Obituary : ಕನ್ನಡ ರಂಗಭೂಮಿಯ ಕ್ರಿಯಾಶೀಲ ನಿರ್ದೇಶಕ ಜಿ. ಚನ್ನಕೇಶವ ಇನ್ನಿಲ್ಲ

Theatre : ‘ಚನ್ನಕೇಶವ ಅಪ್ರತಿಮ ಪ್ರತಿಭಾವಂತ, ವಿಭಿನ್ನ ಮತ್ತು ಆಧುನಿಕ ಸಂವೇದನೆಯ ರಂಗಕರ್ಮಿ ಮತ್ತು ಚಿತ್ರಕಲಾವಿದ. ಅವರ ಸಾವಿನಿಂದ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಪಾರ ನಷ್ಟವಾಗಿದೆ. ವೈಯಕ್ತಿಕವಾಗಿ ಅತ್ಯಂತ ಆತ್ಮೀಯ ಕಿರಿಯ ಬಂಧುವೊಬ್ಬನನ್ನು ಕಳೆದುಕೊಂಡ ನೋವು ನನ್ನದು.’ ವಿವೇಕ ಶಾನಭಾಗ

Obituary : ಕನ್ನಡ ರಂಗಭೂಮಿಯ ಕ್ರಿಯಾಶೀಲ ನಿರ್ದೇಶಕ ಜಿ. ಚನ್ನಕೇಶವ ಇನ್ನಿಲ್ಲ
ಕ್ರಿಯಾಶೀಲ ರಂಗನಿರ್ದೇಶಕ, ಚಿತ್ರಕಲಾವಿದ ಜಿ. ಚನ್ನಕೇಶವ
ಶ್ರೀದೇವಿ ಕಳಸದ | Shridevi Kalasad

|

Jul 08, 2021 | 12:32 AM

ಬೆಂಗಳೂರು : ಕನ್ನಡ ರಂಗಭೂಮಿಯ ಬಹುಮುಖ ಪ್ರತಿಭೆ, ಕ್ರಿಯಾಶೀಲ ರಂಗನಿರ್ದೇಶಕ, ರಂಗವಿನ್ಯಾಸ ವಿಶೇಷಜ್ಞ, ಚಿತ್ರಕಲಾವಿದ, ನಟ, ನೀನಾಸಂನ ಹಿರಿಯ ಕಲಾವಿದ ಜಿ. ಚನ್ನಕೇಶವ (49) ಅವರು ಬಹುಅಂಗಾಂಗ ವೈಫಲ್ಯದಿಂದ ಇಂದು ಸಂಜೆ 4.10ಕ್ಕೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರ ಪತ್ನಿ, ರಂಗಸಂಗೀತ ಕಲಾವಿದೆ ಗಿರಿಜಾ ಸಿದ್ದಿ, ಮಗ ಮಧುರಚೆನ್ನಿಗ ಸುಬ್ಬಣ್ಣ ಮತ್ತು ಅಪಾರ ಆಪ್ತ-ಕಲಾಬಳಗ  ದುಃಖದಲ್ಲಿ ಮುಳುಗಿದೆ. ನಿಸ್ವಾರ್ಥ ಮನೋಭಾವದ, ತನ್ನ ಬಳಗಕ್ಕೆಲ್ಲ ಸ್ಫೂರ್ತಿಯ ಸೆಲೆಯಾಗಿದ್ದ ಭಾವಜೀವಿ, ಸೃಜನಶೀಲ ಕಲಾವಿದ ಚನ್ನಕೇಶವ ಅವರ ನಿಧನ ಅವರ ರಂಗಸ್ನೇಹಿತರಿಗೆ, ವಿದ್ಯಾರ್ಥಿಗಳಿಗೆ ಅರಗಿಸಿಕೊಳ್ಳಲಾಗದ ಸಂಕಟವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಅನೇಕ ಕನಸುಗಳನ್ನಿಟ್ಟುಕೊಂಡು ಕಟ್ಟಿದ ಅವರ ಸಂಸ್ಥೆ ‘ಲೋಕಚರಿತ’ದಲ್ಲಿ ಅವರ ಅನುಪಸ್ಥಿತಿ ಬಹಳೇ ಕಾಡುತ್ತಿದೆ.

ಹಿರಿಯ ಕಥೆಗಾರ ವಿವೇಕ ಶಾನಭಾಗ ಮತ್ತು ಚನ್ನಕೇಶವ ಅವರುಗಳು ಪರಸ್ಪರ ಬಹುಕಾಲದ ಒಡನಾಡಿಗಳು. ವಿವೇಕ ಅವರ ಸಂಪಾದಕತ್ವದಲ್ಲಿ ಪ್ರಕಟವಾದ ‘ದೇಶಕಾಲ’ ಸಾಹಿತ್ಯಿಕ ಪತ್ರಿಕೆಯ ಮುಖಪುಟಗಳನ್ನು ಮತ್ತು ಒಟ್ಟಾರೆ ವಿನ್ಯಾಸವನ್ನು ಚನ್ನಕೇಶವ ಅವರು ಅತ್ಯಂತ ಆಸ್ಥೆಯಿಂದ, ವಿಶೇಷ ಹೊಳಹುಗಳಿಂದ ರೂಪಿಸುತ್ತಿದ್ದ ರೀತಿ ಸಾಹಿತ್ಯಾಸಕ್ತರ ಗಮನ ಸೆಳೆದಿತ್ತು. ‘ಚನ್ನಕೇಶವ ಅಪ್ರತಿಮ ಪ್ರತಿಭಾವಂತ, ವಿಭಿನ್ನ ಮತ್ತು ಆಧುನಿಕ ಸಂವೇದನೆಯ ರಂಗಕರ್ಮಿ ಮತ್ತು ಚಿತ್ರಕಲಾವಿದ. ಅವರ ಸಾವಿನಿಂದ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಪಾರ ನಷ್ಟವಾಗಿದೆ. ವೈಯಕ್ತಿಕವಾಗಿ ಅತ್ಯಂತ ಆತ್ಮೀಯ ಕಿರಿಯ ಬಂಧುವೊಬ್ಬನನ್ನು ಕಳೆದುಕೊಂಡ ನೋವು ನನ್ನದು.’ ವಿವೇಕ ಅವರು ತಮ್ಮ ಆಪ್ತಬಂಧುವಿನ ನಿರ್ಗಮನವನ್ನು ಹೀಗೆ ನೆನೆಯುತ್ತಾರೆ.

ಚನ್ನಕೇಶವ ಅವರು ರಂಗವಿನ್ಯಾಸಕ್ಕೆ ವಿಶಿಷ್ಟ ಪರಿಕಲ್ಪನೆ ಕೊಟ್ಟವರು. ಚಿತ್ರಕಲಾ ಪರಿಷತ್ತಿನಲ್ಲಿ ಪದವಿ ಪೂರೈಸಿದ್ದ ಅವರಿಗೆ ನಟನೆ, ಚಿತ್ರಕಲೆ, ವಿನ್ಯಾಸ, ನಿರ್ದೇಶನ ಹೀಗೆ ರಂಗಭೂಮಿಯ ಯಾವ ವಿಭಾಗಗಳಲ್ಲಿಯೂ  ತಮ್ಮದೇ ಆದ ಛಾಪು ಮೂಡಿಸುವಂಥ ಕಲೆಗಾರಿಕೆ ಸಿದ್ಧಿಸಿತ್ತು. ಅವರ ಪ್ರತಿಯೊಂದು ಕಲಾಭಿವ್ಯಕ್ತಿಯಲ್ಲಿಯೂ ‘ಚನ್ನತನ’ದ ನಿಲುವು ಇದ್ದೇ ಇರುತ್ತಿತ್ತು. ಕೊರೊನಾ ಸಂದರ್ಭದಲ್ಲಿ ರಂಗಚಟುವಟಿಕೆಗಳಿಲ್ಲದೇ ಕೈಕಾಲು ಕಟ್ಟಿಹಾಕಿದಂತಾದಾಗ ‘ಹೋ Tell ಆರ್ಟ್​ Taste’ ಎಂಬ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಿ ಕೆಲ ತಿಂಗಳುಗಳ ಕಾಲ ರುಚಿಪ್ರಯೋಗಗಳನ್ನೂ ಮಾಡುತ್ತ ತನ್ನೊಳಗಿನ ಕಲಾವಿದನ ಸ್ವಾವಲಂಬಿತನದ ಮುಖವನ್ನೂ ಕಲಾತ್ಮಕವಾಗಿಯೇ ಪ್ರದರ್ಶಿಸಿದರು. ಮಕ್ಕಳಿಗಾಗಿ ಆನ್​ಲೈನ್​ನಲ್ಲಿ ರಂಗಭೂಮಿಯ ಪಾಠಗಳನ್ನೂ ಹೇಳಿಕೊಟ್ಟರು.

ನೀನಾಸಂನಲ್ಲಿ ಅವರ ವಿದ್ಯಾರ್ಥಿನಿಯಾಗಿದ್ದ ರಂಗನಿರ್ದೇಶಕಿ ಶ್ವೇತಾ ಶ್ರೀನಿವಾಸ್, ‘ಹೆಗ್ಗೋಡಿನ ನೀನಾಸಂನಲ್ಲಿ ನನ್ನ ಗುರುಗಳು ಅವರು. ವಿಶಿಷ್ಟ ಪ್ರತಿಭೆಯ ವ್ಯಕ್ತಿ. ಅವರ ಊರು ಮತ್ತು ನನ್ನ ಹಿರಿಯರ ಊರು ಮಂಡ್ಯ ಎನ್ನುವುದು ನಮ್ಮಿಬ್ಬರನ್ನು ಮತ್ತಷ್ಟು ಆಪ್ತರನ್ನಾಗಿಸಿತ್ತು. ಬಹಳ ಸರಳ ವ್ಯಕ್ತಿತ್ವ. ಯಾವತ್ತೂ ಕೋಪ ಮಾಡಿಕೊಂಡವರಲ್ಲ. ಏನೇ ಇದ್ದರೂ ಬೇಗ ಮರೆತುಬಿಡುತ್ತಿದ್ದರು. ತಿಳಿನೀರಿನಂತಿದ್ದವರು. ಅವರ ಬಳಗದವರು, ವಿದ್ಯಾರ್ಥಿಗಳು ಯಾರೇ ಆಗಲಿ, ಏನೇ ಪ್ರಾಜೆಕ್ಟ್ ಮಾಡಿದರೂ ಅದಕ್ಕೆ ಹಗಲೂ ರಾತ್ರಿ ಎನ್ನದೆ ಸ್ವಯಂಪ್ರೇರಿತರಾಗಿ ಒಳಗೊಳ್ಳುವಂಥ ನಿಸ್ವಾರ್ಥ, ಉತ್ಸಾಹಿ ಮನಸಿಗರು. ಅಸಾಧ್ಯ ಪ್ರತಿಭೆ. ಅವರ ರಂಗವಿನ್ಯಾಸ ಯಾವತ್ತೂ ವಿಭಿನ್ನ. ಇದ್ದ ಪರಿಕರಗಳನ್ನೇ ಬಳಸಿಕೊಂಡು ಸೂಚ್ಯವಾಗಿ ರೂಪಿಸುವ ಸೂಕ್ಷ್ಮತೆ ನೋಡಿಯೇ ಅನುಭವಿಸಬೇಕು.’

‘ನಮ್ಮ ಕೋಡ್​ ವರ್ಡ್​ ನಾಕಾಣೆ ಪೆಪ್ಪರಮೆಂಟು. ‘ಆ ಸಿನೆಮಾ ಮಾಡಿದೆ ಈ ಸಿನೆಮಾ ಮಾಡಿದೆ ಅಂತೆಲ್ಲ ಹೇಳ್ತೀ. ನೀ ಊಟ ಕೊಡಿಸೋದೆಲ್ಲ ಏನೂ ಬೇಡ. ನಾಲ್ಕಾಣೆ ಪೆಪ್ಪರ್​ಮೆಂಟು? ಹೋಗಲಿ ನಿಂಬೆಹುಳಿ?’ ಎಂದು ಆಗಾಗ ಅಕ್ಕರೆಯಿಂದ ನಗೆ ಉಕ್ಕಿಸುತ್ತಿದ್ದರು. ರಂಗಕಲಾವಿದರಿಗೆ ಸಂಬಂಧಿಸಿದ ಯಾವ ಕೆಲಸವಿದ್ದರೂ ಹುಡುಗರನ್ನೆಲ್ಲ ಒಟ್ಟಾಗಿ ಕರೆದುಕೊಂಡೇ ಹೋಗುತ್ತಿದ್ದರು. ಕಲೆಗೆ ಸಂಬಂಧಿಸಿದ ಹೊಸ ಹೊಸ ಪರಿಕಲ್ಪನೆಗಳ ಬಗ್ಗೆಯೇ ಅವರಿಗೆ ಸದಾ ಆಲೋಚನೆ. ಹಳೇ ಕಂಪ್ಯೂಟರ್ ಇಟ್ಟುಕೊಂಡು ಅದರಲ್ಲೇ ವಿನ್ಯಾಸಗಳನ್ನು ರೂಪಿಸಿಕೊಂಡು, ನಮ್ಮ ಲೋಕಚರಿತಕ್ಕೆ ಆ ವಾದ್ಯ ಕೊಂಡುಕೊಳ್ಳೋಣ ಈ ವಾದ್ಯ ಕೊಂಡುಕೊಳ್ಳೋಣ ಎಂದು ಗುಂಪು ಕಟ್ಟಿಕೊಂಡು ಹೊರಟುಬಿಡುತ್ತಿದ್ದರು. ಸ್ವಂತಕ್ಕೆ ಕೊನೆತನಕವೂ ಆರ್ಥಿಕ ಭದ್ರತೆಯನ್ನು ರೂಪಿಸಿಕೊಳ್ಳಲೇ ಇಲ್ಲ ಎನ್ನುವುದು ಬಹಳ ನೋವನ್ನುಂಟು ಮಾಡುತ್ತದೆ. ಹೀಗವರು ಇಲ್ಲವಾಗಿರುವುದು, ಅವರ ಆಪ್ತಬಳಗಕ್ಕೆ ಕೊಟ್ಟು ಹೋದ ದೊಡ್ಡ ನೋವು.’ ಎಂದು ಸ್ಮರಿಸುತ್ತಾರೆ.

ನಾಳೆ ಗುರುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ನಾಗರಭಾವಿಯಲ್ಲಿರುವ ಚನ್ನಕೇಶವ ಅವರ ತಾಯಿಯ ಮನೆಯಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಸ್ಥಳ : ನಮ್ಮೂರ ತಿಂಡಿ ಎದುರು. ಬೇಸ್​ಲೈನ್​ ಸ್ಪೋರ್ಟ್ಸ್​ ಹಿಂಭಾಗ.

ಇದನ್ನೂ ಓದಿ : ಜಗದೀಶ್ವರ ನಾಟಕರಂಗದಲ್ಲಿ ಏನುಳಿದು ಏನಳಿದು ಇನ್ನೇನೇನು ಮೊಳೆಯುವುದೋ?

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada