Literature: ನೆರೆನಾಡ ನುಡಿಯೊಳಗಾಡಿ; ಇದು ಬ್ರಾಹ್ಮಣರು ಹೇಳುವ ಕಥೆಯಲ್ಲವೇ? ನಿಮ್ಮ ಜಾತಿಯಲ್ಲಿ ಇರುವ ಕಥೆ ಏನು?’

B. Jeyamohan’s Tamil Story : ‘ಸಂಶೋಧನೆಯೇನು? ನಿಮಗೆ ಹುಚ್ಚು. ಸಂಶೋಧನೆ ಮಾಡಿ ದೊಡ್ಡ ಬಾಂಬೋ, ಅವರೆಕಾಯೀನೋ ಕಂಡು ಹಿಡೀರಿ. ಹಣ ಸಿಗುತ್ತೆ ಅದನ್ನು ಬಿಟ್ಟು ಮಲಯನನ್ನು ಸಂಶೋಧನೆ ಯಾಕೆ ಮಾಡಬೇಕು? ಮಲಯತಿಯನ್ನ ಸಂಶೋಧನೆ ಮಾಡಿದರೆ ಪರವಾಗಿಲ್ಲ, ಅಲ್ಲವೆ?’

Literature: ನೆರೆನಾಡ ನುಡಿಯೊಳಗಾಡಿ; ಇದು ಬ್ರಾಹ್ಮಣರು ಹೇಳುವ ಕಥೆಯಲ್ಲವೇ? ನಿಮ್ಮ ಜಾತಿಯಲ್ಲಿ ಇರುವ ಕಥೆ ಏನು?’
ತಮಿಳು ಲೇಖಕ ಬಿ. ಜಯಮೋಹನ್, ಅನುವಾದಕರಾದ ಪಾವಣ್ಣನ್ ಮತ್ತು ಚಿಂತಾಮಣಿ ಕೊಡ್ಲೆಕೆರೆ
Follow us
|

Updated on:Apr 15, 2022 | 1:46 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಹುಡುಕಿ ಅಲೆದಾಡಿ ಕೊನೆಗೆ ಬೆಂಗಳೂರಲ್ಲಿದ್ದ ವಯೋವೃದ್ಧ ಶ್ರೀಧರನ್ ನಂಬೂದಿರಿಪಾಡ್ ಅವರಿಂದ ಒಂದೇ ಒಂದು ಉಪಯುಕ್ತ ಮಾಹಿತಿ ಪಡೆದೆ. ಅವರ ಬಳಿ ಅವರಿಗೆ ಏನೂ ತಿಳಿಯದ ಕೆಲ ತಾಳೆಯೋಲೆಗಳಿದ್ದವು. ಅವು ಅವರ ಮೂಲ ಕುಟುಂಬದ ಕಾಲದಿಂದಲೂ ಇದ್ದವು. ಬೆಂಗಳೂರಿನ ಪುರಾತತ್ವ ಇಲಾಖೆಗೆ ಅವುಗಳನ್ನು ಅವರು ದಾನವಾಗಿ ನೀಡಿದ್ದರು. ಆ ಇಲಾಖೆಗೆ ಹೋಗಿ ಆ ತಾಳೆೆಯೋಲೆಗಳನ್ನು ಸುಲಭವಾಗಿ ಪತ್ತೆ ಹಚ್ಚಿದೆ. ಅವುಗಳಲ್ಲಿ ಬಹುಪಾಲು ತಾಳೆಯೋಲೆಗಳು ನಾನು ಮೊದಲೇ ಓದಿದ್ದವು. ಒಂದು ತಾಳೆಯೋಲೆಯ ಕಟ್ಟು ಬ್ರಾಹ್ಮಿ ಭಾಷೆಯಲ್ಲಿತ್ತು. ಅದನ್ನು ಭಾಷಾತಜ್ಞ ಶಂಕರ ಕುರುಪ್ ಸಹಾಯ ಪಡೆದು ಓದಿದೆ. ನಾನು ಹುಡುಕಿದ್ದು ಸಿಕ್ಕಿತು. ಅದೇ ಮೂಲ ತಂತ್ರಗ್ರಂಥ. ಅದು ಉತ್ತರದ ಭಾಷೆಗೆ ಅನುವಾದಿಸಿದ ಗ್ರಂಥವೆಂದು ಪೂರ್ತಿ ಓದಿದ ಮೇಲೆ ತಿಳಿಯಿತು. ಆದರೆ ಯಾವ ಭಾಷೆಯಿಂದ ಎನ್ನುವುದು ತಿಳಿಯಲಿಲ್ಲ. ಆ ಭಾಷೆಯ ಕುರಿತು ವಿವರವಾಗಿ ಶೋಧಿಸತೊಡಗಿದೆ.

ಕಥೆ: ವಿಷಸರ್ಪ (ನಚ್ಚರವಂ) |  ತಮಿಳು ಮೂಲ: ಜಯಮೋಹನ್ | ಕನ್ನಡಕ್ಕೆ: ಪಾವಣ್ಣನ್ ಮತ್ತು ಚಿಂತಾಮಣಿ ಕೊಡ್ಲೆಕೆರೆ | ಸೌಜನ್ಯ : ದೇಶಕಾಲ, ಸಾಹಿತ್ಯ ಪತ್ರಿಕೆ.

(ಭಾಗ 2)

ಸಂಸ್ಕೃತದ ಮಟ್ಟಿಗೆ ಹೇಳುವುದಾದರೆ ಯಾವುದೇ ಅನುವಾದದಲ್ಲಿಯೂ ಮೂಲಭಾಷೆಯ ಹೆಜ್ಜೆ ಗುರುತು ಅಡಗಿರುತ್ತದೆ. ಮೂಲಭಾಷೆ ತಮಿಳೇ ಇರಬಹುದೇ ಎಂಬ ಅನುಮಾನ ಬಲವಾಗತೊಡಗಿತು. ಆದರೆ ತಮಿಳಿನಿಂದ ಅನುವಾದವಾಗಿದ್ದರೆ ಸಹಜವಾಗಿ ಉಂಟಾಗುವ ಸಮಸ್ಯೆಗಳು ಅಲ್ಲಿ ಕಾಣಲಿಲ್ಲ. ನಾನು ಗೊಂದಲಕ್ಕೊಳಗಾದ ಸಂದರ್ಭಗಳಲ್ಲಿ ಮತ್ತೆಮತ್ತೆ ತಿರ್ಪರಪ್ಪು ದೇವಸ್ಥಾನಕ್ಕೆ ಹೋಗುವುದುಂಟು. ಅಲ್ಲಿಯ ಯಾವುದಾದರೂ ಒಂದು ಸಂಗತಿ ಅಥವಾ ಆಚರಣೆಯಲ್ಲಿ ಉತ್ತರ ಸಿಕ್ಕೀತೆಂದು ನನ್ನ ಒಳ ಮನಸಿನ ಸೂಚನೆ. ಒಂದು ದೇವಸ್ಥಾನವೆನ್ನುವುದು ವಿಚಿತ್ರವಾದ ಒಂದು ಪುರಾತನ ಗ್ರಂಥ. ಸಾಮಾನ್ಯವಾಗಿ ನಾವು ಅದರ ರಕ್ಷಾಪುಟವನ್ನು ಮಾತ್ರ ನೋಡುತ್ತೇವೆ. ಒಳಗೆ ನಾವು ಅರಿಯದ ಎಷ್ಟೋ ವಿವರಗಳು ಅಡಗಿವೆ. ಆದರೆ ಈ ವಿಷಯ ಮಾತ್ರ ಆಟವಾಡುತ್ತಲೇ ಇತ್ತು.

ಆ ದಿನಗಳಲ್ಲಿ ಒಮ್ಮೆ ದೇವಸ್ಥಾನದ ಶ್ರೀ ಕಾರ್ಯಂ ನಾರಾಯಣ ಪಿಳ್ಳೈ ಅವರ ಬಾಗಿಲ ಬಳಿ ಒಬ್ಬ ಮುದುಕ ಕುಳಿತಿರುವುದನ್ನು ನೋಡಿದೆ. ಹಾರಾಡುವ ಕೂದಲನ್ನು ಬಿಗಿಯಾಗಿ ಕಟ್ಟಿದ ಜುಟ್ಟು, ಕಿವಿಗೆ ಕಟ್ಟಿಗೆಯ ಓಲೆ, ಎಲೆ ಅಡಿಕೆಯ ಕೆಂಬಣ್ಣದ ಬಾಯಿ, ಕೆಂಪು ಕಣ್ಣುಗಳು. ದಾಡಿ, ಮೀಸೆ ಇಲ್ಲ. ಅಂದರೆ ಅವನ ಮುಖದಲ್ಲಿ ಕೂದಲು ಹುಟ್ಟೇ ಇಲ್ಲ. ವಯೋವೃದ್ಧ ಚೀನೀ ಮುಖದಲ್ಲಿ ಕಾಣುವಂತೆ ದಟ್ಟ ನಿರಿಗೆಗಳು – ಮುಖ, ಕತ್ತು ಎಲ್ಲೆಲ್ಲೂ. ಜೊತೆಯಲ್ಲಿ ಒಬ್ಬಳು ಹುಡುಗಿ. ಅವಳು ಸಾಧಾರಣ ಹಳ್ಳಿ ಹುಡುಗಿಯಂತಿದ್ದಳು. ದಟ್ಟ ಕಪ್ಪು ಬಣ್ಣ. ಯಕ್ಷಿಯ ಕಣ್ಣುಗಳು. ನನ್ನನ್ನು ಕಂಡ ಕೂಡಲೇ ವಂದಿಸಿದ ಆ ಮುದುಕ. ಬೆಳಕು ಹೊಳೆಯುವ ತನ್ನ ಎಮ್ಮೆ ಕಣ್ಣುಗಳಿಂದ ತಿರುಗಿ ನೋಡಿ ಹುಡುಗಿ ನಿಶ್ಚಲವಾಗಿ ನಿಂತಳು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಒಂದು ಮುತ್ತು ಕೇಳಲಾಗಲಿಲ್ಲ, ಕೊಡಲೂ ಆಗಲಿಲ್ಲ, ನಾನು ಸ್ವತಂತ್ರಳೇ?

ನಾರಾಯಣ ಪಿಳ್ಳೈ ಒಳಗೆ ಇದ್ದರು. ದೇವಸ್ಥಾನದ ಕಾರ್ಯಾಲಯದಲ್ಲಿ ಮಾತ್ರ ಕಾಣಲು ಸಾಧ್ಯವಿರುವ ಪುರಾತನ ಕುರ್ಚಿ, ಟೇಬಲ್ಲು, ಬೀರು, ಲೋಟದಲ್ಲಿ ಹಾಲಿಲ್ಲದ ಚಹಾ, ಎಲೆ ಅಡಿಕೆಯ ಸಂದೂಕ, ಕೋಳಾಂಬಿ ಬೀಡಿಕಟ್ಟು.

‘ಬಾಗಿಲಲ್ಲಿರುವವರು ಯಾರು?’ ಎಂದೆ.

‘ಬಾಗಿಲಲ್ಲೇ? ಯಾರೂ ಇಲ್ಲವಲ್ಲ’

‘ಯಾರೋ ಒಬ್ಬ ಮುದುಕ…’

‘ಅವನೇ? ಮಲಯನ್. ಅವನಿಗೆ ನೂರಾ ಎಂಬತ್ತು ರೂಪಾಯಿ ಬಿಲ್ ಬಾಕಿ ಇದೆ. ಎಲ್ಲಿ ಸ್ಯಾಂಕ್ಷನ್ ಆಗುತ್ತದೆ? ಸೂಪರಿಂಟೆಂಡೆಂಟ್ ಒರಟು ಮನುಷ್ಯ. ಮಾತಾಡಿದರೆ ಮೈ ಮೇಲೆ ಬೀಳುತ್ತಾನೆ. ಚಹಾ ಕುಡೀತೀರಾ? ಕಹಿ ಚಹಾ’

‘ಅವರಿಗೇನು ಬಿಲ್ಲು?’

‘ಈ ಕಡೆ ಆದಿ ಕಿರಾತ ಮೂರ್ತಿಗೆ ಅವನೇ ತಾನೆ ಪೂಜಾರಿ? ಮೊದಲಿನಿಂದ ಇರುವ ಸಂಪ್ರದಾಯ ಅಲ್ಲವೇ?’ ನಾರಾಯಣ ಪಿಳ್ಳೆ ಚಹಾ ಸುರುವಿಕೊಂಡರು.

‘ಆದಿ ಕಿರಾತ ಮೂರ್ತಿಯೇ? ದೇವಸ್ಥಾನವೇ?’

‘ದೇವಸ್ಥಾನವೇನೂ ಅಲ್ಲ, ನದಿಯ ಆ ದಂಡೆಯಲ್ಲಿ ಕಾಡೊಳಗೆ ಅಶ್ವತ್ಥ ಮರದಡಿ ಲಿಂಗವೊಂದಿದೆ. ಅದರ ಹೆಸರು ಅದು. ಶಾಸ್ತ್ರದ ಪ್ರಕಾರ ಅದೇ ಮೊದಲ ಕಿರಾತ ಮೂರ್ತಿ. ಅಲ್ಲಿ ದಿನನಿತ್ಯ ಪೂಜೆ ಏನೂ ಇಲ್ಲ. ಇಲ್ಲಿ ತಿರುವಾದಿರೈ ಹಬ್ಬ ಆರಂಭಿಸುವಾಗ ಅಲ್ಲಿ ಆಡನ್ನೋ, ಕೋಳಿಯನ್ನೋ ಬಲಿಕೊಟ್ಟು ಪೂಜೆಗೈದು ಶಾಂತಿ ಮಾಡಬೇಕು. ಹಬ್ಬ ಮುಗಿದ ಮೇಲೆ ಅಲ್ಲಿ ಮತ್ತೊಮ್ಮೆ ಪೂಜೆ ಮಾಡಿ ಬಲಿಕೊಟ್ಟು ಮುಗಿಸಬೇಕು. ಎಲ್ಲವೂ ಶಾಸ್ತ್ರ ಹೇಗೋ ಒಂದು ರೀತಿಯಲ್ಲಿ ನಡೆಯುತ್ತಿದೆ.’ ನಾರಾಯಣ ಪಿಳ್ಳೈ ಚಹಾ ಕುಡಿದರು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಮರಾಠಿ ಕಥೆಗಾರ ಜಿಎ ಕುಲಕರ್ಣಿಯವರ ‘ಚಂದ್ರಾವಳ’ ಕಥೆ

‘ತಿರುವಾದಿರೈ ಮುಗಿದು ಎಂಟು ತಿಂಗಳಾಯಿತಲ್ಲವೇ?’

‘ಬಿಲ್ಲಿಗೇನು ಸಮಯ? ಒಳ್ಳೆ ಕಥೆ ಬಿಡಿ. ಸರ್ಕಾರದ ಬಿಲ್ಲು ಅಷ್ಟು ಸರಳವಾಗಿ ಕೈಗೆ ಸಿಗುತ್ತದೆಯೇ? ಹೇಗಾದರೂ ಒಂದು ವರ್ಷ ಆಗುತ್ತದೆ. ಕೆಲವೊಮ್ಮೆ ಚೈತ್ರ ಮಾಸದವರೆಗೆ ಬಿದ್ದಿರುತ್ತದೆ. ಆಡಿಟಿಂಗ್ ಶುರುವಾದ ಮೇಲೆ ಸೂಪರಿಂಟೆಂಡೆಂಟ್ ಓಡಿ ಬರುತ್ತಾರೆ. ಮಲಯನ್‌ನ ಹಿಡಿಯಪ್ಪಾ, ಲೆಕ್ಕ ಚುಕ್ತಾ ಆಗಿಲ್ಲ ಅಂತ ಆಡಿಟರ್‌ಗೆ ಗೊತ್ತಾಗಿಬಿಟ್ಟಿದೆ. ಸರ್ಕಾರಿ ಕೆಲಸ ಸರಿಯಾಗಿ ಆಗಬೇಕಲ್ಲವೇ? ಅಂತೆಲ್ಲ ಚಡಪಡಿಸುತ್ತಾರೆ. ಏನು ಮಾಡೋದು?’

‘ಅಲ್ಲ ಮಲಯನ್‌ನೇ ಪೂಜೆ ಮಾಡಬೇಕೆ?’

‘ಹೌದು, ಅದೇ ತಂತ್ರದ ನಿಯಮ. ಬೆಟ್ಟದ ಮೇಲೆ ಮಲಯ ಜಾತಿಯವರು ಈಗಿತ್ತಲಾಗಿ ಕಡಿಮೆಯಾಗುತ್ತಿದ್ದಾರೆ. ಇವನೂ ಹೋದರೆ ಒಬ್ಬ ಕಲ್ಲುಕುಟಿಗ ಇದ್ದಾನೆ, ಅವನೇ ಎಲ್ಲ ಮಾಡಬೇಕು. ಮಹಾರಾಜರು ಇದ್ದ ಕಾಲದಲ್ಲಿ ಮಲಯನ್ ಬೆಟ್ಟದಿಂದ ಇಳಿಯುವಾಗ ಒಬ್ಬ ಚಮಂದನ್ ನಾಯರ್ ಖಡ್ಗ ಮತ್ತು ಛತ್ರಿಯೊಂದಿಗೆ ಅವನನ್ನು ಎದುರುಗೊಂಡು ಕರೆದುಕೊಂಡು ಬರುತ್ತಿದ್ದ. ಅವನಿಗೆ ಪಾದಪೂಜೆಯೂ ಇತ್ತು ಎಂದರೆ ನೋಡಿ, ಹಾಗೆ ಒಂದು ಕಾಲ. ಈ ನೂರಾ ಎಂಬತ್ತು ರೂಪಾಯಿ ಸಾವಿರದ ಒಂಬೈನೂರಾ ಇಪ್ಪತ್ತರಲ್ಲಿ ಮಹಾರಾಜರು ಆಸ್ಥೆವಹಿಸಿ ಭಂಡಾರದಿಂದ ಕೊಡಲು ಏರ್ಪಾಡು ಮಾಡಿದ್ದು. ಆ ಕಾಲದಲ್ಲಿ ಒಬ್ಬ ಪೋಲಿಸನಿಗೆ ತಿಂಗಳ ಸಂಬಳ ಮೂರು ರೂಪಾಯಿ ಎಂದರೆ ನೋಡಿಕೊಳ್ಳಿ. ಈ ಹಣವನ್ನು ಬಂಗಾರ ನಾಣ್ಯಗಳ ರೂಪದಲ್ಲಿ ತಟ್ಟೆಯಲ್ಲಿಟ್ಟು ತೆಂಗಿನಕಾಯಿ, ಹೂವು, ಎಲೆ ಎಲ್ಲ ಸೇರಿಸಿ ಕೊಡುತ್ತಿದ್ದರು. ನಂತರ ನಾಲ್ಕು ತಿಂಗಳುಗಳ ಕಾಲ ಬೆಟ್ಟದಲ್ಲಿ ಒಂದೇ ಸಮನೆ ಕಳ್ಳು, ಮಾಂಸ, ಹಾಡು, ಕುಣಿತ, ತಾಳಮೇಳ. ಅದೆಲ್ಲ ಒಂದು ಕಾಲ. ಈಗ ನೋಡಿ, ಈ ಹಣ ಅವನಿಗೆ ಬೀಡಿ ಖರ್ಚಿಗೂ ಸಾಲದು. ಬಂದು ನಿಂತಿದ್ದಾನೆ.’

‘ಅವರಿಂದ ರಸೀದಿ ತೆಗೆದುಕೊಂಡು ಹಣ ಕೊಡಿ. ಆ ಹಣ ನಾನು ನಿಮಗೆ ಕೊಡುತ್ತೇನೆ’ ಎಂದೆ.

‘ಯಾಕೆ?’

‘ಒಂದು ಕೆಲಸ ಇದೆ.’

‘ಸಂಶೋಧನೆಯೇನು? ನಿಮಗೆ ಹುಚ್ಚು. ಸಂಶೋಧನೆ ಮಾಡಿ ದೊಡ್ಡ ಬಾಂಬೋ, ಅವರೆಕಾಯೀನೋ ಕಂಡು ಹಿಡೀರಿ. ಹಣ ಸಿಗುತ್ತೆ ಅದನ್ನು ಬಿಟ್ಟು ಮಲಯನನ್ನು ಸಂಶೋಧನೆ ಯಾಕೆ ಮಾಡಬೇಕು? ಮಲಯತಿಯನ್ನ ಸಂಶೋಧನೆ ಮಾಡಿದರೆ ಪರವಾಗಿಲ್ಲ, ಅಲ್ಲವೆ?’

ಮಲಯನ್ ನಡುನಡುಗುತ್ತಾ ಹೆಬ್ಬೆಟ್ಟು ಒತ್ತಿ ಹೆಗಲ ಬಟ್ಟೆಯನ್ನು ಮುಂದೊಡ್ಡಿ ಹಣ ಪಡೆದು, ಹಾಗೇ ಹುಡುಗಿಯ ಕೈಯಲ್ಲಿ ಕೊಟ್ಟರು. ಅವಳು ಅದನ್ನು ಅವಸರದಿಂದ ಎಂಜಲೊರೆಸುತ್ತಾ ಎಣಿಸಿದಳು. ವಂದಿಸಿ ಇಳಿದ ಅವರನ್ನು ಹಿಂಬಾಲಿಸಿದೆ.

ಆ ಹುಡುಗಿ ನನ್ನತ್ತ ತಿರುಗಿ ನೋಡಿ ಅವರ ಬಳಿ ಏನೋ ಹೇಳಿವಳು. ಅವರು ಹಣೆಗೆ ಕೈಯಿಟ್ಟು ನನ್ನೆಡೆ ನೋಡಿದರು. ಹತ್ತಿರ ಹೋದೆ, ವಂದಿಸಿದರು.

ಇದನ್ನೂ ಓದಿ : Literature : ನೆರೆನಾಡ ನುಡಿಯೊಳಗಾಡಿ: ಹರುಕಿ ಮುರಾಕಮಿ ಬರೆದ ಕಥೆ

‘ಮಲಯನ್‌ನ ಊರು ಯಾವುದು?’ ಎಂದೆ.

‘ದಕ್ಷಿಣದ ಕಡೆ, ಬೆಟ್ಟದ ಮೇಲೆ’ ಎಂದರು. ಕಿವಿ ಸರಿಯಾಗಿ ಕೇಳುತ್ತಿದ್ದುದನ್ನು ನೋಡಿ ಅಚ್ಚರಿಯಾಯಿತು.

‘ಮಲಯನ್‌ನಿಗೆ ಸಾಕಷ್ಟು ವಯಸ್ಸಾಗಿರಬೇಕಲ್ಲವೇ?’

‘ಹೌದು’ ಎಂದರು ನಗುತ್ತ. ಬಾಯಲ್ಲಿ ಹಲ್ಲುಗಳೂ ಕಂಡವು. ‘ಒಂಬತ್ತು ಕುರಿಂಜಿ ಕಂಡಾಯಿತು. ಹತ್ತು ಕಂಡರೆ ಪೂರ್ತಿ ಅಂತ ಲೆಕ್ಕ.’

‘ನಾನು ದೇವಸ್ಥಾನದ ಬಗ್ಗೆ ತಿಳಿದುಕೊಳ್ಳಲು ಬಂದವನು. ಮಲಯನ್ ನನಗೆ ಸಹಾಯ ಮಾಡಬೇಕು. ಮಲಯನ್‌ಗೆ ಬೇಕಾದ ಸಹಾಯ ನಾನು ಮಾಡುತ್ತೇನೆ.’

‘ದೇವಸ್ಥಾನದ ಸಂಗತಿಗಳು ನನಗೇನೂ ಗೊತ್ತಿಲ್ಲ. ಪೋತಿಯವರಿಗೋ, ನಂಬೂದಿರಿಯವರಿಗೋ ಗೊತ್ತಿರುತ್ತದೆ’.

‘ಅವೆಲ್ಲ ಕೇಳಿಯಾಯಿತು. ನಾನು ಕೇಳತಾ ಇರೋದು ಆದಿ ಕಿರಾತಮೂರ್ತಿ ಬಗೆಗೆ.’

‘ಅದೇ?’ ಅಂದರು ಮಲಯನ್.

‘ಏನೇನೋ ಕಥೆಗಳು. ಅದು ಶಿವ ತನ್ನ ಹುಲಿಚರ್ಮವನ್ನ ಮೊದಲು ತೆಗೆದಿಟ್ಟ ಸ್ಥಳ. ಆಮೇಲೆ ಅಲ್ಲಿ ಇರುವೆಗಳು ಇದ್ದುದರಿಂದ ಇಲ್ಲಿ ತಂದಿಟ್ಟರು. ಇಲ್ಲಿ ದರ್ಶನ ಮಾಡುವವರು ಬ್ರಾಹ್ಮಣರು, ಅಲ್ಲಿ ಮಲಯರು. ಅದು ಮೊದಲಿನಿಂದ ಇರುವ ಸಂಪ್ರದಾಯ.’

‘ಇದು ಬ್ರಾಹ್ಮಣರು ಹೇಳುವ ಕಥೆಯಲ್ಲವೇ? ನಿಮ್ಮ ಜಾತಿಯಲ್ಲಿ ಇರುವ ಕಥೆ ಏನು?’ ‘ನಮ್ಮ ಜಾತಿಯಲ್ಲೂ ಇದೇ ಕಥೆ’ ಎಂದರು ಮಲಯನ್. ಅವರು ಏನನ್ನೂ ಬಚ್ಚಿಟ್ಟ ಹಾಗೆ ಕಾಣಲಿಲ್ಲ.

‘ಈ ಕುರಿತು ಯಾವುದಾದರೂ ಹಾಡು ಇದೆಯೇ?’

‘ಹಾಡೇನೂ ಇಲ್ಲ, ಪೂಜೆ-ಆಚರಣೆಗಳು, ಅಷ್ಟೆ.’

ನಾನು ಬ್ರಾಹ್ಮಿಭಾಷೆಯ ಗ್ರಂಥದಲ್ಲಿದ್ದ ವಿಷಯಗಳನ್ನು ಮಲಯನ್‌ನಿಗೆ ತಮಿಳಿನಲ್ಲಿ ಹೇಳಿದೆ. ‘ಹಳೆಯ ಕಾಲದಲ್ಲಿ ಇದ್ದ ತಾಂತ್ರಿಕ ಆಚರಣೆಗಳು ಇವೆಲ್ಲ. ಬಲಿಯ ವಿಧಿ, ಮಂತ್ರ ಎಲ್ಲಾ ಅದರಲ್ಲಿವೆ. ಇವೆಲ್ಲಾ ನಿಮ್ಮ ಭಾಷೆಯಲ್ಲಿ ಇವೆಯೇ?’

‘ನಮ್ಮ ಜಾತಿಯಲ್ಲಿ ಹಾಡುಗಳಿವೆ, ಆದರೆ ಪೂಜೆಯ ಹಾಡು ಅಂತ ಯಾವುದೂ ಇಲ್ಲ.’ ಒಂದು ಕೆ.ಜಿ.ಬೆಲ್ಲ, ಮುನ್ನೂರು ಗ್ರಾ ತಂಬಾಕು, ಕಾಲು ಕೆ.ಜಿ. ಉಪ್ಪನ್ನು ಅವರು ತೆಗೆದುಕೊಂಡರು. ಅವರ ಮನೆಯ ಜಾಗವನ್ನು ನಾನು ಕೇಳಿ ತಿಳಿದುಕೊಂಡೆ. ನದಿಯನ್ನು ದಾಟಿ, ಕಳಿಯಲ್ ಬೆಟ್ಟ ಹತ್ತಿ ಅವರು ಕಾಡೊಳಕ್ಕೆ ಹೋದರು.

ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ತಿರ್ಪರಪ್ಪು ಸ್ಥಳಪುರಾಣದಲ್ಲಿ ಹೇಳಲಾದ ಕಥೆಗಳನ್ನೇ ಅವರೂ ಹೇಳಿದರು

ಈ ಅಂಕಣದ ಎಲ್ಲಾ ಅನುವಾದಿತ ಕಥೆಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 12:55 pm, Fri, 15 April 22