Literature: ನೆರೆನಾಡ ನುಡಿಯೊಳಗಾಡಿ; ‘ಹೌದು, ಚಂದ್ರಾವಳಿಯೆಂದರ ಸರದಾರೀ ಪಾರಿವಾಳ ಇದ್ದಾಳ’

G.A.Kulkarni‘s Short Story: ಒಮ್ಮೆ ಬಹಿರಾಮನೆಂಬ ಪಠಾಣನೊಬ್ಬ ಅವನ ಹತ್ತುರೂಪಾಯಿ ಮುಳುಗಿಸಲು ನೋಡಿದನಂತೆ. ಆಗ ನಾಲ್ಕು ಬೆರಳುದ್ದದ ಚೂರಿ ತೆಗೆದುಕೊಂಡು ಇಪ್ಪತ್ನಾಲ್ಕು ಬೆರಳಿನ ಬಾಳೂ ಅವನ ಹಿಂದಿಂದೆ ಓಡಿದನಂತೆ.

Literature: ನೆರೆನಾಡ ನುಡಿಯೊಳಗಾಡಿ; ‘ಹೌದು, ಚಂದ್ರಾವಳಿಯೆಂದರ ಸರದಾರೀ ಪಾರಿವಾಳ ಇದ್ದಾಳ’
ಲೇಖಕರಾದ ಜಿ. ಎ. ಕುಲಕರ್ಣಿ ಮತ್ತು ಡಾ. ಜಿ. ಎಸ್. ಆಮೂರ
ಶ್ರೀದೇವಿ ಕಳಸದ | Shridevi Kalasad

|

Mar 11, 2022 | 11:02 AM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi: ಸಣ್ಯಾ ಸುಮ್ಮನೆ ನಕ್ಕ, ಉಕ್ಕುತ್ತಿರುವ ಆನಂದದಿಂದ. ಆದರೆ ಚಂದ್ರಾವಳಿಗೆ ಮಾತ್ರ ಬಿಸಿಲಿನ ತಾಪ ಕಡಿಮೆಯಾದಂತೆ ಮನೆಯ ನೆನಪಾಗಹತ್ತಿತು. ತೀರ ಸಂಜೆಯಾರೂ ಅವಳ ರೆಕ್ಕೆಗಳು ಫಡಫಡಿಸುತ್ತಲೇ ಇದ್ದವು. ಕೆಲವು ಸಾರೆಯಂತೂ ತನ್ನ ಒಜ್ಜೆಯನ್ನು ಹೊತ್ತುಕೊಂಡೇ ಹತ್ತಿಪ್ಪತ್ತು ಫೂಟು ಸರಿದುಹೋದಳು. ಅವಳ ಕಣ್ಣುಗಳಲ್ಲಿ ದುಃಖ ಹಾಗೂ ಹತಾಶೆ ತುಂಬಿದ್ದವು. ನಂತರ ಮಾತ್ರ ಅವಳ ದುಃಖದ ಝಳ ಕಡಿಮೆಯಾಯಿತು ಮತ್ತು ರೆಕ್ಕೆಗಳಿಗೆ ಫಡಫಡಿಸುವುದು ಮರೆತುಹೋಯಿತು. ಅವಳ ಪುಟ್ಟ ದೇಹದಲ್ಲಿ ನೆನಪುಗಳಾದರೂ ಎಷ್ಟಿರಬೇಕು? ಅವಳ ದುಃಖವೂ ಅದೇ ಪ್ರಮಾಣದ್ದು. ನಾಲ್ಕಾರು ದಿವಸಗಳಲ್ಲಿ ಉಳಿದ ಪಾರಿವಾಳಗಳಂತೆ ಕಾಳು ಹೆಕ್ಕತೊಡಗಿದಳು. ಮತ್ತು ಕೊನೆಗೆ ಅವಳ ಸುತ್ತಲೂ ಯಾವಾಗಲೂ ತಿರುಗುತ್ತಿದ್ದ ಅರ್ಧ ಪೌಂಡ್ ವಜನದ ಕೆಂಪು ತುರಾಯಿ ಹೊತ್ತಿದ್ದ ಕೆಂಪು ಕಣ್ಣಿನ ದರಿದ್ರನೊಂದಿಗೆ ರಮಿಸಲಾರಂಭಿಸಿದಳು. ಆದರೂ ಅವಳು ಕೆಳಗಿಳಿದಾಗ ಥೇಟ್ ರಾಣಿಯಂತೆ ಕಾಣುತ್ತಿದ್ದಳು. ಅವಳ ಗೆಜ್ಜೆಗಳ ಖಣಖಣಿಸುವ ನಾದ ಸಣ್ಯಾನ ಕಬೂತರಖಾನೆಗೆ ಹೊಸ ಮೆರುಗು ತಂದಿತ್ತು. ತನ್ನ ಸಾಮಾನ್ಯ ಪಾರಿವಾಳಗಳನ್ನು ನೋಡುವಾಗಲೆಲ್ಲ ಸಣ್ಯಾ ಅನುಭವಿಸುತ್ತಿದ್ದ ನಾಚಿಗೆಯ ಮೇಲೆ ಈಗ ಧಗಧಗಿಸುವ ಅಭಿಮಾನದ ಜ್ಯೋತಿ ಹೊತ್ತಿಕೊಂಡಿತ್ತು.

ಕಥೆ : ಚಂದ್ರಾವಳ | ಮರಾಠಿ : ಜಿ. ಎ. ಕುಲಕರ್ಣಿ | ಕನ್ನಡಕ್ಕೆ : ಜಿ. ಎಸ್. ಆಮೂರ | ಸೌಜನ್ಯ : ದೇಶಕಾಲ ತ್ರೈಮಾಸಿಕ ಪತ್ರಿಕೆ

(ಭಾಗ 3)

‘ಹೌದು, ಚಂದ್ರಾವಳಿಯೆಂದರ ಸರದಾರೀ ಪಾರಿವಾಳ ಇದ್ದಾಳ.’ ಕೊನೆಯ ಝರಿಕೆ ಎಳೆದು ಬೀಡಿಯ ತುಂಡು ಚೆಲ್ಲುತ್ತ ಇಪ್ಪತ್ನಾಲ್ಕು ಬೆರಳಿನ ಬಾಳೂ ಹೇಳಿದ.

ಗಾಂಜಾಬಡಕ ಬಾಬುವಿನ ಜೊತೆಗೆ ಕಟ್ಟೆಯ ಮೇಲೆ ಯಾವಾಗಲೂ ಇರುತ್ತಿದ್ದ ಇನ್ನೊಬ್ಬ ಮನುಷ್ಯನೆಂದರೆ ಕೈಕಾಲುಗಳಲ್ಲಿ ಆರಾರು ಬೆರಳುಗಳಿದ್ದ ಈ ಲಠ್ಠ ಬಾಳೂ. ಅವನ ಮೈಮೇಲೆ ಕಂಬಳಿಯಂಥ ಅರಿವೆಯ ಉದ್ದ ಕೋಟು ತಪ್ಪದೆ ಇರುತ್ತಿತ್ತು. ಈ ಕೋಟಿಲ್ಲದ ಅವನನ್ನು ಇದುವರೆಗೆ ಯಾರೂ ನೋಡಿಯೇ ಇಲ್ಲ. ಅವನ ಬೂಟು ಸಡಿಲವಿದ್ದುದರಿಂದ ಅವನು ಬರುವ ಬಹಳ ಮೊದಲೇ ಅವುಗಳ ಶಬ್ದ ಬಂದಿರುತ್ತಿತ್ತು. ಅವನ ಮುಖ ಸ್ವಲ್ಪ ಮಟ್ಟಿಗೆ ಚೀನೀ ಮನುಷ್ಯರ ಮುಖ ಹೋಲುತ್ತಿತ್ತು. ಮತ್ತು ಅವನ ಕುತ್ತಿಗೆಯ ಸುತ್ತಲೂ ಇದ್ದ ನರ ಎಷ್ಟು ಎದ್ದು ಕಾಣುತ್ತಿತ್ತೆಂದರೆ ಬೇರೆ ಯಾರದೋ ಮುಂಡವನ್ನು ತಂದು ದಾರದಿಂದ ಅವನ ಕುತ್ತಿಗೆಗೆ ಕಟ್ಟಿದ್ದಾರೆ ಎನ್ನುವ ಸಂಶಯ ಬರುತ್ತಿತ್ತು.

ಎಂಟನೇ ಗಲ್ಲಿಯಲ್ಲಿ ಅವನದೊಂದು ಹಳೇ ಮನೆಯಿತ್ತು. ಅದನ್ನು ಅವನು ಒಬ್ಬ ಕಪ್ಪು, ಸೊಟ್ಟ ಬೈತಲಿನ, ಎಲೆ ತಿಂದು ಕೆಂಪಾದ ಹಲ್ಲು ತೋರಿಸುವ ವೇಶ್ಯೆಗೆ ಕೊಟ್ಟಿದ್ದ. ಅವನ ಊಟಗೀಟ ಎಲ್ಲ ಅಲ್ಲಿಯೇ. ಊಟದ ನಂತರ ಮೊಳಕಾಲು ಮೇಲೆಳೆದುಕೊಂಡು ಹದ್ದಿನಂತೆ ಇಲ್ಲಿ ಬಂದು ಕುಳಿತನೆಂದರೆ ಅವನ ನಾಲಿಗೆ ಚಾಚೂ ಆಗುತ್ತಿತ್ತು ಮತ್ತು ಅವನ ಎಂದಿನ ಹರಟೆ ಕೇಳುವವರಿಗೆಲ್ಲ ಬೇಸರ ಬರುವವರೆಗೆ ನಡೆದೇ ಇರುತ್ತಿತ್ತು. ಅವನಲ್ಲಿ ಯಾವಾಗಲೂ ಹಳೇ ಇಸ್ಪೀಟುಗಳ ಜೋಡಿ ಆರಾಣೆಗೊಂದರಂತೆ ದೊರೆಯುತ್ತಿದ್ದವು. ಜೂಜಿನಲ್ಲಿ ತಾನು ದುಡ್ಡು ಹೇಗೆ ಗಳಿಸಿದೆ, ದೊಡ್ಡ ದೊಡ್ಡ ದಾದಾಗಳಿಂದ ತಾನು ಹೇಗೆ ಹಣ ವಸೂಲು ಮಾಡಿದೆ ಇವೆಲ್ಲವನ್ನೂ ಅವನು ತನ್ನ ಒಡಕು ದನಿಯಲ್ಲಿ ಹೇಳಲು ಪ್ರಾರಂಭಿಸಿದನೆಂದರೆ ಕೇಳುವವರಿಗೆ ನಗೆ ತಡೆಯಲು ಬಾಯಿ ಮುಚ್ಚಬೇಕಾಗಿರುತ್ತಿತ್ತು.

ಒಮ್ಮೆ ಬಹಿರಾಮ ಎಂಬ ಹೆಸರಿನ ಎತ್ತರ ಪಠಾಣನೊಬ್ಬ ಅವನ ಹತ್ತು ರೂಪಾಯಿ ಮುಳುಗಿಸಲು ನೋಡಿದನಂತೆ. ಆಗ ನಾಲ್ಕು ಬೆರಳುದ್ದದ ಚೂರಿಯನ್ನು ತೆಗೆದುಕೊಂಡು ಇಪ್ಪತ್ನಾಲ್ಕು ಬೆರಳಿನ ಬಾಳೂ ಅವನ ಹಿಂದೆ ಹಿಂದೆ ಓಡಿದನಂತೆ, ಅದೂ ರಾತ್ರಿ ಒಂದೂವರೆ ಗಂಟೆಯಾಗುವವರೆಗೆ. ಮಧ್ಯದಲ್ಲಿ ಅವನನ್ನು ಒಬ್ಬ ಪೊಲೀಸ್ ತಡೆದನಂತೆ. ಆದರೆ ಇಪ್ಪತ್ನಾಲ್ಕು ಬೆರಳಿನ ಬಾಳು ಅವನಂಥ ಪುಕ್ಕನಿಗೆ ದಾದು ಕೊಡುವವನೇ? ಅವನನ್ನು ಗಟಾರದಲ್ಲಿ ದೂಡಿಬಿಟ್ಟನಂತೆ. ಕೊನೆಗೆ ಅವನು ಆರ್ಗನ್ ಕೆರೆಯ ಹತ್ತಿರ ಆ ಪಠಾಣನ ಕುತ್ತಿಗೆ ಹಿಡಿದು ತನ್ನ ಚೂರಿಯಿಂದ ಅರ್ಧ ಇಂಚು ಗಾಯ ಮಾಡಿಬಿಟ್ಟ. ಬಹಿರಾಮ ರಕ್ತ ಕಾರಿಕೊಂಡಿದ್ದ. ಇಪ್ಪತ್ನಾಲ್ಕು ಬೆರಳಿನವನಿಗೆ ಅವನು ಹತ್ತು ರೂಪಾಯಿ ಕೊಟ್ಟು ಅವನ ಕಾಲು ಹಿಡಿದುಕೊಂಡನಂತೆ. ಇದು ಬಾಳೂನೇ ಹೇಳಿದ್ದು. ‘ಅವ ಮುಂದ ಮುಂದ, ನಾ ಹಿಂದ ಹಿಂದ’ ಅಂತ ಅವನು ಹೇಳಹತ್ತಿದನೆಂದರೆ ಅವನ ಕಣ್ಣುಗಳು ಬಸಿಯಂತೆ ಹಿಗ್ಗುತ್ತಿದ್ದವು ಹಾಗೂ ಕೇಳುತ್ತ ಕುಳಿತಿದ್ದವರು ನಾಚಿಕೆ ಬಿಟ್ಟು ನಗುತ್ತಿದ್ದರು. ನಿಜವಿದ್ದ ಮಾತೆಂದರೆ ಇಪ್ಪತ್ನಾಲ್ಕು ಬೆರಳಿನ ಬಾಳೂಗೆ ಹೆದರುವ ಪಠಾಣ ಇನ್ನೂ ಹುಟ್ಟಿಯೇ ಇರಲಿಲ್ಲ. ಆದರೆ ಅವನ ‘ಮುಂದ ಮುಂದ, ಹಿಂದ ಹಿಂದ’ ಎಲ್ಲ ಓಣಿಗಳಲ್ಲಿ ವಿನೋದದ, ಚೇಷ್ಟೆಯ ವಿಷಯವಾಗಿತ್ತು.

ಇದನ್ನೂ ಓದಿ : Kannada New Movie : ‘ಮ್ಯೂಸಿಯಂನಲ್ಲಿಟ್ಟ ವಸ್ತುವಿನಂತೆ ಅವರೆಲ್ಲ ನನ್ನನ್ನು ನೋಡುತ್ತಿದ್ದರು’

‘ಸಣ್ಯಾ, ನಿನಗೆ ಬಿರಾದಾರ ಪಾಟೀಲನ ಚಂದ್ರಾವಳೀದು ಗೊತ್ತದ ಏನು?’ ಒಮ್ಮೆಲೆ ನೆನಪಾದವನಂತೆ ಇಪ್ಪತ್ನಾಲ್ಕು ಬೆರಳಿನವ ಹೇಳಹತ್ತಿದ. ‘ಅವಳು ಖಲಾಸ್ ಆದಳು. ಹೌದು ಸಂಪೂರ್ಣ ಖಲಾಸ್! ಕಟಗೀ ಅಡ್ಡ್ಯಾದ ಹಣಮ್ಯಾ ಹೇಳತ್ತಿದ್ದ ನನಗ.’ ‘ಖಲಾಸ್? ಸತ್ತಳ?’ ಆಶ್ಚರ್ಯದಿಂದ ಸಣ್ಯಾ ಕೇಳಿದ. ‘ಸತ್ತಿಲ್ಲ…’ ನಿರಾಶನಾದವನಂತೆ ಬಾಳು ಅಂದ. ‘ಇದ್ದಾಳ, ಇನ್ನೂ ಜೀವಂತ. ಅದರ ದೇವೀ ಬಂದು ಅವಳ ಮುಖ ಎಲ್ಲ ಜರಡಿ ಆಗೇದ. ಆ ಪಾಟೀಲ ಈಗ ಮತ್ತೊಂದು ಹೆಣ್ಣು ತಂದಾನ, ಅಕೀ ಹೆಸರು ಪದ್ಮಾ. ಈ ಪದ್ಮಾ ಅಂದರ…’

ಸಣ್ಯಾನ ಲಕ್ಷ್ಯ ಅಲ್ಲಿರಲಿಲ್ಲ. ಅವನೀಗ ಬಾಳೂನ ಮೇಲೆ ಬಹಳ ಸಿಟ್ಟಿಗೆದ್ದಿದ್ದ. ಮಡಿಕೆಯ ಮೇಲೆ ಚರ್ಮ ಹೊದಿಸಿದಂತಿದ್ದ ಅವನ ಮುಖದ ಮೇಲೆ ಒಂದು ಚಪ್ಪಲಿ ತೊಗೊಂಡು ಹೊಡೆಯಬೇಕು ಎಂದು ಅವನಿಗೆನಿಸಿತು. ಅವನು ಆ ಚಂದ್ರಾವಳಿಯ ಹಕೀಕತ್ತು ಯಾಕ ಕಾರಿಕೊಳ್ಳಬೇಕಾಗಿತ್ತು? ಆದರೆ ಸಿಟ್ಟು ಇಳಿದ ನಂತರ ಅವನ ಮನಸ್ಸು ಇನ್ನೂ ಹೆಚ್ಚು ವಿಷಣ್ಣವಾಯಿತು. ಆ ಮುಖವಿಲ್ಲದ ಚಂದ್ರಾವಳಿಯೆಂದರೆ ಚಂದ್ರಿಯ ಪ್ರೇತವೇ. ಅವನ ಮನಸ್ಸಿನ ಒಂದು ಸ್ವಚ್ಛ ಮೂಲೆಯಲ್ಲಿದ್ದ ಮೂರ್ತಿಯ ಮೇಲೆ ಈಗ ಹೊಲಸು ಎಣ್ಣೆ ಬಿದ್ದಂತಾಗಿತ್ತು. ಜರಡಿಗೆ ಚಂದ್ರಿಯ ಮಾದಕ ಕಣ್ಣುಗಳು ಮೂಡಿದಂತೆ ಅವನಿಗೆ ಭಾಸವಾಗಹತ್ತಿತು. ಮತ್ತು ಅವನ ದುಃಖ ಮತ್ತೆ ಹೊಡಕರಿಸಿತು. ನಿನ್ನೆ ಗೌರಿ ಹೋದಳು. ಇವತ್ತು ಚಂದ್ರಾವಳಿಯ ಪಾಳಿ. ಈಗ ಚಂದ್ರಾವಳಿಯು ಸತ್ತಳೆಂದೇ ಹೇಳಬೇಕು. ನವರಾತ್ರಿಯಲ್ಲಿ ದೇವಿಗೆ ಉಡಿಸಿದ ವಸ್ತ್ರಗಳನ್ನು ಇಳಿಸಿದಂತೆ ಈಗ ಅವಳ ಸೌಂದರ್ಯ ಅವಳಿಂದ ಇಳಿದುಹೋಗಿತ್ತು. ಅವನು ಮತ್ತೊಮ್ಮೆ ಇಪ್ಪತ್ನಾಲ್ಕು ಬೆರಳಿನವನ ಕಡೆಗೆ ಸಿಟ್ಟಿನಿಂದ ನೋಡಿದ ಮತ್ತು ಮೆತ್ತಗೆ ಅವನನ್ನು ಬೈದ.

‘ನಿನ್ನ ಬಡಬಡಿಕೆ ಸಾಕೀಗ… ಅದೇನು ಬಾಯಿಯೋ, ಹರಕ ಚಪ್ಪಲಿಯೋ?’ ಅವನು ಸಿಟ್ಟಿನಿಂದ ಹೇಳಿದ. ಬಾಳೂ ಭುಜ ಹಾರಿಸಿ ಸುಮ್ಮನೆ ಕುಳಿತುಕೊಂಡ.

ಬಿರಾದಾರ ಪಾಟೀಲನ ಚಂದ್ರಾವಳಿ ಕೂಡ ಈ ಹೊಸ ಪಾರಿವಾಳದಂತೆಯೇ ಅವನ ಆಯುಷ್ಯದಲ್ಲಿ ಅಕಸ್ಮಾತ್ತಾಗಿ ಬಂದಿದ್ದಳು. ಗುಡಿಯ ಜಾತ್ರೆಯ ನಂತರ ಎಲ್ಲರೂ ಗುಡಿಯೆದುರಿಗಿನ ಪಟಾಂಗಣದಲ್ಲಿ ಒಂದು ಆಟ ಆಡಲು ನಿರ್ಧರಿಸಿದ್ದರು. ರಥದ ಗಾಲಿಗಳ ಮೇಲೆ ಫಳಿಗಳನ್ನು ಜೋಡಿಸಿ ಒಂದು ಸ್ಟೇಜ್ ಕೂಡ ಸಿದ್ಧವಾಗಿತ್ತು. ರಾತ್ರಿ ಹತ್ತು ಹೊಡೆದ ನಂತರ ಕಚ್ಚೆ ಹಾಕಿದ ಧೋತರ ಉಟ್ಟು ಚೀರಾಡುತ್ತ, ಕಟ್ಟಿಗೆಗೆ ಬೇಗಡೆ ಸುತ್ತಿ ಮಾಡಿದ ಕೆಂಪು ಬಣ್ಣದ ಗದೆಯನ್ನು ತಿರುವುತ್ತ, ಸಮೀಪದಲ್ಲಿಯೇ ಇದ್ದ ಮನುಷ್ಯನೊಡನೆ ಮಾತಾಡುತ್ತಿದ್ದರೂ ಭೀಮನಿಗೆ ಒಪ್ಪುವ ದನಿಯಲ್ಲಿ ಆರ್ಭಟಿಸುತ್ತ ಬಂದಾಗ ಸಣ್ಯಾನ ಕಪಾಳದ ನರಗಳು ರಥದ ಹಗ್ಗಗಳಂತೆಯೇ ಉಬ್ಬಿದ್ದವು. ಆದರೆ ಅವನ ಕೆಲಸ ಎಲ್ಲರಿಗೂ ಮೆಚ್ಚುಗೆಯಾಗಿತ್ತು.

ಗಾಂಜಾಬಡಕ ಬಾಬುವನ್ನು ಬಿಟ್ಟು ಎಲ್ಲರಿಗೂ ಒಂದಿಲ್ಲೊಂದು ಪಾತ್ರ ದೊರೆತಿದ್ದವು. ಅವನು ಮಾತ್ರ ತಲೆಯ ಮೇಲಿಂದ ಹಾಯ್ದು ಬಂದ ಅಂಗವಸ್ತ್ರವನ್ನು ಮೊಳಕಾಲಿಗೆ ಸುತ್ತಿಕೊಂಡು, ಕೆಮ್ಮುತ್ತ ಒಂದು ಮೂಲೆಯಲ್ಲಿ ಕುಳಿತು ನೋಡುತ್ತಿದ್ದ. ಅವನು ಚಪ್ಪಾಳೆ ಬಾರಿಸಲಿಲ್ಲ. ತಾಳ ಹಾಕಲಿಲ್ಲ. ಇಪ್ಪತ್ನಾಲ್ಕು ಬೆರಳಿನ ಬಾಳೂ ಕೂಡ ನಾಟಕದಲ್ಲಿದ್ದ. ಆದರೆ ಅವನ ಮೀಸೆ ಸಣ್ಣವಿದ್ದುದರಿಂದ ದೇವತೆಗಳ ಪಾತ್ರಗಳಲ್ಲಿಯೂ ಕೂಡ ಅವನ ಪಾಲಿರಲಿಲ್ಲ. ಆದರೆ, ಕೃಷ್ಣನ ಸಂದೇಶವನ್ನು ಎಲ್ಲ ಕಡೆ ಒಯ್ಯುವುದರ ಸಲುವಾಗಿ ಒಬ್ಬ ಗೌಳಿತಿ ಬೇಕಾಗಿದ್ದಳು. ಈ ಕೆಲಸವನ್ನು ಅವನು ಮಾಡಬೇಕೆಂದು ನಿರ್ಧಾರವಾಗಿತ್ತು. ಆದರೆ ಮೀಸೆಗಳನ್ನು ತೆಗೆದುಹಾಕಲು ಅವನು ತಯಾರಾಗಲಿಲ್ಲ. ಆಗ ಅವನು ತನ್ನ ಧೋತರದ ಸೆರಗನ್ನು ತಲೆಯ ಮೇಲೆ ಹಾಯಿಸಿಕೊಂಡು ಅದನ್ನು ಮೀಸೆಗಳ ಮುಂದೆ ಹಿಡಿಯಬೇಕು ಎಂದು ಒಪ್ಪಂದವಾಯಿತು. ಆದರೆ ಮೊದಲನೆಯ ದಿನವೇ ಧೋತರದಲ್ಲಿ ಕಾಲು ಸಿಕ್ಕಿಕೊಂಡು ಗೌಳಿತಿ ಎಡವಿ ಫಳಿಗಳ ಮೇಲೆ ಬಿದ್ದಳು ಹಾಗೂ ಗೌಳಿತಿಯ ಬಾಯಿಯಲ್ಲಿ ಇಲ್ಲದ ಹಾಗೂ ಅವಳಿಗೆ ಶೋಭಿಸದ ಅನೇಕ ವಾಕ್ಯಗಳು ತೂರಿ ಬಂದವು. ಇದೊಂದನ್ನು ಬಿಟ್ಟರೆ ಎಲ್ಲರೂ ತಮ್ಮ ತಮ್ಮ ಕೆಲಸವನ್ನು ವ್ಯವಸ್ಥಿತವಾಗಿ ಕೂಡಿಸಿಕೊಂಡಿದ್ದರು. ಎಷ್ಟರಮಟ್ಟಿಗೆಂದರೆ ಕೌರವ ಪಾಂಡವರ ಯುದ್ಧದ ನಾಟಕ ಅಗದೀ ಭರ್ಜರಿ ಆಗುವುದೆಂದು ಇಡೀ ಓಣಿಯೇ ಮಾತಾಡುತ್ತಿತ್ತು. ಆದರೆ ನಂತರ ಇದೆಲ್ಲವೂ ಬದಲಾಯಿತು. ಅವರ ಶ್ರಮವೆಲ್ಲ ವ್ಯರ್ಥವಾಯಿತು. ಗುಡಿಯ ಪಂಚರಲ್ಲೊಬ್ಬನಾದ ಬೆನವಾಡೀಕರ ಇನಾಮದಾರ ಮೆಲ್ಲಗೆ ಒಂದು ಸಂದೇಶ ಕಳಿಸಿದ. ಅದೆಂದರೆ ಬಿರಾದಾರ ಪಾಟೀಲ ಹಾಗೂ ಅವನ ಚಂದ್ರಾವಳಿ ಬಂದರೆ ತಾನು ಒಂದು ನೂರು ರೂಪಾಯಿ ಕೊಡಲು ತಯಾರಿದ್ದೇನೆ ಎಂದು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 2 : Literature: ನೆರೆನಾಡ ನುಡಿಯೊಳಗಾಡಿ; ‘ಚಂದ್ರಾವಳೀ ಅಂದರ ವಜ್ರ ಅದಾಳ ವಜ್ರ’

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada