Literature: ನೆರೆನಾಡ ನುಡಿಯೊಳಗಾಡಿ; ‘ಯಾವದರಲ್ಲಿಯೂ ನಿನ್ನ ಜೀವ ಇಡಬ್ಯಾಡ ಬೇಟ್ಯಾ ’

G.A.Kulkarni‘s Short Story : ‘ಸಣ್ಯಾ ಲಕ್ಷದೊಳಗಿನ ಒಂದದ ಆ ಹೆಣ್ಣು ಪಾರಿವಾಳ. ಈ ನಾಲ್ಕೈದು ಪಾರಿವಾಳ ಮ್ಯಾಲೆ ತೂರು. ಆ ಬ್ಯಾಟೀಹಕ್ಕಿ ಬಾಯಿಗೆ. ಹಾರಸು ಇಡೀ ಗುಂಪನ್ನು. ಅರೇ, ಕೈಯಾಗ ಚಂದ್ರಾವಳಿ ಕೊಡು. ಕೂತಲ್ಲಿಯೇ ಇಪ್ಪತ್ತೈದರೂಪಾಯಿ ಎಣಸ್ತೀನಿ.’

Literature: ನೆರೆನಾಡ ನುಡಿಯೊಳಗಾಡಿ; ‘ಯಾವದರಲ್ಲಿಯೂ ನಿನ್ನ ಜೀವ ಇಡಬ್ಯಾಡ ಬೇಟ್ಯಾ ’
ಲೇಖಕರಾದ ಜಿ. ಎ. ಕುಲಕರ್ಣಿ ಮತ್ತು ಡಾ. ಜಿ. ಎಸ್. ಆಮೂರ
Follow us
ಶ್ರೀದೇವಿ ಕಳಸದ
|

Updated on:Mar 11, 2022 | 1:47 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi: ಆ ಕಪ್ಪು ಕಲೆಯನ್ನು ನೋಡಿದ ಕೂಡಲೇ ಸಣ್ಯಾನ ಜೀವ ಹೋದಂತಾಯಿತು. ಅಲ್ಲಿಯ ಶಾಂತತೆಯಲ್ಲಿ ಬೇರೆ ಕ್ಷುದ್ರ, ಆಸೆಬುರುಕ ಪಾರಿವಾಳಗಳ ದುರ್ಬಲ ರೆಕ್ಕೆಗಳ ಶಬ್ದ ಕೇಳಿಯೂ ಕೇಳಿಸದಂತಿತ್ತು. ಅವು ಭೂಮಿಯ ಮೇಲೆ ಎಗರುತ್ತಿದ್ದವು ಮತ್ತು ಚಂದ್ರಾವಳಿಯ ಸಲುವಾಗಿ ಅವಳಿಗೆ ಯೋಗ್ಯವಾದಂಥ ಕುಸುಬಿಯ ಕಾಳುಗಳನ್ನು ರಂಗೋಲಿಯ ಚಿಕ್ಕೆಗಳನ್ನು ಒರೆಸಿದಂತೆ ಒರೆಸಿಹಾಕುತ್ತಿದ್ದವು. ನಡುವೆಯೆ ಗಟಾರದ ಹತ್ತಿರದ ಒಂದು ಗಂಡು ಪಾರಿವಾಳದ ಕಂಠ ಉಬ್ಬಿ ಪುಚ್ಛ ಹರಡುವ ಇಚ್ಛೆಯಾಯಿತು. ಚುಂಚಿಗೆ ಚುಂಚು ಕೂಡಿದಾಗ ಒಂದು ಕ್ಷಣದ ಆನಂದ. ಮತ್ತೆ ಕಾಳು ಹೆಕ್ಕುವುದು. ಆ ನಿರ್ಜೀವ ಹೊಟ್ಟೆ ತುಂಬುವ ನೀರಿನ ಮೇಲೆ ಅವು ಮೇಲೆ ಕೆಳಗೆ ಆಗುತ್ತಿದ್ದವು ಮತ್ತು ಆ ಪಾತ್ರೆಯಲ್ಲಿ ನಕ್ಷತ್ರ ಮಿನುಗಿದಂತೆ ಚಂದ್ರಾವಳಿಯ ನಿರ್ಭಯ, ಸುಂದರ ಹಾರಾಟ ಇನ್ನೂ… ಕರೀ ಬಿಂದುವಿನ ವರ್ತುಳಗಳು ಸಣ್ಣವಾಗುತ್ತ ಹೋದವು. ಚಂದ್ರಾವಳಿ ಎಲ್ಲೇ ಇರಲಿ ಆ ಮಧ್ಯಬಿಂದುವಿನ ಸುತ್ತ ಈ ಕಪ್ಪು ವರ್ತುಳಗಳು ತಿರುಗಹತ್ತಿದವು.

ಕಥೆ : ಚಂದ್ರಾವಳ | ಮರಾಠಿ : ಜಿ. ಎ. ಕುಲಕರ್ಣಿ | ಕನ್ನಡಕ್ಕೆ : ಜಿ. ಎಸ್. ಆಮೂರ | ಸೌಜನ್ಯ : ದೇಶಕಾಲ ತ್ರೈಮಾಸಿಕ ಪತ್ರಿಕೆ

(ಭಾಗ 8)

ಇಷ್ಟು ವೇಳೆ ಶಾಂತ ಜಲಾಶಯದಲ್ಲಿ ಕಮಲದ ಮೊಗ್ಗೆಯಂತೆ ಕಾಣುತ್ತಿದ್ದ ಚಂದ್ರಾವಳಿಯ ಕುಲೀನ, ಡೌಲದಾರ ಗತಿ ಈಗ ಮಂಕಾದಂತೆ ಕಾಣುತ್ತಿತ್ತು ಮತ್ತು ಅವಳ ದೇಹ ಸಡಿಲಾದಂತೆ ಅತ್ತ ಇತ್ತ ಜೋಲಿ ತಪ್ಪಿ ಅಲೆದಾಡತೊಡಗಿತು. ಹಾಗೂ ಅವಳ ಭಯದ ಅರಿವು ಕೆಳತನಕ ಬಂದು ತಲುಪಿತು. ಇಪ್ಪತ್ನಾಲ್ಕು ಬೆರಳಿನ ಬಾಳೂ ಕೈಗಳಿಂದ ಬಾಯಿ ಮುಚ್ಚಿಕೊಂಡು ಧೊಪ್ಪನೆ ಕೆಳಗೆ ಕುಳಿತುಕೊಂಡ.

‘ಆ„„ವ್, ಆ„„ವ್ ಚಂದ್ರಾ’ ಕೈ ಮೇಲೆ ಮಾಡಿ ಚಿಕ್ಕ ಬಾಲಕನಂತೆ ಸಣ್ಯಾ ಜೀವ ಹೋಗುವಂತೆ ಕೂಗಿದ. ಆದರೆ ಎರಡು ಮೂರು ಸಾರೆ ಕೂಗಿದ ನಂತರ ಅವನ ದನಿಯೂ ನಿರಾಶೆಯಿಂದ ಒಣಗಿದಂತಾಯಿತು. ತೊಯ್ದ ಅರಿವೆಯಂತೆ ಅದು ಬಹಳೆಂದರೆ ವಿದ್ಯುತ್ ಕಂಬದವರೆಗೆ ಹೋಗಿ ಬಿದ್ದಿತು. ಗಾಂಜಾಬಡಕ ಬಾಬೂ ಕುಳಿತಲ್ಲಿಯೇ ಹುಬ್ಬು ಮೇಲೇರಿಸಿ ಆಕಾಶದ ಕಡೆಗೆ ನೋಡಿದ. ಆದರೆ ಅವನು ಅಲ್ಲಿಂದ ಕದಲಲಿಲ್ಲ. ಇಬ್ಬರು ಮೂವರು ಹುಡುಗರನ್ನು ಬದಿಗೆ ನೂಕಿ ಪದಮಜೀ ಸಣ್ಯಾ ಇದ್ದಲ್ಲಿಗೆ ಬಂದ. ಈರ್ಷೆಯ ಉನ್ಮಾದದ ವಿಜಯದ ಹಸಿವು, ಅಪಯಶದ ಮಾಲಿನ್ಯ ಅವನ ಮುಖದಿಂದ ತೊಳೆದು ಹೋಗಿದ್ದವು. ತನ್ನದೇ ಹಕ್ಕಿ ಸಂಕಟದಲ್ಲಿ ಬಿದ್ದಂತೆ ಅವನು ಸಣ್ಯಾನ ಕೈ ಹಿಡಿದುಕೊಂಡು ಹೇಳಿದ.

‘ಸಣ್ಯಾ ಲಕ್ಷದೊಳಗಿನ ಒಂದದ ಆ ಹೆಣ್ಣು ಪಾರಿವಾಳ. ಇಲ್ಲಿಯ ನಾಲ್ಕೈದು ಪಾರಿವಾಳಗಳನ್ನು ಮ್ಯಾಲೆ ತೂರು. ಆ ಬ್ಯಾಟೀ ಹಕ್ಕಿ ಬಾಯಿಗೆ. ಹಾರಸು ಇಡೀ ಗುಂಪನ್ನು. ಅರೇ, ನನ್ನ ಕೈಯಾಗ ಚಂದ್ರಾವಳಿ ಕೊಡು. ಇಲ್ಲಿ ಕೂತಲ್ಲಿಯೇ ಇಪ್ಪತ್ತೈದು ರೂಪಾಯಿ ಎಣಸ್ತೀನಿ.’

‘ಹಾಳಾಗಿ ಹೋಗಲಿ ನಿನ್ನ ಇಪ್ಪತ್ತೈದು ರೂಪಾಯಿ!’ ಸಣ್ಯಾ ಚೀರಿದ.

‘ಚಂದ್ರಾವಳಿ ಮೊದಲ ತಿರುಗಿ ಬರಲಿ.’

ಅವನು ಗಬಗಬ ಎರಡು ಪಾರಿವಾಳಗಳನ್ನು ಹಿಡಿದು ತನ್ನ ಎಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಮೇಲೆ ತೂರಿದ. ಆದರೆ, ಆ ಎಬ್ಬಿದ ಪಾರಿವಾಳಗಳು ಮನೆಯ ಮೇಲೆ ಹಾರಿ, ಎರಡು ಸಡಿಲ ಗಿರಕೀ ಹೊಡೆದು ಕೆಳಗೆ ಬಂದವು. ಮತ್ತು ಗುಡಿಯ ಚಪ್ಪರದ ಮೇಲೆ ಕುಳಿತು ಎದೆ ಬಿರಿದಂತೆ ನಡೆಯಲಾರಂಭಿಸಿದವು.

‘ಥೂತ್ತೀಚ್ಯಾ’ ಉಗುಳುತ್ತ ಪದಮಜೀ ಅವುಗಳನ್ನು ಬೈದ. ‘ಕರಾಕರಾ ಕೊಯ್ದು ತಿಪ್ಯಾಗ ಹಾಕಿ ಬಿಡು ಇವನ್ನ. ನಾಯಿ ತಿನ್ನಲಿ.’

ಸಣ್ಯಾನ ಚೆಹರೆ ಅಗದೀ ಅಳುವ ಸ್ಥಿತಿಗೆ ಬಂದಿತು. ಚಂದ್ರಾವಳಿ ಎದುರಿಗೆಯೆ ಇದ್ದಳು. ಆದರೆ ಅವನಿಗೆ ಏನೂ ಮಾಡಲಾಗುತ್ತಿಲ್ಲ. ಅಸಹಾಯಕತೆಯ ಚಿಂತೆಯಿಂದ ಅವನ ಮನಸ್ಸು ತಳಮಳಿಸತೊಡಗಿತು. ಅವನು ಪದಮಜೀಯತ್ತ ಹೊರಳಿದ ಮತ್ತು ದೈನ್ಯದಿಂದ ಅವನಲ್ಲಿ ಬೇಡಿಕೊಂಡ. ‘ಪದಣ್ಣಾ, ನಿನ್ನ ಕಾಲು ಬೀಳ್ತೀನಿ, ನನಗೆ ನಿನ್ನದೊಂದು ಗಂಡು ಪಾರಿವಾಳ ಕೊಡು. ಯಾವದಾದರೂ ನಡೀತದ. ಅದು ಹೋದರ ಹೋಗಲಿ, ಚಂದ್ರಾವಳಿ ಮತ್ತ ಈ ಖಾನೆಗೆ ಬರ್ತಾಳ. ಐದು ರೂಪಾಯಿ ಎಣಸ್ತೀನಿ.’ ಉತ್ತರಕ್ಕಾಗಿ ಹಾದಿ ಕಾಯದೆ ಅವನು ಹುಚ್ಚನಂತೆ ಮೋರೆ ಮಾಡಿಕೊಂಡು ಮೇಲೆ ನೋಡಹತ್ತಿದ.

ಭಾಗ 6 : Literture: ನೆರೆನಾಡ ನುಡಿಯೊಳಗಾಡಿ; ನಾ ಜೂಜು ಆಡೋದಿಲ್ಲಪಾ, ಸಾಲಾ ಬೇಕಾಗಿದ್ರ ನಿನಗ ಎಂಟಾಣೆ ಕೊಡ್ತೀನಿ

ಒಂದು ಕ್ಷಣ ಪದಮಜೀ ಅವನತ್ತ ನೋಡಿದ ಹಾಗೂ ಏನೂ ಮಾತಾಡದೆ ಹೊರಟುಹೋದ. ಅವನು ತನ್ನದೊಂದು ಪಾರಿವಾಳ ಕೊಟ್ಟರೂ ಕೊಡಬಹುದಿತ್ತು. ಕದಾಚಿತ್ ಅದು ಬಾಣದಂತೆ ಮೇಲೆಯೂ ಏರಬಹುದಿತ್ತು. ಕದಾಚಿತ್ ಅದರಿಂದಾಗಿ ಚಂದ್ರಾವಳಿ ಬದುಕಲೂಬಹುದಾಗಿತ್ತು. ಆದರೆ ಅದರಿಂದ ಈಗ ಉಪಯೋಗವೇನು. ಈಗ ತೀರ ತಡವಾಗಿತ್ತು. ಶಿಕಾರಿಯ ನೆರಳು ಚಂದ್ರಾವಳಿಯ ರೇಷಿಮೆ ದೇಹದ ಮೇಲೆ ಗಾಯದಂತೆ ಮೂಡಿ ಹೋಗಿತ್ತು. ಶಿಕಾರಿಯ ಅಲಗಿನಂಥ ರೆಕ್ಕೆಗಳು ಈಗ ಚಂದ್ರಾವಳಿಯ ಹತ್ತಿರ ಬಂದವು. ಆ ಕಪ್ಪು ಭೀಷಣ ಪಾಶ್ರ್ವಭೂಮಿಯ ಮೇಲೆ ಕರೀ ಬಿಳೀ ಬಣ್ಣದ ಚುಕ್ಕೆ ಒಂದು ಕ್ಷಣ ಹೊತ್ತಿಕೊಂಡಿತು. ಮತ್ತು ನೀರು ತುಂಬಿದ ಕಣ್ಣಿನಂತೆ ಹೊಳೆಯಿತು. ನಂತರ ಒಮ್ಮೆಲೆ ಅರಳೆಯ ಗಂಟು ಬಿಚ್ಚಿದಂತೆ ಬಿಳೀ ಗರಿಗಳ ಹೂ ಅರಳಿದವು ಮತ್ತು ಹಾರದ ತಕಳೆಗಳಂತೆ ಹರಡುತ್ತ ಕಾಣದಾದವು.

ಆಕಾಶ ಈಗ ಸ್ವಚ್ಛವಾಗಿತ್ತು. ಶಿಕಾರಿಯ ಕಪ್ಪು ಛಾಯೆ ಮಾಯವಾಗಿತ್ತು. ಚಂದ್ರಾವಳಿಯೂ ಒರೆಸಿ ಒಗೆದ ಹಾಗೆ ಕಾಣದಾಗಿದ್ದಳು. ಇಷ್ಟೊತ್ತು ಬಿಗಿದ ಮನಸ್ಸುಗಳು ಈಗ ಸಡಿಲಾಗಿ ಕುಸಿದುಹೋದವು. ಇಪ್ಪತ್ನಾಲ್ಕು ಬೆರಳಿನ ಬಾಳು ಒಂದು ಬೀಡಿ ಹೊರಗೆ ತೆಗೆದ ಮತ್ತು ಥರಥರ ನಡುಗುವ ಕೈಗಳಿಂದ ಅದನ್ನು ಹೊತ್ತಿಸಲು ಪ್ರಯತ್ನಿಸಿದ. ಸಣ್ಯಾ ನೀರಿನ ಪಾತ್ರೆಯನ್ನು ಕಾಲಿನಿಂದ ದೂಡಿ ಕೈಗೆ ಸಿಕ್ಕ ಪಾರಿವಾಳಗಳನ್ನು ಎತ್ತಿ ಗುಡಿಯ ಮೇಲಕ್ಕೆ ತೂರಿದ. ಆ ಗಡಿಬಿಡಿಯಲ್ಲಿ ಒಬ್ಬ ಹುಡುಗ ಅವನ ಕಾಲೊಳಗೆ ಸಿಲುಕಿಕೊಂಡು ಆ ಹುಡುಗನ ಬೆನ್ನ ಮೇಲೆ ಸಣ್ಯಾ ಜೋರಿನಿಂದ ಏಟು ಹಾಕಿದಾಗ ಅವನು ಹಿಚುಕಿದಂತೆ ಚಡಪಡಿಸಿದ. ಸಣ್ಯಾ ಖಾನೆಯನ್ನು ಖಾಲೀ ಮಾಡಿ ಮುಚ್ಚಿ ಅದನ್ನು ದೂಡಿ ಬಿಟ್ಟ. ಅದರೊಳಗಿಂದ ಒಂದು ತತ್ತಿ ಉರುಳುತ್ತ ಪಾವಟಿಗೆಯ ಮೇಲೆ ಬಂದು ಬಿದ್ದಿತು. ಅದರೊಳಗಿಂದ ಹಳದಿ ಬಿಳಿ ಜಿಗುಟು ರಸ ಹೊರಗೆ ಬಂದು ಹರಿಯಲಾರಂಭಿಸಿತು. ಸಣ್ಯಾ ಕಟ್ಟೆ ಹತ್ತಿ ಗೋಡೆಗೆ ಮೋರೆ ತಿರುಗಿಸಿ ಮೊಳಕಾಲ ನಡುವೆ ತಲೆಯಿಟ್ಟು ಕುಳಿತುಬಿಟ್ಟ. ಹುಡುಗರೆಲ್ಲ ಕುಜುಬುಜು ಮಾಡುತ್ತ ಹೊರಟುಹೋದರು. ಇಪ್ಪತ್ನಾಲ್ಕು ಬೆರಳಿನ ಬಾಳು ಕೂಡ ದೂರ ಹೋಗಿ ಒಂದು ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡ. ಗಾಂಜಾಬಡಕ ಬಾಬೂ ಇದೆಲ್ಲವನ್ನೂ ನೋಡುತ್ತಿದ್ದ ಮತ್ತು ಕಾಲಮೇಲಿನ ವಸ್ತ್ರವನ್ನು ತೆಗೆದುಹಾಕಿ, ಜಡೆಯನ್ನು ಕರಾಕರಾ ಕೆದರಿ ಸಣ್ಯಾನ ಹತ್ತಿರ ಬಂದು ಟೊಂಕದ ಮೇಲೆ ಕೈಯಿಟ್ಟುಕೊಂಡು ನಿಂತುಕೊಂಡ.

ಬಾಬೂನಿಗೆ ಏನು ಮಾಡಬೇಕೆನ್ನುವುದೇ ಹೊಳೆಯಲಿಲ್ಲ. ಅವನ ಮನಸ್ಸು ಇರುವೆಯ ಹುತ್ತದಂತೆ ಹೊರಳಾಡುತ್ತಿರುವ ಮೂಕ ಶಬ್ದಗಳಿಂದ ತುಂಬಿಕೊಂಡಿತ್ತು. ತಾನು ಎತ್ತಿ ಆಡಿಸಿದ ಈ ಹುಡುಗನ ನಸೀಬು ಇಷ್ಟು ಹೇಗೆ ಕೆಟ್ಟದಾಯಿತು ಎಂದು ಅವನು ಆಶ್ಚರ್ಯಪಟ್ಟ. ಈ ತನ್ನ ತಮ್ಮನಿಗೆ ಶರೀರ, ಮನಸ್ಸುಗಳನ್ನು ಕೊಚ್ಚಿ ಹಾಕುವಂಥ ಭಾರೀ ವ್ಯಸನವಿದ್ದರೆ ಅದು ಅವನಿಗೆ ಅರ್ಥವಾಗುತ್ತಿತ್ತು. ತಾಯಿತ ಕೊಡುವಾಗಲೇ ಅವನಿಗೆ ‘ಬೇಟ್ಯಾ, ಯಾವದರಲ್ಲಿಯೂ ನಿನ್ನ ಜೀವ ಇಡಬ್ಯಾಡ’ ಎಂದು ತಾನು ಕಲಿಸಬೇಕಾಗಿತ್ತು. ‘ಆ ಚಂದ್ರೀ ಸಲುವಾಗಿ ಎರಡು ದಿವಸ ಊಟ ಬಿಟ್ಟಿದ್ದ ಅವ. ಕಾಲಾಗ ಗೆಜ್ಜೀ ಕಟಿಗೊಂಡಾಕಿ ಆಕೀ. ತಳವಾರನ್ಹಾಂಗ ಯಾವಾಗಲೂ ತಿರುಗೋವಾಕೀ’ ಅಂತ ನಾ ಹೇಳಿದ್ದೆ ಅವಗ. ಆಗ ಸಣ್ಯಾ ಕೊಟ್ಟ ಉತ್ತರ ಅವನಿಗೆ ಈಗ ನೆನಪಾಯಿತು. ‘ಗಾಂಜಾಬಡಕ ನೀನು. ನಿನ್ನಂಥ ಹರಕ ಚಪ್ಪಲಿಗೆ ಏನು ತಿಳೀತದ.’

ಆ ಶಬ್ದ ನೆನಪಾದ ಕೂಡಲೆ ಗಾಂಜಾಬಡಕ ಬಾಬೂ ಭುಜ ಅಲ್ಲಾಡಿಸಿದ ಮತ್ತು ಅಲ್ಲಿಂದ ದೂರಸರಿದ. ತಾನು ಇದ್ದದ್ದೇ ಗಾಂಜಾಬಡಕ. ತನಗೇನು ತಿಳಿದೀತು ಇಂಥ ವಿಷಯ? ಆದರೆ ಕಾಲುಕಟ್ಟಿದ ಕೋಳಿಯಂತೆ ಬಿದ್ದುಕೊಂಡಿದ್ದ ಸಣ್ಯಾನ ದುಃಖ ಮಾತ್ರ ಅವನಿಗೆ ತಿಳಿಯುತ್ತಿತ್ತು. ಮಶಾಲಿನಂತೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಈ ಎಲ್ಲ ಶಬ್ದಗಳ ಗೊಂದಲದಲ್ಲಿ ಅವನ ಕಾಲು ಸ್ಥಿರವಾಗಿ ನಿಲ್ಲಲಾರದಾದವು. ಅಸ್ಥಿರ ಮನಸ್ಸಿನಿಂದ ಅವನು ಸ್ವಲ್ಪ ವೇಳೆ ನಿಂತುಕೊಂಡೇ ಇದ್ದ. ಎಲ್ಲ ವಿಚಾರಗಳನ್ನೂ ಗುಡಿಸಿ ಹಾಕಿದ ಹಾಗೆ ಕೈ ಝಾಡಿಸಿದ ಮತ್ತು ದೇವಾಲಯದ ಗರ್ಭಗುಡಿಯೊಳಗೆ ಹೋದ. ಅಲ್ಲಿ ಸ್ವಲ್ಪ ವೇಳೆಯಲ್ಲಿ ಮಶಾಲು ಆರಿ ಹೊಗೆ ಬರುವಂತೆ ಅವನ ಕೆಮ್ಮು ಸುರುವಾಯಿತು ಮತ್ತು ಹೆಚ್ಚುತ್ತ ಹೋದ ಅದರ ಜಾಲದಂಥ ತೆರೆಗಳು ಗರ್ಭಗುಡಿಯ ಕತ್ತಲೊಳಗಿಂದ ನಾಲಿಗೆಯಂತೆ ಹೊರಬರಲಾರಂಭಿಸಿದವು.

ಸಣ್ಯಾನ ಕಣ್ಣುಗಳಲ್ಲಿ ಮಾತ್ರ ಶೂನ್ಯತೆ ತುಂಬಿಕೊಂಡಿದ್ದಿತು. ಅವು ಈಗ ತೆಂಗಿನ ಪರಟೆಯ ಕಣ್ಣುಗಳಂತೆ ಕಾಣುತ್ತಿದ್ದವು. ತನ್ನ ಕೈಯಿಂದಲೇ ಚಂದ್ರಾವಳಿ ಶಿಕಾರಿಗೆ ತುತ್ತಾಗಿದ್ದಳು. ಯಾವ ಕೈಗಳಿಂದ ಬೂರಲದಂಥ ಅವಳ ದೇಹವನ್ನು ಅಭಿಮಾನದಿಂದ, ಕೌತುಕದಿಂದ ಸವರಿದ್ದನೋ ಅದೇ ಕೈಗಳಿಂದ ಚಂದ್ರಾವಳಿ ಗೂಡು ಬಿಟ್ಟು ಹೋದಂತೆ ಹೋಗಿಬಿಟ್ಟದ್ದಳು. ಅವಳು ತಿರುಗಿ ಬರಲೇ ಇಲ್ಲ. ನೋಡುನೋಡುತ್ತಲೇ ತನ್ನ ಕಣ್ಣೆದುರೇ ಅವಳು ಇಲ್ಲದಂತಾಗಿದ್ದಳು ಮತ್ತು ತೆರೆದ ಕಣ್ಣುಗಳಿಂದ ತಾನು ಎಲ್ಲವನ್ನೂ ನೋಡಿದ್ದ, ಒಬ್ಬ ಜೋಕುಮಾರನಂತೆ.

ಆ ಶಬ್ದದಿಂದಾಗಿ ಅವನ ಗಾಯ ಮತ್ತೆ ತೆರೆದುಕೊಂಡಿತು. ತಾನು ಗೌರಿಯ ಮೇಲೆ ಹಾಕಿದ ಪ್ರೇಮದ ವಸ್ತ್ರ ಜೋಕುಮಾರ, ಬಿಳೀ ಪಾರಿವಾಳದಂತೆ ಕುಣಿಯುತ್ತಿದ್ದ ಚಂದ್ರಾವಳಿಯ ಸಿಂಪಿನಂಥ ಪಾದಗಳು, ಅವುಗಳಿಗೆ ಕಟ್ಟಿದ ಗೆಜ್ಜೆಗಳು, ಕೇದಿಗೆಯಂಥ ಅವಳ ದೇಹ ಮತ್ತು ಅದನ್ನು ಕಚ್ಚಿದ ಬಿರಾದಾರ ಪಾಟೀಲನ ಕರೀ ಬೂಟು. ಜರಡಿಯಂಥ ಮುಖ. ಎರಡು ಕರೀ ರೆಕ್ಕೆಗಳ ಕೆಳಗೆ ಭಯದಿಂದ ಕಂಪಿಸುವ ಮುಷ್ಟಿಗಾತ್ರದ ಚಂದ್ರಾವಳಿ ಮತ್ತು ಕೊನೆಗೆ ಉದ್ವಸ್ತವಾದ ಅವಳ ಗರಿಗಳು. ಇವೆಲ್ಲ ಆಘಾತಕ್ಕೊಳಗಾದ ಆಕಾಶಬುಟ್ಟಿಯ ಚಿತ್ರಗಳಂತೆ ಭರಭರ ತಿರುಗತೊಡಗಿದವು. ಇವೆಲ್ಲವೂ ಸೇರಿ ಕರಗಸದಂಥ ಹಲ್ಲಿನ, ಕಪ್ಪು, ವಿಷಾರೀ ಜ್ಯೋತಿಯಾಯಿತು. ಅದರ ಧಗೆಯಲ್ಲಿ ಸಿಟ್ಟು, ಅಭಿಮಾನ, ವಯಸ್ಸಿನ ಅರಿವು ಇವೆಲ್ಲವೂ ಇಲ್ಲದಂತಾದವು ಮತ್ತು ಸಣ್ಯಾ ಒಬ್ಬ ಚಿಕ್ಕ ಬಾಲಕನಂತೆ ಅನಿರ್ಬಂಧವಾಗಿ, ನಾಚಿಕೆ ಬಿಟ್ಟು ಭುಜಗಳನ್ನು ಅಲುಗಾಡಿಸುತ್ತ ದೊಡ್ಡದಾಗಿ ಅಳಹತ್ತಿದ.

(ಮುಗಿಯಿತು)

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Published On - 1:06 pm, Fri, 11 March 22

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು