Horoscope Today 21 January 2025: ಅನಾಥ ಪ್ರಜ್ಞೆ ಕಾಡುವುದು, ಕೆಲಸದಲ್ಲಿ ಅಡೆತಡೆಗಳು ಬರಬಹುದು
ಶಾಲಿವಾಹನ ಶಕೆ 1947ರ ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಪಂಚಮಿಯ ದಿನದ ನಿತ್ಯ ಪಂಚಾಂಗವನ್ನು ಮತ್ತು ಎಲ್ಲಾ 12 ರಾಶಿಗಳಿಗೆ ದಿನದ ಭವಿಷ್ಯವನ್ನು ಒಳಗೊಂಡಿದೆ. ಪ್ರತಿಯೊಂದು ರಾಶಿಗೂ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ದಿನದ ಪ್ರಭಾವವನ್ನು ವಿವರಿಸಲಾಗಿದೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 25 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03: 35 ರಿಂದ 04:59ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:54 ರಿಂದ 11:19 ರವರೆಗೆ, ಗುಳಿಕ ಮಧ್ಯಾಹ್ನ 12:14 ರಿಂದ 02:09 ರವರೆಗೆ.
ಮೇಷ ರಾಶಿ: ಕೆಲವರು ನಿಮ್ಮನ್ನು ದೂರವಿಡಬಹುದು. ಅದು ವಿಳಂಬವಾಗಿ ಗೊತ್ತಾಗಲಿದೆ. ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಮಾಯೆಯಂತೆ ಬದಲಾಗುವುದು. ಕ್ಷಣಾರ್ಧದಲ್ಲಿ ಪರಿಹಾರವನ್ನು ಕಂಡುಕೊಳ್ಳಬಲ್ಲಿರಿ. ನಿಮ್ಮ ವ್ಯವಹಾರದ ಬಗ್ಗೆ ಸಲ್ಲದ ಮಾತುಗಳು ಕೇಳಿ, ಅದರೆ ಮನಸ್ಸಿಗೆ ಹಾಕಿಕೊಳ್ಳುವ ಅವಶ್ಯಕತೆ ಇಲ್ಲ. ಮಕ್ಕಳ ಜಗಳದಲ್ಲಿ ಮಧ್ಯಪ್ರವೇಶಿಸಿ ಸಮಾಧಾನ ಮಾಡುವಿರಿ. ಆಪ್ತರಿಗೆ ಉಡುಗೊರೆ ಕೊಡಲಿದ್ದೀರಿ. ಯಾವುದಾದರೂ ಆಮಿಷಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಅಕಾರಣವಾಗಿ ಬರುವ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ನಿಜವಾದ ಮಿತ್ರನ ಬಗ್ಗೆ ನಿಮಗೆ ಗೊತ್ತಾಗಲಿದೆ. ನೀವು ನಿಮ್ಮ ನಿಯಂತ್ರಣದಲ್ಲಿ ಇದ್ದರೆ ಯಾವ ಏರಿಳಿತವೂ ನಿಮ್ಮನ್ನು ಏನೂ ಮಾಡಲಾಗದು. ಸಂಗಾತಿಯನ್ನು ದೂರ ಕಳಿಸಿಕೊಂಡು ಸಂಕಟಪಡುವಿರಿ. ನಿಮ್ಮ ಆದಾಯವು ಹೆಚ್ಚು ಮಾಡಿಕೊಳ್ಳುವ ಆಕಾಂಕ್ಷೆಯು ಇರಲಿದೆ. ಸಹೋದ್ಯೋಗಿಗಳ ಸಹಕಾರದಿಂದ ಒತ್ತಡವನ್ನು ಕಡಿಮೆ ಆಗುವುದು.
ವೃಷಭ ರಾಶಿ: ಅನಾಥ ಪ್ರಜ್ಞೆಯಿಂದ ನಿಮಗೆ ಸ್ವಲ್ಪ ಸಮಾಧಾನವೂ ಆಗುವುದು. ಉನ್ನತ ಅಧಿಕಾರಿಗಳು ನಿಮ್ಮಿಂದ ಅಧಿಕ ನಿರೀಕ್ಷೆಯನ್ನು ಅಪೇಕ್ಷಿಸುವರು. ಉದ್ಯಮಿಗಳ ಕೆಲಸದಲ್ಲಿ ಅಡೆತಡೆಗಳು ಬರಬಹುದು. ಅದನ್ನು ಗಣನೆಗೆ ತೆಗೆದುಕೊಳ್ಳದೇ ಮುಂದುವರಿಯುವಿರಿ. ಕಳೆದುಕೊಂಡಿದ್ದನ್ನು ನೀವು ಪುನಃ ಪಡೆದುಕೊಳ್ಳುವ ಪ್ರಯತ್ನದಲ್ಲಿ ನೀವು ಇರುವಿರಿ. ಲೆಕ್ಕಕ್ಕೆ ಸಿಗದೇ ಇರುವ ಎಷ್ಟೋ ಹಣವನ್ನು ಕಳೆದುಕೊಳ್ಳಬೇಕಾಗುವುದು. ಕೇಳಬಾರದ ವಿಚಾರಗಳನ್ನು ಬಂಧುಗಳಿಂದ ಪಡೆಯುವಿರಿ. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ. ಸೌಂದರ್ಯವರ್ಧನೆಗೆ ಬೇಕಾದ ಸಮಯವನ್ನು ಕೊಡುವಿರಿ. ವ್ಯವಹಾರದಲ್ಲಿ ಗೊಂದಲವನ್ನು ಇಟ್ಟುಕೊಳ್ಳುವುದು ಬೇಡ. ಯಾವುದನ್ನೂ ಹೆಚ್ಚು ಕಾಲ ಉಳಿಸಿಕೊಳ್ಳುವುದು ಕಷ್ಟ. ನಿಮ್ಮ ಸೋಲನ್ನು ಒಪ್ಪಿಕೊಳ್ಳದೇ ವಾದಿಸುವಿರಿ. ನಿಮ್ಮ ಪರೀಕ್ಷೆಯ ದಿನವು ಇಂದಾಗಿದ್ದು ಫಲಿತಾಂಶವೂ ನಿಮ್ಮ ವರ್ತನೆಯ ಮೇಲಿರುವುದು.
ಮಿಥುನ ರಾಶಿ: ಅಧಿಕಾರವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಇಲ್ಲವಾದರೆ ದುರುಪಯೋಗವೂ ನಿಷ್ಪ್ರಯೋಜಕವೂ ಆಗಬಹುದು. ಚಂಚಲವಾದ ಮನಸ್ಸು ನಿಮ್ಮ ಸಂಗಾತಿಗೆ ಇಷ್ಟವಾಗದು. ಯಾವುದೋ ಅಸತ್ಯವಾದ ಉದ್ಯೋಗಕ್ಕೆ ಮನಸೋತು ಹಣವನ್ನು ಕಳೆದುಕೊಳ್ಳಬೇಕಾದೀತು. ವ್ಯಾಪಾರದ ನಷ್ಟವನ್ನು ಇನ್ನಾವುದರಿಂದಲೇ ತುಂಬಿಕೊಳ್ಳುವಿರಿ. ಮನೆಯ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವುದಿಲ್ಲ. ಹೂಡಿಕೆಯನ್ನು ನಿಲ್ಲಿಸುವ ಮನಸ್ಸಾಗುವುದು. ಒಳ ಮನಸ್ಸು ನಿಮ್ಮ ದಾರಿಯನ್ನು ತಪ್ಪಿಸದು. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ಕೆಲವರ ತಂತ್ರಕ್ಕೆ ಸಿಲುಕಿ ನೀವು ಒದ್ದಾಡಬೇಕಾಗುವುದು. ನಟರಿಗೆ ಅವಕಾಶವು ಸಿಕ್ಕೂ ಸಿಗದಂತೆ ಆಗಬಹುದು. ಎಲ್ಲ ಸನ್ನಿವೇಶಕ್ಕೂ ಒಂದೇ ಪರಿಹಾರವು ಇರದು. ಒಂದೇ ವಿಚಾರವನ್ನು ಹೆಚ್ಚು ಯೋಚಿಸಿದಷ್ಟೂ ಮನಸ್ಸು ದುರ್ಬಲವಾಗಬಹುದು. ಅಲ್ಪ ಮೊತ್ತವನ್ನು ಸಾಮಾಜಿಕ ಕಾರ್ಯಕ್ಕೆ ಕೊಡುವಿರಿ.
ಕರ್ಕಾಟಕ ರಾಶಿ: ಅನ್ಯರ ಅನುಭವ ನಿಮಗೆ ಪಾಠವಾಗಬಹುದು, ಆದರೆ ಅದನ್ನೇ ಅನುಸರಿಸುವುದು ಬೇಡ. ನಿಮ್ಮ ವರ್ತನೆಯನ್ನು ನೀವು ನಿಯಂತ್ರಿಸಿಕೊಳ್ಳಬೇಕು, ಇಲ್ಲದಿದ್ದರೆ ತಮಾಷೆಯ ವಸ್ತುವಾಗಬೇಕಾಗುವುದು. ಚಟುವಟಿಕೆಯಿಂದ ಇದ್ದರೂ ನಿಮ್ಮ ಕೆಲಸ ಮಾತ್ರ ಆಗದೇ ಇರುವುದು. ಪಾಲುದಾರಿಕೆಯನ್ನು ಪಡೆಯುವ ಮೊದಲು ಸಾಧ್ಯಾಸಾಧ್ಯತೆಗಳ ಬಗ್ಗೆ ಗಮನವಿರಲಿ. ನಿಮ್ಮ ಜೀವನಕ್ಕೆ ಆಗದವರ ಬಗ್ಗೆ ತಾತ್ಸಾರ ಭಾವ ಬರಬಹುದು. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು. ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ. ನಿಮ್ಮ ನಿಯಮಿತ ಚೌಕಟ್ಟನ್ನು ಬಿಟ್ಟು ಆಚೆ ಬರಲು ಆಗದು. ನಿಮ್ಮ ನಡತೆಯಿಂದ ಕುಲಕ್ಕೆ ಅವಮಾನವಾಗಬಹುದು. ನಿದ್ರೆಯನ್ನು ಹೆಚ್ಚು ಮಾಡುವಿರಿ. ಜವಾಬ್ದಾರಿಯನ್ನು ಪಡೆದ ಬೆನ್ನಲ್ಲೇ ಹಿತಶತ್ರುಗಳನ್ನೂ ಹೆಚ್ಚಿಸಿಕೊಳ್ಳುವಿರಿ.
ಸಿಂಹ ರಾಶಿ: ಯಾವ ರೀತಿಯಿಂದಲೂ ದೈವ ಸಹಾಯ ನಿಮಗೆ ಸಿಗಲಿದೆ. ಆದರೆ ಅದನ್ನು ಕಾಣುವ ಕಣ್ಣು ಬುದ್ಧಿಗಳು ಬೇಕು. ಇಂದು ಉದ್ಯೋಗಿಗಳಿಗೆ ಕಛೇರಿಯಲ್ಲಿ ಎಲ್ಲರ ಜೊತೆ ಉತ್ತಮ ಸಮಯ ಕಳೆಯುವ ಅವಕಾಶವು ಸಿಗುವುದು. ತಪ್ಪನ್ನು ಮಾಡಿ ಅನಂತರ ಅದನ್ನು ಸರಿ ಮಾಡಿಕೊಳ್ಳಲು ವಿವಿಧ ಪ್ರಯತ್ನವನ್ನು ಮಾಡುವಿರಿ. ನೀರಿನಿಂದ ಭಯವು ಉಂಟಾಗುವುದು. ಇಂದು ಮನೆಯಲ್ಲಿ ಹಬ್ಬದ ವಾತಾವರಣ ಇರಲಿದ್ದು ನೀವೂ ಬಹಳ ದಿನಗಳ ಅನಂತರ ಇಂತಹ ಸಂತೋಷವನ್ನು ಪಡೆಯುವಿರಿ. ಸಾಲಕ್ಕಾಗಿ ಮತ್ತೆ ಮತ್ತೆ ದೂರವಾಣಿ ಕರೆಗಳು ಪೀಡಿಸಬಹುದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು. ನಿಮಗೆ ಬೇಕಾದ ವ್ಯವಸ್ಥೆಯನ್ನು ನೀವು ಮಾಡಿಕೊಳ್ಳುವಿರಿ. ಸಾಮಾಜಿಕ ತಾಣದಲ್ಲಿ ಹೆಚ್ಚು ಸಮಯ ಕಳೆಯುವಿರಿ. ಸ್ನೇಹಿತರ ತಮಾಷೆಯು ನಿಮಗೆ ಇಷ್ಟವಾಗದು. ದ್ವಿಚಕ್ರ ವಾಹನವನ್ನು ಓಡಿಸುವಾಗ ಎಚ್ಚರ ಇರಲಿ. ಸಂಗಾತಿಯ ಮನಃಸ್ಥಿತಿಗೆ ಪೂರಕವಾಗಿ ನಿಮ್ಮ ಆಲೋಚನೆಯೂ ಇರಲಿದ್ದು ನಿಮಗೆ ಖುಷಿಯಾಗುವುದು.
ಕನ್ಯಾ ರಾಶಿ: ಹಿರಿಯರ ಮಾತಿಗೆ ತಲೆಬಾಗುವುದು ಒಳ್ಳೆಯದೇ. ಒತ್ತಡದ ನಡುವೆಯೂ ತಾಳ್ಮೆಯನ್ನು ನೀವು ಕಂಡುಕೊಳ್ಳುವಿರಿ. ಕಾಣಾಂತರಗಳಿಂದ ನಿಲ್ಲಿಸಿದ್ದ ಕಾರ್ಯವನ್ನು ಪುನಃ ಪ್ರಾರಂಭಿಸುವಿರಿ. ನೀವು ಹೇಳುವ ಸುಳ್ಳುಗಳೇ ಸತ್ಯವಾಗಬಹುದು. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳಬೇಕಾಗುವುದು. ಕೆಲವು ಶುಭ ಸೂಚನೆಗಳು ನಿಮಗೆ ಗೊತ್ತಾಗಲಿದ್ದು ನಿರೀಕ್ಷೆಯೂ ಎಂದಿಗಿಂತ ಹೆಚ್ಚಿರಲಿದೆ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು. ಅನಾರೋಗ್ಯಕ್ಕೆ ಉತ್ತಮ ಚಿಕಿತ್ಸೆ ಸಿಗಲಿದೆ. ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡೆಯುವುದು ಮುಖ್ಯವಾಗಿರಲಿ. ಮನೆಯ ಕಾರ್ಯದಲ್ಲಿ ಸಮಯವು ಕಳೆದುಹೋಗುವುದು. ನಿಮಗೆ ಗೊತ್ತೇ ಇರದ ಕೆಲಸವನ್ನು ನೀವು ಮಾಡಬೇಕಾದೀತು. ಹೂಡಿಕೆಯ ನಷ್ಟದಿಂದ ವಿಚಲಿತರಾಗಬೇಕಾಗಿಲ್ಲ. ಎಲ್ಲದಕ್ಕೂ ವಿಧಿಯನ್ನು ಹೀಗಳೆಯುವುದಕ್ಕಿಂತ ನಿಮ್ಮ ಪ್ರಯತ್ನವನ್ನು ಮುಂದುವರೆಸಿರಿ.
ತುಲಾ ರಾಶಿ; ಉದ್ಯಮವು ನಿಮ್ಮ ನಿರೀಕ್ಷೆಗೆ ನೀರೆರೆಯಬಹುದು. ಉನ್ನತ ಅಧಿಕಾರಿಗಳ ಜೊತೆ ಹೆಚ್ಚು ವ್ಯವಹಾರವನ್ನು ಮಾಡಬೇಕಾಗಿರುವ ಕಾರಣ ಅವರ ಜೊತೆ ಓಡಾಡುವಿರಿ. ಹಣಕಾಸಿನ ವೆಚ್ಚಗಳ ಬಗ್ಗೆ ವಿಶೇಷವಾಗಿ ಕಾಳಜಿ ಬೇಕು. ಸ್ನೇಹತರ ಜೊತೆ ಮೋಜಿನಲ್ಲಿ ದಿನವನ್ನು ಮುಗಿಸುವಿರಿ. ಮಾರಾಟಕ್ಕೆ ಬೇಕಾದ ವ್ಯವಸ್ಥೆಯನ್ನು ರೂಪಿಸಿಕೊಳ್ಳುವಿರಿ. ಜಾಹಿರಾತು ವಿಭಾಗದಲ್ಲಿ ಇರುವವರಿಗೆ ಅವಕಾಶವು ಹೆಚ್ಚು ಸಿಗಬಹುದು. ವಾಗ್ಮಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವರು. ಸಂಪ್ರದಾಯದ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ನಿಮ್ಮ ಉಪಕಾರಕ್ಕೆ ಪ್ರತ್ಯುಪಕಾರವು ಸಿಗದೇ ಇರಬಹುದು. ಎಲ್ಲ ತಪ್ಪಿಗೂ ನೀವೇ ಕಾರಣಕರ್ತರಾಗಬಹುದು. ನಿಮ್ಮ ಕರ್ತವ್ಯವನ್ನು ಮಾಡಲು ಹಿಂದೇಟು ಹಾಕುವಿರಿ. ಲೆಕ್ಕಪತ್ರದ ವಿಚಾರದಲ್ಲಿ ನಿಷ್ಠುರವಾದ ಮನೋಭಾವವನ್ನು ಇಟ್ಟುಕೊಳ್ಳುವಿರಿ. ನಿಮ್ಮ ಮನಸ್ಸಿಗೆ ಹಿಡಿಸದೇ ಇರುವವರಿಂದ ದೂರ ಉಳಿಯುವಿರಿ.
ವೃಶ್ಚಿಕ ರಾಶಿ: ಇಂದು ಅನಿರೀಕ್ಷಿತವಾಗಿ ಕಛೇರಿಯಲ್ಲಿ ಸಹಕಾರ ಸಿಗುವುದು. ವಿದ್ಯಾರ್ಥಿಗಳು ಹಲವು ದಿನಗಳ ಅನಂತರ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಏಕಾಗ್ರತೆಯಿಂದ ಕೆಲಸ ಮಾಡಿದರೆ ಅನಾಯಾಸವಾಗಿ ಗುರಿಯನ್ನು ತಲುಪಬಹುದು. ಲಾಭಾಕ್ಕಾಗಿ ವ್ಯಾಪಾರದಲ್ಲಿ ಹೊಸದಾದ ಆಕರ್ಷ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಔದಾಸೀನ್ಯದಿಂದ ವ್ಯಾಪಾರದಲ್ಲಿ ನಷ್ಟವಾಗಲಿದೆ. ಇಂದಿನ ಪ್ರಯಾಣದಿಂದ ಹಿಂಸೆ ಆಗಬಹುದು. ಮಿತ್ರರಿಂದ ಸಿಗಬೇಕಾದ ಹಣಕ್ಕೆ ಕತ್ತರಿ ಬೀಳುವುದು. ನಿರೀಕ್ಷಿತ ಫಲವು ಲಭಿಸದು. ಆಧ್ಯಾತ್ಮಿಕ ಮೇಲೆ ಪ್ರೀತಿ ಹೆಚ್ಚಾಗಿ ಲೌಕಿಕ ವಿಚಾರಕ್ಕೆ ಆಸಕ್ತಿ ಕಡಿಮೆಯಾಗಲಿದೆ. ಆಸ್ತಿಯ ಖರೀದಿಯ ವಿಚಾರದಲ್ಲಿ ನೀವು ಸರಿಯಾದ ಮಾಹಿತಿಯನ್ನು ಪಡೆಯುವುದು ಸೂಕ್ತ. ಸಹೋದ್ಯೋಗಿಗಳ ಮೇಲೆ ನಿಮಗೆ ಅಸೂಯೆ ಉಂಟಾಗಬಹುದು. ನಿಮ್ಮ ಇಚ್ಛಾಶಕ್ತಿಯು ವಹಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಕಾರಿ. ನಿಮ್ಮ ಯೋಜನೆ ಉತ್ತಮವಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಕಷ್ಟವಾದೀತು.
ಧನು ರಾಶಿ: ಆಹಾರದ ವಸ್ತುಗಳನ್ನು ದಾನವಾಗಿ ಕೊಡುವಿರಿ. ಉದ್ಯೋಗವನ್ನು ಅರಸುತ್ತಿರುವ ನೀವು ದುಡಿಕಿ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಉತ್ತಮ ಕೆಲಸವನ್ನು ನಷ್ಟ ಮಾಡಿಕೊಳ್ಳುವಿರಿ. ಯಂತ್ರದ ವ್ಯಾಪಾರದಿಂದ ನಿಮಗೆ ಲಾಭವು ಅಧಿಕವಾಗುವುದು. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಿಕೊಂಡು ಅನಂತರ ಬೇಸರಿಸುವರು. ಉದ್ಯಮದ ಕಾರಣ ಇರುವ ಸ್ಥಳದಿಂದ ದೂರ ಹೋಗಬೇಕಾಗುವದು. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದಿಸಿಯಾರು. ಒಳ್ಳೆಯದು ನಿಮ್ಮ ಪಾಲಿಗೆ ಇಲ್ಲ ಎಂಬುದು ಸುಳ್ಳಾಗಬಹುದು. ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು. ಒಂದೇ ಕಾರ್ಯಕ್ಕೆ ಮತ್ತೆ ಮತ್ತೆ ವಿಘ್ನಗಳು ಬರುತ್ತಿದ್ದು ದೈವಜ್ಞರನ್ನು ಸಂಪರ್ಕಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ. ನಿಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲ ಮಾಹಿತಿಯು ಪ್ರಕಟವಾಗಬಹುದು. ಸ್ವಂತ ವಾಹನ ಸಂಚಾರದಿಂದ ಭಯವಾಗಲಿದೆ.
ಮಕರ ರಾಶಿ: ಸರ್ಕಾರಿ ಉದ್ಯೋಗದಿಂದ ಮಧ್ಯದಲ್ಲಿ ನಿವೃತ್ತಿ ಬಯಸುವಿರಿ. ತಮ್ಮ ಹಠಮಾರಿತನದಿಂದ ಬೇರೆಯವರ ಹೃದಯವನ್ನೂ ನೋಯಿಸಬಹುದು. ಮೇಲಧಿಕಾರಿಗಳಿಗೆ ನೇರ ನುಡಿಯ ಪ್ರತಿಕ್ರಿಯೆಯನ್ನು ನೀಡುವುದು ಬೇಡ. ದಿನನಿತ್ಯದ ಬಳಕೆಯ ವಸ್ತುಗಳ ವ್ಯಾಪಾರ ಮಾಡುವವರ ಮಾರಾಟ ನಿರೀಕ್ಷೆಗಿಂತ ಹೆಚ್ಚಾಗಿರುತ್ತದೆ. ಎಲ್ಲದಕ್ಕೂ ಸಂಶಯಪಟ್ಟು ಗೊಂದಲವಾಗಲಿದೆ. ಸರ್ಕಾರ ಕಾರ್ಯವು ಇಂದು ಪೂರ್ಣವಾಗದು ಎಂದು ಅಂದುಕೊಂಡಿದ್ದರೂ ಕೊನೆಗೆ ಕೆಲಸವಾಗುವುದು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು. ಮನೆಯ ಸಮೀಪದಲ್ಲಿಯೇ ನಿಮ್ಮ ಉದ್ಯೋಗವು ಸಿಗಲಿದೆ. ಮನೆಯಲ್ಲಿ ತಾಳ್ಮೆಯಿಂದ ವ್ಯವಹರಿಸಿ. ನಿಮ್ಮ ವಾಹನಕ್ಕಾಗಿ ಖರ್ಚನ್ನು ಮಾಡಬೇಕಾಗುವುದು. ಸಿಕ್ಕ ಅವಕಾಶವನ್ನು ಪ್ರೀತಿಸಿ. ಅದೇ ಮಹತ್ತ್ವದ ಮಾರ್ಗದಲ್ಲಿ ತೋರುವುದು. ಪ್ರೀತಿಯ ವಿಷಯದಲ್ಲಿ ಇಂದು ದುಃಖವುಂಟಾಗಬಹುದು. ಮನಸ್ತಾಪವನ್ನು ದ್ವೇಷವಾಗಿ ಪರಿವರ್ತಿಸಿಕೊಳ್ಳುವುದು ಬೇಡ.
ಕುಂಭ ರಾಶಿ: ವಿದೇಶದ ಆಮದು ವ್ಯವಹಾರಕ್ಕೆ ತಡೆಯಾಗಲಿದೆ. ನಿಮ್ಮ ಕಾರ್ಯದ ಅನುಭವವು ಇಂದು ಪ್ರಯೋಜನಕ್ಕೆ ಬರಲಿದ್ದು, ಎಲ್ಲರೂ ನಿಮ್ಮ ಸಲಹೆಯನ್ನು ಪಡೆಯುವರು. ಕಲಾವಿದರು ಅವಕಾಶದಿಂದ ವಂಚಿತರಾಗಬೇಕಾಗುವುದು. ಇಂದು ನಿಮಗೆ ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆ ಸಿಗಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಓಡಾಟವು ಅಧಿಕವಾಗಿ ಇರುವುದು. ಉದ್ಯಮದ ನಿಮಿತ್ತ ದೂರ ಪ್ರಯಾಣ ಹಾಗೂ ಕಾರ್ಯ ಸಫಲವಾಗದೇ ಬೇಸರ. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು. ಹೂಡಿಕೆಗೆ ಯಾರಿಂದಲಾದರೂ ಪ್ರೇರಣೆ ಸಿಗಬಹುದು. ಇಂದು ನಿಮ್ಮ ಉತ್ಸಾಹವನ್ನು ಯಾರಿಂದಲೂ ಸಾಧ್ಯವಾಗದು. ಆದಾಯದ ವಿಚಾರದಲ್ಲಿ ಹಿನ್ನಡೆಯಾಗಿದ್ದು ನಿಮ್ಮ ತಂತ್ರವು ಪೂರ್ಣವಾಗಿ ಫಲಿಸದು.
ಮೀನ ರಾಶಿ: ಕಾರ್ಯದಲ್ಲಿ ಸಂಪೂರ್ಣ ಜಾಗರೂಕರಾದಾಗ ಮಾತ್ರ ಅವಕಾಶಗಳು ಸಿಗುತ್ತವೆ. ಎಂದೋ ಕಲಿಯಬೇಕಾದ ಪಾಠವನ್ನು ಇಂದು ಕಲಿಯುವಿರಿ. ಕಛೇರಿ ಕೆಲಸವು ನಿಮ್ಮ ಸ್ವಂತ ಕೆಲಸಕ್ಕೆ ತೊಂದರೆಯನ್ನು ಕೊಡಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುವರು. ಯಾರದೋ ವಿವಾಹದ ಕಾರ್ಯಕ್ಕೆ ಓಡಾಟ ಮಾಡಬೇಕಾದೀತು. ನಿಮ್ಮ ಭೂವ್ಯವಹಾರವನ್ನು ಸರಿಯಾಗಿ ಇಟ್ಟುಕೊಳ್ಳಲಾಗದು ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಲಿದೆ. ಸಜ್ಜನರ ಜೊತೆ ಸಮಯ ಕಳೆಯುವ ಅವಕಾಶ ಸಿಗುವುದು. ಸಂಗಾತಿಯ ಜೊತೆ ಭಿನ್ನಮತವು ಬರಬಹುದು. ಕುಟುಂಬದ ಹಿರಿಯರ ಅನಾರೋಗ್ಯದ ಕಾರಣ ನಿಮ್ಮ ಸ್ವಂತ ಕಾರ್ಯವನ್ನು ಮಾಡಿಕೊಳ್ಳಲಾಗದು. ಆಭರಣ ಖರೀದಿಗೆ ಉತ್ತಮ ದಿನವಿದಾಗಲಿದೆ. ಉದ್ಯೋಗವನ್ನು ನಂಬಿ ಜೀವನ ಸಾಗಿಸುವವರಿಗೆ ಬೇಸರ ಎದುರಾಗಬಹುದು.
ಲೋಹಿತ ಹೆಬ್ಬಾರ್ – 8762924271 (what’s app only)