Literture: ನೆರೆನಾಡ ನುಡಿಯೊಳಗಾಡಿ; ನಾ ಜೂಜು ಆಡೋದಿಲ್ಲಪಾ, ಸಾಲಾ ಬೇಕಾಗಿದ್ರ ನಿನಗ ಎಂಟಾಣೆ ಕೊಡ್ತೀನಿ

G.A.Kulkarni‘s Short Story : ಸ್ವಲ್ಪ ವೇಳೆಯಲ್ಲಿ ಅವಳು ಸಬ್ಜೀ ಪಾರಿವಾಳದೊಡನೆ ಆಕಾಶದಲ್ಲಿ ಹೊಳೆಯಹತ್ತಿದಾಗ ಸಣ್ಯಾನ ಮನಸ್ಸು ಅಭಿಮಾನದಿಂದ ಅರಳೆಯಂತೆ ಹಿಗ್ಗಿತು. ಏನಾದರೂ ಆಗಲಿ, ಚಂದ್ರಾವಳಿ ಅವನ ಮಾನವನ್ನು ಕಾಯ್ದಿದ್ದಳು.

Literture: ನೆರೆನಾಡ ನುಡಿಯೊಳಗಾಡಿ; ನಾ ಜೂಜು ಆಡೋದಿಲ್ಲಪಾ, ಸಾಲಾ ಬೇಕಾಗಿದ್ರ ನಿನಗ ಎಂಟಾಣೆ ಕೊಡ್ತೀನಿ
ಲೇಖಕರಾದ ಜಿ. ಎ. ಕುಲಕರ್ಣಿ ಮತ್ತು ಡಾ. ಜಿ. ಎಸ್. ಆಮೂರ
Follow us
ಶ್ರೀದೇವಿ ಕಳಸದ
|

Updated on:Mar 11, 2022 | 1:15 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi: ಇಪ್ಪತ್ನಾಲ್ಕು ಬೆರಳಿನ ಬಾಳು ಒಣಗಿದ ಹೀರೇಕಾಯಿಯಂತೆ ಸಂಕುಚಿತನಾದ. ಪದಮಜೀ ಆಗಿಂದಾಗಲೇ ತಯಾರಾಗುತ್ತಾನೆನ್ನುವುದರ ಕಲ್ಪನೆ ಅವನಿಗಿರಲಿಲ್ಲ. ಆದರೆ ಈಗ ಹಿಂಜರಿಯುವುದು ಸಾಧ್ಯವೂ ಇರಲಿಲ್ಲ. ಅವನು ಮೆಲ್ಲಗೆ ಕಿಸೆ ತಪಾಸು ಮಾಡಿ ನೋಡಿದ. ಅದರಲ್ಲಿ ಮೂರು ರೂಪಾಯಿ ಇದ್ದವು. ಇಪ್ಪತ್ನಾಲ್ಕು ಬೆರಳಿನವನ ಒಬ್ಬ ತಮ್ಮ ಕೊಲ್ಹಾಪುರದಲ್ಲಿದ್ದ. ದುಡ್ಡಿನ ಅಡಚಣಿಯಾದಾಗಲೆಲ್ಲ `ನಾನು ಬಹಾಳ ಅಜಾರೀ ಇದ್ದೀನಿ. ಹದಿನೈದು ದಿವಸದ ಮಟ್ಟಿಗೆ ನಿನ್ನಲ್ಲಿ ಬರ್ತೀನಿ’ ಎಂದು ಬಾಳೂ ಅವನಿಗೆ ಪತ್ರ ಕಳಿಸುತ್ತಿದ್ದ. ಆ ತಮ್ಮ ಅವಸರವಸರದಿಂದ ಹತ್ತು ಹದಿನೈದು ರೂಪಾಯಿ ಕಳಿಸಿ, `ಅಲ್ಲಿಯೇ ಔಷಧ ತೆಗೆದುಕೋ’ ಎಂದು ಬರೆದು ಅವನನ್ನು ಸಮಾಧಾನಪಡಿಸುತ್ತಿದ್ದ. ಈ ಬಾರಿ ಅವನಿಗೆ ಐದು ರೂಪಾಯಿ ಬಂದಿದ್ದವು. ಅದರಲ್ಲಿ ಮೂರು ರೂಪಾಯಿ ಈಗ ಉಳಿದುಕೊಂಡಿದ್ದವು.

ಕಥೆ : ಚಂದ್ರಾವಳ | ಮರಾಠಿ : ಜಿ. ಎ. ಕುಲಕರ್ಣಿ | ಕನ್ನಡಕ್ಕೆ : ಜಿ. ಎಸ್. ಆಮೂರ | ಸೌಜನ್ಯ : ದೇಶಕಾಲ ತ್ರೈಮಾಸಿಕ ಪತ್ರಿಕೆ

(ಭಾಗ 6)

‘ಮೂರು ರೂಪಾಯಿ!’ ಸ್ವಲ್ಪ ತ್ರಾಸಗೊಂಡಂತೆಯೆ ಅವನು ಹೇಳಿದ.

‘ಮೂರು!’ ಪದಮಜೀ ನಕ್ಕ. ‘ಗಿಡ್ಡ ನಾಯಿ, ಗಿಡ್ಡ ಬಾಲ!’

ಸಣ್ಯಾ ಎಂಟಾಣೆ ಚೆಲ್ಲಿದ. ಗಾಂಜಾಬಡಕ ಬಾಬೂ ಒಮ್ಮೆಲೆ ಎಚ್ಚತ್ತವನಂತೆ ಕಂಡ. ಅವನು ಮೂರು ರೂಪಾಯಿಗೆ ತನ್ನ ಕೊಡ ಒತ್ತೀ ಹಾಕಿದ್ದ. ಅವುಗಳಲ್ಲಿ ಒಂದು ರೂಪಾಯಿ ತೆಗೆದು ಇಪ್ಪತ್ನಾಲ್ಕು ಬೆರಳಿನವನತ್ತ ತೂರಿದ. ಮತ್ತು ಮಂಜುಗಟ್ಟಿದವನಂತೆ ಕೆಂಪು ಕಣ್ಣುಗಳನ್ನು ತೆರೆದಿಟ್ಟು ಸುಮ್ಮನಿದ್ದ.

‘ಥೂ! ಐದು ರೂಪಾಯಿ ಕೆಳಗೆ ನಾನು ಖಾನೆ ತೆರೆಯೋದೇ ಇಲ್ಲ’ ಗೋಣಲ್ಲಾಡಿಸುತ್ತ ಪದಮಜೀ ಹೇಳಿದ.

ಇಷ್ಟೊತ್ತಿಗಾಗಲೇ ನಾಲ್ಕೈದು ಹುಡುಗರು ಅಲ್ಲಿ ಸೇರಿದ್ದರು. ಗಾವಠೀ ಶಾಲೆ ಈಗ ಪೂರಾ ಭರ್ತಿ ಆಗಿತ್ತು. ಆದರೆ ಒಳಗೆ ಎಲ್ಲಾ ಶಾಂತ. ಹುಡುಗರಿಗೆ ಲೆಕ್ಕ ಬಿಡಿಸಲು ಹಚ್ಚಿ ಮಾಸ್ತರರು – ಅಲ್ಲ, ಗುರೂಜೀ – ಬಿಸಿಲು ಕಾಯಿಸಲು ಹೊರಗೆ ಬಂದಿದ್ದರು. ಬೂದುಗುಂಬಳಕ್ಕೆ ಖಾದೀ ಕೋಟು ಹಾಕಿದಂತೆ ಅವರು ಕಾಣುತ್ತಿದ್ದರು. ಅವರಿಗೆ ಯಾರಾದರೂ ‘ಮಾಸ್ತರ್’ ಎಂದು ಕರೆದರೆ ಕೀಲಿಕೈಗಳ ಗೊಂಚಲಿನಿಂದ ಅವರಿಗೆ ಹೊಡೆತ ಬೀಳುತ್ತಿದ್ದವು.

‘ಏನಪಾ ಸಣ್ಯಾ, ಏನ ನಡದದ? ಇಸ್ಪೀಟ್ ಆಟ ಏನು?’ ಸಣ್ಯಾ ನಾಚಿಕೊಂಡ. ‘ನಡೆಯೂದ ಮಾಸ್ತರ್, ಇದ„ ನಮ್ಮ ಪರೀಕ್ಷಾ. ಎಂಟಾಣೆ ಕಡಿಮೀ ಆಗ್ಯಾವ ನೋಡ್ರಿ, ಕೊಡತೀರೇನು! ದೇವರಾಣಿ ನಾ ಪರತ ಕೊಡ್ತೀನಿ.’

ಗುರೂಜಿ ಇದುವರೆಗೆಂದರೆ ಒಂದೆರಡು ರೂಪಾಯಿ ಕಳೆದುಕೊಂಡಿದ್ದರು. ಆದರೆ ಸದ್ಯದ ವಾತಾವರಣದಿಂದ ಅವರು ಅಸ್ವಸ್ಥರಾದರು. ಅವರು ಮೆಲ್ಲಗೆ ಶಾಲೆಯೊಳಕ್ಕೆ ದೃಷ್ಟಿ ಹಾಯಿಸಿದರು.

‘ಫಟ್! ನಾ ಜೂಜು ಆಡೋದಿಲ್ಲಪಾ. ಆದರೆ ಸಾಲಾ ಬೇಕಾಗಿದ್ರ ನಿನಗ ಎಂಟಾಣೆ ಕೊಡ್ತೀನಿ ನೋಡು. ಅದರ ಮುಂದಿನ ಶನಿವಾರ ಪೈಗೆ ಪೈ ತಿರುಗಿ ಕೊಡಬೇಕು ಈಗ„ ಹೇಳಿಡ್ತೀನಿ.’

ಗುರೂಜಿ ಮೊದಲು ಎಲ್ಲರ ದುಡ್ಡು ಕಲೆಹಾಕಿದರು ಹಾಗೂ ಅದನ್ನೆಲ್ಲ ಕಿಸೆಯಲ್ಲಿ ಹಾಕಿಕೊಂಡು ಐದರ ನೋಟು ಹೊರತೆಗೆದು ಅದನ್ನು ಇಪ್ಪತ್ನಾಲ್ಕು ಬೆರಳಿನವನಿಗೆ ಕೊಟ್ಟರು. ಬಾಳೂನ ಹತ್ತಿರ ತೂತಿದ್ದ ಒಂದು ಪೈಸಾ ಇತ್ತು. ಅದರಲ್ಲಿ ಈ ನೋಟನ್ನು ಸುರುಳಿ ಮಾಡಿ ಸೇರಿಸಿ ಪದಮಜೀ ಮುಂದೆ ಕುಣಿಸಿದ.

‘ನಡೀ, ಐದು ರೂಪಾಯಂದರ ಐದು ರೂಪಾಯಿ. ಒಂದು ಪೈಸಾ ದೇವರಿಗೆ.’ ಸುತ್ತ ಮುತ್ತಲಿದ್ದ ಹುಡುಗರೆಲ್ಲ ಒಟ್ಟಿಗೆ ಸೇರಿ ಅಲ್ಲಲ್ಲಿ ಕುಳಿತುಕೊಂಡರು. ಅವರಲ್ಲಿ ಪದಮಜೀಯ ನೆರೆಯವನಾದ ಧೋಂಡ್ಯಾನೂ ಇದ್ದ. ಅವನನ್ನು ಪದಮಜೀ ಕರೆದ ಕೂಡಲೇ ಬಾಯಿ ತೆರೆದುಕೊಂಡು ಮುಂದೆ ಬಂದ.

‘ಹೋಗಿ ನನ್ನ ಸಬ್ಜೀ ಗಂಡು ಪಾರಿವಾಳ ತಗೊಂಡು ಬಾ’ ಪದಮಜೀ ಹೇಳಿದ. ‘ಆದರ ನೋಡು. ನಿನ್ನ ಕೈಯಿಂದ ಅದೇನಾದರೂ ತಪ್ಪಿಸಿಕೊಂಡು ಹೋಯಿತು ಅಂದರ ನಿನ್ನ ಕುಂಡೀ ಕತ್ತರಸತೀನಿ.’ ಎಲ್ಲಾ ಹುಡುಗರೂ ಒಮ್ಮೆಲೆ ನಕ್ಕರು. ಇದು ಪದಮಜೀಯ ಹಳೇ ಜೋಕು. ಅವನು ಇಪ್ಪತ್ನಾಲ್ಕು ಬೆರಳಿನವನಿಗೆ ಹೇಳಿದ. ‘ಇನ್ನ ಹೊಯಿಕೋ ನೀನು. ನಿನ್ನ ಮೂರು ರೂಪಾಯಿ ಖಡ್ಡೇದಾಗ ಹೋದವು’. ಸ್ವಲ್ಪ ವೇಳೆಯಲ್ಲಿ ಧೋಂಡ್ಯಾ ಮರಳಿ ಬಂದ. ಅವನ ಜೊತೆಗೆ ಹೊಸ ಟೋಳಿಯೊಂದು ಅವನ ಹಿಂದಿನಿಂದ ಬಂದಿತ್ತು. ಪದಮಜೀ ಸಬ್ಜೀ ಗಂಡು ಪಾರಿವಾಳವನ್ನು ಕೈಯಲ್ಲಿ ತೆಗೆದುಕೊಂಡು ಎದೆಯುಬ್ಬಿಸಿ ಸಣ್ಯಾನ ಎದುರಿಗೆ ನಿಂತ.

ಸಣ್ಯಾನ ಮುಖ ಬಡಿಗೆಯ ಪೆಟ್ಟು ತಿಂದಂತೆ ಪೂರಾ ಮಣ್ಣಾ ಮುಕ್ಕಿತ್ತು. ಹಲಸಿನಂತೆ ಪುಷ್ಪವಾದ ಆ ಪಾರಿವಾಳವನ್ನು ನೋಡಿದ ನಂತರ ಅವನ ಉತ್ಸಾಹ ಸತ್ತುಹೋಯಿತು. ಹಸಿರು–ಕೆಂಪು ಬಣ್ಣದ ಸೊಕ್ಕಿದ ಆ ಪಾರಿವಾಳದೆದುರು ನಾಜೂಕು ಅರಿವೆಯ ಮೇಲೆ ಕಸೂತಿ ತೆಗೆದಂತೆ ಕಾಣುವ ಚಂದ್ರಾವಳಿ ಹೇಗೆ ತಾಳಿಯಾಳು? ಆ ಗಂಡು ಪಾರಿವಾಳ ತನ್ನ ಕುತ್ತಿಗೆಯನ್ನು ಹೊರಳಿಸುವುದರಲ್ಲಿ ಕೂಡ ಸರದಾರೀ ಥಾಟು ಇದ್ದಿತು, ತನ್ನ ಸಾಮರ್ಥ್ಯದ ಬಗ್ಗೆ ಗರ್ವವಿದ್ದಿತು. ಸಣ್ಯಾನ ಮನಸ್ಸು ಅವನಿಗೆ ತಿಳಿಯದಂತೆಯೇ ಅಭಿಮಾನದಿಂದ, ಹೇವದಿಂದ ತುಂಬಿತು. ಮತ್ತು ಕುತೂಹಲದಿಂದ ತನ್ನ ಮಡಿಚಿದ ಬೆರಳನ್ನು ಅದರ ಎದುರು ಚಾಚಿದ. ಕೂಡಲೇ ಅದು ಗಟ್ಟಿಯಾಗಿ ಅವನನ್ನು ಕಚ್ಚಿತು. ಕಳವಳಿಸಿ ಸಣ್ಯಾ ಕೈ ಹಿಂತೆಗೆದುಕೊಂಡ. ‘ಚ್ಚಾ! ಜೋರದಪ ಹಕ್ಕಿ!’ ಸಣ್ಯಾ ಹೇಳಿದ.

ಭಾಗ 4 : Literature: ನೆರೆನಾಡ ನುಡಿಯೊಳಗಾಡಿ; ‘ಏನೋ ಬಾಳೂ ಇವೇನು ಪಾರಿವಾಳಾನೋ ಅಥವಾ ಬೋಳು ತಲೆ ಹೆಂಗಸರೋ?’ 

ಅಷ್ಟೊತ್ತಿಗೆ ಪದಮಜೀ ಆ ಗಂಡು ಪಾರಿವಾಳವನ್ನು ಕಟ್ಟಿದ್ದ ದಾರ ಬಿಚ್ಚಿದ್ದ ಮತ್ತು ಅದರ ರೆಕ್ಕೆಗಳನ್ನು ಪಂಖದಂತೆ ಕೈಯಿಂದ ತಿರುವಹತ್ತಿದ್ದ. ‘ಎಷ್ಟು ಒಗೆತಪಾ ಸಣ್ಯಾ?’

ಎರಡು? ನಾಲ್ಕು? ಸಣ್ಯಾ ವಿಚಾರದಲ್ಲಿ ಬಿದ್ದ. ಅವನಿಗೆ ಚಂದ್ರಾವಳಿಯ ಹಾರಾಟದ ಕಲ್ಪನೆ ಇರಲಿಲ್ಲ. ಎರಡು ಒಗೆತಗಳಲ್ಲಿ ಅದು ಮೇಲೇರೀತೇ? ಸಣ್ಯಾನ ಹಣೆ ಮೇಲೆ ನಿರಿಗೆ ಕಾಣಿಸಿಕೊಂಡವು. ‘ನಾಲ್ಕಿರಲಿ ಬಿಡು’. ಪದಮಜೀ ಶಾಂತರೀತಿಯಿಂದ ಮತ್ತೆ ದಾರ ಸುತ್ತಲು ಪ್ರಾರಂಭಿಸಿದ. ಉತ್ಸುಕತೆಯಿಂದ ತುಂಬಿದ್ದ ಹುಡುಗರ ಚೆಹರೆಗಳು ಖಿನ್ನವಾದವು. ಗಾಂಜಾಬಡಕ ಬಾಬೂ ಮೇಲು ಹೊದಿಕೆಯನ್ನು ಇನ್ನೂ ಗಟ್ಟಿಯಾಗಿ ಹೊದ್ದುಕೊಂಡ ಮತ್ತು ಅಡ್ಡಾಗುವ ವಿಚಾರ ಮಾಡಹತ್ತಿದ.

‘ನಾಲ್ಕಂತ? ಪದಮಜೀಯ ಹಕ್ಕಿಗೆ ಎರಡು ಒಗೆತಕ್ಕಿಂತ ಹೆಚ್ಚು ಬೇಕಾಗೋದಿಲ್ಲ’, ಪದಮಜೀ ಹೇಳಿದ.

‘ಸರಿಯಪಾ ಎರಡಂದರ ಎರಡು. ಹೋಗಲಿ ಬಿಡು’ ಇಪ್ಪತ್ನಾಲ್ಕು ಬೆರಳಿನವ ಕೂಗಿದ.

‘ಸಣ್ಯಾ, ಎಷ್ಟು ಪುಕ್ಕ ಅದೀಯೋ ನೀನು?’ ಸಿಟ್ಟಿಗೆದ್ದ ಸಣ್ಯಾ ಗೋಣು ಹಾಕಿದ.

ಹುಡುಗರು ಈಗ ಅಗದೀ ಖುಶ್. ಗುಡಿಯ ಎದುರು ಒಂದು ದೊಡ್ಡ ಕಲ್ಲಿನ ಕಂಬ ಅಡ್ಡ ಬಿದ್ದಿತ್ತು. ಹುಡುಗರೆಲ್ಲ ಅದರ ಮೇಲೆ ಕುಳಿತುಕೊಂಡರು. ಆದರೆ ಬಿಸಿಲಿನಲ್ಲಿ ಕಲ್ಲು ಸುಡಹತ್ತಿದ್ದರಿಂದ ಅವರು ಅಲ್ಲಿಂದೆದ್ದು ಮನೆಯ ಕಟ್ಟೆಯನ್ನೇರಿದರು. ಸಣ್ಯಾ ಚಂದ್ರಾವಳಿಯನ್ನು ಎತ್ತಿಕೊಂಡ ಮತ್ತು ದಾರ ಬಿಚ್ಚಿದ. ನಡುವೆ ಅಲ್ಲಲ್ಲಿ ಹಚ್ಚೆ ಹಾಕಿದ ಹಾಗೆ ಕಾಣುವ ಬಿಳೀ ಗರಿಯಿದ್ದ ಕೋಮಲ ಭಾಗವನ್ನು ತನ್ನ ಗಲ್ಲದಿಂದ ತಿಕ್ಕಿದ. ಬಾಳೆ ಸುಳಿಯಂತೆ ಕಾಣುವ ಅವಳ ಕುತ್ತಿಗೆ ಅತ್ತಿಂದಿತ್ತ ಹೊರಳಾಡುತ್ತಿತ್ತು. ಅವಳ ಕಣ್ಣಿನಲ್ಲಿ ತೀಕ್ಷ್ಣತೆ ಮತ್ತು ಆಳ ಇದ್ದವು. ‘ಏನು ಆಗ್ತತೋ ಏನೋ ಯಾರಿಗೆ ಗೊತ್ತು ಗೌರೀ’ ಸಣ್ಯಾ ತನ್ನಷ್ಟಕ್ಕೆ ತಾನೇ ಹೇಳಿಕೊಂಡ.

ಆದರೆ ಕೂಡಲೇ ಅವನು ಬೆಚ್ಚಿಬಿದ್ದ, ನಾಲಿಗೆ ಸುಟ್ಟ ಹಾಗೆ. ಗೌರೀ? ಒಮ್ಮೆಲೆ ಗೌರಿಯ ಹೆಸರೇಕೆ ಬಂತು ಬಾಯಿಯಲ್ಲಿ? ಆ ದಿನದ ನಂತರ ಅವನು ಆ ಹೆಸರನ್ನು ಸ್ಪಷ್ಟವಾಗಿ ಉಚ್ಚರಿಸಿರಲಿಲ್ಲ. ಈಗ ಇಷ್ಟು ವರ್ಷಗಳ ನಂತರ, ಗೌರಿ ನಿನ್ನೆಯೇ ಸತ್ತು ಹೋದಾಗ ಆ ಹೆಸರು ಭೂತದಂತೆ ಎದ್ದು ನಿಂತಿತ್ತು ಮತ್ತು ಮನಸ್ಸನ್ನು ಸುತ್ತಿಕೊಳ್ಳುತ್ತಿತ್ತು. ಸಣ್ಯಾ ಹೆದರಿದ. ಬತ್ತದ ಕಣಜದಲ್ಲಿ ಬಿಳೀ ಹುಳಗಳು ಹಾರಾಡಿದಂತೆ ಭಯದ ಕಲ್ಪನೆಗಳು ಅವನ ಮನಸ್ಸಿನಲ್ಲಿ ಹಾರಾಡತೊಡಗಿದವು. ಇದೇ ವೇಳೆ ಇದೇ ಕ್ಷಣದಲ್ಲಿ ಗೌರಿಯ ನೆರಳು ಬಿದ್ದದ್ದೇಕೆ? ಆಗ ಬಿರಾದಾರ ಪಾಟೀಲನ ದನಿ ಅವನ ಕೊರಳಿನಿಂದ ಎದ್ದಿತ್ತು. ಈಗ ಗೌರಿಯ ಹೆಸರು ತುಟಿಗಳಿಂದ ಹೊರಬಂದಿತ್ತು. ಅವನ ಮನಸ್ಸು ಶಂಕೆ, ಕುಶಂಕೆಗಳಿಂದ ಮುದುಡಿತು ಮತ್ತು ಚಂದ್ರಾವಳಿಯನ್ನು ಕೈಯಲ್ಲಿ ಹಿಡಿದುಕೊಂಡು ಅವನು ಗಸಕ್ಕನೇ ಕುಳಿತುಬಿಟ್ಟ. ಒಮ್ಮೆ ಅವನಿಗೆ ಇದೆಲ್ಲ ಬೇಡವೇ ಬೇಡ, ಐದು ರೂಪಾಯಿ ಕೊಟ್ಟು ಬಿಡಬೇಕು ಮತ್ತು ಚಂದ್ರಾವಳಿಯನ್ನು ಮತ್ತೆ ಕಪಾಟಿನಲ್ಲಿಟ್ಟು ಬಿಡಬೇಕು. ಅಲ್ಲಿ ಅವಳು ಸುಖಿಯಾಗಿ, ಸುರಕ್ಷಿತವಾಗಿ, ತನ್ನವಳಾಗಿ ಇದ್ದು ಬಿಡಲಿ – ಎಂದು ಅನಿಸಿತು.

ಆದರೆ ಇಪ್ಪತ್ನಾಲ್ಕು ಬೆರಳಿನ ಬಾಳೂವಿಗೆ ತಾಳ್ಮೆ ಇರಲಿಲ್ಲ. ಅವನು ಚಂದ್ರಾವಳಿಯನ್ನು ಸಣ್ಯಾನಿಂದ ಕಸಿದುಕೊಳ್ಳಹೋದ. ಸಣ್ಯಾ ಅವನ ಕೈ ದೂಡಿದ ಮತ್ತು ಮುಂದೆ ಬಂದ. `ಚಂದ್ರಾವಳೀ ನಾನು, ನಿನ್ನನ್ನ ಹಾರಲಿಕ್ಕೆ ಬಿಡತೀನಿ ಖರೆ. ಆದರ ಏನಾಗೋದದ ಗೊತ್ತಿಲ್ಲ. ಹೋಗು ನೀನು ಆದರ ಮತ್ತ ಮರಳಿ ಬಾ ನಿನ್ನನ್ನು ಬಿಟ್ಟು ಈ ಖಾನೆಗೆ ಶೋಭೆ ಇಲ್ಲ. ತಿರುಗಿ ಬಾ ಚಂದ್ರಾವಳೀ…’ ಅವನು ಕುತ್ತಿಗೆಯಲ್ಲಿದ್ದ ತಾಯಿತವನ್ನು ಮುಟ್ಟಿಕೊಂಡ ಮತ್ತು ತಯಾರಾದ.

ಬರೋಬರಿ ಹನ್ನೊಂದೂವರೆಯಾದಾಗ ಎರಡೂ ಪಾರಿವಾಳಗಳನ್ನು ತೂರಲಾಯಿತು. ಸಣ್ಯಾನ ಕೈಯಿಂದ ತಪ್ಪಿಸಿಕೊಂಡ ಕೂಡಲೇ ಚಂದ್ರಾವಳಿ ಮೈಯಲ್ಲಿ ಮಿಂಚಿನ ಸೆಳಕು ಹಾಯ್ದಂತೆ ಸರಳ ಮೇಲೆ ಹಾರಿದಳು. ಆ ಕ್ಷಣದಲ್ಲಿ ಸಣ್ಯಾನಿಗೆ ತನ್ನ ಹೃದಯವನ್ನೇ ಕೊಯ್ದು ಮೇಲೆ ತೂರಿದಂತೆನಿಸಿತು. ಏನಾಗುವುದೋ ಯಾರಿಗೆ ಗೊತ್ತು? ಚಂದ್ರಾವಳಿ ಹೋಗುವಾಗ ರೆಕ್ಕೆಗಳನ್ನು ಮೈಗೆ ಹಚ್ಚಿಕೊಂಡು ಹಾರಿದಳು. ತೂರಿದ ಜೋರು ಮುಗಿದ ನಂತರ ಅವಳು ಕೆಳಗೆ ಬಂದು ಬಿಡುತ್ತಾಳೋ ಹೇಗೆ ಎಂದು ಸಣ್ಯಾನಿಗೆ ಭೀತಿಯಾಯಿತು. ಮತ್ತು ಅವನ ಮನಸ್ಸು ಚಟಾಕಿನಷ್ಟು ಗಾತ್ರಕ್ಕೆ ಕುಗ್ಗಿ ಹೋಯಿತು. ಆದರೆ ಚಂದ್ರಾವಳಿ ತಟ್ಟನೆ ಸಮತೋಲ ಸಾಧಿಸಿದಳು ಹಾಗೂ ಒಂದು ಗಿರಕೀ ಹೊಡೆದು ಮೇಲೇರಿದಳು. ಸ್ವಲ್ಪ ವೇಳೆಯಲ್ಲಿ ಅವಳು ಸಬ್ಜೀ ಪಾರಿವಾಳದೊಡನೆ ಆಕಾಶದಲ್ಲಿ ಹೊಳೆಯಹತ್ತಿದಾಗ ಸಣ್ಯಾನ ಮನಸ್ಸು ಅಭಿಮಾನದಿಂದ ಅರಳೆಯಂತೆ ಹಿಗ್ಗಿತು. ಏನಾದರೂ ಆಗಲಿ, ಚಂದ್ರಾವಳಿ ಅವನ ಮಾನವನ್ನು ಕಾಯ್ದಿದ್ದಳು. ಒಂದು ವೇಳೆ – ಮೃದುವಾದ ಮಹತ್ವಾಕಾಂಕ್ಷೆ ಅವನ ಮನಸ್ಸನ್ನು ತಟ್ಟಿತು – ಒಂದು ವೇಳೆ ಅವಳು ಸಬ್ಜೀ ಗಂಡು ಪಾರಿವಾಳಕ್ಕಿಂತ ಮೇಲೆ ಏರಲು ನಿರ್ಧರಿಸಿದರೆ ಪದಮಜೀಯ ಮೂಗು ಕತ್ತರಿಸಿದಂತಾದೀತಲ್ಲ! ಬೋಳು ಹೆಣ್ಣಂತೆ ಬೋಳು!

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಭಾಗ 5 : Literature: ನೆರೆನಾಡ ನುಡಿಯೊಳಗಾಡಿ; ‘ತಮ್ಮಾ, ಆ ಪಾರಿವಾಳ ಇನ್ನೂ ಬಚ್ಚಾ ಅದ, ಫುಕಟ ಯಾಕ ಅದಕ ಜಗಳಾ ಹಚ್ಚತೀ?’

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Published On - 12:20 pm, Fri, 11 March 22

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು