Literature: ನೆರೆನಾಡ ನುಡಿಯೊಳಗಾಡಿ; ‘ತಮ್ಮಾ, ಆ ಪಾರಿವಾಳ ಇನ್ನೂ ಬಚ್ಚಾ ಅದ, ಫುಕಟ ಯಾಕ ಅದಕ ಜಗಳಾ ಹಚ್ಚತೀ?’

G.A.Kulkarni‘s Short Story : ಇಡೀ ಹಳ್ಳಿಯಲ್ಲಿಯೇ ಅವನಷ್ಟು ಜಾತಿವಂತ ಪಾರಿವಾಳಗಳನ್ನು ಯಾರೂ ಹೊಂದಿರಲಿಲ್ಲ. ಕಪಾಟು ತೆರೆದು, ಕಾಲುಗಳಲ್ಲಿ ಕೆಂಪು ಉಂಗುರಗಳನ್ನು ಹಾಕಿದ ಅವುಗಳ ದೌಲತ್ತು ನೋಡಿದಾಗ ಬಸ್, ಚಟ ಇದ್ದರೆ ಇಂಥ ನವಾಬೀ ಚಟ ಇರಬೇಕು ಎನಿಸುತ್ತಿತ್ತು.

Literature: ನೆರೆನಾಡ ನುಡಿಯೊಳಗಾಡಿ; ‘ತಮ್ಮಾ, ಆ ಪಾರಿವಾಳ ಇನ್ನೂ ಬಚ್ಚಾ ಅದ, ಫುಕಟ ಯಾಕ ಅದಕ ಜಗಳಾ ಹಚ್ಚತೀ?’
ಲೇಖಕರಾದ ಜಿ. ಎ. ಕುಲಕರ್ಣಿ ಮತ್ತು ಡಾ. ಜಿ. ಎಸ್. ಆಮೂರ
Follow us
ಶ್ರೀದೇವಿ ಕಳಸದ
|

Updated on:Mar 11, 2022 | 1:15 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi: ಸಣ್ಯಾ ಮೋರೆ ಕೆಳಗೆ ಮಾಡಿ ಕುಳಿತುಕೊಂಡಿದ್ದ. ಈ ರಸ್ತೆಯಿಂದ ಹೋಗುವಾಗ ಪದಮಜೀ ಉಗುಳು ಚೆಲ್ಲುವ ಅವಕಾಶಗಳನ್ನು ಎಂದೂ ವ್ಯರ್ಥ ಹೋಗಗೊಡುತ್ತಿರಲಿಲ್ಲ. ಇವನು ಕಾಲಿಡದ ಕಬೂತರ ಖಾನೆಗಳೇ ಇರಲಿಲ್ಲ. ಹಕ್ಕಿಗಳು ಕಾಳು ಹೆಕ್ಕುವ ಹಾಗೆ ಇವನು ಆ ಹಕ್ಕಿಗಳನ್ನು ತನ್ನ ಸಣ್ಣ ಕಣ್ಣುಗಳಿಂದ ಹೆಕ್ಕಿ ಲಕ್ಯಾನ ಹಾಗೆಯೇ ಬಹಳ ಐಟಿನಿಂದ ಎದೆಯುಬ್ಬಿಸಿ ನಡೆಯುತ್ತಿದ್ದ. ಅವನ ಈ ಗರ್ವಕ್ಕೆ ಸ್ವಲ್ಪ ಅರ್ಥವೂ ಇದ್ದಿತು. ಅವನ ಜೀವನದಲ್ಲಿ ಒಂದೇ ವ್ಯಸನವಿದ್ದಿತು. ಅದೆಂದರೆ ಪಾರಿವಾಳಗಳ ವ್ಯಸನ. ತನ್ನ ಸಣ್ಣ ಕಿರಾಣಿ ಅಂಗಡಿಯನ್ನು ಮಾರಿ ಅವನು ಪಾರಿವಾಳಗಳನ್ನು ಕೊಂಡಿದ್ದ ಮತ್ತು ಬಹಳ ರುಬಾಬಿನಿಂದ ಈ ವ್ಯಸನದ ಬೆನ್ನು ಹತ್ತಿ ರುಮಾಲನ್ನು ಬಗಲಲ್ಲಿಟ್ಟುಕೊಂಡು ಬೊಕ್ಕ ತಲೆಯಲ್ಲಿ ಊರು ಸುತ್ತುತ್ತಿದ್ದ. ಇಡೀ ಹಳ್ಳಿಯಲ್ಲಿಯೇ ಅವನಷ್ಟು ಜಾತಿವಂತ ಪಾರಿವಾಳಗಳನ್ನು ಯಾರೂ ಹೊಂದಿರಲಿಲ್ಲ. ಕಪಾಟು ತೆರೆದು, ಕಾಲುಗಳಲ್ಲಿ ಕೆಂಪುಕೆಂಪು ಉಂಗುರಗಳನ್ನು ಹಾಕಿದ ಅವುಗಳ ದೌಲತ್ತನ್ನು ನೋಡಿದಾಗ ಬಸ್, ಚಟ ಇದ್ದರೆ ಇಂಥ ನವಾಬೀ ಚಟ ಇರಬೇಕು ಎನಿಸುತ್ತಿತ್ತು.

ಕಥೆ : ಚಂದ್ರಾವಳ | ಮರಾಠಿ : ಜಿ. ಎ. ಕುಲಕರ್ಣಿ | ಕನ್ನಡಕ್ಕೆ : ಜಿ. ಎಸ್. ಆಮೂರ | ಸೌಜನ್ಯ : ದೇಶಕಾಲ ತ್ರೈಮಾಸಿಕ ಪತ್ರಿಕೆ

(ಭಾಗ 5)

ಆ ಎಲ್ಲ ಪಾರಿವಾಳಗಳ ರೆಕ್ಕೆಗಳನ್ನು ಕಟ್ಟಿಡಲಾಗುತ್ತಿತ್ತು. ಆದರೆ, ಪ್ರತಿ ಶನಿವಾರ, ರವಿವಾರ ಇಡಿಯ ಗುಂಪು ಮೇಲೆ ಹಾರಿತೆಂದರೆ ಅವುಗಳಲ್ಲಿ ಅಗದೀ ಗಾವಠೀ ಹಕ್ಕಿ ಕೂಡ ಆರೇಳು ಗಂಟೆ ರೆಕ್ಕೆ ಮುಚ್ಚುತ್ತಿರಲಿಲ್ಲ. ಹಲವಾರು ಹಕ್ಕಿಗಳು ರೆಕ್ಕೆ ಮುರಿದು ಸತ್ತವು. ಮರಿಯಾಗಲು ಇಟ್ಟ ತತ್ತಿಗಳು ಒಡೆದವು. ಆದರೆ ಪಾರಿವಾಳಗಳನ್ನು ಮಾರಿ ಹರಾಮದ ದುಡ್ಡನ್ನು ಅವನು ಎಂದೂ ಗಳಿಸಲಿಲ್ಲ. ಒಂದನ್ನು ಇನ್ನೊಂದರ ಖಾನೆಗೆ ಹೋಗಗೊಡಲಿಲ್ಲ. ಅನೇಕರು ತಮ್ಮ ಪಾರಿವಾಳಗಳನ್ನು ಇವನ ಪಾರಿವಾಳಗಳ ಬದಿಗೆ ಬಿಟ್ಟು ಮೋಸ ಮಾಡಲು ನೋಡಿದರು. ಆದರೆ ಅವುಗಳ ಜಾತಿ ಎಂಥದಿತ್ತೆಂದರೆ ಅವು ಎರಡನೆಯವರ ಕಾಳು ತಿಂದು ಅರಾಮಾಗಿ ಮರಳಿ ಬರುತ್ತಿದ್ದವು.

ಪದಮಜಿಯನ್ನು ನೋಡಿದಾಗ ಸಣ್ಯಾನಿಗೆ ಚೇಳು ಕಡಿದಂತಾಗುತ್ತಿತ್ತು. ಅವನ ಜೀವನದ ಬಹು ದೊಡ್ಡ ಆಶೆಯೆಂದರೆ ಪದಮಜಿಯ ಮುಖದ ಮೇಲೆ ಚಪ್ಪಲಿಯಿಂದ ಹೊಡೆಯುವಂಥ ಒಂದಾದರೂ ಹಕ್ಕಿ ತನ್ನ ಕಬೂತರ ಖಾನೆಯಲ್ಲಿರಬೇಕು ಎನ್ನುವುದು. ತನ್ನ ಕಾಡು ಬದನೆಕಾಯಿಯಂಥ ಆಕಾರಹೀನ ಹಕ್ಕಿಗಳತ್ತ ನೋಡಿದಾಗಲೆಲ್ಲ ಅವನು ಹತಾಶನಾಗುತ್ತಿದ್ದ. ಈಗ ಮಾತ್ರ ಅವನ ಮನಸ್ಸಿನಲ್ಲಿ ಒಂದು ಕೆಂಡ ಹೊತ್ತಿಕೊಳ್ಳಹತ್ತಿತ್ತು, ಬಹಳ ಒಳಗಿನ ಗಂಟೊಂದರಲ್ಲಿ. ಇಪ್ಪತ್ನಾಲ್ಕು ಬೆರಳಿನ ಬಾಳೂನ ಹತ್ತಿರ ಕೂಡ ಅವನು ಈ ಬಗ್ಗೆ ಚಕಾರ ಎತ್ತಿರಲಿಲ್ಲ. ಚಂದ್ರಾವಳಿ ಸ್ವಲ್ಪ ಚೇತರಿಸಿಕೊಂಡ ಮೇಲೆ ಅವಳನ್ನು ತಯ್ಯಾರ ಮಾಡಲು ಅವನು ನಿರ್ಧರಿಸಿದ್ದ. ಇನ್ನೂ ಅವಳು ಹೆದರುತ್ತಿದ್ದಳು. ರೆಕ್ಕೆಗಳಲ್ಲಿ ಶಕ್ತಿ ಇರಲಿಲ್ಲ. ಈಗಲೇ ಅವಳನ್ನು ಹೊರಬಿಟ್ಟರೆ ಅವಳು ತಿರುಗಿ ಬರಲಿಕ್ಕಿಲ್ಲ – ಈ ವಿಚಾರ ಬಂದ ಕೂಡಲೇ ಅವನು ಹುರುಪಿಗೆದ್ದ. ಕಪಾಟಿನ ಬಾಗಿಲು ತೆರೆದು ಮೆಲ್ಲಗೆ ಒಳಗೆ ನೋಡಿದ. ಚಂದ್ರಾವಳಿ ಅಲ್ಲಿದ್ದಳು. ಅವನು ಪದಮಜೀಯತ್ತ ಹೊರಳಿ ಹೇಳಿದ ‘ಹೌದಪಾ ಹೌದು. ನಾನೂ ನೋಡತೀನಿ ಒಂದ ದಿವಸ ನಿನ್ನ ಸೊಕ್ಕು ಎಷ್ಟದ ಅನ್ನೋದನ್ನ.’

ಆದರೆ ಇಪ್ಪತ್ನಾಲ್ಕು ಬೆರಳಿನ ಬಾಳೂನಿಗೆ ಸುಮ್ಮನಿರಲಾಗಲಿಲ್ಲ. ತನ್ನದೇ ಅಪಮಾನವಾದಂತೆ ಅವನು ಎದ್ದು ನಿಂತ. ಸುಮ್ಮನೆ ಒಂದು ಮುಷ್ಟಿ ನುಚ್ಚು ಎದುರಿಗೆ ಚೆಲ್ಲಿದ. ‘ಏ, ಸ್ವಲ್ಪ ದಿವಸ ತಡೀಯೋ ಈ ದೀಪಾವಳಿಗೆ ನಾನು ಕೊಲ್ಹಾಪುರದಿಂದ ಮಸ್ತ ಗಂಡು ಪಾರಿವಾಳ ತರತೀನಿ, ಆವಾಗ ನಿನ್ನ ರುಮಾಲು ಒತ್ತೀ ಇಡತೀ ನೀನು.’

‘ನೀ ತರೋವ ಏನ?’ ಖೋ ಖೋ ನಗುತ್ತ ಪದಮಜೀ ಹೇಳಿದ.

‘ಈಗ ನಾಲ್ಕು ವರ್ಷಾತು ನಿನ್ನ ಬಾಯಿ ಹೀಂಗ„ ಒಟಗುಡತದ.’

‘ನೋಡೆರ ನೋಡು. ಹೋದ ಪಾಡ್ಯಕ್ಕ ನಿನ್ನ ಗಂಡು ಪಾರಿವಾಳಕ್ಕ ಕಟುಕರವ ಇಪ್ಪತ್ತು ರೂಪಾಯಿ ಒಗದನಲ್ಲಾ, ನಿಂದೂ ಹಂಗ„ ಆಗತದ. ನಿನ್ನ ಹಸಿರು ರುಮಾಲ ಅದ ಅಲ್ಲ, ಅದನ್ನ ಗುಡೀ ಮ್ಯಾಲ ಧ್ವಜ ಮಾಡಿ ಹಚ್ಚತೀನಿ.’

ಇಪ್ಪತ್ನಾಲ್ಕು ಬೆರಳಿನವ ಸಿಟ್ಟಿನಂದ ಹೇಳಿದ. ಅವನಿಗೆ ಸಿಟ್ಟು ಬಂದಿತೆಂದರೆ ತೀರಿತು, ಬಾಯಿ ಮುಚ್ಚುತ್ತಲೇ ಇರಲಿಲ್ಲ ಮತ್ತು ಅವನ ಕೆಳದುಟಿ ಮುರುಟಿ ಬಸವನ ಹುಳದಂತೆ ಕಾಣುತ್ತಿತ್ತು. ಹಿಂದಿನ ಶರ್ಯತ್ತಿನ ಉಲ್ಲೇಖ ಪದಮಜೀಗೆ ನಗೆ ತಂದಿತು. ಅವನು ಸಮಾಧಾನದಿಂದ ನಕ್ಕ. ಪಾಡ್ಯದ ದಿವಸ ನಡೆದ ಜಾತ್ರೆಯಲ್ಲಿ ಕಟುಕರ ಗೌರಾ ಪೆಟ್ಟಿಗೆಯೊಳಗಿಂದ ಒಂದು ಪಾರಿವಾಳವನ್ನು ಹೊರತೆಗೆದು `ಇದಕ ಯಾರಾದರೂ ಜೋಡಿ ತರತೀರೇನು?’ ಎಂದು ಐಟಿನಿಂದಲೇ ಕೇಳಿದ್ದ. ಪದಮಜೀ ಅದನ್ನು ಪರೀಕ್ಷಿಸಿದ್ದ. ಜಾತಿವಂತ ಪಾರಿವಾಳ. ಆದರೆ ತಿಂದು ಕೊಬ್ಬಿದ್ದ ಅದು ತಾಸೆರಡು ತಾಸುಗಳಲ್ಲಿ ಜಿಗಣಿ ಹಾಕುವುದು ಖರೆ. ಅವನು ತನ್ನದೊಂದು ಕ್ಷುದ್ರ, ಹೊಲಸು ಪಾರಿವಾಳವನ್ನು ತರಿಸಿದ. ಗಂಟೆ, ಒಂದೂವರೆ ಗಂಟೆಯಲ್ಲಿ ಕಟುಕನ ಗಂಡು ಪಾರಿವಾಳ ಕೆಳಗಿಳಿಯಿತು. ಆಗ ಅವನಿಂದ ಬಂದ ಬೈಗಳು ನಗಾರಿಯ ಶಬ್ದದಂತೆ ಓಣಿಯಲ್ಲೆಲ್ಲ ಪಸರಿಸಿತ್ತು.

ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ‘ಹೌದು, ಚಂದ್ರಾವಳಿಯೆಂದರ ಸರದಾರೀ ಪಾರಿವಾಳ ಇದ್ದಾಳ’

‘ಇನ್ನೂ ದುಡ್ಡು ತುಂಬತೀಯೇನಪಾ ಗೌರಾ?’ ಪದಮಜೀ ಉದ್ಗರಿಸಿದ್ದ.

ಇಪ್ಪತ್ನಾಲ್ಕು ಬೆರಳಿನ ಬಾಳೂ ಒಮ್ಮೆಲೆ ಸಣ್ಯಾನ ಹತ್ತಿರ ಬಂದ ಮತ್ತು ಅವನ ಬೆನ್ನು ಚಪ್ಪರಿಸಿದ. ‘ಹೌದಲ್ಲೋ ಸಣ್ಯಾ, ಆ ನಿನ್ನ ಚಂದ್ರಾವಳೀ ಅದಾತಲ್ಲಾ ಅವಳನ್ಯಾಕ ಹಾರಸೋದಿಲ್ಲ? ಈ ಪದಮಜೀಗೆ ಬಹಳ ಸೊಕ್ಕು ಬಂದದ. ಆಗಿ ಬಿಡಲೆಲ್ಲ ಒಮ್ಮೆ!’

‘ಚಂದ್ರಾವಳೀನ?’, ಸಣ್ಯಾ ಆಶ್ಚರ್ಯದಿಂದ ಕೇಳಿದ. ‘ಛೇ! ಛೇ! ಅದು ಇಳದು ಒಂದು ತಿಂಗಳಾನೂ ಆಗಿಲ್ಲ. ಇನ್ನೂ ಸರಿದಾಡೇ ಇಲ್ಲ,’

‘ಸರಿದಾಡೋದು ಸುಡಗಾಡಿಗೆ ಹೋಗಲಿ. ಹಾರಸು – ನಾ ಹೇಳ್ತೀನಿ ಹಕ್ಕಿ ಅಸ್ಸಲ ಅದ.’

‘ಇನ್ನೂ ಬಚ್ಚಾ ಅದಪಾ ಅದು’ ಸಣ್ಯಾ ಸಣ್ಣ ದನಿಯಲ್ಲಿ ಹೇಳಿದ. ಆದರೂ ಈ ವಿಚಾರ ಅವನಿಗೆ ಹಿಡಿಸಿತು.

ಏನಾಗ್ತದೋ ನೋಡೆರ ನೋಡೋಣ. ಅವಳ ಹಾರಾಟದ ಅಂದಾಜಾದರೂ ಸಿಕ್ಕೀತು. ಯಾರಿಗೆ ಗೊತ್ತು? ಬಹಳ ಹೊತ್ತು ಹಾರಿದರೂ ಹಾರಬಹುದು. ಇಲ್ಲಾಂದರ ಇಲ್ಲಾ. ನಾನ ಬಲಾ, ನೀ ಬಲಾ. ಆದರೆ ಕೆಲ ನಿಮಿಷಗಳ ನಂತರ ಅವನ ಮನಸ್ಸಿನಲ್ಲಿ ಹುಟ್ಟಿದ ಆಸೆ ಉರಿದು ತಣ್ಣಗಾಯಿತು. ಅವನು ಹೇಳಿದ. ‘ಛೇ! ಬ್ಯಾಡ ಬಿಡಪಾ ಆ ವಿಚಾರಾ ಬಿಟ್ಟು ಬಿಡು.’

ಆದರೆ ಇಪ್ಪತ್ನಾಲ್ಕು ಬೆರಳಿನ ಬಾಳೂ ಈಗ ಹೊತ್ತಿಕೊಂಡಿದ್ದ. ಕಾಲಲ್ಲಿದ್ದ ಸಡಿಲು ಬೂಟುಗಳನ್ನು ಬಿಚ್ಚಿ ಗಟಾರದಲ್ಲಿ ಹಾಕಿದ. ಕೈ ಕಬೂತರ ಖಾನೆಯೊಳಗೆ ಹಾಕಿ ಚಂದ್ರಾವಳಿಯನ್ನು ಎತ್ತಿಕೊಂಡ. ಅವಳನ್ನು ತನ್ನ ಮುಂದೆ ಹಿಡಿದುಕೊಂಡು ಕಾಲು ಅಗಲಿಸಿ ಪದಮಜೀ ಎದುರಿಗೆ ನಿಂತುಕೊಂಡ.

‘ಇವಳಿಗೆ ಜೋಡಿ ತೊಗೊಂಡು ಬಾ ಆಗಿ ಹೋಗಲಿ ಒಮ್ಮೆ’ ಅವನು ಜೋರಿನಿಂದ ಹೇಳಿದ.

ಪದಮಜೀ ಚಂದ್ರಾವಳಿಯತ್ತ ನೋಡಲೂ ಇಲ್ಲ. ‘ಬಿಡೊ ಕುಂಡೀ ಕೆಳಗ ದುಡ್ಡು ಇಟಗೊಂಡೀಯೇನು? ಇಂಥಾ ದರಿದ್ರ ಪಾರಿವಾಳಕ್ಕ ಎಂಥಾ ಜೋಡಿ ತರಬೇಕು ? ನಿನ್ನ ತಲಿ’

ಮಾತಾಡುತ್ತ ಅವನು ಚಂದ್ರಾವಳಿಯತ್ತ ತನ್ನ ಹೆಬ್ಬೆರಳು ತೋರಿಸಿದ. ಆದರೆ ಬೊಟ್ಟು ಕತ್ತರಿಸಿದಂತೆ ಅವನು ನಡುವೆಯೇ ಆಶ್ಚರ್ಯಚಕಿತನಾದ. ಅವನ ಕಣ್ಣು ಸಣ್ಣವಾದವು. ‘ಅರೇ? ಇದು ಹೊಸಾದು ಕಾಣತದಲ್ಲ. ನೋಡೋಣ, ನೋಡೋಣು ತಾ?’ ಸಣ್ಯಾ ಜಿಗಿದೆದ್ದ. ಚಂದ್ರಾವಳಿಯನ್ನು ತನ್ನ ವಶಕ್ಕೆ ತೆಗೆದುಕೊಂಡು ಖಾನೆಯ ಹತ್ತಿದ ಒಯ್ದ. `ಚಂದ್ರಾವಳೀಗೆ ಬ್ಯಾರೇಯವರ ಕೈ ಹತ್ತೋಣ ಇಲ್ಲ’, ಹಿಂದಿರುಗದೇ ಅವನು ಹೇಳಿದ. ಯಾರಿಗೆ ಗೊತ್ತು? ಅವನಿಗೆ ಬಿರಾದಾರ ಪಾಟೀಲನ ನೆನಪಾಯಿತೋ ಏನೋ. ಅವನು ಕೂಡ ಹಾಗೆಯೇ ಹೇಳಿದ್ದ. ಗಾಯ ಮತ್ತೆ ಉರಿಯತೊಡಗಿತು. ಇಷ್ಟು ವೇಳೆ ಹತ್ತಿಕ್ಕಿಟ್ಟಿದ್ದ ವಿಷಣ್ಣತೆ ಕೋಳಿಯ ಮೇಲೆ ಏಕದಂ ಇಳಿಯುವ ಚೂರಿಯಂತೆ ಅವನ ಮನಸ್ಸಿನಲ್ಲಿಳಿಯಿತು.

ಪದಮಜೀಯ ಚಹರೆಯಲ್ಲೀಗ ಹುರುಪು ಕಾಣಿಸಿಕೊಂಡಿತು. ಅವನು ಅತ್ಯಂತ ಕಾಳಜಿಯಿಂದ ತನ್ನ ಮಲ್‍ಮಲ್ ಅಂಗಿಯ ಕಿಸೆಯೊಳಗಿಂದ ಒಂದು ಬೀಡಿ ತೆಗೆದ. ಇಪ್ಪತ್ನಾಲ್ಕು ಬೆರಳಿನ ಬಾಳೂನ ಚಹರೆಯ ಮೇಲೆ ಈಗ ವಿಜಯ ಮೂಡಿತ್ತು. ಅವನು ತನ್ನ ಕೋಟಿನ ರೆಕ್ಕೆಗಳನ್ನು ಮೇಲೆತ್ತಿಕೊಂಡು ಕಟ್ಟೆಯ ಮೇಲೆ ಕುಳಿತುಕೊಂಡ ಮತ್ತು ವಟಗುಟ್ಟಿದ. ‘ಸಾಲ್ಯಾಂದು ಛಲೋ ಫಜೀತಿ ಆತು?’ ಯಾಕೆಂದರೆ, ಪದಮಜೀ ಸ್ವಂತದ ಬೀಡಿ ಹೊರತೆಗೆದನೆಂರೆ ಯಾವುದೋ ಬೇತಿನಲ್ಲಿದ್ದಾನೆನ್ನುವುದು ಎಲ್ಲರಿಗೂ ತಿಳಿದ ವಿಷಯ.

‘ತಮ್ಮಾ, ಆ ಪಾರಿವಾಳ ಇನ್ನೂ ಬಚ್ಚಾ ಆದ, ಫುಕಟ ಯಾಕ ಅದಕ ಜಗಳಾ ಹಚ್ಚತೀ?’

ಇಪ್ಪತ್ನಾಲ್ಕು ಬೆರಳಿನ ಬಾಳೂನ ಮನಸ್ಸು ಬಡಿದೆದ್ದಿತು. ‘ಅವ ಮುಂದ ಮುಂದ, ನಾ ಹಿಂದ ಹಿಂದ’ದ ಆತ್ಮವಿಶ್ವಾಸ ಅವನ ಬಿದಿರಿನಂಥ ಶರೀರವನ್ನು ತುಂಬಿತ್ತು. ಅವನ ಕಾಲುಗಳು ಭೂಮಿಯ ಮೇಲೆ ನಿಲ್ಲಲೊಲ್ಲವು.

‘ಝಣಾ, ಝಣಾ ಐವತ್ತು ರೂಪಾಯಿ ಎಣಿಸೇನಿ ಅದರ ಸಲುವಾಗಿ ಹುಚ್ಚಪ್ಪಾ, ಎಲ್ಲಿದ್ದೀ ನೀನು?’ ಎದೆಯುಬ್ಬಿಸಿ ಅವನು ಹೇಳಿದ ಮತ್ತು ಹಗುರಾಗಿ ನಗುತ್ತಿದ್ದ ಸಣ್ಯಾನತ್ತ ಕಣ್ಣು ಹೊಡೆದ.

‘ಇಡೀ ಜಿಲ್ಲೆಯೊಳಗ ಇಂಥಾ ಜಾತಿ ಇಲ್ಲ. ಬೇನವಾಡಿ ಇನಾಂದಾರನ ಬಂಗಲೆಯೊಳಗಿಂದಿದು. ಈಗ ಹೇಳು. ಪರದೆ ಹಾಕಿಕೊಂಡು ಯಾಕ ಕುಳಿತೀದಿ ಮಾರಿಮ್ಯಾಲ?’ ಪದಮಜೀ ಏನೂ ಮಾತಾಡಲಿಲ್ಲ. ಬಾಳೂನನ್ನು ಅವನು ಹತ್ತು ಹನ್ನೆರಡು ವರ್ಷಗಳಿಂದ ಬಲ್ಲವನಾಗಿದ. ಅವನ ಬಡಬಡಿಕೆಯಿಂದ ಅವನು ಹೆದರುವ ಹಾಗಿರಲಿಲ್ಲ. ಸಣ್ಯಾನತ್ತ ಹೊರಳಿ, ‘ನಡೀ, ನಾನು ಎರಡು ರೂಪಾಯಿ ಕೊಡತೀನಿ, ಆ ಟೋಪೇಲ ಮರಿ ನನಗ ಕೊಟ್ಟು ಬಿಡು’ ಎಂದು ಹೇಳಿದ.

‘ಎರಡು ರೂಪಾಯೀನ? ಫರ್ರ್!’ ತನ್ನ ಭಾಷಣದಿಂದ ಪದಮಜೀಯ ಮೇಲೆ ಯಾವ ಪರಿಣಾಮವೂ ಆಗಿರದ್ದನ್ನು ನೋಡಿ ಸಿಟ್ಟಿಗೆದ್ದು ಇಪ್ಪತ್ನಾಲ್ಕು ಬೆರಳಿನವ ಹೇಳಿದ. `ಎರಡು ರೂಪಾಯೀನ? ಕೊಡು ಎರಡು ರೂಪಾಯಿ ನಿನ್ನ ಎಮ್ಮೀ ಬೋಳಸಾಕ?’ ಈಗ ಪದಮಜೀಯ ಮೋರೆಯ ಮೇಲೆ ಈರ್ಷೆಯ ಚಮಕು ಹೊಳೆಯಿತು. ಒಂದು ಕುತ್ಸಿತ, ಗರ್ವದ ನಗೆ ಅವನ ತುಟಿಗಳಲ್ಲಿ ಕಾಣಿಸಿಕೊಂಡಿತು. ಬೀಡೀ ಚೆಲ್ಲಿ ಹೇಳಿದ. ‘ಅಚ್ಛಾ ಬಾಳೂ ಹೇಳು, ನಿನ್ನ ಹಸಿವೆಯಾದರೂ ಎಷ್ಟದ?’

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 4 : Literature: ನೆರೆನಾಡ ನುಡಿಯೊಳಗಾಡಿ; ‘ಏನೋ ಬಾಳೂ ಇವೇನು ಪಾರಿವಾಳಾನೋ ಅಥವಾ ಬೋಳು ತಲೆ ಹೆಂಗಸರೋ?’ 

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Published On - 11:56 am, Fri, 11 March 22

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ