Literature: ನೆರೆನಾಡ ನುಡಿಯೊಳಗಾಡಿ; ಮರಾಠಿ ಕಥೆಗಾರ ಜಿಎ ಕುಲಕರ್ಣಿಯವರ ‘ಚಂದ್ರಾವಳ’ ಕಥೆ

G.A.Kulkarni‘s Short Story : ಆ ಶೆಟವಿಯ ಮನಸ್ಸಿನ ಓಟ ಬೇರೆಯೇ ಆಗಿದ್ದಿತು. ಆ ಗಾಂಜಾಬಡಕ ಬಾಬೂನಲ್ಲಿ ಏನು ಕಂಡಳೋ ಯಾರಿಗೆ ಗೊತ್ತು? ಒಂದು ದಿನ ತನ್ನ ಗಂಟುಮೂಟೆ ಕಟ್ಟಿಕೊಂಡು ಬಾಬೂನ ಕೋಣೆಗೆ ಹೋಗಿ ಇದ್ದುಬಿಟ್ಟಳು.

Literature: ನೆರೆನಾಡ ನುಡಿಯೊಳಗಾಡಿ; ಮರಾಠಿ ಕಥೆಗಾರ ಜಿಎ ಕುಲಕರ್ಣಿಯವರ ‘ಚಂದ್ರಾವಳ’ ಕಥೆ
ಲೇಖಕರಾದ ಜಿ. ಎ. ಕುಲಕರ್ಣಿ ಮತ್ತು ಡಾ. ಜಿ. ಎಸ್. ಆಮೂರ
Follow us
ಶ್ರೀದೇವಿ ಕಳಸದ
|

Updated on:Mar 11, 2022 | 10:03 AM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಜಿ.ಎ.ಕುಲಕರ್ಣಿ (G. A. Kulkarni 1923-1987) ಅತ್ಯುತ್ತಮ ಭಾರತೀಯ ಕಥೆಗಾರರಲ್ಲಿ ಒಬ್ಬರು. ತಮ್ಮ ಕಥೆಗಳಿಂದ ಮಾತ್ರವಲ್ಲ ವಿಭಿನ್ನ ವ್ಯಕ್ತಿತ್ವದಿಂದಲೂ ಅವರು ಪ್ರಸಿದ್ಧರಾಗಿದ್ದರು: ಯಾರನ್ನೂ ಸ್ವತಃ ಭೆಟ್ಟಿಯಾಗಲು ಹೋದವರಲ್ಲ. ಅವರನ್ನು ಹುಡುಕಿಕೊಂಡು ಬಂದವರನ್ನೂ ಭೆಟ್ಟಿಯಾದವರಲ್ಲ. ಯಾವ ಸಭೆಸಮಾರಂಭಗಳಿಗೂ ಯಾವುದೇ ಪ್ರಶಸ್ತಿಯನ್ನೂ ಸ್ವೀಕರಿಸಲು ಹೋದವರಲ್ಲ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅತಿಯೆನ್ನಿಸುವಷ್ಟು ಗೌಪ್ಯವನ್ನು ಕಾಪಾಡಿಕೊಂಡು ಬಂದವರು. ಹಾಗಾಗಿ ಬಹುತೇಕ ಜನರಿಗೆ ಅವರ ಕತೆಗಳ ಬಗ್ಗೆ ಗೊತ್ತೇ ಹೊರತು ಅವರ ವ್ಯಕ್ತಿತ್ವ, ಜೀವನದ ಬಗ್ಗೆ ತಿಳಿದಿರುವುದು ಬಹಳ ಕಡಿಮೆ. ನೊಬೆಲ್ ಪುರಸ್ಕೃತ ಲೇಖಕ ವಿಲಿಯಂ ಗೋಲ್ಡಿಂಗ್‍ರ ಪುಸ್ತಕವೊಂದನ್ನು ಜಿಎ ಅನುವಾದಿಸಿದ್ದರು. ಅದರ ಬಿಡುಗಡೆಗೆ ಗೋಲ್ಡಿಂಗ್ ಪುಣೆಗೆ ಬಂದಿದ್ದರು. ಗೋಲ್ಡಿಂಗ್‍ರ ಉಪಸ್ಥಿತಿ ಇತ್ಯಾದಿಗಳಿಂದಾಗಿ ಸಂಘಟಕರಿಗೆ ಜಿಎ ಬರುವರೆಂಬ ವಿಶ್ವಾಸವಿತ್ತು. ಮರಾಠಿ ಸಾಹಿತ್ಯಪ್ರಿಯರು ಜಿಎ ಅವರನ್ನು ಕಾಣಲು ಉತ್ಸುಕರಾಗಿದ್ದರು. ಆದರೆ ಈ ಸಭೆ ಅವರಿದ್ದ ಮನೆಗೆ ಅತಿ ಹತ್ತಿರವೇ ಇದ್ದರೂ ಜಿಎ ಅಲ್ಲಿಗೆ ಹೋಗಲಿಲ್ಲವಂತೆ! ಪ್ರಸ್ತುತ ಕಥೆಯನ್ನು ಅವರು ಬರೆದಿದ್ದು 1956ರಲ್ಲಿ.

ಕಥೆ : ಚಂದ್ರಾವಳ | ಮರಾಠಿ : ಜಿ. ಎ. ಕುಲಕರ್ಣಿ | ಕನ್ನಡಕ್ಕೆ : ಜಿ. ಎಸ್. ಆಮೂರ | ಸೌಜನ್ಯ : ದೇಶಕಾಲ ತ್ರೈಮಾಸಿಕ ಪತ್ರಿಕೆ

(ಭಾಗ 1)

ಬಸವಣ್ಣನ ಗುಡಿಯಲ್ಲಿ ಹಾಸಿದಂತೆ ಹರವಿದ ಬಿಸಿಲು ಸರಿಯುತ್ತ ಹೊರಗೆ ಬಂದಿತು ಮತ್ತು ಆಮೆ ಕೆತ್ತನೆಯಿದ್ದ ಕಲ್ಲಿನ ಪಾವಟಿಗೆಯ ಗುಂಟ ಕೆಳಗಿಳಿಯಿತು. ಹತ್ತು ಹೊಡೆದಿದ್ದರೂ ಸಣ್ಯಾ ವಿಮನಸ್ಕನಾಗಿ ಇನ್ನೂ ಗೋಡೆಗೆ ಆತುಕೊಂಡು ಕುಳಿತುಕೊಂಡಿದ್ದ. ಅವನ ಸುತ್ತಲೂ ಸತ್ತ ಮಳೆಹುಳಗಳಂತೆ ಬೀಡಿಗಳ ತುಂಡುಗಳು ಹರಡಿದ್ದವು. ನಿನ್ನೆ ಬೆಳಿಗ್ಗೆ ಗೌರಿ ಸತ್ತಳು ಎನ್ನುವ ಅರಿವು ಅವನು ಏನು ಮಾಡಿದರೂ ಕಿವುಡಾಗಲೊಲ್ಲದು ಗೌರಿಯ ನೆನಪಾದ ಕೂಡಲೇ ಅವನ ಮನಸ್ಸು ಉರಿಯುತ್ತಿತ್ತು ಹಾಗೂ ನಾಚಿಕೆಯಿಂದ ತ್ರಸ್ತವಾಗುತ್ತಿತ್ತು. ಆದರೆ ಈ ಎಲ್ಲ ಚಿಂದಿಗಳ ಗಂಟಿನ ಬುಡಕ್ಕೆ ತೀಕ್ಷ್ಣ ಆಯುಧದಂತೆ ಗೆರೆ ಕೊರೆಯುವ ಸರಳ ದುಃಖವೂ ಇದ್ದಿತು. ಗರ್ಭಗುಡಿಯಲ್ಲಿ ದೀಪ ಹಚ್ಚಿದಂತೆ ಹೊಳೆಯುವ ಟೋಪಿನ ಸೀರೆಯುಟ್ಟು ಅವಳು ಅವನ ಆಯುಷ್ಯದಲ್ಲಿ ಬಂದಿದ್ದಳು. ಅವಳ ಕಪ್ಪು, ಗಟ್ಟಿಮುಟ್ಟಾದ ನುಣುಪು ಶರೀರ ಅವನ ಕಣ್ಣುಗಳಿಗೆ ಹೊಸ ಹೊಳಪು ಕೊಟ್ಟಿದ್ದಿತು. ಆದರೆ ಇದೆಲ್ಲ ಸ್ವಲ್ಪ ದಿನಗಳಲ್ಲಿಯೇ ಮುಗಿದುಹೋಗಿತ್ತು. ಈಗ ಸಣ್ಯಾನಿಗೆ ಇದೆಲ್ಲದರ ನೆನಪು ಕೂಡ ಬೇಡೆನಿಸಹತ್ತಿತ್ತು. ಆದರೆ ನಿನ್ನೆ ಎರಡು ಗಂಟೆಗಳ ಕಾಲ ತಡಫಡಿಸಿ ಗೌರಿ ಸತ್ತಿದ್ದಳು. ಇದರಿಂದಾಗಿ ಎಲ್ಲವೂ ಮತ್ತೆ ಜೀವಂತವಾದಂತಾಗಿತ್ತು. ಹಾಗೂ ಸಣ್ಯಾನ ದುಃಖದ ಸುರುಳಿ ಮತ್ತೆ ಬಿಚ್ಚಿಕೊಂಡಿತ್ತು.

ಈಗ ಹತ್ತು ಹೊಡೆದುಹೋಗಿತ್ತು ಹಾಗೂ ಪಕ್ಕದ ಕೋಣೆಯಲ್ಲಿ ಗಾವಠೀ ಶಾಲೆ ಮಕ್ಕಳಿಂದ ತುಂಬುವುದಿತ್ತು. ತನ್ನ ರುಮಾಲದ ತುದಿಯಿಂದ ಬೀಡಿ ತುಂಡುಗಳನ್ನು ಗಟಾರಕ್ಕೆ ನೂಕಿ ಸಣ್ಯಾ ಅಲ್ಲಿಂದೆದ್ದ. ಆದರೆ ಅವನ ಎದುರಿನಿಂದಲೇ ಅವನ ಅಣ್ಣ, ಗಾಂಜೀಬಡಕ ಅಣ್ಣ ಬರುತ್ತಿದ್ದ. ಅವನನ್ನು ನೋಡುತ್ತಲೇ ಇದುವರೆಗೆ ಹತ್ತಿಕ್ಕಿಟ್ಟಿದ್ದ ಸಿಟ್ಟು ಸಣ್ಯಾನ ದೇಹದ ತುಂಬ ಪಸರಿಸಿತು. ಹಾಗೂ ಅವನು ತನ್ನ ತುಟಿಗಳನ್ನು ಗಟ್ಟಿಯಾಗಿ ಒತ್ತಿ ಹಿಡಿದ. ಬಾಬೂ ಬಂದ ಮತ್ತು ಮೈಮುದುಡಿಕೊಂಡು ಒಂದು ಮೂಲೆಯಲ್ಲಿ ಕುಳಿತು ಮೊಳಕಾಲ ಮೇಲೆ ಗದ್ದ ಊರಿದ. ಸಣ್ಯಾ ಒಂದು ಕ್ಷಣ ಅವನನ್ನು ಉರಿಯುವ ತಿರಸ್ಕಾರದಿಂದ ನೋಡಿದ. ಆದರೆ ತೋಯಿಸಿಕೊಂಡ ಬೆಕ್ಕಿನ ಬಗ್ಗೆ ಅನಿಸುವಂತೆ ಅವನ ಬಗ್ಗೆ ಸ್ವಲ್ಪ ಸಹಾನುಭೂತಿಯೂ ಎನಿಸಿತು. ಇಷ್ಟು ದಿವಸಗಳ ಹೊಲಸು ಹದಗೆಟ್ಟ ಸಹವಾಸದ ನಂತರವೂ ಅವನ ಮನಸ್ಸಿನಲ್ಲಿ ಗಾಂಜಾಬಡಕ ಬಾಬೂವಿನ ಬಗ್ಗೆ ತನ್ನವನೆಂಬ ಭಾವನೆ ಅಳಿದಿರಲಿಲ್ಲ.

ಸಣ್ಣವನಿದ್ದಾಗ ಬಾಬೂನಿಗೆ ವ್ಯಾಯಾಮದಲ್ಲಿ ಬಹಳ ಆಸಕ್ತಿ ಇತ್ತು. ಗುಡಿಯ ಹಿಂದೆಯೇ ಕಿಟಕಿಯಷ್ಟು ಚಿಕ್ಕ ಬಾಗಿಲಿನ ಗರಡಿಮನೆಯಿತ್ತು. ಗುಹೆಯಂಥ ಆ ಗರಡಿಯ ಮನೆಯಲ್ಲಿ ಬಾಬೂವಿನ ಗಟ್ಟಿ ತೋಳುಗಳ ಚಪ್ಪರಿಕೆಯ ಶಬ್ದ ಕೇಳಿದಾಗಲೆಲ್ಲ ಸಣ್ಯಾನ ಮನಸ್ಸು ಬುಟ್ಟಿಯಷ್ಟು ಅಗಲವಾಗುತ್ತಿತ್ತು. ಹಸಿಮಣ್ಣಿನ ವಾಸನೆಯುಳ್ಳ ಕತ್ತಲೆ ಕಪ್ಪುಗಟ್ಟಿದ ದೀಪದ ಹತ್ತಿರ ಹುಳುವೊಂದು ಆಹಾರ ಹುಡುಕಿಕೊಂಡು ಬಂದಂತೆ ಭಾಸವಾಗುತ್ತಿತ್ತು. ಬಾಬೂ ತನ್ನ ತೋಳು ಚಪ್ಪರಿಸಿಕೊಂಡಾಗ ನಗಾರಿ ಬಾರಿಸಿದಂತೆ ಆ ಕತ್ತಲೆಯಿಂದ ಕಡಕಡೀತ ಶಬ್ದ ಹೊರಡುತ್ತಿತ್ತು. ಆಮೇಲೆ ಏನಾಯಿತೋ ಯಾರಿಗೆ ಗೊತ್ತು? ಇವನೊಂದು ಹೇಳಿದರೆ ಇನ್ನೊಬ್ಬ ಬೇರೆಯೇ ಹೇಳುತ್ತಾನೆ. ಬಾಬೂ ವ್ಯಾಯಾಮ ಬಿಟ್ಟುಬಿಟ್ಟ. ತನ್ನ ಕೊರಳೊಳಗಿನ ತಾಯಿತ ಸಣ್ಯಾನ ಕೊರಳಿಗೆ ಕಟ್ಟಿದ. ಈಗ ಅವನ ಎದೆ ಗೂಡುಗಟ್ಟಿದಂತಾಗಿತ್ತು. ಜಡೆಯಂತೆ ಹುಚ್ಚುಚ್ಚಾಗಿ ಬೆಳೆದ ಕೂದಲು ಯಾವಾಗಲೂ ಅವನ ಕೆಂಪು ಕಣ್ಣುಗಳ ಮೇಲೆ ಬಿದ್ದಿರುತ್ತಿತ್ತು. ಬಿಟ್ಟೂಬಿಡದ ಗಾಂಜಾ ಸೇವನೆಯಿಂದ ಅವನ ಕಣ್ಣು ಸೇದಿ ಹೋಗಿದ್ದವು. ಗಟ್ಟಿಯಾಗಿ ಕೆಮ್ಮುವುದು ಶುರುವಾಯಿತೆಂದರೆ ಅವನ ಎಲುಬುಗಳು ಕಡೆದು ತೊರೆದಂತೆ ಹೊರಬರುತ್ತಿದ್ದವು ಹಾಗೂ ಹದ್ದಿನ ರೆಕ್ಕೆಗಳಂತೆ ಅವನ ಕೂದಲು ಮೇಲೆ ಕೆಳಗೆ ಹಾರಾಡುತ್ತಿತ್ತು. ಪ್ರಾಣ ಕಣ್ಣುಗಳಲ್ಲಿ ಬಂದು ನಿಲ್ಲುತ್ತಿತ್ತು.

ಸಣ್ಯಾನ ಮದುವೆಯಾಗಿ ಗೌರಿ ಮನೆಗೆ ಬಂದಿದ್ದೇನೋ ನಿಜ. ಆದರೆ ಅವಳು ಅವನೊಟ್ಟಿಗಿದ್ದದ್ದು ಆರೇಳು ತಿಂಗಳು ಮಾತ್ರ. ಸಣ್ಯಾ ಹುರುಪಿನಿಂದ ಅವಳಿಗೆ ಜರೀ ಅಂಚಿನ ಚೌಕಡೀ ಸೀರೆ ಹಾಗೂ ಬೆಳ್ಳಿಯ ತೋಳಬಂದಿ ತಂದುಕೊಟ್ಟಿದ್ದ ಹಾಗೂ ಅವಳನ್ನು ಸಂತೋಷಪಡಿಸಲು ಪ್ರಯತ್ನಿಸಿದ್ದ. ಆದರೆ ಆ ಶೆಟವಿಯ ಮನಸ್ಸಿನ ಓಟ ಬೇರೆಯೇ ಆಗಿದ್ದಿತು. ಅವಳು ಆ ಗಾಂಜಾಬಡಕ ಬಾಬೂನಲ್ಲಿ ಏನು ಕಂಡಳೋ ಯಾರಿಗೆ ಗೊತ್ತು? ಒಂದು ದಿನ ಅವಳು ತನ್ನ ಗಂಟು ಮೂಟೆ ಕಟ್ಟಿಕೊಂಡು ಬಾಬೂನ ಕೋಣೆಗೆ ಹೋಗಿ ಅಲ್ಲಿಯೇ ಇದ್ದುಬಿಟ್ಟಳು. ಸಣ್ಯಾನ ಬಾಯಿ ಸಿಟ್ಟಿನಿಂದ ಬುರುಗುಗಟ್ಟಿತು. ಕೈಯಲ್ಲೊಂದು ಕೋಲು ಹಿಡಿದುಕೊಂಡು ಅವನು ಬಾಬೂನ ಕೋಣೆಗೆ ಬಂದ ಹಾಗೂ ಬಾಗಿಲನ್ನು ಜೋರಾಗಿ ಒದೆಯಹತ್ತಿದ. ‘ಬ್ಯಾಡರವನ„ ನನ್ನ ಮನೆ ಸುಟ್ಟು ಖಾಸ ನಿನ್ನ ತಮ್ಮನ್ನ ಕುತಿಗೀ ಕೊಯ್ಯತೀಯಲ್ಲೋ? ಹೊರಗ ಬಾ. ನಿನ್ನ ಹೆಣಾ ಕೆಡವತೀನಿ’ ಎಂದು ಚೀರಿದ. ಅವನ ಮೈಯೆಲ್ಲಾ ನಡುಗುತ್ತಿತ್ತು. ಬಾಬೂ ಶಾಂತರೀತಿಯಿಂದ ಬಾಗಿಲು ತೆಗೆದು ಅವನ ಎದುರಿಗೆ ಬಂದು ನಿಂತುಕೊಂಡ. ಒಮ್ಮೆಲೆ ಅವನ ಕೆಮ್ಮು ಶುರುವಾಯಿತು. ಅದು ನಿಂತ ಮೇಲೆ ತನ್ನ ಕೂದಲನ್ನು ಹಿಂದೆ ದೂಡಿ ಹಿಂಗೈಯಿಂದ ತುಟಿ ಒರೆಸಿಕೊಂಡ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ರಷ್ಯಾದ ಪ್ರಸಿದ್ಧ ಕಥೆಗಾರ ಆ್ಯಂಟನ್ ಚೆಕಾವ್​ 128 ವರ್ಷಗಳ ಹಿಂದೆ ಬರೆದ ಕಥೆ

‘ಸಣ್ಯಾ, ಫುಕಟ ಯಾಕ ಗುರುಗುರು ಮಾಡ್ತೀ? ನಾನು ನಿನ್ನ ಎಮ್ಮೀ ಕಡ್ಯಾಕ ಬಂದಿದ್ನೇನು? ಅವಳು ಬರ್ತೀನಿ ಅಂದ್ರ ಕರಕೊಂಡ ಹೋಗಲ್ಲಾ.’

ಅಲ್ಲಿಯೇ ಕೋಣೆಯ ಹಿಂದಿನ ಭಾಗದಲ್ಲಿ ಗೌರಿ ಗಂಟಿಗೆ ಆತುಕೊಂಡು ಆರಾಮಾಗಿ ಮಲಗಿದ್ದಳು. ಅವಳು ಕಟಕಟ ತನ್ನ ಬೆರಳು ಮುರಿದು ಅವನೆದುರು ಕುಣಿಸಿದಳು.

‘ಇವನ ಕಡೀಗೇ?’ ತಿರಸ್ಕಾರದಿಂದ ಕೆಳದುಟಿ ಚಾಚುತ್ತ ಅವಳು ಹೇಳಿದಳು. ‘ಈ ಜೋಕುಮಾರನ್ನ ಒಯ್ದು ಖಡ್ಡೀ ಒಳಕ ಹಾಕು.’

ಅವಳ ಮಾತು ಕೇಳಿ ಸಣ್ಯಾ ಅಲ್ಲಿಯೇ ಕುಸಿದುಬಿದ್ದ. ಅವನ ಕೈಯಲ್ಲಿದ್ದ ಕೋಲು ಕೆಳಗೆ ಬಿತ್ತು. ಒಬ್ಬ ಗಂಡಸಿಗೆ ಒಬ್ಬ ಹೆಂಗಸು ಇದಕ್ಕಿಂತ ಹೆಚ್ಚಿನ ಅಪಮಾನ ಮಾಡುವುದು ಸಾಧ್ಯವಿರಲಿಲ್ಲ. ಯಾರೋ ತನ್ನ ಮೇಲೆ ಸಗಣಿ ಗೊಬ್ಬರ ಸುರುವಿದಂತೆ ತನ್ನ ಅಂಗಗಳು ಒಳಗಿನಿಂದ ನಾರಹತ್ತಿವೆ ಎಂದು ಆ ಶಬ್ದಗಳನ್ನು ಕೇಳಿದಾಗ ಅವನಿಗೆನಿಸಿತು. ಮೋರೆ ಕೆಳಗೆ ಹಾಕಿಕೊಂಡು ಅವನು ಹೊರಗೆ ಬಂದ. ಬಾಬೂ ತನ್ನ ಹಿಂದೆ ಕೋಣೆಯ ಬಾಗಿಲು ಎಳೆದುಕೊಂಡು ಸಣ್ಯಾನ ಹಿಂದೆಯೇ ಬಂದ. ಅಲ್ಲಿ ಹೆಣದಂತೆ ತೆಪ್ಪಗೆ ನಿಂತ ಸಣ್ಯಾನ ಹೆಗಲ ಮೇಲೆ ಕೈಯಿಟ್ಟು ಹೇಳಿದ.

‘ಸಣ್ಯಾ, ನನ್ನ ಮಾತು ಕೇಳು. ನಾನು ಗಾಂಜಾಬಡಕ ಬರೆ. ಆದರೆ ನನ್ನ ತಲೀ ಒಳಗೆ ಕಣ್ಣು ಗಟ್ಟಿ ಅದಾವು. ಎಲ್ಲಾ ದಮಡೀ ಕಿಮ್ಮತ್ತಿನ ಖೋಟಾ ಚವಲೀನ. ಇದ„, ಹೆಂಗಸು ನಾಳೆ ನನ್ನ ಬಿಟ್ಟು ಒಬ್ಬ ಹಜಾಮನ ಹಿಂದೆ ಹೋದರೂ ಹೋದಳ„. ಒಂದು ಹೆಣ್ಣು ಹಾವು ನಂಬಬಹುದು. ಆದರ ಇಂಥಾವರ್ನ? ಊಹೂಂ… ಥೂ! ಎಲ್ಲಾರೂ ನಾಚಿಕಿಲ್ಲದವರು. ನಿರ್ಲಜ್ಜ ಮನಸ್ಸಿಗೆ ಬಂದದ್ದು ಮಾಡವರು…’ ಸಣ್ಯಾ ಅವನ ಕೈಯನ್ನು ಹೆಗಲಿನಿಂದ ಕಿತ್ತೊಗೆದ. ಹಾಗೂ ತನ್ನ ಕಬೂತರ ಖಾನೆಗೆ ಬಂದು ತೆಪ್ಪಗೆ ಕುಳಿತುಕೊಂಡ. ಅನಂತರ ಅವನಿಗೆ ಗೌರಿ ದಿನಾಲು ಕಾಣಿಸಿಕೊಳ್ಳುತ್ತಿದ್ದಳು. ಆದರೆ ಅವಳನ್ನು ನೋಡಿದಾಗಲೆಲ್ಲ ಅವನ ಹತ್ತಿಕ್ಕಿದ ನೋವು ಹೊರ ಚಿಮ್ಮುತ್ತಿತ್ತು ಮತ್ತು ತನ್ನ ಕಾಡು ಭೋಳೇ ಮುಖವನ್ನು ಮುಚ್ಚಿಡಲು ಜಗತ್ತೇ ಸಾಲುತ್ತಿರಲಿಲ್ಲ. ತಾನು ಹಾಕಿದ ವಸ್ತ್ರಗಳನ್ನು ಬೀಸೊಗೆಯುವಂಥ ಅಶುಭವಾದರೂ ತನ್ನಲ್ಲೇನಿದೆ ಎನ್ನುವುದು ಅವನಿಗೆ ತಿಳಿಯಲಿಲ್ಲ. ಅವಲಕ್ಷಣದ ಚಿಹ್ನೆಯನ್ನು ಹೊತ್ತ ಎತ್ತನ್ನು ನೋಡಿದಂತೆ ಎಲ್ಲರೂ ಅಸಹ್ಯಪಟ್ಟುಕೊಳ್ಳುತ್ತಿದ್ದರು. ಗೌರಿಯ ಬಗ್ಗೆ ಅತ್ಯಂತ ಫಾಜೀಲ ಮಾತುಗಳನ್ನಾಡುತ್ತಿದ್ದರು. ಗಾಂಜಾಬಡಕ ಬಾಬೂ ಮಾತ್ರ ಶಾಂತವಾಗಿ ಕಟ್ಟೆಯ ಮೇಲೆ ಕುಳಿತಿರುತ್ತಿದ್ದ. ಅವನ ಕೆಮ್ಮಿಗೆ ಬೆದರಿ ಪಾರಿವಾಳಗಳು ಮೈಮುದುಡಿಕೊಳ್ಳುತ್ತಿದ್ದವು.

ಆ ಗೌರಿ ನಿನ್ನೆಯೆ ಸತ್ತಿದ್ದಳು. ಅವಳ ಮಗುವೂ ಸತ್ತಿತ್ತು. ಗಾಂಜಾಬಡಕ ಬಾಬೂ ಸ್ಮಶಾನಕ್ಕೆ ಹೋಗಲಿಲ್ಲ. ಅಷ್ಟೇ ಅಲ್ಲ ಅವನ ಕಣ್ಣಲ್ಲಿ ಉಗುರು ಮುಚ್ಚುವಷ್ಟು ನೀರೂ ಬರಲಿಲ್ಲ. ನಾಲ್ಕಾರು ಜನ ಆಕೆಯ ಊರವರೇ ಬಂದರು. ಅವಳ ಬಂಗಾರದ ಪಾಟಲಿಯೊಂದನ್ನು ಕಿಸೆಗೆ ಹಾಕಿ ಅದರ ಬದಲು ಅವಳನ್ನು ಅವಳ ಮಗುವನ್ನು ಒಟ್ಟಿಗೆಯೆ ಸ್ಮಶಾನಕ್ಕೆ ಒಯ್ದರು. ಬಾಬೂ ತನ್ನ ಕೋಣೆಯನ್ನು ಸ್ವಚ್ಛವಾಗಿ ತೊಳೆದ. ಅವಳದೊಂದು ಹರಕು, ಹಲವಾರು ಗಂಟು ಹಾಕಿದ ಸೀರೆಯಿತ್ತು. ಅದನ್ನು ಒಬ್ಬ ಭಿಕ್ಷುಕಿಗೆ ಕೊಟ್ಟುಬಿಟ್ಟ. ಸಂಜೆಯ ಊಟಕ್ಕಾಗಿ ಒಲೆಯನ್ನು ಸ್ವಚ್ಛ ಮಾಡಿ ಬೆಂಕಿ ಹೊತ್ತಿಸಿದ. ಗೌರಿಯ ಆಯುಷ್ಯದಿಂದ ಅವನ ಮನಸ್ಸಿನ ಮೇಲೆ ನೆನಪಿನ ಒಂದು ಕಲೆ ಕೂಡ ಬಿದ್ದಿರಲಿಲ್ಲ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

(ಜಿ. ಎಸ್. ಆಮೂರ ಫೋಟೋ ಸೌಜನ್ಯ : ಎ. ಎನ್. ಮುಕುಂದ)

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಇಲ್ಲಿ ಏನೋ ತಪ್ಪು ತಿಳಿವಳಿಕೆ ಇದೆ, ಇದರಿಂದ ನಾವೆಲ್ರೂ ನಾಶವಾಗ್ತೀವಿ

Published On - 9:57 am, Fri, 11 March 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ