Literature: ನೆರೆನಾಡ ನುಡಿಯೊಳಗಾಡಿ; ‘ಏನೋ ಬಾಳೂ ಇವೇನು ಪಾರಿವಾಳಾನೋ ಅಥವಾ ಬೋಳು ತಲೆ ಹೆಂಗಸರೋ?’
G.A.Kulkarni‘s Short Story: ಅವಳದೇ ಆದ ವಿಶಿಷ್ಟ ಗೌಳಿತಿಯ ನೃತ್ಯದಲ್ಲಿ ತಲೆಮೇಲೆ ಕೈಜೋಡಿಸಿ ಕುಣಿಯುತ್ತಿದ್ದಳು. ಹೊರಳುವಾಗ ಕುಪ್ಪುಸ, ಟೊಂಕದ ನಡುವಿನ ಬಿಳೀ ಕೇದಿಗೆಯಂಥ ಭಾಗದಲ್ಲಿ ಉನ್ಮಾದಕ ಚಲನವಲನ ಕಂಡಾಗ ಜನ ಎಚ್ಚರ ತಪ್ಪುತ್ತಿದ್ದರು.
ನೆರೆನಾಡ ನುಡಿಯೊಳಗಾಡಿ | NereNaada Nudiyolagaadi: ಚಂದ್ರಾವಳಿಯ ಹೆಸರು ಕೇಳಿದ ಕೂಡಲೆ ಇಪ್ಪತ್ನಾಲ್ಕು ಬೆರಳಿನ ಬಾಳು ಬಾಯಿ ಬಡಿದುಕೊಳ್ಳುತ್ತ ಕೆಳಗೆ ಕುಳಿತುಬಿಟ್ಟ. ಅವಳ ಹೆಸರಿನ ಪ್ರಸ್ತಾಪದೊಡನೆ ಅವನು ಸಿದ್ಧಗೊಳಿಸಿದ ಸ್ಟೇಜ್, ಕಲೆ ಹಾಕಿದ ವಸ್ತ್ರಗಳು, ಅವನ ಪಾತ್ರ – ಎಲ್ಲವೂ ಅರ್ಥಹೀನವೆನಿಸತೊಡಗಿದವು. ಯಾಕೆಂದರೆ, ಬಿರಾದಾರ ಪಾಟೀಲನ ಕಂಪನಿಯಲ್ಲಿದ್ದ ಚಂದ್ರಾವಳಿಯ ಹೆಸರು ಕೇಳಿತೆಂದರೆ ಎಂಟು ಹತ್ತು ಮೈಲುಗಳೊಳಗಿನ ಜನ ಜಮಾ ಆಗುತ್ತಿತ್ತು. ಜಾತ್ರೆಗಳಲ್ಲಿ ಅವಳು ಬಂಗಾರದ ಡಾಬಿನಂತೆ ಹೊಳೆಯುತ್ತಿದ್ದಳು. ಸೀರೆಯಲ್ಲಿ ಬಚ್ಚಿಟ್ಟ ಉದ್ದ ಹಾರವನ್ನು ಹಾಕಿಕೊಂಡು ಚಂದ್ರಾವಳಿ ಸ್ಟೇಜಿನ ಮೇಲೆ ಬಂದಾಗ ಸ್ತ್ರೀಯರು ಅವಳ ಹೆಸರಿನಲ್ಲಿ ನೆಟಿಕೆ ಮುರಿಯುತ್ತಿದ್ದರು. ಪುರುಷರು ಮೀಸೆ ತಿರುವುತ್ತಿದ್ದರು. ಕೆಂಪು ಉಗುರಿನ ದಂತದಂಥ ಕಾಲುಗಳಲ್ಲಿ ಗೆಜ್ಜೆ ಕಟ್ಟಿಕೊಂಡು ಬೊಗರೆಯಂತೆ ಅವಳು ತಿರುಗಹತ್ತಿದಳೆಂದರೆ ಕೊನೆಯ ಸಾಲಿನಲ್ಲಿ ಕುಳಿತ ಗಂಡಸರೂ ಬೀಡಿ ಸೇದಲು ಕಡ್ಡೀಪೆಟ್ಟಿಗೆ ಎತ್ತುತ್ತಿರಲಿಲ್ಲ.
ಕಥೆ : ಚಂದ್ರಾವಳ | ಮರಾಠಿ : ಜಿ. ಎ. ಕುಲಕರ್ಣಿ | ಕನ್ನಡಕ್ಕೆ : ಜಿ. ಎಸ್. ಆಮೂರ | ಸೌಜನ್ಯ : ದೇಶಕಾಲ ತ್ರೈಮಾಸಿಕ ಪತ್ರಿಕೆ
(ಭಾಗ 4)
ಅವಳದೇ ಆದ ವಿಶಿಷ್ಟವಾದ ಗೌಳಿತಿಯ ನೃತ್ಯವಿದ್ದಿತು. ಅದರಲ್ಲಿ ಅವಳು ತಲೆಯ ಮೇಲೆ ಕೈ ಜೋಡಿಸಿ ಕುಣಿಯುತ್ತಿದ್ದಳು. ಆಗ ಅವಳು ಹೊರಳುವಾಗ ಅವಳ ಕುಪ್ಪುಸ ಹಾಗೂ ಟೊಂಕದ ನಡುವಿನ ಬಿಳೀ ಕೇದಿಗೆಯಂಥ ಭಾಗದಲ್ಲಿ ಉನ್ಮಾದಕ ಚಲನವಲನ ಕಂಡಾಗ ಜನ ಎಚ್ಚರ ತಪ್ಪುತ್ತಿದ್ದರು. ಅವಳು ಯಾರು, ಎಲ್ಲಿಯವಳು ಯಾರಿಗೂ ಗೊತ್ತಿರಲಿಲ್ಲ. ಆದರೆ ಬಿರಾದಾರ ಪಾಟೀಲ ಇದ್ದಲ್ಲಿ ಅವನ ಚಂದ್ರಾವಳಿ ಇರುವವಳೇ. ಅವಳೊಡನೆ ಒಂದಾದರೂ ಮಾತಾಡುವ ಛಾತಿ ಯಾರಲ್ಲಿಯೂ ಇರಲಿಲ್ಲ. ಒಂದು ಕ್ರೂರ, ವಿರಾಟ, ಸರ್ಪದ ಹೆಡೆಯಂತೆ ಪಾಟೀಲನ ನೆರಳು ಯಾವಾಗಲೂ ಅವಳ ಮೇಲಿರುತ್ತಿತ್ತು. ಜೊಂಡು ಮೀಸೆಯ ದೈತ್ಯನಂಥ ಈ ವಿಕರಾಳ ಮನುಷ್ಯ ಬೂಟು ಹಾಕಿಕೊಂಡು ಕೃಷ್ಣನ ಪಾತ್ರ ನಟಿಸುತ್ತಿದ್ದ. ಅವನಂಥ ಭೀಮ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಜಾತ್ರೆಗಳಲ್ಲಿ ಕುಣಿದಿರಲಿಲ್ಲ. ಅವನ ಸರಕುಗಳಲ್ಲಿ ಬೆಂಕಿಯಂಥ ಗಾವಠೀ ದಾರುವಿನ ನಾಲ್ಕಾರು ಬಾಟಲಿಗಳು ಯಾವಾಗಲೂ ಇರುತ್ತಿದ್ದವು. ವರ್ಷದಲ್ಲಿ ಎರಡು ಮೂರು ತಿಂಗಳ ಫಿರ್ತಿ„ ನಡೆದ ನಂತರ ಅವನು ಚಂದ್ರಾವಳಿಯನ್ನು ಕರೆದುಕೊಂಡು ತನ್ನ ಹಳ್ಳಿ ಸೇರುತ್ತಿದ್ದ.
ಅವನು ಮನೆಯಲ್ಲಿಲ್ಲದ ವೇಳೆ ನೋಡಿ ಒಬ್ಬ ಪೊಲೀಸ್ ಅವನ ಮನೆಯ ಮೇಲೆ ಜಪ್ತಿ ತಂದ ಹಾಗೂ ವಿಚಾರಣೆಗೆಂದು ಚಂದ್ರಾವಳಿಯನ್ನು ಠಾಣೆಗೆ ಕರೆದೊಯ್ದ. ಬಿರಾದಾರ ಪಾಟೀಲ ಮನೆಗೆ ಬಂದ ನಂತರ ಅವನಿಗೆ ಎಲ್ಲಾ ಹಕೀಕತ್ತು ತಿಳಿಯಿತು. ಅವನ ಕಣ್ಣಿನ ಉರಿಯಲ್ಲಿ ಕೈಯಲ್ಲಿದ್ದ ಕೊಡಲಿ ಹೊಳೆಯಿತು. ಆಗಿಂದಾಗಲೇ ಮಶಾಲು ಹೊತ್ತ ಐವತ್ತು ಜನ ತಯಾರಾದರು. ಮರುದಿವಸ ಕಳೆಗುಂದಿದ, ಹರಿದ ಅರಿವೆಗಳಲ್ಲಿದ್ದ ಚಂದ್ರಾವಳಿಯನ್ನು ಪಾಟೀಲ ತನ್ನ ಕೈಗಳಲ್ಲಿ ಎತ್ತಿಕೊಂಡು ಬಂದ. ಆ ಪೊಲೀಸ ಇನ್ಸ್ಪೆಕ್ಟರ್ನ ಡಬಗಳ್ಳಿಯ ಹಣ್ಣಿನಂಥ ಕೆಂಪು ರುಂಡವನ್ನು ಭಾಲೆಗೆ ಚುಚ್ಚಿ ಒಂದು ಎತ್ತರದ ಸ್ಥಳದಲ್ಲಿ ಇಡಲಾಗಿತ್ತು. ಖರೆ ಯಾವುದೋ, ಸುಳ್ಳು ಯಾವುದೋ ಯಾರಿಗೆ ಗೊತ್ತು? ಪೊಲೀಸರಿಗೆ ಆ ಊರಿನಲ್ಲಿ ಒಬ್ಬ ಸಾಕ್ಷೀದಾರನೂ ದೊರೆಯಲಿಲ್ಲ. ಇದರಿಂದಾಗಿ ಚಂದ್ರಾವಳಿ ಜಾತ್ರೆ ಮಾಡುತ್ತ ಹೋದ ದಾರಿಯಲ್ಲಿ ಎಷ್ಟೋ ಬೆಂದ ಮನಸ್ಸುಗಳು ಅವಳ ಹಿಂದೆ ಚಡಪಡಿಸುತ್ತಿದ್ದವು. ಅನೇಕ ಜೀವಂತ ರಕ್ತಗಳಿಗೆ ಆ ನಂತರ ಯಾವುದರಲ್ಲಿಯೂ ರುಚಿ ಉಳಿದಂತೆ ಅನಿಸುತ್ತಿರಲಿಲ್ಲ.
ಅಂತೂ ಬಿರಾದಾರ ಪಾಟೀಲನ ಕಂಪನಿ ಗುಡಿಗೆ ಬಂದಿಳಿಯಿತು. ಒಳ್ಳೆಯ ವಸ್ತ್ರಗಳ ರಾಶಿಯೇ ಬಂದು ಬಿದ್ದಿತು. ಬಣ್ಣ ಹಚ್ಚಿಕೊಂಡು ಹೊರಬಂದ ಚಂದ್ರಾವಳಿ ಅವುಗಳನ್ನುಟ್ಟುಕೊಂಡು ಪಾರಿವಾಳ ಕಾಲುಗಳಿಂದ ಕುಣಿಯಹತ್ತಿದಾಗ ಅವಳ ಪಾದಗಳು ಅರಿಷಿಣ ಹಚ್ಚಿದಂತೆ ರಸಿಕರ ಮನಸ್ಸಿನಲ್ಲಿ ಮೂಡಿಬಿಟ್ಟವು. ಹಾಗೂ ರಾತ್ರಿಯ ಅರ್ಧಕ್ಕಿಂತ ಹೆಚ್ಚು ಭಾಗ ಉರಿದು ಹೋಯಿತು.
ಗರ್ಭಗುಡಿಯ ಬಾಗಿಲನ್ನು ಹಾಕುವ ಕೆಲಸವನ್ನು ಸಣ್ಯಾನಿಗೆ ಕೊಟ್ಟಿದ್ದರು. ಅವನು ಒಳಗೆ ಹೋದಾಗ ಅಲ್ಲಿ ಚಂದ್ರಾವಳಿ ಅದೇ ಜರೀ ಸೀರೆಯನ್ನುಟ್ಟುಕೊಂಡು ಟ್ರಂಕಿಗೆ ಆತುಗೊಂಡು ಅಡ್ಡಾಗಿದ್ದಳು. ಅವಳ ಕಣ್ಣು ಅರ್ಧ ಮುಚ್ಚಿದ್ದವು. ಸಹಜವಾಗಿ ಒರಗಿಕೊಂಡ ಅವಳ ಶರೀರದಲ್ಲಿ ನಾಗಿಣಿಯ ಸೌಂದರ್ಯವಿತ್ತು. ಕುಪ್ಪುಸದ ಕೆಳಗಿನ ಸಂಪಿಗೆಯ ಬಣ್ಣದ ಭಾಗ ಸೆರಗು ಜಾರಿದ್ದರಿಂದ ತೆರೆದೇ ಇದ್ದಿತು. ಅವಳ ಮಗ್ಗುಲಲ್ಲಿಯೇ ಅವಳ ಕೆಲಸದ ಮುದುಕಿ ತೂಕಡಿಸುತ್ತ ಕುಳಿತಿದ್ದಳು. ಸಣ್ಯಾನನ್ನು ನೋಡಿದ ಕೂಡಲೆ ಚಂದ್ರಾವಳಿ ಮೈ ಉದ್ದ ಚಾಚಿದಳು.
ಭಾಗ 1 : Literature: ನೆರೆನಾಡ ನುಡಿಯೊಳಗಾಡಿ; ಮರಾಠಿ ಕಥೆಗಾರ ಜಿಎ ಕುಲಕರ್ಣಿಯವರ ‘ಚಂದ್ರಾವಳ’ ಕಥೆ
ಮಲಗಿದಲ್ಲಿಂದಲೇ ‘ಏ, ನನಗೆ ಪಾನ ಬೇಕಾಗೇದ, ಇಲ್ಲೆಲ್ಲಾದರೂ ಸಿಗತದ ಏನು ?’ ಎಂದು ಸಣ್ಯಾನನ್ನು ಕೇಳಿದಳು. ಸಣ್ಯಾನಿಗೆ ಎಚ್ಚರಾಯಿತು.
‘ಅದಕ್ಕೇನು ? ಇಲ್ಲೇ ಮೂಲ್ಯಾಗ… ದುಡ್ಡು ಕೊಟ್ಟರ ನಾ ತಂದುಕೊಡತೀನಲ್ಲ?’
‘ಛೇ! ನೀ ಯಾಕ! ಈ ಮುದುಕಿ ಹೋಗತಾಳಲ್ಲ!’ ಕೆಲಸದವಳ ಕಡೆಗೆ ಗೋಣು ಹೊರಳಿಸಿ ಚಂದ್ರಾವಳಿ ಹೇಳಿದಳು.
‘ಬ್ಯಾಡರೀ, ಅಲ್ಲಿ ಹೆಂಗಸರು ಹೋಗೋದು ಬಾಳ ಕಷ್ಟ, ಛೇ ಅದು ಹೊಲಸ ಮಂದೀ ವಸ್ತಿ.’
‘ಮತ್ತ ನಾವೆಂಥಾ ಮಂದೀಪಾ?’ ಚಂದ್ರಾವಳಿ ನಗುತ್ತ ಕೇಳಿದಳು ಮತ್ತು ಅವನಿಗೆ ದುಡ್ಡು ಕೊಟ್ಟಳು. ಆ ಮುದುಕಿ ಕೂಡ ಎಚ್ಚತ್ತು ಬೇ ಬೇ ಎಂದು ನಕ್ಕಳು.
ಲವಂಗ ಹಾಕಿರದ ಪಾನಪಟ್ಟಿಯನ್ನು ಕೈಯಲ್ಲಿ ಹಿಡಿದುಕೊಂಡು ಸಣ್ಯಾ ಒಳಗೆ ಬಂದ. ‘ಪಾನ ತೊಗೊಳ್ಳರಿ’, ಎಂದು ಮರ್ಯಾದೆಯಿಂದ ಹೇಳಿದ. ಆಗ ಆ ಮುದುಕಿ ಮತ್ತೆ ನಕ್ಕಳು. ಚಂದ್ರಾವಳಿ ಮಾತ್ರ ಪಾನಪಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಮೋರೆ ಕೆಳಗೆ ಹಾಕಿದಳು. ‘ನನಗೆ ರೀ ಅಂದವ ನೀನ ಮೊದಲಿನವ ನೋಡು’ ನಿಟ್ಟುಸಿರುಬಿಡುತ್ತ ಅವಳು ಹೇಳಿದಳು. ಅಷ್ಟರಲ್ಲಿಯೇ ಫರಶಿಯ ಮೇಲೆ ಬೂಟಿನ ಸಪ್ಪಳ ಕೇಳಿಬಂತು ಮತ್ತು ಬಿರಾದಾರ ಪಾಟೀಲ ಒಳಗೆ ಬಂದ. ಧೋತರದ ಮೇಲೆ ಟೊಂಕದ ಸುತ್ತ ಸುತ್ತಿಕೊಂಡ ಪೀತಾಂಬರ ಇನ್ನೂ ಹಾಗೆಯೇ ಇತ್ತು. ತಲೆಯ ಮುಂದಿನ ಭಾಗಕ್ಕೆ ಕಟ್ಟಿಕೊಂಡ ಮಣಿಮುಕುಟ ಕೂಡ ತೆಗೆದಿರಲಿಲ್ಲ. ಅವನನ್ನು ನೋಡಿದ ಕೂಡಲೆ ಚಂದ್ರಾವಳಿ ಎದ್ದು ಕುಳಿತಳು. ಪಾಟೀಲ ಟ್ರಂಕಿನೊಳಗಿನಿಂದ ಬಾಟಲಿ ಹೊರಗೆ ತೆಗೆದ ಹಾಗೂ ಬಾಯಿಗೆ ಹಚ್ಚಿದ. ಅದನ್ನು ಮತ್ತೆ ಒಳಗಿಡುತ್ತ ಗೊಗ್ಗರದನಿಯಲ್ಲಿ ಕೇಳಿದ, ‘ಈ ಲಫಂಗ ಯಾರು?’ ‘ನಾ ಅವಗ ಪಾನ ತರಾಕ ಹೇಳಿದ್ದೆ’, ಚಂದ್ರಾವಳಿ ಹೇಳಿದಳು.
‘ಪಾನ? ಚಂದ್ರಾವಳಿಗೆ ನನ್ನ ಬಿಟ್ಟು ಯಾರೂ ಪಾನ ಕೊಡೋ ಹಾಂಗಿಲ್ಲ’ ಅವನು ಸಿಟ್ಟಿನಿಂದ ಚೀರಿದ, ‘ಇಂಥವನ್ನ ತಗೊಂಡು ನಡದದ ಏನು ನಿನ್ನ ಧಂದಾ?’
ಚಂದ್ರಾವಳಿ ಏಕದಂ ಜಿಗಿದು ಕುಳಿತಳು. ಅವಳ ತುಟಿ ಒತ್ತಿಕೊಂಡು ಚೂರಿಯಂತೆ ಸೂಕ್ಷ್ಮ ಹಾಗೂ ತೀಕ್ಷ್ಮವಾದವು.
‘ಮತ್ತೊಮ್ಮೆ ಹೀಂಗ ಸಿಕ್ಕೀ ಅಂದರ ನಿನ್ನ ಕತ್ತರಸೇನು? ಗಟಾರದಾಗಿಂದ ಎತ್ತಿಕೊಂಡು ಬಂದೀನಿ ನಿನ್ನ. ಮತ್ತ ನನ್ನ ತಾಟಿನೊಳಗ ಉಗುಳತೀ?’ ಬಿರಾದಾರ ಪಾಟೀಲ ಏಕದಂ ಮುಂದೆ ಬಂದ ಮತ್ತು ಚಂದ್ರಾವಳಿಯನ್ನು ಕಂಡಲ್ಲಿ ಒದ್ದ. ಅವನ ಬೂಟಿನ ತುದಿಯ ಪೆಟ್ಟು ಅವಳ ಬಿಳಿ ಮೈಮೇಲೆ ಬಿದ್ದಿತು. ಗಾಯಗೊಂಡ ನಾಗಿಣಿಯಂತೆ ಚಂದ್ರಾವಳಿ ವೇದನೆಯಿಂದ ಹೊರಳಿದಳು.
‘ಆಯೀಗ„’ ಎಂದು ಕೂಗಿಕೊಂಡಳು.
‘ಮತ್ತ ನೀನಲಾ ಮಂಗ್ಯಾ? ನಡಿ ಇಲ್ಲಿಂದ. ಇಲ್ಲಾಂದ್ರ ನಿನ್ನ ಎಲುವು ಸಡಿಲ ಮಾಡ್ತೀನಿ ನೋಡು’ ಪಾಟೀಲ ಸಣ್ಯಾನ ಮೇಲೆ ಎಗರಿದ. ಸಣ್ಯಾ ಸೆಟೆದು ನಿಂತ ಮತ್ತು ಸಮೀಪದಲ್ಲಿದ್ದ ತಂಬಿಗೆಯನ್ನು ಮೇಲಕ್ಕೆ ಎತ್ತಿಕೊಂಡ.
‘ಹೋಗಪಾ, ನೀ ಹೋಗು’, ಚಂದ್ರಾವಳಿ ಏಕದಂ ಚೀರಿದಳು. ಬಿರಾದಾರ ಪಾಟೀಲ ಅವಳಿಗೆ ಮತ್ತೊಂದು ಒದಿಕೆ ಕೊಟ್ಟ.
ಸಣ್ಯಾನಿಗೆ ನಿದ್ದೆ ಬರಲೊಲ್ಲದು ಬೆಳ್ಳಗಿನ ಚಂದ್ರಾವಳಿ, ಹಸಿರು ನಾಜೂಕು ಪಾನ ಮತ್ತು ಪಾಟೀಲನ ಕರೀ ಹಾವಿನ ಮೋತಿಯಂಥ ಬೂಟು ಇವುಗಳಲ್ಲಿಯೇ ಅವನ ಮನಸ್ಸು ತಿರುಗುತ್ತಿತ್ತು. ಬೆಳಿಗ್ಗೆ ಗಾಡಿಗಳನ್ನು ತುಂಬಿಕೊಂಡು ಪಾಟೀಲನ ಮಂಡಳಿ ಹೊರಟುಹೋಯಿತು. ಒಂದು ಗಾಡಿಯಲ್ಲಿ ನಿನ್ನಿನ ಜರೀ ಸೀರೆಯುಟ್ಟು ಚಂದ್ರಾವಳಿ ಮಲಗಿಕೊಂಡಿದ್ದಳು. ಸಣ್ಯಾನಿಗೆ ಹಿಂದಿನಿಂದ ಅವಳ ಬಿಳಿತೊಗಟೆ ಬಣ್ಣದ ಕಾಲುಗಳು ಮಾತ್ರ ಕಾಣಿಸಿದವು. ಅರಿಷಿಣ ಮೆತ್ತಿದ ಪಾರಿವಾಳದಂತೆ.
ಚಂದ್ರಾವಳಿ ಶಾಂತರೀತಿಯಿಂದ ಕಾಳು ಹೆಕ್ಕುತ್ತಿದ್ದಳು. ಸಣ್ಯಾ ಲಗುಬಗೆಯಿಂದ ಅವಳನ್ನೆತ್ತಿ ಕಪಾಟಿನಲ್ಲಿಟ್ಟು ಬಾಗಿಲು ಮುಚ್ಚಿದ. ಯಾಕೆಂದರೆ, ಅವನಿಗೆ ಎದುರಿನಿಂದ ಪದಮಜೀ ಬರುವುದು ಕಾಣಿಸಿತು. ಪದಮಜೀ ತನ್ನ ಹಸಿರು ರುಮಾಲನ್ನು ಒಂದು ಬಗಲಿನಿಂದ ಇನ್ನೊಂದು ಬಗಲಿಗೆ ಕಳಿಸಿದ.
‘ಏನು ಸಣ್ಯಾ ನಿನ್ನ ಗುಂಗಾಡು ಏನಂತಾವ?’ ಅವನು ಕೇಳಿದ ರೀತಿ ಕುತ್ಸಿತವಾಗಿತ್ತು. ‘ತಮ್ಮಾ ಇದಕ್ಕಿಂತ ಕೋಳೀನಾದರೂ ಸಾಕು. ಅಮಾವಾಸ್ಯೆಗೊಮ್ಮೆ ಕೊಯ್ಯಾಕ ಆದರೂ ಬಂದೀತು’. ಒಳಗೆ ಏನೋ ಒಡೆದಂತೆ ಅವನು ಒಮ್ಮೆಲೆ ನಕ್ಕ. ಹಕ್ಕಿಗಳು ಅದನ್ನು ಕೇಳಿ ಹೆದರಿದವು. ಪದಮಜೀ ಇಪ್ಪತ್ನಾಲ್ಕು ಬೆರಳಿನವನ ಹತ್ತಿರ ಬಂದು ಕುಳಿತುಕೊಂಡ. ಬಾಳೂ ಈಗ ತನ್ನ ಸ್ವಂತದ ಬೀಡಿಗಳನ್ನು ಹೊರತೆಗೆದ. ಅವುಗಳಲ್ಲಿ ಒಂದನ್ನು ತೆಗೆದುಕೊಂಡು ಪದಮಜೀ ಸುಮ್ಮನೆ ಉಫ್ ಎಂದು ಊದಿ ಹೊತ್ತಿಸಿದ. ‘ಏನೋ ಬಾಳೂ ಇವೇನು ಪಾರಿವಾಳಾನೋ ಅಥವಾ ಬೋಳು ತಲೆ ಹೆಂಗಸರೋ?’
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ‘ಹೌದು, ಚಂದ್ರಾವಳಿಯೆಂದರ ಸರದಾರೀ ಪಾರಿವಾಳ ಇದ್ದಾಳ’
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 11:26 am, Fri, 11 March 22