದು ಬ್ರೀಫ್​ಕೇಸ್ ತೆಗೆದುಕೊಂಡು ಹೊರಟನು. ಟೈಗರ್ ಸ್ವಾಮಿ ಕಳಿಸಲೆಂದು ಹೊರಗೆ ಬಾಗಿಲಿಗೆ ಬಂದ. ಕಂದಸ್ವಾಮಿಯ ಹೆಂಡತಿಯನ್ನು ಯಜಮಾನ ನಾಯಿ ಸುತ್ತಿ ಸುತ್ತಿ ಬಂತು. ಟೈಗರ್‌ಸ್ವಾಮಿಗೆ ನಿದ್ದೆ ತಡೆಯಲಾಗಲಿಲ್ಲ. ಬೇಗ ಬೇಗ ಹೋಗಿ ಕಾರಿನಲ್ಲಿ ಕುಳಿತುಕೊಂಡನು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 1 : Literature: ನೆರೆನಾಡ ನುಡಿಯೊಳಗಾಡಿ; ಸೆಲ್ವಕುಮಾರಿ ಅನುವಾದಿಸಿದ ತಮಿಳು ಕಥೆ ‘ದೇವರು ಮತ್ತು ಟೈಗರ್ ಸ್ವಾಮಿ’

ಈ ಕಥೆಯ ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Follow us on

Related Stories

Most Read Stories

Click on your DTH Provider to Add TV9 Kannada