ಬಿಗ್ ಬಾಸ್ಗೆ ಬಂದ 2ನೇ ವಾರದಲ್ಲೇ ನಾನು ಕಪ್ ಗೆದ್ದೆ; ತಮ್ಮದೇ ಲೆಕ್ಕಾಚಾರ ತಿಳಿಸಿದ ಹನುಮಂತ
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಈಗ ಕೊನೇ ವಾರದ ಸಂಚಿಕೆಗಳು ಪ್ರಸಾರ ಆಗುತ್ತಿವೆ. ಫಿನಾಲೆ ನೋಡಲು ವೀಕ್ಷಕರು ಕಾದಿದ್ದಾರೆ. ಯಾರ ಕೈಗೆ ಬಿಗ್ ಬಾಸ್ ಟ್ರೋಫಿ ಸೇರಲಿದೆ ಎಂಬ ಕೌತುಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಹನುಮಂತ ಅವರು ಈಗಾಗಲೇ ತಾವು ಟ್ರೋಫಿ ಗೆದ್ದಿರುವುದಾಗಿ ಹೇಳಿದ್ದಾರೆ.
ಸಿಂಗರ್ ಹನುಮಂತ ಅವರಿಗೆ ಬಿಗ್ ಬಾಸ್ ಕಪ್ ಗೆಲ್ಲುವ ಎಲ್ಲ ಸಾಮರ್ಥ್ಯ ಇದೆ. ಅವರೇ ಗೆಲ್ಲುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಮಂದಿ ಅಭಿಪ್ರಾಯ ತಿಳಿಸುತ್ತಿದ್ದಾರೆ. ಹಾಗಂತ ಹನುಮಂತನೇ ಗೆದ್ದು ಬಿಡಬಹುದು ಎಂಬ ಗ್ಯಾರಂಟಿ ಇಲ್ಲ. ತ್ರಿವಿಕ್ರಮ್, ಭವ್ಯಾ ಗೌಡ, ರಜತ್, ಉಗ್ರಂ ಮಂಜು, ಮೋಕ್ಷಿತಾ ಕೂಡ ಟಫ್ ಸ್ಪರ್ಧಿಗಳಾಗಿ ಫಿನಾಲೆ ತಲುಪಿದ್ದಾರೆ. ಟ್ರೋಫಿ ಯಾರು ಗೆಲ್ಲುತ್ತಾರೋ ಗೊತ್ತಿಲ್ಲ. ಆದರೆ ಹನುಮಂತ ಅವರು ತಾವು ಈಗಾಗಲೇ ಟ್ರೋಫಿ ಗೆದ್ದಾಗಿದೆ ಎಂದು ಹೇಳಿದ್ದಾರೆ. ಅವರ ಮಾತಿನ ಅರ್ಥ ಬೇರೆ ಇದೆ.
ಹನುಮಂತ ಅವರು ಅತಿರೇಕದ ಲೆಕ್ಕಾಚಾರ ಹಾಕಿಕೊಂಡು ಗೇಮ್ ಆಡುವವರಲ್ಲ. ಆ ಕ್ಷಣದಲ್ಲಿ ಜೀವಿಸುವ ವ್ಯಕ್ತಿ ಅವರು. ಬಿಗ್ ಬಾಸ್ ಮನೆಗೆ ಬರುವಾಗ ಅವರು ಟ್ರೋಫಿ ಮೇಲೆ ಕಣ್ಣಿಟ್ಟುಕೊಂಡು ಬಂದಿರಲಿಲ್ಲ. ‘ನಾನು ಬಂದ ಎರಡೇ ವಾರಕ್ಕೆ ಸುದೀಪ್ ಸರ್ ಕಡೆಯಿಂದ ಕಿಚ್ಚನ ಚಪ್ಪಾಳೆ ಸಿಕ್ಕಿತು. ಅದೇ ನನಗೆ ಬಿಗ್ ಬಾಸ್ ಟ್ರೋಫಿ. ಆಗಲೇ ನಾನು ಕಪ್ ಗೆದ್ದೆ’ ಎಂದು ಹನುಮಂತ ಅವರು ಹೇಳಿದ್ದಾರೆ.
ಇಡೀ ಬಿಗ್ ಬಾಸ್ ಮನೆಯಲ್ಲಿ ಒಬ್ಬೊಬ್ಬರ ಆಟ ಒಂದೊಂದು ರೀತಿ ಇರುತ್ತದೆ. ಎಲ್ಲರೂ ವೈಯ್ತಕಿಕ ದ್ವೇಷದ ಕಡೆಗೆ ಗಮನ ನೀಡುತ್ತಾರೆ. ಒಬ್ಬರನ್ನು ಇನ್ನೊಬ್ಬರು ಟಾರ್ಗೆಟ್ ಮಾಡಿಕೊಂಡು ಕಾಲ ಕಳೆಯುತ್ತಾರೆ. ಆಟಕ್ಕಾಗಿ ಇನ್ನೊಬ್ಬರನ್ನು ತುಳಿಯಲು ಪ್ರಯತ್ನಿಸುತ್ತಾರೆ. ಇತರರ ಮೇಲೆ ಪಿತೂರಿ ಮಾಡುತ್ತಾರೆ. ಆದರೆ ಹನುಮಂತ ಅವರು ಇಂಥ ಕೆಲಸ ಮಾಡಲೇ ಇಲ್ಲ. ಅವರದ್ದು ಏನಿದ್ದರೂ ನೇರ ನಡೆ-ನುಡಿ.
ಇದನ್ನೂ ಓದಿ: ಟಾಸ್ಕ್ನಲ್ಲಿ ತಪ್ಪು ಮಾಡಿದ್ದಕ್ಕೆ ಧನರಾಜ್ ಎಲಿಮಿನೇಟ್ ಆದ್ರಾ? ಸುದೀಪ್ ಹೇಳಿದ ಕಾರಣ ಬೇರೆ
ಅರ್ಥಗರ್ಭಿತವಾದ ಹಾಡುಗಳು, ಮುಗ್ಧತೆಯ ಮಾತು, ಲಘು ಹಾಸ್ಯದಿಂದ ಹನುಮಂತ ಅವರು ಎಲ್ಲರ ಫೇವರಿಟ್ ಸ್ಪರ್ಧಿ ಎನಿಸಿಕೊಂಡರು. ಮೊದಲಿಗೆ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಾಗ ಆಟದ ರೀತಿ ನೀತಿ ಅವರಿಗೆ ತಿಳಿದಿರಲಿಲ್ಲ. ಆಗ ಅವರ ಸಹಾಯಕ್ಕೆ ಬಂದಿದ್ದು ಧನರಾಜ್ ಆಚಾರ. ಅವರಿಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು. ಯಾರು ಎಲಿಮಿನೇಟ್ ಆದಾಗಲೂ ಹನುಮಂತ ಕಣ್ಣೀರು ಹಾಕಿರಲಿಲ್ಲ. ಆದರೆ ಧನರಾಜ್ ಔಟ್ ಆದಾಗ ಹನುಮಂತನ ಕಣ್ಣಲ್ಲಿ ನೀರು ಬಂತು. ಅವರು ಸಖತ್ ಎಮೋಷನಲ್ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.